Dec 16, 2015

ಈ ನಿಯತ್ತಿಗೆ ಮೂವತ್ತು ಸಾವಿರ ವರ್ಷ!

ನಿಯತ್ತಿಗೆ ಮತ್ತೊಂದು ಹೆಸರು ನಾಯಿ! ತೋಳಗಳ ಪ್ರಪಂಚದಿಂದ ಹೊರಜಿಗಿದು ಮನುಷ್ಯನ ಸಹವಾಸಕ್ಕೆ ನಾಯಿಗಳು ಬಿದ್ದು ಎಷ್ಟು ವರುಷಗಳಾಗಿರಬಹುದು, ನಾಯಿಗಳ ಜನನ ಮೊದಲು ಪ್ರಾರಂಭವಾದದ್ದೆಲ್ಲಿ ಎನ್ನುವುದನ್ನು ತಿಳಿಯಲು ಚೀನಾದ ವಿಜ್ಞಾನಿಗಳು ಶ್ರಮಿಸಿದ್ದಾರೆ. ಇದಮಿತ್ಥಮಂ ಇಂತಹ ಜಾಗವೇ ನಾಯಿಗಳ ಉಗಮಸ್ಥಾನ ಎಂದು ಹೇಳಲು ಸಂಪೂರ್ಣ ಸಾಧ್ಯವಾಗಿಲ್ಲವಾದರೂ ತಳಿಶಾಸ್ತ್ರದ ಅಧ್ಯಯನದ ಮೂಲಕ ದಕ್ಷಿಣ ಏಷ್ಯಾ ಖಂಡದಲ್ಲಿ ಮನುಷ್ಯ ಮತ್ತು ನಾಯಿಯ ಸಹಬಾಳ್ವೆ ಪ್ರಾರಂಭವಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹನ್ನೆರಡು ತೋಳ, ಏಷ್ಯಾ ಮತ್ತು ಆಫ್ರಿಕಾದ ಇಪ್ಪತ್ತೇಳು ಪುರಾತನ ನಾಯಿಗಳು, ಈಗ ಪ್ರಸ್ತುತದಲ್ಲಿ ಇರುವ ಹತ್ತೊಂಭತ್ತು ವಿವಿಧ ತಳಿಯ ನಾಯಿಗಳ ತಳಿ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಮೂವತ್ತು ಸಾವಿರ ವರುಷಗಳ ಹಿಂದೆ ತೋಳದಿಂದ ನಾಯಿ ಬೇರ್ಪಟ್ಟಿತು.

