Sep 26, 2020

ಒಂದು ಬೊಗಸೆ ಪ್ರೀತಿ - 81

ತಿಂಗಳು ಕಳೆಯಿತು ಜಗಳವಾಗಿ, ಅವಮಾನಿತಳಾಗಿ. ಎಲ್ಲ ಕಡೆಯಲ್ಲೂ ಒಂದಷ್ಟು ಶಾಂತಿ ನೆಲೆಸಿತ್ತು. ಅಮ್ಮ ನಿಧಾನಕ್ಕಾದರೂ ಮಾತಿಗೆ ತೊಡಗಿಕೊಂಡಿದ್ದಳು. ಅಮ್ಮನ ಮನೆಯೊಳಗೆ ನಾಲ್ಕೈದು ನಿಮಿಷ ಇದ್ದು ಬರುವುದನ್ನು ನಾನೂ ರೂಢಿಸಿಕೊಂಡೆ. ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಳ್ಳುತ್ತಿದ್ದ ಸೋನಿಯಾ ಕಾಟಾಚಾರಕ್ಕಾದರೂ ಸರಿಯೇ ಒಂದು ನಗು ಬಿಸಾಕುವಷ್ಟು ಮೃದುವಾಗಿದ್ದಳು. ಶಶಿ ಅಪ್ಪ ಆರಾಮಾಗೇ ಇದ್ದರು ನನ್ನ ಜೊತೆ. ರಾಜೀವನದೇ ಭಯ ನನಗೆ. ಅಚ್ಚರಿಯೆಂಬಂತೆ ಎಲ್ಲರಿಗಿಂತ ಮುಂಚಿತವಾಗೆ ನನ್ನೊಂದಿಗೆ ರಾಜಿ ಮಾಡಿಕೊಂಡವರಂತೆ ಬದಲಾದದ್ದು ಅವರೇ. ಅಫ್‌ಕೋರ್ಸ್‌ ಒಂದದಿನೈದು ದಿನ ಮಾತುಕತೆಯೇನೂ ಇರಲಿಲ್ಲ. ಆ ಹೂ ಉಹ್ಞೂ ಅಂತ ಶುರುವಾದ ಮಾತುಗಳು ಮತ್ತೊಂದು ವಾರ ಕಳೆಯುವಷ್ಟರಲ್ಲಿ ತೀರ ಮೊದಲಿನಷ್ಟು ಅಲ್ಲವಾದರೂ ಮೊದಲಿದ್ದ ಮಾತುಗಳಲ್ಲಿ ಅರ್ಧಕ್ಕೆ ಬಂದು ನಿಂತಿತ್ತು. ಕಳೆದೆರಡು ದಿನಗಳಿಂದಂತೂ ವಿಪರೀತವೆನ್ನಿಸುವಷ್ಟೇ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೆಲ್ಲ ಬೆಂಗಳೂರಿಗೆ ಹೋಗಿದ ನಂತರದ ಜೀವನಗಳ ಕುರಿತೇ ಇರುತ್ತಿತ್ತು. ಇನ್ನೇನು ರಿಸಲ್ಟ್‌ ಬರ್ತದೆ ಈ ತಿಂಗಳೋ ಮುಂದಿನ ತಿಂಗಳೋ. ಹೆಚ್ಚು ಕಮ್ಮಿ ಪಾಸ್‌ ಆಗೋದ್ರಲ್ಲಿ ಅನುಮಾನವೇನಿಲ್ಲ. ಈಗಾಗಲೇ ಒಂದು ತಿಂಗಳ ಬಾಂಡ್‌ ಮುಗಿದೇ ಹೋಗಿದೆ. ಇನ್ನೊಂದು ಹತ್ತು ತಿಂಗಳು ಕಳೆದುಬಿಟ್ಟರೆ ಮುಗೀತು, ಆರಾಮು ಬೆಂಗಳೂರಿಗೆ ಹೋಗಿಬಿಡಬಹುದು. ಮಗಳ ನೋಡಿಕೊಳ್ಳುವುದೊಂದು ಸಮಸ್ಯೆಯಾಗಬಹುದು. ಅಷ್ಟರಲ್ಲಿ ಮಗಳೂ ದೊಡ್ಡವಳಾಗಿರ್ತಾಳಲ್ಲ? ನಡೀತದೆ. ಬೆಂಗಳೂರಿನಲ್ಲೇನು ಹೆಜ್ಜೆಗೊಂದು ಡೇ ಕೇರ್‌ಗಳಿವೆಯಂತೆ. ಒಂದಷ್ಟು ಖರ್ಚಾಗ್ತದೆ ಹೌದು, ಆದರೂ ಹೆಂಗೋ ನಿಭಾಯಿಸಬಹುದು. ರಾಜೀವ ಒಂದಷ್ಟು ನೆಮ್ಮದಿ ಕಂಡುಕೊಂಡರೆ ಮಿಕ್ಕಿದ್ದೆಲ್ಲ ಸಲೀಸಾಗಿ ನಡೆದು ಹೋಗ್ತದೆ. 

