Oct 2, 2014

ವಾಡಿ ಜಂಕ್ಷನ್ .... ಭಾಗ 1


wadi junction


Dr Ashok K R
ಕ್ರಾಸಿಂಗ್
“A patient by name Mr Basavaraju aged 22 years”
‘ಒಂದು ಹಂತದವರೆಗೆ ಹೆಸರು, ದುಡ್ಡು ಎಲ್ಲಾ ನೋಡಿದ ಮೇಲೆ ಮನುಷ್ಯ ಹೊಸತೇನನ್ನೋ ಹುಡುಕಬಯಸೋದು ಸಹಜ’
“comes from a middle class family. He is from”
‘ನಿಮಗೆ ಈ ಸಧ್ಯ ದೇವರು ಎಲ್ಲದರಲ್ಲೂ ಯಶಸ್ಸು ಕೊಟ್ಟಿದ್ದಾನೆ”
“village Hanoor of Gundlupet Taluk. He is an agricultuist by occupation”
‘ಈಗ ಮಾಡಿರೋ ಹೆಸರು ಸಾಲದು, ಮತ್ತಷ್ಟು ಹೆಸರು ಮಾಡಬೇಕೆನ್ನಿಸಿದರೆ ದಾನ ಧರ್ಮ ಮಾಡಿ’
“He presents with compaint of swelling in the right groin region from past 20”
‘ಮಠಕ್ಕೆ ಸೇರಿ ಸನ್ಯಾಸಿ ಜೀವನ ಮಾಡಬೇಕೆನ್ನೋದೂ ನಿಮಗೆ ಹೆಸರು ಮಾಡುವ ಒಂದು’
“years and pain in the swelling from past 7 days”
‘ವಿಧಾನ ಅಲ್ವಾ ಡಾಕ್ಟ್ರೇ! ನಿಮಗೆಷ್ಟೇ ಒಳ್ಳೇ ಸರ್ಜನ್ ಎಂಬ ಹೆಸರಿದ್ದರೂ ಅಂತರಂಗದಲ್ಲಿ ನೀವೇನು ಅನ್ನೋದು ನಿಮಗಿಂತ ಚೆನ್ನಾಗಿ ತಿಳಿದಿರೋರು ಬೇರೆಯವರಿರಲಿಕ್ಕಿಲ್ಲ. ನನ್ನ ಧ್ಯಾನದ ಸಮಯ ಈಗ. ನೀವಿನ್ನು....’
“ಮುಂಡಾಮೋಚ್ತು” ತನಗೇ ಎಂಬಂತೆ ಶ್ರವಣ್ ಹೇಳಿಕೊಂಡನಾದರೂ ಎದುರಿಗಿದ್ದ ಹತ್ತು ಜನ ವಿದ್ಯಾರ್ಥಿಗಳಿಗದು ಕೇಳಿಸಿತ್ತು. Case present ಮಾಡುತ್ತಿದ್ದ ವಿದ್ಯಾರ್ಥಿನಿ ಗಾಬರಿಯಾಗಿ “ಸರ್” ಎಂದಳು. ಉಳಿದವರು ಒಬ್ಬರೊಬ್ಬರ ಮುಖ ನೋಡಿದರು. ಹಿಂದೆ ನಿಂತವರು ನಕ್ಕರೇನೋ ಎನ್ನಿಸಿತು ಶ್ರವಂತ್‍ಗೆ.

