Oct 24, 2020

ಒಂದು ಬೊಗಸೆ ಪ್ರೀತಿ - 85 - ಕೊನೆಯ ಅಧ್ಯಾಯ.

ಡಾ. ಅಶೋಕ್.‌ ಕೆ. ಆರ್.
ರಾಜೀವ್‌ಗೆ ಡೈವೋರ್ಸ್‌ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್‌ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್‌ ಹತ್ರ ಹೊಸ ಮಾಲ್‌ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್‌ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು. 

ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್‌ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ. 

ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್‌ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ. 

ಕೊನೇಪಕ್ಷ ಅಷ್ಟೆಲ್ಲ ವೈದ್ಯರು ನನ್ನನ್ನು ಮದುವೆಯಾಗುವುದಕ್ಕೆ ತಯಾರಿದ್ದರಲ್ಲ... ಅವರಲ್ಲೇ ಒಬ್ಬರನ್ನು ಮದುವೆಯಾಗಿದ್ದರೂ ಈ ಕ್ಷೋಭೆ ಇರುತ್ತಿರಲಿಲ್ಲವಲ್ಲ. ಯಾಕೆ ನಾ ರಾಜೀವನನ್ನೇ ಆಯ್ಕೆ ಮಾಡಿಕೊಂಡೆ? ಸಾಗರ ಹೇಳುವಂತೆ ʻನನಗೆ ಹುಡುಗನೊಬ್ಬನಿಗೆ ಬಾಳು ಕೊಡುವ, ಕೈ ಹಿಡಿದು ಮೇಲೆತ್ತುವ ಚಟವಿತ್ತೆ? ರಾಜೀವ ನನಗೆ ಹಿಂದೊಮ್ಮೆ ಪ್ರಪೋಸ್‌ ಮಾಡಿದ್ದರು, ಜೊತೆಗೆ ಸಿರಿವಂತ ಕುಟುಂಬ ಅನ್ನುವುದು ಕೂಡ ಕಾರಣವಾಗಿತ್ತಾ? ಅವರ ಮನೆಯ ಸಿರಿತನದ ನೆರಳೂ ನಮ್ಮ ಮೇಲೆ ಬೀಳಲಿಲ್ಲವಲ್ಲ! ಕೆಲವೊಂದು ನಿರ್ಧಾರಗಳನ್ನು ಯಾಕೆ ಮಾಡಲಿಲ್ಲ ಅನ್ನುವುದಕ್ಕೆ ಉತ್ತರ ಸಿಗುವುದು ಎಷ್ಟು ಕಷ್ಟವೋ ಇನ್ನು ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದಾದರೂ ಯಾಕೆ ಅನ್ನುವುದಕ್ಕೆ ಉತ್ತರ ಹುಡುಕುವುದು ಅದಕ್ಕಿಂತ ಪ್ರಯಾಸಕರ ಕೆಲಸ. ಪುರುಷೋತ್ತಮ ಸ್ನೇಹಿತರು ಯಾವಾಗಲೂ ʻನಿನ್ನುಡುಗಿ ಯಾರಾದ್ರೂ ಡಾಕ್ಟ್ರು ಸಿಕ್ತಿದ್ದ ಹಾಗೆ ನಿನ್ನ ಬಿಟ್ಟು ಹೋಗದಿದ್ದರೆ ಕೇಳುʼ ಎಂದು ಪದೇ ಪದೇ ಹೇಳುತ್ತಿದ್ದರಂತೆ. ಅದೇ ಅವನಲ್ಲಿದ್ದ ಪೊಸೆಸಿವ್‌ನೆಸ್‌ ಅನ್ನು ಕಂಡಾಪಟ್ಟೆ ಹೆಚ್ಚಿಸಿದ್ದು. ಆ ಕಾರಣಕ್ಕಾಗಿಯೇ ನಾ ಮದುವೆಯಾಗಲೂ ಪುರುಷೋತ್ತಮನಂಗೆ ಒಂದು ಡಿಗ್ರಿ ಮಾಡಿಕೊಂಡವನನ್ನು ಆಯ್ದುಕೊಂಡೆನೆ ಹೊರತು ಎಂಡಿ ಎಂಎಸ್‌ ಎಲ್ಲಾ ಮಾಡಿರುವ ವೈದ್ಯನನ್ನು ವರಿಸಲಿಲ್ಲ. ಮೊದಮೊದಲಿಗೆ, ಮೊದಮೊದಲಿಗಷ್ಟೇ ಯಾಕೆ ತೀರ ಮಗಳು ಹುಟ್ಟುವುದಕ್ಕು ಮುಂಚಿನವರೆಗೂ ರಾಜೀವನೆಡೆಗೆ ನನಗೆ ಆವಾಗವಾಗ ಒಂದಷ್ಟು ಮುನಿಸು ಇರುತ್ತಿತ್ತೇ ಹೊರತು ಅದು ದ್ವೇಷವಾಗಿಯಾಗಲೀ ಸುದೀರ್ಘ ಕಾಲದ ಕೋಪವಾಗಿಯಾಗಲೀ ಪರಿವರ್ತಿತವಾಗಿರಲಿಲ್ಲ. ಅವರಲ್ಲಿದ್ದ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಅಷ್ಟೇ ನಮ್ಮ ನಡುವಿನ ಮುನಿಸಿಗೆ ಕಾರಣವಾಗಿತ್ತಲ್ಲವೇ? ಆ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಕೂಡ ಅವರು ಹೆಚ್ಚು ದುಡೀತಿಲ್ಲ, ನಾ ಅವರಿಗಿಂತ ಹೆಚ್ಚು ದುಡೀತಿದ್ದೀನಿ ಅನ್ನೋ ಕಾರಣಕ್ಕೇ ಹುಟ್ಟಿಕೊಂಡಿದ್ದು. ಕೊನೆಗೆ ನಾ ಡಾಕ್ಟರ್ ಆಗಿದ್ದೇ ತಪ್ಪಾಗಿ ಹೋಯಿತೇನೋ ಅನ್ನುವಂತಾಯಿತಲ್ಲ! ಅದೇನೇ ಇದ್ದರೂ ಇನ್ನೊಂದು ಎಂಟತ್ತು ತಿಂಗಳು ಇಲ್ಲಿ ಕೆಲಸ ಮಾಡಿ ಬಾಂಡ್ ಮುಗಿಸಿಕೊಂಡು ಬೆಂಗಳೂರಿಗೆ ಹೋಗಿಬಿಟ್ಟಿದ್ದರೆ ಅವರ ಇನ್ಫೀರಿಯಾರಿಟಿ ಕಾಂಪ್ಲೆಕ್ಸು, ಬೆಂಗಳೂರಿಗೆ ಹೋಗಬೇಕು, ಇಲ್ಲೇನಿದೆ ಮೈಸೂರಿನಲ್ಲಿ ಅನ್ನೋ ಅವರ ಅಸಹನೆಯಾದರೂ ಇಲ್ಲವಾಗುತ್ತಿತ್ತು. ಜಗಳಕ್ಕೆ ಹೊಸ ಕಾರಣಗಳು ಹುಟ್ಟಿಕೊಂಡು ಬದುಕನ್ನು ಇನ್ನೊಂದಷ್ಟು ಸೊಗಸುಗೊಳಿಸುತ್ತಿದ್ದವು. ನಿಜಕ್ಕೂ ನನ್ನ ರಾಮ್ ಪ್ರಸಾದ್ ಮಧ್ಯೆ ಸಂಬಂಧ ಇದೆಯೆಂದು ನಂಬಿದರೋ ಅಥವಾ ನನ್ನನ್ನು ದೂರ ಮಾಡಲು ಅದೊಂದು ಅನುಮಾನ ಅವರಿಗೆ ನೆಪವಾಗಿಬಿಟ್ಟಿತಾ? ಅಥವಾ ಇವೆಲ್ಲವೂ ಅವರಿಗೆ ನನ್ನನ್ನು, ಅವರಿಗಿಂತ ಹೆಚ್ಚು ದುಡಿಯುತ್ತಿದ್ದ ನನ್ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿರುವ ದಾರಿಯೆಂದು ತೋರಿತೋ? ಅವರ ಮನೆಯವರಿಂದ ಒಂದಷ್ಟು ವರುಷ ದೂರಾಗಿದ್ದವರು ನಂತರ ಅದ್ಯಾವ ಮಾಯದಲ್ಲಿಯೋ ಹತ್ತಿರವಾಗಿಬಿಟ್ಟಿದ್ದರು. ರಾಜೀವ ಈ ರೀತಿ ಆಡೋದಿಕ್ಕೆ ಅವರ ಮನೆಯವರೂ ಕಾರಣವೆಂದರೆ ತಪ್ಪಾಗಲಾರದೇನೋ? ಇವರಿಂಗಾಗಲು ಮತ್ತೊಂದು ದೊಡ್ಡ ಕಾರಣ ಸೋನಿಯಾ. ತಮಾಷೆಯಂದರೆ ಶಶಿ ಸೋನಿಯಾಳ ಮದುವೆ ಸಾಧ್ಯವಾಗಿದ್ದೇ ನನ್ನ ರಾಜೀವನ ಕಾರಣದಿಂದ. ಈಗ ನಮ್ಮ ಮದುವೆ ಮುರಿದುಹೋಗುವುದಕ್ಕೆ ಅದೇ ಸೋನಿಯಾ ಕಾರಣಳಾಗಿಬಿಟ್ಟಳು. ಅವರಿವರೆಡೆಗೆ ಬೆರಳು ತೋರುವುದು ಎಷ್ಟು ಸುಲಭದ ಸಂಗತಿ. ಜನ ಸಾವಿರ ಮಾತಾಡ್ತಾರೆ, ಅದರಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು ಎನ್ನುವುದನ್ನು ವಿಮರ್ಶಿಸುವ ಬುದ್ಧಿಯಾದರೂ ರಾಜೀವನಿಗಿರಬೇಕಿತ್ತಲ್ಲ? 