ಆದ್ರೂ ಮೈಸೂರು ಬಿಟ್ಟು ಬೆಂಗಳೂರಿಗೆ ಸೆಟಲ್‌ ಆಗಲು ಹೋಗುವುದು ಬಾಲಿಶ ನಿರ್ಧಾರದಂತೇ ತೋರ್ತದೆ. ಅದೂ ಮೈಸೂರಿನಲ್ಲೇ ಕೈ ತುಂಬಾ ಸಂಬಳ ಸಿಗುವ ಕೆಲಸ ದಕ್ಕುವಾಗ. ಮಗಳನ್ನು ನೋಡಿಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಜೊತೆಗೆ ಫಸ್ಟ್‌ ಹೆಲ್ತ್‌ ಒಂಥರಾ ಎರಡನೇ ಮನೆಯಂತೆಯೇ ಆಗಿ ಹೋಗಿದೆ. ಎಲ್ಲರೊಡನೆಯೂ ಒಗ್ಗಿ ಹೋಗಿದ್ದೇನೆ. ಕಷ್ಟ ಸುಖ ಹಂಚಿಕೊಂಡು ಕಿತ್ತಾಡೋಕೆ ಸುಮ ಇದ್ದಾಳೆ. ರಾಮ್‌ನಂತಹ ಒಳ್ಳೆ ಗೆಳೆಯ ಕೂಡ ಇದ್ದಾನೆ. ಇರೋದ್ರಲ್ಲಿ ನಮ್‌ ಡಿಪಾರ್ಟ್‌ಮೆಂಟೇ ಕಿರಿಕಿರಿ ಇಲ್ಲದೆ ನಡೀತಿರೋದು. ಇಷ್ಟೆಲ್ಲ ಸೌಕರ್ಯಗಳಿರುವಾಗ ಮೈಸೂರು ಬಿಟ್ಟು ಹೋಗಲು ಮನಸ್ಸಾಗುವುದಾದರೂ ಹೇಗೆ? ಸುಮ್ಮನೆ ಕ್ಲಿನಿಕ್‌ ಮಾಡಿಕೊಂಡು ಇವರಿಗೊಂದು ಫಾರ್ಮಸಿ ಇಟ್ಟುಕೊಟ್ಟರೆ ಆಗ್ತದೋ ಏನೋ? ಅಂತನ್ನಿಸ್ತದೆ. ಆದರೆ ಕ್ಲಿನಿಕ್‌ ಇಡೋದಂದ್ರೆ ಭಯ. ಕ್ಲಿನಿಕ್ಕು ಚೆನ್ನಾಗಿ ನಡೆಯುವಂತಾಗಲು ವರುಷ ಎರಡು ವರುಷವಾದರೂ ಕಾಯಬೇಕು. ಅಷ್ಟು ಕಾದರೂ ಕ್ಲಿಕ್‌ ಆಗೇ ಆಗ್ತದೆ ಅಂತೇನೂ ಇಲ್ಲ. ಕ್ಲಿಕ್‌ ಆದರೂ ಬೇರೆಯವರು ಎಲ್ಲಿ ಹೊಸ ಕ್ಲಿನಿಕ್‌ ತೆಗೆದು ಸ್ಪರ್ಧೆ ನೀಡಿಬಿಡ್ತಾರೋ ಅನ್ನೋ ಭಯ ಇದ್ದೇ ಇದೆ. ಇನ್ನು, ಕ್ಲಿನಿಕ್‌ ನಿರೀಕ್ಷೆಗೂ ಮೀರಿ ಗೆದ್ದು ಬಿಟ್ಟರೆ ಮನೆಯ ಕಡೆಗೆ, ಮಗಳ ಕಡೆಗೆ ಗಮನವೇ ಕೊಡದಷ್ಟು ಕೆಲಸವಾಗಿಬಿಡ್ತದೆ. ರಜಾ ಹಾಕೋಕಾಗಲ್ಲ, ಅಯ್ಯೋ ಇವತ್‌ ಯಾಕೋ ಬೋರು ಮನೇಲೇ ಇದ್ದು ಬಿಡುವ ಅನ್ನುವಂಗಿಲ್ಲ, ಜನ ಬರಲಿ ಬರದೇ ಹೋಗಲಿ ಘಂಟೆ ಹೊಡೀತಿದ್ದಂಗೇ ಹೋಗಿ ಕ್ಲಿನಿಕ್ಕಿನ ಬಾಗಿಲು ತೆರೆದು ಕುಳಿತುಕೊಳ್ಳಲೇಬೇಕು. ಯಪ್ಪ! ಬೆಂಗಳೂರಿಗೆ ಹೋಗಿ ಯಾವುದಾದರೂ ಆಸ್ಪತ್ರೆಯಲ್ಲಿ ನೆಲೆ ಕಂಡುಕೊಳ್ಳುವುದು ಉತ್ತಮ, ಕ್ಲಿನಿಕ್‌ ಗ್ಲಿನಿಕ್‌ ಆಟ ನನಗಲ್ಲ. 