“Anything wrong with my presentation sir” ಹುಡುಗಿಯೆಡೆಗೆ ನೋಡಿದ ಶ್ರವಂತ್. ಸುಂದರವಾಗಿದ್ದಳು. ಒಂದಷ್ಟು ನುಲೀತಾ ಮಾತನಾಡಿಬಿಟ್ಟರೆ ಎದುರಿಗಿರುವ ‘ಸರ್‍ಗಳು’ ಜೊಲ್ಲು ಸುರಿಸುತ್ತಾ ಹೆಚ್ಚು ಪ್ರಶ್ನೆ ಮಾಡದೆ ಉತ್ತಮ ಅಂಕಗಳನ್ನು ನೀಡುಬಿಡುತ್ತಾರೆಂಬ ಹಮ್ಮು ಈ ಸುಂದರಿಯರಿಗೆ; ನಾನು ಎಕ್ಸಾಮಿನರ್ರಾಗಿದ್ದಾಗ ಮಾಡಿದ್ದೂ ಅದನ್ನೇ ಅಲ್ಲವೇ ಎಂಬ ನೆನಪಾಯಿತು. ಈ ಬಾರಿ Internalsನಲ್ಲಿ ಇವಳಿಗೆ ಅತೀ ಕಡಿಮೆ ಅಂಕ ಕೊಡಬೇಕೆಂದು ನಿರ್ಧರಿಸಿದ. ಹತ್ತು ಜನರ ಬ್ಯಾಚಿನಲ್ಲಿ ಐದು ಮಂದಿ ಹುಡುಗರಿದ್ದರೂ ಒಮ್ಮೆಯೂ ಅವರತ್ತ ನೋಡಿದವನಲ್ಲ. ಅವರೇನಾದರೂ ಉತ್ತರ ಹೇಳಿದರೆ ಅದರಲ್ಲೂ ಒಂದಷ್ಟು ತಪ್ಪು ಹುಡುಕಿ ಬಯ್ಯುತ್ತಿದ್ದ. ಹುಡುಗಿಯರು ತಪ್ಪು ಹೇಳಿದರೂ ಒಮ್ಮೆ ನಕ್ಕು, ಕೈಯಳತೆಯಲ್ಲಿದ್ದರೆ ಬೆನ್ನಿಗೋ ಕೆನ್ನೆಗೋ ನೋವಾಗದಂತೆ ಮೃದುವಾಗಿ ಹೊಡೆದು – ಆ ಸ್ಪರ್ಶದ ಅರ್ಥ ಅವರಿಗರಿವಾಗುವಂತೆ ಮಾಡಿ – ಸರಿ ಉತ್ತರ ತಿಳಿಸುತ್ತಿದ್ದ. ಇವನ ಈ ಜೊಲ್ಲು ಸುರಿಸುವ ಬುದ್ಧಿ ತಿಳಿದ ಹುಡುಗಿಯರೂ ಮೇಲ್ಮೇಲೆ ‘ಶ್ರವಂತ್ ಸರ್’ ‘ಶ್ರವಂತ್ ಸರ್’ ಎಂದಿವನ ಬೆನ್ನ ಹಿಂದೆ ಸುತ್ತುತ್ತಿದ್ದರು, ಪರೀಕ್ಷೆ ಮುಗಿಯುವವರೆಗೆ. ಹುಡುಗರು ನನ್ನ ಬಗ್ಗೆ ಎಷ್ಟೆಲ್ಲಾ ಕೆಟ್ಟದಾಗಿ ಮಾತನಾಡಬಹುದಲ್ವಾ? ಎಂದು ಯೋಚಿಸುತ್ತಿದ್ದಂತೆ “Bullshit” ಎಂದು ತನಗರಿವಿಲ್ಲದಂತಯೇ ನುಡಿದ.
“Why are you scolding me like this Sir?” ಹುಡುಗಿಯ ಕಣ್ಣಂಚಿನಲ್ಲಿ ನೀರಿತ್ತು. ಅದು ನಿಜವಾಗಿಯೂ ಬಂದದ್ದಾ ಅಥವಾ ಅದೂ ಇವರ ನಾಟಕದ ಭಾಗವಾ? ಎಂದಿನಂತಿದ್ದಿದ್ದರೆ ಹುಡುಗಿಯರಷ್ಟೇ ನಗಬಹುದಾದ ಒಂದು ಜೋಕ್ ಹೇಳಿ ತರಗತಿ ಮುಂದುವರಿಸುತ್ತಿದ್ದ.
