ಜೂನ್ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 5: ಕೊಮ್ಮಘಟ್ಟ ಕೆರೆ - 2

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಇಂದು ಕ್ಯಾಮೆರಾ, ದೊಡ್ಡ ಲೆನ್ಸುಗಳೆರಡನ್ನೂ ತಂದಿದ್ದೆ. ಚಲುಕದ ಬಾತುಗಳು ಕೆರೆಯ ಮಧ್ಯಭಾಗದಲ್ಲಿದ್ದವು. ಕ್ಯಾಮೆರಾಗೆ ಅಷ್ಟು ಚೆನ್ನಾಗಿ ಸಿಗುತ್ತಿರಲಿಲ್ಲ. ಜೊತೆಗೆ ಸಂಜೆಯ ಸಮಯವಾದ್ದರಿಂದ ಕೆರೆಯ ನೀರು ಗಾಳಿಗೆ ತುಯ್ದಾಡುತ್ತಿತ್ತು. ಪ್ರತಿಬಿಂಬದ ಚಿತ್ರಗಳನ್ನು ತೆಗೆಯೋದಿಕ್ಕೆ ನನಗೆ ಹೆಚ್ಚು ಆಸಕ್ತಿ. ಬೆಳಗಿನ ಜಾವದಲ್ಲಿ ಸೂರ್ಯಕಿರಣಗಳಿನ್ನೂ ತಣ್ಣನೆಯ ಬೆಳಕನ್ನು ಹೊರಸೂಸುವಾಗ ಗಾಳಿಯ ತುಯ್ದಾಟ ಇಲ್ಲದೇ ಇದ್ದಾಗ ಕೆರೆಯ ನೀರು ಕನ್ನಡಿಯಂತಿರುತ್ತದೆ. ಎಂಟು, ಒಂಭತ್ತು ಘಂಟೆಯೊಳಗಷ್ಟೇ ಆ ಪ್ರತಿಬಿಂಬದ ಚಿತ್ರಗಳನ್ನು ತೆಗೆಯಬಹುದು.

ಜೂನ್ 10, 2025

ಬೆಚ್ಚಿ ಬೀಳಿಸದ "ಸ್ಟೋಲನ್"

ಸ್ಟೋಲನ್ ಚಿತ್ರದ ಒಂದು ದೃಶ್ಯ 
ಡಾ. ಅಶೋಕ್. ಕೆ. ಆರ್
ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳ ಮಗು ಕಳ್ಳತನವಾಗ್ತದೆ. ಮಗು ಕದ್ದು ಓಡುತ್ತಿದ್ದವಳು ಅದೇ ತಾನೇ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಡಿಕ್ಕಿ ಹೊಡೆಯುತ್ತಾಳೆ. ಆ ಯುವಕನ ಮೇಲೇ ಮೊದಲ‌ ಅನುಮಾನ. ಕೊನೆಗೆ ಆ ಯುವಕ ಕಳ್ಳತನಕ್ಕೆ ಸಾಕ್ಷಿಯಾಗುತ್ತಾನೆ. ಮಗು ಕಳೆದುಕೊಂಡ ಯುವತಿ, ಸಾಕ್ಷೀದಾರ ಯುವಕ, ಯುವಕನನ್ನು ಮನೆಗೆ ಕರೆದೊಯ್ಯಲು ಬಂದ ಅವನಣ್ಣ ಕೂಡ ಇಷ್ಟವಿದ್ದೊ ಇಷ್ಟವಿಲ್ಲದೆಯೋ ಮಗುವನ್ನು ಹುಡುಕುವುದರಲ್ಲಿ ತೊಡಗಿಕೊಳ್ಳುತ್ತಾರೆ.

ಜೂನ್ 6, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 4: ಕೊಮ್ಮಘಟ್ಟ ಕೆರೆ – 1

ಚಲುಕದ ಬಾತು (ನಾರ್ಥರ್ನ್‌ ಶೆವಲರ್‌)
ಡಾ. ಅಶೋಕ್.‌ ಕೆ. ಆರ್
ಕೊಮ್ಮಘಟ್ಟ ಕೆರೆಗೆ ಫೋಟೋಗ್ರಫಿಗೆ ಹೋಗಿ ಬಹಳವೇ ಕಾಲವಾಗಿತ್ತು
. ಇ – ಬರ್ಡ್‌ ತಂತ್ರಾಂಶದಲ್ಲಿ ಚಲುಕದ ಬಾತು (ನಾರ್ಥರ್ನ್‌ ಶೆವಲರ್‌ಗಳು) ಬಂದಿದ್ದಾವೆ ಎಂಬ ಮಾಹಿತಿಯಿತ್ತು. ಏಳು ವರ್ಷಗಳ ಹಿಂದೆ ಉಲ್ಲಾಳ ಕೆರೆಯಲ್ಲಿ ಚಲುಕದ ಬಾತುಗಳನ್ನು ಕಂಡು ಫೋಟೋಗ್ರಫಿ ಮಾಡಿದ್ದೆ. ಅಲ್ಲೇ ಕೆರೆಯ ಬಳಿ ಪರಿಚಯವಾಗಿದ್ದ ದೇವೆಂದ್ರ ಕುಮಾರ್‌ ಮತ್ತವರ ಸ್ನೇಹಿತರಾದ ಸದಾಶಿವ ಪೂಜಾರಿಯವರ ಜೊತೆಯಲ್ಲಿ.

ಮೇ 20, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 3: ಆಗರ ಕೆರೆಯಲ್ಲಿನ್ನೊಂದು ದಿನ - 31/12/2024

Egret
ಸಾಮಾನ್ಯ ಪಕ್ಷಿಯ ವಿಶೇಷ ನೋಟ - ಬೆಳ್ಳಕ್ಕಿ
ಡಾ. ಅಶೋಕ್.‌ ಕೆ. ಆರ್
ವರುಷದ ಕೊನೆಯ ದಿನ ಆಗರ ಕೆರೆಗೆ ಮತ್ತೊಂದು ಸುತ್ತು ಹೋಗುವ ಮನಸ್ಸಾಯಿತು. ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗಲೂ‌  ಹೆಚ್ಚೇನು ಪಕ್ಷಿಗಳು ಅಲ್ಲಿ ಸಿಕ್ಕಿರಲಿಲ್ಲವಾದರೂ ಅಲ್ಲಿನ ಪರಿಸರ ಚೆಂದಿತ್ತು.
ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ಜೊತೆಗೆ ಮೀನು ಹಿಡಿದು ದಡದಲ್ಲಿ ಅದನ್ನು ಸ್ವಚ್ಛಗೊಳಿಸಿದರೆ ಅಂದಿನಂತೆ ಒಂದಷ್ಟು ಗರುಡಗಳ (ಬ್ರಾಮಿಣಿ ಕೈಟ್) ಫೋಟೋ ತೆಗೆಯಲಂತೂ ಮೋಸವಿರಲಿಲ್ಲ. ಉಳಿದಿದ್ದ ಕೊನೆಯೆರಡು ರಜೆಗಳ ಸದುಪಯೋಗ ಈ ರೀತಿಯೇ ಆಗಬೇಕಲ್ಲವೇ?!

ನಿರೀಕ್ಷಿಸಿದಂತೆ ಹೆಚ್ಚಿನ ಪಕ್ಷಿಗಳಿರಲಿಲ್ಲ. ಮೀನು ಹಿಡಿಯುವವರಿದ್ದರು. ಕಳೆದ ಬಾರಿ ಹಳದಿ ಹೂವುಗಳ ಪ್ರತಿಬಿಂಬ ತೆಗೆದ ಸ್ಥಳಕ್ಕೆ ಹೋದೆ. ದೂರದಲ್ಲೊಂದು ಬೂದು ಬಕ (ಗ್ರೆ ಹೆರಾನ್) ಕುಳಿತಿತ್ತು. ಪ್ರತಿಬಿಂಬ ಪೂರ್ತಿ ಕಾಣಿಸುತ್ತಿರಲಿಲ್ಲವಾದರೂ ಮುಂಜಾನೆಯ ಬೆಳಕಿಗೆ ಚೆಂದವಾಗೇನೋ ಕಾಣುತ್ತಿತ್ತು. ಅದರ ಫೋಟೋ ತೆಗೆಯಲು ಪ್ರಯತ್ನಿಸುವಾಗ ಒಂದು ಜೋಡಿ ಗುಳುಮುಳುಕಗಳು ಕೂಡ ಆಟವಾಡುತ್ತಾ, ತಿಂಡಿ ತಿನ್ನುತ್ತಾ ಬೂದು ಬಕದ ಬಳಿಯೇ ಬಂದವು. ಹೇಳಿಕೊಳ್ಳುವಂತಹ ಫೋಟೋ ಸಿಗಲಿಲ್ಲವಾದರೂ ಮನಸಿಗೆ ಮುದ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ.

ಮೇ 2, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 2: ಆಗರ ಕೆರೆಯಲ್ಲೊಂದು ದಿನ…

ಮಂಜಾವರಿಸಿದ ಕೆರೆಯಲ್ಲಿ ಗುಳುಮುಳುಕ
ಡಾ. ಅಶೋಕ್. ಕೆ. ಆರ್.  
ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ ಆಗರ ಕೆರೆಗೆ ಬಹಳ ವರುಷಗಳ ಹಿಂದೆ ಒಂದು ಬಾರಿ ಹೋಗಿದ್ದೆ. ಆ ಕೆರೆ ಈಗ ಹೇಗಿದೆ, ಪಕ್ಷಿಗಳಿದ್ದಾವೋ ಇಲ್ಲವೋ ನೋಡೋಣವೆಂದುಕೊಂಡು ಬೆಳಗಿನ ಆರರ ಸಮಯದಷ್ಟೊತ್ತಿಗೆ ಆಗರ ಕೆರೆಯನ್ನು ತಲುಪಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ಕಾರಣ ಆಗರ ಕೆರೆ ತುಂಬಿ ನಿಂತಿತ್ತು. ಕೆರೆಯ ಒಂದು ಬದಿಯಲ್ಲಿ ನಮ್ಮ ಅಭಿವೃದ್ಧಿಯ ಕುರುಹಾಗಿ ಕೆಲವು ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಮತ್ತೊಂದು ತುದಿಯಲ್ಲಿ ಕಿರು ಅರಣ್ಯ ಹರಡಿಕೊಂಡಿತ್ತು. ಭಾನುವಾರವಾಗಿದ್ದರಿಂದ ಜನರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಬೆಳಗಿನ ಕಾಯಕ

ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.

ಜನ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 1: ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.

Indian paradise flycatcher/ ಬಾಲದಂಡೆ/ ರಾಜಹಕ್ಕಿ 
ಡಾ. ಅಶೋಕ್.‌ ಕೆ. ಆರ್

ಹೆಂಡ್ರುಗೆ ಆರ್‌.ಆರ್.‌ ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್‌ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್‌ ಪ್ಯಾರಡೈಸ್‌ ಫ್ಲೈಕ್ಯಾಚರ್‌ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್‌ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!