Aug 30, 2016

ಬಲಪಂಥೀಯ ಬಾಜಪದ ವಿರುದ್ದ ಸೃಷ್ಠಿಯಾಗಬೇಕಿರುವ ಒಂದು ಮಹಾ ಮೈತ್ರಿಕೂಟ: ಯಾಕೆ ಮತ್ತು ಹೇಗೆ? - ಒಂದು ಅವಲೋಕನ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
30/08/2016
ಇದೀಗ ರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಕೂತಿರುವ ಬಲಪಂಥೀಯ ಪಕ್ಷವಾದ ಬಾಜಪವನ್ನು ಮುಂದಿನ ಅಂದರೆ 2019 ರ ಸಾರ್ವತ್ರಿಕ ಚುನಾವಣೆಯ ವೇಳೆಗಾದರು ಎದುರಿಸಿ ನಿಂತು ಗೆಲ್ಲಬಲ್ಲ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಳ್ಳುವುದು ಇವತ್ತಿನ ಅನಿವಾರ್ಯವಾಗಿದೆ. ಜನಮಾನಸದಲ್ಲಿನ ಇಂತಹ ಆಶಯವನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಮನಸ್ಸು ಮಾಡುವುದು ಅಗತ್ಯವಾಗಿದೆ. ಇದು ಹೇಗೆ ಸಾದ್ಯವಾಗಬಲ್ಲದೆಂಬುದನ್ನು ಈ ಲೇಖನದಲ್ಲಿ ಚರ್ಚಿಸಲು ಯತ್ನಿಸಿದ್ದೇನೆ. ಇದಕ್ಕೆ ಪೂರಕವಾಗಿ ಬಾಜಪ ಒಂದು ಪಕ್ಷವಾಗಿ, ಮತಾಂಧ ರಾಜಕಾರಣದ ಸಂಕೇತವಾಗಿ ಬೆಳೆದು ಬಂದ ರೀತಿಯನ್ನು ಒಂದಷ್ಟು ನೆನಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದೇನೆ. ಯಾಕೆಂದರೆ ಆಗಾಗ ಇತಿಹಾಸವನ್ನು ತಿರುವಿ ಹಾಕದೇ ಹೋದರೆ ವರ್ತಮಾನದಲ್ಲಿ ಸರಿಯಾದ ಹೆಜ್ಜೆಗಳನ್ನಿಡುವಲ್ಲಿ ಕಷ್ಟವಾಗುತ್ತದೆಯೆಂಬ ಬಾವನೆಯಿಂದ. ಹೀಗಾಗಿ ಈ ಲೇಖನ ಸಾಕಷ್ಟು ದೀರ್ಘವೂ, ಮತ್ತು ಹಲವು ವಿಚಾರಗಳ ಪುನರಾವರ್ತನೆ ಎನಿಸಿದರೆ ಕ್ಷಮಿಸಬೇಕಾಗಿ ಓದುಗರಲ್ಲಿ ನನ್ನ ನಮ್ರ ವಿನಂತಿ:

ಬಹುಶ: ಇಂಡಿಯಾ ಒಂದು ದೇಶವಾಗಿ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾದ ಆತಂಕದ ದಳ್ಳುರಿಯಲ್ಲಿ ಒಳಗೊಳಗೇ ಬೇಯುತ್ತಿದೆ. ಸ್ವಾತಂತ್ರ ಸಿಕ್ಕ ಸರಿಸುಮಾರು ಏಳು ದಶಕಗಳಿಂದ ನಾವು ಜತನದಿಂದ ಕಾಪಾಡಿಕೊಂಡು ಬಂದಿದ್ದ ಜಾತ್ಯಾತೀತ ಸಮಾಜವೊಂದು ಅಪ್ಪಟ ಮತಾಂಧ ಸಮುದಾಯವಾಗಿ ಪರಿವರ್ತನೆಯಾಗುತ್ತಿರುವಂತೆ ಗೋಚರವಾಗುತ್ತಿದೆ. ಈ ತಕ್ಷಣಕ್ಕೆ ಎಚ್ಚರಗೊಂಡು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಬಲಪಂಥೀಯ ಕೋಮುಶಕ್ತಿಗಳ ರಾಜಕೀಯ ಪಡೆಯ ಜೊತೆ ಹೋರಾಡಿ ಅದನ್ನು ಹಿಮ್ಮಟ್ಟಿಸದೆ ಹೋದರೆ ಕೆಲವೇ ದಿನಗಳಲ್ಲಿ ಇಂಡಿಯಾಕೂಡ ಇನ್ನೊಂದು ಮತಾಂಧರಾಷ್ಟ್ರವಾಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಳ್ಳುವ ಸಾದ್ಯತೆ ಹೆಚ್ಚಾಗಿದೆ. ಎಂಭತ್ತರ ದಶಕದಲ್ಲಿ ಪ್ರಾರಂಭವಾದ ಬಾಜಪದ ಕೋಮುವಾದಿ ರಾಜಕಾರಣ ಅಂತಿಮವಾಗಿ ರಾಷ್ಟ್ರವನ್ನು ಆಳುವ ಅಧಿಕಾರವನ್ನು 2014ರ ಚುನಾವಣೆಯಲ್ಲಿ ಪಡೆದು, ಜಾತಿ ಧರ್ಮಗಳನ್ನು ಮೀರಿ ಬದುಕುತ್ತಿರುವ ಕೋಟ್ಯಾಂತರ ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಬಾಜಪದಂತಹ ಬಲಪಂಥೀಯ ರಾಜಕೀಯ ಪಕ್ಷವೊಂದು ಇಂಡಿಯಾದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಅಧಿಕಾರ ಪಡೆಯುವುದು ಹೇಗೆ ಸಾದ್ಯವಾಯಿತು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತ ಹೋದರೆ ಅಚ್ಚರಿಯೇನಾಗುವುದಿಲ್ಲ. ಇವತ್ತು ಅದರ ಕಾರಣಗಳನ್ನು ಹುಡುಕುತ್ತ ಹೋಗುವುದು ಹಲವರ ದೃಷ್ಠಿಯಲ್ಲಿ ಅನಗತ್ಯವೆನಿಸಿದರೂ ಭವಿಷ್ಯದಲ್ಲಿ ಮತ್ತೆ ಅಂತಹ ಪ್ರಮಾದಗಳಾಗದಂತೆ ನೋಡಿಕೊಳ್ಳಲಾದರೂ ಆ ಕಾರಣಗಳನ್ನು ನೆನಪು ಮಾಡಿಕೊಳ್ಳಲೇ ಬೇಕಾಗುತ್ತದೆ. ಬಾಜಪದ ಬೆಳವಣಿಗೆಯನ್ನು ನಾವು ಎರಡು ಹಂತದಲ್ಲಿ ಅದ್ಯಯನ ಮಾಡಬೇಕಾಗುತ್ತದೆ. 1975ರಿಂದ 2004 ರವರೆಗೆ ಅದರ ಮೊದಲ ಭಾಗವಾದರೆ 2004ರಿಂದ 2014ರವರೆಗಿನದು ಮತ್ತೊಂದು ಭಾಗ.

ಬಾಜಪದ ಬೆಳವಣಿಗೆ (1975 ರಿಂದ 2004)

1975ರಲ್ಲಿ ಅಂದಿನ ಪ್ರದಾನಮಂತ್ರಿ ಶ್ರೀಮತಿ ಇಂದಿರಾಗಾಂದಿಯವರು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಎಲ್ಲ ರಾಜಕೀಯ ಪಕ್ಷಗಳು ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಇಂದಿರಾರವರ ಸರ್ವಾಧಿಕಾರಿ ನಡವಳಿಕೆಯ ಬಗ್ಗೆ, ವಂಶಪಾರಂಪರ್ಯ ಆಡಳಿತದ ಬಗ್ಗೆ ಪ್ರತಿಭಟನೆ ನಡೆಸತೊಡಗಿದವು. ಇದಕ್ಕಾಗಿ ಅಂದಿನ ಬಹುತೇಕ ರಾಜಕೀಯ ಪಕ್ಷಗಳು ಕಾಂಗ್ರೇಸ್ಸೇತರ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಳ್ಳಲು ಸಿದ್ದವಾದವು. ಇವತ್ತಿನ ಬಾಜಪ ಅವತ್ತು ಜನಸಂಘದ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘಪರಿವಾರದ ಕಾರಣದಿಂದಾಗಿ ಅದು ಜನಮನ್ನಣೆ ಗಳಿಸುವಲ್ಲಿ ವಿಫಲ ಯತ್ನ ನಡೆಸುತ್ತಿತ್ತು. ಯಾವಾಗ ಕಾಂಗ್ರೆಸ್ಸೇತರ ವಿರೋಧಪಕ್ಷಗಳೆಲ್ಲ ಒಗ್ಗೂಡಿ ಜನತಾ ಪಕ್ಷವನ್ನು ಸ್ಥಾಪಿಸಿಕೊಂಡವೊ ಆಗ ಜನಸಂಘವು ಸಹ ಜನತಾಪಕ್ಷದೊಳಗೆ ಸೇರಿಕೊಂಡು ತನ್ನ ಅಸ್ಪೃಶ್ಯತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳಲು ಪ್ರಯತ್ನಿಸಿತು. ಹೀಗೆ ಹಲವು ಪಕ್ಷಗಳು ಸೇರಿ ರಚಿಸಿಕೊಂಡ ಜನತಾಪಕ್ಷ 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿತು. ಹೀಗೆ ತಾನು ಕನಸಿನಲ್ಲಿಯೂ ನಿರೀಕ್ಷಿಸದ ರೀತಿಯಲ್ಲಿ ಜನಸಂಘವು ಜನತಾಪಕ್ಷದ ಒಂದು ಭಾಗವಾಗಿ ಮೊಟ್ಟಮೊದಲ ಬಾರಿಗೆ ಅಧಿಕಾರದ ರುಚಿ ನೋಡಿತು. ಅವತ್ತು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅದ್ವಾನಿಯವರು ಕೇಂದ್ರದಲ್ಲಿ ಸಚಿವರುಗಳಾಗಿಯೂ ಕಾರ್ಯ ನಿರ್ವಹಿಸಿದರು. ಹೀಗೆ ಜನಸಂಘಕ್ಕೆ ಒಂದು ಮಾನ್ಯತೆ ತಂದುಕೊಡುವಲ್ಲಿ ಜಯಪ್ರಕಾಶ್ ನಾರಾಯಣರ ಮತ್ತು ಸಮಾಜವಾದಿಗಳ ಪಾತ್ರದ ಬಗ್ಗೆ ಇವತ್ತು ಯಾರೇನೇ ಸಮರ್ಥನೆ ಮಾಡಿಕೊಂಡರೂ ಚಾರಿತ್ರಿಕ ಪ್ರಮಾದವೊಂದು ಜರುಗಿ ಹೋಗಿತ್ತು. ಅದುವರೆಗು ಇಂಡಿಯಾದ ರಾಜಕಾರಣದಲ್ಲಿ ಯಾವುದೇ ಜನಮನ್ನಣೆಯನ್ನಾಗಲಿ, ಯಶಸ್ಸನ್ನಾಗಲಿ ಪಡೆಯದಿದ್ದ ಸಂಘಪರಿವಾರ ಸಮಾಜವಾದಿಗಳ ಹೆಗಲ ಮೇಲೆ ಕೂತು ತನ್ನ ಭವಿಷ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಸಾಕಷ್ಟರ ಮಟ್ಟಿಗೆ ಸಫಲವಾಯಿತೆನ್ನಬಹುದು.

ದುರಂತವೆಂದರೆ ಬೇರೆ ಪಕ್ಷಗಳ ಕೃಪೆಯಿಂದ ಯಾವ ಸಂಘಪರಿವಾರಿಗಳು ಮೊದಲ ಬಾರಿಗೆ ಅಧಿಕಾರದ ರುಚಿ ನೋಡಿದರೋ ಅದೇ ಪರಿವಾರಿಗಳು ಸರಕಾರ ಪತನಗೊಂಡು, ಜನತಾ ಪಕ್ಷ ಹೋಳಾಗಲು ಕೂಡಾ ಕಾರಣರಾದರು. ಮಧುಲಿಮಯೆ ಅಂತವರು ಎತ್ತಿದ ರಾಷ್ಟ್ರೀಯ ಸ್ವಯಂಸಂಘದ ದ್ವಿಸದಸ್ಯನೀತಿಯ ಭಿನ್ನಭಿಪ್ರಾಯಗಳಿಂದಾಗಿ ಪತನಗೊಂಡ ಜನತಾಸರಕಾರ 1980ರಲ್ಲಿ ನಡೆದ ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎದುರು ಸೋಲನ್ನಪ್ಪಿ ಮತ್ತೆ ಇಂದಿರಾಗಾಂದಿಯವರ ಕೈಗೆ ಅಧಿಕಾರ ಒಪ್ಪಿಸಬೇಕಾಯಿತು. ಜನತಾ ಪಕ್ಷದಿಂದ ಹೊರಬಂದ ಜನಸಂಘ ಬಾರತೀಯ ಜನತಾ ಪಕ್ಷ ಎನ್ನುವ ಹೊಸ ಹೆಸರಿನಲ್ಲಿ ಪುನರ್ ಸ್ಥಾಪಿತವಾಗಿ ತನ್ನ ರಾಜಕಾರಣವನ್ನು ಪ್ರಾರಂಬಿಸಿತು. ಈಗಾಗಲೇ ಅಧಿಕಾರದ ರುಚ ನೋಡಿದ್ದ ಬಾಜಪ ತನ್ನ ಹೊಸ ಅವತಾರದಲ್ಲಿ ಆಕ್ರಮಣಕಾರಿ ರಾಜಕೀಯ ಶುರು ಮಾಡಿತು. ಅಲ್ಲಿಯವರೆಗು ಗಾಂದಿ ಹತ್ಯೆಯ ಕಳಂಕದ ಹಿಂಜರಿಕೆಯಲ್ಲಿದ್ದ ಜನಸಂಘ ಬಾಜಪವಾಗಿ ಬದಲಾದ ನಂತರ ಮುಕ್ತವಾಗಿ ಹಳೆಯದನ್ನೆಲ್ಲ ಜನ ಮರೆತು ಹೋಗುವಂತೆ ತನ್ನ ಸಂಘಪರಿವಾರದ ಬಿಳಲುಗಳನ್ನು ಹೆಚ್ಚಿಸುತ್ತ ಮತ್ತಷ್ಟು ಹೊಸ ಮತೀಯ ಅಂಗಸಂಸ್ಥೆಗಳನ್ನು ಪ್ರಾರಂಬಿಸಿ ಕೋಮುವಾದಿ ರಾಜಕೀಯದಲ್ಲಿ ತೊಡಗಿತು. ಇಂದಿರಾಗಾಂದಿಯವರ ಹತ್ಯೆಯ ನಂತರ ಅಧಿಕಾರಕ್ಕೆ ಬಂದ ರಾಜೀವ್ ಗಾಂದಿಯವರ ಕಾಲದಲ್ಲಿ ದಶಕಗಳಿಂದಲು ನೆನಗುದಿಗೆ ಬಿದ್ದಿದ್ದ ಬಾಬ್ರಿ ಮಸೀಧಿಯ ವಿವಾದಕ್ಕೆ ಮತ್ತೆ ಜೀವ ತುಂಬಿ ತನ್ನ ಅಂಗಸಂಸ್ಥೆಗಳ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಹೋರಾಡತೊಡಗಿತು. ದಶಕಗಳಿಂದ ಬೀಗಮುದ್ರೆ ಹಾಕಿಸಿಕೊಂಡಿದ್ದ ಮಂದಿರದ ಬೀಗವನ್ನು ತೆಗೆದು ಪೂಜೆಗೆ ಅವಕಾಶ ಕೊಟ್ಟ ರಾಜೀವರ ಅವಿವೇಕಿ ನಿರ್ದಾರ ಕೂಡ ಬಾಜಪಕ್ಕೆ ಸುವರ್ಣಾವಕಾಶವನ್ನು ಒದಗಿಸಿತು. ನಂತರ ಜನರ ಧಾರ್ಮಿಕ ಬಾವನೆಗಳನ್ನು ಕೆರಳಿಸಿ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವ ಹೊಸ ಕಾರ್ಯಕ್ರಮವೊಂದನ್ನು ರೂಪಿಸಿದ ಬಾಜಪ ಅದ್ವಾನಿಯವರ ನೇತೃತ್ವದಲ್ಲಿ ಅಯೋದ್ಯೆಗೆ ರಥಯಾತ್ರೆಯನ್ನು ಆಯೋಜಿಸಿತು. ಗುಜರಾತಿನ ಸೋಮನಾಥದಿಂದ ಹೊರಟ ಈಯಾತ್ರೆಯ ಮೂಲಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹಿಸುವ ಹೆಸರಿನಲ್ಲಿ ಪ್ರತಿ ರಾಜ್ಯಗಳಲ್ಲೂ ಕೋಮುಸಂಘರ್ಷದ ಬೀಜಗಳನ್ನು ಬಿತ್ತುತ್ತ ಹೋಯಿತು. ಈ ರಥಯಾತ್ರೆ ಬಿಹಾರಕ್ಕೆ ಕಾಲಿಟ್ಟಾಗ ಬಿಹಾರದ ಆಗಿನ ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಯಾದವರು ಅದ್ವಾನಿಯವರನ್ನು ಬಂದಿಸಿ ರಥಯಾತ್ರೆಗೆ ವಿರಾಮವೊಂದನ್ನು ಇಟ್ಟರು. ಆದರೆ ಇಷ್ಟರಲ್ಲಾಗಲೇ ಸಂಘಪರಿವಾರದ ಗುಪ್ತ ಕಾರ್ಯಸೂಚಿಯಂತೆ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಆಂದ್ರಪ್ರದೇಶಗಳಲ್ಲಿ ಕೋಮುಗಲಭೆಗಳು ನಡೆಯ ತೊಡಗಿದ್ದವು. ಈ ಅವಧಿಯಲ್ಲಿ ಮಂಡಲ್ ಆಯೋಗದ ವರದಿ ಅನುಷ್ಠಾನ ವಿರೋಧಿಸಿ ನಡೆದ ಹೋರಾಟದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಮೇಲ್ಜಾತಿಯವರ ಪರ ನಿಂತ ಬಾಜಪ ಹಿಂದುಗಳ ಅದರಲ್ಲು ಮೇಲ್ಜಾತಿಗಳ ಮತಗಳ ದೃವೀಕರಣಕ್ಕೆ ಮುಂದಾಯಿತು. ನಂತರ 1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ 120 ಸ್ಥಾನಗಳನ್ನು ಪಡೆದ ಬಾಜಪ ತನ್ನ ಬೇರುಗಳನ್ನು ಉತ್ತರ ಭಾರತದಲ್ಲಿ ಬಿಡಲು ಪ್ರಾರಂಬಿಸಿತು. ಹೀಗೆ ಧಾರ್ಮಿಕ ಬಾವನೆಗಳನ್ನು ಕೆರಳಿಸುವುದರಿಂದ ಮತಗಳಿಸಬಹುದೆಂಬ ಸತ್ಯವನ್ನು ಅರ್ಥಮಾಡಿಕೊಂಡ ಬಾಜಪ ಅಲ್ಲಿಂದಾಚೆಗೆ ಯಾವ ಸಂಕೋಚವೂ ಇಲ್ಲದೆ ತನ್ನ ಹಿಂದೂಪರ ಬಲಪಂಥೀಯ ರಾಜಕಾರಣವನ್ನು ಮುಂದುವರೆಸತೊಡಗಿತು.

ಹೀಗೆ ಹಂತಹಂತವಾಗಿ ಬೆಳೆಯತೊಡಗಿದ ಬಾಜಪ 1999ರಲ್ಲಿ ಎನ್.ಡಿ.ಎ. ಮೈತ್ರಿಕೂಟವನ್ನು ರಚಿಸಿಕೊಂಡು ಅಧಿಕಾರಕ್ಕೆ ಬಂದಿತು. ಈ ಪ್ರಕ್ರಿಯೆಯಲ್ಲಿ ಅದುವರೆಗು ತೃತೀಯ ರಂಗದಲ್ಲಿದ್ದು ಜಾತ್ಯಾತೀತ ರಾಜಕೀಯದ ಬಗ್ಗೆ ಬೊಗಳೆ ಬಿಡುತ್ತಿದ್ದ ಅನೇಕ ಪಕ್ಷಗಳು ಬಾಜಪದ ಪರವಾಗಿ ಹೋದವು. ಕಾಂಗ್ರೆಸ್ಸಿನಲ್ಲಿನ ಸಮರ್ಥ ನಾಯಕತ್ವದ ಕೊರತೆ ಮತ್ತು ತೃತೀಯರಂಗದ ನಾಯಕರುಗಳ ಸ್ವಪ್ರತಿಷ್ಠೆಗಳು, ಅವರ ಪಾಳೆಯಗಾರಿಕೆಯ ಹಮ್ಮಿನ ಒಳಜಗಳಗಳು ಬಾಜಪದ ಬೆಳವಣಿಗೆಗೆ ನೀರು ಗೊಬ್ಬರ ಹಾಕಿ ಪೋಷಿಸಿದವು. ತದನಂತರದ ಬೆಳವಣಿಗೆಗಳು ಬಾಜಪಕ್ಕೆ ಪೂರಕವಾಗಿಯೇ ನಡೆಯುತ್ತ ಹೋಗಿದ್ದು ಇಂಡಿಯಾದ ದುರಂತವೆನ್ನಬಹುದಾದರು ನಂತರದ ಹತ್ತು ವರ್ಷಗಳ ಕಾಲ ಅದು ಕಾಂಗ್ರೇಸ್ಸಿನ ಎದುರು ಸೋಲೊಪ್ಪಿಕೊಂಡು ಸುಮ್ಮನಿರಬೇಕಾಯಿತು. ಇದು ಬಾಜಪ ಬೆಳೆದ ಮೊದಲ ಹಂತ. 

ಬಾಜಪದ ಬೆಳವಣಿಗೆ(2004 ರಿಂದ 2014)

2001 ರಿಂದ2014ರ ಮೇತಿಂಗಳವರೆಗು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರಮೋದಿಯವರ ಆಡಳಿತದಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಮತ್ತಿತರೇ ಕೋಮು ಸಂಘರ್ಷಗಳ ನಡುವೆಯೂ 2014 ರ ಹೊತ್ತಿಗೆ ಅದೇ ಮೋದಿಯವರು ಇಂಡಿಯಾದ ಯುವಜನತೆಯ ಐಕಾನ್ ಆಗಿ ತಮ್ಮದೇ ಆದ ಅಲೆಯೊಂದನ್ನು ಬಾಜಪದ ಪರವಾಗಿ ಸೃಷ್ಠಿಸುವಲ್ಲಿ ನೆರವಾದ ಅಂಶಗಳನ್ನು ನಾವು ಗಮನಿಸಬೇಕಕು. ಇದನ್ನು ನಾವು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿಯೂ ನೋಡಬೇಕಿದೆ.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯು.ಪಿ.ಎ. ಅಧಿಕಾರಕ್ಕೆ ಬಂದು ಶ್ರೀ ಮನಮೋಹನ್ ಸಿಂಗ್ ಅವರು ಪ್ರದಾನಿಯಾದರೂ ಸಹ ಅವರೆಂದೂ ಜನಸಮುದಾಯದ ನಾಯಕರಾಗಿರಲಿಲ್ಲ. ಎಂದೂ ನೇರ ಚುನಾವಣೆಯನ್ನು ಎದುರಿಸಿರದ ಅವರು ಪ್ರದಾನಿಯಾದ ನಂತರವೂ ಜನನಾಯಕರಾಗುವ ಪ್ರಯತ್ನವನ್ನು ಮಾಡಲಿಲ್ಲ. ಹಾಗೆ ಮಾಡಲು ಅವರು ಪ್ರಯತ್ನಿಸಿದ ನಿದರ್ಶನಗಳೂ ಇಲ್ಲ. ಹಾಗೆ ಪ್ರಯತ್ನಿಸಿದ್ದರೂ ಕಾಂಗ್ರೆಸ್ ಅದಕ್ಕೆ ಅವಕಾಶ ನೀಡಲೂ ಇಲ್ಲ ಎಂಬುದು ಕೂಡ ಸತ್ಯ. ಹೀಗಾಗಿ 2014ರ ಚುನಾವಣೆಯವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ ಒಬ್ಬ ಜನನಾಯಕನ್ನು ರೂಪಿಸಲು ಸಫಲವಾಗಲಿಲ್ಲ. ಸೋನಿಯಾಗಾಂದಿಯವರು ತಮ್ಮ ಪುತ್ರ ರಾಹುಲ್ ಗಾಂದಿಯನ್ನು ರಾಜಕೀಯಕ್ಕೆ ಕರೆತಂದು 