“Sorry I am not feeling well. I will take this case tomorrow or some other day. Give your attendance” ಎಂದ್ಹೇಳಿ ಅಟೆಂಡೆನ್ಸ್ ತೆಗೆದುಕೊಂಡು ಹೊರಟ. ಬೆನ್ನ ಹಿಂದೆ ಯಾರೋ ನನ್ನನ್ನೇ ಗಮನಿಸುತ್ತಿದ್ದಾರೆಂದೆನಿಸಿ ತಿರುಗಿದ. ಇವರತ್ತಲೇ ನೋಡುತ್ತಿದ್ದ ವಿದ್ಯಾರ್ಥಿಯ ತುಟಿಯಂಚಿನಲ್ಲಿ ನಗುವಿತ್ತು. ಕುಸಿಯುತ್ತಿದ್ದೇನೆನಿಸಿತು ಶ್ರವಂತ್‍ಗೆ.
ಅವನನ್ನು ಹತ್ತಿರ ಕರೆದು ಹೆಸರು ಕೇಳಿದ.
“ಕ್ರಾಂತಿ ಸಂಭವ್ ಸರ್”
“ಸರಿ ಹೋಗು” ಎಂದ್ಹೇಳಿ ಹೊರಟುಬಿಟ್ಟ.
* * *
“I told you know. Presenting complaintನಲ್ಲಿ ಮೊದಲು pain ಬಗ್ಗೆ ಹೇಳಬೇಕು ಅಂತ. ನೀನು ನನ್ನ ಮಾತೇ ಕೇಳ್ಲಿಲ್ಲ”
“ಅವತ್ತು ರಾಜೇಶ್ ಸರ್ ಮೊದಲು swelling ಬಗ್ಗೆ ಹೇಳಿ ಅನ್ನಲಿಲ್ವಾ. ಒಬ್ಬೊಬ್ಬರು ಒಂದೊಂದು ರೀತಿ expect ಮಾಡಿದರೆ ನಾವೇನ್ ಮಾಡೋದಿಕ್ಕಾಗುತ್ತೆ”
“ಅದೇನೋ ಸರಿ. ಆದರೆ ಶ್ರವಂತ್ ಸರ್ ಕೋಪ ಮಾಡ್ಕೊಂಡು ಹೋಗಿಬಿಟ್ಟರಲ್ಲ. Internalsನಲ್ಲಿ ಕಡಿಮೆ ಮಾರ್ಕ್ಸ್ ಕೊಟ್ಟರೆ ಏನು ಮಾಡೋದು?”
“ಅಷ್ಟೆಲ್ಲಾ ಯೋಚನೆ ಮಾಡೋ ಅಗತ್ಯವಿಲ್ಲ. ಶ್ರವಂತ್ ಸರ್ ಬೇಸರ ಮಾಡಿಕೊಂಡಿರೋದಿಕ್ಕೆ ಬೇರೆಯದೇ ಕಾರಣವಿದೆ. ನೀವೇನು ತಲೆಕೆಡಿಸಿಕೊಳ್ಳಬೇಡಿ” ಆ ಬ್ಯಾಚಿನವರ ಜೊತೆ ಕ್ರಾಂತಿ ಸಂಭವ್ ಆಡಿದ ಮೊದಲ ವಾಕ್ಯವದು. ಹದಿನೈದು ದಿನದಿಂದ ಜೊತೆಯಲ್ಲೇ ಇದ್ದನಾದರೂ ‘ಹ್ಞೂ’ ‘ಉಹ್ಞೂ’ವಿನಾಚೆ ಮಾತನಾಡಿರಲಿಲ್ಲ. ಇವನು ಮಾತನಾಡುತ್ತಿರುವುದೇ ಅದ್ಭುತವೆಂಬಂತೆ ನೋಡುತ್ತಿದ್ದವರ ಕಡೆಗೆ ಬರ್ತೀನಿ ಎಂಬಂತೆ ಕೈಸನ್ನೆ ಮಾಡಿ ಹೊರಟ.
