May 20, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 3: ಆಗರ ಕೆರೆಯಲ್ಲಿನ್ನೊಂದು ದಿನ - 31/12/2024

Egret
ಸಾಮಾನ್ಯ ಪಕ್ಷಿಯ ವಿಶೇಷ ನೋಟ - ಬೆಳ್ಳಕ್ಕಿ
ಡಾ. ಅಶೋಕ್.‌ ಕೆ. ಆರ್
ವರುಷದ ಕೊನೆಯ ದಿನ ಆಗರ ಕೆರೆಗೆ ಮತ್ತೊಂದು ಸುತ್ತು ಹೋಗುವ ಮನಸ್ಸಾಯಿತು. ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗಲೂ‌  ಹೆಚ್ಚೇನು ಪಕ್ಷಿಗಳು ಅಲ್ಲಿ ಸಿಕ್ಕಿರಲಿಲ್ಲವಾದರೂ ಅಲ್ಲಿನ ಪರಿಸರ ಚೆಂದಿತ್ತು.
ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ಜೊತೆಗೆ ಮೀನು ಹಿಡಿದು ದಡದಲ್ಲಿ ಅದನ್ನು ಸ್ವಚ್ಛಗೊಳಿಸಿದರೆ ಅಂದಿನಂತೆ ಒಂದಷ್ಟು ಗರುಡಗಳ (ಬ್ರಾಮಿಣಿ ಕೈಟ್) ಫೋಟೋ ತೆಗೆಯಲಂತೂ ಮೋಸವಿರಲಿಲ್ಲ. ಉಳಿದಿದ್ದ ಕೊನೆಯೆರಡು ರಜೆಗಳ ಸದುಪಯೋಗ ಈ ರೀತಿಯೇ ಆಗಬೇಕಲ್ಲವೇ?!