ಥೂ ಥೂ! ಇದ್ಯಾಕೆ ತಲೆಯಲ್ಲಿ ಇಷ್ಟೆಲ್ಲ ಆಲೋಚನೆಗಳು ಬರ್ತವೆ. ಒಂದಕ್ಕೊಂದು ಸಂಬಂಧಪಟ್ಟ ಸಂಬಂಧವಿರದ ಯೋಚನೆ ಯೋಜನೆಗಳು ಅಡೆತಡೆಯೇ ಇಲ್ಲದೆ ಹರಿಯುತ್ತಲೇ ಇರುತ್ತವಲ್ಲ? ಭಾನುವಾರ ಅರ್ಧ ದಿನದ ಕೆಲಸ ಮುಗಿಸಿಕೊಂಡು ಅಮ್ಮನ ಮನೆಗೆ ಬಂದು ಚಿಕನ್‌ ಬಿರಿಯಾನಿ ತಿಂದು ಮನೆಗೆ ಹೊರಡುವವಳಿದ್ದೆ, ರಾಧ ಮಲಗಿಬಿಟ್ಟಿದ್ದಳು. ಸರಿ ಪುರುಸೊತ್ತಾಗಿ ಟಿವಿ ನೋಡುವ ಅಂತ ಉದಯ ಮೂವೀಸ್‌ನಲ್ಲಿ ಬರುತ್ತಿದ್ದ ಸಿನಿಮಾ ಹಾಕಿದವಳ ಮನದಲ್ಲಿ ಅದ್ಯಾವ ಸಿನಿಮಾ ಅನ್ನೋದು ಕೂಡ ಅರಿವಿಗೆ ಬರದಂತೆ ಯೋಚನೆಗಳ ಬೋರ್ಗರೆವ ಪ್ರವಾಹ. ಯಾಕೋ ಇತ್ತೀಚೆಗೆ ಈ ರೀತಿ ಪದೇ ಪದೇ ಆಗ್ತಿದೆ. ಮಗಳ ಜೊತೆ ಆಟವಾಡುವಾಗೆಲ್ಲ ಆಸ್ಪತ್ರೆಯಲ್ಲಿದ್ದ ರೋಗಿಗಳ ಯೋಚನೆ, ಆಸ್ಪತ್ರೆಯಲ್ಲಿದ್ದಾಗೆಲ್ಲ ಮಗಳೇನು ಮಾಡುತ್ತಿರಬಹುದು ಎನ್ನುವ ಚಿಂತೆ, ಸುಮಾ ಜೊತೆ ಮಾತನಾಡುವಾಗ ಪರಶು ಎಲ್ಲಿರಬಹುದು ಈಗ ಅನ್ನಿಸಿದರೆ ರಾಮ್‌ ಜೊತೆ ಕಾಫಿ ಕುಡಿಯುವಾಗ ಸಾಗರ ತೀರ ಇಷ್ಟೊಂದು ದೂರ ಮಾಡಿಬಿಟ್ನಲ್ಲ ಅಂತ ಚಿಂತೆ, ರಾಜೀವನ ಜೊತೆ ಹರಟುವಾಗ ಸುಮಾ ಬೆಳಿಗ್ಗೆಯೋ ನಿನ್ನೆಯೋ ಹೇಳಿದ್ದ ಆಸ್ಪತ್ರೆಯ ವಿಷಯದ ಬಗ್ಗೆ ಚಿಂತಿಸುವ ಮನಸ್ಸು...... ಒಟ್ಟಿನಲ್ಲಿ ಪ್ರಸ್ತುತದಲ್ಲಿ ಬದುಕುವ, ಪ್ರಸ್ತುತವನ್ನು ಅನುಭವಿಸುವುದನ್ನೇ ಮರೆತಂತೆ ವರ್ತಿಸುತ್ತಿದ್ದೀನಿ ನಾನು. ದೇಹ ವಾಸ್ತವದಲ್ಲಿದ್ದರೂ ಮನಸ್ಸು ಭೂತದಲ್ಲೋ ಭವಿಷ್ಯದಲ್ಲೋ ವಿಹರಿಸುವುದು ತೀರ ಅಸಾಮಾನ್ಯ ಸಂಗತಿಯೇನಲ್ಲ, ಹೌದು. ಕ್ಷಣದಷ್ಟು ವಿಹರಿಸಿದರೆ ಪರವಾಗಿಲ್ಲ, ದಿನ ಪೂರ್ತಿ ವಿಹರಿಸುತ್ತಿದ್ದರೆ ಕಷ್ಟ ಕಷ್ಟ. ಕರೆಂಟ್‌ ಹೋಯಿತು. ಕೊನೆಗೂ ಉದಯ ಮೂವೀಸ್‌ನಲ್ಲಿ ಬರುತ್ತಿದ್ದ ಸಿನಿಮಾ ಯಾವುದೆಂಬುದೇ ತಿಳಿಯಲಿಲ್ಲ. ಹೀರೋ ಹೀರೋಯಿನ್ನು ಯಾರಿದ್ದರು ಎನ್ನುವುದೂ ಅರಿವಾಗಲಿಲ್ಲ. ನಾಳೆ ಆಸ್ಪತ್ರೆಯಲ್ಲಿ ಕೇಸ್‌ ನೋಡಬೇಕಾದರೆ ನೆನಪಾಗ್ತದೋ ಏನೋ ಎಂದುಕೊಂಡು ನಕ್ಕೆ. ಮಗಳಿನ್ನು ಎದ್ದಿರಲಿಲ್ಲ. ಎದ್ದುಬಿಟ್ಟಿದ್ದರೆ ಮನೆಗೋಗಿ ಒಂದಷ್ಟು ಕೆಲಸಗಳನ್ನಾದರೂ ಮಾಡಿಕೊಳ್ಳಬಹುದಿತ್ತು. ರಾಜೀವೂ ಹೊರಗೋಗಿದ್ದಾರೆ, ಅವರಾದರೂ ಇದ್ದಿದ್ದರೆ ಮನೆಗೋಗಿ ಒಂದಷ್ಟು ಕೆಲಸ ಮಾಡಿಕೊಂಡು ಅವರಿಗೆ ಮೂಡ್‌ ಇದ್ದರೆ ಒಂದು ರೌಂಡು ಸೆಕ್ಸ್‌ ಮಾಡಿಕೊಂಡು ಸಂಜೆ ಬಂದು ಮಗಳನ್ನು ಕರೆದುಕೊಂಡು ಹೋಗಬಹುದಿತ್ತು. ಸೆಕ್ಸ್‌ ಮಾಡಿ ತಿಂಗಳುಗಳೇ ಉರುಳಿ ಹೋಗಿವೆ! ನಂಗೇನೋ ಮಗಳು ಕೆಲಸ ಅಂತ ಮರೆತಂತಾಗಿದೆ, ಬೇಡ ಅನ್ನಿಸೋವಷ್ಟೇನೂ ಮರೆತೋಗಿಲ್ಲ. ಅವರಿಗಾದರೂ ಬೇಕು ಅಂತ ಅನ್ನಿಸೋದೇ ಇಲ್ಲವಾ? ಸುಮ್ಮನೆ ಒಂಚೂರು ಕೆಣಕಿದರೂ ನಾ ರೆಡಿಯಾಗೇ ಬಿಡ್ತೀನಪ್ಪ! ಸೆಕ್ಸ್‌ ಲೈಫ್‌ ಇಷ್ಟೊಂದು ಸಪ್ಪೆ ಸಪ್ಪೆಯಾಗೋಗುತ್ತೆ ಅಂತಂದುಕೊಂಡಿರಲಿಲ್ಲ. ಸಾಗರ ಇದ್ದಿದ್ದರೆ..... ಥೂ ಥೂ ಮತ್ತದೇ ಆಲೋಚನೆಗಳ ಸರಣಿ. ತಲೆ ಕೊಡವಿಕೊಂಡು ದಿವಾನದಿಂದ ಮೇಲೆದ್ದು ಮೇಜಿನ ಮೇಲೆ ಯಾರೂ ಮುಟ್ಟದೆ ಅನಾಥವಾಗಿ ಬಿದ್ದಿದ್ದ ಮ್ಯಾಗಜೀನ್‌ ಒಂದನ್ನು ಕೈಗೆತ್ತಿಕೊಂಡೆ. 

ಅರ್ಧಂಬರ್ಧ ನಿದ್ರೆಯಲ್ಲಿಯೇ ಎದ್ದ ಮಗಳು ಮನೆಗೆ ಹೋಗುವುದಕ್ಕೇ ತಯಾರಿಲ್ಲ. ಇತ್ತೀಚೆಗಂತೂ ಇಲ್ಲೇ ಇರ್ತೀನಿ ಅಂತ ಹಟ ಮಾಡೋದು ಜಾಸ್ತಿಯಾಗಿಬಿಟ್ಟಿದೆ. ಮನೆಗೋದ್ರೆ ನಾ ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳದೇ ಇರಲಾಗುವುದಿಲ್ಲ. ಇನ್ನಿವರಪ್ಪ ಬರೋದೇ ಲೇಟು ಸ್ವಲ್ಪ. ಬೇಗ ಬಂದರೂ ಎತ್ತಿ ಮುದ್ದಾಡಿಸಿ ಆಟವಾಡುವುದನ್ನೆಲ್ಲ ಮರೆತೇಬಿಟ್ಟಿದ್ದಾರೆ. ಮಧ್ಯೆ ಒಂದಷ್ಟು ದಿನ ಪರವಾಗಿಲ್ಲ ಅನ್ನುವಂತೆ ಬದಲಾಗಿದ್ದರು. ಸೋನಿಯಾ ಕಿವಿ ಕಚ್ಚಿದ ಮೇಲೆ ಮತ್ತೆ ಹಿಂದಿನಂತೇ ಆಗಿಬಿಟ್ಟಿದ್ದಾರೆ. ಮಗಳೆಂದರೆ ಆಗುವುದಿಲ್ಲ. ಹೋಗ್ಲಿ ನನಗೆ ರಾಮ್ ಜೊತೆಗೆ ಸಂಬಂಧ ಇರುವುದೇ ಹೌದೆನ್ನುವುದಾದರೆ ನನಗೆ ಶಿಕ್ಷೆ ಕೊಟ್ಟಿಕೊಳ್ಳಲಿ, ಮಗಳೇನು ಮಾಡಿದ್ದಳು? ಪುಣ್ಯಕ್ಕೆ ನಮಗೆ ಐ.ಯು.ಐ ಮೂಲಕ ಮಕ್ಕಳಾಗಿದ್ದು. ಹಂಗೇ ಸೆಕ್ಸ್ ಮಾಡಿ ನಾರ್ಮಲ್ಲಾಗಿ ಇವಳು ಹುಟ್ಟಿಬಿಟ್ಟಿದ್ದರೆ ಈ ಮಗು ನನ್ನದಲ್ಲವೇ ಅಲ್ಲ ಅಂತ ವಾದಿಸಿ ಗೆದ್ದು ಬಿಡುತ್ತಿದ್ದರೋ ಏನೋ. ಕರ್ಮ. 

