Aug 20, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 37

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 36 ಓದಲು ಇಲ್ಲಿ ಕ್ಲಿಕ್ಕಿಸಿ


‘ಆತ್ಮ’ – ಕಥೆ
ಏನೆಂದರೆ ಏನೂ ಕೆಲಸ ಮಾಡದೆ ಸತ್ತು ಹೋಗ್ತೀನಿ ಅಂತ ಕನಸುಮನಸಿನಲ್ಲೂ ನಾನು ಎಣಿಸಿರಲಿಲ್ಲ. ನಮ್ಮ ಸಾವಿನಿಂದ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ ಎಂಬುದೇನೋ ನಿಜ. ಆದರೆ..... ನಾ ಕಂಡ ಕನಸುಗಳಲ್ಲಿ ಕೊಂಚವನ್ನೂ ಸಾಧಿಸಲಾಗದೆ ಸತ್ತು ಹೋದೆನಲ್ಲಾ ಎಂಬುದನ್ನು ನೆನೆಸಿಕೊಂಡಾಗಲೆಲ್ಲಾ ಬೇಸರವಾಗುತ್ತದೆ. ಈ ಕಾಡಿಗೆ ಬರದೇ ಇದ್ದಲ್ಲಿ ಏನನ್ನಾದರೂ ಮಾಡಬಹುದಿತ್ತೇನೋ ಎಂದೊಮ್ಮೆಮ್ಮೆ ಅನ್ನಿಸುತ್ತದೆ. ನಾಡಿನಲ್ಲಿ ನಾ ನಡೆದುಕೊಂಡಿದ್ದ ರೀತಿಯಿಂದ ಅದೂ ಸಾಧ್ಯವಾಗುತ್ತಿರಲಿಲ್ಲವೇನೋ?

ಪ್ರೇಮ್ ಮತ್ತು ಆತನ ಸಂಗಡಿಗರು (ನಂತರ ಅವರೆಲ್ಲಾ ನನಗೂ ಸಂಗಾತಿಗಳಾದರು) ನಮ್ಮನ್ನು ಕಿಗ್ಗಾದಲ್ಲಿ ಭೇಟಿಮಾಡಿದ ನಂತರ ನಾನು ಮತ್ತು ಕೀರ್ತನ ಅವರ ಜೊತೆ ಹೊಸ ದಾರಿಯಲ್ಲಿ ಹೊಸ ಸಂಗಾತಿಗಳೊಡನೆ ಹೊಸದೊಂದು ಜೀವನದತ್ತ ನೂತನನಿರ್ಮಲ ಜಗತ್ತನ್ನು ನಿರ್ಮಿಸುವ ಸಂಕಲ್ಪ ತೊಟ್ಟು ಅವರ ಜೊತೆ ಹೊರಟೆವು. ಕಾಡಿನ ಹಾದಿ ನನ್ನ ಊಹೆಗಿಂತಲೂ ದುರ್ಗಮವಾಗಿತ್ತು. ಜಾರುತ್ತಿದ್ದ ಹುಲ್ಲಿನ ಮೇಲೆ ನಡೆಯುವುದೇ ಪ್ರಯಾಸಕರ ಕೆಲಸವಾಗಿತ್ತು. ಅದರ ಜೊತೆಗೆ ರಕ್ತ ಹೀರುವ ಇಂಬಳದ ಕಾಟ. ಎರಡು ಮೂರು ಘಂಟೆಯ ನಂತರ ನಕ್ಸಲರನ್ನು ಬಹಳವಾಗಿ ಬೆಂಬಲಿಸುವ ಮೂರು ಮನೆಗಳು ಸಿಕ್ಕಿದವು. ನಮ್ಮೆಲ್ಲರ ಊಟಕ್ಕೆ ಅವರು ವ್ಯವಸ್ಥೆ ಮಾಡಿದ್ದರು. ಊಟವಾದ ನಂತರ ಒಂದು ಮನೆಯಲ್ಲಿ ಹೋಗಿ ಕುಳಿತೆವು. ಹತ್ತು ನಿಮಿಷದ ನಂತರ ಪ್ರೇಮ್ ಆ ಮನೆಗೆ ಬಂದು ದೇಶದ ಅರ್ಥವ್ಯವಸ್ಥೆ, wtoನ ಹಾವಳಿ, ಬಹುರಾಷ್ಟ್ರೀಯ ಕಂಪನಿಗಳಿಂದ ಆಗೋ ಉಪಯೋಗ ಮತ್ತು ಅವರಿಂದಾದ ಉಪಯೋಗಗಳಿಗೆ ಹೋಲಿಸಿದರೆ ಬಹಳಷ್ಟು ಹೆಚ್ಚಾಗಿರುವ ನಷ್ಟ – ಇವುಗಳ ಬಗ್ಗೆ ಉಪನ್ಯಾಸ ಮಾಡಿದರು. ಅಷ್ಟೊಳ್ಳೆ ಪಾಠವನ್ನು ನಾನವತ್ತೇ ಕೇಳಿದ್ದು....ಪ್ರೇಮ್ ಬಗ್ಗೆ ನನಗಿದ್ದ ಅಭಿಮಾನದಿಂದ ಆ ರೀತಿಯ ಅಭಿಪ್ರಾಯ ಮೂಡಿತಾ? ಎಂದೂ ಅನ್ನಿಸುತ್ತಿತ್ತು. ಈ ವ್ಯಕ್ತಿ ನಮ್ಮ ದೇಶದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಾರೆ ಎಂಬುದಂತೂ ಖಾತ್ರಿಯಾಯಿತು. ಒಂದು ಘಂಟೆಯ ಕಾಲ ನಡೆದ ಉಪನ್ಯಾಸದ ನಂತರ ಪ್ರೇಮ್ ಅರುಣನನ್ನು ಉದ್ದೇಶಿಸಿ “ನೀನಿವತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಇವರಿಗೆಲ್ಲಾ ವಿವರವಾಗಿ ಹೇಳಿಕೊಡು. ಜಾಸ್ತಿ ಸಮಯ ತೆಗೆದುಕೊಂಡರೂ ಅಡ್ಡಿಯಿಲ್ಲ. ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯಲ್ಲಿ ಪರಿಣತಿ ಹೊಂದಬೇಕು” ಎಂದು ತಿಳಿಸಿ ಹೊರಹೋದರು. ಅಲ್ಲಿಂದ ಅವರು ಇನ್ನೊಂದು ಮನೆಗೆ ಹೋಗಿ ಅಲ್ಲಿದ್ದ ಜನರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅರುಣ್ ಮೇಲೆದ್ದು “ಐದು ನಿಮಿಷದ ವಿರಾಮದ ನಂತರ ಪಾಠ ಶುರುಮಾಡ್ತೀನಿ” ಎಂದ. ನನ್ನ ಪಕ್ಕದಲ್ಲಿ ಕುಳಿತಿದ್ದ ಕೀರ್ತನಾಳನ್ನು “ಈತ ಡಾಕ್ಟರಾ?” ಎಂದೆ. ಹೌದೆಂದಳು. ಎರಡು ಘಂಟೆಗಳ ಕಾಲ ಪ್ರತಿಯೊಬ್ಬರಿಗೂ ಪ್ರತಿಯೊಂದು ವಿಷಯವೂ ಮನದಟ್ಟಾಗುವಂತೆ ವಿವರಿಸಿ ಹೇಳಿದ ಅರುಣ್. ಆತನ ಪಾಠ ಮುಗಿಯುವಷ್ಟರಲ್ಲಿ ಹೊರಗೆ ಮಳೆ ಶುರುವಾಗಿತ್ತು. ಆರ್ಭಟ ಜೋರಾಗುತ್ತಿತ್ತು. ಅಂದಿನ ರಾತ್ರಿ ಅದೇ ಪುಟ್ಟ ಊರಿನಲ್ಲಿ ಉಳಿದುಕೊಳ್ಳುವುದೆಂದು ಮೊದಲೇ ನಿರ್ಧರಿತವಾದ್ದರಿಂದ ಮಳೆಯಿಂದ ಅಷ್ಟೇನೂ ಉಪಟಳವಾಗಲಿಲ್ಲ.
