Jan 27, 2018

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದ ಹಾಗೆ ಬೆಕ್ಕು ಎಲ್ಲಿದೆ?

ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ
ರಾಜ್ಯ ರಾಜಕಾರಣದಲ್ಲಿ ಇಂತಹದೊಂದು ಸನ್ನಿವೇಶ ಎದುರಾಗಬಹುದೆಂದು ಜನರಿರಲಿ, ನಮ್ಮ ಯಾವುದೇ ರಾಜಕೀಯ ಪಕ್ಷಗಳಾಗಲಿ ಅದರ ನಾಯಕರುಗಳೇ ಆಗಲಿ ನಿರೀಕ್ಷಿಸಿರಲಿಲ್ಲ. ಎಂಭತ್ತರ ದಶಕದ ನಂತರ ಮೊತ್ತಮೊದಲಬಾರಿಗೆ, ರಾಜ್ಯದ ವಿದಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆ ಮತ್ತು ರಾಜ್ಯ ರೈತರ ಸ್ವಾಭಿಮಾನದ ಪ್ರಶ್ನೆಯೊಂದು ಚುನಾವಣಾ ವಿಷಯವಾಗುವ ಸುವರ್ಣ ಅವಕಾಶವೊಂದು ಎದುರಾಗಿದೆ.

ಹಾಗಂತ ಈ ವಿಷಯಗಳು ಚುನಾವಣೆಯಲ್ಲಿ ಪ್ರಸ್ತಾಪವಾಗಲೇ ಬೇಕೆಂದೇನು ನಮ್ಮ ರಾಜಕೀಯ ಪಕ್ಷಗಳು ಬಯಸುತ್ತಿಲ್ಲ. ಆಕಸ್ಮಿಕವಾಗಿ ಜರುಗಿದ ಹಲವು ವಿದ್ಯಾಮಾನಗಳು ಕನ್ನಡದ ಮತ್ತು ರೈತರ ಸಮಸ್ಯೆಗಳನ್ನು ಹೆಚ್ಚೂ ಕಡಿಮೆ ಚುನಾವಣಾ ಪ್ರಚಾರದ ಕೇಂದ್ರಬಿಂದುವನ್ನಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಲೂ ನಮ್ಮ ರಾಜಕೀಯ ಪಕ್ಷಗಳು ಇವನ್ನು ಚುನಾವಣಾ ಪ್ರಚಾರದಿಂದ ದೂರವಿಡಲು ಪ್ರಯತ್ನಿಸುವುದು ಖಚಿತ. ಹಾಗಾಗಿ ಈಗ ಮುನ್ನೆಲೆಗೆ ಬಂದಿರುವ ಈ ವಿಚಾರಗಳನ್ನು ಚುನಾವಣೆಯ ಮುಖ್ಯ ವಿಚಾರಗಳನ್ನಾಗಿಸಿ ಮತದಾನ ಮಾಡಿಸಬೇಕಿರುವುದು ನಮ್ಮ ಕನ್ನಡಪರ ಸಂಘಟನೆಗಳ ಮತ್ತು ರೈತ ಸಂಘಟನೆಗಳ ಆದ್ಯ ಕರ್ತವ್ಯವಾಗಬೇಕಿದೆ.