ಬಿಸಿಲು ನೆತ್ತಿ ಸುಡಲಾರಂಭಿಸಿತ್ತು. ಎದ್ದು ದೇವಸ್ಥಾನದ ಸುತ್ತೊಂದು ರೌಂಡು ಹೊಡೆದು ಅಲ್ಲೇ ಇದ್ದ ನಂದಿನಿ ಬೂತಿನಲ್ಲೊಂದು ಪಿಸ್ತಾ ಫ್ಲೇವರ್ಡ್ ಹಾಲು ತೆಗೆದುಕೊಂಡು ಕುಡಿದು ಗಾಡಿ ಹತ್ತಿದೆ. ನಂದಿ ಹತ್ತಿರ ಹೋದರೆ ನೆರಳಿರುತ್ತೆ ಸ್ವಲ್ಪ ಅನ್ನಿಸಿತು. ನಂದಿವರೆಗೆ ಬಂದವಳಿಗೆ ಅಲ್ಲಿಂದ ನಂಜನಗೂಡು ಕಡೆಗೊಂದು ರಸ್ತೆ ಇರುವುದು ನೆನಪಾಗಿ ಆ ರಸ್ತೆಯಲ್ಲಿ ಬೆಟ್ಟದಿಂದಿಳಿದೆ. ಇನ್ನೇನು ಇಪ್ಪತ್ತು ನಿಮಿಷ ನಂಜನಗೂಡಿಗೆ, ಎಷ್ಟೋ ವರುಷಗಳೇ ಆಗಿ ಹೋದವಲ್ಲ ನಂಜನಗೂಡಿಗೆ ಹೋಗಿ ಎಂದುಕೊಳ್ಳುತ್ತಿರುವಾಗಲೇ ಕಪಿಲೆ ಎದುರಾದಳು. ಗಾಡಿ ಅಲ್ಲೇ ಒಂದೆಡೆ ನಿಲ್ಲಿಸಿ ಮೆಟ್ಟಲಿಳಿದು ಕೊನೆಯ ಮೆಟ್ಟಿಲ ಮೇಲೆ ಕುಳಿತು ಕಾಲನ್ನು ನದಿಗಿಳಿಬಿಟ್ಟೆ. ನೀರು ತಣ್ಣಗಿತ್ತು. ಯಾವುದೋ ಆಹಾರವೇನೋ ಅಂದುಕೊಂಡು ಮುತ್ತಿದ ನಾಲ್ಕೈದು ಮೀನುಗಳು ನಿರಾಸೆಯಿಂದ ದೂರವಾದವು. ಹಿಂಗೇ ಈ ನದಿಯೊಳಗೆ ನಡೆದುಬಿಟ್ಟರೆ? ಸುತ್ತಮುತ್ತ ಒಂದಷ್ಟು ಜನರಿದ್ದಾರೆ, ದೇಗುಲಕ್ಕೆ ಹೋಗುವ ಮುಂಚೆ ಬಂದವರು, ದೇಗುಲಕ್ಕೆ ಹೋಗಿ ಇತ್ತ ಬಂದವರು. ನಡೆದುಹೋದರೆ ಸ್ನಾನ ಮಾಡುವುದಕ್ಕೆ ಹೋಗುತ್ತಿದ್ದಾಳೆ ಎಂದುಕೊಳ್ಳುತ್ತಾರೆ. ತೀರ ಸಾಯೋದಿಕ್ಕೇ ಹೋಗಿದ್ದಾಳೆ ಅಂದುಕೊಳ್ಳುವಷ್ಟರಲ್ಲಿ ಪ್ರಾಣ ಹೋಗಿಬಿಟ್ಟಿರುತ್ತೆ! ಅಲ್ಲಿಗೆ ಇರೋ ಸಮಸ್ಯೆಗಳೆಲ್ಲ ನನ್ನೊಟ್ಟಿಗೇ ಸತ್ತು ಹೋಗುತ್ತವೆ; ಸಮಸ್ಯೆಗಳು ಸತ್ತು ಹೋಗುತ್ತವೆ, ನನ್ನ ಲೆಕ್ಕಕ್ಕೆ. ಉಳಿದವರ ಲೆಕ್ಕಕ್ಕೆ ಹೊಸ ಸಮಸ್ಯೆಗಳು ಪ್ರಾರಂಭವಾಗುತ್ತವೆ. ರಾಧಳನ್ನು ಅವರಪ್ಪನ ಮನೆಯವರು ಕರೆದುಕೊಂಡು ಹೋಗಬಹುದು. ಅಮ್ಮ ನನ್ನನ್ನು ನಡುಮಧ್ಯೆದಲ್ಲಿ ಬಿಟ್ಟು ಹೊರಟು ಬಿಟ್ಟಳು ಅನ್ನೋ ಭಾವನೆ ಅವಳಲ್ಲಿ ತುಂಬಿ ದೊಡ್ಡದಾಗಿ ಜೀವನ ಪೂರ್ತಿ ನನ್ನ ಮೇಲೆ ದ್ವೇಷ ಬೆಳೆಸಿಕೊಳ್ಳಬಹುದಾಕೆ. ಜನರ ಮೇಲಿನ ನಂಬುಗೆಯೇ ಅವಳಿಗೆ ಹೊರಟುಹೋಗಬಹುದು. ಅಥವಾ ಅವರಪ್ಪನ ಮನೆಯವರು ಈ ಪಾಪದ ಪಿಂಡ ನಮಗ್ಯಾಕೆ ಅಂದುಕೊಂಡು ರಾಧಳನ್ನು ತಿರಸ್ಕರಿಸಬಹುದು. ನಮ್ಮಪ್ಪ ಅಮ್ಮನಿಗೇ ಅವಳನ್ನು ನೋಡಿಕೊಳ್ಳುವ ಅನಿವಾರ್ಯತೆ ಮೂಡಬಹುದು. ಅವರೇನೋ ಇನ್ನೂ ಗಟ್ಟಿಮುಟ್ಟಾಗಿದ್ದಾರೆ, ಅಂದ್ರೂ ಎಷ್ಟು ವರ್ಷ.... ಅಪ್ಪಿತಪ್ಪಿ ಮಧ್ಯೆ ಅವರಿಗೆ ಏನಾದರೂ ಆದರೆ... ಶಶಿ ಏನೋ ನೋಡಬಹುದು, ಸೋನಿಯಾ? ಥೂ.... ಥೂ.... ಇಷ್ಟು ಪ್ರಶಾಂತವಾಗಿರುವ ನದಿ ತೀರದಲ್ಯಾಕೆ ಇಂತಹ ಬೇಡದ ಯೋಚನೆಗಳು ಬರ್ತೀವೆ? 

ʻಯು ಡಿಸರ್ವ್ ಎ ಬೆಟರ್ ಲೈಫ್ ದ್ಯಾನ್ ಡೆತ್ ಧರು' 

ಯಾವ ಆಲೋಚನೆಗಳಿಗೂ ಚರ್ಚಿಸಲು ಅವಕಾಶ ಕೊಡದೆ ನದಿಯನ್ನೇ ಗಮನಿಸುತ್ತಾ ಕುಳಿತುಕೊಂಡೆ. ಆಲೋಚನೆಗಳು ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೊರಟು ಹೋಗ್ತವಾ? ಅಲೆಅಲೆಯಾಗಿ ಬರುತ್ತಿದ್ದವು. ಧೃಡ ದಂಡೆಯಂತೆ ಅಲೆಗಳನ್ನು ವಾಪಸ್ಸು ನೂಕುತ್ತಿದ್ದೆ. ನದಿಯ ಹರಿವನ್ನೇ ಗಮನಿಸುತ್ತಾ ಕುಳಿತೆ. ಅಲ್ಯಾರೋ ಹೂವು ಬಿಸುಟುತ್ತಿದ್ದಾರೆ, ಇನ್ಯಾರೋ ತಂದ ಹರಕೆಯ ಬಟ್ಟೆಯನ್ನೇ ಎಸೆಯುತ್ತಿದ್ದಾರೆ, ಅಲ್ಲೊಂದಿಬ್ಬರು ಮಕ್ಕಳು ಟಿಶ್ಯೂ ಪೇಪರನ್ನೇ ಬಳಸಿ ದೋಣಿ ಮಾಡಿ ನದಿಗೆ ಬಿಡುತ್ತಿದ್ದಾರೆ, ಅಗೋ ಆ ದಡದಲ್ಯಾರೋ ಮೂವರು ಹೆಣ್ಣುಮಕ್ಕಳು ಬಟ್ಟೆ ಒಗೆಯುತ್ತಿದ್ದಾರೆ. ಬಟ್ಟೆಯಿಂದ ಜಾರಿದ ಕೊಳೆ, ಸೋಪು ನೀರು ನಿಧಾನಕ್ಕೆ ನದಿಯಲ್ಲೊಂದಾಗುತ್ತಿದೆ. ಅತ್ತ ದಡದಿಂದ ಇತ್ತ ದಡಕ್ಕೆ ಬರುತ್ತಿದ್ದ ದೋಣಿಯಲ್ಲಿದ್ದವರೊಬ್ಬರು ಖಾಲಿಯಾದ ಚಿಪ್ಸ್ ಕವರನ್ನು ನದಿಗೆ ಎಸೆಯುತ್ತಿದ್ದಾರೆ, ಅಲ್ಲೆಲ್ಲೋ ಹಿಂದೆ ಬಿದ್ದ ಮರದ ಕೊಂಬೆಯೊಂದು ಹರಿದುಕೊಂಡು ನಂಜನಗೂಡು ದಾಟಿ ಹೋಗಲು ನದಿ ಸಹಕರಿಸುತ್ತಿದೆ. ಯಾರೋ ಏನೋ ಬಿಸುಟಿದರು ಎಂದು ಬೇಸರ ಪಟ್ಟು ನದಿ ಹರಿಯುವುದನ್ನು ನಿಲ್ಲಿಸುವುದಿಲ್ಲ. ನದಿಯ ಕೆಲಸ ಹರಿಯುವುದು, ಅದು ಹರಿಯಬೇಕಷ್ಟೇ. 

