Dec 29, 2019

ಒಂದು ಬೊಗಸೆ ಪ್ರೀತಿ - 46

ಡಾ. ಅಶೋಕ್.‌ ಕೆ. ಆರ್.‌
“ಧರಣಿ….ಏ….ಧರಣಿ” ದೂರದಿಗಂತದಲ್ಲಿ ಕೇಳಿಸುತ್ತಿದ್ದ ಅಮ್ಮನ ದನಿ. ಅಮ್ಮ ನನ್ನಿಂದ ದೂರಾಗುತ್ತಿದ್ದರೋ ನಾ ಅಮ್ಮನಿಂದ ದೂರಾಗುತ್ತಿದ್ದೆನೋ ತಿಳಿಯದೆ ಎಲ್ಲವೂ ಗೊಂದಲಮಯ. ರಾಧ ಎಲ್ಲಿ ಕಾಣಿಸುತ್ತಲೇ ಇಲ್ಲವಲ್ಲ. 

“ಧರಣಿ……ಧರಣಿ” ಅಮ್ಮನ ದನಿ ಇನ್ನಷ್ಟು ಜೋರಾಯಿತು. ಇಲ್ಲ…….ನಾ ಅಮ್ಮನಿಂದ ಅಮ್ಮ ನನ್ನಿಂದ ದೂರಾಗುತ್ತಿಲ್ಲ ಹತ್ತಿರವಾಗುತ್ತಿದ್ದೇವೆಂಬುದರಿವಾಗಿ ಒಂದಷ್ಟು ಸಮಾಧಾನ. ಧರಣಿ ಧರಣಿ….. ಅಮ್ಮನ ಕೂಗು ಮಾತ್ರ ನಿಲ್ಲುತ್ತಲೇ ಇಲ್ಲ. ಇದ್ಯಾಕೆ ಅಮ್ಮ ಹೀಗೆ ಒಂದೇ ಸಮನೆ ಕೂಗುತ್ತಿದ್ದಾರೆ? ಅಪ್ಪನಿಗೇನಾದರೂ ಆಯಿತಾ? ಅಮ್ಮನಿಗೇ ಏನಾದರಾಯಿತಾ? ಅಥವಾ ರಾಧ…… ʼಅಯ್ಯೋ ರಾಧʼ ಎಂದು ಬೆಚ್ಚಿಬಿದ್ದವಳ ಬೆನ್ನ ಮೇಲೊಂದು ಬಲವಾದ ಹೊಡೆತ ಬಿತ್ತು. ʼಅಯ್ಯೋ ಅಮ್ಮʼ ಎಂದು ಕೂಗಿಕೊಳ್ಳುತ್ತಾ ಕಣ್ಣು ತೆರೆದು ಅಗಲಿಸಿ ನೋಡಿದರೆ ಕಂಡಿದ್ದು ನಮ್ಮ ಮನೆಯ ಡೈನಿಂಗ್‌ ಟೇಬಲ್ಲು. ಟೇಬಲ್ಲಿನ ಮೇಲಿದ್ದ ತಟ್ಟೆ, ತಟ್ಟೆಯೊಳಗೆ ಮುಕ್ಕಾಲು ಚಪಾತಿ ಒಂದು ಸೌಟಿನಷ್ಟು ಬೆಂಡೆಕಾಯಿ ಪಲ್ಯ, ನನ್ನ ಕೈಯೊಳಗೆ ಚಪಾತಿಯ ಒಂದು ತುಂಡು, ಎದುರಿಗೆ ನಗಾಡುತ್ತಾ ಕುಳಿತಿದ್ದ ಅಪ್ಪ. 

“ನಿಂಗೇನೇ ಬಂದು ದೊಡ್ರೋಗ. ಊಟ ಮಾಡ್ತಾ ಮಾಡ್ತಾನೇ ನಿದ್ರೆ ಹೋಗಿದ್ದೀಯಲ್ಲ” ಅಮ್ಮನ ನಗೆಮಿಶ್ರಿತ ಮಾತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Dec 22, 2019