2004ರಲ್ಲಿಯೇ ಸಂಸತ್ ಸದಸ್ಯರನ್ನಾಗಿ ಮಾಡಿದರೂ ಸಹ, ಅವರು ಸರಕಾರದ ಯಾವುದೇ ಹುದ್ದೆಯನ್ನೂ ನಿರ್ವಹಿಸಲು ನಿರಾಕರಿಸಿ ರಾಷ್ಟ್ರದಲ್ಲಿ ಯುವನಾಯಕರಾಗಿ ಬೆಳೆಯಬಹುದಾಗಿದ್ದ ಅವಕಾಶವೊಂದನ್ನು ಕೈಚೆಲ್ಲಿ ಕೂತರು.ಇನ್ನು ಕಾಂಗ್ರೇಸ್ ಮತ್ತು ಬಾಜಪೇತರ ಪಕ್ಷಗಳ ಯಾವ ಪ್ರಾದೇಶಿಕ ನಾಯಕರುಗಳು ಸಹ ತಮ್ಮ ರಾಜ್ಯದ ಮಿತಿಯನ್ನು ಮೀರಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸುವ ಪ್ರಯತ್ನ ಮಾಡಲೇ ಇಲ್ಲ. ಮಾಜಿ ಪ್ರದಾನಿ ಶ್ರೀ ದೇವೇಗೌಡರಂತವರು ಸಹ ಕರ್ನಾಟಕದಲ್ಲಿ ತಮ್ಮ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿಯೇ ಕಳೆದು ಹೋದರು. ಬಿಹಾರದ ಲಾಲೂ ಪ್ರಸಾದ್ ತಮ್ಮ ಮೇಲಿನ ಕೇಸುಗಳನ್ನು ನಿಬಾಯಿಸುವಲ್ಲಿ ಮಗ್ನರಾದರೆ ಮುಲಾಯಂಸಿಂಗ್ ತಮ್ಮ ಮಗನನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿಯೇ ಮುಳುಗಿ ಹೋದರು. ಇನ್ನು ಆಂದ್ರದ ಚಂದ್ರಬಾಬು ನಾಯ್ಡುರವರು ಸಹ ತಮ್ಮ ರಾಜ್ಯದಲ್ಲೆದುರಾದ ಶತ್ರುಗಳನ್ನು ಹಣಿಯುವಲ್ಲೇ ಸುಸ್ತಾದಂತೆ ಕಂಡರು ಮಾಯಾವತಿಯವರು ತಮ್ಮ ದಲಿತ ಇಮೇಜಿನಿಂದ ಹೊರಬಂದು ರಾಜಕೀಯ ಮಾಡುವಲ್ಲಿ ಸೋತರು. ಜಯಲಲಿತಾಗು ಸಹ ತಮ್ಮ ಕೇಸುಗಳನ್ನು ಬಗೆಹರಿಸಿಕೊಳ್ಳುವುದೇ ದುಸ್ತರದ ಕಾರ್ಯವಾಗಿತ್ತು. ಹೀಗೆ ಇಂಡಿಯಾದ ರಾಜಕಾರಣ ಸ್ವಪ್ರತಿಷ್ಠೆಯ ಮತ್ತು ಜಾತ್ಯಾಧಾರಿತ ಪ್ರಾದೇಶಿಕ ಪಕ್ಷಗಳಿಂದ ತುಂಬಿ ಹೋಗಿ ಒಬ್ಬನೇ ಒಬ್ಬ ಜನನಾಯಕನೂ ಸೃಷ್ಠಿಯಾಗಲಿಲ್ಲ. 