ಮಾರನೆಯ ದಿನ ಸೂರ್ಯನ ಕಿರಣಗಳು ಮೂಡುವ ಮುಂಚೆಯೇ ಹೊರಟೆವು. ಯಾವ ದಿಕ್ಕಿಗೆ ಹೋಗುತ್ತಿದ್ದೇವೆ ಎಂಬುದೂ ನನಗೆ ತಿಳಿಯುತ್ತಿರಲಿಲ್ಲ. ಮೊದಲ ಬಾರಿಗೆ ಕೈಯಲ್ಲಿ ಗುಂಡಿರದ ತುಕ್ಕಿಡಿದಿದ್ದ ಹಳೆಯ ಬಂದೂಕಿಡಿದಿದ್ದೆ. ನಾನೂ ಕ್ರಾಂತಿಕಾರಿ ಆಗಿಬಿಟ್ಟೆ ಎಂಬ ಅಹಂ ಹುಟ್ಟುತ್ತಿತ್ತು. ದಾರಿಯಲ್ಲಿ ಸಿಕ್ಕ ಒಂದು ಸಮತಟ್ಟಾದ ಜಾಗದಲ್ಲಿ ನಮ್ಮೆಲ್ಲಾ ಸಾಮಾನುಗಳನ್ನು ಇಳಿಸಿದೆವು. ತಿಂಡಿಯ ತಯಾರಿಯಲ್ಲಿ ತಂಡದ ಸದಸ್ಯರು ತೊಡಗಿಕೊಂಡಾಗ ಕಾಮ್ರೇಡ್ ಪ್ರೇಮ್ ನನ್ನನ್ನು ಮತ್ತು ಕೀರ್ತನಾಳನ್ನು ಜೊತೆಗೆ ಕರೆದುಕೊಂಡು ಹೋದರು. ಅವರ ಕೈಯಲ್ಲಿ ದೇಶೀಯವಾಗಿ ನಿರ್ಮಿತಗೊಂಡ ಬಹುತೇಕ ನಕ್ಸಲರು ಉಪಯೋಗಿಸುವ ‘ತಪಂಚಾ’ ಮತ್ತು ಸಿಂಗಲ್ ಬ್ಯಾರೆಲ್ ಬಂದೂಕುಗಳಿದ್ದವು. ತಿಂಡಿ ಮಾಡುತ್ತಿದ್ದ ಸ್ಥಳದಿಂದ ಕೊಂಚ ದೂರ ಕರೆದುಕೊಂಡು ಹೋದರು. ಹೋಗುವ ದಾರಿಯಲ್ಲಿ “ನಕ್ಸಲ್ ಸಂಘಟನೆಗೆ ಸೇರಿ ಏನೇನು ಕೆಲಸ ಮಾಡಬೇಕು ಅಂತ ನಿನ್ನ ಉದ್ದೇಶ ಲೋಕೇಶ್?” ಎಂದು ಕೇಳಿದರು. ನಾನು ಉತ್ತರಿಸುವ ಮೊದಲೇ ಅವರೇ ಮಾತು ಮುಂದುವರಿಸುತ್ತಾ “ಕ್ರಾಂತಿ ಮಾಡಬೇಕು. ಬದಲಾವಣೆಯನ್ನು ಒಂದೇ ದಿನದಲ್ಲಿ ತರಬೇಕು ಅನ್ನೋದೆಲ್ಲಾ ಆವೇಶದಲ್ಲಿ ಹೇಳೋ ಮಾತುಗಳು. ನಿಧಾನವಾಗಿ ಯೋಚಿಸಿ ಹೇಳು” ಎಂದರು.
“ಈ ವ್ಯವಸ್ಥೆಯಲ್ಲಿರೋ ಭ್ರಷ್ಟಾಚಾರ, ಲಂಚಕೋರತನ, ದೊಡ್ಡವರೆನಿಸಿಕೊಂಡವರು ಸಣ್ಣ ರೀತಿಯಲ್ಲಿ ನಡೆದುಕೊಳ್ಳೋದು, ಸಮಾನತೆಯೇ ಇಲ್ಲದಿರೋ ಸಮಾಜ ಹೀಗೆ ಪ್ರತಿಯೊಂದರ ಮೇಲೂ ಒಂದು ಕೋಪವಿದೆ, ತಿರಸ್ಕಾರವಿದೆ. ಏನು ಮಾಡಬೇಕು ಅನ್ನೋದು ತಿಳಿಯುತ್ತಿರಲಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಹೋರಾಡೋದರಿಂದ ಸಿಗೋ ಫಲಿತಾಂಶಗಳು ಕೆಲವೇ ದಿನಗಳಲ್ಲಿ ಮಣ್ಣುಪಾಲಾಗಿ ಹೋಗುತ್ತೆ ಅನ್ನೋ ಅಭಿಪ್ರಾಯ ಬಂತು. ನನ್ನ ಭಾವನೆಗಳಿಗೆ, ನಾನಂಬಿದ ಆದರ್ಶಗಳಿಗೆ ನಕ್ಸಲ್ ಚಳುವಳಿಯೇ ಸರಿಯಾದ ಚೌಕಟ್ಟು ಎಂದೆನಿಸಿ ಬಂದೆ” ಎಂದು ತಿಳಿಸಿದೆ.
“ಗುಡ್” ಎಂದ್ಹೇಳಿ ನನಗೆ ಕೇಳಿದ ಪ್ರಶ್ನೆಯನ್ನೇ ಕೀರ್ತನಾಳಿಗೂ ಕೇಳಿದರು.
“ಬೇರೆ ವಿಷಯಗಳ ಬಗ್ಗೆ ನನಗೆ ಅಷ್ಟು ತಿಳುವಳಿಕೆಯಿಲ್ಲ ಕಾಮ್ರೇಡ್. ನನ್ನ ಮನವನ್ನು ಬಹುವಾಗಿ ಕಲಕಿದ್ದು ಲಂಚ. ಲಂಚದ ವಿರುದ್ಧ ಹೋರಾಡುವವರಿಗೆ ನಮ್ಮ ಸಮಾಜ ಕೊಟ್ಟಿರೋ ಗೌರವ ಎಂಥದ್ದು ಎಂಬುದನ್ನೂ ನೋಡಿದೆ. ಒಮ್ಮೆ ಒಂದು ಪುಸ್ತಕವನ್ನು – ಹೆಸರು ನೆನಪಿಲ್ಲ – ಓದುತ್ತಿದ್ದಾಗ ಅದರಲ್ಲಿನ ಒಂದು ಸಾಲು ‘ಬಂದೂಕಿನ ನಳಿಕೆಯ ತುದಿಯಿಂದ ಸಿಗೋದೇ ನಿಜವಾದ ಸ್ವಾತಂತ್ರ್ಯ’ ಬಹುವಾಗಿ ಆಕರ್ಷಿಸಿತು. ಬಹಳಷ್ಟು ಸತ್ಯವೆದೆಯಲ್ಲವಾ ಈ ಸಾಲಿನಲ್ಲಿ – ಅದೂ ನಮ್ಮ ದೇಶದ ಪರಿಸ್ಥಿತಿಯನ್ನು ನೆನೆದಾಗ – ಎನ್ನಿಸಿತು. ಅವತ್ತಿನಿಂದ ಮಾರ್ಕ್ಸ್ ವಾದವನ್ನೂ ಪಾಲಿಸುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ, ಮಲೆನಾಡಿನಲ್ಲಿ ನಕ್ಸಲ್ ಚಳುವಳಿ ಹೆಂಗೆಲ್ಲ ಬೆಳೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೆ. ದೇವರ ದಯೆಯಿಂದ ಅದೇ ಸಮಯಕ್ಕೆ ಲೋಕಿ ಸಿಕ್ಕಿದ. ಇಬ್ಬರೂ ಹೊರಟುಬಂದೆವು” ಎಂದಳು. ಇಬ್ಬರನ್ನೂ ಕರೆದುಕೊಂಡು ಹೋಗಿ ಬಂದೂಕನ್ನು ಉಪಯೋಗಿಸುವುದನ್ನು ತೋರಿಸಿಕೊಟ್ಟರು ಪ್ರೇಮ್. ಮೊದಲ ದಿನವಾದ್ದರಿಂದ ಪ್ರಾಥಮಿಕ ಪಾಠಗಳನ್ನು ಮಾತ್ರ ತಿಳಿಸಿಕೊಟ್ಟರು. “ಬಂದೂಕನ್ನು ಆತ್ಮರಕ್ಷಣೆಗೋಸ್ಕರ ಮಾತ್ರ ಉಪಯೋಗಿಸಬೇಕು. ಪೋಲೀಸರು ನಮ್ಮ ಮೇಲೆ ಆಕ್ರಮಣ ಮಾಡಿದಾಗಲೂ ಕೂಡ ಅವರನ್ನು ಬೆದರಿಸಿ ಓಡಿಸಲು ಸಾಧ್ಯವಾಗುತ್ತದಾ ಎಂದು ಪ್ರಯತ್ನಿಸಬೇಕು. ಅದಾಗದಿದ್ದರೆ ಮಾತ್ರ ಅವರ ಪ್ರಾಣ ತೆಗೆಯಬೇಕು; ಅದೂ ನಮ್ಮ ಪ್ರಾಣ ಹೋಗುತ್ತೆ ಅನ್ನೋ ಕಾರಣದಿಂದ”
“ಬೆದರಿಸಿ ಕಳುಹಿಸೋದು ಅಂದ್ರೆ?” ಕೀರ್ತನ ಕೇಳಿದಳು.
“ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಗುಂಡುಗಳನ್ನು ಪೋಲೀಸರ ಕಾಲಿನ ಬಳಿ ಅಥವಾ ಅವರ ಕಾಲಿಗೆ ಬೀಳುವಂತೆ ಪ್ರಯತ್ನಿಸಬೇಕು. ಇದ್ಯಾವುದೂ ಸಫಲವಾಗದಿದ್ದಾಗಷ್ಟೇ....” ಎಂದ್ಹೇಳಿ ನಿಲ್ಲಿಸಿದರು.
“ನೀವ್ಯಾವತ್ತಾದರೂ ಪೋಲೀಸರೊಂದಿಗೆ ಮುಖಾಮುಖಿಯಾಗಿದ್ದೀರಾ ಕಾಮ್ರೇಡ್” ನಾನು ಕೇಳಿದೆ.
“ಒಂದು ಬಾರಿಯಷ್ಟೇ. ಪೋಲೀಸರು ಕಡಿಮೆ ಸಂಖೈಯಲ್ಲಿದ್ದರು. ಜೊತೆಗೆ ಎಲ್ಲರ ಬಳಿಯೂ ಶಸ್ತ್ರಾಸ್ತ್ರವೂ ಇರಲಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಅವರು ನಮ್ಮ ಬೆನ್ನತ್ತಲಿಲ್ಲ”
* * *
ಅದೇ ದಿನ ಸಂಜೆ ನಾವುಗಳು ಕ್ಯಾಂಪ್ ಮಾಡಿದ್ದ ಜಾಗಕ್ಕೆ ಭದ್ರಾ ಸ್ಕ್ವಾಡಿನ ಹತ್ತು ಜನ ಬಂದು ನಮ್ಮನ್ನು ಕೂಡಿಕೊಂಡರು. ಆ ಸ್ಕ್ವಾಡಿನ ಮುಖ್ಯಸ್ಥರನ್ನು ನೋಡಿ ನನಗೆ ಅಚ್ಚರಿ, ಖುಷಿ ಒಟ್ಟೊಟ್ಟಿಗೇ ಆಯಿತು. ನನ್ನನ್ನು ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿದ್ದ ಸ್ಕೇಟಿಂಗ್ ಗ್ರೌಂಡಿನ ಬಳಿ ಮತ್ತು ಕೊಡೈಕೆನಾಲಿನಲ್ಲಿ ಭೇಟಿಯಾಗಿದ್ದ ಮಹಿಳೆ – ಪೋಲೀಸ್ ನೌಕರಿಯಲ್ಲಿದ್ದಾಕೆಯೇ ಭದ್ರ ಸ್ಕ್ವಾಡಿನ ಮುಖ್ಯಸ್ಥೆ. ಖುಷಿ ತಡೆಯಲಾಗದೆ ಅವರ ಬಳಿ ಹೋಗಿ “ನೀವ್ಯಾವಾಗ ಬಂದ್ರಿ ಅಕ್ಕ” ಎಂದೆ.
“ನಾನು ಬಂದು ಮೂರು ತಿಂಗಳ ಮೇಲಾಯ್ತು ಲೋಕಿ. ನೀನು ಮೊನ್ನೆ ಬಂದೆ ಅಲ್ವಾ?”
“ಹ್ಞೂ ಅಕ್ಕ”
“ನಿನ್ನ ಜೊತೆ ಬಂದ ಹುಡುಗಿ ಎಲ್ಲಿ?” ಎಂದು ಕೇಳಿದರು. ಪ್ರತಿ ಸ್ಕ್ವಾಡಿನ ಚಲನವಲನವೂ ಸಂಪೂರ್ಣವಾಗಿ ವೇಗವಾಗಿ ಮತ್ತೊಂದು ಸ್ಕ್ವಾಡಿಗೆ ತಿಳಿಯುತ್ತಿತ್ತು. ಪ್ರತಿ ಸ್ಕ್ವಾಡಿನ ಬಳಿಯೂ ವೈರ್ ಲೆಸ್ ಉಪಕರಣಗಳಿದ್ದವು. ಜೊತೆಗೆ ನಕ್ಸಲ್ ಬಗ್ಗೆ ಸಹಾನುಭೂತಿ ಇಟ್ಟುಕೊಂಡು ನಕ್ಸಲರಿಗೆ ಅನೇಕ ರೀತಿಯಿಂದ ಸಹಾಯ ಮಾಡುತ್ತಿದ್ದ ಜನ ಕೂಡ ಸುದ್ದಿಗಳನ್ನು ಕಾಡಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ರವಾನಿಸುತ್ತಿದ್ದರು. ಕೀರ್ತನಾಳನ್ನು ಕರೆದುಕೊಂಡು ಹೋಗಿ ಅವರಿಗೆ ಪರಿಚಯ ಮಾಡಿಸಿದೆ. ನಿಮ್ಮ ಹೇಸರೇನಕ್ಕ ಎಂದು ಕೇಳಿ ಅವರ ಹೆಸರು ಕಾ.ವತ್ಸಲಾ ಎಂಬುದನ್ನೂ ತಿಳಿದುಕೊಂಡೆ.