ಹೊಟ್ಟೆ ಚುರುಗುಟ್ಟಿತು. ಸಮಯ ನೋಡಿದರೆ ಆಗಲೇ ನಾಲ್ಕರ ಹತ್ತಿರವಾಗುತ್ತಿತ್ತು. ಅರೆರೆ ಇಷ್ಟೊಂದು ಸಮಯ ಕಳೆದುಬಿಟ್ಟೆನಲ್ಲ ಎಂದುಕೊಂಡು ಅಲ್ಲೇ ಬಳಿಯಿದ್ದ ಹೋಟೆಲ್ಲಿನ ಬಳಿಗೆ ನಡೆದು ಸಾಗಿದೆ. ತಿಂಡಿ ತಿನ್ನುವಾಗ ಊಟಿಯ ಬೋರ್ಡು ಕಾಣಿಸಿತು. ಹೋಗೇ ಬಿಟ್ಟರೆ ಹೇಗೆ ಅಂದುಕೊಂಡೆ. ಎಲ್ಲಿಗೇ ಹೋದರೂ ಮತ್ತೆ ಇಲ್ಲಿಗೇ ಬರಬೇಕಲ್ಲ. ಸಾಕು ಅಲೆದಿದ್ದು, ಮನೆಗೋಗುವ. ಮಗಳು ಐದು ದಾಟುತ್ತಿದ್ದಂತೆಯೇ ನನಗೋಸ್ಕರ ಕಾಯುತ್ತಿರುತ್ತಾಳೆ. ಕೆಲಸ ಮುಗಿಸಿ ಸುಸ್ತಾಗಿ ಮನೆಗೋದಾಗ ಸುಸ್ತನ್ನೆಲ್ಲ ಮರೆಸುವುದು ಅವಳ ನಗು. ಹೊಟ್ಟೆ ಬಿರಿಯುವಷ್ಟು ತಿಂದು ಹೊರಟೆ. ದಾರಿಯಲ್ಲಿ ಮಗಳಿಗೆ ಇಷ್ಟವೆಂದು ಸ್ಟ್ರಾಬೆರ್ರಿ ಹಣ್ಣೊಂದಷ್ಟು ತೆಗೆದುಕೊಂಡೆ. ಮನೆ ತಲುಪಿ ಮಗಳೊಂದಿಗಿಷ್ಟು ಆಟವಾಡಿ ತಿನ್ನಿಸುವಷ್ಟರಲ್ಲಿ ಸಮಯ ಆರಾಗಿತ್ತು. ಮನೆಗೋಗಲು.... ರಾಜೀವನೊಟ್ಟಿಗಿದ್ದ ಮನೆಗೋಗಲು ಮನಸ್ಸೇ ಇರುವುದಿಲ್ಲ. ಆದರೆ ವಿಧಿಯಿಲ್ಲ. ಸೋನಿಯಾ ಇರುವ ಈ ಮನೆಯಲ್ಲಿ ಪೂರ್ತಿಯಾಗಿ ಝಾಂಡಾ ಊರಿ ಇಲ್ಲಿ ಮತ್ತೊಂದಷ್ಟು ಸಮಸ್ಯೆಗಳನ್ನು ತಂದೊಡ್ಡುವುದು ನನಗಿಷ್ಟವಿಲ್ಲದ ಕೆಲಸ. ಹೊರಡುವಾಗ ಅಮ್ಮ "ಸಾರೇನಾದರೂ ಬೇಕಾ?" ಎಂದು ಕೇಳಿದರು. ದಿನಾ ಕೇಳ್ತಾರೆ. ಕೊಟ್ಟುಕಳಿಸಿದರೆ ಏನಾಗ್ತದೋ ಗೊತ್ತಿಲ್ಲ. ಅವರಿಗೂ ಗೊತ್ತೇ ಇದೆ ಮನೆಯಲ್ಲೇನೂ ಇರೋದಿಲ್ಲ ಈಗ ಹೋಗಿ ಮಾಡಬೇಕೆಂದು. ಮಧ್ಯಾಹ್ನದ ಸಾರನ್ನೇ ಒಂದಷ್ಟು ಕಟ್ಟಿಕೊಟ್ಟರೆ ಬಡವರಾಗಿಬಿಡ್ತಾರಾ? ಇಲ್ಲವಲ್ಲ. ʻಏನ್ ಬೇಡ ಬಿಡಿ ಮನೇಲೇ ನಿನ್ನೆ ಸಾರಿರಬೇಕು' ಎಂದೊಂದು ಸುಳ್ಳೇಳಿ ಹೊರಟೆ. 

ಮನೆಗೆ ಹೋಗಲು ಇಷ್ಟವಿಲ್ಲ. ಮಗಳನ್ನು ಕರೆದುಕೊಂಡು ಮನೆ ಹತ್ತಿರವೇ ಇದ್ದ ಪಾರ್ಕಿಗೆ ಹೋದೆ. ಪಾರ್ಕೆಂದರೆ ಮಗಳಿಗೆ ಇಷ್ಟ. ಅತ್ತಿಂದಿತ್ತ ಉತ್ಸಾಹದಿಂದ ಓಡಾಡುವ ಅವಳನ್ನು ತಡೆಯುವುದೇ ಕಷ್ಟದ ಕೆಲಸ. ಸಾಮಾನ್ಯ ನನ್ನಲ್ಲಿ ಉತ್ಸಾಹವಿರುತ್ತಿರಲಿಲ್ಲ. ಇವತ್ತಿದೆ. ಅವಳೊಟ್ಟಿಗೆ ನಾನೂ ದಣಿಯುವಷ್ಟು ಆಡಿದೆ. ಕತ್ತಲಾಗುವವರೆಗೆ. ಇನ್ನಷ್ಟು ಆಡುವ ಮನಸ್ಸು ಇಬ್ಬರಿಗೂ ಇತ್ತು. ಕತ್ತಲಾದರೆ ಪಾರ್ಕುಗಳಲ್ಲಿ ಸೊಳ್ಳೆಯ ಕಾಟ ವಿಪರೀತ. ಹೊರಟೊ. ಮನೆಗೋಗಿ ಅಡುಗೆಯಲ್ಲಿ ತೊಡಗಿಕೊಳ್ಳುವಷ್ಟು ಮನಸ್ಸಿರಲಿಲ್ಲ. ʻಹೊರಗಡೆ ಊಟ ಮಾಡೋಣ ಪುಟ್ಟ' ಎಂದೆ. ಖುಷಿಯಿಂದ "ಹು ಹು... ಮಸಾಲೆ ದೋಸೆ" ಎಂದಳು. ಹೋಟೆಲ್ಲೂಟ, ಹೆಚ್ಚು ಕಮ್ಮಿ ಆದ್ರೆ ಅನ್ನೋ ಭಯದಲ್ಲೇ ಹತ್ತಿರದಲ್ಲಿದ್ದ ದೋಸೆ ಕಾರ್ನರ್‌ಗೆ ಕರೆದುಕೊಂಡು ಹೋಗಿ ದೋಸೆ ಕೊಡಿಸಿದೆ. ನಾ ಸಂಜೆ ಹೊಟ್ಟೆ ಬಿರಿಯುವಷ್ಟು ತಿಂದಿದ್ದೆನಲ್ಲ. ಹಸಿವಿರಲಿಲ್ಲ. ಮಗಳಿಗೆ ಕೊಡಿಸಿದ ದೋಸೆಯಲ್ಲೇ ಕಾಲು ಭಾಗ ತಿಂದೆ. ಇಬ್ಬರಿಗೂ ಸಾಕಾಯಿತು. ಮನೆಗೆ ಬಂದಾಗ ಘಂಟೆ ಎಂಟಾಗಿತ್ತು. 

ಆಟವಾಡಿ ಸುಸ್ತಾಗಿದ್ದಳು ಮಗಳು. ಹತ್ತು ಸಲ ಬೆನ್ನು ತಟ್ಟುವಷ್ಟರಲ್ಲಿ ನಿದ್ರೆ ಹೋದಳು. ಅವಳಿಗೆ ಬೆನ್ನು ತಟ್ಟುತ್ತಾ ನನಗೂ ನಿದ್ರೆ ಬಂದುಬಿಟ್ಟಿತು. ಮತ್ತೆ ಅರೆಮಂಪರಿನಲ್ಲಿ ಎದ್ದಾಗ ಹಾಲಿನ ಲೈಟಿನ್ನೂ ಉರಿಯುತ್ತಿದ್ದದ್ದು ಕಂಡಿತು. ಎದ್ದು ಆಫ್ ಮಾಡಿದೆ. ಕತ್ತಲೆಯಲ್ಲಿ ಟಿವಿಯಿದ್ದ ಮೇಜಿನ ಮೇಲಿಟ್ಟಿದ್ದ ಮೊಬೈಲಿನ ನೋಟಿಫಿಕೇಶನ್ ಬೆಳಕು ಪಿಳ ಪಿಳ ಅನ್ನುತ್ತಿದ್ದದ್ದು ಕಾಣುತ್ತಿತ್ತು. ಹೋಗಿ ಮೊಬೈಲೆತ್ತಿಕೊಂಡು ರೂಮಿಗೆ ಬಂದು ಲೈಟಾರಿಸಿ ಮಲಗಿ ಮೊಬೈಲ್ ನೋಡಿದೆ. ಒಟ್ಟು ಮೂವತ್ತೆರಡು ಮಿಸ್ಡ್ ಕಾಲುಗಳಿದ್ದವು! 

