Sep 30, 2014

ಡಾ ಎನ್ ಜಗದೀಶ್ ಕೊಪ್ಪ: ಬಿಳಿ ಸಾಹೇಬನ ಭಾರತ - ಜಿಮ್ ಕಾರ್ಬೆಟ್ ನ ಮಾನವೀಯ ಮುಖ


jim corbet kannada book
ಬಿಳಿ ಸಾಹೇಬನ ಭಾರತ - ಡಾ ಎನ್ ಜಗದೀಶ್ ಕೊಪ್ಪ
ನಾನು ಇತ್ತೀಚಿನ ದಿನಗಳಲ್ಲಿ ಇಷ್ಟಪಡುವ ಲೇಖಕರಲ್ಲೊಬ್ಬರು ಜಗದೀಶ್ ಕೊಪ್ಪ. ಅವರ ಲೇಖನಗಳನ್ನು ಮೊದಲು ಓದಿದ್ದು ವರ್ತಮಾನದಲ್ಲಿ. ಅವರ ಅನುವಾದಿತ ಕೃತಿಗಳಿರಬಹುದು, ವಿಶ್ಲೇಷಣಾತ್ಮಕ ಲೇಖನಗಳಿರಬಹುದು ಹೊಸತೇನನ್ನೋ ಓದುಗರಿಗೆ ತಿಳಿಸುವ ಹಂಬಲವಿರುವಂತಹ ಬರಹಗಳವು. ಅವರ ಹೊಸ ಪುಸ್ತಕ - ಬಿಳಿ ಸಾಹೇಬನ ಭಾರತ, ಜಿಮ್ ಕಾರ್ಬೆಟ್  ಜೀವನಗಾಥೆ. ಜಿಮ್ ಕಾರ್ಬೆಟ್ ಎಂದರೆ ನನಗೆ ಗೊತ್ತಿರುವಂತೆ ಬೇಟೆಗಾರ ಮತ್ತು ಇಂಗ್ಲೀಷ್ ಆಫೀಸರ್. ಆತನ ಮಾನವೀಯ ಮುಖಗಳು ಮತ್ತು ನಿಸರ್ಗದೊಂದಿಗಿನ ಸಂಬಂಧಗಳ ಬಗೆಗಿನ ಪುಸ್ತಕವಿದು. ಅಕ್ಟೋಬರ್ ಹನ್ನೊಂದರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. 
ಬಿಳಿ ಸಾಹೇಬನ ಭಾರತದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ.


ಜಿಮ್ ಕಾರ್ಬೆಟ್ ಮೊಕಮೆಘಾಟ್ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳಾದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆಯ ವಿಷಯದಲ್ಲಿ ಶಿಸ್ತು ಕಾಣತೊಡಗಿತು. ಆರಂಭದಲ್ಲಿ ಕಾರ್ಬೆಟ್ಗೆ ಇದ್ದ ಒತ್ತಡಗಳು ಮರೆಯಾಗತೊಡಗಿದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನೊಳಗೆ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸಂಬರ್ ತಿಂಗಳ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯಲ್ಲಿದ್ದ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತ್ತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ.