ಒಂದು ಬೊಗಸೆ ಪ್ರೀತಿ - 45

ಕನ್ನಡ ಕಾದಂಬರಿ
ಡಾ. ಅಶೋಕ್.‌ ಕೆ. ಆರ್.‌
ಸಾಗರ ಬಂದಿದ್ದಾಗ ರಾಜೀವ ಮನೆಯಲ್ಲಿರಲಿಲ್ಲ. ಅಪ್ಪನೂ ಹೊರಹೋಗಿದ್ದರು. ತಮ್ಮ ಸೋನಿಯಾಳೊಡನೆ ಹೊರಗೋಗಿದ್ದ. ಇದ್ದಿದ್ದು ನಾನು ಅಮ್ಮ ರಾಧ. ಸಾಗರ ಒಳಬಂದಾಗ ಮಗಳು ಮಲಗಿದ್ದಳು. ಸಾಗರನ ಜೊತೆ ಅಮ್ಮ ಎರಡು ನಿಮಿಷಗಳ ಕಾಲ ಕುಶಲೋಪರಿ ಮಾತನಾಡಿ ಕಾಫಿ ಮಾಡಲು ಒಳಗೋದರು. ʼಇರು ಮಗಳನ್ನ ಎತ್ಕೊಂಡ್‌ ಬರ್ತೀನಿʼ ಎಂದಿದ್ದಕ್ಕೆ "ಇರಲಿ ಬಿಡೆ. ಮಲಗಿರಲಿ. ಸುಮ್ನ್ಯಾಕೆ ಏಳಿಸ್ತಿ. ಎದ್ದಾಗ ನೋಡಿದರಾಯಿತಲ್ಲ” ಎಂದ. 

ʼಮತ್ತೆ…ಇನ್ನೇನ್‌ ಸಮಾಚಾರʼ ಎಂದು ಕೇಳಿದ್ದಕ್ಕೆ “ವಿಶೇಷವೇನಿಲ್ಲ” ಎಂದು ತಲೆಯಾಡಿಸಿದ. 

ʼಹುಡುಗಿ ಏನಾದ್ರೂ ನೋಡಿದ್ಯಾʼ 

“ಮ್.‌ ಒಂದೆರಡ್‌ ಫೋಟೋ ತೋರಿಸಿದ್ರು. ಇನ್ನೂ ಹೋಗಿಲ್ಲ ನೋಡೋದಿಕ್ಕೆ. ಹೋಗ್ಬೇಕು” 

ʼಮ್.‌ ಏನ್‌ ಮಾಡ್ಕೊಂಡಿದ್ದಾರೆ ಆ ಹುಡ್ಗೀರುʼ 

“ಏನೋ ಗೊತ್ತಿಲ್ವೇ. ನಾ ಕೇಳೋಕ್‌ ಹೋಗಿಲ್ಲ" 

ʼಅಯ್ಯೋ ನಿನ್ನ…. ವಿಚಾರಿಸಬೇಕಲ್ವೇ…..ʼ ಮಾತು ಮುಗಿಯುವುದಕ್ಕೆ ಮುನ್ನ ನನ್ನೆಡೆಗೆ ತೂರಿ ಬಂದ ಅವನ ತೀಕ್ಷ್ಣ ನೋಟ ಈ ವಿಷಯ ಬಿಟ್ಟು ಬೇರೆ ಮಾತನಾಡು ಎನ್ನುವಂತಿತ್ತು. 

ʼಹೋಗ್ಲಿ ಬಿಡು. ಮತ್ತೆ ಬೇರೆ ಫ್ರೆಂಡ್ಸ್ಯಾರಾದ್ರೂ ಸಿಕ್ಕಿದ್ರಾ ಮೈಸೂರಲ್ಲಿʼ 

“ಇಲ್ವೇ. ಯಾರೂ ಸಿಕ್ಕಿಲ್ಲ. ಎಲ್ರೂ ಬ್ಯುಸಿಯಲ್ವ ಈಗ. ಯಾರೂ ಸಿಗೋದಿಲ್ಲ” 

ಅದೇನು ಅವನ ಗೆಳೆಯರ ಕುರಿತಾಗಿ ಹೇಳಿದನೋ, ನನ್ನ ಬಗ್ಗೆ ಹೇಳಿದನೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ಅಮ್ಮ ಕಾಫಿ ತಂದರು. ಜೊತೆಗೊಂದು ಪ್ಲೇಟಿನಲ್ಲಿ ಮಾರಿ ಬಿಸ್ಕೆಟ್ಟು. ಎರಡು ಬಿಸ್ಕೆಟ್ಟು ತಿಂದು ಕಾಫಿ ಕುಡಿದ. ಅವನು ಕಾಫಿ ಕಪ್ಪು ಮೇಜಿನ ಮೇಲಿಟ್ಟಾಗ ಮಗಳನ್ನು ತರಲು ಮೇಲೆದ್ದೆ. 

