Dec 26, 2015

'ಹಿಂದೂ ಹೃದಯ ಸಾಮ್ರಾಟ್' ಮೋದಿ ಇಂತ ಕೆಲ್ಸ ಮಾಡ್ಬೋದಾ?!

modi shariff
ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ದೊಡ್ಡ ಅಚ್ಚರಿಯನ್ನು ಭಾರತೀಯರೆಲ್ಲರಿಗೂ ನೀಡಿಬಿಟ್ಟಿದ್ದಾರೆ. ಯಾವೊಂದು ಸುಳಿವೂ ನೀಡದೆ ಪಾಕಿಸ್ತಾನಕ್ಕೆ ಒಂದು ಚಿಕ್ಕ ಭೇಟಿ ಕೊಟ್ಟು ಬಂದಿದ್ದಾರೆ. ಕಾಬೂಲಿನಿಂದ ಬರುವ ದಾರಿಯಲ್ಲಿ ಲಾಹೋರಿಗೂ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫರೊಡನೆ ಒಂದು ಚಿಕ್ಕ ಚರ್ಚೆ ನಡೆಸಿ ಬಂದಿದ್ದಾರೆ. ಕೊನೆಯ ಕ್ಷಣದಲ್ಲಿ ನಿರ್ಧಾರ ಮಾಡಲಾಗಿತ್ತಂತೆ. ಪ್ರಧಾನಿಯವರ ಈ ದಿಡೀರ್ ಭೇಟಿ ಹಲವರಿಗೆ ನುಂಗಲಾರದ ತುತ್ತಾಗಿಬಿಟ್ಟಿದೆ! ಅದರಲ್ಲೂ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಅಖಂಡ ಭಾರತದ ಪುನರ್ ನಿರ್ಮಾತೃರು ಎಂದು ನಂಬಿಕೊಂಡಿದ್ದವರಿಗೆ ಆಘಾತ ಸಹಿಸಿಕೊಳ್ಳಲಾಗುತ್ತಿಲ್ಲ! ಆಘಾತ ಮೂಡಿಸಿದ ಕೋಪದಿಂದ ಮೋದಿಯವರಿಗೆ ಬಯ್ಯುವಂತೆಯೂ ಇಲ್ಲ, ಕಾರಣ ಮೋದಿ 'ಹಿಂದೂ ಹೃದಯ ಸಾಮ್ರಾಟ್' ಎಂದೇ ಮೆಚ್ಚಿದ್ದರವರು! ಅವರಿವರು ಬಿಡಿ ಸ್ವತಃ ಮೋದಿ ಮತ್ತು ಬಿಜೆಪಿಯೇ ಹಿಂದಿನ ಸರಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದನ್ನು ಶತಾಯಗತಾಯ ವಿರೋಧಿಸುತ್ತಿತ್ತು. ಕುಹಕವಾಡುತ್ತಿತ್ತು. ಇನ್ನವರ ಬೆಂಬಲಿಗರೋ ಉಗ್ರರನ್ನು ಕಳುಹಿಸುವ ಶತ್ರುದೇಶದೊಂದಿಗೆ ಎಂತಹ ಮಾತುಕತೆ? ಯುದ್ಧ ಮಾಡಿ ಅವರನ್ನು ತರಿದು ಬಿಸಾಕಬೇಕು ಎಂದು ಅಬ್ಬರಿಸಿದ್ದೋ ಅಬ್ಬರಿಸಿದ್ದು. ಒಂದು ತಲೆಗೆ ಎರಡು ತಲೆ ತರಬೇಕೆಂದು ಅರಚಿದ ಕೂಗುಮಾರಿಗಳಿಗೂ ಬರವಿರಲಿಲ್ಲ. ಇನ್ನೇನು ಮೋದಿ ಪ್ರಧಾನಿಯಾದರು, ಪಾಕಿಸ್ತಾನದ ಕತೆ ಮುಗಿಯಿತು ಎಂದು ನಂಬಿಕೊಂಡಿದ್ದವರಿಗೆಲ್ಲ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದೇ ತಳಮಳ ಶುರುವಾಗಿಬಿಟ್ಟಿತು. ಮುಂಚೆ ಏನೋ ಕಾಂಗ್ರೆಸ್ ಸರಕಾರವಿತ್ತು. ಅವರನ್ನು ಖಾನ್ ಗ್ರೇಸ್ ಎಂದು ಟೀಕಿಸಿ, ಮನಮೋಹನಸಿಂಗರನ್ನು ಮೌನಮೋಹನಸಿಂಗ್ ಎಂದು ಜರೆದು, ಸೋನಿಯಾರನ್ನು ಇಟಲಿಯ ಏಜೆಂಟ್ ಎಂದು ಕರೆದು 'ದೇಶಭಕ್ತಿ'ಯ ಪ್ರದರ್ಶನ ಮಾಡಿದವರಿಗೆಲ್ಲ ಅಪ್ಪಟ ಭಾರತೀಯ ಸಂಸ್ಕೃತಿಯ ಹೆಣ್ಣುಮಗಳಾದ ಸುಷ್ಮಾ ಸ್ವರಾಜರನ್ನು ಟೀಕಿಸುವುದು ಹೇಗೆ ಎಂದೇ ತಿಳಿಯಲಿಲ್ಲ! 
ಸುಷ್ಮಾ ಸ್ವರಾಜರನ್ನು ಟೀಕಿಸುವುದಕ್ಕೆ ಪದಗಳನ್ನು ಹುಡುಕುತ್ತಿದ್ದವರಿಗೆ ಈಗ ಮೋದಿ ಅತಿ ದೊಡ್ಡ ಅಚ್ಚರಿ ನೀಡಿಬಿಟ್ಟಿದ್ದಾರೆ. ಹೋಗುವ ಕ್ಷಣಗಳ ಮುಂಚೆ ಟ್ವಿಟರಿನಲ್ಲಿ ಬರೆದುಕೊಂಡಾಗಷ್ಟೇ ಮೋದಿಯವರ ಪಾಕಿಸ್ತಾನ ಭೇಟಿ ಎಲ್ಲರಿಗೂ ತಿಳಿದಿದ್ದು. ಯುದ್ಧೋತ್ಸಾಹದಲ್ಲಿದ್ದವರಿಗೆ ನಿರಾಸೆಯಾಗಿರಬೇಕು! ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ನಡೆಯಬಾರದೆಂದವರು, ಪಾಕಿಸ್ತಾನಿ ಕಲಾವಿದರ, ಲೇಖಕರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರಿಗೆಲ್ಲ ಈ ಭೇಟಿಯಿಂದ ಎಷ್ಟೆಲ್ಲ ತಳಮಳಗಳು ಸೃಷ್ಟಿಯಾಗಿರಬಹುದು! ಮೋದಿ ವಿರುದ್ಧ, ಬಿಜೆಪಿಯ ವಿರುದ್ಧ ಮಾತನಾಡಿದವರನ್ನೆಲ್ಲ ಪಾಕಿಸ್ತಾನಕ್ಕೆ ಹೋಗಿ, ಪಾಕಿಸ್ತಾನದ ಟಿಕೆಟ್ ಕೊಡಿ ಎಂದು ಅಬ್ಬರಿಸಿದವರಿಗೆ ಸ್ವತಃ ಮೋದಿಯೇ ಪಾಕಿಸ್ತಾನಕ್ಕೆ ಹೋಗಿಬಿಟ್ಟಿರುವುದು ಎಷ್ಟೆಲ್ಲ ಯಾತನೆ ಕೊಟ್ಟಿರಬಹುದು. ಸುಳ್ಸುದ್ದಿ ಮೂಲದ ಪ್ರಕಾರ ತನ್ನ ಭಕ್ತರು ಅಸಂಖ್ಯಾತ ಜನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿರುವುದರಿಂದ 'ಹಾಗೆ ಯಾರಾದರೂ ಬಂದುಬಿಟ್ಟರೆ ಅವರ ಬಗ್ಗೆ ಎಚ್ಚರಿಕೆಯಿಂದಿರಿ. ಆಡಳಿತದಲ್ಲಿನ ಹುಳುಕುಗಳನ್ನೆಲ್ಲ ಎತ್ತಿ ತೋರಿಸುವ ಡೇಂಜರಸ್ ಗ್ಯಾಂಗ್ ಅದು' ಎಂದು ಹೇಳಲೆಂದೇ ಹೋಗಿದ್ದರಂತೆ.