ಹದಿನೆಂಟು ಸಲ ರಾಜೀವ ಫೋನ್ ಮಾಡಿದ್ದ; ಎಂಟು ಸಲ ಸಾಗರ ಫೋನ್ ಮಾಡಿದ್ದ; ನಾಲ್ಕು ಸಲ ರಾಮ್ ಪ್ರಸಾದ್ ಫೋನ್ ಮಾಡಿದ್ದರು; ಎರಡೆರಡು ಸಲ ರಾಜೀವನ ಅಪ್ಪ, ರಾಜೀವನಕ್ಕ ಫೋನಾಯಿಸಿದ್ದರು; ಸುಮಾ ಒಮ್ಮೆ ಮಾಡಿದ್ದಳು, ಇನ್ನೈದು ಅನ್ ನೋನ್ ನಂಬರ್ರುಗಳು. ರಾಜೀವ ಮತ್ತು ಸಾಗರನಂತೂ ಬೆಳಿಗ್ಗೆಯಿಂದ ಸಂಜೆಯವರೆಗೂ ಕರೆ ಮಾಡಿದ್ದರು. ರಾಮ್ ಪ್ರಸಾದ್ ಬೆಳಿಗ್ಗೆ ಎರಡು ಸಲ, ಮಧ್ಯಾಹ್ನ ಎರಡು ಸಲ ಕರೆ ಮಾಡಿದ್ದರು - ಕಾಫಿ ಮತ್ತು ಊಟಕ್ಕೆ ಹೋಗುವ ಸಮಯದಲ್ಲಿ. ಯಾರಿಗೆ ತಿರುಗಿ ಕರೆ ಮಾಡಲಿ. ರಾಜೀವ ಬಯ್ಯುವುದಕ್ಕೇ ಮಾಡಿರುತ್ತಾನೆ, ಫೋನ್ ಮಾಡಿ ಬಯ್ಯಿಸಿಕೊಳ್ಳುವ ಕರ್ಮ ನನಗ್ಯಾಕೆ. ಇನ್ನು ಸಾಗರ ಮನೆಯಲ್ಲಿರುತ್ತಾನೆ, ಅವನಿಗೆ ನಾಳೆ ಮಾಡುವ. ರಾಮ್ ಕಾಫಿ ಊಟಕ್ಕೆ ಮಾಡಿರುತ್ತಾನೆ, ಸುಮಾಳೂ ಅಷ್ಟೇ.... ಇನ್ನು ರಾಜೀವನ ಮನೆಯವರಿಗೆ? ಅವರಿಗೆ ಫೋನ್ ಮಾಡುವ ಕಾಲವೆಲ್ಲ ಮುಗೀತು. ಫೇಸ್ ಬುಕ್ಕೋ ಯೂಟ್ಯೂಬೋ ನೋಡುವ ಅಂತ ಇಂಟರ್ನೆಟ್ ಆನ್ ಮಾಡಿದೆ. ಡೇಟಾ ಆನ್ ಮಾಡುವುದನ್ನೇ ಕಾಯುತ್ತಿದ್ದಂತೆ ವಾಟ್ಸಪ್ಪಿನ ಮೆಸೇಜುಗಳು ದಡಬಡಿಸಿ ಬಂದು ಸದ್ದು ಮಾಡಿದವು. ರಾಜೀವ, ಸಾಗರ, ರಾಮ್ ಪ್ರಸಾದ್ ಮೆಸೇಜುಗಳ ಮೇಲೆ ಮೆಸೇಜು ಕಳಿಸಿದ್ದರು. ಎಲ್ಲರಿಗಿಂತ ಮೇಲಿದ್ದದ್ದು ಸಾಗರನ ಮೆಸೇಜು. ಅವನ ಮೆಸೇಜುಗಳನ್ನೇ ಓದುವ ಮೊದಲು. ಎಷ್ಟೇ ಅಂದ್ರೂ ಸೋಲ್ ಮೇಟು! 

"ಬ್ಯುಸಿ ಏನೇ. ಬಿಡುವಾದಾಗ ಫೋನ್ ಮಾಡು" 

"ಇದೆಲ್ ಹೋದ್ಯೇ. ಎಷ್ಟ್ ಸಲ ಫೋನ್ ಮಾಡೋದು" 

"ಅಯ್ಯೋ ನಿನ್ನ ಇದೆಲ್ ಹೋದ್ಯವ್ವಾ?" 

"ಎಲ್ಲಾ ಆರಾಮ್ ತಾನೇ" 

"ಮೆಸೇಜುಗಳು ನಿನಗೆ ಹೋಗ್ತಾನೂ ಇಲ್ಲವಲ್ಲ" 

"ಮೊಬೈಲ್ ಅಲ್ಲೇನಾದ್ರೂ ಪ್ರಾಬ್ಲಮ್ಮಾ?" 

"ಅದೇನ್ ಬೇಕೂಂತ ನನ್ನ ಅವಾಯ್ಡ್ ಮಾಡ್ತಿದ್ದೀಯೋ ನಿಜಕ್ಕೂ ಮೊಬೈಲು ನೋಡ್ತಿಲ್ವೋ ಗೊತ್ತಾಗ್ತಿಲ್ಲಪ್ಪ. ಅರ್ಜೆಂಟ್ ವಿಷ್ಯ ಮಾತನಾಡಬೇಕಿತ್ತೆ" 

"ಮ್" 

"ಮ್" 

"ಮ್. ಹೋಗ್ಲಿ ಬಿಡು. ಬ್ಯುಸಿ ಇದ್ದೀಯೋ ಏನೋ... ಕೋರ್ಟ್ ಕೆಲ್ಸವಿದೆಯೋ ಏನೋ. ಸುಮ್ನೆ ತಲೆ ತಿಂತಾ ಇದೀನೇನೋ. ಹೇಳೋ ವಿಷಯ ಇಲ್ಲೇ ತಿಳಿಸಿಬಿಡ್ತೀನಿ. ನೀ ಹೇಳಿದ್ದೇ ಕಾಡ್ತಿದೆ ಕಣೆ ನಿನ್ನೆಯಿಂದ" 

"ನಿನ್ನದೇನು ತಪ್ಪಿದೆಯೋ ಅವರದೇನು ತಪ್ಪಿದೆಯೋ ನಿಮ್ಮಿಬ್ಬರಿಗೇ ಗೊತ್ತು. ಇಬ್ಬರ ಜಗಳದಲ್ಲಿ ಕೂಸು ಬಡವಾಗಬಾರದಲ್ಲ. ಮತ್ತೊಂದು ಸುತ್ತು ಡೈವೋರ್ಸ್ ತೆಗೆದುಕೊಳ್ಳುವ ಬಗ್ಗೆ ಯೋಚಿಸಿದರೆ ಒಳ್ಳೆಯದು ಅಂತ ನನ್ನ ಆಭಿಪ್ರಾಯ. ಇಷ್ಟರ ಮೇಲೂ ಡೈವೋರ್ಸ್ ತೆಗೆದುಕೊಳ್ಳಬೇಕೆಂಬುದೇ ನಿನ್ನ ನಿರ್ಧಾರವಾದರೆ ನನ್ನ ಬೆಂಬಲವಂತೂ ನಿನಗಿದ್ದೇ ಇದೆ. ನಿಜ ಹೇಳ್ಬೇಕಂದ್ರೆ ನೀನು ಡೈವೋರ್ಸ್ ವಿಷಯ ಹೇಳಿದ ತಕ್ಷಣ ʻಅಯ್ಯೋ ಇವಳು ಈ ನಿರ್ಧಾರ ಮುಂಚಿತವಾಗಿ ಮಾಡಿದ್ದರೆ ನಾವಿಬ್ಬರೇ ಮದುವೆಯಾಗಬಹುದಿತ್ತಲ್ವ' ಅನ್ನಿಸಿದೌದು. ಸ್ವಾರ್ಥದಂತೆ ಕಾಣಿಸಬಹುದದು. ಆದರೆ ಆ ರೀತಿ ಅನ್ನಿಸಿದ್ದು ಮಾತ್ರ ಸತ್ಯ. ಬಹುಶಃ ನನ್ನ ಹೆಂಡತಿ ಈಗ ಪ್ರೆಗ್ನೆಂಟ್ ಆಗಿರದೇ ಹೋದರೂ ಅವಳಿಗೆ ಡೈವೋರ್ಸ್ ಕೊಡುವ ಯೋಚನೆ ಬರುತ್ತಿತ್ತಾ ನನಗೆ? ಇಲ್ಲ ಅನ್ನಿಸುತ್ತೆ. ಒಳ್ಳೆ ಹೆಂಡತಿ ಸಿಕ್ಕಿದ್ದಾಳೆ ನನಗೆ. ಅವಳನ್ನು ಬಿಡುವ ಯೋಚನೆ ನನ್ನ ಬಳಿ ಸುಳಿಯಲಾರದು. ನಿನಗೆ ಮತ್ತೊಂದು ಮದುವೆಯಾಗುವ ಯೋಚನೆಯೇನಾದರೂ ಇದೆಯಾ? ಇದ್ದರೆ ಹೇಳು, ಇಲ್ಲಿ ಬಹಳಷ್ಟು ಮ್ಯಾಟ್ರಿಮೋನಿಗಳಿದ್ದಾವೆ. ಡೈವೋರ್ಸಿಗಳಿಗೆ ಅಂತಲೇ ಇದ್ದಾವೆ. ಮಾತಾಡ್ತೀನಿ ನಾನು" 

