Nov 20, 2013

ಧರ್ಮ ಮರೆತ ನಾಡಿನಲ್ಲಿ....ಡಾ ಅಶೋಕ್ ಕೆ ಆರ್.

ಅದು ದೈವಗಳ ನಾಡು, ಧಾರ್ಮಿಕತೆಯ ಧರ್ಮಸೂಕ್ಷ್ಮರ ನಾಡು. ಅದು ದಕ್ಷಿಣ ಕನ್ನಡ. ಹಸಿರ ಪರಿಸರದಲ್ಲಿ ಕಾನನದ ನಡುವೆ ಅರಳಿರುವ ಊರು. ದಟ್ಟ ಕಾನನ ನಮ್ಮ ಪೂರ್ವಿಕರಿಗೆ ಹುಟ್ಟಿಸಿದ ಭೀತಿಯ ಕಾರಣದಿಂದಲೋ ಏನೋ ಇಲ್ಲಿರುವ ದೇವಳಗಳ ಸಂಖೈಯೂ ಅಧಿಕ. ದೈವಾರಾಧನೆಯ ಜೊತೆಜೊತೆಗೆ ಭೂತಾರಾಧಾನೆ ಕೂಡ ಇಲ್ಲಿನ ವಿಶೇಷ. ಶಿಕ್ಷಿತರ ಅನುಪಾತ ಗಮನಿಸಿದಾಗ ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಉತ್ತಮ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ನಾಗರೀಕತೆಯ ಅತ್ಯುನ್ನತ ಮಜಲನ್ನು ಕಾಣಬೇಕಿತ್ತು ಆದರೆ ಧಾರ್ಮಿಕ ಮೂಲಭೂತವಾದತನ ಇಲ್ಲಿರುವ ಎಲ್ಲ ಧರ್ಮಗಳಲ್ಲೂ ಸಮಾನರೀತಿಯಲ್ಲಿ ಪ್ರವಹಿಸುತ್ತ ದಕ್ಷಿಣ ಕನ್ನಡಕ್ಕೆ ಮೂಲಭೂತವಾದಿಗಳ, ಸಂಕುಚಿತ ಮನೋಭಾವದವರ ಊರೆಂಬ ಅಪಖ್ಯಾತಿ ದೊರೆಯುವಂತೆ ಮಾಡಿಬಿಟ್ಟಿರುವುದು ದುರಂತ. ಒಂದು ಅಪರಾಧಕ್ಕೆ ಸಿಗುವ ಪ್ರತಿಕ್ರಿಯೆ ಅಪರಾಧಿಯ ಧರ್ಮವನ್ನಾಧರಿಸುತ್ತದೆಯೇ ಹೊರತು ಅಪರಾಧಿಯ ಕೃತ್ಯಕ್ಕಲ್ಲ ಎಂಬುದೇ ಇಲ್ಲಿನ ದುರಂತ.

ಈ ದೈವದತ್ತ ನಾಡಿನಲ್ಲೂ ಕೆಲವು ದೇವರುಗಳು ಉಳಿದೆಲ್ಲ ದೇವರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿವೆ, ಹೆಚ್ಚು ಶಕ್ತಿಯುತವಾದ ದೇವರುಗಳೆಂಬ ನಂಬಿಕೆಗೆ ಪಾತ್ರವಾಗಿವೆ. ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಧರ್ಮಸ್ಥಳ ಕ್ಷೇತ್ರ ಅವುಗಳಲ್ಲೊಂದು. ಧರ್ಮಸ್ಥಳ ಮಂಜುನಾಥ ಎಷ್ಟು ಪ್ರಸಿದ್ಧಿ ಪಡೆದಿದೆಯೋ ಅಷ್ಟೇ ಪ್ರಸಿದ್ಧಿ ಮತ್ತು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗುವುದು ಧರ್ಮಸ್ಥಳದಲ್ಲಿನ ವ್ಯವಸ್ಥೆ. ಅತಿ ಕಡಿಮೆ ದರದಲ್ಲಿ ಸಿಗುವ ರೂಮುಗಳು, ಅನ್ನ ದಾಸೋಹದ ಅಚ್ಚುಕಟ್ಟು ನಿರ್ವಹಣೆಯನ್ನು ಗಮನಿಸಿದ ಮೇಲೆ ಧರ್ಮಸ್ಥಳದ ದೇವಳದ ವ್ಯವಸ್ಥೆಯನ್ನು ಮೆಚ್ಚದೆ ಇರಲಾಗದು. ವಿರೇಂದ್ರ ಹೆಗ್ಡೆಯವರು ಆಡಳಿತಾಧಿಕಾರಿಯಾಗಿರುವ ಧರ್ಮಸ್ಥಳ ಕೇವಲ ಹಣ ಬಾಚುವ ಸಂಸ್ಥೆಯಾಗಿ ಸೀಮಿತವಾಗದೆ ರಾಜ್ಯದ ಬಹುತೇಕ ಕಡೆ ಅನೇಕ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದೆ (ಆ ವಿದ್ಯಾ ಸಂಸ್ಥೆಗಳಲ್ಲಿ ಕೆಲವು ಇತರ ವಿದ್ಯಾಸಂಸ್ಥೆಗಳ ರೀತಿಯಲ್ಲಿಯೇ ಹಣ ಮಾಡುವ ಸಂಸ್ಥೆಗಳಾಗಿರುವುದು ಹೌದು). ಇಲ್ಲಿಯವರೆಗೂ ಧರ್ಮಸ್ಥಳದ ಬಗ್ಗೆ ವೀರೇಂದ್ರ ಹೆಗ್ಡೆಯವರ ಬಗ್ಗೆ ಕೇವಲ ಒಳ್ಳೆಯದನ್ನೇ ಕೇಳುತ್ತ ಬಂದಿದ್ದ ನಾಡ ಜನತೆಗೆ ಈಗ ಬೆಚ್ಚಿಬೀಳುವ ಸರದಿ. ‘ಧರ್ಮಸ್ಥಳದಲ್ಲಿ ನೆಲದ ಕಾನೂನ್ಯಾವುದೂ ಅನ್ವಯಿಸುವುದಿಲ್ಲ’ ‘ಇದು ರಿಪಬ್ಲಿಕ್ ಆಫ್ ಧರ್ಮಸ್ಥಳ’ ‘ವೀರೇಂದ್ರ ಹೆಗ್ಡೆಯವರೇ ಇಲ್ಲಿ ಸರ್ವಾಧಿಕಾರಿ’ ‘ಅವರ ಹಿಂಬಾಲಕರೇ ಇಲ್ಲಿನ ಆಡಳಿತ ನೋಡಿಕೊಳ್ಳುವವರು’ – ಈ ರೀತಿಯಾಗಿ ಧರ್ಮಸ್ಥಳದ ಬಗ್ಗೆ ಅನೇಕ ಮಾತುಗಳು ಪದೇ ಪದೇ ಕೇಳಲಾರಂಭಿಸಿದೆ. ಇದಕ್ಕೆ ಕಾರಣವಾದರೂ ಏನು?

2012ರ ಡಿಸೆಂಬರ್ ಹದಿನಾರರಂದು ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಾಲ್ವರು ಕಾಮುಕರು ‘ನಿರ್ಭಯಾ’ಳ ಮೇಲೆ ನಡೆಸಿದ ಪೈಶಾಚಿಕ ಅತ್ಯಾಚಾರ ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಯಿತು. ತಪ್ಪಿತಸ್ಥರೆಲ್ಲರ ಬಂಧನವೂ ನಡೆದು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯೂ ಜಾರಿಯಾಯಿತು. ದೆಹಲಿಯ ಪೈಶಾಚಿಕ ಘಟನೆ ನಡೆಯುವುದಕ್ಕೂ ಎರಡು ತಿಂಗಳು ಮೊದಲು ನಮ್ಮದೇ ಕರ್ನಾಟಕದ ಧರ್ಮಸ್ಥಳದಲ್ಲಿ ಪಿ ಯು ಸಿ ಓದುತ್ತಿದ್ದ ಸೌಜನ್ಯಾಳ ಮೇಲೆ ಅಮಾನುಷ ರೀತಿಯಲ್ಲಿ ಅತ್ಯಾಚಾರವೆಸಗಿ ಹತ್ಯೆ ಮಾಡಲಾಯಿತು. ಪೋಲೀಸರ ಲೆಕ್ಕದಲ್ಲಿ ಅಪರಾಧಿಯ ಬಂಧನವಾಗಿದೆ. ಆದರೆ ಸೌಜನ್ಯಾಳ ಹೆತ್ತವರ ಲೆಕ್ಕದಲ್ಲಿ ಸ್ಥಳೀಯರ ಲೆಕ್ಕದಲ್ಲಿ ಸೌಜನ್ಯಾಳನ್ನು ಹತ್ಯೆ ಮಾಡಿದವರೇ ಬೇರೆ ಪೋಲೀಸರು ಬಂಧಿಸಿರುವುದೇ ಬೇರೆಯವನನ್ನು. ಒಂದು ವರುಷದ ಮೇಲಾದರೂ ಇನ್ನೂ ಸಹಿತ ಸೌಜನ್ಯ ಪ್ರಕರಣವನ್ನು ಬಗೆಹರಿಸಲು ಪೋಲೀಸರಿಗೆ ಸಾಧ್ಯವಾಗಿಲ್ಲ. ಎರಡು ಬಾರಿ ನಡೆದ ಸಿಐಡಿ ತನಿಖೆಯ ಪ್ರಕಾರ ಸೌಜನ್ಯ ಹತ್ಯೆಗೆ ಕಾರಣವಾಗಿರುವ ವ್ಯಕ್ತಿ ಸಂತೋಷ್ ರಾವ್. ಆದರೆ ಪೋಲೀಸರ ಈ ತನಿಖಾ ವೈಖರಿಯನ್ನು ಒಪ್ಪದ ಜನತೆ ಸಿಬಿಐ ತನಿಖೆಗೆ ಸತತವಾಗಿ ಆಗ್ರಹಿಸಿತ್ತುಲೇ ಬಂದಿದೆ. ಸಿಬಿಐ ತನಿಖೆಗೆ ಸರಕಾರ ಬಹಳಷ್ಟು ಮೀನ ಮೇಷ ಎಣಿಸಿದ ನಂತರ ಜನತೆಯ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡಿದೆ.