ಕಳೆದಮೂರು ವರ್ಷಗಳಿಂದಲೂ ಮಹಾದಾಯಿ ನೀರಿಗಾಗಿ ಉತ್ತರ ಕರ್ನಾಟಕದ ರೈತರು ಸತತವಾಗಿ ಹೋರಾಟ ನಡೆಸುತ್ತಿದ್ದು, ಗೋವಾ ಸರಕಾರದ ಅಸಹಕಾರ ಮತ್ತು ಉದ್ದಟತನದಿಂದ ಈ ನೀರು ಹಂಚಿಕೆಯ ವಿವಾದ ದಿನದಿನಕ್ಕೂ ಹೆಚ್ಚಾಗುತ್ತಲೇ ಹೋಯಿತು. ಕಾಂಗ್ರೆಸ್ ಮತ್ತು ಬಾಜಪ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಹೋಗದೆ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತ ಹೋದವು. ಕಾಂಗ್ರೆಸ್ಸಿನ ಮಾಜಿ ಅದ್ಯಕ್ಷೆ ಎಂದೊ ನೀಡಿದ ಹೇಳಿಕೆಯನ್ನು ಇಟ್ಟುಕೊಂಡು ಬಾಜಪ ಕಾಂಗ್ರೆಸ್ಸನ್ನು ದೂರುತ್ತಿದ್ದರೆ. ಗೋವಾ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಾಜಪಕ್ಕೆ ವಿವಾದ ಬಗೆಹರಿಸುವ ಅಧಿಕಾರ, ಅವಕಾಶ ಇದ್ದರೂ ಬೇಕೆಂತಲೆ ವಿಳಂಬ ಮಾಡುತ್ತಿದೆಯೆಂದು ಕಾಂಗ್ರೆಸ್ ಅರೋಪಿಸುತ್ತಿದೆ.