"ಈ ವಿಷಯ ಹೇಳಬೇಕೋ ಬೇಡವೋ ಗೊತ್ತಿಲ್ಲ. ಅಕಸ್ಮಾತ್..... ಅಕಸ್ಮಾತ್ ಅಂತ ಮೊದಲೇ ಹೇಳಿದ್ದೀನಿ..... ತಪ್ಪು ತಿಳೀಬೇಡ.... ನಿನಗೂ ಆ ನಿನ್ನ ಕೊಲೀಗಿಗೂ ಅಕಸ್ಮಾತ್ ಏನಾದ್ರೂ ಸಂಬಂಧ ಇದ್ದಿದ್ದೇ ಹೌದಾದರೆ.... ಅಕಸ್ಮಾತ್ ಇದ್ದರೆ .... ಅವರೂ ಒಳ್ಳೆಯವರೇ ಆಗಿದ್ದರೆ ನೀವಿಬ್ಬರೇ ಯಾಕೆ ಮದುವೆಯಾಗಬಾರದು ಅನ್ನಿಸುತ್ತೆ ನನಗೆ" 

"ನಿನ್ನ ಎಫ್.ಬಿ ಪ್ರೊಫೈಲ್ ನೋಡುತ್ತಿದ್ದೆ. ರಾಜೀವನ ಜೊತೆಗಿದ್ದ ಎಲ್ಲಾ ಫೋಟೋಗಳನ್ನೂ ತೆಗೆದುಹಾಕಿದ್ದಿ. ತಪ್ಪೇನಿಲ್ಲ. ಆದರೆ ನೀ ಗಮನಿಸಿದ್ದೀಯೋ ಇಲ್ಲವೋ ನಿನ್ನ ಹೆಚ್ಚಿನ ಫೋಟೋಗಳಲ್ಲಿ ಆ ನಿನ್ನ ಕೊಲೀಗ್ ಇದ್ದಾರೆ. ಅದೇನ್ ಬೇಕೂ ಅಂತ ಹಾಕಿದ್ದೀಯೋ ಏನೋ ಗೊತ್ತಾಗಲಿಲ್ಲ" 

"ಸಾರಿ. ತುಂಬಾ ಪರ್ಸನಲ್ ವಿಷಯ ಮಾತನಾಡಿದ್ದರೆ. ಹಳೇ ಸ್ನೇಹದಿಂದ ಸೋಲ್ ಮೇಟ್ ಅನ್ನೋ ಸಲುಗೆಯಿಂದ ಇಷ್ಟೆಲ್ಲ ಹೇಳಬೇಕಾಯಿತು" 

"ಹಂಗ್ ನೋಡಿದ್ರೆ ನಾ ಹೇಳಬೇಕಂತಿದ್ದ ವಿಷ್ಯಗಳು ಇವ್ಯಾವುದೂ ಅಲ್ಲ! ಮೈಸೂರಲ್ಲಿರೋದು ಕಷ್ಟವಾಗ್ತಿರ್ತದೆ ನಿನಗೆ ಅಂತ ಗೊತ್ತು. ಜೊತೆಗೆ ಒಂದು ಸಲ ಮಗಳನ್ನು ಬಲವಂತವಾಗಿ ಎತ್ತಿಕೊಂಡು ಹೋಗಿದ್ದ ರಾಜೀವ ಮತ್ತೊಮ್ಮೆ ಬರುವುದಿಲ್ಲವೆನ್ನುವುದಕ್ಕೆ ಸಾಧ್ಯವೇ? ಎತ್ತಿಕೊಂಡು ಹೋಗಿ ನಿನ್ನ ಮೇಲಿನ ಕೋಪಕ್ಕೆ ಏನಾದರೂ ತೊಂದರೆ ಮಾಡಿಬಿಟ್ಟರೆ? ಮೈಸೂರು ಬಿಟ್ಟು ಬರೋದು ಬೆಟರ್ ಅನ್ನಿಸುತ್ತೆ ನನಗೆ. ನಾ ಕೆಲಸ ಮಾಡುವಲ್ಲೇ ವಿಚಾರಿಸಿದೆ. ಕೆಲಸವಿದೆಯಂತೆ. ಬೇರೆ ಕಡೆಗಿಂತ ಸ್ವಲ್ಪ ಸಂಬಳ ಕಡಿಮೆಯಿರುತ್ತೆ ಇಲ್ಲಿ. ಆದರೆ ಕೆಲಸದ ಒತ್ತಡವೂ ಹೆಚ್ಚಿರುವುದಿಲ್ಲ. ನಿನಗೂ ಮಗಳನ್ನು ನೋಡಿಕೊಳ್ಳಲು ಸಮಯ ಸಿಕ್ಕಂತಾಗುತ್ತದೆ. ಇಲ್ಲ, ಇಲ್ಲಿ ಬೇಡ ಅಂದರೆ ನನಗೆ ಪರಿಚಯವಿರುವ ಇನ್ನು ಮೂರು ಆಸ್ಪತ್ರೆಯಲ್ಲಿ ಕೆಲಸವಿದೆ. ಸಂಬಳ ಜಾಸ್ತಿ ಇರುತ್ತೆ. ಆದ್ರೆ ಸ್ವಲ್ಪ ನೈಟ್ ಡ್ಯೂಟಿಯೆಲ್ಲ ಜಾಸ್ತಿ ಇರ್ತವೆ. ಯೋಚನೆ ಮಾಡಿ ನೋಡು" 

"ಟೇಕ್ ಕೇರ್ ಕಣೇ" 

"ನೀನ್ಯಾವ ನಿರ್ಧಾರ ತಗಂಡ್ರು ನಿನ್ನ ಬೆಂಬಲಕ್ಕೆ ನಾನಿರ್ತೀನಿ ಅನ್ನೋದು ನೆನಪಿರಲಿ ಕಂದ" 

"ಬಿಡುವಾದಾಗ ಫೋನ್ ಮಾಡಿ ನಿನ್ನಭಿಪ್ರಾಯ ತಿಳಿಸು" 

"ರಾತ್ರಿ ಎಷ್ಟೊತ್ತಾದ್ರೂ ಪರವಾಗಿಲ್ಲ ಫೋನ್ ಮಾಡು. ವೈಫು ಅಮ್ಮನ ಮನೆಗೆ ಹೋಗಿದ್ದಾಳೆ" 

"ಲವ್ ಯು" 

"ಮಿಸ್ಡ್ ಯು" 

"ಬಾಯ್ ಕಣೇ" 

ಹೌದು ಮೈಸೂರು ಬಿಟ್ಟು ಹೋಗೋದು ತುಂಬಾ ಸೂಕ್ತವಾದ ನಿರ್ಧಾರವೇ ಆಗ್ತದೆ. ಆದರೆ ಇನ್ನೂ ಬಾಂಡ್ ಮುಗಿದಿಲ್ಲವಲ್ಲ. ಪರಿಸ್ಥಿತಿ ವಿವರಿಸಿದರೆ ಒಂದಷ್ಟು ಬಾಂಡ್ ಮೊತ್ತವನ್ನು ಕಡಿಮೆ ಮಾಡಬಹುದೇ ಹೊರತು ಪೂರ್ತಿಯಾಗಂತೂ ಬಿಟ್ಟುಬಿಡುವುದಿಲ್ಲ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಬಿಟ್ಟು ಹೋಗುವುದು ಕಷ್ಟ. ಬಾಂಡ್ ಅವಧಿಗೇನು ಏನು ಕಣ್ಣು ಮುಚ್ಚಿ ತೆರೆಯುವುದರಲ್ಲಿ ಮುಗಿದೇ ಹೋಗುತ್ತದೆ. ಮುಗಿದ ಮೇಲೆ ಬೆಂಗಳೂರಿಗೆ ಹೋಗುವುದೇ ಸರಿ. ಹೇಗಿದ್ದರೂ ಕೆಲಸ ಕೊಡಿಸಲು ಇದ್ದಾನಲ್ಲ ಸಾಗರ. ಬೆಂಗಳೂರಿನಲ್ಲಿ ಸಾಗರನ ಆಸ್ಪತ್ರೆಗೇ ಸೇರಿಬಿಟ್ಟರೆ ಸಾಗರನೊಡನೆ ಮತ್ತೆ ನನ್ನ ಸಂಬಂಧ ಶುರುವಾಗುವುದಿಲ್ಲವಾ? ಏನೇ ದೂರ ದೂರ ಅಂತ ಹೋಗಿದ್ದರೂ ಇಬ್ಬರಲ್ಲಿರುವ ಒಲವಿಗೆ ಮುಕ್ಕು ಬಂದಿಲ್ಲ. ಸೆಕ್ಸ್ ಮಾಡದೇ ಹೋಗಬಹುದು. ಆದರೆ ಪ್ರತಿ ವಿಷಯವನ್ನೂ ಹಂಚಿಕೊಳ್ಳದೇ ಇರಲಾಗುವುದಿಲ್ಲ. ಮತ್ತದು ಅವನ ಸಂಸಾರದಲ್ಲಿ ಬಿರುಕು ಮೂಡಿಸಿದರೆ? ಅಂತದ್ದಕ್ಕೆ ಅವನು ಅವಕಾಶ ಕೊಡುವುದಿಲ್ಲ ಅನ್ನುವುದೇನೋ ಸತ್ಯ. ಇಲ್ಲಿ ನನ್ನ ರಾಮ್ ಮಧ್ಯೆ ಏನೂ ಇಲ್ಲದೇ ಇಷ್ಟೆಲ್ಲ ಅವಾಂತರವಾಗಿದೆ, ಇನ್ನು ಅಲ್ಲಿ ನಮ್ಮ ಮಧ್ಯೆ ದೊಡ್ಡ ಮಟ್ಟದ ಪ್ರೀತಿ ಇದ್ದಾಗ ಇನ್ನೇನೆಲ್ಲ ಅನಾಹುತಗಳಾಗಬಹುದು? 

ರಾಮ್ ಪ್ರಸಾದನ ಮೆಸೇಜುಗಳನ್ನು ತೆರೆದೆ. 

"ಎಲ್ಲಿ ಡಾಕ್ಟ್ರೇ?" 

"ಎಲ್ರೀ ಹೋದ್ರೀ?" 