ಆಕೆ ಸೌಜನ್ಯ, ಧರ್ಮಸ್ಥಳದ ಪಂಗಲಮನೆಯ ಚಂದಪ್ಪ ಗೌಡ ಮತ್ತು ಕುಸುಮಾವತಿಯ ಮಗಳು. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪಿ ಯು ಸಿ ಓದುತ್ತಿದ್ದಳು. ಅಕ್ಟೋಬರ್ 9 2012ರಂದು ಎಂದಿನಂತೆ ಕಾಲೇಜು ಮುಗಿಸಿ ಮನೆಗೆಂದು ಹೊರಟವಳು ಮನೆ ತಲುಪಲೇ ಇಲ್ಲ. ರಾತ್ರಿಯೆಲ್ಲ ಸೌಜನ್ಯಳನ್ನು ಹುಡುಕಿದವರಿಗೆ ನೇತ್ರಾವತಿ ನದಿ ತೀರದ ಬಳಿ ಅವಳು ಸಿಕ್ಕಿದ್ದು ಹೆಣವಾಗಿ, ಅರೆನಗ್ನ ಸ್ಥಿತಿಯಲ್ಲಿ. ದೈಹಿಕ ದೌರ್ಜನ್ಯದ ಕುರುಹುಗಳು ದೇಹದ ತುಂಬೆಲ್ಲ ಇದ್ದವು. ಮರ್ಮಾಂಗದಲ್ಲಿ ಮಣ್ಣು ತುಂಬುಲಾಗಿತ್ತು. ಸೌಜನ್ಯಳ ದೇಹ ಸಿಕ್ಕ ಜಾಗದಲ್ಲೂ ಹಿಂದಿನ ರಾತ್ರಿ ಹುಡುಕಾಟ ನಡೆಸಲಾಗಿತ್ತು. ರಾತ್ರಿ ಸಿಗದೆ ಬೆಳಿಗ್ಗೆ ಸಿಕ್ಕ ಹೆಣ ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿತು. ರಾತ್ರಿಯೆಲ್ಲ ಮಳೆಯಾಗಿದ್ದರೂ ಸೌಜನ್ಯಳ ದೇಹವಾಗಲಿ ಹತ್ತಿರದಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಸೌಜನ್ಯಳ ಪುಸ್ತಕವಾಗಲಿ ಒಂದಿನಿತೂ ತೇವವಾಗಿರಲಿಲ್ಲ. ಬೇರೆಡೆ ಅತ್ಯಾಚಾರವೆಸಗಿ ಕೊಲೆಮಾಡಿ ಬೆಳಗಿನ ಜಾವ ಇಲ್ಲಿ ತಂದು ಬಿಸಾಡಲಾಗಿದೆ ಎಂಬ ಆರೋಪ ಸ್ಥಳೀಯರದು. ಸಾಮೂಹಿಕ ಅತ್ಯಾಚಾರ ನಡೆದ ಕುರುಹುಗಳು ಹೇರಳವಾಗಿದ್ದವು. ವಿದ್ಯಾರ್ಥಿ ವೃಂದ, ಧಾರ್ಮಿಕ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು ಪ್ರತಿಭಟನೆಗೆ ಇಳಿದವು. ಅಪರಾಧಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯ ಹೇರಲಾರಂಭಿಸಿದವು. ಪೋಲೀಸರಿಗೆ ಸಿಗದ ಅಪರಾಧಿಯನ್ನು ಸಂಶಾಯಸ್ಪದವಾಗಿ ಓಡಾಡುತ್ತಿದ್ದ ಅನುಮಾನದ ಮೇಲೆ ‘ಕೆಲವು ಜನರೇ’ ಹಿಡಿದುಕೊಟ್ಟರು; ‘ವಿಚಾರಣೆಯ’ ನಂತರ ಪೋಲೀಸರು ‘ಆ ಜನರು’ ಹಿಡಿದುಕೊಟ್ಟ ಸಂತೋಷ್ ರಾವೇ ಅಪರಾಧಿ ಎಂದು ನಿರ್ಧರಿಸಿದರು.

