Nov 19, 2015

ಅಸ್ವಸ್ಥ ಸಮಾಜದ ಹುಚ್ಚು ಮುಖಗಳು

Dr Ashok K R
ನಾನಾಗ ಪಿಯುಸಿ ಓದುತ್ತಿದ್ದೆ. ಗುರುಶ್ರೀ ಥಿಯೇಟರಿನ ಎದುರಿಗಿದ್ದ ಪಿ.ಇ.ಎಸ್ ಕಾಲೇಜಿನಿಂದ ಸಂಜಯ ಥಿಯೇಟರ್ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿ ನಾಲ್ಕೆಜ್ಜೆ ನಡೆದರೆ ಬಲಕ್ಕೆ ಸಿದ್ಧಾರ್ಥ ಥಿಯೇಟರ್ರಿದೆ. ಅದರ ಎದುರುಗಡೆ ಪೋಲೀಸ್ ಠಾಣೆ. ಒಮ್ಮೊಮ್ಮೆ ಸೈಕಲ್ ತಳ್ಕೊಂಡು ನಡ್ಕೊಂಡು ಹೋಗುವಾಗ ಸಿದ್ದಾರ್ಥ ಥಿಯೇಟರಿನ ಬಳಿಯೋ ಅಥವಾ ಅದರ ಹಿಂದೆಯೋ ಒಬ್ಬ ವ್ಯಕ್ತಿ ಎದುರಾಗುತ್ತಿದ್ದ. ತಲೆಗೆ ಎಣ್ಣೆ ಹಾಕಿ ಕ್ರಾಪು, ಕಣ್ಣಿಗೊಂದು ಕಪ್ಪು ಚೌಕಟ್ಟಿನ ಸೋಡಾ ಗ್ಲಾಸು, ಇಸ್ತ್ರಿ ಮಾಡಿದ್ದ ಕೆಂಚಗಾಗಿದ್ದ ಬಿಳಿ ಶರ್ಟು, ಕಪ್ಪು ಪ್ಯಾಂಟು, ಹೊಳಪು ಮಾಸಿದ ಚಪ್ಪಲಿ ಧರಿಸಿರುತ್ತಿದ್ದ ವ್ಯಕ್ತಿ ಎರಡು ಹೆಜ್ಜೆಗೊಮ್ಮೆ ನಿಂತು ನೆನಪಾದವರಿಗೆಲ್ಲ ಬಯ್ದು ಮತ್ತೆರಡು ಹೆಜ್ಜೆ ಹಾಕಿ ಇನ್ನೊಂದಷ್ಟು ಬಯ್ದು ಮತ್ತೆರಡು ಹೆಜ್ಜೆ ಹಾಕುತ್ತಿದ್ದ. ಬಯ್ಯಿಸಿಕೊಳ್ಳುವವರ ಲಿಸ್ಟಿನಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಿಂದ ಹಿಡಿದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗರಿಂದ ಹಿಡಿದು ಪಕ್ಕದ ಮನೆಯವರು, ಮಕ್ಕಳು, ಪೋಲೀಸರೆಲ್ಲರೂ ಇದ್ದರು. ಯಾರಾದರೂ ಆತನನ್ನು ಗಮನಿಸುತ್ತಾ ಹತ್ತಿರದಲ್ಲೇ ನಿಂತುಬಿಟ್ಟರೆ ದನಿಯೇರುತ್ತಿತ್ತು ಬಯ್ಯುವ ಅವಧಿಯೂ ಜಾಸ್ತಿಯಾಗುತ್ತಿತ್ತು. ಯಾರೂ ಗಮನಿಸದಿದ್ದರೆ ಎರಡು ಹೆಜ್ಜೆಗೆ ಒಂದು ಬಯ್ಗುಳ. ಮುಂದೆ ಮೆಡಿಕಲ್ ಓದಲು ಮೈಸೂರಿಗೆ ತೆರಳಿದ ಮೇಲೆ ಆ ವ್ಯಕ್ತಿಯ ಕತೆ ಏನಾಯಿತೋ ತಿಳಿಯಲಿಲ್ಲ. ಕಳೆದೊಂದು ವಾರದಿಂದ 'ರಾಷ್ಟ್ರೀಯ ದುರಂತವಾದ' ವೆಂಕಟನ ಸುತ್ತಲಿನ ಸಂಕಟಗಳ ಬಗ್ಗೆ ಆಗೀಗ ಚೂರು ಚೂರು ನೋಡಿ ಕೇಳಿ ತಿಳಿದುಕೊಂಡಾಗ ನನಗೆ ನೆನಪಾಗಿದ್ದು ಮಂಡ್ಯದ ಆ ವ್ಯಕ್ತಿ.