"ಸುಮಾ ಸಿಕ್ಕಿದ್ರು ಊಟಕ್ಕೋದಾಗ. ಅವರ ಫೋನೂ ಎತ್ತಿಲ್ಲವಂತೆ. ಎಲ್ಲಿಗೋದ್ರಿ" 

"ಇದೇನ್ರೀ ಇಷ್ಟು ಸಲ ಫೋನು ಮಾಡಿದ್ರೂ ರಿಸೀವ್ ಮಾಡ್ತಿಲ್ಲ? ಏನಾದ್ರೂ ತೊಂದರೆಯಲ್ಲಿದ್ದೀಯೋ ಹೇಗೆ?" 

"ನಿಮ್ಮತ್ರ ಬಹಳಷ್ಟು ವಿಷಯ ತಿಳಿಸಬೇಕಿತ್ತು ಧರಣಿ. ಎದುರಿಗೆ ಸಿಕ್ಕಾಗೆಲ್ಲ ಹೇಳುವ ಅನ್ನಿಸುತ್ತೆ. ನೀನೇನು ತಿಳೀತೀರೋ ಅಂತ ಸುಮ್ಮನಾಗ್ತೀನಿ. ಈಗಲೂ ಹೇಳದೇ ಹೋದರೆ ತಪ್ಪಾಗ್ತದೆ ಅನ್ನಿಸುತ್ತೆ" 

"ನಿನಗೆ ನೆನಪಿದೆಯಾ ಮೊದಲ ಹೆಣ್ಣು ನೋಡಲು ಹೋಗಿದ್ದು? ನೆನಪಿದ್ದೇ ಇರುತ್ತೆ ಬಿಡಿ. ಅವರ ಮನೆಯವರು, ಹುಡುಗಿ, ನಮ್ಮ ಮನೆಯವರು ಎಲ್ಲರೂ ಒಪ್ಪಿದ್ದಾರೆ. ನಿಜ ಹೇಳಬೇಕೆಂದರೆ ವಾರದ ಹಿಂದಿನವರೆಗೆ ನನಗೂ ಒಪ್ಪಿಗೆಯಿತ್ತು. ಈಗ್ಯಾಕೋ ತುಂಬಾ ಡೈಲೆಮಾ ಕಾಡ್ತಿದೆ. ಗೊಂದಲವೋ ಗೊಂದಲ. ಯಾರ ಬಳಿ ಹೇಳಿಕೊಳ್ಳುವುದೋ ಗೊತ್ತಾಗದೇ ಮತ್ತಷ್ಟು ಹೆಚ್ಚುವ ಗೊಂದಲ" 

"ನೇರ ವಿಷಯಕ್ಕೆ ಬರುವುದಾದರೆ ನಾ ನಿಮಗೆ ಡೈವೋರ್ಸ್ ಸಿಗೋವರೆಗೂ ಮದುವೆಯಾಗದೇ ಉಳಿಯಬೇಕೆಂದು ನಿರ್ಧರಿಸಿದ್ದೇನೆ. ನನಗೆ ನಿನ್ನನ್ನು ಮದುವೆಯಾಗಬೇಕೆನ್ನಿಸಿದೆ ಧರಣಿ" 

"ಅಯ್ಯೋ. ಇಲ್ಲಿಲ್ಲ. ನಿನ್ನ ಮೇಲಿನ ಅನುಕಂಪದಿಂದಾಗಲೀ, ನನ್ನ ಕಾರಣದಿಂದ ಇವರು ಡೈವೋರ್ಸ್ ತೆಗೆದುಕೊಳ್ಳುವಂತಾಯಿತು ಎನ್ನುವ ಕರುಣೆಯಿಂದಾಗಲೀ, ನಿನಗೊಂದು ಬಾಳು ಕೊಡುವ ಭ್ರಮೆಯನ್ನೊತ್ತುಕೊಂಡಾಗಲೀ ಈ ನಿರ್ಧಾರಕ್ಕೆ ಬರುತ್ತಿಲ್ಲ ನಾನು. ನಿಜ ಹೇಳ್ಬೇಕಂದ್ರೆ ನನಗೆ ನೀವು ಮೊದಲಿನಿಂದಾನೂ ಇಷ್ಟ. ಇನ್ನೂ ಸತ್ಯ ಹೇಳಬೇಕೆಂದರೆ ಅಯ್ಯೋ ಇವಳಿಗೆ ಮದುವೆಯಾಗದೇ ಹೋಗಿದ್ದರೆ ಪ್ರಪೋಸ್ ಮಾಡಬಹುದಿತ್ತಲ್ವ ಅಂತ ಬಹಳಷ್ಟು ಸಲ ಅನ್ನಿಸಿತ್ತು. ಆ ರೀತಿ ಅನ್ನಿಸಿದ್ದೆಲ್ಲ ನೀವು ರಾಜೀವು ಸ್ನೇಹಿತರಾಗುವುದಕ್ಕೆ ಮುಂಚೆ. ಸ್ನೇಹಿತರಾದ ಮೇಲೆ ನಿಮ್ಮನ್ನು ಮದುವೆಯಾಗೋ ಆಸೆ ನಿಮ್ಮ ತರ ಒಂದು ಹುಡುಗಿ ಸಿಕ್ಕಲಿ ಎಂದು ಬದಲಾಯಿತು. ಈಗ ನಿಮ್ಮ ಡೈವೋರ್ಸ್ ಆಗುತ್ತಿರುವಾಗ ಮತ್ತೆ ನಿಮ್ಮನ್ನು ಮದುವೆಯಾಗೋ ಆಸೆ ಮೂಡಿದ್ದು ನನ್ನ ಸ್ವಾರ್ಥ ತೋರಿಸುತ್ತದಾ? ಗೊತ್ತಾಗ್ತಿಲ್ಲ ಧರಣಿ" 

"ನೀ ಒಪ್ಪಿದರೂ ನಿಮ್ಮ ಮನೆಯವರನ್ನೆದುರಿಸಬೇಕು, ನಮ್ಮ ಮನೆಯವರಿಗೆ ನಾ ಸಮಾಧಾನಕರ ಸಮಜಾಯಿಷಿಗಳನ್ನು ಕೊಡಬೇಕು. ನಮ್ಮಿಬ್ಬರ ನಡುವೆ ಸಂಬಂಧವಿದ್ದದ್ದು ಸತ್ಯ ಅಂತ ನಾವೇ ಸಾರಿ ಹೇಳಿದಂಗಾಗ್ತದೆ. ಕಷ್ಟ ಇದೆ. ಹೌದು. ಆದರೂ ಸರಿಯಾದ ನಿರ್ಧಾರವೇ ಅನ್ನಿಸುತ್ತೆ ನನಗೆ. ಇಲ್ಲಿರೋದೇ ಬೇಡ. ಬೆಂಗಳೂರಿನಲ್ಲಿ ನನಗೆ ಗೊತ್ತಿರುವ ಆಸ್ಪತ್ರೆಗಳಿವೆ. ನನಗೂ ಕೆಲಸವಾಗ್ತದೆ, ನಿನಗಂತೂ ಕೆಲಸ ಸಿಕ್ಕೇ ಸಿಗ್ತದೆ. ಹೋಗಿಬಿಡುವ. ಬೆಂಗಳೂರೂ ಬೇಡ ಅಂದರೆ ಹೈದರಾಬಾದಿಗೆ ಹೋಗುವ...." 

"ಅಸಹ್ಯ ಹುಟ್ಟಿತಾ ನನ್ನ ಮೆಸೇಜುಗಳನ್ನು ನೋಡಿ?" 

"ತಪ್ಪು ಮಾತಾಡಿದ್ದರೆ ಕ್ಷಮಿಸಿ" 

"ನಿಮ್ಮ ನಿರ್ಧಾರ ನನಗೆ ಖುಷಿ ತರಬಹುದು, ದುಃಖ ಉಂಟುಮಾಡಬಹುದು. ಅದೇನೇ ಆದರೂ ಪರವಾಗಿಲ್ಲ ನಿರ್ಧಾರ ತಿಳಿಸು" 

"ಕಾಯ್ತಿರ್ತೀನಿ" 

ನಗು ಬಂತು. ಸೃಷ್ಟಿಯಾದ ಸನ್ನಿವೇಶವೊಂದರಲ್ಲಿ ನಮಗೆ ಅನುಕೂಲಕರವಾದುದೇನು ಅಂತಲೇ ಮನಸ್ಸು ಯೋಚಿಸುತ್ತಿರುತ್ತದಲ್ಲವೇ? ಅದು ಯಾವ ಸನ್ನಿವೇಶವಾದರೂ ಸರಿಯೇ. ಸತ್ತ ಮನೆಯಲ್ಲಿರುವವರ ಮನದಲ್ಲೂ ಇಂತವೇ ಯೋಚನೆಗಳಿರ್ತವೆ. ರಾಮ್ ಪ್ರಸಾದ್ ಪಾಪ ಒಳ್ಳೆ ಉದ್ದೇಶದಿಂದಲೇ ಈ ರೀತಿ ಹೇಳಿರಬಹುದು. ಅವರಿಗೆ ನಾನಂದ್ರೆ ಇಷ್ಟ ಅನ್ನೋದೇನೋ ಗೊತ್ತಿದ್ದ ವಿಷಯವೇ. ಆದರದು ಆರಾಧನೆ ರೀತಿಯಲ್ಲಿತ್ತೇ ಹೊರತು ಇರೋ ಗಂಡನಿಂದ ಕಿತ್ತುಕೊಂಡು ಅನುಭವಿಸಬೇಕೆನ್ನುವ ರೀತಿಯಲ್ಲಿರಲಿಲ್ಲ. ಅನುಕಂಪ ಕರುಣೆಯಿಂದಲೇ ಅವರು ನನ್ನನ್ನು ಮದುವೆಯಾಗಲು ಒಪ್ಪಿದ್ದರೂ ತಪ್ಪೇನಿಲ್ಲ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದೂ ಮದುವೆಯಾಗ್ತಾನೆ ಅಂದ್ರೆ ಚೆನ್ನಾಗೇ ನೋಡಿಕೊಳ್ತಾನೆ. ನನ್ನನ್ನು ಚೆಂದ ನೋಡಿಕೊಳ್ಳದಿದ್ದರೂ ರಾಧಳನ್ನಂತೂ ಮುದ್ದಿನಿಂದ ನೋಡಿಕೊಳ್ಳುತ್ತಾರೆ. ಅಷ್ಟು ನಂಬಿಕೆಯಂತೂ ನನಗಿದೆ. ಆದರೆ ಅವರ ಮನೆಯವರನ್ನೆದುರಿಸುವುದು ಹೇಗೆ? ಅವರ ಮನೆಯವರನ್ನು, ನೆಂಟರಿಷ್ಟರನ್ನು ಎದುರಿಸುವುದೇಗೆ? ನೆನಪಿಸಿಕೊಂಡರೆ ಭಯವಾಗ್ತದೆ. 