ಪ್ರತಿಭಟನೆಯಲ್ಲಿ ಸಂಕುಚಿತ ಸಂಘಟನೆಗಳ ಸ್ವಾರ್ಥ

ಸೌಜನ್ಯ ಪ್ರಕರಣ ನಡೆದ ಮೊದಲ ದಿನಗಳಲ್ಲಿ ಅದನ್ನು ವಿರೋಧಿಸಿ ಅಪರಾಧಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿ ಅನೇಕ ಹಿಂದೂ ಪರ ಸಂಘಟನೆಗಳು ಬೀದಿಗಿಳಿದಿದ್ದವು. ಮುಸ್ಲಿಂ ಚಾಲಕರ ಕೃತ್ಯವಿರಬಹುದೆಂಬ ಅನುಮಾನ ಅವರನ್ನು ಬೀದಿಗಿಳಿಯುವಂತೆ ಮಾಡಿತ್ತು. ಯಾವಾಗ ಸಂತೋಷ್ ರಾವನ ಬಂಧನವಾಯಿತೋ ಬಹುತೇಕ ಹಿಂದೂ ಸಂಘಟನೆಗಳು ಮೌನಕ್ಕೆ ಶರಣಾಗಿಹೋದವು. ಪ್ರಕರಣ ನಡೆದಾಗ ಆಡಳಿತದಲ್ಲಿದ್ದಿದ್ದು ಬಿ.ಜೆ.ಪಿ. ಸರಕಾರವೆಂಬ ಅಂಶ ಕೂಡ ಅವರ ಮೌನಕ್ಕೆ ಕಾರಣ. ಆದರೆ ಉಳಿದ ಸಂಘಟನೆಗಳು ಮೌನಕ್ಕೆ ಶರಣಾಗಲಿಲ್ಲ. ಸಂತೋಷ ರಾವನನ್ನು ಕೇಸಿಗೆ ಫಿಟ್ ಮಾಡಲಾಗಿದೆ ಎಂಬುದು ಅವರ ಅನುಮಾನ. ಈ ಸಂತೋಷ್ ರಾವ್ ಮೂಲತಃ ಕಾರ್ಕಳದವನು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷನಿಗೆ ಪದೇ ಪದೇ ಧರ್ಮಸ್ಥಳಕ್ಕೆ ಭೇಟಿ ನೀಡುವ ಧರ್ಮಸ್ಥಳದಲ್ಲಿ ಕಾಲ ಕಳೆಯುವ ಅಭ್ಯಾಸವಾಗಿತ್ತು. ಸೌಜನ್ಯ ಪ್ರಕರಣದ ಆರೋಪಿ ಎಂದು ಬಂಧಿಸುವವರೆಗೆ ಈತನ ಮೇಲೆ ಯಾವುದೇ ಪ್ರಕರಣವಿರಲಿಲ್ಲ ಎಂಬುದು ಕೂಡ ಸಂತೋಷ್ ಅಂತಹ ಅಮಾನುಷ ಕೃತ್ಯವೆಸಗಿರಲಾರ ಎಂಬ ಜನರ ಭಾವನೆಗೆ ಕಾರಣವಾಗಿತ್ತು. ಮೇಲಾಗಿ ಘಟನೆ ನಡೆದ ಮೊದಲ ಕೆಲವು ದಿನಗಳಲ್ಲಿ ವರದಿಯಾದಂತೆ ಶಿಕ್ಷಕಿಯೊಬ್ಬರು ಬಸ್ಸಿನಲ್ಲಿ ಹೋಗುವಾಗ ನಾಲ್ವರು ಸೌಜನ್ಯಳನ್ನು ಬಲವಂತವಾಗಿ ಹೊತ್ತೊಯ್ಯುತ್ತಿದುದ್ದನ್ನು ನೋಡಿದರಂತೆ. ನಂತರ ಆ ವಿಷಯವಾಗಿ ಆ ಶಿಕ್ಷಕಿಯಿಂದ ಯಾವುದೇ ಹೇಳಿಕೆ ಬರಲಿಲ್ಲವಾದರೂ ಜನರಿಗೆ ನಿಜವಾದ ಆರೋಪಿಗಳು ಬೇರೆಯೇ ಇರಬಹುದು ಎಂಬ ಅನುಮಾನ ಬೆಳೆಯುವಂತೆ ಮಾಡಿತು. ಸಂತೋಷ್ ರಾವನ ಬಂಧನವಾದ ನಂತರವೂ ಪ್ರತಿಭಟನೆ ನಿಲ್ಲಲಿಲ್ಲ. ಪ್ರಮುಖವಾಗಿ ಎಡಪಂಥೀಯ ಸಂಘಟನೆಗಳು ಜನರ ಪ್ರತಿಭಟನೆಯನ್ನು ಸಾಯದಂತೆ ನೋಡಿಕೊಂಡರು ಎಂದರೆ ತಪ್ಪಲ್ಲ. ಸಂತೋಷ ರಾವನ ಬಂಧನದಿಂದಲೇ ಹಿಂದೂ ಸಂಘಟನೆಗಳು ಸುಮ್ಮನಾಗಿಬಿಟ್ಟವು, ಯಾವಾಗ ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ದೊಡ್ಡ ದೊಡ್ಡ ಮನೆಯ ಮಕ್ಕಳ ಕೈವಾಡವಿದೆ ಎಂಬ ಅನುಮಾನ ದಟ್ಟವಾಗತೊಡಗಿತೋ ತನಗೂ ಈ ಪ್ರತಿಭಟನೆಗಳಿಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿತು ಪರಿವಾರ. ಹಿಂದೂ ಧಾರ್ಮಿಕ ಸ್ಥಳದ ಮೇಲೆ ಅನಗತ್ಯವಾಗಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಡಪಂಥೀಯ ಸಂಘಟನೆಗಳನ್ನು ಹೀಗಳೆಯುವ ಕಾರ್ಯವೂ ನಡೆಯಿತು. ಅದೇ ಹಿಂದೂ ಸಂಘಟನೆಗೆ ಸೇರಿದ ಮಹೇಶ್ ಶೆಟ್ಟಿ ಎಂಬ ಕಟ್ಟರ್ ಹಿಂದೂವಾದಿ ಮಾತ್ರ ಮೊದಲಿನಿಂದಲೂ ಸೌಜನ್ಯಾಳ ಪರ ಧರ್ಮಸ್ಥಳದ ‘ಅಧಿಕಾರಸ್ಥರ’ ವಿರುದ್ಧ ಪ್ರತಿಭಟಿಸುತ್ತಿದ್ದ; ತನ್ನ ಸಂಘಟನೆಗಳ ವಿರೋಧದ ನಡುವೆಯೂ. ಮಹೇಶ್ ಶೆಟ್ಟಿ ಕೂಡ ಕೆಲವು ತಿಂಗಳುಗಳ ಕಾಲ ಮೌನಕ್ಕೆ ಶರಣಾಗಿಬಿಟ್ಟ.

