Nov 9, 2015

ಟಿಪ್ಪು ಎಂಬ ಅನವಶ್ಯಕ ಚರ್ಚೆ

Dr Ashok K R
ಹೆಚ್ಚು ಕಡಿಮೆ ಪ್ರತಿ ವರುಷವೂ ಟಿಪ್ಪುವಿನ ಪರ ವಿರೋಧದ ಚರ್ಚೆ ಪ್ರಾರಂಭವಾಗುತ್ತದೆ. ಚರ್ಚೆಯ ಎರಡೂ ಬದಿಯಿರುವವರ ಮಾತು – ಹೇಳಿಕೆ – ಬರಹಗಳು ಒಂದು ಅತಿಯಲ್ಲಿಯೇ ಇರುತ್ತವೆ. ಒಂದೆಡೆ ಟಿಪ್ಪು ಅಪ್ರತಿಮ ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಹೋರಾಡಿದಾತ, ಹಿಂದೂ ದೇವಾಲಯಗಳಿಗೆ ದಾನ ಧರ್ಮ ನೀಡಿದ ಧರ್ಮ ಸಹಿಷ್ಣು ಎಂಬ ವಾದಗಳು ಕೇಳಿಬಂದರೆ ಮತ್ತೊಂದೆಡೆ ಟಿಪ್ಪು ದೇಶದ್ರೋಹಿ, ನೂರಾರು ಹಿಂದೂ ದೇವಾಲಯಗಳನ್ನು ಕೆಡವಿದಾತ, ಸಾವಿರಾರು ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದಾತ ಎಂಬ ವಾದಗಳು ಚಾಲ್ತಿಯಲ್ಲಿವೆ. ನೋಡಿದರೆ ಎರಡೂ ವಾದಗಳಲ್ಲೂ ಸತ್ಯಗಳಿವೆ. ಈ ಬಾರಿ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪುವಿನ ಜಯಂತಿಯನ್ನು ಸರಕಾರದ ವತಿಯಿಂದ ನಡೆಸಲು ನಿರ್ಧರಿಸಿರುವುದು ಮತ್ತೊಂದು ರೌಂಡು ಟಿಪ್ಪು ಪರ ವಿರೋಧದ ಚರ್ಚೆಗೆ ಸರಕು ಒದಗಿಸಿದೆ. ಈ ಚರ್ಚೆಗಳು ಅವಶ್ಯಕವೇ?

ಟಿಪ್ಪು ಸಾಹಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾತ, ಬ್ರಿಟೀಷರ ಬೆದರಿಕೆಗೆ ಮಣಿಯದೆ ಹೋರಾಡಿ ಸತ್ತವನು ಎನ್ನುವುದೆಲ್ಲ ಸತ್ಯವೇ ಆದರೆ ಅಷ್ಟಕ್ಕೆ ಟಿಪ್ಪುವನ್ನು ದೇಶಪ್ರೇಮಿ ಎಂದೆಲ್ಲ ಹೊಗಳುವ ಅವಶ್ಯಕತೆಯೇನಿದೆ? ಅದು ಟಿಪ್ಪುಯಿರಬಹುದು ಮತ್ತೊಬ್ಬ ಮಗದೊಬ್ಬ ರಾಜರಿರಬಹುದು. ಅವರ್ಯಾರು ದೇಶಪ್ರೇಮಿಗಳಲ್ಲ, ದೇಶದ್ರೋಹಿಗಳಲ್ಲ; ಅವರೆಲ್ಲ ಅವರವರ ಸಾಮ್ರಾಜ್ಯಪ್ರೇಮಿಗಳಷ್ಟೇ. ಅವರ ಸಾಮ್ರಾಜ್ಯಕ್ಕೆ ಧಕ್ಕೆ ತರುವಂತಹ ವೈರಿಯನ್ನು ಎದುರಿಸಿ ನಿಲ್ಲುತ್ತಿದ್ದರು, ಕೆಲವೊಮ್ಮೆ ಗೆಲ್ಲುತ್ತಿದ್ದರು ಕೆಲವೊಮ್ಮೆ ಸೋಲುತ್ತಿದ್ದರು. ಇಷ್ಟಕ್ಕೂ ಟಿಪ್ಪುವನ್ನು ದೇಶಪ್ರೇಮಿಯೆಂದು ಕರೆಯಲು ಅವನ ಕಾಲಘಟ್ಟದಲ್ಲಿ ‘ಭಾರತ’ವೆಂಬ ದೇಶವಾದರೂ ಎಲ್ಲಿತ್ತು. ನೂರಾರು ರಾಜರ ನಡುವ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಂತರ ಮತ್ತೆ ಒಡೆದ ಖ್ಯಾತಿ ಬ್ರಿಟೀಷರದ್ದು, ಮತ್ಯಾರದೂ ಅಲ್ಲ. ಇಷ್ಟು ಕಾಮನ್ ಸೆನ್ಸ್ ಇಟ್ಕೊಳ್ಳದೆ ನೂರಿನ್ನೂರು ವರುಷಗಳ ಹಿಂದೆ ಸತ್ತು ಹೋದವರ ನೆನಪಿನಲ್ಲಿ ‘ಚರ್ಚೆ’ ಮಾಡುವುದು ಯಾವ ಸಂಭ್ರಮಕ್ಕೆ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿ ಎಂದು ಗುರುತಿಸುವುದಾದರೆ ಟಿಪ್ಪುವನ್ನೂ ದೇಶಪ್ರೇಮಿಯೆಂದು ಹೊಗಳಲು ಅಡ್ಡಿಯಿಲ್ಲ.