ಮಗಳನ್ನು ಪುಸಲಾಯಿಸಿದಷ್ಟೂ ಅವಳ ಹಟ ಹೆಚ್ಚಾಗುತ್ತಿತ್ತು. ಅವಳ ಹಟದಲ್ಲೂ ತಪ್ಪೇನಿಲ್ಲವಲ್ಲ. ಇಲ್ಲಾದರೆ ಅವಳಜ್ಜಿ, ತಾತ, ಮಾಮ, ಸೋನತ್ತೆ ಎಲ್ಲಾ ಆಟವಾಡಿಸಿಕೊಂಡಿರುತ್ತಾರೆ. ಅಲ್ಲಿಗೆ ಬಂದರೆ ಟಿವೀನೋ ಮೊಬೈಲೋ ನೋಡುವುದನ್ನು ಬಿಟ್ಟು ಮತ್ತೇನಿದೆ? ನಾ ಅಡುಗೆ ಕೆಲಸ ಮತ್ತೊಂದು ಕೆಲಸವೆಲ್ಲ ಮುಗಿಸುವಷ್ಟರಲ್ಲಿ ಊಟದ ಸಮಯವಾಗಿರುತ್ತೆ, ಊಟ ಮಾಡಿ ಮಲಗಿ ಬಿಡುತ್ತಾಳೆ. ಇನ್ನು ಆಟಕ್ಕೆ ಸಮಯವೆಲ್ಲಿದೆ? ಆಸ್ಪತ್ರೆಯಲ್ಲಿ ಬರುವ ಮಕ್ಕಳ ತಾಯಂದಿರಿಗೆಲ್ಲ ಮಕ್ಳಿಗೆ ಜಾಸ್ತಿ ಮೊಬೈಲ್ ಕೊಡಬೇಡಿ, ಟಿವಿ ನೋಡೋ ಸಮಯ ಕೂಡ ಕಮ್ಮಿ ಇರಬೇಕು ಅಂತೆಲ್ಲ ಬುದ್ವಾದ ಹೇಳಿ ಹೇಳಿ ಮನೆಗೆ ಬಂದು ನನ್ನ ಕೆಲಸ ಮುಗಿಸುವ ಸಲುವಾಗಿ ಮಗಳ ಕೈಗೆ ಮೊಬೈಲ್ ಕೊಡೋ ಅಮ್ಮ ನಾನು! ಎಂತ ಹಿಪೋಕ್ರೈಟ್ ಅಲ್ವ. ನನಗೆ ನಾನೇ ಬಯ್ದುಕೊಂಡಿದ್ದಕ್ಕೆ ಮಗಳ ಮೇಲೆ ಸಿಟ್ಟು ಬಂದು ʻನಿಂದೊಂದು ಕಾಟ ನನಗೆ. ನಡೀ ಸುಮ್ನೆ' ಅಂತಂದು ಕುಂಡಿಯ ಮೇಲೊಂದು ರಪ್ಪಂತ ಬಾರಿಸಿದೆ. 

"ಅದ್ಯಾಕಂಗ್ ಆಡ್ತಿ. ನೀನೂ ಇಲ್ಲೇ ಇದ್ರಾಯ್ತು ಇವತ್ತು" ಅಪ್ಪನ ಮಾತು ಕೇಳಿದ ಮಗಳ ಅಳುವ ಕಂಗಳಲ್ಲೂ ಮಿಂಚಿನ ನರ್ತನ. ಆಹಾ! ಈ ಚಿಕ್ ವಯಸ್ಸಿಗೇ ಏನೇನ್ ನಾಟ್ಕ ಆಡ್ತಾವಪ್ಪ! 

ʻಅಯ್ಯೋ ಸುಮ್ನಿರಪ್ಪ. ಒಂದಿನ ಅವಳ ಹಟಕ್ಕೆ ಬಗ್ಗಿದರೆ ದಿನಾ ಅದೇ ಅಭ್ಯಾಸ ಮಾಡ್ಕೋತಾಳೆ. ಮನೇಲ್ ಕೆಲಸಗಳಿವೆ ಇನ್ನೂ' 

"ಕೆಲಸ ಇದ್ರೆ ನೀ ಹೋಗು, ಮಗಳಿಗ್ಯಾಕೆ ಹೊಡೀತೀಯ?" ಅಮ್ಮ ಹೇಳಿದ್ದು "ನೀ ಮೊದ್ಲು ತೊಲಗು. ಅವಳಿರಲಿ ಇಲ್ಲಿ" ಅಂತ ಕೇಳಿಸಿತು. 

ʻಏನ್ ಪರವಾಗಿಲ್ಲ. ಬರ್ತಾಳೆ. ಅಲ್ವ ಪುಟ್ಟು' ಅಂತ ಮುದ್ದು ಮಾಡಲೋದವಳ ಕೈ ಮೇಲೊಂದು ಪಟ್ಟಂತ ಹೊಡೆದಳು ಮಗಳು. ವಿಪರೀತ ನೋವಾದವಳಂತೆ ಮುಖ ಕಿವುಚಿದೆ. ನನ್ನ ಮಗಳು ಮತ್ತೇನಾದರೂ ಸಹಿಸಿಯಾಳು. ಅವಳಮ್ಮನ ಮುಖದಲ್ಲಿ ನೋವು ಕಾಣಿಸಿಕೊಂಡರೆ ನರಳಿಬಿಡುತ್ತಾಳೆ. "ನಡೀಲಿ ಹೋಗೋಣ" ಅಂದಳು ಕಣ್ಣೀರೊರೆಸಿಕೊಳ್ಳುತ್ತ. 

ನನ್ನ ಮಗಳು ನನ್ನ ಮಾತೇ ಕೇಳೋದು ನೋಡಿ ಅಂತ ಅಪ್ಪ ಅಮ್ಮನ ಕಡೆಯಿಂದ ಗರ್ವದಿಂದ ನೋಡಿ ಮಗಳೊಡನೆ ಹೊರಟೆ. ಸ್ಕೂಟರ್ ಹತ್ತುವ ಮುಂಚೆ "ಐಸ್ಕ್ರೀಂ" ಅಂತ ಆರ್ಡರ್ ಮಾಡಿದಳು ಮಗಳು. ಇದನ್ನು ನಿರಾಕರಿಸಿದರೆ ಕಷ್ಟವಿದೆ ಇವತ್ತು. ʻಓಕೆ. ದಿನಾ ಕೇಳಬಾರದು. ಇವತ್ತೊಂದಿನ ಮಾತ್ರ' ಎಂದು ನಗುತ್ತಾ ಹೇಳಿ ಮುಂದೆ ನಿಲ್ಲಿಸಿಕೊಂಡೆ. 

ಐಸ್ ಕ್ರೀಂ ತಿಂದ ಮೇಲೆ ನಂಗೇ ಯಾಕೋ ಮಸಾಲೆ ಪುರಿ ಪಾನಿ ಪುರಿ ಎಲ್ಲಾ ತಿನ್ನುವ ಮನಸ್ಸಾಗಿ ತಿಂದ ಮೇಲೆ ಮಗಳಿಗೊಂದಷ್ಟು ನನಗೊಂದಷ್ಟು ಅಂತ ಬಟ್ಟೆ ತೆಗೆದುಕೊಳ್ಳುವ ಮನಸ್ಸಾಗಿ ದೇವರಾಜ್ ಅರಸ್ ರಸ್ತೆಯಲ್ಲಿರೋ ಅಂಗಡಿಗಳನ್ನೆಲ್ಲ ಸುತ್ತಾಡಿಕೊಂಡು ಮನೆ ತಲುಪುವಷ್ಟರಲ್ಲಿ ಘಂಟೆ ಎಂಟಾಗಿಬಿಟ್ಟಿತ್ತು. ಮನೆಕೆಲಸ? ಅಯ್ಯೋ ಬೆಳಿಗ್ಗೆ ನೋಡ್ಕೊಳ್ಳುವ, ಹೋಗಿ ಮಲಗಿದರೆ ಸಾಕಾಗಿದೆ. ಹಾಲಿನಲ್ಲಿ ಬೆಳಕಿತ್ತು. ರಾಜೀವ್ ಅಪರೂಪಕ್ಕೆ ಎಂಟಕ್ಕೆಲ್ಲ ಮನೆ ಸೇರಿಬಿಟ್ಟಿದ್ದಾರಿವತ್ತು! ಕಾಲಿಂಗ್ ಬೆಲ್ ಒತ್ತಿದೆ. ಬಾಗಿಲು ತೆರೆದದ್ದು ರಾಜೀವಲ್ಲ, ರಾಮ್ ಪ್ರಸಾದ್! 

ನೀವೇನಿಲ್ಲಿ? ಅನ್ನೋ ಪ್ರಶ್ನೆ ನನ್ನ ಮುಖದ ಮೇಲಿತ್ತು! ಇದೇನ್ ನೀವ್ ಬಂದ್ಬಿಟ್ಟಿದ್ದೀರಿ ಅನ್ನೋ ಅಚ್ಚರಿ ಅವರಲ್ಲಿತ್ತು. ಅವರ ತಲೆ ಸುತ್ತಮುತ್ತ ಹಿಂದಕ್ಕೆ ಕಣ್ಣಾಡಿಸಿದೆ. ರಾಜೀವ ಕಾಣಲೇ ಇಲ್ಲ. ಇಬ್ಬರ ಮೌನದ ಪ್ರಶ್ನೆಗಳನ್ನು ಮುರಿದ ಮಗಳು "ದಾಲಿ ಬಿಡಮ್ಮ ಒಲಗೋಗ್ಬೇಕು" ಅಂದಳು. 

"ಬನ್ನಿ ಬನ್ನಿ ಒಳಗೆ" ಅಂದರು ರಾಮ್. 

ʻನನ್ ಮನೇಗ್ ನಾನೇ ಅತಿಥಿ ಅನ್ನಿ' ಎಂದು ನಗುತ್ತಾ ಒಳಗೆ ಕಾಲಿಟ್ಟೆ. ಟೇಬಲ್ಲಿನ ಮೇಲೆ ಮುಚ್ಚುಳ ತೆರೆಯದ ಎರಡು ಬಿಯರ್ ಬಾಟಲುಗಳಿದ್ದವು. ಬಾಟಲಿಯ ಮೇಲೆ ತುಂಬಾ ತಣ್ಣಗಿದ್ದೀನಿ ಕಣ್ರೋ ನಾನು ಎನ್ನುವುದನ್ನು ಸಾರಿ ಹೇಳುವಂತೆ ಕೆಳಮುಖವಾಗಿ ಚಲಿಸುತ್ತಿದ್ದ ನೀರ ಬಿಂದುಗಳು. 

ರಾಜೀವಿರುವ ಯಾವ ಸೂಚನೆಯೂ ಕಾಣಲಿಲ್ಲ. ನನ್ನ ಕಣ್ಣುಡುಕಾಟವನ್ನು ಗಮನಿಸಿ "ರಾಜೀವ್ ಇಲ್ಲೇ ಹೊರಗೋಗಿದ್ದಾರೆ. ಕಬಾಬ್ ಏನಾದ್ರೂ ತಗಂಡು ಬರ್ತೀನಿ ಅಂತ ಹೋದ್ರು" ಎಂದರು ರಾಮ್. ಬದಲೇನೇಳಬೇಕೆಂದು ತಿಳಿಯಲಿಲ್ಲ. 

"ಸುಸ್ಸು" ಅಂತಂದ ಮಗಳನ್ನು ಕರೆದುಕೊಂಡು ಬಾತ್ ರೂಮಿಗೋಗಿ ಸುಸ್ಸು ಮಾಡಿಸಿ ಅವಳ ಕೈ ಕಾಲು ತೊಳೆದು, ನಾನೂ ತೊಳೆದುಕೊಂಡು ಮಗಳ ಬಟ್ಟೆ ಬದಲಿಸಲು ರೂಮಿನೊಳಗೊಕ್ಕೆ. 

"ಸಾರಿ ಧರಣಿ. ನೀವ್ ಬರ್ತೀರ ಅಂತ ಗೊತ್ತಿರಲಿಲ್ಲ. ಇಷ್ಟೊತ್ತಾದ ಮೇಲೆ ಬರಲ್ಲ ಅವಳು, ಅಮ್ಮನ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ ಅಂತಂದ್ರು ರಾಜೀವ್. ಹಂಗಾಗಿ ಇಲ್ಲೇ ಉಳಿದೆ. ನೀವ್ ಬೇಸರ ಮಾಡಬೇಡಿ. ರಾಜೀವ್ ಬಂದ ಮೇಲೆ ನಾವ್ ಹೊರಗೆಲ್ಲಾದ್ರೂ ಹೋಗ್ ಬರ್ತೀವಿ" 

ರಾಮ್ ನನಗೂ ಸ್ನೇಹಿತನೇ ಅಲ್ಲ. ಮನೆಗೆ ಬಂದು ರಾಜೀವ್ ಜೊತೆ ಕುಡಿಯೋದಿಕ್ಕೆ ನನ್ನ ಅಭ್ಯಂತರವೇನಿಲ್ಲ. ನನಗೆಂತ ಬೇಸರವೂ ಇಲ್ಲ, ಕುಡಿದ ಮೇಲೆ ಮಾತುಗಳು ಎತ್ತೆತ್ತಗೋ ಹೋಗಿ ರಾಜೀವ ಗಲಾಟೆ ಮಾಡಿಕೊಂಡುಬಿಟ್ಟರೆ ಅನ್ನೋ ಭಯ. ರಾಮ್‌ಗೆ ಮನೆಯಲ್ಲಿ ನಡೆದ ವಿಷಯ ಸೂಕ್ಷ್ಮವಾಗಿಯಾದರೂ ತಿಳಿಸಿದ್ದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲವೇನೋ? ಕೊನೇ ಪಕ್ಷ ರಾಜೀವ್ ಮನೆಯಲ್ಲಿ ಕುಡಿಯುವ ಬನ್ನಿ ಅಂತಂದಾಗ ಇಲ್ಲ ಬೇರೆ ಕೆಲಸವಿದೆ ಅಂತ ನುಣುಚಿಕೊಂಡುಬಿಡುತ್ತಿದ್ದರೇನೋ? ಇತ್ತೀಚೆಗಂತೂ ಸುಮಾ ಬಹಳಷ್ಟು ಸಲ ಹೇಳುತ್ತಲೇ ಇದ್ದಳು, ಅವರಿಗೂ ವಿಷಯ ಗೊತ್ತಿರಲಿ ಅಂತ. ಮನೆಯಲ್ಲೂ ವಾತಾವರಣ ತಿಳಿಯಾಗಿತ್ತು, ರಾಜೀವ್ ಕೂಡ ಆ ವಿಷಯವನ್ನು ಮತ್ತೆ ಪ್ರಸ್ತಾಪಿಸಿರಲಿಲ್ಲ. ಎಲ್ಲಾ ಶಾಂತವಾಗಿರುವಾಗ ನಾನ್ಯಾಕೆ ಕಲ್ಲು ಬೀಸಲಿ? ಸುಮಾಳ ಮಾತುಗಳನ್ನು ನಿರ್ಲ್ಯಕ್ಷಿಸಿದ್ದೆ. ರಾಮ್ ರಾಜೀವ್ ಮಧ್ಯೆ ಮಧ್ಯೆ ಸಿಗ್ತಾನೇ ಇದ್ರಾ ಹೋಟೆಲ್ಲುಗಳಲ್ಲಿ? ಹಂಗಿದ್ರೆ ಸಮಸ್ಯೆಯಾಗುವುದಿಲ್ಲ. 