ರಾಜೀವನ ಮೆಸೇಜುಗಳು ನನಗಾಗಿ ಕಾಯುತ್ತಿದ್ದವು. 

"ಸಾರಿ ಸಾರಿ ಸಾರಿ" 

"ಫೋನ್ ರಿಸೀವ್ ಮಾಡೇ" 

"ಎಲ್ಲೋದ್ಯೇ" 

"ಎಲ್ ಹಾಳಾಗ್ ಹೋದ್ಯೇ" 

"ಹಿಂಗೇ ಫೋನ್ ರಿಸೀವ್ ಮಾಡ್ದೇ ಹೋಗು ನಾ ಏನಂತ ತೋರಿಸ್ತೀನಿ" 

"ಕೊಬ್ಬು ನಿಂಗೆ" 

"ತಲೆ ಕೆಡಿಸ್ಬೇಡ" 

"ಇನ್ನೂ ರಿಸೀವ್ ಮಾಡದೇ ಹೋದ್ರೆ ನಿಮ್ಮಾಸ್ಪತ್ರೆಗೇ ಬರ್ತೀನಿ" 

"ಚಿನಾಲಿ ತಕಂಬಂದು" 

"ಲೋಫರ್ ಮುಂಡೆ" 

"ಹಿಂಗೆಲ್ಲ ಬಯ್ಯೋಕ್ ನಂಗಿಷ್ಟಾನೇನೇ ಫೋನ್ ರಿಸೀವ್ ಮಾಡು" 

"ನಿನ್ ಕಾಲಿಗೆ ಬೀಳ್ತೀನಿ ರಿಸೀವ್ ಮಾಡು" 

"ಯಾರ್ ಜೊತೆ ಮಲಿಕ್ಕಂಡಿದ್ದೀಯೇ ಸೂಳೆ ಮುಂಡೆ" 

"ಒಬ್ರು ಜೊತೇನಾ ನಾಕೈದು ಜನರ ಜೊತೇನಾ" 

"ಸಾರಿ ಸಾರಿ ಸಾರಿ" 

"ಫೋನ್ ರಿಸೀವ್ ಮಾಡು ಮಾತಾಡ್ಬೇಕು" 

"ನೀ ನನ್ನ ಇಷ್ಟೊಂದೆಲ್ಲ ಅವಾಯ್ಡ್ ಮಾಡುವಷ್ಟು ಬೇಸರ ಮಾಡಿಬಿಟ್ನಾ..." 

"ಮ್. ನಂದೇ ತಪ್ಪು ಬಿಡು" 

"ಫೋನಂತೂ ರಿಸೀವ್ ಮಾಡಲ್ಲ. ಹೋಗ್ಲಿ ಬಿಡು. ಕೊನೇ ಪಕ್ಷ ಯಾವಾಗಾದ್ರೂ ಈ ಮೆಸೇಜುಗಳನ್ನಾದರೂ ಓದುತ್ತಿ ಅನ್ನೋ ನಂಬಿಕೆಯಿದೆ ನನಗೆ. ನನ್ನ ಮೇಲೆ ನನಗೇ ಅಸಹ್ಯವಾಗ್ತಿದೆ ಕಣೇ. ಹೌದು. ನಿನಗಿದನ್ನೆಲ್ಲ ನಂಬಲು ಸಾಧ್ಯವಾಗುವುದಿಲ್ಲ ಈಗ. ಅಷ್ಟು ಕೆಟ್ಟದಾಗಿ ನಡೆದುಕೊಂಡಿದ್ದೀನಿ ನಿನ್ನ ಜೊತೆ. ಏನು ಮಾಡ್ತಿ... ಮೊದಲೇ ಡಿಪ್ರೆಶನ್ನಿನಲ್ಲಿದ್ದೆ. ಅಂದುಕೊಂಡಿದ್ಯಾವುದೂ ಅಂದುಕೊಂಡಂಗೆ ಆಗುತ್ತಿರಲಿಲ್ಲ. ನೀ ನೋಡಿದ್ಯಲ್ಲ ನನ್ನ ಡಿಪ್ರೆಶನ್ ಫೇಸುಗಳನ್ನು. ಆ ಸಮಯದಲ್ಲಿ ಮಗಳಿಗೂ ಏನೇನೋ ಅಂದುಬಿಟ್ಟೆ. ತಪ್ಪಾಯ್ತು" 

"ಸೋನಿಯಾ ಅಷ್ಟೊಂದೆಲ್ಲ ಹುಳ ಬಿಟ್ಟುಬಿಟ್ಟಿದ್ದಳು. ಜೊತೆಗೆ ನಮ್ಮ ಮನೆಯವರೂ ನಿನ್ನ ಬಗ್ಗೆ ಸಿಕ್ಕಾಗೆಲ್ಲ ಇಲ್ಲಸಲ್ಲದ್ದನ್ನು ಹೇಳುತ್ತಿದ್ದರು. ತಪ್ಪೆಲ್ಲ ನನ್ನದೇ ಬಿಡು. ಅವರ ಮಾತುಗಳನ್ನು ಕೇಳಬಾರದಿತ್ತು. ನೀನೇನೆಂದು ನನಗೇ ಗೊತ್ತಿತ್ತಲ್ಲ. ನಂಬಬೇಕಿತ್ತು" 

"ಈಗ ಡೈವೋರ್ಸಿಗೆ ಹಾಕ್ತೀನಿ ಅಂದಮೇಲೆ ಈ ತರ ಮಾತಾಡ್ತಿದ್ದಾರಿವರು ಅನ್ನಿಸಬಹುದು ನಿನಗೆ. ಹೌದು. ನೀ ಡೈವೋರ್ಸಿಗೆ ಹಾಕದಿದ್ದರೆ ಈ ರೀತಿಯೆಲ್ಲ ಮಾತನಾಡುತ್ತಿರಲಿಲ್ಲ ನಾನು. ನೀ ಡೈವೋರ್ಸ್‌ವರೆಗೂ ಹೋಗುತ್ತಿ ಅಂತ ಅಂದುಕೊಂಡಿರಲಿಲ್ಲ ನಾನು. ಕ್ಷಮೆ ಕೇಳಿಬಿಡ್ತಾಳೆ ಅನ್ನಿಸಿತ್ತು ನನಗೆ. ಕ್ಷಮೆ ಕೇಳಿದ ಮೇಲೆ ನಿನ್ನ ಮೇಲೆ ಹಕ್ಕು ಸಾಧಿಸಿಕೊಂಡಿದ್ದು ಬಿಡಬಹುದು ಅಂದುಕೊಂಡಿದ್ದೆ. ತಿಂಗಳೊಳಗೇ ನೀ ಡೈವೋರ್ಸಿನವರೆಗೂ ಹೋಗಿಬಿಡುತ್ತಿ ಅನ್ನೋ ಸಣ್ಣ ಸೂಚನೆ ಸಿಕ್ಕಿದ್ದರೂ ನಾ ಹಿಂಗೆಲ್ಲ ನಡೆದುಕೊಳ್ಳುತ್ತಿರಲಿಲ್ಲ" 

"ಸಾರಿ ಸಾರಿ ಸಾರಿ. ಇನ್ ಮೇಲ್ಯಾವತ್ತೂ ಈ ರೀತಿ ನಡೆದುಕೊಳ್ಳುವುದಿಲ್ಲ. ಕ್ಷಮಿಸಿಬಿಡು. ಬೇಕಾದರೆ ಒಂದೆರಡೇಟು ಹೊಡೆದು ಬಿಡು. ನೀ ಇಲ್ಲದ ಜೀವನ ನೆನಪಿಸಿಕೊಳ್ಳುವುದೂ ಕಷ್ಟ ನನಗೆ" 

"ಬೆಳಿಗ್ಗೆಯಿಂದ ಸ್ನೇಹಿತನ ರೂಮು ಸೇರಿಕೊಂಡು ಒಂದಾದ ಮೇಲೊಂದು ಸಿಗರೇಟು ಸೇದುತ್ತಾ ಕುಡಿಯುತ್ತಾ ಕೂತುಬಿಟ್ಟಿದ್ದೀನಿ. ಮತ್ತೇನು ಮಾಡುವುದೋ ತಿಳಿಯುವುದಿಲ್ಲ ನನಗೆ" 

"ಕಾಯ್ತಿರ್ತೀನಿ ನಿನ್ನ ಫೋನಿಗೆ" 

"ನನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ಕೊಡು" 

ಒಂದು ಅವಕಾಶ?! ಒಂದಾ ಎರಡಾ.... ಎಷ್ಟೆಲ್ಲ ಅವಕಾಶಗಳನ್ನು ನೀಡಿದ್ದೀನಿ. ಯಾವತ್ತು ಸರಿ ಹೋದರು? ನನ್ನ ಸಾಗರನ ಸಂಬಂಧ ಉತ್ತುಂಗದಲ್ಲಿದ್ದಾಗ ಸಿಕ್ಕಾಕಿಕೊಂಡು ಈ ರೀತಿಯೆಲ್ಲ ಆಡಿದ್ದರೆ ನನ್ನಲ್ಲೂ ಗಿಲ್ಟ್ ಇರುತ್ತಿತ್ತೇನೋ. ಈಗ ಗಿಲ್ಟ್ ಇಲ್ಲ, ಮತ್ತೊಂದಿಲ್ಲ. ಆದರೂ ರಾಜೀವ್ ಪಾಪ ತುಂಬಾ ಕೆಟ್ಟವರೂ ಅಲ್ಲ. ಯಾವುದೋ ಕೆಟ್ಟ ಪರಿಸ್ಥಿತಿಯೆಂದುಕೊಂಡು ಕ್ಷಮಿಸಿದರೂ ಅದರಲ್ಲಿ ತಪ್ಪೇನಿರುವುದಿಲ್ಲ. ಆದರೆ ಮತ್ತಿದೇ ಪುನರಾವರ್ತನೆಯಾದರೆ? ಹೆಂಗಿದ್ರೂ ಇವಳು ನನಗೆ ಡೈವೋರ್ಸ್ ಕೊಡುವುದಿಲ್ಲ ಅಂದುಕೊಂಡು ಇನ್ನೂ ವಿಪರೀತವಾಗಿ ನಡೆದುಕೊಂಡರೆ? 

ಜೀವನದ ಅತಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಸುದೀರ್ಘವಾಗಿ ಯೋಚಿಸಿ ಯೋಚಿಸಿ ಪುರುಷೋತ್ತಮನನ್ನು ಪ್ರೀತಿಸುವ ನಿರ್ಧಾರ ತೆಗೆದುಕೊಂಡು ಒಳಿತಾಯಿತಾ? ಇಲ್ಲವಲ್ಲ. ವಾಟ್ಸಪ್ ಇಂದ ಹೊರಬಂದು ಫೋನ್ ಚಿಹ್ನೆಯ ಮೇಲೆ ಕ್ಲಿಕ್ಕಿಸಿ ಕರೆ ಮಾಡಿದೆ. 

ಫೋನ್ ರಿಂಗಣಿಸುತ್ತಿತ್ತು. 

“ಬೇಸಿಕಲಿ ಹೆಣ್ಣು ಸ್ವಾರ್ಥಿ. ನಾ ಕಂಡುಕೊಂಡಿರೋ ಪ್ರಕಾರ, ಪ್ರಕೃತಿ ಪ್ರಕಾರ ಹೆಣ್ಣಿನ ಬಹುಮುಖ್ಯ ಕಾರ್ಯ ಮಕ್ಕಳನ್ನು ಹಡೆದು ಅವರನ್ನು ಸರಿ ರೀತಿಯಲ್ಲಿ ಸಾಕಿ ಸಂತತಿಯ ಮುಂದುವರಿಕೆಗೆ ಕಾರಣಕರ್ತರಾಗುವುದು. ಬಹುತೇಕ ಪ್ರಾಣಿಗಳಲ್ಲಿ ಗಂಡಿನ ಕೆಲಸ ಸೆಕ್ಸ್ ಮೂಲಕ ವೀರ್ಯ ಕೊಡುವುದಷ್ಟೇ ಆಗಿರ್ತದೆ. ಅಫ್ ಕೋರ್ಸ್ ಗಂಡೂ ಕೂಡ ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾನೆ, ಆದರೂ ಹೆಣ್ಣಿನಷ್ಟಲ್ಲ. ಪ್ರಾಣಿ ಪ್ರಪಂಚವನ್ನು ಗಮನಿಸಿದಾಗ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುವುದು ಹೆಣ್ಣಿಗೇ. ಯಾವ ಗಂಡು ಪ್ರಾಣಿ ಬಲಿಷ್ಠವಾಗಿದೆ, ಯಾವ ಪ್ರಾಣಿ ನನ್ನನ್ನು ನನ್ನ ಮಕ್ಕಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತದೆ ಎನ್ನುವುದನ್ನೆಲ್ಲ ಕೂಡಿ ಕಳೆದು ಗಂಡನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಮಾನವ ಪ್ರಕೃತಿಯಿಂದ ದೂರಾಗಿ ಬಂದುಬಿಟ್ಟಂತೆ ತೋರಿದರೂ ಸಾವಿರಾರು ವರುಷಗಳಿಂದ ರೂಪುಗೊಂಡ ನಮ್ಮ ದೇಹ – ಮನಸ್ಸು ಪ್ರಕೃತಿಗೆ ಪೂರಕವಾಗೇ ಕೆಲಸ ಮಾಡ್ತಿರ್ತದೆ. ಈ ಹುಡುಗನನ್ನು ಮದುವೆಯಾದರೆ ನಾನು ಜೀವನದಲ್ಲಿ ಸೆಟಲ್ ಆಗ್ತೀನಾ? ಈ ಹುಡುಗ ಜವಾಬ್ದಾರಿಯಿಂದ ಸಂಸಾರ ನಿರ್ವಹಿಸುತ್ತಾನಾ? ಇವನಿಗೆ ಉತ್ತಮ ಕೆಲಸವಿದೆಯಾ? ಸಂಬಳ ಹೇಗಿದೆ? ಮನೆ ಕಡೆ ಅನುಕೂಲಸ್ಥರ ಹೇಗೆ ಅನ್ನುವುದನ್ನೆಲ್ಲ ಹುಡುಗಿಯಾದವಳು ಯೋಚಿಸಿಯೇ ಯೋಚಿಸುತ್ತಾಳೆ. ಯೋಚಿಸದಿದ್ದರೂ ಹುಡುಗನನ್ನು ಆಯ್ದುಕೊಳ್ಳುವ ಅವಕಾಶವಿದ್ದಾಗಲೆಲ್ಲ ಅವಳ ಸುಪ್ತ ಮನಸ್ಸು ಮಿಲಿಯಾಂತರ ವರುಷಗಳಿಂದ ರೂಪುಗೊಂಡು ವಂಶವಾಹಿನಿಯಲ್ಲಿ ಹರಿದು ಬಂದ ಮನಸ್ಸು ಅದನ್ನೆಲ್ಲ ತನ್ನೊಳಗೆ ಕೂಡಿ ಕಳೆದು ಹೆಣ್ಣು ಒಂದು ನಿರ್ಧಾರಕ್ಕೆ ಬರುವಂತೆ ಮಾಡುತ್ತದೆ” ಸಾಗರ ಹಿಂದ್ಯಾವತ್ತೋ ಹೇಳಿದ್ದ ಮಾತುಗಳೇ ಕಿವಿಯಲ್ಲಿ ಗುಯ್‌ಗುಡುತ್ತಿತ್ತು. 

ಇನ್ನೇನು ಕರೆ ಕೊನೆಯಾಗಬೇಕೆಂದಿದ್ದಾಗ ರಿಸೀವ್‌ ಆಯಿತು. 

ಇಬ್ಬರೂ ʻಹಲೋʼ ಎನ್ನಲಿಲ್ಲ. 

ನಿಟ್ಟುಸಿರೊಂದನ್ನು ಹೊರಚೆಲ್ಲಿ ಮುಗುಳ್ನಕ್ಕಿದ್ದು ಇಬ್ಬರ ಅರಿವಿಗೂ ದಕ್ಕಿತು. 

* * * * *‌

ಓದಿ ಅಭಿಪ್ರಾಯ ತಿಳಿಸಿದ , ವಿಮರ್ಶಿಸಿದ ಎಲ್ಲಾ ಓದುಗರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮಭಿಪ್ರಾಯ ತಿಳಿಸಲು 9743006759.
ನಿರೀಕ್ಷೆಗೂ ಮೀರಿದಷ್ಟು ಮಂದಿ ಇ-ಪುಸ್ತಕವನ್ನು ಖರೀದಿಸಿ ಬೆಂಬಲಿಸಿದ್ದೀರಿ.
ಹಿಂಗ್ಯಾಕೆ ವೆಬ್‌ಪುಟದ ಓದುಗರ ಸಂಖೈ ಅಪಾರವಾಗಿ ಹೆಚ್ಚಲು ಈ ಕಾದಂಬರಿ ಸಹಾಯ ಮಾಡಿತೆಂದರದು ಅಚ್ಚರಿಯ ಮಾತೇನಲ್ಲ.
ಇನ್ನಷ್ಟು ಉಚಿತ ಕಾದಂಬರಿಗಳು ಹಿಂಗ್ಯಾಕೆಯಲ್ಲಿ ದೊರೆಯುವಂತಾಗಲು ನಿಮ್ಮ ಬೆಂಬಲ ಅತ್ಯಗತ್ಯ. 
ಉಚಿತವಾಗಿ ಓದಿದ ಕಾದಂಬರಿಗೆ ಹಣ ಸಂದಾಯ ಮಾಡುವ ಮನಸ್ಸು ನಿಮಗಿದ್ದಲ್ಲಿ ಪೇಟಿಎಮ್‌ ಅಥವಾ ಗೂಗಲ್‌ ಪೇ ಮೂಲಕ  9743006759 ಗೆ ನಿಮ್ಮಿಚ್ಛೆಯಷ್ಟು ಹಣ ಕಳಿಸಿ.
ಹಣ ನೀಡಲು ಈ ಲಿಂಕ್‌ ಅನ್ನು ಕೂಡ ಬಳಸಬಹುದು - https://www.instamojo.com/@hingyake/

1 comment:

  1. ಈ ಕಾದಂಬರಿ ಕೊನೆಯಾದ ಭಾವನೆ ಉಂಟಾಗಲಿಲ್ಲ, ಇದು ಅರ್ಧದಲ್ಲೇ ಕೊನೆಯಾದ ಭಾವನೆ ಮೂಡಿತು.

    ReplyDelete