ಮೊನ್ನೆ ಗೆಳೆಯನೊಬ್ಬ ಮೆಸೇಜು ಕಳಿಸಿದ್ದ. ಟಿಪ್ಪು ಜಯಂತಿ ಸರಕಾರ ಆಚರಿಸೋದು ತಪ್ಪು ಅಂತ. ಮೈಸೂರು ಸಂಸ್ಥಾನದ ಕುರುಹಾದ ದಸರಾವನ್ನು ಸರಕಾರ ಪ್ರತೀ ವರ್ಷ ಆಚರಿಸುತ್ತದೆ, ‘ರಾಜ’ ಕುಟುಂಬಕ್ಕೆ ಲಕ್ಷ ಲಕ್ಷ ಎಣಿಸಿ ಕೊಡುತ್ತದೆ, ಹಂಪಿ ಉತ್ಸವ ಆಚರಿಸುತ್ತದೆ ಇನ್ನೂ ಹತ್ತಲವು ಜಯಂತಿಗಳನ್ನು ಆಚರಿಸುತ್ತದೆ ಆಗೆಲ್ಲ ಸರಕಾರದ ವತಿಯಿಂದ ಜಯಂತಿಗಳನ್ನು ನಡೆಸುವುದು ತಪ್ಪು ಎನ್ನಿಸದೆ ಈಗ ಟಿಪ್ಪು ಜಯಂತಿಯ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತವಾಗುವುದು ಯಾಕೆ? ಟಿಪ್ಪು ಸುಲ್ತಾನ್ ಮುಸ್ಲಿಮನೆಂಬ ಕಾರಣಕ್ಕೆ ತಾನೇ ಈ ವಿರೋಧ. ಟಿಪ್ಪು ಸುಲ್ತಾನ್ ಕೇರಳದಲ್ಲಿ, ಮಲೆನಾಡಿನಲ್ಲಿ ಬಲವಂತದ ಮತಾಂತರ ನಡೆಸಿದ್ದಾನೆ ಎಂದು ಬೊಬ್ಬೆಯೊಡೆಯುವವರು ಕೇರಳದಲ್ಲಿ ದಲಿತರ ಮೇಲಿದ್ದ ‘ತಲೆ ತೆರಿಗೆ’ ‘ದೇಹ ತೆರಿಗೆ’ ‘ಮೊಲೆ ತೆರಿಗೆ’ಯ ಬಗ್ಗೆ ಚಕಾರವೆತ್ತುವುದಿಲ್ಲ. ಬಲವಂತದಿಂದಲೂ ಮತಾಂತರ ನಡೆದಿರುವುದನ್ನು ನಿರಾಕರಿಸದೆಯೇ ಹಿಂದೂ ಧರ್ಮದೊಳಗಿನ ಜಾತಿ ಪದ್ಧತಿ ಕೂಡ ಈ ಮತಾಂತರಕ್ಕೆ ಪೂರಕವಾಯಿತು ಎನ್ನುವುದನ್ನು ಮರೆಯಬಾರದು. 

ಸರಕಾರ ಹಿಂಗೆ ಇರೋ ಬರೋ ರಾಜರ ಹೆಸರಿನಲ್ಲೆಲ್ಲಾ ಜಯಂತಿ ಉತ್ಸವಗಳನ್ನು ಆಚರಿಸಬೇಕೆ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಇಂತಹ ಉತ್ಸವಗಳನ್ನೆಲ್ಲ ಆಚರಿಸೋದು ಸರಕಾರದ ಕೆಲಸವಲ್ಲ ಇನ್ನು ಮುಂದೆ ಸರಕಾರದ ವತಿಯಿಂದ ಮೈಸೂರು ದಸರವನ್ನು ನಡೆಸಲಾಗುವುದಿಲ್ಲ ಎಂದು ಹೇಳುವ ಧೈರ್ಯವಂತ ಸರಕಾರವನ್ನು ಕರ್ನಾಟಕದಲ್ಲಿ ಕಾಣಬಹುದೆ? ಹಾಗೆ ಹೇಳಿದರೆ ಇದೇ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವವರು ಹೇಗೆ ಪ್ರತಿಕ್ರಿಯೆ ನೀಡಬಹುದು? ಹಾಗೆ ನೋಡಿದರೆ ಮೈಸೂರು ಸಂಸ್ಥಾನ ಬ್ರಿಟೀಷರ ವಿರುದ್ಧ ಗಟ್ಟಿ ನೆಲೆಯಲ್ಲಿ ಹೋರಾಡಿದ್ದೇ ಇಲ್ಲ. ‘ದೇಶದ್ರೋಹಿ’ ಕುಟುಂಬಕ್ಕೆ ವರುಷ ವರುಷ ಜನರ ತೆರಿಗೆ ದುಡ್ಡಿನಿಂದ ಲಕ್ಷ ಲಕ್ಷ ಎಣಿಸುತ್ತಾರಲ್ಲ ಅದನ್ನೂ ನಿಲ್ಲಿಸಬೇಕಲ್ಲವೇ? ಸರಕಾರಗಳಿಗೆ ಈ ಉತ್ಸವ, ಜಯಂತಿಗಳೆಲ್ಲವೂ ಮತ ಬ್ಯಾಂಕ್ ಮತ್ತು ಹಣ ಮಾಡುವ ದಂಧೆಗಳಷ್ಟೇ. ದಸರೆಯ ನೆಪದಲ್ಲಿ ಟಾರು ಬಳಿಯಲು, ರಸ್ತೆಗಳನ್ನು ಸಿಂಗರಿಸಲು ಪ್ರತೀ ವರುಷ ಹಣ ಬಿಡುಗಡೆಯಾಗುತ್ತದೆ. ವರುಷ ಮುಗಿಯುವದರೊಳಗೆ ಕೀಳುವಂತಹ ಟಾರನ್ನು ಹಾಕುವುದು ದುಡ್ಡು ಮಾಡುವ ಉದ್ದೇಶದಿಂದಲೇ ಅಲ್ಲವೇ? ಈ ಮತ ಬ್ಯಾಂಕ್, ಭ್ರಷ್ಟಾಚಾರದ ಲೆಕ್ಕದಲ್ಲಿ ನೋಡಿದರೆ ಸರಕಾರ ಎಲ್ಲ ಉತ್ಸವ ಜಯಂತಿಗಳನ್ನೂ ನಿಲ್ಲಿಸಿಬಿಡಬೇಕು. ಆದರೆ ಈ ಉತ್ಸವಗಳಿಂದ ಒಂದು ಅನುಕೂಲವೂ ಇದೆ. ಅದು ಪಾರಂಪರಿಕ ತಾಣಗಳ ಕಟ್ಟುನಿಟ್ಟು ನಿರ್ವಹಣೆ, ಕಾಲಕಾಲಕ್ಕೆ ನಡೆಯುವ ನವೀಕರಣ ಮತ್ತು ಪ್ರವಾಸೋದ್ಯಮಕ್ಕೆ ಅಪಾರ ಪ್ರೋತ್ಸಾಹ. ಮೈಸೂರಿಗೆ ವರುಷದಿಂದ ವರುಷಕ್ಕೆ ಪ್ರವಾಸಿಗರ ಸಂಖೈ ಹೆಚ್ಚುವುದಕ್ಕೆ ದಸರಾ ಮೆರವಣಿಗೆಯ ಕೊಡುಗೆಯನ್ನು ಕಡೆಗಣಿಸಲಾಗದು. ಅದೇ ಲೆಕ್ಕದಲ್ಲಿ ಟಿಪ್ಪು ಜಯಂತಿಯಿಂದ ಶ್ರೀರಂಗಪಟ್ಟಣ ಒಂದಷ್ಟು ಸಿಂಗಾರಗೊಂಡು ಪ್ರವಾಸಿಗರ ಸಂಖೈ ಹೆಚ್ಚಿ ವ್ಯಾಪಾರ ವಹಿವಾಟು ಹೆಚ್ಚಿದರೆ ಯಾಕೆ ಬೇಡವೆನ್ನಬೇಕು? ಟಿಪ್ಪು ಜಯಂತಿಯ ಹೆಸರಿನಲ್ಲಿ ಎಲ್ಲಾ ಜಿಲ್ಲೆ ತಾಲ್ಲೂಕುಗಳಿಗೆ ದುಡ್ಡು ಹಂಚುವುದನ್ನು ಬಿಟ್ಟು ಅಷ್ಟೂ ದುಡ್ಡನ್ನು ಶ್ರೀರಂಗಪಟ್ಟಣದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಬಳಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆಯೆನ್ನುವುದನ್ನು ಮರೆಯಬಾರದು.

No comments:

Post a Comment