ಭಕ್ತರ ಸುದ್ದಿ ಅತ್ಲಾಗಿರಲಿ, ಪ್ರಧಾನಿಯಾಗುವುದಕ್ಕೆ ಮುಂಚೆ ಸ್ವತಃ ಮೋದಿಯೇ ಇಂತಹುದ್ದನ್ನು ವಿರೋಧಿಸುತ್ತಿದ್ದರೇನೋ. ಈಗ ಕಾಂಗ್ರೆಸ್ ಅಪಸ್ವರ ಎತ್ತುತ್ತಿರುವಂತೆ. ಅದೆಲ್ಲ ದೇಶದೊಳಗಡೆ ಮತವನ್ನರಸುವ ರಾಜಕೀಯ. ಪ್ರಧಾನಿ ಸ್ಥಾನಕ್ಕೆ ಬಂದ ಮೇಲೆ ಈ ಆಧುನಿಕ ಕಾಲದಲ್ಲಿ ಯಾವ ಯುದ್ಧಗಳನ್ನೂ ಗೆಲ್ಲಲಾಗುವುದಿಲ್ಲ, ಶಾಂತಿ ಉಳಿಸಿಕೊಳ್ಳಲು ಸಾಧ್ಯವಾಗುವುದು ಮಾತುಕತೆಯಿಂದಲೇ ಹೊರತು ಯುದ್ಧದಿಂದಲ್ಲ ಎನ್ನುವುದರ ಅರಿವೂ ಆಗಲೇಬೇಕು. ಸುಷ್ಮಾ ಸ್ವರಾಜರ ಪಾಕಿಸ್ತಾನ ಭೇಟಿ, ಈಗ ಮೋದಿಯವರ ಪಾಕಿಸ್ತಾನ ಭೇಟಿಯೆಲ್ಲವೂ ಇದಕ್ಕೆ ಪೂರಕವಾಗಿಯೇ ಇದೆ. ಈ ಭೇಟಿಯಿಂದ ಪಾಕಿಸ್ತಾನ ಶಾಂತಿ ಪ್ರೇಮ ರಾಷ್ಟ್ರವಾಗಿಬಿಡುತ್ತದೆ ಎಂದೆಲ್ಲ ನಂಬಿಬಿಟ್ಟರೆ ವಾಜಪೇಯಿ ಪಾಕಿಗೆ ಭೇಟಿ ಕೊಟ್ಟ ನಂತರ ಪಾಕಿಗಳು ಉಡುಗೊರೆಯಾಗಿ ಕೊಟ್ಟ ಕಾರ್ಗಿಲ್ ಯುದ್ಧದ ಮರುಕಳಿಸಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸದಾ ಕಾಲ ದ್ವೇಷವಷ್ಟೇ ಇರಬೇಕು ಎಂದು ಬಯಸುವವರ ಸಂಖೈ ಎರಡೂ ದೇಶದಲ್ಲಿ ದೊಡ್ಡದಿದೆ. ಒಂದಷ್ಟು ಶಾಂತಿಯ ಕೆಲಸ ನಡೆಯುತ್ತಿರುವಂತೆಯೇ ಆ ಶಾಂತಿ ಕದಡಲು ನಡೆಯುವ ಪ್ರಯತ್ನಗಳು ಹೆಚ್ಚಾಗುವ ಅಪಾಯವನ್ನು ಎರಡೂ ದೇಶದವರು ಗ್ರಹಿಸಿದರಷ್ಟೇ ಇಂತಹ ಸೌಹಾರ್ದಯುತ ಭೇಟಿಗಳಿಗೆ ಮಹತ್ವ.

No comments:

Post a Comment