Nov 5, 2012

ಜೀವೋತ್ಪಾದಕರ ‘ಹತ್ಯೆ’ಯ ಕಥೆ!



jagadish koppa

ಡಾ ಅಶೋಕ್ ಕೆ ಆರ್

ಭುವಿಯ ಮೇಲೆ ಮೊದಲ ಜೀವಿಯ ಉಗಮವಾಗಿದ್ದು ನೀರಿನಲ್ಲಿ. ಮಂಗಳ ಮತ್ತಿನ್ನಿತರ ಗ್ರಹಗಳ ಮೇಲಿನ ಅಧ್ಯಯನದಲ್ಲಿ ಪ್ರಾಮುಖ್ಯತೆ ದೊರೆಯುವುದು ನೀರಿನ ಅಸ್ತಿತ್ವಕ್ಕೆ. ನಮ್ಮ ದೇಹತೂಕದ ಅರ್ಧಕ್ಕೂ ಅಧಿಕ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ ಎಂಬುದು ಕೂಡ ನೀರಿನ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ. “ನದಿಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ” ಎಂಬರ್ಥದ ಮಾತುಗಳನ್ನು ಕೇಳಿದಾಗಲೆಲ್ಲ ನನ್ನಲ್ಲಿ ನೂರಾರು ಪ್ರಶ್ನೆಗಳೇಳುತ್ತವೆ. ನದಿ ನೀರು ಸಮುದ್ರಕ್ಕೆ ಸೇರದಿದ್ದರೆ ಪ್ರಾಕೃತಿಕ ಸಮತೋಲನದಲ್ಲಿ ಏರುಪೇರುಗಳಾಗುವುದಿಲ್ಲವೇ? ಸಮುದ್ರದ ಜೀವಿಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದಿಲ್ಲವೇ? ಬೃಹತ್ ಅಣೆಕಟ್ಟು ಕಟ್ಟುವುದರಿಂದ ನದಿ ಕೆಳಗಿನ ಪಾತ್ರದ ಜೀವಸಮುದಾಯ, ನಾಗರೀಕತೆಗಳಿಗೆ ಹಾನಿಯುಂಟಾಗುವುದಿಲ್ಲವೇ? ಇನ್ನು ಬೃಹತ್ ಅಣೆಕಟ್ಟೆಗಳಿಂದ ಭೂತಾಪಮಾನದ ಏರುವಿಕೆಯೂ ಹೆಚ್ಚುತ್ತದಂತೆ! ಇಂಥ ಗೊಂದಲಗಳೇ ತುಂಬಿರುವಾಗ ಒಂದಷ್ಟು ಉತ್ತರ ದೊರಕಿಸಿದ್ದು ಡಾ ಎನ್ ಜಗದೀಶ್ ಕೊಪ್ಪರವರ ಕೃತಿ ‘ಜೀವನದಿಗಳ ಸಾವಿನ ಕಥನ’

          ಪರಿಸರದ ಬಗೆಗಿನ ಇಂಥ ಪುಸ್ತಕಗಳು ಕನ್ನಡದಲ್ಲಿ ಕೊಂಚ ಅಪರೂಪವೆಂದೇ ಹೇಳಬೇಕು. ಕೆಲವು ಆಂಗ್ಲ ಪುಸ್ತಕಗಳ ಪ್ರೇರಣೆ, ಆಳವಾದ ಅಧ್ಯಯನದಿಂದ ಹೊರಬಂದಿರುವ ಜಗದೀಶ್ ಕೊಪ್ಪರವರ ಕೃತಿ ಭಾರತದ್ದಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಜೀವಸೆಲೆಯ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಎಳೆಎಳೆಯಾಗಿ ವಿವರಸಿದ್ದಾರೆ. ಬೃಹತ್ ಅಣೆಕಟ್ಟುಗಳು ಅನಿವಾರ್ಯ, ಅಭಿವೃದ್ಧಿಯ ದ್ಯೋತಕ ಎಂಬ ಆಧುನಿಕ ಸಮಾಜ ನಿರ್ಮಿತ ಅಭಿಪ್ರಾಯ ಎಷ್ಟು ಬಾಲಿಶ ಎಂಬ ಅರಿವಾಗುತ್ತದೆ ಪುಸ್ತಕ ಓದಿ ಮುಗಿಸಿದಾಗ. ‘ನೀರಾವರಿಗಾಗಿ, ಕೃಷಿಗಾಗಿ ಅಣೆಕಟ್ಟು’ ಎಂಬ ಘೋಷಣೆ ಕ್ರಮೇಣ ಮನರಂಜನೆಗಾಗಿಯೇ ಹೆಚ್ಚೆಚ್ಚು ಮೀಸಲಾಗುತ್ತ ಹೋಗುವ ವ್ಯಸನದ ಸಂಗತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸುತ್ತಾರೆ. ಈ ಬೃಹತ್ ಯೋಜನೆಗಳಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ವಿವರಿಸುತ್ತಲೇ ಪರಿಸರದೊಡನೆ ಸಹಜೀವನ ನಡೆಸುವ ಜನರ ಜೀವನವೇ ಪಲ್ಲಟಗೊಳ್ಳುವುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕೊನೆಗೆ ಈ ಅಣೆಕಟ್ಟೆಗಳು ಕೂಡ ಬೃಹತ್ ಉದ್ದಿಮೆಯಷ್ಟೇ ಎಂಬ ಸತ್ಯ ಹೊರಗೆಡಹುವ ಪುಸ್ತಕದ ಅಧ್ಯಾಯಗಳನ್ನು ಅರಗಿಸಿಕೊಳ್ಳುವುದು ಕೊಂಚ ಕಷ್ಟದ ಕೆಲಸವೇ!

ಪುಸ್ತಕದಿಂದ ಆಯ್ದ ಕೆಲವು ಸಾಲುಗಳು: - 

          ಅಭಿವೃದ್ಧಿ ಮತ್ತು ಆಧುನಿಕತೆ ಮನುಷ್ಯನನ್ನು ನೆಲದ ಸಂಸ್ಕೃತಿಯಿಂದ ದೂರ ಮಾಡಿದ್ದು ಮಾತ್ರವಲ್ಲದೆ, ಪ್ರಕೃತಿಯ ಕೊಡುಗೆಗಳಾದ ನೆಲಜಲ, ಗಾಳಿ, ಗಿಡಮರ ಇವೆಲ್ಲವೂ ತನ್ನ ಉಪಭೋಗಕ್ಕಾಗಿ ಇರುವ ಪುಕ್ಕಟೆ ಸವಲತ್ತುಗಳು ಎಂಬ ಅಹಂಕಾರವನ್ನು ಅವನೆದೆಗೆ ಕಸಿ ಮಾಡಿಬಿಟ್ಟವು. ಹೀಗಾಗಿ 21ನೇ ಶತಮಾನದ ನಾಗರಿಕರಿಗೆ ಕಾಡು, ಬೆಟ್ಟ, ಗುಡ್ಡ, ಕಣಿವೆ, ಕಂದರಗಳಲ್ಲಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಿಸರ್ಗದ ಮಕ್ಕಳಾದ ಆದಿವಾಸಿಗಳೆಂದರೆ ತಾತ್ಸಾರ. ಇವತ್ತಿನ ಮೂಲಮಂತ್ರವಾಗಿರುವ ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ತತ್ತರಿಸಿದವರೇ ಈ ಮಣ್ಣಿನ ಮಕ್ಕಳು. ಜಗತ್ತಿನೆಲ್ಲೆಡೆ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಚರಿತ್ರೆಯಲ್ಲಿ ಈ ಮೂಕ ಮಕ್ಕಳ ಅರಣ್ಯರೋದನವಿದೆ. ರಕ್ತಸಿಕ್ತ ಅಧ್ಯಾಯದ ಭಾಗಗಳಿವೆ”

“ಭಾರತ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ ಅಣೆಕಟ್ಟು ಯೋಜನೆಗಳಿಂದ ನಿರ್ವಸತಿಗರಾದವರಲ್ಲಿ ಶೇ 40ರಷ್ಟು ಆದಿವಾಸಿ ಜನರಿದ್ದಾರೆ. ನಾವು ಅರಿಯಬೇಕಾದ ಸತ್ಯವೇನೆಂದರೆ, ಭಾರತದ ಜನಸಂಖ್ಯೆಯ ಶೇ 6ರಷ್ಟು ಮಂದಿ ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳಿದ್ದಾರೆ. ಇಂದಿನ ಬಹುತೇಕ ಅಭಿವೃದ್ಧಿ ಯೋಜನೆಗಳಿಗೆ ಬಲಿಪಶುಗಳಾಗುತ್ತಿರುವವರಲ್ಲಿ ಈ ನತದೃಷ್ಟರು ಮುಂಚೂಣಿಯಲ್ಲಿದ್ದಾರೆ. ಇಂತಹ ದುರಂತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಫಿಲಿಫೈನ್ಸ್ ದೇಶದಲ್ಲಿರುವ 47 ಲಕ್ಷ ಆದಿವಾಸಿಗಳಲ್ಲಿ 58 ಸಾವಿರ ಮಂದಿಯನ್ನು ಹಾಗೂ ವಿಯೆಟ್ನಾಂನಲ್ಲಿರುವ 1 ಲಕ್ಷದ 22 ಸಾವಿರ ಮಂದಿಯನ್ನು ಅಣೆಕಟ್ಟು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಗಿದೆ”

“ನಾಗರಿಕತೆಯ ಸೋಂಕಿಲ್ಲದೆ, ಆಧುನಿಕ ಬದುಕಿನ ಕ್ರಮಗಳಿಗಿಂತ ವಿಭಿನ್ನವಾಗಿ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಈ ಜನತೆ ತಮ್ಮ ಮೂಲ ನೆಲೆಗಳಿಂದ ಪಲ್ಲಟಗೊಂಡ ನಂತರ ನೀರಿನಿಂದ ಹೊರ ತೆಗೆದ ಮೀನಿನಂತಾಗಿದ್ದಾರೆ”

          ನಾಗರೀಕತೆಯ ಉಗಮಕ್ಕೆ, ಉನ್ನತಿಗೆ ಕಾರಣವಾದ ನದಿಗಳು ಅದೇ ನಾಗರೀಕತೆಯ ‘ಅಭಿವೃದ್ಧಿಯ’ ನೆಪದಲ್ಲಿ ಮರಣಶಯ್ಯೆಯ ಮೇಲೆ ಮಲಗುವಂತಾಗಿರುವುದು ದುರದೃಷ್ಟಕರ. ಇವೆಲ್ಲಕ್ಕೂ ಪರಿಹಾರ? ಪ್ರಕೃತಿಯಿಂದ ಹಿಂದಿರುಗಿ ಬರಲಾರದಷ್ಟು ದೂರ ಸರಿದಿರುವ ನಮಗೆ ಪರಿಹಾರ ಕಂಡು ಹಿಡಿಯುವುದೇ ದುಸ್ತರವೇನೋ? ಪ್ರಕೃತಿಯೇ ಪರಿಹಾರ ಯೋಜಿಸಿದೆಯಾ? ಕಾದು ನೋಡಬೇಕಷ್ಟೆ.

          ಪುಸ್ತಕ – ಜೀವನದಿಗಳ ಸಾವಿನ ಕಥನ
          ಲೇಖಕ – ಡಾ.ಎನ್.ಜಗದೀಶ್ ಕೊಪ್ಪ
          ಪ್ರಕಾಶಕರು – ಪಲ್ಲವ ಪ್ರಕಾಶನ
          ಬೆಲೆ – ನೂರು ರುಪಾಯಿ.

(ಪ್ರೀತಿ ಪೂರ್ವಕವಾಗಿ ಪುಸ್ತಕ ಕಳುಹಿಸಿಕೊಟ್ಟ ಡಾ.ಜಗದೀಶ್ ಕೊಪ್ಪರವರಿಗೆ ಧನ್ಯವಾದಗಳು)

1 comment:

  1. ನಿಜವಾದ ಪರಿಹಾರವು ಈ ಅಭಿವೃದ್ದಿಯೆಂಬ ಬಂಡವಾಳಶಾಹಿ ವ್ಯವಸ್ಥೆಯ ಹುಚ್ಚು raceಅನ್ನು ಬಹು ಬೇಗ ನಿಲ್ಲಿಸುವುದಾಗಿದೆ. ಎಲ್ಲವು ಸರಕುಕರಣಕ್ಕೆ ಒಳಗಾಗುತ್ತಿವೆ. I think blending eclectically Buddha, Marx and Gandhi will be really a genuine remedy to problems being faced by humans, which promotes empathy and compassion towards ecology

    ReplyDelete