“ಮಲಗಿದ್ರೆ ಬಿಡೆ. ಇನ್ನೊಂದ್ಸಲ ಬರ್ತೀನಿ. ಸುಮ್ನೆ ಯಾಕೆ ಎಬ್ಬಿಸ್ತಿ”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಕತ್ತಲು


️ಹರ್ಷಿತ.ಕೆ. ಟಿ 
ಬೆಳಕಿನ ದಾರಿಗೆಂದೂ 
ಅಡ್ಡಗಾಲು ಹಾಕದು 
ಬೆಳಕು ನುಗ್ಗಿಬಂದೊಡನೆ 
ತಲೆಬಾಗಿ ಹಿನ್ನೆಡೆದು ದಾರಿ ಕೊಡುವುದು 
ನುಂಗಿ ತೇಗಿದರೂ ಬೆಳಕು 
ಗಂಟಲಲಿ ಸಿಕ್ಕಿ ಬಿಕ್ಕಳಿಕೆಯಾಗದು 

Dec 16, 2019

ಒಂದು ಬೊಗಸೆ ಪ್ರೀತಿ - 44

ಡಾ. ಅಶೋಕ್.‌ ಕೆ. ಆರ್.‌
ಮಗು ನಿರೀಕ್ಷೆಗಿಂತ ಹೆಚ್ಚು ಬೆಳೆದಿತ್ತು. ಜೊತೆಗೆ ನನ್ನ ಪೆಲ್ವಿಸ್ಸು ಮಾಮೂಲಿಗಿಂತ ಚಿಕ್ಕದಿದ್ದ ಕಾರಣ ನಾರ್ಮಲ್‌ ಡೆಲಿವರಿ ಕಷ್ಟವೆಂದು ತಿಳಿದು ವಾರವಾಗಿತ್ತು. ಇವತ್ತು ರಾತ್ರಿ ಆಸ್ಪತ್ರೆಗೆ ಸೇರುವಂತೆ ಸೂಚಿಸಿದ್ದರು, ನಾಳೆ ಬೆಳಿಗ್ಗೆ ಸಿಸೇರಿಯನ್‌ ಮಾಡುವವರಿದ್ದರು. ದಿನಾ ನೂರಾರು ಸಿಸೇರಿಯನ್‌ ನಡೀತವೆ, ಅಮ್ಮ ಮಕ್ಕಳು ಆರೋಗ್ಯವಾಗೂ ಇರ್ತಾರೆ, ಆದರೂ ದಿಗಿಲು. ಆಪರೇಷನ್‌ ಥಿಯೇಟರ್‌ನಲ್ಲೇ ಹೆಚ್ಚು ಕಡಿಮೆಯಾಗಿ ಸತ್ತು ಹೋದರೆ, ನಾ ಬದುಕಿ ಮಗು ಸತ್ತು ಹೋದರೆ, ಮಗು ಬದುಕಿ ನಾ ಸತ್ತು ಹೋದರೆ…… ಅಪರೂಪದಲ್ಲಪರೂಪದ ಖಾಯಿಲೆ ಕಸಾಲೆಗಳನ್ನು ದಿನನಿತ್ಯದ ಆಸ್ಪತ್ರೆಯ ಒಡನಾಟದಲ್ಲಿ ನೋಡುವುದಕ್ಕೋ ಏನೋ ವಿಧ ವಿಧದ ಯೋಚನೆಗಳು ಮೂಡುತ್ತವೆ. ಎಲ್ಲಾ ಡಾಕ್ಟ್ರುಗಳಿಗೂ ಹಿಂಗೇನಾ? ಎಂಟರ ಸುಮಾರಿಗೆ ಆಸ್ಪತ್ರೆಗೆ ಹೋಗಿ ಸೇರಿಕೊಂಡೆ. ಅಪ್ಪ ಅಮ್ಮ ಜೊತೆಯಲ್ಲಿ ಬಂದಿದ್ದರು. ರಾಜೀವ ಒಂಭತ್ತರ ಸುಮಾರಿಗೆ ಬಂದು ಒಂದರ್ಧ ಘಂಟೆ ಇದ್ದು ಹೊರಟು ಹೋದರು. ಬಾಯಿಮಾತಿಗೂ ನಾನೇ ಇರ್ಲಾ ಇವತ್ತು ರಾತ್ರಿ ಅಂತ ಕೇಳಲಿಲ್ಲ. ಒಂಭತ್ತೂವರೆಯಷ್ಟೊತ್ತಿಗೆ ಅಮ್ಮನಿಗೆ ಗಡದ್ದು ನಿದ್ರೆ. ಅಪ್ಪ ಮನೆಗೆ ಹೋದರು. ದಿಗಿಲಿಗೋ, ಉತ್ಸಾಹಕ್ಕೋ ನನಗೆ ನಿದಿರೆಯೇ ಸುಳಿಯುತ್ತಿಲ್ಲ. ಸಾಗರನ ನೆನಪಾಗಿ ಮೊಬೈಲ್‌ ಕೈಗೆತ್ತಿಕೊಂಡೆ. ಮೆಸೇಜು ವಿನಿಮಯವಾಗಿ ಬಹಳ ದಿನವಾಗಿತ್ತು. ಏನೆಂದು ಮೆಸೇಜಿಸಲಿ? ಮತ್ತಿದು ನನ್ನದೇ ಪುರಾಣ ಹೇಳುವುದಕ್ಕೆ ಮೆಸೇಜ್‌ ಮಾಡ್ತಿರೋದು. ಅವನೇನಾದರೂ ಹೇಳಿದರೆ ಕೇಳುವ ತಾಳ್ಮೆಯಿಲ್ಲದ ನಾನು ನನಗೇನಾದರೂ ಹೇಳಬೇಕೆನ್ನಿಸಿದಾಗ ಅವನಲ್ಲಿ ಕೇಳುವ ತಾಳ್ಮೆಯಿದೆಯೋ ಇಲ್ಲವೋ ಎನ್ನುವುದನ್ನೂ ಯೋಚಿಸದೆ ಮೆಸೇಜು ಮಾಡಿಬಿಡುತ್ತೇನಲ್ಲ. ಅವನೇಳಿದಂತೆ ನಾ ಅವನನ್ನು ಬಳಸಿಕೊಳ್ಳುತ್ತಿದ್ದೀನಾ? ಖಂಡಿತ ಇಲ್ಲ. ಅವನೇಳಿದ್ರಲ್ಲಿದ್ದ ಸತ್ಯವೆಂದರೆ ಮಗುವಿನ ಕಣ್ಣಲ್ಲಿ ಚಿಕ್ಕವಳಾಗಿ ಕಾಣಬಾರದೆಂದು ನಾ ಸಾಗರನಿಂದ ದೂರಾಗುತ್ತಿದ್ದೀನಿ ಅಷ್ಟೇ. ಅದನ್ನು ಬಿಟ್ಟರೆ ಸಾಗರನನ್ನು ದೂರ ತಳ್ಳಲು ಇನ್ಯಾವುದೇ ಸಕಾರಣವಿಲ್ಲ. 

ಇರಲಿ, ಕಿತ್ತಾಟಗಳೆಲ್ಲ ಇರಲಿ. ಈ ಸಮಯದಲ್ಲಿ ಸಾಗರನಿಗೆ ಮೆಸೇಜು ಮಾಡದೇ ಇರುವುದು ನನ್ನಿಂದ ಸಾಧ್ಯವಿಲ್ಲ ಎಂದುಕೊಳ್ಳುತ್ತ ʼಆಸ್ಪತ್ರೆ ಸೇರಿದ್ದೀನಿ ಕಣೋ. ನಾಳೆ ಬೆಳಿಗ್ಗೆ ಆರೂ ಆರೂವರೆಗೆ ಸಿಸೇರಿಯನ್ನಿದೆʼ ಮೆಸೇಜು ಕಳಿಸಿದೆ. ಹತ್ತದಿನೈದು ನಿಮಿಷವಾದರೂ ಅವನಿಂದ ಪ್ರತಿಕ್ರಿಯೆ ಬರಲಿಲ್ಲ. ಮುನಿಸಿನ್ನು ಆರಿಲ್ಲ ಹುಡುಗನಿಗೆ. ಇರಲಿ. ನನ್ನದೂ ತಪ್ಪಿದೆ. ಇನ್ನೇನು ನನಗೂ ನಿದ್ರೆ ಹತ್ತಬೇಕೆನ್ನುವಷ್ಟರಲ್ಲಿ ಅವನಿಂದ ಮೆಸೇಜು ಬಂತು. 

“ಸಾರಿ ಕಣೇ. ಮೊಬೈಲ್‌ ಚಾರ್ಜಿಗಿಟ್ಟಿದ್ದೆ. ಈಗ ನೋಡಿದೆ ಮೆಸೇಜ್ನ. ಏನ್‌ ಫುಲ್‌ ಟೆನ್ಶನ್‌ನಲ್ಲಿದ್ದೀಯ" 

ʼಹುʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Dec 9, 2019

ಒಂದು ಬೊಗಸೆ ಪ್ರೀತಿ - 43

ಡಾ. ಅಶೋಕ್.‌ ಕೆ. ಆರ್.‌
“ಎಷ್ಟೊಂದ್‌ ಬದಲಾಗಿಬಿಟ್ಯೆ” ಎಂದವನ ದನಿಯಲ್ಲಿ ನಿಜಕ್ಕೂ ನೋವಿತ್ತು. ಬದಲಾಗಿಯೇ ಇಲ್ಲ ಎಂದು ಸುಳ್ಳಾಡುವಂತೆಯೂ ಇರಲಿಲ್ಲ. ನನ್ನಲ್ಲಿನ ಬದಲಾವಣೆ ನನ್ನ ಆತ್ಮ ಸಂಗಾತಿಗಲ್ಲದೇ ಇನ್ಯಾರಿಗೆ ತಿಳಿಯಲು ಸಾಧ್ಯ? ಬಯಸಿ ಬಯಸಿ ಬದಲಾಗಿದ್ದೇನಲ್ಲ. ಗೆಟ್‌ ಟುಗೆದರ್‌ನಲ್ಲಿ ಅವನಾಡಿದ ಮಾತುಗಳೇ ಅವನೊಡನೆ ಹರಟುವಾಗ ಮಾತನಾಡುವಾಗ ನೆನಪಿಗೆ ಬರುತ್ತಿತ್ತು. ನಮ್ಮಪ್ಪ ಅಮ್ಮನ ಪ್ರಕಾರ ನಾ ಕೆಟ್ಟ ಹುಡುಗಿ, ಪರಶುವಿನ ಪ್ರಕಾರ ನಾ ಮೋಸ ಮಾಡಿದ ಹುಡುಗಿ, ರಾಜೀವೆಂಗೊ ನನ್ನ ಒಪ್ಪಿ ಮೆಚ್ಚಿ ಮದುವೆಯಾಗಿದ್ದಾರೆ. ನನಗೆ ಹಿಂಗೆ ಸಾಗರನ ಜೊತೆಗೆ ಸಂಬಂಧವಿದೆ ಎಂದು ತಿಳಿದರೆ ಅವರಿಗೂ ನಾ ದೂರದವಳಾಗುತ್ತೇನೆ. ಸಾಗರನ ಹತ್ತಿರವಾಗುವುದಕ್ಕೆ ನಾ ರಾಜೀವನಿಂದ ದೂರಾದರೂ ನಡಿದೀತು…. ನಾಳೆ ಹುಟ್ಟುವ ಮಗುವಿನ ಕಣ್ಣಲ್ಲಾದರೂ ನಾ ರವಷ್ಟು ಒಳ್ಳೆಯವಳಂತೆ ತೋರಬೇಕಲ್ಲವೇ? ನೀ ಸರಿ ಇಲ್ಲ ಅಂತ ಆ ಮಗುವಿನ ಬಾಯಲ್ಲಿ ಕೇಳುವಂತ ದಿನ ಬರಬಾರದಲ್ಲವೇ? ನಿಧಾನಕ್ಕೆ ನಿಧನಿಧಾನಕ್ಕೆ ಸಾಗರನಿಂದ ದೂರಾಗುತ್ತಿದ್ದೆ. ಬಿಡುವಿದ್ದರೂ ಅವನ ಬಹಳಷ್ಟು ಮೆಸೇಜುಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಕೇಳಿದರೆ ಬ್ಯುಸಿ ಕಣೋ ಎಂದುಬಿಡುತ್ತಿದ್ದೆ. ಕೆಲಸ ಮುಗಿಸಿ ಲೈಬ್ರರಿಯಲ್ಲಿ ಒಂದಷ್ಟು ಓದಿ ಮನೆಗೆ ಬಂದರೆ ಅಗಾಧ ಸುಸ್ತು. ಹಸಿವು. ಅಡುಗೆ ಮಾಡಿ ತಿಂದು ಪಾತ್ರೆ ತೊಳೆದು ಮಲಗಿದರೆ ಸಾಕು ಎನ್ನುವಷ್ಟು ಸುಸ್ತು. ಸುಸ್ತು ಕಣೋ ಎಂದ್ಹೇಳಿದಾಗ ಮುನಿಸೆಲ್ಲವನ್ನೂ ಬಿಟ್ಟು ಹೌದೇನೋ ರೆಸ್ಟ್‌ ಮಾಡು ಎಂದನ್ನುತ್ತಿದ್ದ. 

