Nov 18, 2015

ಯಥಾ ಪ್ರಧಾನಿ ತಥಾ ವಿರೋಧಿ!

ಕಾಂಗ್ರೆಸ್ಸಿನ ಇಬ್ಬರು ಬೃಹಸ್ಪತಿಗಳು ಭಾರತದ ಮಾನವನ್ನು ವಿದೇಶದಲ್ಲಿ, ಅದೂ ಭಾರತದ ಕೆಡುಕನ್ನೇ ಸದಾ ಬಯಸುವ ಪಾಕಿಸ್ತಾನದಲ್ಲಿ ಕಳೆದು ಬಂದಿದ್ದಾರೆ. ಹೆಸರಿಗೆ ಅವರು ಕಳೆದುಹಾಕಿರುವುದು ನರೇಂದ್ರ ಮೋದಿಯವರ ಮಾನವನ್ನಾದರೂ ಮೋದಿಯವರು ಭಾರತದ ಪ್ರಧಾನಿಯಾಗಿರುವುದರಿಂದ ಇದು ಭಾರತದ ಮಾನಹಾನಿಯೇ ಅಲ್ಲವೇ?! ಇಸ್ಲಮಾಬಾದಿನ ಜಿನ್ನಾ ಸಂಸ್ಥೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರದ ಮಾಜಿ ಸಚಿವ ಸಲ್ಮಾನ್ ಖುರ್ಷಿದರಿಗೆ ಇದ್ದಕ್ಕಿದ್ದಂತೆ ನವಾಜ್ ಷರೀಫರ ಮೇಲೆ ಭಯಂಕರ ಪ್ರೀತಿ ಹುಟ್ಟಿ ಅವರನ್ನು ವಾಚಮಾಗೋಚರವಾಗಿ ಹೊಗಳಿ ನರೇಂದ್ರ ಮೋದಿಯವರನ್ನು ತೆಗಳಿದ್ದಾರೆ. ಏನೋ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿಯೇ ಇದ್ದುಕೊಂಡು ಅಲ್ಲಿನ ಪ್ರಧಾನಿಯನ್ನು ತೆಗಳುವುದು ಸರಿಯಾಗುವುದಿಲ್ಲ ಎಂದು ನವಾಜ್ ಷರೀಫರನ್ನು ಹೊಗಳಿದ್ದರೆ ಸುಮ್ಮನಾಗಬಹುದಿತ್ತು. ವಿದೇಶಿ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಹೀಗಳೆಯುವ ಕೆಲಸವನ್ಯಾಕೆ ಮಾಡಬೇಕು? ಮಂತ್ರಿ ಪದವಿಯ ಜೊತೆಗೆ ಬುದ್ಧಿಯನ್ನೂ ಮರಳಿಸಿಬಿಟ್ಟರೆ?

ಇನ್ನೂ ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ 'ದುನಿಯಾ ಟಿವಿ'ಗೆ ಕೊಟ್ಟ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ವೃದ್ಧಿಯಾಗಬೇಕಾದರೆ ಮೋದಿ ತೊಲಗಿ ಕಾಂಗ್ರೆಸ್ ಮರಳಿ ಬರಬೇಕು ಎಂದಿದ್ದಾರೆ. ಮೊದಲೇ ಭಾರತವನ್ನು ವೈರಿಯಾಗಿಯೇ ನೋಡುವ ಪಾಕಿಸ್ತಾನದಲ್ಲಿ ಮೋದಿ ನಿಮ್ಮ ಮೊದಲ ವೈರಿ ಎಂಬರ್ಥದ ಮಾತುಗಳನ್ನಾಡಿ ಬಂದಿದ್ದಾರೆ. ಇವರಿಗೇನ್ ಬುದ್ಧಿ ಇಲ್ಲವಾ? ಅಥವಾ ಇವರ ದ್ವೇಷವನ್ನು ತೋರ್ಪಡಿಸಲು ಭಾರತದಲ್ಲಿ ವಾಹಿನಿಗಳಿಲ್ಲವಾ? ನಮ್ಮಲ್ಲೇ 24x7 ವಾಹಿನಿಗಳು ಸುದ್ದಿಯಿಲ್ಲದೇ ಬಣಗುಟ್ಟುತ್ತಿರುವಾಗ ವಿದೇಶಿ ವಾಹಿನಿಗಳಲ್ಲಿ ದೇಶದ ಮರ್ಯಾದೆಯನ್ನು ಮೂರುಕಾಸಿಗೆ ಮಾರುವ ಪ್ರವೃತ್ತಿಯನ್ನು ವಿರೋಧಿಸಲೇಬೇಕು.