ನಿರೀಕ್ಷಿಸಿದಂತೆ ಹೆಚ್ಚಿನ ಪಕ್ಷಿಗಳಿರಲಿಲ್ಲ. ಮೀನು ಹಿಡಿಯುವವರಿದ್ದರು. ಕಳೆದ ಬಾರಿ ಹಳದಿ ಹೂವುಗಳ ಪ್ರತಿಬಿಂಬ ತೆಗೆದ ಸ್ಥಳಕ್ಕೆ ಹೋದೆ. ದೂರದಲ್ಲೊಂದು ಬೂದು ಬಕ (ಗ್ರೆ ಹೆರಾನ್) ಕುಳಿತಿತ್ತು. ಪ್ರತಿಬಿಂಬ ಪೂರ್ತಿ ಕಾಣಿಸುತ್ತಿರಲಿಲ್ಲವಾದರೂ ಮುಂಜಾನೆಯ ಬೆಳಕಿಗೆ ಚೆಂದವಾಗೇನೋ ಕಾಣುತ್ತಿತ್ತು. ಅದರ ಫೋಟೋ ತೆಗೆಯಲು ಪ್ರಯತ್ನಿಸುವಾಗ ಒಂದು ಜೋಡಿ ಗುಳುಮುಳುಕಗಳು ಕೂಡ ಆಟವಾಡುತ್ತಾ, ತಿಂಡಿ ತಿನ್ನುತ್ತಾ ಬೂದು ಬಕದ ಬಳಿಯೇ ಬಂದವು. ಹೇಳಿಕೊಳ್ಳುವಂತಹ ಫೋಟೋ ಸಿಗಲಿಲ್ಲವಾದರೂ ಮನಸಿಗೆ ಮುದ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ.
Grey heron and little grebe
ಬೂದು ಬಕ ಮತ್ತು ಗುಳುಮುಳುಕ
ಹಾದಿಯಲ್ಲೊಂದು ಬೆಳ್ಳಕ್ಕಿ (ಇಗ್ರೆಟ್‌) ಹೊಂಬಿಸಿಲಿಗೆ ಮೈಯೊಡ್ಡುತ್ತ ರೆಕ್ಕೆಪುಕ್ಕಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಲ್ಲಿ ಮಗ್ನವಾಗಿತ್ತು. ಪೂರ್ವದಿಕ್ಕಿನಿಂದ ಬೀಳುತ್ತಿದ್ದ ರವಿಯ ಕಿರಣಗಳು ಸ್ವಲ್ಪ ಬಿಳಿ – ಸ್ವಲ್ಪ ಕಂದು ರೆಕ್ಕೆಗಳನ್ನು ಹೊಂಬಣ್ಣದಲ್ಲಿ ಅದ್ದಿ ತೆಗೆದಂತೆ ಮಾರ್ಪಡಿಸಿತ್ತು. ಸ್ವಲ್ಪ ದೂರದಲ್ಲಿ ಕುಳಿತು ನಿಧಾನಕ್ಕೆ ಪಕ್ಷಿಯನ್ನು ಸಮೀಪಿಸಿದೆ. ನೆಲದ ಮಟ್ಟದಿಂದ ಬೆಳ್ಳಕ್ಕಿಯ ಕಣ್ಣಿನ ಮಟ್ಟದಲ್ಲಿ ಫೋಟೋ ತೆಗೆಯಲಾರಂಭಿಸಿದೆ. ಫೋರ್‌ಗ್ರೌಂಡಿನಲ್ಲೂ ಒಂದಷ್ಟು ಹುಲ್ಲಿದ್ದಿದ್ದು ಚಿತ್ರಗಳ ಸೊಬಗನ್ನು ಹೆಚ್ಚಿಸಿತು. ಎಲ್ಲೆಡೆಯೂ ಕಂಡು ಬರುವ ಈ ಪಕ್ಷಿಗಳ ಫೋಟೋ ತೆಗೆಯುವುದನ್ನು ನಾವು ಕಾಲಕ್ರಮೇಣ ಮರೆತೇಬಿಡುತ್ತೇವೆ. ಸಾಮಾನ್ಯವಾಗಿ ಕಂಡು ಬರುವ ಪಕ್ಷಿಯ ಫೋಟೋಗಳನ್ನು ಎಷ್ಟೂಂತ ತೆಗೆಯುವುದು ಎಂಬ ಅಸಡ್ಡೆ. ಆದರೆ ಸಾಮಾನ್ಯ ಪಕ್ಷಿಗಳು ಈ ರೀತಿಯ ಬೆಳಕು – ನೆರಳಿನಾಟದಲ್ಲಿ ಹೊಸತಾಗಿ ಕಾಣಿಸುತ್ತವೆ, ಫೋಟೋಗ್ರಫಿಯನ್ನು ಮತ್ತಷ್ಟು ಕಲಿಯಲು ಪ್ರೇರೇಪಿಸುತ್ತವೆ.

ಸುಮಾರು ಸಮಯ ರೆಕ್ಕೆಗಳನ್ನು ಸ್ವಚ್ಛಗೊಳಿಸಿಕೊಂಡು ಅಲ್ಲಿಯೇ ನಿಂತಿದ್ದ ಬೆಳ್ಳಕ್ಕಿ ಹಾರಿ ಹೋಗುವವರೆಗೂ ನಾನೂ ಕುಳಿತಿದ್ದ ಸ್ಥಳದಿಂದ ಅಲುಗಾಡಲಿಲ್ಲ. ಅದು ಹಾರಿ ಹೋದ ನಂತರ ಇನ್ನೊಂದಷ್ಟು ಮುಂದೆ ಸಾಗಿದೆ. ಕೆರೆಯ ದಡದಲ್ಲಿ ಬೆಳಿದಿದ್ದ ಹುಲ್ಲಿನ ಸಮೀಪ ನಾಲ್ಕು ಕೆಂಪು ಟಿಟ್ಟಿಭಗಳು (ರೆಡ್‌ ವ್ಯಾಟಲ್ಡ್‌ ಲ್ಯಾಪ್‌ವಿಂಗ್) ಗಲಾಟೆ ಮಾಡುತ್ತ ಆಹಾರ ಹುಡುಕುತ್ತಿದ್ದವು. ಅಲ್ಲಿಂದ ಹಾರಿ ಬಂದ ಬೆಳ್ಳಕ್ಕಿ ಇಲ್ಲೇ ಒಂದು ಬಂಡೆಯ ಮೇಲೆ ವಿರಮಿಸಿತ್ತು, ಬೂದು ಬಕ ಮತ್ತೊಂದು ನೀರ್ಕಾಗೆಯ ಜೊತೆಗೆ.