ಇಷ್ಟೊಂದೆಲ್ಲ ಮೌನವಾಗುಳಿದುಬಿಟ್ಟರೆ ಅವರಾದರೂ ಏನಂದುಕೊಳ್ಳುವುದಿಲ್ಲ? ಮಗಳಿಗೆ ಬಟ್ಟೆ ಬದಲಿಸುತ್ತಲೇ ʻಏನ್ ಇಬ್ರೂ ಎಷ್ಟ್ ಸಲ ಸೇರ್ತೀರಾ ಕುಡಿಯೋಕೆ' ಬೇಡ ಬೇಡ ಅಂದುಕೊಂಡರೂ ವ್ಯಂಗ್ಯದಿಂದಲೇ ಕೇಳಿದೆ. 

"ಅಯ್ಯೋ ರೀ!..... ರಾಜೀವ್ ಸಿಕ್ಕೇ ಹತ್ತಿರತ್ತಿರ ಎರಡು ತಿಂಗಳೇ ಆಗಿಹೋಯಿತೇನೋ...." 

ಅಯ್ಯಯ್ಯೋ.... ಅಂದ್ರೆ ಮನೆಯಲ್ಲಿ ಜಗಳ ನಡೆದ ತರುವಾಯ ಇವರಿಬ್ಬರು ಭೆಟ್ಟಿಯಾಗಿಯೇ ಇಲ್ಲ. ಇದೇ ಮೊದಲ ಭೇಟಿ. ಜಗಳವಾಡೋದಿಕ್ಕೇ ಕರೆಸಿದ್ದಾರ ರಾಜೀವು? ಇರಲಾರದು. ಅವರಿಗೂ ಅನುಮಾನಗಳಿತ್ತೇನೋ, ಅದಕ್ಕೇ ಇಷ್ಟು ದಿನ ಸಿಗಲೋಗಿಲ್ಲ. ಈಗ ಅನುಮಾನಗಳಿಲ್ಲವೇನೋ, ಹಂಗಾಗಿ ಪಶ್ಚಾತ್ತಾಪಕ್ಕಾಗಿ ಇವತ್ತಿನ ಪಾರ್ಟಿಯಿರಬಹುದು. ಬಟ್ಟೆ ಬದಲಿಸುವಷ್ಟರಲ್ಲೇ ಮಗಳು ನಿದ್ರೆ ಹೋಗಿಬಿಟ್ಟಳು. ಅವಳನ್ನು ಮಲಗಿಸಿ ಸೊಳ್ಳೆ ಪರದೆ ಕಟ್ಟಿ ಹಾಸಿಗೆಯ ಅಂಚಿಗೆಲ್ಲ ಸರಿಯಾಗಿ ಸಿಕ್ಕಿಸಿದವಳ ಕಣ್ಣು ಎಳೆಯುತ್ತಿತ್ತು. ರಾಮ್ ಅಲ್ಲಿ ಹಾಲಲ್ಲಿ ಕುಳಿತಿರುವಾಗ ನಾ ಇಲ್ಲಿ ಮಲಗಿಬಿಡೋದು ಸಭ್ಯಸ್ಥಿಕೆಯಲ್ಲವಲ್ಲ ಎಂದುಕೊಂಡು ಬಲವಂತದಿಂದ ಕಣ್ರೆಪ್ಪೆಗಳನ್ನು ತೆರೆಯುತ್ತಾ ಹಾಲಿಗೆ ಬಂದು ಕುಳಿತೆ. ಟಿವಿಯಲ್ಲಿ ಬರುತ್ತಿದ್ದ ಯಾವುದೋ ರಿಯಾಲಿಟಿ ಶೋ ಕಡೆಗೆ ಕಣ್ಣು ನೆಟ್ಟವರಿಬ್ಬರೂ ರಾಜೀವನ ಬರುವಿಕೆಗಾಗಿ ಕಾಯುತ್ತ ಕುಳಿತೆವು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment