Sep 1, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2.

ನಾಗೇಶ್ ಹೆಗಡೆ.
01/09/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಆದರೂ ಬುದ್ಧ – ಗಾಂಧೀಜಿಯವರಂಥ ಅಹಿಂಸಾವಾದಿಗಳ ನಾಡಿನಲ್ಲಿ ಗೋವಧೆ ಸರಿಯಲ್ಲ ತಾನೆ?
ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.

ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನುವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರಿಸಬಹುದಿತ್ತು. ‘ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರ ಇಲಿಗೆ ನೋವಿನ ಅನುಭವ ಆಗುವುದಿಲ್ಲ’ ಎಂದು ಹೆಸರಾಂತ ವೈದ್ಯ – ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೇ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ ‘ಶರಣಾಗತ’ ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ. ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.

ಆದರೆ ಹಸುವನ್ನು ಹಿಂಸಿಸಿದಾಗ ನಮ್ಮ ಮನಸ್ಸಿಗೇ ನೋವಾಗುತ್ತದಲ್ಲ?
ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು..... ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, ‘ನನ್ನನ್ನು ಕೊಂದುಬಿಡ್ರಪ್ಪಾ’ ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲು ತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿ ಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್ ಟ್ರಬಲ್, ಹೊಟ್ಟೆನೋವಿನಿಂದ ಸಂಕಟಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, ‘ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ’ ಎನ್ನುವುದು ಅದೆಷ್ಟು ಸರಿ? ಅಥವಾ, ‘ಆಡು – ಕುರಿ – ಹಂದಿ – ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲುವುದು ಸಲ್ಲ’ ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ 33 ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ 22 ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ ಮುಂಡ ಕಾಲು ಗೊರಸುಗಳನ್ನು (ಅದು ಕುರಿ – ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವ ಅಂಗಡ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳ ನಡೆಯಕೂಡದು.

ತಥಾಕಥಿತ ಸುಧಾರಿತ ದೇಶಗಳಲ್ಲಿ ಬಹುಪಾಲು ಧಾನ್ಯವೆಲ್ಲ ಪಶು ಆಹಾರಕ್ಕೆಂದೇ ಬಳಕೆಯಾಗುತ್ತದೆ. ಜನರು ಕಾಳುಕಡಿ ತಿನ್ನುವ ಬದಲು ಮಾಂಸವನ್ನೇ ತಿನ್ನುತ್ತಾರೆ. ಒಂದು ಕಿಲೊ ಮಾಂಸ ಬೆಳೆಸಲು 150 ಕಿಲೋ ಧಾನ್ಯವನ್ನು ವ್ಯಯಿಸಬೇಕಾಗುತ್ತದೆ. ನಮ್ಮಲ್ಲೂ ಅದೇ ಸಂಸ್ಕೃತಿ ರೂಢಿಗೆ ಬಂದರೆ ಧಾನ್ಯದ ಅಭಾವ ತಲೆದೋರೀತಲ್ಲವೆ? ಭಾರತದ ಕೃಷಿಭೂಮಿಗೆ ಅಷ್ಟೊಂದು ಧಾರಣ ಸಾಮರ್ಥ್ಯ ಇದೆಯೆ?
ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ 70 ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ 50 ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು 84 ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ 24 ಕೋಟಿ ಟನ್ ಇದ್ದು ಅದರ ಶೇಕಡಾ 95 ಭಾಗ ಪಶು ಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿ ವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್ ಗೆ 28 ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖೈಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ 900 ಲೀಟರ್ ನೀರು ವ್ಯಯವಾಗುತ್ತಿದೆ.

ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನು ಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ “ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ” ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ.

ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತ್ತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ – ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್ ಗಳು ಬಂದಿವೆ. ಜರ್ಸಿ ಅಥವಾ ಎಚ್ ಎಫ್ ಹಸುಗಳಿಗೆ ಹೊರಿ ಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಜಾಲಿ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ – ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ..... ಅಂಥ ಅನೈಸರ್ಗಿಕ ಹಾಲು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೋ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.

ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖೈಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. “ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ 60ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ” ಎಂದು ಐಸೆಕ್ ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ 20ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೀಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರ ಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು – ಕುರಿಗಳನ್ನು ಬೆಳೆಸುವುದು.

ದನದ ಮಾಂಸಕ್ಕೆ ಬದಲಿಯಾಗಿ ಆಡು – ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು – ಮೇಕೆಗಳು ಲಂಗುಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ – ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಯಲಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು – ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.

ಮುಂದುವರೆಯುವುದು.....