ಇವರಿಬ್ಬರು ಈ ರೀತಿಯೆಲ್ಲ ಮಾತನಾಡಿರುವುದಕ್ಕೆ ಸ್ಪೂರ್ತಿ ಯಾರಿರಬಹುದೆಂದು ಹುಡುಕಿದರೆ ಅದು ಮತ್ಯಾರೂ ಅಲ್ಲ ಭಕ್ತಾಸುಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮಲ್ಲೆರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು! ವಿರೋಧಿಗಳ ವಿರುದ್ಧ ಮೊನಚಿನ ಭಾಷಣ ಮಾಡುವುದರಲ್ಲಿ ಮೋದಿಯವರದು ಎತ್ತಿದ ಕೈ. ಅವರ ಭಾಷಣ ಕುಟ್ಟುವ ಉಮೇದಿ ಎಷ್ಟರವರೆಗಿದೆಯೆಂದರೆ ವಿದೇಶಿ ನೆಲದಲ್ಲಿ ನಿಂತಾಗಲೂ ಭಾರತದಲ್ಲಿನ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡುತ್ತಾರೆ. ವಿದೇಶದಲ್ಲಿ ದೇಶದ ಮಾನ ತೆಗೆಯುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ನೆಹರೂ ಬಗ್ಗೆ, ಅವರ ಕುಟುಂಬದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆಯೆಲ್ಲ ಅನವಶ್ಯಕವಾಗಿ ಮಾತನಾಡಿ ಬಂದಿದ್ದಾರೆ. ಜಪಾನಿನಲ್ಲಿ ಭಗವದ್ಗೀತೆಯನ್ನು ಕೊಡುವಾಗ, ವಿದೇಶದಲ್ಲಿ ಸಂಸ್ಕೃತ ಶ್ಲೋಕ ಹಾಡಿದ ಮಕ್ಕಳನ್ನು ಹೊಗಳುವಾಗ ಭಾರತದ ಜಾತ್ಯತೀತರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ದೇಶದ ಮಾನ ತೆಗೆಯುವುದಕ್ಕೆ ಏನೆಲ್ಲ ಒದರಬೇಕೋ ಅದರ ಬಗ್ಗೆ ಒದರಿದ್ದಾರೆ. 

ಭಾರತವೀಗ 'ಸೂಪರ್ ಪವರ್' ಆಗುತ್ತಿರುವ ಕಾರಣ ದೇಶದೊಳಗಿನ ರಾಜಕೀಯ ದ್ವೇಷವನ್ನು ವಿದೇಶದಲ್ಲೂ ತೋರ್ಪಡಿಸಬೇಕು ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಹಾದಿಯಲ್ಲೇ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಸಾಗುತ್ತಿದ್ದಾರೆ. ಭಾರತದ ಮಾನ? ಅಯ್ಯೋ ಬುಡಿ ಮಾನ ಮರ್ಯಾದೆ ಎಲ್ಲಾ ಕಟ್ಕೊಂಡು ಏನ್ ಮಾಡ್ತೀರ... ಪಬ್ಲಿಸಿಟಿ ಮುಖ್ಯ.

No comments:

Post a Comment