ತನ್ನ ಕುಟುಂಬದಲ್ಲಿ ಆಚರಿಸುತ್ತಿದ್ದ ಕ್ರಿಸ್ಮಸ್ ಹಬ್ಬ ಹೊರತುಪಡಿಸಿದರೆ, ಉಳಿದ ಹಿಂದೂ ಧರ್ಮದ ಹಬ್ಬಗಳಾದ ಹೋಳಿ, ಗಣೇಶಚತುರ್ಥಿ, ದೀಪಾವಳಿಯನ್ನು ಮೊಕಮೆಘಾಟ್ನಲ್ಲಿ ಕಾರ್ಮಿಕರ ಜೊತೆ ಆಚರಿಸುತ್ತಿದ್ದ. ಹಬ್ಬದ ದಿನಗಳಲ್ಲಿ ಕಾರ್ಮಿಕರು ಕಾಡಿನಿಂದ ಬಗೆ ಬಗೆಯ ಹೂ ಮತ್ತು ಎಲೆಗಳನ್ನು ತಂದು ಕಾರ್ಬೆಟ್ ಮನೆಯನ್ನು ಸಿಂಗರಿಸಿದರೆ, ಮಹಿಳೆಯರು ಮನೆಯ ಮುಂದೆ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದರು. ಕಾರ್ಮಿಕರ ಮಕ್ಕಳ ಬಗ್ಗೆ ಅಪಾರ ಪ್ರೀತಿ ಕರುಣೆ ಹೊಂದಿದ್ದ ಜಿಮ್ಕಾರ್ಬೆಟ್ ಸಾವಿರಾರು ರೂಪಾಯಿ ಖರ್ಚು ಮಾಡಿ ಸಿಹಿತಿಂಡಿಗಳ ಪೊಟ್ಟಣಗಳನ್ನು ಪೇಟೆಯಿಂದ ಕೊಂಡುತರುತ್ತಿದ್ದ ತಾನೇ ಸ್ವತಃ ಪ್ರತಿ ಕಾರ್ಮಿಕನ ಮನೆಗೂ ಹೋಗಿ ಸಿಹಿ ನೀಡುತ್ತಿದ್ದ. ಜಾತಿ,  ಧರ್ಮ,  ಅಂತಸ್ತು ಎಂಬ ತಾರತಮ್ಯವಿಲ್ಲದೆ ಅವರು ಪ್ರೀತಿಯಿಂದ ನೀಡಿದ ಆಹಾರವನ್ನು ಹಬ್ಬದ ದಿನಗಳಲ್ಲಿ ಸೇವಿಸುತ್ತಿದ್ದ.
Related article:
jim corbet kannada book
ಜಿಮ್ ಕಾರ್ಬೆಟ್
ಬಿರುಬಿಸಿಲಿಗೂ ಬಾಡದ ಮರುಭೂಮಿಯ ಹೂವಿದು

ತನಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಹೆಸರು ಬರಲು ಕಾರ್ಮಿಕರ ಕಠಿಣ ಶ್ರಮ ಕಾರಣ ಎಂಬ ಅರಿವು ಕಾರ್ಬೆಟ್ನನ್ನು ಸದಾ ಎಚ್ಚರಿಸುತ್ತಿತ್ತು. ಹಾಗಾಗಿ ಪ್ರತಿಯೊಬ್ಬ ಕಾರ್ಮಿಕನ ಕುಟುಂಬವನ್ನು ತನ್ನ ಕುಟುಂಬದಂತೆ ಪ್ರೀತಿಸುತ್ತಿದ್ದ. ಜಿಮ್ ಕಾರ್ಬೆಟ್ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ 26 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಘಟನೆಯಾಗಲಿ ಅಥವಾ ಅವಿಧೇಯನಾಗಿ ನಡೆದುಕೊಂಡ ಸಂಗತಿಯಾಗಲಿ ಜರುಗಲಿಲ್ಲ. ಒಮ್ಮೆ ಮಾತ್ರ ಕಾರ್ಮಿಕರ ಸಂಬಳ ತಲುಪುವುದು ತಡವಾದ ಕಾರಣ ಬಂಡಾಯದ ಬಾವುಟ ಹಾರಿಸುವುದಾಗಿ ರೈಲ್ವೆ ಇಲಾಖೆಗೆ ಎಚ್ಚರಿಕೆ ನೀಡಿದ್ದ.