ಮಹಾದಾಯಿ ಹೋರಾಟ ತೀವ್ರಗೊಂಡ ಸಮಯದಲ್ಲಿ ಅಂದರೆ ಕಳೆದ ನವೆಂಬರ್ ತಿಂಗಳಲ್ಲಿ ಬಾಜಪದ ಯಡಿಯೂರಪ್ಪನವರು ಮಹದಾಯಿ ಹೋರಾಟಗಾರರ ಬಳಿ ಹೋಗಿ ಇನ್ನೊಂದು ತಿಂಗಳಲ್ಲಿ ತಾವು ಗೋವಾ ಸರಕಾರವನ್ನು ಒಪ್ಪಿಸಿ ನೀರು ತರುವುದಾಗಿ ಹೇಳಿಕೆ ನೀಡಿ ಬಂದರು. ನಂತರದಲ್ಲಿ ಮಹಾದಾಯಿ ಸಮಸ್ಯೆಯನ್ನು ತಮ್ಮ ಪಕ್ಷದ ಆಂತರೀಕ ಸಮಸ್ಯೆಯೇನೊ ಎಂಬಂತೆ ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರ ಸಮ್ಮುಖದಲ್ಲಿ ಗೋವಾದ ಮುಖ್ಯಮಂತ್ರಿಗಳಾದ ಶ್ರೀ ಮನೋಹರ್ ಪರಿಕ್ಕರ್ ಅವರ ಜೊತೆ ಸಭೆ ನಡೆಸಿದ್ದರು. ತದನಂತರದಲ್ಲಿ ಶ್ರೀ ಪರಿಕ್ಕರ್ ಅವರು ಕನರ್ಾಟಕಕ್ಕೆ ಮಾನವೀಯ ಆಧಾರದಲ್ಲಿ ನೀರು ನೀಡಲು ತಾವು ಸಿದ್ದವೆಂಬ ಅಡ್ಡಗೋಡೆಯ ಬರಹದ ಪತ್ರವೊಂದನ್ನು ಯಡಿಯೂರಪ್ಪನವರಿಗೆ ಬರೆದರು. ಇದನ್ನು ರಾಜ್ಯದ ಜನತೆಯ ಮುಂದಿಟ್ಟ ಯಡಿಯೂರಪ್ಪನವರು ಇನ್ನೇನು ಗೋವಾ ನೀರು ನೀಡೇಬಿಟ್ಟಿತೇನೊ ಎನ್ನುವಂತೆ ಪ್ರಚಾರ ಗಿಟ್ಟಿಸಿಕೊಳ್ಳಲು ನೋಡಿದರು. ಆದರೆ ಒಂದು ಸರಕಾರದ ಮುಖ್ಯಮಂತ್ರಿ ಇನ್ನೊಂದು ರಾಜ್ಯದ ವಿರೋಧ ಪಕ್ಷದ ನಾಯಕರಿಗೆ ಬರೆಯುವ ಪತ್ರಕ್ಕೆ ಯಾವುದೇ ಸಾಂವಿದಾನಿಕ ಮಹತ್ವವೂ ಇರುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಂಡ ರಾಜ್ಯದ ರೈತರು ಯಡಿಯೂರಪ್ಪನವರ ವಿರುದ್ದವೇ ತಿರುಗಿ ಬಿದ್ದರು. ಇದಾದ ಕೆಲವೇ ದಿನಗಳಲ್ಲಿ ಗೋವಾದ ಜಲಸಂಪನ್ಮೂಲ ಸಚಿವರು ಕರ್ನಾಟಕಕ್ಕೆ ನೀರು ಬಿಡಲು ಸಾದ್ಯವೇ ಇಲ್ಲವೆಂದು ಹೇಳಿಬಿಟ್ಟರು. ಪರಿಕ್ಕರ್ ಸಹ ತಮ್ಮ ನಿಲುವನ್ನು ಬದಲಾಯಿಸಿ ಹೇಳಿಕೆ ನೀಡಿದರು. ಇಷ್ಟರಲ್ಲಿ ಮಹಾದಾಯಿ ರೈತರ ಆಕ್ರೋಶದ ಕಟ್ಟೆ ಒಡೆದಿತ್ತು. ನೀರು ಸಿಗದ ಆಕ್ರೋಶಕ್ಕಿಂತ ಸುಳ್ಳು ಹೇಳಿ ತಮ್ಮ ಹೋರಾಟದ ದಿಕ್ಕು ಬದಲಾಯಿಸಲು ಹೊರಟಿದ್ದ ಬಾಜಪದ ವರ್ತನೆಗೆ ಹೆಚ್ಚು ಕ್ರೋಧಗೊಂಡಿದ್ದರು. ಹೀಗಾಗಿಯೇ ಅವರು ಬೆಂಗಳೂರಿನಬಾಜಪ ಕಚೇರಿಯ ಎದುರು ಧರಣಿ ಕೂರುವ ನಿರ್ದಾರ ತೆಗೆದುಕೊಂಡರು. ನಂತರದಲ್ಲಿ ಗೋವಾದ ನೀರಾವರಿ ಸಚಿವರು ಕನ್ನಡಿಗರನ್ನು ಹರಾಮಿಗಳೆಂದು, ಸುಳ್ಳು ಹೇಳುವುದರಲ್ಲಿ ನಿಸ್ಸೀಮರೆಂದು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಸದರಿ ಸಚಿವರು ಬಾಜಪದ ಮಿತ್ರಪಕ್ಷದವರಾಗಿದ್ದು ಬಾಜಪ ಗೋವಾ ಸರಕಾರದ ಭಾಗವಾಗಿರುವುದರಿಂದ ಸದರಿ ಸಚಿವರ ಹೇಳಿಕೆಯನ್ನು ಕನಿಷ್ಠ ರಾಜ್ಯದ ಬಾಜಪದ ನಾಯಕರುಗಳಾದರೂ ವರಿಷ್ಠರ ಗಮನಕ್ಕೆ ತಂದು ಕ್ಷಮೆ ಯಾಚಿಸುವಂತೆ ಮಾಡಬೇಕಿತ್ತು. ಆದರೆ ರಾಜ್ಯದ ಜನತೆಯ ಬಗೆಗಿನ ಬಾಜಪ ನಾಯಕರ ನಿರ್ಲಕ್ಷ್ಯ ಅದಕ್ಕೆ ಅವಕಾಶ ಕೊಡಲಿಲ್ಲ.

ಇದೇ ವೇಳೆಯಲ್ಲಿ ಮಹಾದಾಯಿ ವಿವಾದದ ಬಗ್ಗೆ ಕೇಂದ್ರದ ಗಮನ ಸೆಳೆಯಲು ಕನರ್ಾಟಕಬಂದ್ ಆಚರಿಸಲು ಕರ್ನಾಟಕದ ಸುಮಾರು ಎರಡು ಸಾವಿರ ಕನ್ನಡ ಸಂಘಟನೆಗಳು ನಿರ್ದರಿಸಿದವು. ಜನವರಿ 25 ನೇ ತಾರೀಖಿಗೆ ಬಂದ್ ದಿನ ನಿಗದಿಗೊಳಿಸಿದ್ದನ್ನು ಕಾಂಗ್ರೆಸ್ಸಿನ ರಾಜಕೀಯದ ತಂತ್ರವೆಂದು( ಕಾಂಗ್ರೆಸ್ಸಿನ ಈ ನಡೆಯನ್ನು ಇಲ್ಲವೆಂದು ಹೇಳಲೂ ಸಾದ್ಯವಿಲ್ಲ) ಹೇಳಿದ ಬಾಜಪ ಮೈಸೂರಿನಲ್ಲಿ ಅಂದೇ ನಡೆಯಬೇಕಿದ್ದ ಅಮಿತ್ ಷಾ ನೇತೃತ್ವದ ಪರಿವರ್ತನಾ ರ್ಯಾಲಿಯನ್ನು ಮುಂದೂಡಿ ಬಂದ್ ಕರೆಗೆ ಸ್ಪಂದಿಸಿದ್ದರೆ ಇದುವರೆಗಿನ ಅದರ ತಪ್ಪು ನಡೆಗಳಿಗೆ ಕ್ಷಮೆಯಾದರು ದೊರೆಯುತ್ತಿತ್ತು. ಆದರೆ ಪೂರ್ವ ನಿರ್ದಾರಿತ ಸಭೆಯನ್ನು ರದ್ದು ಪಡಿಸಲು ಸಾದ್ಯವಿಲ್ಲವೆಂಬ ಸಬೂಬು ನೀಡಿ ಬಂದನ್ನು ವಿರೋಧಿಸಿ ತನ್ನ ಸಮಾವೇಶವನ್ನು ನಡೆಸಿತು. ಇದು ಬಾಜಪ ಕನ್ನಡಿಗರಿಗೆ ಮಾಡಿದ ಮಹಾದ್ರೋಹವೇ ಸರಿ!

ಹಾಗೆ ನೋಡಿದರೆ ಬಾಜಪದ ಕನ್ನಡದ್ರೋಹದ ಕೆಲಸ ಇದೇ ಮೊದಲೇನಲ್ಲ. ಮಟ್ರೋದಲ್ಲಿ ಹಿಂದಿ ಹೇರಿಕೆಯನ್ನು ಕನ್ನಡಿಗರು ವಿರೋಧಿಸಿದಾಗಲೂ ಬಾಜಪದ ಕೆಲವು ನಾಯಕರುಗಳು ಹಿಂದಿ ರಾಷ್ಟ್ರಬಾಷೆ ಅದನ್ನು ವಿರೋಧಿಸುವುದು ದೇಶದ್ರೋಹವೆಂಬಂತೆ ಮಾತಾಡಿ ಕನ್ನಡಿಗರ ಸ್ವಾಬಿಮಾನವನ್ನು ಪ್ರಶ್ನಿಸಿದ್ದರು. ನಂತರದಲ್ಲಿ ನಾಡದ್ವಜವೊಂದನ್ನು ಅಧಿಕೃತಗೊಳಿಸುವ ಮಾತು ಬಂದಾಗಲು ಸಂಸದೀಯ ಪ್ರಜಾಸತ್ತೆಯಲ್ಲಿ ರಾಜ್ಯವೊಂದು ಸ್ವಂತದ್ವಜ ಹೊಂದುವುದು ರಾಷ್ಟ್ರದ್ರೋಹವೆಂದು ಹೇಳಿ ತಮ್ಮ ಕನ್ನಡವಿರೋದಿ ನಿಲುವನ್ನು ಬಹಿರಂಗ ಪಡಿಸಿದ್ದರು. ದರ್ಮವೊಂದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಬಾಜಪದ ಪಾಲಿಗೆ ದೇಶದ್ರೋಹವೆನಿಸುವುದಿಲ್ಲ. ಬದಲಿಗೆ ಕನ್ನಡಿಗರ ಅಸ್ಮಿತೆಯ ಸಂಕೇತವಾದ ಕನ್ನಡ ದ್ವಜದ ವಿಷಯ ಮಾತ್ರ ದೇಶದ್ರೋಹವಾಗಿಬಿಡುವ ಸೋಜಿಗದ ಹಿಂದಿರುವುದು ಅದರ ಸಾಂಸ್ಕೃತಿಕ ರಾಜಕಾರಣದ ಹುನ್ನಾರವಷ್ಟೆ!