ಮಾರನೆಯ ದಿನ ಬೆಳಿಗ್ಗೆ ಶಸ್ತ್ರಾಭ್ಯಾಸ ಮಾಡಿ ಕ್ರಾಂತಿಗೀತೆಗಳನ್ನು ಹಾಡಿ ಮುಗಿಸಿದ ನಂತರ ಕಾ.ವತ್ಸಲಾ ಎರಡೂ ಸ್ಕ್ವಾಡುಗಳನ್ನುದ್ದೇಶಿಸಿ “ಇಷ್ಟು ದಿನ ಸಂಘಟನೆಯನ್ನು ಬಲಪಡಿಸುವುದರಲ್ಲಿ, ಜನರಿಗೆ ನಮ್ಮ ಸಂಘಟನೆಯ ಕೆಲಸದ ರೀತಿಯ ಬಗ್ಗೆ ಅರಿವನ್ನು ಮೂಡಿಸಿದೆವು. ಜನರೂ ಕೂಡ ಸರ್ಕಾರವನ್ನು ಬಗ್ಗಿಸಬೇಕಾದರೆ ನ್ಯಾಯ ದೊರೆಯಬೇಕೆಂದರೆ ಬಂದೂಕಿನ ದಾರಿಯೇ ಶ್ರೇಷ್ಠವಾದುದೆಂದು ಒಪ್ಪಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಮಲೆನಾಡಿನಲ್ಲಿ ನಮಗೆ ಒಳ್ಳೆಯ ಅಡಿಪಾಯವೇ ಸಿಕ್ಕಿದೆ. ಆ ಅಡಿಪಾಯದ ಮೇಲೆ ಸುಂದರವಾದುದೊಂದು ಕಟ್ಟಡ ಕಟ್ಟುವ ಕೆಲಸವನ್ನು ಪ್ರಾರಂಭಿಸುವ ಸಮಯ ಬಂದಿದೆ. ಆ ಕಟ್ಟಡದ ನಿರ್ಮಾಣಕ್ಕಾಗಿ ನಮ್ಮೆಲ್ಲರ ಶ್ರಮದ ಅಗತ್ಯವಿದೆ. ನಿಮ್ಮ ಶ್ರಮವನ್ನು ಇದಕ್ಕಾಗಿ ವಿನಿಯೋಗಿಸುತ್ತೀರ ಎಂದು ನಂಬಿರುತ್ತೇನೆ. ನಂಬಬಹುದಲ್ವಾ?”
“ಯೆಸ್ ಕಾಮ್ರೇಡ್” ನಾವೆಲ್ಲ ಒಕ್ಕೊರಲಿನಿಂದ ಹೇಳಿದೆವು.
“ಗುಡ್. ಎಲ್ಲರೂ ಸಾಮಾನುಗಳನ್ನು ಪ್ಯಾಕ್ ಮಾಡಿಕೊಳ್ಳಿ. ಇಲ್ಲಿಂದ ಹೊರಡೋಣ. ಮುಂದಿನ ಕೆಲಸ ಕಾರ್ಯಗಳನ್ನು ನಿಮ್ಮ ಸ್ಕ್ವಾಡಿನ ಮುಖ್ಯಸ್ಥರು ನಿಮಗೆ ತಿಳಿಸುತ್ತಾರೆ”
ಇವತ್ತಿನಿಂದ ನಾನು ಕೀರ್ತನ ಬೇರೆಬೇರೆಯಾಗಿ ಇರಬೇಕಲ್ವಾ? ಎಂಬುದನ್ನು ನೆನೆದು ಮನಸ್ಸಿಗೆ ಬೇಸರವಾಯಿತು. ಕೀರ್ತನಾಳಲ್ಲೂ ಅದೇ ಭಾವ ಮೂಡಿರಬೇಕು. ಆಕೆಯ ಮುಖದಲ್ಲೂ ಉತ್ಸಾಹವಿಲ್ಲ. ಕ್ಷಣಕ್ಕೊಮ್ಮೆ ದುಃಖ ತುಂಬಿದ ಮನದಿಂದ ನನ್ನೆಡೆಗೆ ನೋಡುತ್ತಿದ್ದಳು. ಬಹುಶಃ ನಮ್ಮಿಬ್ಬರ ಸಂಕಟ ಪ್ರೇಮ್ ರವರಿಗೆ ಗೊತ್ತಾಯಿತ್ತೆನ್ನಿಸುತ್ತೆ. ನಮ್ಮಿಬ್ಬರನ್ನೂ ಹತ್ತಿರಕ್ಕೆ ಕರೆದು “ಇಬ್ಬರೂ ಯಾವ ನಕ್ಸಲನ ನೇರ ಪರಿಚಯವೂ ಇಲ್ಲದೆ ಸಂಘಟನೆಗೆ ಸೇರಲು ಈ ಕಾಡಿನೊಳಗೆ ಬಂದಿದ್ದೀರಿ. ನಾವು ಈ ಕಾಡಿನೊಳಗೆ ಬರುವುದಕ್ಕೆ ಮುಂಚೆಯೇ ನಕ್ಸಲೀಯರಾಗಿದ್ದೊ. ಹೆಚ್ಚು ಕಡಿಮೆ ಪ್ರತಿಯೊಬ್ಬನ ಪರಿಚಯವೂ ಮುಂಚಿನಿಂದಾನೇ ಇತ್ತು. ನಿಮಗೆ ಬೇರೆ ಯಾರ ಪರಿಚಯವೂ ಇಲ್ಲ. ಎರಡು ದಿನಕ್ಕೇ ಒಬ್ಬರನ್ನೊಬ್ಬರಗಲಿದ್ದರೆ ಬೇಸರವಾಗುತ್ತೆ. ಆದ್ರಿಂದ ಇನ್ನೂ ಒಂದೆರಡು ವಾರ ಇಬ್ಬರೂ ನನ್ನ ಜೊತೆಯೇ ಇರಿ. ನಂತರದ ಅವಶ್ಯಕತೆಗಳನ್ನು ನೋಡಿಕೊಂಡು ಬೇರೆ ಸ್ಕ್ವಾಡಿಗೆ ಹೋಗುವಿರಂತೆ” ಎಂದು ತಿಳಿಸಿದರು. ಸಂತಸವಾಯಿತು.
* * *
ಅವತ್ತು ಸಂಜೆಯೇ ಅಲ್ಲಿಂದ ಹೊರಟೆವು. ನನಗೆ ತಿಳಿದ ಮಟ್ಟಿಗೆ ನಾವು ಉತ್ತರ ದಿಕ್ಕಿನಲ್ಲಿ ಸಾಗಿದೆವು, ಭದ್ರಾ ಸ್ಕ್ವಾಡಿನವರು ದಕ್ಷಿಣದ ದಿಕ್ಕಿನತ್ತ. ಎರಡು ದಿನದ ಸತತ ಪಯಣದ ನಂತರ ‘ಬಳಿಗ’ ಎಂಬ ಊರಿನಲ್ಲಿ ವಾಸ್ತವ್ಯ ಹೂಡಿದೆವು. ಬಳಿಗದಲ್ಲಿ ನಮ್ಮ ಬೆಂಬಲಿಗರ ಸಂಖೈ ಹೆಚ್ಚಿತ್ತು. ಅವರ ಆತಿಥ್ಯವನ್ನು ಕಂಡು ನನಗೆ ಬೆರಗಾಯಿತು. ನಮ್ಮನ್ನು ಬೆಂಬಲಿಸೋ ಇಷ್ಟೊಂದು ಜನರಿರುವಾಗ ದೂರದ ಊರಿನಲ್ಲಿ ಕುಳಿತ ಪತ್ರಕರ್ತರ್ಯಾಕೆ ನಕ್ಸಲರಿಗಿಲ್ಲಿ ಜನಬೆಂಬಲವೇ ಇಲ್ಲ ಎಂದು ಬರೆಯುತ್ತಾರೆ? ಯಾವುದೋ ಕೃಪೆಗೆ ಬಿದ್ದ ಪತ್ರಿಕೆಗಳ ಮಾಲೀಕರು ಆ ರೀತಿಯೇ ಬರೆಯಬೇಕೆಂದು ಒತ್ತಾಯಪಡಿಸುತ್ತಾರೇನೋ. ಬಳಿಗದಲ್ಲಿ ಒಂದು ರಾತ್ರಿ ಕಳೆದ ನಂತರ ನಮ್ಮ ಪಯಣ ಬಳಿಗದ ಸಮೀಪದಲ್ಲೇ ಇದ್ದ ಮೆಣಸಿನಹಾಡ್ಯದ ಕಡೆಗೆ. ಮೆಣಸಿನಹಾಡ್ಯ ಕೊಪ್ಪ ತಾಲ್ಲೂಕಿನ ಗಡಿಯಲ್ಲಿತ್ತು. ತೀರ ಹತ್ತಿರದಲ್ಲಿ ಕಲಸಹಳ್ಳಿ ಇತ್ತು; ಅದು ಮೂಡಿಗೆರೆ ತಾಲ್ಲೂಕಿಗೆ ಸೇರಿದ ಊರಾಗಿತ್ತು. ಈ ಮೆಣಸಿನಹಾಡ್ಯದಲ್ಲಿದ್ದದ್ದು ನಲವತ್ತು ಕುಟುಂಬಗಳು. ಮೂವತ್ತೇಳು ಕುಟುಂಬಗಳು ಗೌಡ್ಲು ಜನಾಂಗಕ್ಕೆ ಸೇರಿದವುಗಳಾಗಿದ್ದವು. ಆದಿವಾಸಿಗಳ ಮೂಲದ್ದಾಗಿತ್ತು ಈ ಗೌಡ್ಲು ಜನಾಂಗ. ಇನ್ನುಳಿದ ಮೂರು ಕುಟುಂಬಗಳಲ್ಲಿ ಎರಡು ಜೈನ ಕುಟುಂಬಗಳು ಮತ್ತೊಂದು ಬ್ರಾಹ್ಮಣ ಕುಟುಂಬ. ಈ ಊರಿನಲ್ಲಿದ್ದ ರಾಚಯ್ಯ ನಮ್ಮ ಅಂದಿನ ಟಾರ್ಗೆಟ್. ಆ ಸುತ್ತಮುತ್ತಲಿನಲ್ಲಿ ಬಹಳಷ್ಟು ಜಮೀನನ್ನು ಇಟ್ಟಿದ್ದ ಶ್ರೀಮಂತ. ಕೂಲಿಯವರನ್ನು ಕೀಳಾಗಿ ನಡೆಸಿಕೊಳ್ಳದಿದ್ದರೂ ಕೂಲಿ ದುಡ್ಡು ಕೊಡುವ ವಿಷಯದಲ್ಲಿ ಬಹಳ ಜಿಪುಣನಂತೆ ವರ್ತಿಸುತ್ತಿದ್ದ. ದಶಕಗಳಿಂದ ಈತ ಕೊಡುತ್ತಿದ್ದ ದುಡ್ಡಿನಲ್ಲಿ ಯಾವುದೇ ಏರಿಕೆಯಿರಲಿಲ್ಲ. ಇದರೊಟ್ಟಿಗೆ ನಕ್ಸಲರನ್ನು ಹೆಚ್ಚು ಕೆಣಕಿದ್ದು ಊರಿಗೆ ವಿದ್ಯುತ್ ತರುವ ವಿಷಯದಲ್ಲಿ ಆತ ವರ್ತಿಸಿದ ರೀತಿಯಿಂದಾಗಿ. ಊರಿನಿಂದ ಕೊಂಚ ಮಟ್ಟಿಗೆ ದೇಣಿಗೆಯನ್ನು ಪಡೆದು ಸರ್ಕಾರದ ಅನುಮತಿ ಪಡೆದುಕೊಂಡು ಊರಿಗೆ ವಿದ್ಯುತ್ ತರಿಸುತ್ತೇನೆಂದು ಹೇಳಿ ತನ್ನ ತೋಟದ ಪಂಪ್ ಸೆಟ್ಟಿನ ಕಡೆಗೆ ವಿದ್ಯುತ್ ಕಂಬಗಳನ್ನು ಹಾಕಿಸಿಕೊಂಡು ತಂತಿಗಳನ್ನು ಎಳೆಸಿದ್ದ. ಆತ ಕೂಲಿ ದುಡ್ಡನ್ನು ಜಾಸ್ತಿ ಮಾಡದಿದ್ದಾಗಲೂ ಕುದಿಯದ ಜನರ ಮನಸ್ಸು ವಿದ್ಯುತ್ತಿನ ವಿಷಯದಲ್ಲಿ ಕ್ರೋದಗೊಂಡರು. ನಂತರದ ಸಮಯದಲ್ಲಿ ಅಲ್ಲಿಗೆ ರಾಚಯ್ಯನ ಪ್ರಯತ್ನವಿಲ್ಲದೆಯೂ ವಿದ್ಯುತ್ ಬಂದ ಮೇಲೆಯೂ ಕೂಡ ರಾಚಯ್ಯನ ಮೇಲಿದ್ದ ಅವರ ಕೋಪ ಕಡಿಮೆಯಾಗಲಿಲ್ಲ. ತಮಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಘಟ್ಟಕ್ಕೆ ಬಂದಿದ್ದ ನಕ್ಸಲರ ಚಲನವಲನವನ್ನು ಪೋಲೀಸರಿಗೆ ತಿಳಿಸುವ ಭಾತ್ಮಿದಾರನಾದ ನಂತರ ಅವರ ಕೋಪ ದ್ವೇಷದ ರೂಪ ಪಡೆಯಿತು. ಒಮ್ಮೆ ಬಂದು ಆತನನ್ನು ಎಚ್ಚರಿಸಿ ಹೋಗಬೇಕೆಂದು ಆ ಊರಿನ ಜನರು ನಮ್ಮ ತಂಡದವರಲ್ಲಿ ಕೇಳಿಕೊಂಡಿದ್ದರು. ಆದಕಾರಣ ನಮ್ಮ ತುಂಗಾ ಸ್ಕ್ವಾಡ್ ಮೆಣಸಿನಹಾಡ್ಯಕ್ಕೆ ಬಂದಿತ್ತು. ಮೆಣಸಿನಹಾಡ್ಯದಲ್ಲಿ ಕಾಲಿಟ್ಟ ತಕ್ಷಣವೇ ರಾಚಯ್ಯನ ಮನೆಯ ಬಳಿಗೆ ಹೋದೆವು. ರಾಚಯ್ಯನ ಬಗೆಗಿನ ವಿವರಗಳೆಲ್ಲವನ್ನೂ ಡಾ.ಅರುಣ್ ದಾರಿ ಸವೆಸುತ್ತಿದ್ದಾಗ ನನಗೆ ಮತ್ತು ಕೀರ್ತನಾಳಿಗೆ ತಿಳಿಸಿದ. ನಾವು ಮೂವರೂ ಸ್ಕ್ವಾಡಿನ ಉಳಿದೆಲ್ಲ ಜನರ ಹಿಂದೆ ನಡೆಯುತ್ತಿದ್ದೆವು.
ರಾಚಯ್ಯನ ಮನೆಯ ಬಳಿ ಹೋದಾಗ ನಾಲ್ವರನ್ನು ಮನೆಯ ಹೊರಗೆ ಕಾವಲಿಗೆ ನಿಲ್ಲಿಸಿ ಮಿಕ್ಕವರು ಒಳಗೆ ಹೋದೆವು. ನಾನು ಮತ್ತು ಕೀರ್ತನ ಪ್ರೇಮ್ ನೊಡಗೂಡಿ ಒಳಗೆ ಹೋದೆವು. ಒಳಗೆ ಕಾಲಿಡುತ್ತಿದ್ದಂತೆಯೇ ರಾಚಯ್ಯನಿಂದ ಪ್ರತಿಭಟನೆ ವ್ಯಕ್ತವಾಯಿತು. “ಯಾರು ನೀವೆಲ್ಲ? ಇಲ್ಲಿಗ್ಯಾಕೆ ಬಂದಿದ್ದೀರಿ? ಪೋಲೀಸರಿಗೆ ನಾನು ವಿಷಯ ತಿಳಿಸುವುದಕ್ಕೆ ಮುಂಚೆ ಇಲ್ಲಿಂದ ಹೊರಟುಹೋಗಿ” ಎಂದು ಕೂಗಿಕೊಂಡ. ಅರುಣ್ ಆತನನ್ನು ಕೆಳಗೆ ತಳ್ಳಿ ಬಂದೂಕಿನ ನಳಿಕೆಯನ್ನು ಅವನ ಎದೆಗೆ ಒತ್ತಿಹಿಡಿದು “ಕೂಗಿದ್ರೆ ಸುಟ್ಟುಬಿಡ್ತೀನಿ. ಸುಮ್ಮನಿರು” ಎಂದು ಗದರಿಸಿದ ನಂತರ ಆತನ ಕೂಗಾಟ ಕಡಿಮೆಯಾಯಿತು. ಮನೆಯಲ್ಲಿ ರಾಚಯ್ಯನ ಪತ್ನಿ, ಆತನ ಮಗ ಮತ್ತು ಮಗಳಿದ್ದರು. ಅವರು ಮೂವರನ್ನು ಒಳಕೋಣೆಗೆ ತಳ್ಳಿ ನಮ್ಮ ತಂಡದ ಇಬ್ಬರು ಅವರ ಬಳಿ ಕಾವಲಿಗೆ ನಿಂತರು. ಕಾ.ಪ್ರೇಮ್ ರಾಚಯ್ಯನ ಬಳಿ ಬಂದರು. ಅರುಣ್ ಬಂದೂಕನ್ನು ಹಿಂದಕ್ಕೆ ತೆಗೆದ. ಕಾಮ್ರೇಡ್ ರಾಚಯ್ಯನನ್ನು ಉದ್ದೇಶಿಸಿ “ಏನಪ್ಪ ರಾಚಯ್ಯ. ನಿನ್ನ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿವೆಯಲ್ಲ?” ತಾನು ಸಂಪೂರ್ಣವಾಗಿ ಇವರ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಕೊಂಚ ಜೋರು ಮಾಡಿದರೆ ಪ್ರಾಣಕ್ಕೂ ಸಂಚಕಾರ ಬರಬಹುದು ಎಂದನ್ನಿಸಿರಬೇಕು ರಾಚಯ್ಯನಿಗೆ. ಮುಖದ ಮೇಲೊಂದು ಬಲವಂತದ ನಗು ತಂದುಕೊಂಡು “ನಾನು ಏನು ಮಾಡಿದೆ....ಅ....ಣ್ಣ....”ಎಂದ.
“ಒಳ್ಳೆ ನಾಟಕ ಮಾಡ್ತೀಯ. ನಾನು ನಿನಗೆ ಅಣ್ಣನಾ? ಇರಲಿ. ಕೂಲಿ ಮಾಡಿದವರಿಗೆ ಸರಿಯಾಗಿ ದುಡ್ಡು ಕೊಡೋದಿಲ್ಲವಂತೆ”
“ಯಾರು ಹೇಳಿದ್ದು. ಎಲ್ಲರಿಗೂ ಒಳ್ಳೇ ಸಂಬಳ ಕೊಡ್ತೀನಲ್ಲ”
“ಸುಳ್ಳು ಹೇಳಬೇಡ”
“ನಾನ್ಯಾಕೆ ಸುಳ್ಳು ಹೇಳಲಿ. ನೀವು ಹೆದರಿಸಿದರೆ ನಾನು ಹೆದರಿಬಿಡ್ತೀನಾ?”
“ಮತ್ತೆ ಸುಳ್ಳು ಹೇಳ್ತೀಯ” ಏರಿದ ದನಿಯಲ್ಲಿ ಹೇಳಿ ಆತನ ಕಪಾಲಕ್ಕೊಂದು ಬಿಗಿದರು ಕಾ.ಪ್ರೇಮ್. ನಂತರ “ನಿನ್ನ ಪ್ರತೀ ವಿಷಯವೂ ಗೊತ್ತು ರಾಚಯ್ಯ. ನೀನು ವಿದ್ಯುತ್ ತರಿಸುವ ವಿಷಯದಲ್ಲಿ ಜನರಿಗೆ ಮಾಡಿದ ಮೋಸವೂ ನಮಗೆ ಗೊತ್ತು. ಇನ್ನು ಮುಂದಾದರೂ ಅನ್ಯಾಯದ ಹಾದಿಬಿಟ್ಟು ಸರಿಯಾದ ದಾರಿಯಲ್ಲಿ ನಡಿ. ನಾಳೆಯಿಂದಲೇ ಜಾರಿಯಾಗುವಂತೆ ನಿನ್ನ ಬಳಿ ಕೂಲಿ ಮಾಡುವವರಿಗೆ ಕೊಡುವ ದುಡ್ಡು ಜಾಸ್ತಿ ಮಾಡು. ಅರ್ಥವಾಯ್ತ ಹೇಳಿದ್ದು”
“ಹ್ಞೂ” ಕಪಾಲಕ್ಕೆ ಬಿದ್ದ ಏಟಿನಿಂದ ಅಳಲಾರಂಭಿಸಿದ್ದ ರಾಚಯ್ಯ ಮೆಲ್ಲಗಿನ ದನಿಯಲ್ಲಿ ಹೇಳಿದ. ನಂತರ ಪ್ರೇಮ್ ನಮಗೆ ರಾಚಯ್ಯನನ್ನು ಹೊರಗೆ ಕರೆತರುವಂತೆ ಹೇಳಿ ಒಳಕೋಣೆಯಲ್ಲಿದ್ದ ರಾಚಯ್ಯನ ಮನೆಯವರನ್ನೂ ಹೊರಗೆ ಕರೆತರುಲು ಹೇಳಿ ಹೊರಗೆ ಹೋದ. ರಾಚಯ್ಯನ ಭುಜವನ್ನಿಡಿದು ಮೇಲೆತ್ತಿ ಹೊರಗೆ ಕರೆದುಕೊಂಡು ಬಂದೆ. ಆತನ ಮನೆಯವರು ನನ್ನ ಹಿಂದೆಯೇ ಬಂದರು. ಎಲ್ಲರ ಮುಖದಲ್ಲೂ ಪ್ರೇತಕಳೆ. ಸುತ್ತಮುತ್ತಲಿನ ಮನೆಯವರು ಬಂದೂಕುಧಾರಿಗಳನ್ನು ಇಣುಕಿಣುಕಿ ನೋಡುತ್ತಿದ್ದರು. ರಾಚಯ್ಯನನ್ನು ಹೊರಗೆ ಕರೆದುಕೊಂಡು ಬಂದ ನಂತರ ಪ್ರೇಮ್ ನನ್ನ ಕೈಯಲ್ಲಿದ್ದ ಸಿಂಗಲ್ ಬ್ಯಾರಲ್ ಬಂದೂಕನ್ನು ತನ್ನ ಕೈಗೆ ತೆಗೆದುಕೊಂಡು ಬಂದೂಕಿನ ಹಿಂಭಾಗದಿಂದ ರಾಚಯ್ಯನ ಬೆನ್ನ ಮೇಲೆ ಹೊಟ್ಟೆಯ ಮೇಲೆ ತಿವಿದು ಹೊಡೆದರು. ರಾಚಯ್ಯ ಕೀಚಲು ದನಿಯಲ್ಲಿ ಕಿರುಚಲಾರಂಭಿಸಿದ. ಆತನ ಮನೆಯವರು ಅಳಲಾರಂಭಿಸಿದರು. ನಂತರ ಪ್ರೇಮ್ ಇಣುಕಿ ನೋಡುತ್ತಿದ್ದ ಜನರನ್ನುದ್ದೇಶಿಸಿ
“ನಮ್ಮ ಚಲನವಲನದ ಬಗ್ಗೆ ಪೋಲೀಸರಿಗೆ ತಿಳಿಸುವ ಪ್ರತಿಯೊಬ್ಬರನ್ನೂ ಶಿಕ್ಷಿಸಬೇಕಾಗುತ್ತದೆ. ಇದು ಕೇವಲ ಶಿಕ್ಷೆಯ ಒಂದು ರೂಪ ಅಷ್ಟೇ” ರಾಚಯ್ಯನೆಡೆಗೆ ತಿರುಗಿ “ಇನ್ನು ಮುಂದೆಯೂ ನೀನು ಪೋಲೀಸರ ಬಾತ್ಮೀದಾರನಾಗಿ ಕೆಲಸ ಮಾಡಿದರೆ ಇವತ್ತು ಬಂದೂಕಿನ ಹಿಂಬದಿಯಿಂದ ಶಿಕ್ಷೆ ಕೊಟ್ಟಿದ್ದೇವೆ. ಮುಂದೆ ಬಂದೂಕಿನ ನಳಿಕೆಯಿಂದ ಕೊಡಬೇಕಾಗುತ್ತದೆ” ಎಂದು ಹೆಚ್ಚರಿಸಿ ಅಲ್ಲಿಂದ ಹೊರಟರು. ನಾವೆಲ್ಲ ಅವರನ್ನು ಹಿಂಬಾಲಿಸಿದೆವು. ನಮಗ್ಯಾರಿಗೂ ತಿಳಿಯದ ವಿಷಯವೊಂದಿತ್ತು. ಬಾತ್ಮೀದಾರನಾಗಿದ್ದ ಆತನಿಗೆ ಪೋಲೀಸರು ಒಂದು ವೈರ್ ಲೆಸ್ ಸೆಟ್ ಕೊಟ್ಟಿದ್ದರು. ಮತ್ತದನ್ನು ಆತ ಮನೆಯಲ್ಲಿ ಅಡಗಿಸಿಟ್ಟಿದ್ದ.