ಮೊಕಮೆಘಾಟ್ನಲ್ಲಿ ಕೆಲಸ ಪ್ರಾರಂಭಿಸಿದ ನಾಲ್ಕನೇ ವರ್ಷದಲ್ಲಿ ಕೇಂದ್ರ ಕಚೇರಿಯಿಂದ ಕೂಲಿಕಾರ್ಮಿಕರ ಸಂಬಳ ಬರುವುದು ತಡವಾಯಿತು. ಪ್ರತಿವಾರ ಹಣ ಪಾವತಿಸುತ್ತಿದ್ದ ಕಾರ್ಬೆಟ್ ತಾನು ಉಳಿಸಿದ್ದ ಸಂಬಳ ಮತ್ತು ಬೋನಸ್ ಹಣವನ್ನು ಕಾರ್ಮಿಕರಿಗೆ ಪಾವತಿಸುತ್ತಾ ಕೆಲಸ ಮುಂದುವರಿಸಿದ್ದ. ಹೀಗೆ ಆರು ವಾರ ಕಳೆದರೂ ಹಣ ಬರಲಿಲ್ಲ. ತನ್ನಲ್ಲಿದ್ದ ಹಣವೆಲ್ಲಾ ಖರ್ಚಾದ ನಂತರ ಏಳನೆಯ ವಾರ ಹಣ ಪಾವತಿಸಿರಲಿಲ್ಲ ಆದರೂ ಎಲ್ಲಾ ಕಾರ್ಮಿಕರು ಕೆಲಸ ಮುಂದುವರಿಸಿದ್ದರು.
ಕಲ್ಲಿದ್ದಲು ತುಂಬುವ ಕಾರ್ಮಿಕನಾಗಿ ಕೆಲಸ ಮಾಡುತಿದ್ದ  ಮುಸ್ಲಿಂ ವೃದ್ಧನೊಬ್ಬ ನಾಲ್ಕನೇ ದಿನದ ರಾತ್ರಿ ಒಂದಿಷ್ಟು ಹಣ ಕೇಳಲು ಕಾರ್ಬೆಟ್ ನಿವಾಸಕ್ಕೆ ಬೇಟಿ ನೀಡಿದ. ಅದು ಊಟದ ಸಮಯವಾದ್ದರಿಂದ ಸಾಹೇಬರು ಊಟ ಮಾಡಲಿ ಎಂದು ಹೊರಗೆ ಕಾಯತೊಡಗಿದ. ವೇಳೆಯಲ್ಲಿ ಸೇವಕ ಕಾರ್ಬೆಟ್ಗೆ ಬಡಿಸುತ್ತಿದ್ದ ಊಟವನ್ನು ಗಮನಿಸಿದ. ಮುಸ್ಲಿಂ ವೃದ್ಧ ಕುತೂಹಲ ತಾಳಲಾರದೆ ಸೇವಕನನ್ನು ಪ್ರಶ್ನಿಸಿದಏಕೆ ಸಾಹೇಬರು ಒಂದೇ ಚಪಾತಿಯನ್ನು ಮಾತ್ರ ತಿನ್ನುತ್ತಿದ್ದಾರೆ?” ಆಗ ನಿಜ ಸಂಗತಿಯನ್ನ ಬಿಚ್ಚಿಟ್ಟ ಸೇವಕಸಾಹೇಬರು  ಕಳೆದ ಆರು ವಾರಗಳಿಂದ ತಮ್ಮಲ್ಲಿದ್ದ ಹಣವನ್ನು ಕೂಲಿ ರೂಪದಲ್ಲಿ ನಿಮಗೆಲ್ಲಾ  ಹಣ ಪಾವತಿಸಿಬಿಟ್ಟಿದ್ದಾರೆ. ಕಚೇರಿಯಿಂದ ಕಳೆದ ಒಂದೂವರೆ ತಿಂಗಳಿಂದ ಹಣ ಬಂದಿಲ್ಲ ಹಾಗಾಗಿ  ಮನೆಗೆ ದಿನಸಿ ಸಾಮಾನು ತರಲು ಅವರ ಬಳಿ ಹಣವಿಲ್ಲ.  ಬೆಳಿಗ್ಗೆ, ರಾತ್ರಿ ಒಂದೊಂದೇ ಚಪಾತಿ ಸೇವಿಸುತ್ತಿದ್ದಾರೆಎಂದು ಎಲ್ಲವನ್ನೂ ವಿವರಿಸಿದ. ಕೂಲಿ ಹಣ ಕೇಳಲು ಬಂದಿದ್ದ ಮುಸ್ಲಿಂ ಏನೂ ಮಾತಾಡದೆ ಮನೆಗೆ ಹಿಂತಿರುಗಿದ.
