Mar 24, 2014

ಬಿರುಬಿಸಿಲಿಗೂ ಬಾಡದ ಮರುಭೂಮಿಯ ಹೂವಿದು.



ಡಾ.ಅಶೋಕ್. ಕೆ. ಆರ್.
ಆತ್ಮಕಥೆಗಳೇ ಹಾಗೆ! ಅಸಂಖ್ಯಾತ ತಿರುವುಗಳಿರುವ ಪುಟಪುಟಕ್ಕೂ ಕುತೂಹಲ ಹೆಚ್ಚಿಸುವ ಥ್ರಿಲ್ಲರ್ ಕಾದಂಬರಿಗಳಿಗಿಂತ ರೋಮಾಂಚನಕಾರಿ. ಕಲ್ಪಿಸಿಕೊಳ್ಳಲೂ ಕಷ್ಟಸಾಧ್ಯವಾದ ಅನೇಕ ಸಂಗತಿಗಳು ನಿಜಜೀವನದಲ್ಲಿ ಘಟಿಸಿಬಿಟ್ಟಿರುತ್ತದೆ. ಓದಿ ಮುಗಿಸಿದ ನಂತರ ಒಂದಷ್ಟು ಅಚ್ಚರಿ ಮತ್ತು ಅಘಾತ ಮೂಡಿಸುವ ಆತ್ಮಕಥೆ 90ರ ದಶಕದ ಜಾಹೀರಾತು ಜಗತ್ತಿನಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ವಾರಿಸ್ ಡೆರಿಸ್ ಳದ್ದು.

ಜನಾಂಗೀಯ ಕಲಹಗಳಿಂದ ಕ್ಷೋಬೆಗೊಳಗಾಗಿದ್ದ ಆಫ್ರಿಕಾದ ಸೋಮಾಲಿಯಾದ ಬುಡಕಟ್ಟಿನ ಹುಡುಗಿಯವಳು. ಮರಳುಗಾಡಿನ ಬೇಸಿಗೆಯಲ್ಲಿ ಉತ್ಸಾಹದ ಚಿಲುಮೆಯಾಗಿ ಓಡಾಡುತ್ತ, ಸಾಕುಪ್ರಾಣಿಗಳ ಮೇಯಿಸುತ್ತಾ ಕೀಟಲೆ ಮಾಡಿಕೊಂಡಿದ್ದ ಹುಡುಗಿಗೆ ‘ವಧುದಕ್ಷಿಣೆ’ಯಾಗಿ ಸಿಗುವ ಒಂಟೆಗಳ ಮೇಲಿನ ಆಸೆಯಿಂದ ಮುದುಕನೋರ್ವನಿಗೆ ಮದುವೆ ಮಾಡಲು ನಿಶ್ಚಯಿಸಿಬಿಡುತ್ತಾನೆ ಅವಳ ಅಪ್ಪ. ಮದುವೆಯಿಂದ ತಪ್ಪಿಸಿಕೊಳ್ಳಲು ಓಡಲಾರಂಭಿಸಿದ ಹುಡುಗಿಯ ಕಥೆಯಿದು. ಸಿಂಹದಿಂದ ಸಿಕ್ಕ ಅನುಕಂಪದ ಪುನರ್ ಜನನ, ಮನುಷ್ಯರಿಂದ ಸಿಕ್ಕ ಕಾಮದ ದುರ್ದರ್ಶನಗಳನ್ನೆಲ್ಲ ಅನುಭವಿಸಿ, ಪ್ರತಿಭಟಿಸಿ ಗಾಲ್ಕಯೋ ನಗರದ ಚಿಕ್ಕಪ್ಪನ ಮನೆ ಸೇರುತ್ತಾಳೆ. ನಂತರ ಮೊಗದಿರುಗೆ ಪಯಣ ಮಾಡಿ ನೆಂಟರಿಷ್ಟರ ಮನೆಯಲ್ಲಿ ಆಳಾಗಿ ದುಡಿದು ಆಕಸ್ಮಿಕವಾಗಿ ಲಂಡನ್ನಿಗೆ ತೆರಳುತ್ತಾಳೆ. ಲಂಡನ್ನಿನಲ್ಲೂ ಮನೆಗೆಲಸದವಳಾಗಿದ್ದವಳ ಬದುಕು ಬದಲಾಗಿದ್ದು ಮಾಲ್ಕಂ ಫೇರ್ ಚೈಲ್ಡ್ ಎಂಬ ವೃತ್ತಿಪರ ಛಾಯಾಗ್ರಹಕನಿಂದ. ಮಾಡಲಿಂಗ್ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಾಳೆ ವಾರಿಸ್ ಡೆರಿಸ್.

ಇದಿಷ್ಟೇ ಆಗಿದ್ದರೆ ಬಡಮಹಿಳೆಯೊಬ್ಬಳ ಯಶೋಗಾಥೇಯಾಗಷ್ಟೇ ನೆನಪಿನಲ್ಲುಳಿಯುತ್ತಿತ್ತು ‘ಮರುಭೂಮಿಯ ಹೂ’. ಇದು ಡೆರಿಸ್ ಆತ್ಮಕಥೆಯಷ್ಟೇ ಅಲ್ಲ, ಸೋಮಾಲಿಯಾದ ಬುಡಕಟ್ಟು ಜನಾಂಗದ ಮಹಿಳೆಯರ ಶೋಚನೀಯ ಕಥೆಯೂ ಹೌದು. ಧರ್ಮವನ್ನು ಪುರುಷ ಸಮಾಜ ತಮ್ಮನುಕೂಲಕ್ಕೆ ಬೇಕಾದಂತೆ ಹೇಗೆ ತಿರುಚುತ್ತದೆ ಎಂಬುದಕ್ಕೆ ಮಹಿಳೆಯರ ಗುಪ್ತಾಂಗ ಛೇಧನವೆಂಬ ನಂಬಲಸಾಧ್ಯವಾದ ಅನಿಷ್ಟ ಕ್ರಿಯೆಯೇ ಸಾಕ್ಷಿ. ಮಹಿಳೆಯೆಂದರೆ ‘ಪವಿತ್ರ ವಸ್ತು’ ಎಂಬ ಪುರುಷ ನಂಬುಗೆ ಆಫ್ರಿಕಾದ ಅಸಂಖ್ಯಾತ ಮಹಿಳೆಯರಿಗೆ ಮರಣ ಮೃದಂಗ. 

ಮರಳುಗಾಡಿನ ಅಲೆಮಾರಿ ಬದುಕಿನಿಂದ ತಪ್ಪಿಸಿಕೊಂಡು ನಗರ ಸೇರಿದ ವಾರಿನ್ ಜೀವನ ಎಷ್ಟು ಕಾಡುತ್ತದೋ ಅದರಷ್ಟೇ ತೀವ್ರವಾಗಿ ಕಾಡುವುದು ನಗರ ಬದುಕನ್ನು ತೊರೆದು ಅಲೆಮಾರಿಯಾಗಿ ಕಾಡು ಸೇರಿದ ವಾರಿನ್ ಡೆನಿಸಳ ತಾಯಿಯದು. ಆಫ್ರಿಕಾದ ಪ್ರದೇಶಗಳ – ವ್ಯಕ್ತಿಗಳ ಹೆಸರುಗಳನ್ನೊರತುಪಡಿಸಿದರೆ ‘ಮರುಭೂಮಿಯ ಹೂ’ ಎಲ್ಲೋ ದೂರದ ದೇಶದ ಹುಡುಗಿಯ ಕಥೆಯೆನಿಸದೆ ನಮ್ಮದೇ ಮನೆಮಗಳು ನಮ್ಮೊಡನೆ ಕುಳಿತು ಕಷ್ಟ ಸುಖ ಹಂಚಿಕೊಂಡ ಭಾವ ಮೂಡುತ್ತದೆ. ಕಾರಣ ವಾರಿನ್ ಡೆರಿಸಳ ಪುಸ್ತಕವನ್ನು ಸಶಕ್ತವಾಗಿ ಸುರಳೀತವಾಗಿ ಕನ್ನಡಕ್ಕೆ ಅನುವಾದಿಸಿರುವ ಜಗದೀಶ್ ಕೊಪ್ಪ. ಮಣಿ ಪ್ರಕಾಶನದಿಂದ ಪ್ರಕಟವಾಗಿರುವ ಈ ಪುಸ್ತಕ ಸ್ಪೂರ್ತಿಗಾಗಿ, ಆತ್ಮಸ್ಥೈರ್ಯಕ್ಕಾಗಿ, ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನರಿಯುವ ಸಲುವಾಗಿ ಓದಲೇಬೇಕಾದದ್ದು.
ವಿಜಯಕರ್ನಾಟಕ ದಿನಪತ್ರಿಕೆಯ 'ಸಾಪ್ತಾಹಿಕ ಲವಲವಿಕೆ'ಯ 'ನಾನು ಓದುತ್ತಿರುವ ಹೊತ್ತಿಗೆ' ಅಂಕಣದಲ್ಲಿ ಪ್ರಕಟವಾಗಿದ್ದ ಲೇಖನ

No comments:

Post a Comment