ಹೀಗೆ ಈ ನೆಲದ ರೈತರ ಮತ್ತು ಕನ್ನಡ ಬಾಷೆಯ ವಿಚಾರ ಬಂದಾಗೆಲ್ಲ ಅದನ್ನು ವಿರೋಧಿಸುವ ಮತ್ತು ರಾಷ್ಟ್ರೀಯವಾದದ ಮಾತನಾಡುವ ಬಾಜಪದ ವಿರುದ್ದ ಕನ್ನಡಿಗರಿಗೆ ಇರುವ ಅಸಮಾದಾನ ಒಂದೆಡೆಯಾದರೆ, ಮತ್ತೊಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೂಡಾ ಇದಕ್ಕಿಂತ ವಿಭಿನ್ನವಾದ ರಾಜಕೀಯ ಮಾಡುವಲ್ಲಿ ಸೋತಿದೆ ಎನಿಸುತ್ತಿದೆ.

ಇನ್ನು ಈ ರಾಜ್ಯದ ಮೂರನೇ ಪಕ್ಷವಾದ ಜಾತ್ಯಾತೀತ ಜನತಾದಳ ಇವೆರಡೂ ರಾಷ್ಟ್ರೀಯ ಪಕ್ಷಗಳಿಗಿಂತ ತಾನು ಭಿನ್ನವೆಂದು ಜನರಲ್ಲಿ ವಿಶ್ವಾಸ ಹುಟ್ಟಿಸುವಲ್ಲಿ ವಿಫಲವಾಗಿದೆ. ನೆಲಜಲದ ಮಾತು ಬಂದಾಗ ಅತ್ಯುಗ್ರವಾಗಿ ಮಾತನಾಡುವ ಅದರ ನಾಯಕರುಗಳು ರಾಜಕೀಯ ಅಧಿಕಾರದ ಹಂಚಿಕೆಯ ವಿಷಯ ಬಂದಾಗ ಮಾತ್ರ ಎರಡೂ ರಾಷ್ಟ್ರೀಯ ಪಕ್ಷಗಳ ಬಾಲಂಗೋಚಿಯಂತೆ ಕೆಲಸ ಮಾಡುತ್ತದೆ.ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಂದೊಂದು ಪಕ್ಷದ ಜೊತೆಯಲ್ಲಿ ಅಧಿಕಾರ ಹಂಚಿಕೊಳ್ಳುತ್ತ ತನ್ನ ದ್ವಂದ್ವ ನಿಲುವನ್ನು ಸಾಬೀತು ಪಡಿಸುತ್ತಿದೆ.

ಉದಾಹರಣೆಗೆ ಕರ್ನಾಟಕ ಬಂದ್ ನಡೆಯುವ ಮುನ್ನಾದಿನ ನಡೆದ ಮೈಸೂರು ನಗರ ಪಾಲಿಕೆಯಮೆಯರ್ ಚುನಾವಣೆಯಲ್ಲಿ ಅದು ಬಾಜಪದ ಜೊತೆ ಕೈಗೂಡಿಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯನ್ನು ಮೇಯರ್ ಮಾಡುವಲ್ಲಿ ಯಶಸ್ವಿಯಾಗಿದೆ. ನಿಜಕ್ಕೂ ಜನತಾದಳಕ್ಕೆ ರಾಜ್ಯದ ರೈತರ ಬಗ್ಗೆಯಾಗಲಿ, ಕನ್ನಡ ಬಾಷೆಯ ಬಗ್ಗೆಯಾಗಲಿ ಬದ್ದತೆ ಇದ್ದಿದ್ದರೆ ಮೇಯರ್ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದು ಮಹಾದಾಯಿ ಹೋರಾಟದಲ್ಲಿ ಕಾಂಗ್ರೆಸ್ ಮತ್ತು ಬಾಜಪದ ನಿಲುವುಗಳನ್ನು ಸೈದ್ದಾಂತಿಕವಾಗಿ ವಿರೋಧಿಸುವ ಪ್ರಯತ್ನವನ್ನಾದರೂ ಮಾಡುತ್ತಿತ್ತು. ಆದರದು ಹಾಗೆ ಮಾಡದೆ ತನ್ನ ಸ್ವಹಿತಾಸಕ್ತಿಯೇ ತನಗೆ ಮುಖ್ಯವೆಂಬ ಸಂದಶವನ್ನು ಕನ್ನಡಿಗರಿಗೆ ನೀಡಿದೆ

ಹೀಗಾಗಿ ಇವತ್ತು ಬರಲಿರುವ ಚುನಾವಣೆಯ ವೇಳೆಗೆ ಈ ನಾಡಿನ ರೈತರ ಸಮಸ್ಯೆಗಳ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯನ್ನು ರಾಜಕೀಯ ಚಚರ್ೆಯ ವಿಚಾರವನ್ನಾಗಿಸಿ ಕನ್ನಡದ ನೆಲ ಜಲ ಬಾಷೆಗಳ ಬಗ್ಗೆ ಸ್ಪಷ್ಟವಾದ ಜನಪರ ನಿಲುವೊಂದನ್ನು ತೆಗೆದುಕೊಳ್ಳಬಹುದಾದ ಪಕ್ಷವೊಂದಕ್ಕೆ ಮತ ಚಲಾಯಿಸಿ ಕನ್ನಡ ಸರಕಾರವೊಂದನ್ನು ರಚಿಸಿಕೊಳ್ಳುವುದು ನಮ್ಮ ಅನಿವಾರ್ಯವಾಗಬೇಕಿದೆ.

ಈಗಿರುವ ಎರಡೂ ರಾಷ್ಟ್ರೀಯ ಮತ್ತು ಒಂದು ಪ್ರಾದೇಶಿಕ ಪಕ್ಷಗಳನ್ನು ಹೊರತು ಪಡಿಸಿ ಮೂರನೇ ಶಕ್ತಿಯೊಂದಕ್ಕಾಗಿ ಜನಸಾಮಾನ್ಯ ಕಾಯುತ್ತಿದ್ದಾನೆ. ಈ ಕಾಯುವಿಕೆ ಈ ಚುನಾವಣೆಯ ಕಾಲಕ್ಕಂತು ಮುಗಿಯುವಂತೆ ಕಾಣುತ್ತಿಲ್ಲ. ಮುಂದೆ?

ನೋಡೋಣ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರೆಂದು?

ಆದರೆ ಈಗಿನ ಸಮಸ್ಯೆ ಎಂದರೆ ಬೆಕ್ಕು ಎಲ್ಲಿದೆ?

ಕಾಣುತ್ತಲೆ ಇಲ್ಲವಲ್ಲ!

No comments:

Post a Comment