ಸೌಜನ್ಯ ಪ್ರಕರಣಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ನಿಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಎಡಪಂಥೀಯ ಸಂಘಟನೆಗಳು ವಿದ್ಯಾರ್ಥಿಗಳ ಜೊತೆಗೆ ಪ್ರತಿಭಟನೆ ನಡೆಸಿತು. ಎಡಪಂಥೀಯ ಮತ್ತು ಜನಪರ ಸಂಘಟನೆಗಳ ಪ್ರತಿಭಟನೆ ಕೇವಲ ದಕ್ಷಿಣ ಕನ್ನಡಕ್ಕೆ ಸೀಮಿತವಾಗದೆ ಬೆಂಗಳೂರು ಗುಲ್ಬರ್ಗದಂತಹ ದೂರದ ಊರುಗಳಲ್ಲೂ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. ಒಂದು ಹಂತದಲ್ಲಿ ಸೌಜನ್ಯ ಪ್ರಕರಣ ಬಗೆಹರಿಯದಿರುವುದಕ್ಕೆ ವೀರೇಂದ್ರ ಹೆಗ್ಗಡೆಯವರೇ ಕಾರಣ ಎಂಬ ಆರೋಪವೂ ಕೇಳಿ ಬಂತು. ಹಿಂದೂ ಧಾರ್ಮಿಕ ಕ್ಷೇತ್ರದ ಧರ್ಮಾಧಿಕಾರಿಯ ವಿರುದ್ಧ ಕೇಳಿ ಬಂದ ಇಂತಹ ಆರೋಪದ ವಿರುದ್ಧ ಹೆಗ್ಗಡೆಯವರ ಪರವಾಗಿ ಸಭೆಗಳೂ ನಡೆದವು. ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಕೆಲವು ಕಾಂಗ್ರೆಸ್ ಮುಖಂಡರೂ ಕೂಡ ಈ ಸಭೆಗಳಲ್ಲಿ ಭಾಗವಹಿಸಿ ಜನರ ಹೋರಾಟದ ವಿರುದ್ಧ ನಿಲುವನ್ನು ತಳೆದುಬಿಟ್ಟರು. ಒಂದು ವರುಷವಾದ ಸಂದರ್ಭದಲ್ಲಿ ಸೌಜನ್ಯಳ ತಂದೆ ತಾಯಿ ಪತ್ರಿಕಾಗೋಷ್ಟಿ ನಡೆಸಿ ವೀರೇಂದ್ರ ಹೆಗ್ಗಡೆ ಮತ್ತವರ ಸಂಗಡಿಗರ ಪರಿವಾರದ ಸದಸ್ಯರೇ ಈ ಪ್ರಕರಣದಲ್ಲಿ ನಿಜವಾದ ಅಪರಾಧಿಗಳು ಎಂದು ನೇರ ಆರೋಪ ಹೊರಸಿದರಾದರೂ ಆ ಸುದ್ದಿ ವಾರ್ತಾ ಭಾರತಿ, ಜಯಕಿರಣದಂತಹ ಪತ್ರಿಕೆಗಳಲ್ಲಿ ಬಂದಿದ್ದು ಬಿಟ್ಟರೆ ಉಳಿದ ಪತ್ರಿಕೆಗಳಲ್ಲಿ ಬರಲಿಲ್ಲ. ಈ ಇಡೀ ಪ್ರಕರಣಕ್ಕೊಂದು ಬಹುದೊಡ್ಡ ತಿರುವು ಬಂದಿದ್ದು ಟಿವಿ 9 ಸುದ್ದಿ ವಾಹಿನಿ ಸೌಜನ್ಯಳ ತಂದೆ ತಾಯಿ, ಮಾವ ಮತ್ತು ಮಹೇಶ್ ಶೆಟ್ಟಿಯನ್ನು ಸ್ಟುಡಿಯೋಗೆ ಕರೆಸಿ ನೇರಪ್ರಸಾರ ಮಾಡಿದಾಗ. ಟಿವಿ 9 ತೋರಿದ ಧೈರ್ಯ ಮತ್ತು ಸೌಜನ್ಯ ಪ್ರಕರಣವನ್ನು ರಾಜ್ಯವ್ಯಾಪಿ ಚರ್ಚೆಯ ವಿಷಯವನ್ನಾಗಿ ಮಾಡಿದ್ದಕ್ಕೆ ಟಿವಿ 9 ಸಿಬ್ಬಂದಿಗೆ ಶಹಬ್ಬಾಸ್ ಹೇಳಲೇಬೇಕು.

ವೀರೇಂದ್ರ ಹೆಗ್ಗಡೆಯ ತಮ್ಮನ ಮಗ ನಿಶ್ಚಲ್ ಹೆಗ್ಡೆ, ಅನ್ನಪೂರ್ಣ ಛತ್ರದ ಮೆನೇಜರ್ ಮಗ ಧೀರಜ್ ಜೈನ್, ವೀರೇಂದ್ರ ಹೆಗ್ಗಡೆಯ ಮನೆಯಲ್ಲಿ ಕೆಲಸ ಮಾಡುವವರ ಮಗ ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಮೇಲೆ ಸೌಜನ್ಯಳ ತಂದೆ ತಾಯಿಗಳು ನೇರ ಆರೋಪ ಮಾಡಿದರು. ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ದಿರುವುದು ಈ ನಾಲ್ವರೇ ಹೊರತು ಸಂತೋಷ್ ರಾವನಲ್ಲ ಎಂಬುದು ಅವರ ಆರೋಪ. ಎಲ್ಲ ಗೊತ್ತಿದ್ದೂ ಪೋಲೀಸರು ಸುಮ್ಮನಿದ್ದಾರೆ, ಆ ನಾಲ್ವರ ಮೇಲೆ ದೂರು ಕೊಟ್ಟರೂ ಪೋಲೀಸರು ಯಾವುದೇ ರೀತಿಯ ಸಹಾಯ ಮಾಡಿಲ್ಲವೆಂದು ತಿಳಿಸಿದರು. ವಿಶೇಷವೆಂದರೆ ಸೌಜನ್ಯಳ ಹತ್ಯೆ ಮಾಡಿದ ಆರೋಪದಡಿಯಲ್ಲಿ ಬಂಧಿಸಲಾದ ಸಂತೋಷ್ ರಾವನನ್ನು ಪೋಲೀಸರಿಗೆ ಹಿಡಿದುಕೊಟ್ಟಿದ್ದು ಈ ನಾಲ್ವರೇ! ಈ ಆರೋಪಗಳನ್ನು ಸೌಜನ್ಯಳ ತಂದೆ ತಾಯಿ ಮತ್ತು ಅನೇಕ ಸಂಘಟನೆಯವರು ಘಟನೆ ನಡೆದ ದಿನದಿಂದ ಹೇಳುತ್ತಲೇ ಬಂದಿದ್ದಾರಾದರೂ ಆ ಸುದ್ದಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯ ಕುಟುಂಬಸ್ಥರ ಕಡೆಗೆ ಬೆರಳು ತೋರುತ್ತಿದ್ದಾದರಿಂದ ದಕ್ಷಿಣ ಕನ್ನಡದ ವ್ಯಾಪ್ತಿಯನ್ನು ಬಿಟ್ಟು ಹೊರಬಂದಿದ್ದು ಕಡಿಮೆ. ಆ ಆರೋಪವನ್ನು ದಕ್ಷಿಣ ಕನ್ನಡದ ಹೊರಗೆ ತಂದಿದ್ದು ಟಿ ವಿ 9. ಆರೋಪ – ಪ್ರತ್ಯಾರೋಪಗಳನ್ನು ಮರೆಯೋಣ. ಸಂತೋಷ ರಾವನೇ ನಿಜವಾದ ಆರೋಪಿ, ಈ ನಾಲ್ವರಿಗೂ ಸೌಜನ್ಯಳ ಕೊಲೆಗೂ ಯಾವುದೇ ಸಂಬಂಧವಿಲ್ಲವೆಂಬ ಪೋಲೀಸರ ವಾದವನ್ನೇ ನಂಬೋಣ. ಆದರೆ ಬಲಾಢ್ಯರ ಅನೇಕ ನಡೆಗಳು ನಾಲ್ವರ ಮೇಲಿನ ಆರೋಪ ನಿಜವಿರಬಹುದೆಂಬ ಅನುಮಾನವನ್ನು ಗಟ್ಟಿಯಾಗಿಸದೇ ಇರದು.

ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ಹೋಗುತ್ತಿದ್ದ ಸೌಜನ್ಯಳ ತಂದೆ ತಾಯಿಯನ್ನು ಬೆದರಿಸಿದ್ದು, ತೋಟದ ಕೆಲಸಗಳ ಉಸ್ತುವಾರಿ ವಹಿಸಿಕೊಂಡಿರುವ ಬಾಲಕೃಷ್ಣ ಪೂಜಾರಿ ಎಂಬ ವ್ಯಕ್ತಿ ಸೌಜನ್ಯಳ ತಂದೆ ತಾಯಿಯನ್ನು ಮಾನಸಿಕ ಅಸ್ವಸ್ಥರೆಂದು ಆರೋಪಿಸಿ ಉಜಿರೆಯ ಬೆನಕ ಆಸ್ಪತ್ರೆಗೆ ಸೇರಿಸಿದ್ದು, ಸೌಜನ್ಯಳ ಅಜ್ಜನನ್ನೇ ವೀರೇಂದ್ರ ಹೆಗ್ಗಡೆಯ ಪರವಾಗಿ ಸೌಜನ್ಯಳ ತಂದೆ ತಾಯಿಯ ವಿರುದ್ಧ ಮಾತನಾಡುವಂತೆ ಮಾಡಿದ್ದು, ಉಜಿರೆಯ ಕಾಲೇಜಿನಲ್ಲಿ ಸೌಜನ್ಯಳ ಪರ ಪ್ರತಿಭಟನೆಗಳನ್ನು ನಡೆಸದಂತೆ ನಿರ್ಬಂಧವೇರಲು ಪ್ರಯತ್ನಿಸಿದ್ದು, ಸಿಓಡಿ ತನಿಖೆಗೆಂದು ಬಂದ ಜಗದೀಶ್ ವರ್ಗಾವಣೆ ಪಡೆದುಕೊಂಡು ಹೊರಟುಹೋಗಿದ್ದು....... ಇವೆಲ್ಲವೂ ಈ ಪ್ರಕರಣ ‘ಮಾನಸಿಕ ಅಸ್ವಸ್ಥನೊಬ್ಬ ಮಾಡಿದ ವಿಕೃತ ಕೆಲಸ’ ಎಂದು ಶರಾ ಬರೆಯುವಷ್ಟು ಸರಳವಾಗಿಲ್ಲವೆಂಬುದನ್ನೇ ತಿಳಿಸುತ್ತದೆ.

ಯಾವಾಗ ಧರ್ಮಸ್ಥಳದ ಪರವಾಗಿ ಹೇಳಿಕೆಗಳು ಬಂದು, ಹಿಂದೂ ಧಾರ್ಮಿಕ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಮಸಲತ್ತಿದು ಎಂಬ ಸಂಘ ಪರಿವಾರಿಗಳ ಆರೋಪಕ್ಕೂ ಬೆಲೆ ಕೊಡದೆ ಇಲ್ಲಿನ ಜನ ಸೌಜನ್ಯಳ ಪರವಾಗಿ ಶಾಸಕ ವಸಂತ ಬಂಗೇರ, ಎಡಪಂಥೀಯ ಮತ್ತು ಜನಪರ ಸಂಘಟನೆಗಳ ಜೊತೆಯಲ್ಲಿ ಬೀದಿಗಿಳಿದರೋ ಇಡೀ ಹೋರಾಟದ ಶ್ರೇಯಸ್ಸು ಎಡಪಂಥೀಯ ಸಂಘಟನೆಗಳ ಪಾಲಾಗಿಬಿಡಬಹುದು ಎಂಬ ಗಾಬರಿಯಿಂದ ನಿಧಾನಕ್ಕೆ ಹಿಂದೂ ಸಂಘಟನೆಗಳೂ ಹೋರಾಟಕ್ಕೆ ಇಳಿಯುತ್ತಿವೆ! ಹಿಂದೂ ದೇವಳಕ್ಕೆ ಜೈನ ಧರ್ಮಾಧಿಕಾರಿಯಾಕೆ ಎಂಬ ಸದ್ದಿಲ್ಲದ ಪ್ರಚಾರವೂ ನಡೆದು ಸೌಜನ್ಯ ಪ್ರಕರಣವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಹಂಬಲವೂ ಕೆಲವು ಧಾರ್ಮಿಕ ಮೂಲಭೂತವಾದಿಗಳಿಗಿರುವ ಸಾಧ್ಯತೆಗಳಿವೆ. ಒಂದು ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಇಷ್ಟೊಂದು ಗೋಜಲಾಗಬೇಕೆ? ಕೆಲವು ಸಂಘಟನೆಗಳ ಸ್ವಾರ್ಥದ ಮೂಲವಾಗಬೇಕೆ? ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ತಂದೆ ತಾಯಿ ಬಲಾಢ್ಯರ ಕಪಿ ಮುಷ್ಟಿಯಲ್ಲಿ ನಲುಗಬೇಕೆ? ಪೋಲೀಸ್ ತನಿಖೆ ಎಲ್ಲ ರೀತಿಯ ಒತ್ತಡಗಳಿಂದಲೂ ಮುಕ್ತವಾಗುವವರೆಗೆ ಈ ರೀತಿಯ ಪ್ರಕರಣಗಳು ಮತ್ತದರ ಸುತ್ತಲಿನ ಸಂಗತಿಗಳು ನಡೆಯುತ್ತಲೇ ಇರುತ್ತವೆ.
ಪ್ರಜಾಸಮರದಲ್ಲಿ ಪ್ರಕಟವಾಗಿದ್ದ ಲೇಖನ