ಕೆಲವೊಮ್ಮೆ ದಿನಗಟ್ಟಲೆ ನನ್ನಿಂದ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಮುನಿಯುತ್ತಿದ್ದ. “ನಿನಗೆ ಬೇಕಿದ್ದಾಗ ಬ್ಯುಸಿ ಇರ್ತಿರಲಿಲ್ಲ. ನಿನಗೆ ನನ್ನ ಅವಶ್ಯಕತೆ ಇದ್ದಾಗ ಸುಸ್ತಿರುತ್ತಿರಲಿಲ್ಲ. ಈಗ ನನ್ನ ಅವಶ್ಯಕತೆ ಅಷ್ಟಾಗಿ ಇಲ್ಲವೇನೋ ಅಲ್ಲವಾ. ಅದಿಕ್ಕೆ ಬ್ಯುಸಿ, ದಿನದ ಇಪ್ಪತ್ತನಾಲ್ಕು ಘಂಟೆಯೂ ಸುಸ್ತು. ಈ ಬ್ಯುಸಿ ಸುಸ್ತಿನ ನಡುವೆ ಫೇಸ್‌ ಬುಕ್ಕಲ್ಲಿ ದಿನಕ್ಕತ್ತು ಪೋಸ್ಟು ಹಾಕಲು ಮಾತ್ರ ಭಯಂಕರ ಪುರುಸೊತ್ತಿರುತ್ತೆ” ಎಂದು ಹಂಗಿಸುತ್ತಿದ್ದ. ಮಗುವಿಗೋಸ್ಕರ ಸೆಕ್ಸಿಗೋಸ್ಕರ ನನ್ನನ್ನು ಬಳಸಿಕೊಂಡಳಿವಳು ಎಂಬ ಭಾವನೆ ಅವನಲ್ಲಿ ನೆಲೆಸಲಾರಂಭಿಸಿತ್ತು. ಮೊದಲಾಗಿದ್ದರೆ ಹಂಗಲ್ವೋ ಹಿಂಗೆ ಎಂದು ಸಮಾಧಾನ ಪಡಿಸುತ್ತಿದ್ದೆ, ಈಗ್ಯಾಕೋ ಸಮಾಧಾನಿಸಿ ಏನಾಗಬೇಕು ಎಂದು ಸುಮ್ಮನಾಗುತ್ತಿದ್ದೆ. ಇದ್ಯಾಕ್‌ ಹಿಂಗ್‌ ಮಾಡ್ದೆ, ಇದ್ಯಾಕ್‌ ಹಂಗ್‌ ಮಾಡ್ದೆ, ನನ್ನನ್ಯಾಕೆ ಇಷ್ಟೊಂದು ಅವಾಯ್ಡ್‌ ಮಾಡ್ತಿದ್ದೀಯ ಅಂತ ಪ್ರಶ್ನೆಗಳ ಸುರಿಮಳೆ ಬರಲಾರಂಭಿಸುತ್ತಿದ್ದಂತೆ ಮೌನದ ಮೊರೆ ಹೋಗಿಬಿಡುತ್ತಿದ್ದೆ. ಅದವನಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿತ್ತು, “ನನ್ನನ್ನು ಬಳಸಿ ಬಿಸಾಡಿದ್ದಕ್ಕೆ ಥ್ಯಾಂಕ್ಸ್‌” ಅಂತೊಂದು ಮೆಸೇಜು ಕಳಿಸಿ ಸುಮ್ಮನಾಗುತ್ತಿದ್ದ. ಒಂದು ದಿನದ ಮಟ್ಟಿಗೆ. ಮತ್ತೆ ಮೆಸೇಜು ಮಾಡುತ್ತಿದ್ದ. ಅಥವಾ ಕೆಲವೊಮ್ಮೆ ನನಗೇ ತುಂಬಾ ಸುಸ್ತಾದಾಗ, ಮನಸ್ಸಲ್ಲಿ ಮಗುವಿನ ಕುರಿತು, ಡೆಲಿವರಿಯ ಕುರಿತು ವಿನಾಕಾರಣ ದಿಗಿಲುಗೊಂಡಾಗ ಅವನಿಗೆ ಮೆಸೇಜಾಕುತ್ತಿದ್ದೆ. ನನ್ನ ಮೇಲಿನ ಅಷ್ಟೂ ಬೇಸರ ಕೋಪ ನುಂಗಿಕೊಂಡವನಂತೆ ಸಮಾಧಾನಿಸುತ್ತಿದ್ದ. ಎರಡು ಮೂರು ತಿಂಗಳಿಂದ ಇದೇ ಪುನರಾವರ್ತನೆ. ಕೆಲವೊಮ್ಮೆ ನನ್ನ ವರ್ತನೆಗೆ ನನಗೇ ಬೇಸರವಾಗುತ್ತಿತ್ತು, ನಿಜಕ್ಕೂ ಇವನನ್ನು ಬಳಸಿಕೊಂಡುಬಿಟ್ಟೆನಾ ಅಂತ ಅನುಮಾನ ಮೂಡುತ್ತಿತ್ತು. ಅದರ ಬಗ್ಗೆ ಹೆಚ್ಚು ಯೋಚಿಸದಂತೆ ಮಾಡಿದ್ದು ಗರ್ಭದೊಳಗೆ ಕೈಕಾಲು ಮೂಡಿಸಿಕೊಂಡು ಆಟವಾಡುತ್ತಿದ್ದ ಮಗು. ಮನೆಯಲ್ಲಿರಲಿ, ಕೆಲಸದಲ್ಲಿರಲಿ ನನ್ನ ಯೋಚನೆಯ ಬಹುಭಾಗವನ್ನು ಆವರಿಸಿಕೊಂಡಿದ್ದು ನನ್ನ ಮಗು. ಒಂದು ರಾತ್ರಿ ಮಲಗಿದ್ದ ಹೊತ್ತಿನಲ್ಲಿ ಹೊಟ್ಟೆಯ ಮೇಲೊಂದು ಬಲವಾದ ಏಟು ಬಿದ್ದಂತಾಯಿತು. ಇದೇನ್‌ ರಾಜೀವ್‌ ಯಾವತ್ತೂ ಹಿಂಗ್‌ ಒದೆಯದವರು ಇವತ್ತಿಂಗೆ ಅನ್ಕೊಂಡು ಅವರತ್ತ ತಿರುಗಿ ನೋಡಿದರೆ ಅವರು ನನ್ನ ಕಡೆಗೆ ಬೆನ್ನು ಮಾಡಿಕೊಂಡು ಮಲಗಿದ್ದಾರೆ, ಗೊರಕೆಯ ಸದ್ದು ಜೋರು ಕೇಳ್ತಿದೆ. ಏನೋ ಕನಸು ಬಿದ್ದಿರಬೇಕು ಎಂದುಕೊಂಡು ಮತ್ತೆ ನಿದ್ರೆಗೆ ಜಾರುವಷ್ಟರಲ್ಲಿ ಮತ್ತೊಂದು ಒದೆತ! ಓ ಇದು ಮಗೂದು ಅಂತ ಗೊತ್ತಾಗಿದ್ದೇ ಖುಷಿ ತಡೆಯಲಾಗಲಿಲ್ಲ. ರಾಜೀವನಿಗೆ ಬಲವಂತದಿಂದ ಎಬ್ಬಿಸಿ ವಿಷಯ ತಿಳಿಸಿದರೆ “ಬೆಳೆಯೋ ಮಗು ಒದೀದೆ ಇನ್ನೇನು? ಅದನ್‌ ಹೇಳೋಕ್‌ ನಿದ್ರೆಯಿಂದ ಎಬ್ಬಿಸಬೇಕಿತ್ತಾ” ಎಂದು ಬಯ್ದು ತಿರುಗಿ ಮಲಗಿದರು. ಸಾಗರನಿಗೆ ಮೆಸೇಜಿಸೋಣವೆಂದು ಫೋನ್‌ ಕೈಗೆತ್ತಿಕೊಂಡು ಟೈಪು ಮಾಡಿ ಸೆಂಡ್‌ ಬಟನ್‌ ಒತ್ತದೆ ಡಿಲೀಟ್‌ ಮಾಡಿ ಮಲಗಿದೆ. ಇವೆಲ್ಲ ಹಿಂಗಿಂಗೇ ನಡೀತದೆ ಅಂತ ಮೆಡಿಕಲ್‌ ಅಲ್ಲಿ ಓದಿದ್ರೂ ಮನದಲ್ಲಿ ಪುಳಕ ಮೂಡದೇ ಇರಲಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Dec 1, 2019

ಒಂದು ಬೊಗಸೆ ಪ್ರೀತಿ - 42

ಡಾ. ಅಶೋಕ್.‌ ಕೆ. ಆರ್.‌
ತೋರಿಸ್ಕೊಂಡು ಮಾತ್ರೆ ನುಂಗಲಾರಂಭಿಸಿದ ಮೇಲೆ ವಾಂತಿ ಹೆಚ್ಚು ಕಡಿಮೆ ನಿಂತೇ ಹೋಯಿತು ಅನ್ನುವಷ್ಟು ಕಡಿಮೆಯಾಯಿತು. ಊಟ ಇನ್ನೂ ಸರಿ ಸೇರುತ್ತಿರಲಿಲ್ಲ, ಆದರೂ ಮುಂಚಿಗಿಂತ ವಾಸಿ. ಸಂಜೆ ಮನೆಗೆ ಬಂದವಳೇ ಸಾಗರನಿಗೆ ಫೋನ್‌ ಮಾಡಿದೆ. 

ʼಎಷ್ಟೊತ್ಗೋ ಬರ್ತಿ ನಾಳೆʼ ನಾಳೆ ಹುಣಸೂರು ರಸ್ತೆಯಲ್ಲಿರೋ ಸೈಲೆಂಟ್‌ ಶೋರ್ಸ್‌ನಲ್ಲಿ ಗೆಟ್‌ ಟುಗೆದರ್ರು. ಎಪ್ಪತ್ತೆಂಭತ್ತು ಜನ ಬರುವವರಿದ್ದರು. ಮೈಸೂರಲ್ಲಿರುವವರು ಸ್ವಲ್ಪ ಚಟುವಟಿಕೆಯಿಂದ ತೊಡಗಿಸಿಕೊಳ್ಳಬೇಕು ಎಂದಿದ್ದರು. ಈ ಸಲ ಬಿಟ್ಟು ಬಿಡ್ರಪ್ಪ ನನ್ನ, ಹುಷಾರಿಲ್ಲ. ಮುಂದಿನ ಸಲ ಪೂರ್ತಿ ನಾನೇ ನೋಡ್ಕೋತೀನಿ ಬೇಕಿದ್ದರೆ ಎಂದು ಅದೂ ಇದೂ ಜವಾಬ್ದಾರಿ ಒಪ್ಪಿಸಲು ಫೋನಾಯಿಸಿದ್ದ ಗೆಳೆಯರಿಗೆ ತಿಳಿಸಿದ್ದ. 

“ನೀ ಎಷ್ಟೊತ್ತಿಗೆ ಬರ್ತಿ ಅಂತೀಯೋ ಅಷ್ಟೊತ್ತಿಗೆ ಬರ್ತೀನಿ” 

ʼನಾ ಏನ್‌ ಹೇಳೋದು. ಹನ್ನೊಂದರಷ್ಟೊತ್ತಿಗೆ ರೆಸಾರ್ಟಿಗೆ ಬರಬೇಕಂತ ಗ್ರೂಪಲ್ಲಿ ಹಾಕಿದ್ದಾರಲ್ಲ. ಅಷ್ಟೊತ್ತಿಗೆ ಬಾ ರೆಸಾರ್ಟಿಗೆʼ ನಗುತ್ತಾ ಹೇಳಿದೆ. 

“ಹೇ ಹೋಗೇ ಗೂಬೆ. ಎಷ್ಟೊತ್ತಿಗೆ ಸಿಗ್ತಿ ಹೇಳು” 

ʼನಾ ರಜೆ ಹಾಕಿದ್ದೀನಿ. ಬೆಳಿಗ್ಗೆ ಮನೆಗೇ ಬಾ. ಇಲ್ಲೇ ತಿಂಡಿ ತಿನ್ಕೊಂಡು ಅದೂ ಇದೂ ಮಾಡ್ಕಂಡು ಜೊತೇಲೇ ಹೋದರಾಯಿತುʼ 

“ಬರ್ತೀನಿ ಮನೆಗೆ ತಿಂಡಿಗೆ. ಜೊತೇಲೆಲ್ಲ ಬರೋಕಾಗಲ್ಲಪ್ಪ, ನನ್‌ ಫ್ರೆಂಡ್ಸು ಕಾಯ್ತಿರ್ತಾರೆ. ಅವರ ಜೊತೆಗೆ ಒಂದಷ್ಟು ಹರಟೆ ಕೊಚ್ಕಂಡು ಹನ್ನೆರಡರಷ್ಟೊತ್ತಿಗೆ ಬರ್ತೀವಿ ರೆಸಾರ್ಟಿಗೆ” 

ʼಓ. ಹಂಗೆ. ಸರಿ ಬಾ ಎಂಟೂವರೆ ಒಂಭತ್ತರಷ್ಟೊತ್ತಿಗೆʼ 

“ರಾಜೀವ್‌ ಇರ್ತಾರಾ?"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.