ಅಂದೇ ಆ ಊರಿನಿಂದ ಹೊರಡಬೇಕಾಗಿತ್ತು ನಾವು. ರಾಚಯ್ಯನ ಮನೆಯಿಂದ ಹೊರಡುವಷ್ಟರಲ್ಲಿ ಸಣ್ಣಗೆ ಮಳೆ ಜಿನುಗಲು ಪ್ರಾರಂಭಿಸಿತ್ತು. ಆ ಮಳೆಯಲ್ಲಿ ಪಯಣ ಮಾಡುವುದು ಅಷ್ಟೇನೂ ತ್ರಾಸದಾಯಕವಾಗಿರಲಿಲ್ಲ. ಆದರೆ ನಮ್ಮ ತಂಡದ ಕೀರ್ತನ, ಶಿವಲಿಂಗಯ್ಯ ಮತ್ತು ಕಾ ಪ್ರೇಮ್ ಗೆ ಎರಡು ದಿನದ ಸತತ ಪ್ರಯಾಣದ ಆಯಾಸದಿಂದಲೋ ಶೀತಭರಿತ ವಾತವರಣದ ಕಾರಣದಿಂದಲೋ ನಿನ್ನೆಯಿಂದ ಕೊಂಚ ಜ್ವರ ಬಂದಿತ್ತು. “ಮೊದಲೇ ಆಯಾಸಗೊಂಡಿದ್ದೀರಾ. ಇವತ್ತು ಮಳೆಯಲ್ಲಿ ಪಯಣಿಸುವುದು ಅಷ್ಟೇನೂ ಒಳ್ಳೆಯದಲ್ಲ” ಎಂದು ಡಾ ಅರುಣ್ ಎಚ್ಚರಿಸಿದ. ಮಲೇರಿಯಾ ಜ್ವರ ಆ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದ ಅರುಣ್ ಈ ಮೂವರಿಗೂ ಮಲೇರಿಯಾ ಸೋಂಕೇ ತಗುಲಿರಬೇಕೆಂದು ಅನುಮಾನಿಸಿದ್ದ. ರಾಚಯ್ಯನಂಥ ಪೋಲೀಸು ಬಾತ್ಮಿದಾರ ಆ ಊರಿನಲ್ಲಿದ್ದರೂ ಪ್ರೇಮ್ ಅರುಣ್ ನ ಮಾತಿಗೆ ಸಮ್ಮತಿ ಸೂಚಿಸಿದರು. ರಾಚಯ್ಯ ಇನ್ನು ಮುಂದೆ ಪೋಲೀಸರಿಗೆ ನಮ್ಮ ಚಲನವಲನಗಳನ್ನು ತಿಳಿಸುವುದಿಲ್ಲ ಎಂಬ ನಂಬಿಕೆ ಅವರಿಗೆ ಬಂದಿತ್ತು. ನಮಗೂ ಅದೇ ನಂಬಿಕೆಯಿತ್ತು. ಅಲ್ಲದೆ ಎರಡು ದಿನದ ಪಯಣ ನನ್ನಂಥ ಹೊಸಬರನ್ನು ಜರ್ಜರಿತಗೊಳಿಸಿತ್ತು. ಒಂದು ದಿನದ ವಿಶ್ರಾಂತಿಯನ್ನು ಬೇಡುತ್ತಿತ್ತು ದೇಹ. ಊರಿನ ಹೊರಭಾಗದಲ್ಲಿರುವ ನಕ್ಸಲ್ ಬೆಂಬಲಿಗ ನಾಗಪ್ಪನ ಮನೆಗೆ ಹೊರಟೆವು. ಅಂದಿನರಾತ್ರಿ ಅಲ್ಲೇ ಉಳಿದುಕೊಳ್ಳುವುದೆಂದು ನಿರ್ಧರಿಸಲಾಯಿತು. ಮೂವರ ಜ್ವರವೂ ರಾತ್ರಿಯ ವೇಳೆಗೆ ಹೆಚ್ಚಾಗಿತ್ತು. ಕೀರ್ತನಾಳಂತೂ ಬಹಳವಾಗಿ ಸೊರಗಿದ್ದಳು. “ಇಲ್ಲಿಗೆ ಯಾಕಾದ್ರೂ ಬಂದ್ನೋ ಅನ್ನಿಸುತ್ತಿದೆಯಾ ಕೀರ್ತನ” ಎಂದು ಕೇಳಿದೆ ಅವಳ ಹಣೆಯ ಮೇಲೆ ಒದ್ದೆ ಬಟ್ಟೆಯನ್ನು ಹಾಕುತ್ತ. “ಇಂಥ ಜ್ವರಕ್ಕೆಲ್ಲಾ ಹೆದರುತ್ತೀನೇನೋ ನಾನು” ಆ ಸುಸ್ತಿನಲ್ಲೂ ಮಂದಹಾಸವನ್ನು ಬೀರುತ್ತ ಹೇಳಿದಳು. ಅವಳು ಮಲಗಿದ ನಂತರ ನಾನು ಹೊರಬಂದೆ. ರಾತ್ರಿ ಹತ್ತರಿಂದ ಹನ್ನೆರಡು ಘಂಟೆಯವರೆಗಿನ ಸೆಂಟ್ರಿ ಕೆಲಸ ನನಗೆ ಮತ್ತು ಅರುಣನಿಗಿತ್ತು. ಅರುಣ್ ಮನೆಯ ಹಿಂಭಾಗದಲ್ಲಿದ್ದ; ನಾನು ಮುಂಭಾಗದಲ್ಲಿ. ನಾವು ಮಲಗುವ ಸಮಯಕ್ಕೆ ಸರಿಯಾಗಿ ರಾಚಯ್ಯ ಪೋಲೀಸರಿಗೆ ವೈರ್ ಲೆಸ್ ಮುಖಾಂತರ ನಡೆದ ವಿಷಯಗಳನ್ನು ತಿಳಿಸಿದ್ದ. ನಕ್ಸಲರೆಲ್ಲಾ ಮೆಣಸಿನಹಾಡ್ಯದಲ್ಲೇ ಇದ್ದಾರೆ. ಆದರೆ ಯಾರ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ನಾಳೆ ಬೆಳಿಗ್ಗೆಯೊಳಗೆ ಅದನ್ನೂ ತಿಳಿದುಕೊಂಡು ತಿಳಿಸುತ್ತೀನಿ ಎಂದಿದ್ದ. ನಾವೆಷ್ಟು ಜನ ಇದ್ದೀವಿ, ನಮ್ಮ ಬಳಿ ಎಷ್ಟು ಬಂದೂಕುಗಳಿವೆ ಎಂಬ ಪ್ರತಿ ವಿವರವನ್ನೂ ತಿಳಿಸಿದ್ದ. ಇದ್ಯಾವುದರ ಅರಿವಿಲ್ಲದೆ ನಾವು ನಿದ್ದೆ ಹೋಗಿದ್ದೆವು.
ಬೆಳಗಿನ ಜಾವ ಐದು ಘಂಟೆಗೆ ಪ್ರೇಮ್ ಬಂದು ನಮ್ಮನ್ನು ಎಬ್ಬಿಸಿದರು. ರಾಚಯ್ಯ ಪೋಲೀಸರಿಗೆ ನಮ್ಮಿರುವಿಕೆಯನ್ನು ತಿಳಿಸಿರುವುದು ಬಾತ್ಮೀದಾರನೊಬ್ಬನಿಂದ ಪ್ರೇಮ್ ಗೆ ತಿಳಿದುಹೋಗಿತ್ತು. ಅದನ್ನು ತಿಳಿದ ನಂತರವೂ ಆ ಊರಿನಲ್ಲಿರುವುದು ಕ್ಷೇಮಕರವಲ್ಲ ಅದರಿಂದ ನಾವೀಗಲೇ ಹೊರಡಬೇಕು ಎಂದು ತಿಳಿಸಿದರು. “ರಾಚಯ್ಯನನ್ನು ಮುಗಿಸಿಬಿಡೋದಾ?” ಎಂದು ಕೇಳಿದ ಅರುಣ್.
“ಈಗದಕ್ಕೆ ಸಮಯವಿಲ್ಲ. ಪೋಲೀಸರೊಂದಿಗಿನ ಮುಖಾಮುಖಿಯನ್ನು ತಪ್ಪಿಸಿಕೊಳ್ಳೋಣ. ಅವರು ದೊಡ್ಡ ತಂಡದೊಂದಿಗೇ ಬರುತ್ತಿದ್ದಾರಂತೆ. ಸುಖಾಸುಮ್ಮನೆ ಪ್ರಾಣಹಾನಿಯಾಗೋದು ಒಳ್ಳೆಯದಲ್ಲ” ಎಂದು ಹೇಳಿದರು ಕಾ ಪ್ರೇಮ್. ನಾನು ಒಳಕೋಣೆಗೆ ಹೊದೆ. ಕೀರ್ತನ ಮತ್ತು ಶಿವಲಿಂಗಯ್ಯ ಅಲ್ಲಿರಲಿಲ್ಲ. “ಅವರೆಲ್ಲಿ?” ಎಂದು ಅಲ್ಲೇ ಇದ್ದ ಸರಳಾರನ್ನು ಕೇಳಿದೆ. “ಅವರಿಬ್ಬರಿಗೂ ಜ್ವರ ಸಂಪೂರ್ಣವಾಗಿ ಇಳಿದಿರಲಿಲ್ಲ. ವೇಗವಾಗಿ ಅವರಿಗೆ ನಡೆಯುವುದಿಕ್ಕಾಗುವುದಿಲ್ಲವಲ್ಲ. ಅದಿಕ್ಕೆ ಹದಿನೈದು ನಿಮಿಷದ ಮುಂಚೆಯೇ ಅವರಿಬ್ಬರನ್ನೂ ನಾಲ್ಕು ಜನರ ಜೊತೆ ಹೊರಡಿಸಿದರು. ನಾವು ಅವರನ್ನು ಸೇರಿಕೊಳ್ಳಬೇಕು ಸಾಧ್ಯವಾದಷ್ಟು ಬೇಗ” ಎಂದು ತಿಳಿಸಿದರು. ಆಕೆಯ ಮುಖದಲ್ಲೂ ಗಾಬರಿಯಿತ್ತು. “ಇದೇ ಮೊದಲ ಬಾರಿಗೆ ಪೋಲೀಸರ ಮುಖಾಮುಖಯಾಗುವ ಸಂದರ್ಭ ನಿಮಗೆ ಬಂದಿರುವುದಾ?” ಬ್ಯಾಗೊಂದನ್ನು ಹೆಗಲಿಗೆ ಹಾಕಿಕೊಂಡು ಅಡುಗೆ ಪಾತ್ರೆಗಳನ್ನು ಎತ್ತಿಕೊಳ್ಳುತ್ತಾ ಕೇಳಿದೆ. “ಹೌದು ಲೋಕೇಶ್. ಇದೇ ಮೊದಲು. ಅದಿಕ್ಕೆ ಮನದಲ್ಲೊಂದಿಷ್ಟು ಗಾಬರಿಯಾಗುತ್ತಿದೆ” ಎಂದಳಾಕೆ. ನಾಗಪ್ಪನಿಗೆ ವಿದಾಯ ಹೇಳಿ ಐದು ನಿಮಿಷದಲ್ಲಿ ಅಲ್ಲಿಂದ ಹೊರಟೆವು. ನಾಗಪ್ಪನ ಮನೆಯ ಎದುರಿಗಿನ ರಸ್ತೆ ದಾಟಿದರೆ ಕೊಂಚ ದೂರ ಸಮತಟ್ಟಾದ ಜಾಗವಿತ್ತು. ನಂತರ ಸಿಕ್ಕುವ ಗುಡ್ಡ ಹತ್ತಿಬಿಟ್ಟರೆ ಪೋಲೀಸರಿಂದ ತಪ್ಪಿಸಿಕೊಳ್ಳುವುದು ಸುಲಭವಿತ್ತು. ರಸ್ತೆ ದಾಟುತ್ತಿದ್ದಂತೆ ಪೋಲೀಸರ ಬೂಟುಕಾಲಿನ ಶಬ್ದ ಕೇಳಲಾರಂಭಿಸಿತು. ನಾಗಪ್ಪನ ಮನೆಯ ಹಿಂದೆ ಕೊಂಚ ಫರ್ಲಾಂಗುಗಳ ದೂರದಿಂದ. ಬೂಟು ಶಬ್ದ ಕೇಳಿದರೆ ಬಹಳ ದೊಡ್ಡ ಸಂಖೈಯಲ್ಲಿ ಬಂದಿರಬೇಕು ಎಂದೆನ್ನಿಸಿತು. ಬೂಟು ಶಬ್ದಗಳನ್ನು ಕೇಳಿ ನಮ್ಮೆಲ್ಲರ ಮನದ ಗಾಬರಿ, ಆತಂಕ ಹೆಚ್ಚಾಯಿತು. ವೇಗವಾಗಿ ಗುಡ್ಡವೇರಲಾರಂಭಿಸಿದೆವು. ಗುಡ್ಡವನ್ನು ಏರುವುದು ಹೊಸಬನಾದ ನನಗೆ ಕೊಂಚ ಕಷ್ಟವಾಗಿ ಎಲ್ಲರಿಗಿಂತ ಹಿಂದೆ ಬಿದ್ದೆ. ಜ್ವರದಿಂದಾಗಿ ನಿತ್ರಾಣನಾಗಿದ್ದ ಕಾ.ಪ್ರೇಮ್ ಕೂಡ ಹಿಂದುಳಿದಿದ್ದರು. ನನ್ನ ಮುಂದೆ ಅವರು ನಡೆಯುತ್ತಿದ್ದರು. ಆ ಗುಡ್ಡವನ್ನು ಇಳಿದು ಉಳಿದ ಸಂಗಡಿಗರು ಕಾಡಿನ ಕಡೆಗೆ ಹೊರಟುಹೋಗಿದ್ದರು. ಐದು ಘಂಟೆಯ ಸಮಯವಾಗಿದ್ದರಿಂದ ನಮ್ಮೆಲ್ಲರ ಕೈಯಲ್ಲೂ ಟಾರ್ಚುಗಳಿದ್ದವು. ಬೆಳಕು ಹರಿಯುವುದರೊಳಗಾಗಿ ಸುರಕ್ಷಿತ ತಾಣ ಸೇರಬೇಕಿತ್ತು. ಕತ್ತಲಿನಲ್ಲಿ ಒಮ್ಮೊಮ್ಮೆ ಟಾರ್ಚಿನ ಗುಂಡಿ ಅದುಮುತ್ತ ಹೊರಟಿದ್ದೆವು. ಗುಡ್ಡದ ಇಳಿಜಾರಿನಲ್ಲಿ ಪೋಲೀಸರು ಹೊಂಚಿ ಕುಳಿತಿದ್ದಾರೆಂಬುದು ನಮಗೆ ತಿಳಿಯಲಿಲ್ಲ. 
ಮುಂದುವರೆಯುವುದು ....

No comments:

Post a Comment