2 comments:

 1. ತಮ್ಮ ಬಾಕಿ ವಿಚರಗಳಲ್ಲಿ ನನಗೆ ಹೆಚ್ಚು ಕಮ್ಮಿ ಸಹಮತಿಯಿದ್ದರೂ ಈ ಹೋರಾಟಕ್ಕೆ ಕಾರಣ ಎಡಪಂಥೀಯ
  ಸಂಘಟನೆಗಳು ಎಂಬ ಬಗ್ಗೆ ನನ್ನ ಒಪ್ಪಿಗೆಯಿಲ್ಲ. ಇಡೀ ಪ್ರಕರಣವನ್ನು ಹಿಡಿದು ಆಲುಗಾಡಿಸಿದ್ದು ಮಹೇಶ ಶೆಟ್ಟಿ ತಿಮಾರೋಡಿ ಎಂಬ ಸಾಮಾಜಿಕ ಕಾರ್ಯಕರ್ತ. ಈತ ಬೆಳೆದು ಬಂದದ್ದು ತಾವೆಲ್ಲ ನಖಶಿಖಾಂತ ದ್ವೇಷಿಸುವ ಹಿಂದೂ ಸಂಘಟನೆಗಳಲ್ಲಿ ಎಂಬುದು ಸತ್ಯ. ಸೌಜನ್ಯ ಪರ ಹೋರಾಟಕ್ಕೆ ಜನ ಪಕ್ಷ ಬೇಧ ಮರೆತು ಕೈ ಜೋಡಿಸಿದ್ದೂ ಸತ್ಯ. ರಾಜಕಾರಣಿಗಳು ಪಕ್ಷ ಬೇಧ ಇಲಲ್ದೆ ಇದರಿಂದ ದೂರ ಉಳಿದದ್ದೂ ನಿಜ

  ReplyDelete
  Replies
  1. ಮಹೇಶ್ ಶೆಟ್ಟಿಯವರು ಈ ಹೋರಾಟಕ್ಕೆ ನೀಡಿದ ಕಾಣ್ಕೆಯನ್ನು ಕೂಡ ಲೇಖನದಲ್ಲೇ ತಿಳಿಸಿದ್ದೇನೆ. ಒಂದು ವರುಷದ ನಂತರ ಸೌಜನ್ಯ ಪ್ರಕರಣ ಮತ್ತೆ ಮುಖ್ಯವಾಹಿನಿಯ ಚರ್ಚೆಗೆ ಬರಲು ಮಹೇಶ್ ಶೆಟ್ಟಿ ಪ್ರಮುಖ ಕಾರಣವೆಂಬುದು ಸತ್ಯ. ಹಿಂದೂ ಸಂಘಟನೆಗಳು ಕೂಡ ಪ್ರಕರಣದ ಆರಂಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು. ಒಂದಷ್ಟು ದಿನಗಳ 'ವಿರಾಮದ' ನಂತರ ಮತ್ತೆ ಪ್ರತಿಭಟನೆಗೆ ಸೇರಿತು.
   ಅದೇ ರೀತಿ ಮೊದಲಿನಿಂದಲೂ ಈ ಹೋರಾಟದಲ್ಲಿ ಎಡಪಂಥೀಯ ಸಂಘಟನೆಗಳು ತೊಡಗಿಕೊಂಡಿದ್ದವು. ಮತ್ತು ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದು ಎಡಪಂಥೀಯ ಸಂಘಟನೆಗಳು.
   ಒಟ್ಟಿನಲ್ಲಿ ಇದು ಒಟ್ಟಾರೆ ಜನರ ಹೋರಾಟ ಎಂಬುದು ಒಪ್ಪಬೇಕಾದ ಸಂಗತಿ

   Delete