ಒಬ್ಬ ಮಾನಸಿಕ ಅಸ್ವಸ್ಥನನ್ನು (ಆತ ನಟನೆಯನ್ನೂ ಮಾಡುತ್ತಿರಬಹುದು) ಹೇಗೆ ನಡೆಸಿಕೊಳ್ಳಬೇಕೆಂದು ಮರೆತುಹೋದ ಸಮಾಜವನ್ನು ಯಾವ ಕೋನದಿಂದ ನಾಗರೀಕವೆಂದು ಕರೆಯಬಹುದು? ಆದಿವಾಸಿಗಳನ್ನು ಅವರ ರೀತಿ ನೀತಿಗಳನ್ನು ಅನಾಗರೀಕವೆಂದು ಕರೆದುಬಿಡುವ ನಾವಿರುವ ನಾಗರೀಕತೆ ಇಷ್ಟೊಂದು ವಿಷಮಯವಾಗಿದೆಯೆಂದರೆ ಅನಾಗರೀಕರಾಗುವುದೇ ಉತ್ತಮವಲ್ಲವೇ? ಅದೆಷ್ಟೇ ವೈಯಕ್ತಿಕವೆಂದರೂ ಸುದೀಪ್ ವಿಚ್ಛೇದನ ಪಡೆದುಕೊಂಡಿರುವುದು ಸತ್ಯ. ವಿಚ್ಛೇದನ ಪಡೆದುಕೊಂಡಿರುವ ವ್ಯಕ್ತಿಯೊಬ್ಬ ‘ರಿಯಾಲಿಟಿ ಶೋ’ ಒಂದರಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುವುದನ್ನು ನಮ್ಮ ಕರ್ನಾಟಕದ ಕುಟುಂಬಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತವೆ! ಮಾನಸಿಕ ಅಸ್ವಸ್ಥನೆಂದೇ ಹೆಸರುವಾಸಿಯಾದ ವೆಂಕಟೇಶನನ್ನು ರಿಯಾಲಿಟಿ ಶೋಗೆ ಸೇರಿಸಿಕೊಳ್ಳುವ ವಾಹಿನಿಯವರು ಅವನಿಂದ ಎಷ್ಟು ಟಿ.ಆರ್.ಪಿ ಪಡೆಯಬೇಕೋ ಅಷ್ಟನ್ನು ಪಡೆದುಬಿಟ್ಟರು. ಆತನ ಹುಚ್ಚಾಟದಿಂದ ವೆಂಕಟನನ್ನು ಬಿಗ್ ಬಾಸ್ ರಿಯಾಲಿಟಿ ಶೋದಿಂದ ಹೊರಹಾಕಿದ್ದೂ ಆಯಿತು. ಅಲ್ಲಿಗಾದರೂ ವೆಂಕಟೇಶನ ಮಹಿಮೆ ಮುಗಿಯಬೇಕಿತ್ತು. ಮುಗಿಯುವುದಕ್ಕೆ ಸುದ್ದಿ ವಾಹಿನಿಗಳು ಬಿಡಲಿಲ್ಲ.

ದಿನದ ಇಪ್ಪತ್ತನಾಲ್ಕು ತಾಸು ತೋರಿಸುವುದಕ್ಕೆ ಸುದ್ದಿಯಾದರೂ ಎಲ್ಲಿರುತ್ತದೆ? ಸುದ್ದಿಯಲ್ಲದ ಇಂತವುಗಳನ್ನು ಮಾಡದಿದ್ದರೆ ವಾಹಿನಿಯವರ ಹೊಟ್ಟೆ ತುಂಬಬೇಕಲ್ಲ. ನೂರಿನ್ನೂರು ಜನರ ಹೊಟ್ಟೆ ತುಂಬಿಸುವುದಕ್ಕೆ ಟಿವಿ ವೀಕ್ಷಕರ ಮನಸ್ಥಿತಿಯನ್ನೇ ಹಾಳುಗೆಡವುವ ಕೆಲಸವನ್ನು ಮಾಡುವುದನ್ನು ವಾಹಿನಿಗಳು ಯಾವಾಗಲೋ ಪ್ರಾರಂಭಿಸಿಬಿಟ್ಟಿವೆ. ಕನ್ನಡಪ್ರಭದಲ್ಲಿ ಸುವರ್ಣ ವಾಹಿನಿಯ ಸುಗುಣ ಎನ್ನುವವರು ಹೇಗೆ ತಾವು ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗಿನ ಜಾವ ನಾಲ್ಕರವರೆಗೆ ವೆಂಕಟನ ಮನೆಯ ಬಳಿಯೇ ಕಾದು ಕುಳಿತಿದ್ದೆ ಎನ್ನುವುದರ ‘ರೋಚಕ’ ವಿವರಗಳನ್ನು ಬರೆದುಕೊಳ್ಳುತ್ತಾರೆ! ವಾಹಿನಿಯಲ್ಲಿ ಲೈವ್ ಆಗಿ ಕೂರಿಸಿ ವೆಂಕಟನನ್ನು ಕಿಚಾಯಿಸಿ ಥೇಟ್ ಮಂಡ್ಯದ ಆ ವ್ಯಕ್ತಿಯಂತೆ ಬಡಬಡಿಸುವಂತೆ ಮಾಡಿ ಅವನ ನೆನಪಿಗೆ ಬಂದವರಿಗೆಲ್ಲ ಬಯ್ಯುವಂತೆ ಮಾಡಿಬಿಟ್ಟರು. ಕೊನೆಗೆ ಪಬ್ಲಿಕ್ ಟಿವಿಯಲ್ಲಿ ಆತ ಯಾರ ಮೇಲೋ ಕೈ ಮಾಡಲು ಹೋಗಿ ಪಬ್ಲಿಕ್ ವಾಹಿನಿಯ ಪತ್ರಕರ್ತರು ಸ್ಟುಡಿಯೋದಲ್ಲಿನ ಜಗಳ ಬಿಡಿಸಿದರು. ವಾಹಿನಿಯಲ್ಲಿ ಯಾರಾದರೂ ಪರಿಚಯವಿದ್ದರೆ ಕೇಳಿ ನೋಡಿ ‘ನಾವೇನ್ ಮಾಡಾಣ? ಇಂತ ಕಾರ್ಯಕ್ರಮಕ್ಕೇ ಟಿ.ಆರ್.ಪಿ ಜಾಸ್ತಿ. ಟಿ.ಆರ್.ಪಿ ಬರುತ್ತೆ ಮಾಡ್ತೀವಿ’ ಎಂದೇ ಹೇಳುತ್ತಾರೆ. ಆಗ ತಪ್ಪು ಇಂತಹ ಕಾರ್ಯಕ್ರಮಗಳನ್ನು ಮಾಡುವ ವಾಹಿನಿಗಳದ್ದಾ ಅಥವಾ ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರದ್ದಾ? ಎಂಬ ಪ್ರಶ್ನೆ ಮೂಡದೇ ಇರದು. 

ಮಾಲ್ಗುಡಿ ಡೇಸ್, ಗುಡ್ಡದ ಭೂತದಂತಹ ಉತ್ತಮ ಧಾರವಾಹಿಗಳನ್ನು ನೋಡಿದ ಜನರೇ ಇವತ್ತು ದ್ವೇಷ ತುಂಬಿದ ಹೆಂಗಸರ ಕಿತ್ತಾಟದ ಧಾರವಾಹಿಗಳನ್ನು ನೋಡುತ್ತಿದ್ದಾರೆ, ಅರ್ಥವಿಲ್ಲದ ರಿಯಾಲಿಟಿ ಶೋಗಳನ್ನು ನೋಡುತ್ತಿದ್ದಾರೆ. ಅಂದಿನ ನಿರ್ದೇಶಕರಿಗೆ ಯಾರೂ ಉತ್ತಮ ಅಭಿರುಚಿಯ ಧಾರವಾಹಿಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿರಲಿಲ್ಲ, ಇಂದಿನ ನಿರ್ದೇಶಕರಿಗೂ ಯಾರೂ ಕಿತ್ತಾಟದ ಕಾರ್ಯಕ್ರಮಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿಲ್ಲ. ಕಲಾವಿದನಿಗೆ, ನಿರ್ದೇಶಕನಿಗೆ, ವಾಹಿನಿಯ ಮುಖ್ಯಸ್ಥನಿಗೆ ಡಿಫಾಲ್ಟಾಗಿ ಒಂದು ಸಾಮಾಜಿಕ ಬದ್ಧತೆ ಕಾಳಜಿ ಇರಲೇಬೇಕು. ಅದಿಲ್ಲವಾಗಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ. ಬಿಗ್ ಬಾಸಿನ ಮೊದಲನೇ ಸರಣಿ ಮುಗಿದ ಮೇಲೆ ಎರಡನೇ ಸರಣಿ ಮಾಡಿ ಮೂರನೇ ಸರಣಿ ಮಾಡಿ ಎಂದೇನಾದರೂ ಜನರು ವಾಹಿನಿಯ ಮುಂದೆ ಅಲವತ್ತುಕೊಂಡಿದ್ದರೆ? 

ಇನ್ನು ಈ ಎಲ್ಲಾ ಸಂಭ್ರಮದ ನಡುವೆ ದಲಿತ ಸೇನೆಯವರು ದರಿದ್ರ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಅವಮಾನಕರವಾಗಿ ಮಾತನಾಡಿದ ಎಂಬ ಕಾರಣಕ್ಕೆ ವೆಂಕಟನ ಮೇಲೆ ಮಸಿ ಬಳಿದಿದ್ದಾರೆ. ಆತನ ಮಾನಸಿಕ ಸ್ಥಿತಿಯನ್ನು ಗಮನಿಸಿದ ಮೇಲೂ ಈ ಕೆಲಸ ಮಾಡಬೇಕಿತ್ತಾ? ವಾಹಿನಿಗಳಿಗೇನೋ ಟಿ.ಆರ್.ಪಿ ಹುಚ್ಚು. ವೆಂಕಟನ ಪಟದ ಮೇಲೆ ಹಾಲು ಸುರಿಯುವ ‘ಅಭಿಮಾನಿ’ಗಳು ಮತ್ತು ಮಸಿ ಬಳಿದ ದಲಿತ ಸೇನೆಯವರಿಗೆ ಸುದ್ದಿಯಾಗುವ ಹುಚ್ಚಷ್ಟೇ ಇಲ್ಲಿ ಕಾಣಿಸುತ್ತಿದೆ. ಒಬ್ಬ ಮಾನಸಿಕ ಅಸ್ವಸ್ಥನಿಗೆ ಅಗತ್ಯವಾಗಿ ಬೇಕಾಗಿರುವುದು ಚಿಕಿತ್ಸೆ. ಅಂತಹ ವ್ಯಕ್ತಿಯನ್ನು ಕೂರಿಸಿಕೊಂಡು ಇಲ್ಲಸಲ್ಲದ ಚೇಷ್ಟೆಗಳನ್ನು ಮಾಡುತ್ತ ಕುಳಿತಿರುವ ವಾಹಿನಿಗಳು ಮತ್ತದಕ್ಕೆ ಪೂರಕವಾಗಿ ಸ್ಪಂದಿಸುತ್ತ ವಿಕೃತ ಆನಂದವನ್ನನುಭವಿಸುತ್ತ ಹಾಲು ಸುರಿದು ಮಸಿ ಬಳಿದು ಸಂಭ್ರಮಿಸುತ್ತಿರುವ ಸಮಾಜ! ಇಲ್ಲಿ ನಿಜಕ್ಕೂ ಮಾನಸಿಕ ಅಸ್ವಸ್ಥತೆ ಇರುವುದು ಯಾರಿಗೆ?

No comments:

Post a Comment