ಕೆಂಪು ಟಿಟ್ಟಿಭ

ಟಿಟ್ಟಿಭಗಳ ವರ್ತನೆಯನ್ನು ಗಮನಿಸುತ್ತಿದ್ದವನನ್ನು ಕಂಡು ಮಾತನಾಡಿಸಲು ಬಂದದ್ದು ಪವನ್‌ ಕುಮಾರ್‌ ಎಂಬ ನನ್ನ ತರಹದ ಹವ್ಯಾಸಿ ಫೋಟೋಗ್ರಾಫರ್ (ಅವರ ವೆಬ್ ಪುಟವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ).‌ “ಜೇನು ಗಿಡುಗ (ಓರಿಯೆಂಟಲ್‌ ಹನಿ ಬಝರ್ಡ್‌) ಇಲ್ಲೇ ಒಂದು ಮರದ ಮೇಲಿತ್ತು ನೋಡಿದ್ರಾ?” ಎಂದು ಕೇಳಿದರು. ಕೆರೆಯ ಪಕ್ಷಿಗಳ ಕಡೆಗೇ ಹೆಚ್ಚು ಗಮನ ನನಗೆ. ರಾಪ್ಟರ್‌ಗಳ ಬಗ್ಗೆ ಅಷ್ಟು ಮಾಹಿತಿಯೂ ತಿಳಿದಿಲ್ಲ. ರಾಪ್ಟರ್‌ಗಳ ಫೋಟೋ ತೆಗೆದರೆ ನಂತರ ಅದ್ಯಾವ ಪಕ್ಷಿ ಎಂದು ಬಹಳವೇ ಹುಡುಕಬೇಕು. ಹುಡುಕಿದರೂ ಬಹಳಷ್ಟು ಸಲ ಎಷ್ಟೋ ರಾಪ್ಟರ್‌ಗಳು ಒಂದೇ ತರಹ ಕಾಣಿಸುತ್ತವೆ. ಪವನ್‌ ಜೊತೆ ಮಾತನಾಡುತ್ತಾ ಇರುವಾಗಲೇ ಜೇನು ಗಿಡುಗ ಆಕಾಶದಲ್ಲಿ ಕಾಣಿಸಿತು, ದೂರದಲ್ಲಿ. ಒಂದೆರಡು ಫೋಟೋ ಕ್ಲಿಕ್ಕಿಸಿದೆ. ಹಾರುತ್ತ ಹಾರುತ್ತ ಅದು ಮೇಲೆ ಮೇಲೆ ಸಾಗಿ ಚುಕ್ಕಿಯಂತಾಗಿ ಮರೆಯಾಗಿಯೇ ಹೋಯಿತು.

ಇಷ್ಟರಲ್ಲಿ ಅತ್ತಗಿನ ದಡದಲ್ಲಿ ಮೀನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭವಾಗಿತ್ತು. ಕಳೆದ ಸಲದ ರೀತಿಯಲ್ಲಿಯೇ ಗರುಡ – ಹದ್ದುಗಳು ನೀರಿನಿಂದ ಮೀನಿನ ಭಾಗವನ್ನು ಎತ್ತಿಕೊಳ್ಳಲು ಬರುವಾಗಿನ ಪ್ರತಿಬಿಂಬದ ಫೋಟೋ ತೆಗೆಯಬೇಕೆಂದುಕೊಂಡಿದ್ದೇನಾದರೂ ಈ ಸಲ ಬೆಳಕು ಅದಕ್ಕೆ ಸಹಕರಿಸುತ್ತಿರಲಿಲ್ಲ. ಬಿಸಿಲು ಸ್ವಲ್ಪ ಜಾಸ್ತಿ ಇದ್ದ ಕಾರಣ ನೀರು ಶಾಂತವಾಗುಳಿದಿರಲಿಲ್ಲ. ಪವನ್‌ ಜೊತೆಯಲ್ಲಿ ಮೀನು ಸ್ವಚ್ಛ ಮಾಡುತ್ತಿದ್ದ ಕಡೆಗೆ ಸಾಗಿದೆ. ದೊಡ್ಡ ಲೆನ್ಸು ಬಳಸಿಕೊಂಡು ಫೋಟೋ ತೆಗೆಯಲು ಸಾಧ್ಯವಿರಲಿಲ್ಲ. ಪಕ್ಷಿಗಳು ಅಷ್ಟು ಹತ್ತಿರದಲ್ಲಿದ್ದವು. ಅವತ್ತೇನೋ ಆಕಸ್ಮಿಕವಾಗಿ ೫೦ಎಂಎಂ ಲೆನ್ಸು ತಂದಿದ್ದೆ. ೫೦ ಎಂಎಂ ಲೆನ್ಸ್‌ ಬಳಸಿಯೂ ಪಕ್ಷಿಗಳ ಹಾರಾಟದ ಫೋಟೋ ತೆಗೆಯಬಹುದು ಎಂದು ಇವತ್ತು ಅರಿವಾಯಿತು!
ಮೀನಿಡಿಯುವವರ ಜೊತೆಗೆ ಗರುಡಗಳು

೫೦ ಎಂ ಎಂ ಲೆನ್ಸಿನಲ್ಲಿ ಸೆರೆಯಾದ ಗರುಡಗಳು

ಪವನ್‌ ಹತ್ತಿರದಲ್ಲಿರುವ ಮತ್ತೊಂದು ಕೆರೆಯಲ್ಲಿ ಪಕ್ಷಿಗಳು ಹೆಚ್ಚಿರ್ತವೆ ಎಂದು ತಿಳಿಸಿದರು. ಬ್ಯಾಟರಾಯನದೊಡ್ಡಿ ಕೆರೆ. ಗೂಗಲ್‌ ಮ್ಯಾಪಿನಲ್ಲಿ ಹುಡುಕಿದೆ ಸಿಗಲಿಲ್ಲ. ಅವರೇ ಹುಡುಕಿ ಲೊಕೇಷನ್‌ ಕಳಿಸಿದರು. ಬ್ಯಾಟರಾಯನದೊಡ್ಡಿ ಕೆರೆಯಲ್ಲಿ ಒಂದಷ್ಟು ಮೆಟ್ಟುಗಾಲು ಪಕ್ಷಿ (ಬ್ಲ್ಯಾಕ್‌ ವಿಂಗ್ಡ್‌ ಸ್ಟಿಲ್ಟ್‌), ನಾಮದ ಕೋಳಿ (ಕೂಟ್‌), ಗುಳುಮುಳುಕ (ಗ್ರೀಬ್), ಕೊಳದ ಬಕ (ಇಂಡಿಯನ್‌ ಪಾಂಡ್‌ ಹೆರಾನ್‌), ನೇರಳೆ ಜಂಬುಕೋಳಿ (ಪರ್ಪಲ್ ಸ್ವಾಂಪ್‌ ಹೆನ್), ಒಂದು ಜೋಡಿ ವರಟೆಗಳು (ಇಂಡಿಯನ್‌ ಸ್ಪಾಟ್‌ ಬಿಲ್‌ ಡಕ್‌) ಕಾಣಿಸಿದವು.
ನೇರಳೆ ಜಂಬುಕೋಳಿ
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿಯ ಇತರೆ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment