Aug 30, 2016

ವೇಮುಲನ ಬದುಕನ್ನಾಧರಿಸಿದ 'ನಕ್ಷತ್ರದ ಧೂಳು'

ಡಾ. ಅಶೋಕ್. ಕೆ. ಆರ್
30/08/2016
ಏಕವ್ಯಕ್ತಿ ರಂಗಪ್ರಯೋಗವನ್ನು ನೋಡುವುದು ಎಷ್ಟು ಕಷ್ಟವೋ ಅದನ್ನು ನೋಡಿಸಿಕೊಳ್ಳುವಂತೆ ರಂಗದ ಮೇಲೆ ತರುವುದು ಅದಕ್ಕಿಂತಲೂ ಕಷ್ಟ. ರಂಗದ ಮೇಲೆ ಹತ್ತಾರು ಜನರಿದ್ದು, ಐದತ್ತು ನಿಮಿಷಕ್ಕೊಮ್ಮೆ ರಂಗದ ಮೇಲಿನ ಪರಿಕರಗಳು ಬದಲಾಗಿ, ಕ್ಷಣಕ್ಕೊಮ್ಮೆ ಬದಲಾಗುವ ಬಣ್ಣಗಳಿರುವ ನಾಟಕಗಳೇ ಕೆಲವೊಮ್ಮೆ ಆಕಳಿಕೆ ತರಿಸಿಬಿಡುತ್ತವೆ. ಇನ್ನು ಏಕವ್ಯಕ್ತಿ ರಂಗಪ್ರಯೋಗದ ಕಷ್ಟಗಳೆಷ್ಟಿರಬೇಕೆಂದು ಊಹಿಸಿಕೊಳ್ಳಿ. ನಾಟಕವನ್ನು ರಚಿಸಿದವರು, ನಿರ್ದೇಶಿಸಿದವರು, ಬೆಳಕು, ಸಂಗೀತ ನೀಡಿದವರೆಲ್ಲರಿಗಿಂತಲೂ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಕಲಾವಿದನಿಗೇ ಹೆಚ್ಚು ಪ್ರಾಮುಖ್ಯತೆ. ಉಳಿದ ನಾಟಕಗಳಲ್ಲಿ ಒಬ್ಬರ ಕಳಪೆ ನಟನೆ ಇನ್ನುಳಿದವರ ಉತ್ತಮ ನಟನೆಯ ನಡುವೆ ಮರೆಯಾಗಿಬಿಡುತ್ತದೆ ಆದರಿಲ್ಲಿ ಒಂದು ಒಂದೂವರೆ ತಾಸು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಜವಾಬುದಾರಿ ಕಲಾವಿದನದ್ದು ಮಾತ್ರ. ವ್ಯವಸ್ಥೆಯ ವ್ಯವಸ್ಥಿತ ಅವ್ಯವಸ್ಥೆಗೆ ಬಲಿಯಾಗಿ ದುರದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನ ಬದುಕನ್ನಾಧರಿಸಿದ ‘ನಕ್ಷತ್ರದ ಧೂಳೂ’ ಏಕವ್ಯಕ್ತಿ ರಂಗಪ್ರಯೋಗ ವೀಕ್ಷಕರನ್ನು ಒಂದೂವರೆ ಘಂಟೆಗಳ ಕಾಲ ಹಿಡಿದಿಟ್ಟುಕೊಂಡಿತಾ? 

ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಪತ್ರದಲ್ಲಿ ಕಾರ್ಲ್ ಸೇಗಾನ್ ನ ಕುರಿತು ಬರೆಯುತ್ತಾನೆ. 'ನಕ್ಷತ್ರದ ಧೂಳು' ನಾಟಕ ಪ್ರಾರಂಭವಾಗುವುದು ಪ್ರೊಜೆಕ್ಟರಿನಲ್ಲಿ ಕಾರ್ಲ್ ಸೇಗಾನ್‍ ನ ಮಾತುಗಳು ಬರುವುದರೊಂದಿಗೆ. ಪ್ರಯೋಗದಲ್ಲಿ ಏಕವ್ಯಕ್ತಿಯ ಅಭಿನಯವಷ್ಟೇ ಇದ್ದರೂ ಆಧುನಿಕ ತಂತ್ರಜ್ಞಾನದ ನೆರವಿನಿಂದ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಅನ್ನು ಸಮರ್ಥವಾಗಿ ಬಳಸಿ ಒಂದಷ್ಟು ಏಕತಾನತೆಯನ್ನು ದೂರ ಮಾಡುವುದೀಗ ಸಾಧ್ಯವಿದೆ. 'ನಕ್ಷತ್ರದ ಧೂಳು' ನಾಟಕದಲ್ಲೂ ಇದೇ ತಂತ್ರ ಉಪಯೋಗಿಸಲಾಗಿದೆ. ತಕ್ಕಮಟ್ಟಿಗೆ ಈ ತಂತ್ರ ಯಶಸ್ವಿಯೂ ಆಗಿದೆ. ಕಾರ್ಲ್ ಸೇಗಾನ್ ನ ಪುಸ್ತಕವನ್ನು ಓದುತ್ತಿರುವ ರೋಹಿತ್ ವೇಮುಲ (ವೇಮುಲನಾಗಿ ನಟಿಸಿರುವುದು ಕಿರಣ್ ಮಾರಶೆಟ್ಟಿಹಳ್ಳಿ) ತನ್ನ ಪರಿಚಯವನ್ನು ಹೇಳಿಕೊಳ್ಳುವುದರೊಂದಿಗೆ ನಾಟಕದ ಏಕಪಾತ್ರಾಭಿನಯದ ಪ್ರಾರಂಭವಾಗುತ್ತದೆ. ತನ್ನ ಬಾಲ್ಯದ ದುಃಖಕರ ಸಂಗತಿಗಳನ್ನು, ಯೌವನಕ್ಕೆ ಕಾಲಿಡುತ್ತಿದ್ದಾಗ ನಡೆದ ಘಟನೆಗಳನ್ನು, ಜಾತಿಯ ಕಾರಣಕ್ಕೆ ಅನುಭವಿಸಿದ ತಾರತಮ್ಯವನ್ನು, ಜಾತಿಯ ಕಾರಣಕ್ಕೆ 'ಹೊಲತಿಯ ಮಕ್ಕಳು' ಎಂದು ಅಪ್ಪನಿಂದಲೇ ಅವಮಾನಕ್ಕೀಡಾಗಿದ್ದನ್ನು, ಇದೆಲ್ಲದರ ಮಧ್ಯೆ ಓದುವುದರ ಕಡೆಗಿನ ಅತೀವ ಆಸಕ್ತಿಗಳೆಲ್ಲವೂ ಮಾತಿನ ರೂಪದಲ್ಲಿ, ಕತೆಯ ರೂಪದಲ್ಲಿ ನೋಡುಗರನ್ನು ಹಿಡಿದಿಡುತ್ತವೆ. ಮಾತಿನ ಓಘದ ನಡುವೆ ಒಂದು ವಿರಾಮದಂತೆ ರೋಹಿತ್ ವೇಮುಲ ತೆಗೆದ ಅವನ ಮನೆಯ ಚಿತ್ರಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಗಿದೆ. ಈ ಚಿತ್ರಗಳು ನೋಡುಗರ ಮನದಲ್ಲೊಂದು ವಿಷ್ಯುಯಲ್ ಇಂಪಾಕ್ಟ್ ಮೂಡಿಸುವುದರಲ್ಲಿ ಯಶಸ್ವಿಯಾಗಿವೆ. ನಂತರ ಹೈದರಾಬಾದ್ ವಿಶ್ವವಿದ್ಯಾನಿಲಯವನ್ನು ಸೇರಿದ ರೋಹಿತನ ದಿನಗಳ ಪ್ರಾರಂಭವಾಗುತ್ತದೆ. ವಿಶ್ವವಿದ್ಯಾಲಯದ ದಿನಗಳಲ್ಲಿ ರೋಹಿತ್ ವೇಮುಲನ ಜೀವನದಲ್ಲಿ ನಡೆದ ಅನೇಕ ಘಟನೆಗಳು ಬಹುತೇಕ ವೀಕ್ಷಕರಿಗೆ ಗೊತ್ತಿರುವಂತದ್ದೇ.

ವೀಕ್ಷಕರಿಗೆ ಗೊತ್ತಿರುವ ವಿಷಯಗಳು ಚೌಕಟ್ಟಿನ ರೂಪದಲ್ಲಿ ತೆರೆಯ ಮೇಲೆ ಮೂಡಿಬರುತ್ತದೆ. ಜಾತಿ ತಾರತಮ್ಯ, ಅಂಬೇಡ್ಕರ್ ಸ್ಟಡಿ ಸರ್ಕಲ್, ದೇಶದ ವಿವಿದೆಡೆ ನಡೆದ ವೈಚಾರಿಕ ಜನರ ಕಗ್ಗೊಲೆಯೆಲ್ಲವೂ ರೋಹಿತ್ ವೇಮುಲನ ಪಾತ್ರಧಾರಿಯ ಮೂಲಕ ಮತ್ತೆ ನೆನಪಾಗುತ್ತದೆ. ಕೊನೆಗೆ ಇವೆಲ್ಲವಕ್ಕೂ ಕಾರಣವಾಗುವುದು ರೋಹಿತ್ ವೇಮುಲನ ಜಾತಿ. ವೇಮುಲನ ಪಾತ್ರಧಾರಿ ಕಿರಣ್ ಮೊದಲರ್ಧದಲ್ಲಿ ಲವಲವಿಕೆಯ ಬಾಲಕನಾಗಿ, ಸಂಕಷ್ಟಗಳ ನಡುವೆಯೂ ಆಶಾಭಾವದ ಹುಡುಗನಾಗಿ ಮಾತಾಡಿ ವೇಮುಲನ ಪಾತ್ರಕ್ಕೊಂದು ನ್ಯಾಯ ಒದಗಿಸುತ್ತಾರೆ. ಮಧ್ಯ ಭಾಗದಲ್ಲಿ ಯಾಕೊ ಸಂಭಾಷಣೆಯನ್ನು ಅತಿ ವೇಗವಾಗಿ ಹೇಳಿಬಿಡುತ್ತಾರೆ. ನೋಡುಗರ ಕಿವಿ ಚುರುಕಿರದಿದ್ದರೆ ಚೂರು ಕಷ್ಟವೇ! ಅಭಿನಯದ ಈ ದುರ್ಬಲತೆ ಮತ್ತೆ ಮರೆಯಾಗುವುದು ಕೊನೆಯ ಭಾಗದಲ್ಲಿ. ಹಾಸ್ಟೆಲ್ಲಿನಿಂದ ಕ್ಷುಲ್ಲಕ ಕಾರಣಕ್ಕೆ ಹೊರದೂಡಿಸಿಕೊಂಡು ವಿಶ್ವ ವಿದ್ಯಾಲಯದ ಆವರಣದಲ್ಲೇ ಪ್ರತಿಭಟನೆಗೆ ಕುಳಿತರೂ ಯಾರೂ ಕ್ಯಾರೇ ಅನ್ನುವುದಿಲ್ಲ. ಹೊರಗಿನಿಂದ ಯಾರೂ ಬಂದು ನಿಮ್ಮೊಂದಿಗೆ ನಾವಿದ್ದೇವೆ ಎನ್ನುವುದಿಲ್ಲ ಎಂಬ ಮಾತುಗಳ ಮೂಲಕ ಮತ್ತೆ ಕಿರಣ್ ಸಶಕ್ತ ಪಾತ್ರಧಾರಿಯಾಗಿ ಇಡೀ ನಾಟಕದ ಜವಾಬುದಾರಿ ಹೊತ್ತ ನಟರಾಗಿ ಎದ್ದು ನಿಲ್ಲುತ್ತಾರೆ. ಗೆಳೆಯರ ಸಮಾಧಾನದ ಮಾತುಗಳಿಂದ ವೇಮುಲನ ನಿರಾಶಾಭಾವನೆ ಮರೆಯಾಗುವುದಿಲ್ಲ. ವ್ಯವಸ್ಥೆಯ ಅವ್ಯವಸ್ಥೆಗೆ ಸಾವಿನ ಮೂಲಕ ಪರಿಹಾರ ಹುಡುಕಲೊರಟು ಬಿಡುತ್ತಾನೆ. ರೋಹಿತ್ ವೇಮುಲ ಕೊನೆಯಲ್ಲಿ ಬರೆದ ಪತ್ರದೊಂದಿಗೆ ನಾಟಕ ಅಂತ್ಯ ಕಂಡಿದ್ದರೆ ಆತ್ಮಹತ್ಯೆಯನ್ನೇ ವೈಭವೀಕರಿಸಿಬಿಟ್ಟಂತಾಗುತ್ತಿತ್ತಾ? ನಾಟಕ ರಚಿಸಿದ ಹರ್ಷಕುಮಾರ್ ಕುಗ್ವೆ - ಸಂಜ್ಯೋತಿ ವಿ.ಕೆ ಹಾಗೂ ನಿರ್ದೇಶಿಸಿದ ಸ್ವರ ಆತ್ಮಹತ್ಯೆ ವೈಭವೀಕರಣಗೊಳ್ಳದಂತೆ ಎಚ್ಚರ ವಹಿಸಿದ್ದಾರೆ. ಆತ್ಮಹತ್ಯೆಯೊಂದಿಗೇ ನಾಟಕ ಮುಗಿದು ಹೋಗಿದ್ದರೆ ವಿಷಣ್ಣ ಭಾವವಷ್ಟೇ ಉಳಿದು ಹೋಗುತ್ತಿತ್ತೇನೋ. ಇಲ್ಲಿ ಮತ್ತೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ. ರೋಹಿತ್ ವೇಮುಲನ ಸಾವಿನ ನಂತರ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತನ ಸಹವರ್ತಿಗಳು ಮುಂದುವರೆಸಿದ ಹೋರಾಟಗಳನ್ನು ತೋರಿಸಿದ್ದಾರೆ. ಆತನ ಹೊದಿಕೆಯನ್ನು ಕೇಂದ್ರ ಬಿಂದುವಾಗಿಸಿಕೊಂಡು ಕಟ್ಟಲಾಗುತ್ತಿರುವ ಟೆಂಟಿನೊಂದಿಗೆ "ಮತ್ತೆ ಕಟ್ಟುತ್ತಿದ್ದೇವೆ" ಎಂಬ ಆಶಯದೊಂದಿಗೆ ನಾಟಕ ಮುಗಿಯುತ್ತದೆ.

ಏಕವ್ಯಕ್ತಿ ನಾಟಕದಲ್ಲಿ ಮಾತುಗಳು ಹೆಚ್ಚಿರಬೇಕಾದದ್ದು ಅಗತ್ಯವೇ. ಆದರೂ ನಾಟಕದಲ್ಲಿ ಹಲವೆಡೆ ಮೌನವೇ ಮಾತಾಗುವ ಸಾಧ್ಯತೆಯಿರುವ ಕಡೆಯೂ ಮಾತು ಬಳಸಿಬಿಟ್ಟಿರುವುದು ನಾಟಕದ ಗ್ರಹಿಕೆಗೊಂದಷ್ಟು ಅಡೆತಡೆ ಉಂಟು ಮಾಡುತ್ತದೆ. ರೋಹಿತ್ ವೇಮುಲ ತನ್ನ ಕೊನೆಯ ಪತ್ರವನ್ನು ಬರೆಯುವಾಗ ಕೂಡ ಪಾತ್ರಧಾರಿಯೇ ಮಾತನಾಡುವುದಕ್ಕಿಂತ ಮುದ್ರಿತ ದನಿ ಕೇಳಿಬಂದಿದ್ದರೆ, ಪಾತ್ರಧಾರಿ ಭಾವನೆಗಳ ಮೂಲಕವೇ ಇನ್ನಷ್ಟು ಮಾತನಾಡಿದ್ದರೆ ಮತ್ತಷ್ಟು ಮನಸ್ಸಿಗೆ ಹತ್ತಿರವಾಗುತ್ತಿತ್ತು. ಆತ್ಮಹತ್ಯಾ ಪತ್ರ ಬರೆಯುವ ಸಂದರ್ಭ ಮನಸ್ಸಿಗೆ ಹತ್ತಿರವಾಗುವಂತೆ ಮಾಡುವುದೂ ಅಷ್ಟು ಸರಿಯಲ್ಲವೇನೋ!

No comments:

Post a Comment