ಎದುರಿಗೆ ಸಿಕ್ಕವರಿಗೆ ಪರಿಚಯದ ನಗೆ ನಗುತ್ತಾ ನಮಸ್ಕರಿಸಿದವರಿಗೆ ಪ್ರತಿವಂದಿಸುತ್ತಾ ಕ್ಯಾಂಟೀನಿಗೆ ಬಂದ ಡಾ.ಶ್ರವಂತ್. ತಲೆ ಗೊಂದಲದ ಗೂಡಾಗಿತ್ತು. ಕ್ಯಾಂಟೀನಿನಲ್ಲಿ ವೈದ್ಯರಿಗಿದ್ದ ಪ್ರತ್ಯೇಕ ಕೋಣೆ ಖಾಲಿಯಾಗಿರುವುದನ್ನು ನೋಡಿ ಮನಸ್ಸೊಂದಷ್ಟು ನಿರಾಳವಾಯಿತು.
ಈತ ಕೋಣೆ ಹೊಕ್ಕಿದ್ದನ್ನು ನೋಡಿ ಕ್ಯಾಂಟೀನಿನವ ಟೀ ಕಪ್ಪಿನೊಡನೆ ಕಿಂಗ್ ಸಿಗರೇಟು ತಂದು ಟೇಬಲ್ಲಿನ ಮೇಲೆ ಇಟ್ಟು ‘ನಮಸ್ತೆ ಸರ್’ ಎಂದ.
ಬಿಸಿ ಬಿಸಿ ಟೀ ತೆಗೆದುಕೊಂಡು ಅವನ ಮುಖದ ಮೇಲೆ ಎಸೆಯಬೇಕೆನ್ನಿಸಿತು. ಇವನ್ಯಾರು ನನಗೆ ಏನು ಬೇಕು ಅನ್ನೋದನ್ನ ತಿಳಿದವನ ಹಾಗೆ ನಾನು ಹೇಳದೆಯೇ ತಂದುಬಿಡಲಿಕ್ಕೆ. ಸಿಗರೇಟನ್ನು ಕೈಗೆತ್ತುಕೊಳ್ಳುತ್ತಿದ್ದಂತೆಯೇ ಜೇಬಿನಿಂದ ಬೆಂಕಿಪೊಟ್ಟಣ ತೆಗೆದ. ‘ಕಿಂಗ್ ಬೇಡ. ವಿಲ್ಸ್ ತೆಗೆದುಕೊಂಡು ಬಾ’ ಎಂದ್ಹೇಳೋಣ ಎಂದುಕೊಳ್ಳುವಷ್ಟರಲ್ಲಿ ಮೊಬೈಲ್ ಕಿರುಗುಟ್ಟಿತು. ಹಾಳಾಯ್ತು ಎಂದು ಮೊಬೈಲನ್ನೋ ತನ್ನನ್ನೋ ಕ್ಯಾಂಟೀನಿನವನನ್ನೋ ಮನಸಲ್ಲೇ ಬಯ್ದುಕೊಳ್ಳುತ್ತಾ ಸಿಗರೇಟನ್ನು ತುಟಿಯ ಮಧ್ಯ ಇರಿಸಿ ಕಡ್ಡಿ ಗೀರಿದ. ಜೇಬಿನಿಂದ ಹತ್ತರ ಎರಡು ನೋಟನ್ನು ಆತನ ಕೈಗಿರಿಸಿ ಎಂದಿನಂತೆ ಚಿಲ್ಲರೆ ಇಟ್ಟುಕೋ ಎಂದು ಹೇಳದೆ “ಚಿಲ್ಲರೆ ತೆಗೆದುಕೊಂಡು ಬಾ” ಎಂದ. ಸರಿಯೆಂದು ತಲೆಯಾಡಿಸಿ ಹೋದವನ ಮುಖದಲ್ಲಿ ಬೇಸರವಿತ್ತು. ‘ಬಡ್ಡೀಮಕ್ಳು. ನಮಗಿಂತಾ ನಾವು ಕೊಡೋ ಟಿಪ್ಸಿಗೇ ಮರ್ಯಾದೆ ಕೊಡ್ತಾರೆ’ ಎಂದು ಗೊಣಗುತ್ತಾ ಮೊಬೈಲ್ ತೆರೆದು ಮೆಸೇಜ್ ನೋಡಿದ.
‘ಇವತ್ತು ಸಂಜೆ ಬಿಡುವಾಗಿದ್ದೀನಿ. ಊಟಕ್ಕೆ ಹೊರಗೆ ಹೋಗೋಣ್ವಾ ಚಿನ್ನ’ ರೇಣುಕ ಮೆಸೇಜ್ ಮಾಡಿದ್ದಳು. ಒಂದೊಳ್ಳೆ ಊಟ ತಿಂಗಳಿಗೊಂದಷ್ಟು ದುಬಾರಿ ಬಟ್ಟೆ, ಹುಟ್ಟಿದ ಹಬ್ಬಕ್ಕೋ, ವ್ಯಾಲೆಂಟೈನ್ಸ್ ಡೇಗೋ ಒಂದೆಳೆ ಬಂಗಾರದ ಸರ, ವಾರಕ್ಕೊಮ್ಮೆ ಭರಪೂರ ಸುಖ ಸಿಕ್ಕರೆ ಚಿನ್ನಾನೂ ನಾನೇ ರನ್ನಾನೂ ನಾನೇ ಇವರಿಗೆ. ‘ನಮ್ಮ ತಾಯಿ ಊರಿಗೆ ಹೋಗ್ತಿದ್ದಾರೆ. ಅವರನ್ನು ಬಿಡೋದಿಕ್ಕೆ ಹೋಗಬೇಕು. ಇನ್ನೊಂದಿನ ಹೋಗೋಣ’ ಎಂದು ಮೆಸೇಜ್ ಮಾಡಿದ. ಮೊಬೈಲನ್ನು ಜೇಬಿಗೆ ಹಾಕಬೇಕೆನ್ನಿಸುವಷ್ಟರಲ್ಲಿ ಮತ್ತೆ ಕಿರುಗುಟ್ಟಿತು. ‘ಓಹ್. ಫೈನ್. ಮನೆಯಲ್ಲಿ ಒಬ್ಬನೇ ಇರ್ತೀಯಾ......how romantic........ನಿಮ್ಮ ಮನೆಯಲ್ಲೇ ಕ್ಯಾಂಡಲ್ ಬೆಳಕಿನಲ್ಲಿ ಊಟ ಮಾಡಿ ಮಲಗೋಣ.......’ ಎರಡು ಸ್ಮೈಲಿ ಎರಡು ಮುತ್ತು ಮತ್ತೆರಡು ಸ್ಮೈಲಿಯಿತ್ತು. ಅವಳ ಉತ್ಸಾಹ ಊಟಕ್ಕೋ ಮಲಗೋದಕ್ಕೋ...
Also readಆದರ್ಶವೇ ಬೆನ್ನು ಹತ್ತಿ
‘ಇವತ್ತು ಬೇಡ’ ಎಂದು ಟೈಪ್ ಮಾಡಿದನಾದರೂ ಮನದ ಬೇಸರ ಕಳೆಯುವುದಕ್ಕೆ ದೇಹದಾಯಾಸವಾದರೂ ಸಹಾಯ ಮಾಡುತ್ತೇನೋ ನೋಡೋಣ ಎಂದುಕೊಂಡು ಬರೆದಿದ್ದನ್ನು ಅಳಿಸಿ ‘ಸಂಜೆ ಫೋನ್ ಮಾಡ್ತೀನಿ’ ಎಂದು ಮೆಸೇಜ್ ಕಳುಹಿಸಿದ. ರಾತ್ರಿಯ ಸುಖದ ಬಗ್ಗೆ, ರೇಣುಕಾಳ ಸ್ಪರ್ಶಸುಖದ ಬಗ್ಗೆ ಯೋಚಿಸಲು ಯತ್ನಿಸಿದನಾದರೂ ತಲೆಯಲ್ಲಿ ಅವನ ಮುಖ, ಆ ನಗು, ಅವನ ಕಣ್ಣೋಟವೇ ಬರಲಾರಂಭಿಸಿತ್ತು. ಏನವನ ಹೆಸರು? ಕ್ರಾಂತಿ ಸಂಭವ್! ಇಂಥ ವಿಚಿತ್ರ ಹೆಸರ್ಯಾಕೋ? ಅವನು ನನ್ನನ್ನಲ್ಲ ನನ್ನ ಕಣ್ಣ ಮೂಲಕ ನನ್ನ ಮನವನ್ನು ನೋಡುತ್ತಿರುವವನಂತೆ ಕಂಡಿತು.
ಕ್ಯಾಂಟೀನಿನವ ಚಿಲ್ಲರೆ ತಂದುಕೊಟ್ಟ. ಚಿಲ್ಲರೆಯನ್ನು ಪ್ಯಾಂಟಿನ ಜೇಬಿಗೆ ಹಾಕಿ ಪರ್ಸ್ ತೆಗೆದು ನೋಡಿದ. ಇನ್ನೂ ಎರಡು ಕಾಂಡೋಮ್ ಇತ್ತು. ಇವತ್ತಿಗಿದು ಸಾಕು ಎಂದುಕೊಳ್ಳುತ್ತಾ ಸಿಗರೇಟನ್ನು ಬಿಸುಟಿ ಒಂದೇ ಗುಕ್ಕಿನಲ್ಲಿ ಟೀ ಕುಡಿದ. ಟೀ ಉಪ್ಪುಪ್ಪಾಗಿತ್ತು.
* * *
“He is so manly ಅಲ್ವೇನೇ ರಮ್ಯ” ಶ್ರವಂತ್ ಸರ್‍ನ ಎದುರಿಗೆ ಕಣ್ಣೀರಾಗಿದ್ದ ಹುಡುಗಿ ಸುಮಯ್ಯ ತನ್ನ ಗೆಳತಿಗಷ್ಟೇ ಕೇಳಿಸುವಂತೆ ಹೇಳಿದಳು. ಮಾರನೇ ದಿನದ ಕಾಲೇಜ್ ಡೇಗೆಂದು ತೆಗೆದಿರಿಸಿದ್ದ ನೀಲಿ ಚೂಡಿಗೆ ಹೊಂದುವಂತಹ ನೈಲ್ ಪಾಲೀಶನ್ನು ಹುಡುಕುತ್ತಿದ್ದ ರಮ್ಯ ಇವಳ ಮಾತಿಗೆ ಬೆಚ್ಚಿದಂತೆ ನಟಿಸಿ “ಯಾರು ಶ್ರವಂತ್ ಸರ್ರಾ” ಎಂದು ವ್ಯಂಗ್ಯವಾಗಿ ಕೇಳಿದಳು.
“ಛೀ...ಛೀ.... ಅಲ್ಲಪ್ಪಾ. ನಾನೇಳಿದ್ದು ಆ ರಿಪೀಟರ್ಸ್ ಬ್ಯಾಚಿನ ಹುಡುಗ ಇದ್ದಾನಲ್ಲ ಅವನ ಬಗ್ಗೆ. ಆ ಕುರುಚಲು ಗಡ್ಡ, ಪೊದೆ ಪೊದೆ ಮೀಸೆ, ವಯಸ್ಸಿಗೆ ಮೀರಿದ ಮುಖಭಾವ......ಕ್ರಾಂತಿ ಸಂಭವ್ is so manly ಅಲ್ವೇನೆ” ಹೆಚ್ಚು ಮಾತನಾಡಿಬಿಟ್ಟೆನೇನೋ ಎಂದು ನಾಚಿಕೊಳ್ಳುತ್ತಾ ತಲೆತಗ್ಗಿಸಿದಳು ಸುಮಯ್ಯ.
ನೀಲಿ ಚೂಡಿಯನ್ನು ಹಾಸಿಗೆಯ ಮೇಲೆ ಎಸೆದು ಸುಮಯ್ಯಳ ಬಳಿ ಬಂದು “ಹೀಗಾ ಸಮಾಚಾರ. ನಮ್ಮ ಸುಮಯ್ಯ ಮೇಡಮ್ಮಿಗೆ ಮೂರು ವರ್ಷದಿಂದ ಕಾಲೇಜಿನ ಕಡೆ ಮುಖಾನೇ ಹಾಕದಿರೋ ಕ್ರಾಂತಿ ಸಂಭವ್ ಮೇಲೆ ಮನಸ್ಸಾಗಿದೆ ಅಂತಾಯ್ತು”
“ಮೆಲ್ಲಗೆ ಮಾತನಾಡೆ ಹೊರಗ್ಯಾರಾದ್ರೂ ಕೇಳಿಸಿಕೊಂಡರೆ ಹಾಸ್ಟೆಲ್ಲಿನಲ್ಲೆಲ್ಲಾ ಗುಲ್ಲಾಗುತ್ತೆ”
“ಸರಿ ಸರಿ. ಹೊಗೆಯಾಡೋದಿಕ್ಕೆ ನಿನ್ನ ಬಳಿ ಬೆಂಕಿ ಇದೆ ಅಂತಾಯ್ತು”
“ಹಾಗೇನಿಲ್ಲಪ್ಪಾ. ಜಸ್ಟ್ ಅಪ್ರಿಷಿಯೇಟ್ ಮಾಡಬೇಕು ಅನ್ನಿಸ್ತು ಮಾಡ್ದೆ ಅಷ್ಟೇ. ಅವನ ಹೆಸರು ಎಷ್ಟು ವಿಚಿತ್ರವಾಗಿದೆಯಲ್ಲಾ?”
“ಹೆಸರಷ್ಟೇ ಅಲ್ಲ ಆಸಾಮಿ ಕ್ಯಾರೆಕ್ಟರ್ರೂ ಅಷ್ಟೇ ವಿಚಿತ್ರವಂತೆ”
“ನಿನಗೆ ಹೇಗೆ ಗೊತ್ತೇ?”
“ಅವನು ನನ್ನ ಅಕ್ಕನ ಕ್ಲಾಸ್‍ಮೇಟ್ ಅಲ್ವೇನೆ. ಅಕ್ಕ ಹೇಳ್ತಿದ್ದಳು. ಅವರದೇ ಐದಾರು ಜನರ ಗುಂಪಿತ್ತಂತೆ. ಹುಡ್ಗೀರ ಜೊತೆ ಇರಲಿ ಹುಡುಗರೊಟ್ಟಿಗೂ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಕ್ಲಾಸಿಗೆ ಬಂದರೆ ಬಂದರು ಇಲ್ಲಾಂದ್ರೆ ಇಲ್ಲ. ಕ್ಲಾಸಿನಲ್ಲಿರೋದಕ್ಕಿಂತ ಹೆಚ್ಚಾಗಿ ನಮ್ಮ ಕ್ಯಾಂಟೀನಿನ ಹಿಂದೆ ಒಂದಷ್ಟು ಮರಗಳನ್ನು ಬೆಳೆಸಿದ್ದಾರೆ ನೋಡು ಅಲ್ಲಿ ಕುಳಿತು ಸಿಗರೇಟು ಸುಡುತ್ತಾ ಹರಟುತ್ತಿದ್ದರಂತೆ. ಆ ಮರಗಳೇ ಅವರ ಮಾತನ್ನು ನುಂಗಿಹಾಕುತ್ತಿತ್ತೇನೋ ಅವರಾಡುತ್ತಿದ್ದ ಮಾತು ಹೊರಗಿನವರ್ಯಾರಿಗೂ ಕೇಳಿಸುತ್ತಿರಲಿಲ್ಲವಂತೆ”
“ತುಂಬಾ ಇಂಟರೆಸ್ಟಿಂಗ್ ಆಗಿದೆ ಮುಂದೆ”
“ಮುಂದೆ ಏನು? ಇನ್ನೂ ಹತ್ತು ನಿಮಿಷ ಲೇಟಾದ್ರೆ ಮೆಸ್ಸಿನಲ್ಲಿ ಊಟ ಸಿಗೋದಿಲ್ಲ. ನಡೀ ಊಟಕ್ಕೆ”
* * * * * 

No comments:

Post a Comment