1 comment:

  1. ಗೋ ರಕ್ಷಣೆ ಎಂಬುದು ಬಲಪಂಥೀಯರ ಒಂದು ರಾಜಕೀಯ ಅಸ್ತ್ರ. ಇದರ ಅರಿವಿಲ್ಲದ ಹಿಂದೂಗಳು ಬಲಪಂಥೀಯ ಪಕ್ಷಕ್ಕೆ ಮತ ಹಾಕಿ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆ. ಗೋವಧೆ ನಿಷೇಧ ಎಂಬುದು ಹಿಂದೂ ವೋಟ್ ಬ್ಯಾಂಕ್ ನಿರ್ಮಾಣದ ಒಂದು ಪ್ರಧಾನ ವಿಧಾನವಾಗಿದೆ ಹೊರತು ಇದರಿಂದ ಹಿಂದೂಗಳಿಗೆ ಯಾವ ಪ್ರಯೋಜನವೂ ಇಲ್ಲ. ಸಂಪೂರ್ಣ ಗೋವಧೆ ನಿಷೇಧ ಆದಲ್ಲಿ ಅದರಿಂದ ಹಿಂದೂಗಳಿಗೆ ತೊಂದರೆಯಾಗಬಹುದೇ ಹೊರತು ಯಾವ ಪ್ರಯೋಜನವೂ ಇಲ್ಲ. ಭಾರತದ ಸಂವಿಧಾನದ ೪೮ನೇ ಪರಿಚ್ಛೇದದಲ್ಲಿ ಗೋರಕ್ಷಣೆ ಹಾಗೂ ಗೋವಧೆ ನಿಷೇಧದ ಬಗ್ಗೆ ಹೇಳಲಾಗಿದೆ. ಸಂವಿಧಾನ ಹಾಗೂ ಸರ್ಕಾರ ಗೋರಕ್ಷಣೆಯ ವಿಷಯದಲ್ಲಿ ಮೂಗು ತೂರಿಸುವ ಅಗತ್ಯ ಇರಲಿಲ್ಲ ಏಕೆಂದರೆ ಗೋವು ಎಂಬುದು ವಿನಾಶದ ಅಂಚಿನಲ್ಲಿ ಇರುವ ಪ್ರಾಣಿ ಅಲ್ಲ. ಎಲ್ಲಿಯವರೆಗೆ ಮನುಷ್ಯನಿಗೆ ಹಾಲಿನ ಅಗತ್ಯ ಇರುತ್ತದೆಯೋ ಅಲ್ಲಿಯವರೆಗೆ ಗೋವು ನಾಶವಾಗುವ ಸಾಧ್ಯತೆ ಇಲ್ಲವೇ ಇಲ್ಲ. ದೇಶದಲ್ಲಿ ಹಾಲಿನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆಯೇ ಹೊರತು ಕಡಿಮೆ ಆಗಿಲ್ಲ. ಇದೊಂದೇ ಮಾನದಂಡ ಸಾಕು ಗೋವಿನ ರಕ್ಷಣೆಗೆ ಯಾವುದೇ ಕಾನೂನಿನ ಅಗತ್ಯ ಇಲ್ಲ ಎಂದು ಹೇಳಲು. ಪ್ರಪಂಚದಲ್ಲಿರುವ ೧೯೬ ದೇಶಗಳಲ್ಲಿ ಭಾರತವನ್ನು ಹೊರತುಪಡಿಸಿದರೆ ಬೇರಾವುದೇ ದೇಶದಲ್ಲಿ ಗೋವಧೆ ಎಂಬುದು ಸಮಸ್ಯೆಯೇ ಆಗಿಲ್ಲ, ನಮ್ಮ ದೇಶದಲ್ಲಿ ಇದೊಂದು ಸಮಸ್ಯೆ ಆಗಿರುವುದು ನಮ್ಮ ವಿವೇಚನೆಯ ಕೊರತೆಯಿಂದಲೇ.

    ಗೋವಿನ ರಕ್ಷಣೆಯ ಹೆಸರಿನಲ್ಲಿ ಕೆಲವರು ಜನರ ಗುಂಪು ಕಟ್ಟಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಪೊಲೀಸರು ಹಾಗೂ ಆಡಳಿತ ಹಾಗೂ ಹಿಂದೂಗಳಲ್ಲಿ ಬಲಪಂಥೀಯರು ಸಮರ್ಥಿಸುತ್ತಾರೆ. ಗೋವಿನ ರಕ್ಷಣೆಯ ಗುತ್ತಿಗೆ ಕೆಲವು ಹಿಂದೂ ಗುಂಪುಗಳಿಗೆ ಕೊಟ್ಟಿದೆಯೇನೋ ಎಂಬ ರೀತಿಯಲ್ಲಿ ಪೊಲೀಸರು ನಡೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಪೊಲೀಸರು ಬಲಪಂಥೀಯರ ಮೆದುಳು ತಿಕ್ಕುವಿಕೆಗೆ (ಬ್ರೈನ್ ವಾಶ್) ಒಳಗಾಗಿರುವುದು. ಗೋವಿನ ರಕ್ಷಣೆಯ ಗುತ್ತಿಗೆ ತೆಗೆದುಕೊಂಡ ಬಲಪಂಥೀಯರು ತಮ್ಮ ಕಾನೂನುಬಾಹಿರ ನಡವಳಿಗೆ ಕೊಡುವ ಕಾರಣ ಸರ್ಕಾರ ಹಾಗೂ ಪೊಲೀಸರು ಗೋವಧೆಯನ್ನು ತಡೆಯುತ್ತಿಲ್ಲ, ಹಾಗಾಗಿ ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದು ನ್ಯಾಯೋಚಿತ ಎಂದು. ನಕ್ಸಲರು ಕೂಡ ಹೇಳುವುದು ಇದನ್ನೇ. ಸರ್ಕಾರ ಜನವಿರೋಧಿ ನಿಲುವನ್ನು ತೆಗೆದುಕೊಳ್ಳುತ್ತಿರುವ ಕಾರಣ ತಾವು ಶಸ್ತ್ರಾಸ್ತ್ರ ಹಿಡಿದು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತೇವೆ ಎಂಬುದು ಅವರ ಸಮರ್ಥನೆ. ಸರ್ಕಾರ ನಕ್ಸಲರ ವಿರುದ್ಧ ಯಾವ ರೀತಿ ಕಠಿಣ ಕ್ರಮ ತೆಗೆದುಕೊಳ್ಳುತ್ತದೆಯೋ ಅದೇ ರೀತಿಯ ಕಠಿಣ ಕ್ರಮವನ್ನು ಗೋರಕ್ಷಣೆಯ ಹೆಸರಿನಲ್ಲಿ ದಾಂಧಲೆ ನಡೆಸುವ ಬಲಪಂಥೀಯರ ವಿರುದ್ಧ ತೆಗೆದುಕೊಳ್ಳುತ್ತಿಲ್ಲ, ಹೀಗಾಗಿ ಇಂಥ ಪುಂಡಾಟಿಕೆಗೆ ಸರ್ಕಾರ ಹಾಗೂ ಪೊಲೀಸರ ಅನುಮತಿ ಇದೆ ಎಂದು ದಾಂಧಲೆ ನಡೆಸುವ ಗುಂಪುಗಳು ತಿಳಿದುಕೊಂಡಿವೆ.

    ಬಲಪಂಥೀಯ ದಾಂಧಲೆಕೋರರ ವಿರುದ್ಧ ಸರ್ಕಾರ ಇದೇ ರೀತಿಯ ಸಡಿಲ ನೀತಿ ಅನುಸರಿಸಿದರೆ ಭವಿಷ್ಯದಲ್ಲಿ ಬೇರೆ ಬೇರೆ ಗುಂಪುಗಳು ಕೂಡ ಇದೇ ರೀತಿ ಕಾನೂನು ಕೈಗೆತ್ತಿಕೊಳ್ಳುವ ಚಾಳಿ ಬೆಳೆಯಬಹುದು. ಸರ್ಕಾರೀ ಅಧಿಕಾರಿಗಳು, ನೌಕರರು ಲಂಚಕ್ಕೆ ಕೈಯೊಡ್ಡುವುದು ಅಥವಾ ಜನರ ಕಾನೂನುಬದ್ಧ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡದೆ ಸತಾಯಿಸುವುದು ಕೂಡ ಕಾನೂನಿಗೆ ವಿರೋಧ. ಸರ್ಕಾರ ಇಂಥ ವಿಷಯಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕೆಲವರು ಜನರ ಗುಂಪು ಕಟ್ಟಿ ಕಾನೂನನ್ನು ಕೈಗೆತ್ತಿಕೊಂಡು ಲಂಚಕೋರರಿಗೆ ಹೊಡೆದು ಬಡಿದು ಕೊಂದು ಹಾಕಿದರೆ ಸರ್ಕಾರ ಏನು ಮಾಡುತ್ತದೆ? ಲೋಕಾಯುಕ್ತ ಹಾಗೂ ಮೇಲಧಿಕಾರಿಗಳು ಲಂಚ ಕೋರರನ್ನು ನಿಯಂತ್ರಿಸುತ್ತಿಲ್ಲ ಎಂದು ಜನರೇ ಕಾನೂನನ್ನು ಕೈಗೆತ್ತಿಕೊಂಡರೆ ಏನಾದೀತು? ದೇಶದಲ್ಲಿ ಅರಾಜಕತೆ ಉಂಟಾಗಲಾರದೇ?

    ReplyDelete