ಈ ನಾಯಿಯ ಉಗಮದ ಹಿಂದಿನ ಸ್ವಾರಸ್ಯಕರ ಕತೆಯನ್ನು ಡಿಸ್ಕವರಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತೋರಿಸಿದ್ದರು. ಬೇಟೆಯಾಡಲು ಶಕ್ತವಲ್ಲದ ಕೆಲವು ತೋಳಗಳು ಮನುಷ್ಯ ವಾಸವಿದ್ದ ಜಾಗದ ಸುತ್ತಮುತ್ತ ತಿರುಗುತ್ತಿದ್ದವಂತೆ. ಮನುಷ್ಯ ಎಸೆದಿದ್ದ ಆಹಾರ ಪದಾರ್ಥವನ್ನು ತಿನ್ನುತ್ತ ಜೀವ ಉಳಿಸಿಕೊಳ್ಳುತ್ತಿದ್ದವಂತೆ. ದಿನವಿಡೀ ತಮ್ಮ ಸುತ್ತಲೇ ಸುತ್ತುತ್ತಿದ್ದ ನಿರುಪದ್ರವಿ ತೋಳಗಳ ಬಗ್ಗೆ ಮನುಷ್ಯನಿಗೂ ಅನುಕಂಪ ಮೂಡಿರಬೇಕು. ತಾನು ತಿನ್ನುತ್ತಿದ್ದ ಆಹಾರದಲ್ಲೇ ಒಂದು ತುಣುಕನ್ನು ನಾಯಿಯ ಕಡೆಗೆ ಎಸೆಯುತ್ತಿದ್ದ. ಸೌಮ್ಯ ತೋಳಗಳಿಗೆ ಒರಟು ತೋಳಗಳಿಗಿಂತ ಹೆಚ್ಚಿನ ಆಹಾರ ಸಿಗುತ್ತಿತ್ತು. ಆಹಾರಕ್ಕೋಸ್ಕರ ತೋಳಗಳು ಸೌಮ್ಯವಾದವು. ನೋಡಲು ಮುದ್ದುಮುದ್ದಾಗಿದ್ದ ತೋಳಗಳಿಗೆ ಹೆಚ್ಚು ಆಹಾರ ದಕ್ಕುತ್ತಿತ್ತು. ಮುದ್ದುಮುದ್ದಾಗಿದ್ದ ತೋಳಗಳು ಪುಷ್ಕಳ ಭೋಜನದ ಪ್ರಭಾವದಿಂದ ಚೆನ್ನಾಗಿ ಬೆಳೆದು ನಿಂತವು. ಉಳಿದ ತೋಳಗಳು ಅಪೌಷ್ಟಿಕತೆಯಿಂದ ಬಳಲಿದವು. ಪರಿಸರ ಕೂಡ ತಳಿಯ ಮೇಲೆ ಪ್ರಭಾವ ಬೀರುವುದರಿಂದ ಸಹಜವಾಗಿ ಮುಂದಿನ ತಲೆಮಾರಿನ ತೋಳಗಳು ಮತ್ತಷ್ಟು ಸೌಮ್ಯವಾಗಿ ಸುಂದರವಾಗಿ ನಾಯಿಗಳಾಗಿ ಪರಿವರ್ತನೆಗೊಂಡವು! 

ಚೀನಾದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ದಕ್ಷಿಣ ಏಷ್ಯಾದ ಪುರಾತನ ನಾಯಿಗಳ ತಳಿ ತೋಳಕ್ಕೆ ಅತ್ಯಂತ ಸಮೀಪದಲ್ಲಿದೆ, ಸಾಮ್ಯತೆಗಳು ಹೆಚ್ಚಿವೆ. ಇವುಗಳ ಆಧಾರದ ಮೇಲೆ ಪ್ರಪಂಚದ ಮೊದಲ ನಾಯಿಗಳ ಉಗಮ ಮೂವತ್ತು ವರುಷಗಳ ಹಿಂದೆ ನಡೆದಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹದಿನೈದು ಸಾವಿರ ವರುಷಗಳ ತನಕ ದಕ್ಷಿಣ ಏಷ್ಯಾದಲ್ಲೇ ಮೊಕ್ಕಾಮು ಹೂಡಿದ್ದ ನಾಯಿಗಳು ನಂತರದಲ್ಲಿ ಮಧ್ಯ ಪ್ರಾಚ್ಯ ಏಷ್ಯಾದ ಕಡೆಗೆ ಹೆಜ್ಜೆ ಹಾಕಿದವು. ಜನರ ವಲಸೆಯ ಜೊತೆಗೆ ನಾಯಿಗಳೂ ವಲಸೆ ಪ್ರಾರಂಭಿಸಿದವು. ಹತ್ತು ಸಾವಿರ ವರುಷಗಳ ಕೆಳಗೆ ಯುರೋಪು ಖಂಡಕ್ಕೆ ಭೇಟಿ ನೀಡಿ ಮತ್ತಷ್ಟು ತಳಿ ಸಂಕರವಾಗಿ ಮತ್ತೆ ಉತ್ತರ ಚೀನಾದ ಕಡೆಗೆ ನಡೆದವು ಎನ್ನುತ್ತದೆ ಈ ಸಂಶೋಧನೆ. ನೇಚರ್ ಜರ್ನಲ್ಲಿನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯ ಲೇಖನವು ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯದ ಇತಿಹಾಸವನ್ನು ಅರಿಯಲು ಸಹಕಾರಿಯಾಗಿದೆ.

No comments:

Post a Comment