ಊಟ ಮಾಡಿ ಮನೆಯ ಹೊರಗೆ ಆರಾಮ ಕುರ್ಚಿಯಲ್ಲಿ ಸಿಗರೇಟು ಸೇದುತ್ತಾ ಕುಳಿತಿದ್ದ ಕಾರ್ಬೆಟ್ ಎದುರು ಮುಸ್ಲಿಂ ವೃದ್ಧ  ಮತ್ತೇ ಪ್ರತ್ಯಕ್ಷನಾದ. ಅವನ ಕೈಯಲ್ಲಿ ಕರವಸ್ತ್ರದಿಂದ ಮುಚ್ಚಲಾದ ಕೆಲವು ವಸ್ತುಗಳಿದ್ದವು. ಕಾರ್ಬೆಟ್ ಎದುರು ಕೈಜೋಡಿಸಿ ನಿಂತ ಮುಸ್ಲಿಂ ವೃದ್ಧಮಹಾರಾಜ್ ನಿಮ್ಮ ಸೇವಕನಿಂದ ಎಲ್ಲಾ ವಿಷಯ ತಿಳಿಯಿತು ಸಾಹೇಬ್, ನಾವು ಹಸಿವಿನಲ್ಲಿ ಹುಟ್ಟಿದವರು, ಹಸಿವಿನಲ್ಲಿ ಬದುಕಿದವರು, ಹಸಿವಿನಲ್ಲೇ ಸಾಯುವ ಮಂದಿ ಇದು ನಮಗೆ ಹೊಸದಲ್ಲ ಆದರೆ ನೀವು ರೀತಿ ಇರುವುದನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ತೆಗೆದುಕೊಳ್ಳಿ ಇದರಲ್ಲಿ ನನ್ನ ಹೆಂಡತಿಯ ಒಡವೆಗಳಿವೆ. ಇವುಗಳನ್ನ ಮಾರಿ ಮನೆಗೆ ಸಾಮಾನು ತಂದು ಊಟ ಮಾಡಿ ನೆಮ್ಮದಿಯಿಂದ ಇರಿಎನ್ನುತ್ತಾ ಜಿಮ್ ಕಾರ್ಬೆಟ್ ಕಾಲು ಬಳಿ ಕಣ್ಣೀರಿಡುತ್ತಾ ಕುಳಿತು ಬಿಟ್ಟ. ಬಡ ಕೂಲಿ ಕಾರ್ಮಿಕನ ಮಾತು ಕೇಳಿದ ಕಾರ್ಬೆಟ್ ಕಣ್ಣಲ್ಲೂ ಸಹ ನೀರು ಹರಿಯತೊಡಗಿತು. ಕಾರ್ಮಿಕನನ್ನು ಹಿಡಿದೆತ್ತಿ ನಿಲ್ಲಿಸುತ್ತಾ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಹೋಗು ಎಂದು ಸಮಾಧಾನ ಹೇಳಿ ಕಳಿಸಿದ ಕಾರ್ಬೆಟ್ ಕ್ಷಣದಲ್ಲಿ ಟೆಲಿಗ್ರಾಫ್ ಕಚೇರಿಗೆ ತೆರಳಿ  ಉಳಿದ ಎಲ್ಲಾ ಲೈನ್ಗಳನ್ನು ತೆರವುಗೊಳಿಸಿ ಸಂದೇಶವನ್ನು ಗೋರಖ್ಪುರಕ್ಕೆ ತ್ವರಿತವಾಗಿ ರವಾನಿಸಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದ. “ಮುಂದಿನ 48 ಗಂಟೆಗಳ ಒಳಗಾಗಿ ಕಾರ್ಮಿಕರ ವೇತನ ಪಾವತಿಸದಿದ್ದರೆ, ಕೆಲಸ ಸ್ಥಗಿತಗೊಳಿಸಲಾಗುವುದು ಅಲ್ಲದೆ ಕೆಲಸಕ್ಕೆ ರಾಜಿನಾಮೆ ನೀಡಲಾಗುವುದುಎಂಬ ಎಚ್ಚರಿಕೆಯ ಸಂದೇಶ ಕಳಿಸಿ ಮನೆಗೆ ಬಂದು ಮಲಗಿದ. ಮಧ್ಯ ರಾತ್ರಿಯ ವೇಳೆಗೆ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಮೂಲಕ ನಾಳೆ ಹಣ ರವಾನಿಸಲಾಗುತ್ತದೆ ಎಂಬ ಮರು ಸಂದೇಶ ಕೂಡ ಕಾರ್ಬೆಟ್ಗೆ ಬಂದು ತಲುಪಿತು. ನಿರೀಕ್ಷೆಯಂತೆ ಮಾರನೆಯ ದಿನ ಸಂಜೆ ವೇಳೆಗೆ ಇಬ್ಬರು ಬಂದೂಕುಧಾರಿ ಪೋಲಿಸರ ರಕ್ಷಣೆಯೊಂದಿಗೆ ಗೋರಖ್ಪುರದಿಂದ ಬಂದಿದ್ದ ಹಣದ ಪೆಟ್ಟಿಗೆಯನ್ನು ರೈಲ್ವೆ ಸಿಬ್ಬಂದಿ ಹೊತ್ತು ತಂದು ಕಾರ್ಬೆಟ್ ಗೆ ತಲುಪಿಸಿದರು.

jim corbet kannada book
ಪುಸ್ತಕ ಬಿಡುಗಡೆಯ ವಿವರಗಳು
ದಿನ ನಿತ್ಯ ಬಡಕೂಲಿ ಕಾರ್ಮಿಕರ ಬವಣೆಗಳನ್ನ ನೋಡುತ್ತಾ ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಾ ಬದುಕಿದ್ದ ಜಿಮ್ ಕಾರ್ಬೆಟ್ಗೆ ಕಾರ್ಮಿಕರ ಪರವಾಗಿ ತಾನು ಸೇವೆ ಸಲ್ಲಿಸುತ್ತಿದ್ದ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸದೆ ಬೇರೆ ಮಾರ್ಗ ಇರಲಿಲ್ಲ. ಘಟನೆಯಿಂದ ಎಚ್ಚೆತ್ತ ಇಲಾಖೆ ಮುಂದಿನ 18 ವರ್ಷದ ಅವಧಿಯಲ್ಲಿ ಹಣ ಪಾವತಿಸಲು  ಎಂದೂ ವಿಳಂಬ ಮಾಡಲಿಲ್ಲ.
ತನ್ನಲ್ಲಿ ಕೂಲಿ ಕೆಲಸ ಕೇಳಿಕೊಂಡು ಯಾರೇ ಬರಲಿ ಅವರ ಹಿನ್ನೆಲೆಯನ್ನು ವಿಚಾರಿಸಿಕೊಂಡು ಕೆಲಸ ನೀಡುವುದು, ಇಲ್ಲವೆ ಕಷ್ಟದಲ್ಲಿದ್ದರೆ ಸಹಾಯ ಮಾಡುವುದು ಇವೆಲ್ಲವೂ ಕಾರ್ಬೆಟ್ ದಿನಚರಿ ಮತ್ತು ಹವ್ಯಾಸಗಳಾಗಿದ್ದವು. ಅವನು ಕಾರ್ಮಿಕರ ಹಿತಾಸಕ್ತಿಗೆ ಎಷ್ಟೊಂದು ಗಮನ ನೀಡುತ್ತಿದ್ದ ಎಂಬುದಕ್ಕೆ ಘಟನೆ ಸಾಕ್ಷಿಯಾಗಿದೆ
ಮೂರು ವರ್ಷಗಳಿಂದ ಅವನಲ್ಲಿ ಬುದ್ದು ಎಂಬಾತ ಕಲ್ಲಿದ್ದಲು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದ ಅವನಿಗೆ ಕೂಲಿ ಕೆಲಸದಲ್ಲಿ ಪತ್ನಿ ಕೂಡ ಸಹಕರಿಸುತ್ತಿದ್ದಳು. ಅವನು ಸದಾ ಮೌನಿಯಾಗಿ ಚಿಂತೆಯಲ್ಲಿ ಇರುವಂತೆ ಕಾಣುತ್ತಿದ್ದ. ಅವನು ಎಂದೂ ನಕ್ಕಿದ್ದನ್ನು ಕಾರ್ಬೆಟ್ ನೋಡಿರಲಿಲ್ಲ ಆದರೆ ಪ್ರತಿ ವರ್ಷ ನವಂಬರ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಊರಿಗೆ ಹೋಗುತ್ತಿದ್ದ. ಬಗ್ಗೆ ಕಾರ್ಬೆಟ್ಗೆ ಕುತೂಹಲವುಂಟಾಗಿ ಮೇಸ್ತ್ರಿಯನ್ನು ವಿಚಾರಿಸಿದಾಗ ಊರಿನಿಂದ ಅಂಚೆಪತ್ರ ಬಂದ ತಕ್ಷಣ ಬುದ್ದು ಹೊರಟುಬಿಡುತ್ತಾನೆ ಎಂಬ ಮಾಹಿತಿ ಮಾತ್ರ ದೊರೆಯಿತು. ಮತ್ತೆ ಜನವರಿ ತಿಂಗಳಿನಲ್ಲಿ ಬುದ್ದು ಕೆಲಸಕ್ಕೆ ಹಾಜರಾದಾಗ ಕಾರ್ಬೆಟ್ ಅವನನ್ನು ಕರೆದು ವಿಚಾರಿಸಿದ.
ನನ್ನ ಊರಿನಲ್ಲಿ ಶ್ರೀಮಂತ ಜಮೀನುದಾರನೊಬ್ಬನಿಂದ ಅಜ್ಜ ಪಡೆದಿದ್ದ ಎರಡು ರೂಪಾಯಿ ಸಾಲಕ್ಕೆ  ಅಜ್ಜ ಮತ್ತು ನನ್ನಪ್ಪ ಜೀವನ ಪೂರ್ತಿ ಜೀತದಾಳಾಗಿ ದುಡಿದರೂ ಇನ್ನೂ ಬಡ್ಡಿ ಸೇರಿ 125 ರೂಪಾಯಿ ಬಾಕಿ ಉಳಿದಿದೆ. ನಾನು ಇಲ್ಲಿ ದುಡಿದ ಹಣದಲ್ಲಿ ಪ್ರತಿವರ್ಷ 25 ರೂ. ಪಾವತಿಸುತ್ತಿದ್ದೇನೆ. ಜೊತೆಗೆ ಅವನ ಜಮೀನಿನಲ್ಲಿ ಫಸಲು ಕೊಯ್ಲಿಗೆ ಬಂದಾಗ  ನಾನು ಹೋಗಿ ಒಕ್ಕಣೆ ಮಾಡಿಕೊಟ್ಟು ಬರಬೇಕು. ಇದಕ್ಕಾಗಿ ಪ್ರತಿ ವರ್ಷ ನನ್ನಿಂದ ಕೆಲವು ಪತ್ರಕ್ಕೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುತ್ತಾನೆಎಂದು ಬುದ್ದು ತನ್ನ ಬದುಕಿನ ವೃತ್ತಾಂತವನ್ನು  ಜಿಮ್ ಕಾರ್ಬೆಟ್ಗೆ ವಿವರಿಸಿದ, 
Related article 
ಜೀವೋತ್ಪಾದಕರ ‘ಹತ್ಯೆ’ಯ ಕಥೆ!
ಮುಂದಿನ ಬಾರಿ ಪತ್ರ ಬಂದಾಗ ನನಗೆ ತಂದು ತೋರಿಸು, ನೀನು ಊರಿಗೆ ಹೋಗುವ ಅವಶ್ಯಕತೆಯಿಲ್ಲ ಹಣವನ್ನು ನಾನು ಚುಕ್ತಾ ಮಾಡುತ್ತೇನೆ ಎಂದು ಕಾರ್ಬೆಟ್ ಬುದ್ದುಗೆ ಭರವಸೆ ನೀಡಿದ. ಒಂಬತ್ತು ತಿಂಗಳು ಕಳೆದ ನಂತರ ಯಥಾಪ್ರಕಾರ ಬದ್ದುವಿನ ಊರಿನಿಂದ ಜಮೀನ್ದಾನರನ ಪತ್ರ ಬಂದು ತಲುಪಿತು. ಕಾರ್ಬೆಟ್ ಪತ್ರದಲ್ಲಿದ್ದ ಶ್ರೀಮಂತ ಜಮೀನುದಾರನ ವಿಳಾಸ ಪತ್ತೆ ಹಚ್ಚಿ ಅವನಿಗೆ ವಕೀಲನ ಮೂಲಕ ನೋಟೀಸ್ ಜಾರಿ ಮಾಡಿದ. ಶ್ರೀಮಂತ ಜಮೀನುದಾರ ಕಾರ್ಬೆಟ್ನನ್ನು  ನೇರವಾಗಿ ಎದುರಿಸಲಾರದೆ ನೋಟೀಸ್ ನೀಡಿದ ವಕೀಲನ ಮನೆಗೆ ಹೋಗಿ ಅವನನ್ನು ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ್ದ. ಜೊತೆಗೆ ಹಣ ಬಾಕಿ ಇರುವುದರ ಬಗ್ಗೆ ಬುದ್ದು ಪ್ರತಿವರ್ಷ ಬರೆದು ಕೊಟ್ಟಿದ್ದ ಕಾಗದ ಪತ್ರಗಳನ್ನು ತೋರಿಸಿ ಬಂದಿದ್ದ.
ಜಿಮ್ ಕಾರ್ಬೆಟ್ ಬಳಿ ಬಂದ ವಕೀಲ ನಡೆದ ಘಟನೆಯನ್ನು ವಿವರಿಸಿದಾಗ ಅವನ ಬಾಕಿ ಹಣ 125 ರೂಪಾಯಿ, ಅದಕ್ಕೆ ಬಡ್ಡಿ 50 ರೂ.ಮತ್ತು ವಕೀಲನ ಸೇವಾಶುಲ್ಕ 50 ರೂಪಾಯಿ ಎಲ್ಲವನ್ನು ಪಾವತಿಸಿ ಬುದ್ದುವಿನ ಕಾಗದ ಪತ್ರವನ್ನು ವಾಪಸ್ ಪಡೆಯುವಂತೆ ಸೂಚಿಸಿದ. ಜಮೀನ್ದಾರ ಬುದ್ದುವಿನ ಎಲ್ಲಾ ಪತ್ರಗಳನ್ನು ಹಿಂತಿರುಗಿಸಿದ ಆದರೆ ಪ್ರತಿವರ್ಷ ಮೂರು ತಿಂಗಳು ಪುಕ್ಕಟೆ ದುಡಿಯುವ ಕುರಿತಂತೆ ಬರೆದುಕೊಟ್ಟಿದ್ದ ಕರಾರು ಪತ್ರವನ್ನು ಮಾತ್ರ ತನ್ನಲ್ಲಿ ಉಳಿಸಿಕೊಂಡ. ಇದರಿಂದ ಸಿಟ್ಟಿಗೆದ್ದ ಕಾರ್ಬೆಟ್ ಅವನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ. ಘಟನೆಯಿಂದ ಬೆಚ್ಚಿಬಿದ್ದ ಶ್ರೀಮಂತ ತಾನೇ ಖುದ್ದು ಕಾರ್ಬೆಟ್ ಬಳಿ ಬಂದು ಪತ್ರ ಒಪ್ಪಿಸಿ ಹೋದ.
ದಿನ ಸಂಜೆ ಕಾರ್ಬೆಟ್ ಬುದ್ದು ಮತ್ತು ಅವನ ಪತ್ನಿಯನ್ನು ತನ್ನ ಮನೆಗೆ ಕರೆಸಿಇನ್ನು ಮುಂದೆ ನೀವು ಸ್ವತಂತ್ರರಾಗಿದ್ದೀರಿ ನೆಮ್ಮದಿಯಿಂದ ಬಾಳಿಎನ್ನುತ್ತಾ ಅವರ ಎದುರು ಸಾಲಪತ್ರಗಳನ್ನು ಬೆಂಕಿಯಿಂದ ಸುಡಲು ಆರಂಭಿಸಿದ. ಕಾರ್ಬೆಟ್ ಪ್ರಯತ್ನಕ್ಕೆ ತಡೆಯೊಡ್ಡಿದ ಬುದ್ದುಬೇಡ ಮಹಾರಾಜ್ ಅವುಗಳನ್ನು ಸುಡಬೇಡಿ ನಮ್ಮ ಸಾಲ ತೀರುವ ತನಕ ಅವು  ನಿಮ್ಮಲ್ಲಿರಲಿ ಇನ್ನು ಮುಂದೆ ನಾವು ನಿಮ್ಮ ಜೀತದಾಳುಗಳುಎನ್ನುತ್ತಾ ಒದ್ದೆ ಕಣ್ಣುಗಳಲ್ಲಿ ಕೈ ಮುಗಿದು ನಿಂತ.
ಜಿಮ್ ಕಾರ್ಬೆಟ್ ಆತನ ಹೆಗಲ ಮೇಲೆ ಕೈ ಇರಿಸಿಬುದ್ದು ನೀನು ನನ್ನ ಹಣವನ್ನು ತೀರಿಸುವುದು ಬೇಕಾಗಿಲ್ಲ ಬದಲಾಗಿ ನಿನ್ನ ಮುಖದಲ್ಲಿ ನಗು ಕಂಡರೆ ಸಾಕು ನನ್ನ ಸಾಲ ತೀರಿದಂತೆಎಂದು ನುಡಿಯುತ್ತಿದ್ದಂತೆ  ಕಲ್ಲಿದ್ದಲು ಮಸಿಯಿಂದ ಕಪ್ಪಾಗಿದ್ದ ಬುದ್ದುವಿನ ಮುಖವನ್ನೆಲ್ಲಾ ಅವನ ಕಣ್ಣೀರು ತೋಯಿಸಿಬಿಟ್ಟಿತು. ಜಿಮ್ ಕಾರ್ಬೆಟ್  ಕಾಲುಗಳಿಗೆ ನಮಸ್ಕಾರ ಮಾಡಿ ಮನೆಯತ್ತ ತೆರಳುತ್ತಿದ್ದ ಬುದ್ದು ಹಾಗೂ ಅವನ ಪತ್ನಿಯನ್ನು ನೋಡುತ್ತಾ ಕುಳಿತ ಕಾರ್ಬೆಟ್ ನನ್ನ ಭಾರತದಲ್ಲಿ ಬಡತನವಿದೆ ನಿಜ  ಆದರೆ, ಬಡವರಲ್ಲಿ ಹೃದಯ ಶ್ರೀಮಂತಿಕೆಯೂ ಇದೆ ಎಂಬುದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತು ಪಡಿಸಲಿ?” ಎನ್ನುವ ಪ್ರಶ್ನೆಯನ್ನು ಮನಸ್ಸಿಗೆ ಹಾಕಿಕೊಳ್ಳುತ್ತಾ  ತುಟಿಗೆ ಸಿಗರೇಟು ಇಟ್ಟು ಬೆಂಕಿ ಹಚ್ಚಿದ.

Summary: Dr N Jagadish Koppa's new book "Bili Saahebana Bharatha" - story of Jim Corbet will be released on 11-10-2014, 4:30pm at Sri Krishnaraja Parishanmandira, Kannada Sahitya Parishat, Bengalooru

1 comment:

  1. For every book review/information it would be helpful if you post its flipkart or amazon link as well. Not for this book as it is yet to be released. Thanks

    ReplyDelete