ಬರ್ಟೋಲ್ಡ್ ಬ್ರೆಕ್ಟ್ ಹೇಳಿದಂತೆ ನಾಯಕನಿಲ್ಲದ ನಾಡಿಗೆ ದುರಂತ ಖಾತ್ರಿ ಅನ್ನುವ ಮಾತು ಇಂಡಿಯಾದ ಮಟ್ಟಿಗೆ ನಿಜವಾಗುತ್ತ ಹೋಯಿತು. ನಾಯಕನಿಲ್ಲದ ಒಂದು ನಾಡಿನಲ್ಲಿ ಯಾವಾಗಲು ಶೂನ್ಯತೆಯೊಂದು ಆವರಿಸುತ್ತ ಹೋಗುತ್ತದೆ. ಆ ಶೂನ್ಯವನ್ನು ಧರ್ಮ ಮತ್ತು ಸರ್ವಾಧಿಕಾರ ಮಾತ್ರ ತುಂಬಬಲ್ಲದು. ಇದನ್ನು ಅರ್ಥಮಾಡಿಕೊಂಡಂತೆ ಬಾಜಪ ತನ್ನ ಕೋಮುವಾದದ ವಿಷವನ್ನು ನಾಡಿನಾದ್ಯಂತ ಬಿತ್ತ ತೊಡಗಿತು. ಈ ಅವಧಿಯಲ್ಲಿ ಜನತೆ ಸಿನಿಕತನದತ್ತ ವಾಲತೊಡಗಿದ್ದರು. ತಮಗೆ ಸಂಬಂದಿಸಿಲ್ಲದ ಯಾವುದೇ ಸಮಸ್ಯೆಗಳಿಗು ಸ್ಪಂದಿಸುವ ಪ್ರತಿಕ್ರಿಯಿಸುವ ಆಸಕ್ತಿ ತೋರದೆ ಸಿನಿಕತನದಿಂದ ವರ್ತಿಸತೊಡಗಿದರು. ಸಮುದಾಯಗಳಲ್ಲಿ ಚಳುವಳಿಗಳು ಹೋರಾಟಗಳು ಮಾಯವಾಗುತ್ತ ಹೋದವು.ಜನತೆ ರಾಜಕಾರಣವನ್ನು ನಿರಾಸಕ್ತಿಯಿಂದ ಅಸಡ್ಡೆಯಿಂದ ನೋಡತೊಡಗಿತು. ಹೀಗೆ ಜನ ಮೌನಕ್ಕೆ ಶರಣಾಗುತ್ತ ಹೋದಂತೆ ನಮ್ಮ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗಗಳು ಸಹ ಪಾಶ್ರ್ವವಾಯುವಿಗೆ ತುತ್ತಾದಂತೆ ವರ್ತಿಸತೊಡಗಿದವು. ರಾಷ್ಟದಲ್ಲಿ ಎಂತಹ ದುರಂತಗಳು ಸಂಭವಿಸಿದರು ಅವು ತಮಗೆ ಸಂಬಂದಿಸಿಯೇ ಇಲ್ಲವೆಂಬಂತೆ ಜನ ಮಂಪರಿನಲ್ಲಿ ಬದುಕ ತೊಡಗಿದಾಗ, ಸಣ್ಣಪುಟ್ಟ ಬಾವನಾತ್ಮಕ ವಿಚಾರಗಳಿಗು ಜನ ಬಾವೋದ್ರೇಕಗೊಳ್ಳುತ್ತ ಹೋಗುತ್ತಾರೆ. ಹೀಗೆ ನಾಯಕನಿರದ ಒಂದು ನಾಡಿನ ಜನತೆ ಒಬ್ಬ ಬಲಿಷ್ಠನಾಯಕನನ್ನು ಎದುರು ನೋಡತೊಡಗುತ್ತಾರೆ. ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಬಲ್ಲಂತಹ ಒಬ್ಬ ನಾಯಕನ ಆಗಮನವಾಗದೇ ಇದ್ದಾಗ ಅಂತಹ ಶೂನ್ಯವನ್ನು ಧರ್ಮವೊಂದು ಸಮರ್ಥವಾಗಿ ತುಂಬಿ ಜನರ ಆಶೋತ್ತರಗಳನ್ನು ತಾನು ಮಾತ್ರ ಪೂರೈಸಬಲ್ಲೆನೆಂಬ ಭರವಸೆ ನೀಡತೊಡಗಿ ನಿದಾನವಾಗಿ ಅದು ತಾನೇ ಪ್ರಭುತ್ವವಾಗುವ ದಾರಿಯಲ್ಲಿ ಸಾಗತೊಡಗುತ್ತದೆ. 2000ದ ನಂತರ ಇಂಡಿಯಾದಲ್ಲಿ ಆದದ್ದು ಇಂತಹುದೇ ಬೆಳವಣಿಗೆ: ನಾಯಕನ ಕೊರತೆಯಿದ್ದ ನಾಡಿನಲ್ಲಿ ತನ್ನ ಧರ್ಮರಾಜಕಾರಣ ಶುರು ಮಾಡಿದ ಬಾಜಪ ಬಹುಸಂಖ್ಯಾತ ಹಿಂದೂ ಧರ್ಮೀಯರನ್ನು ಓಲೈಸುತ್ತ ಅಲ್ಪಸಂಖ್ಯಾತರಿಂದ ಧರ್ಮ ನಾಶವಾಗುವ ಭಯವನ್ನು ಬಿತ್ತತೊಡಗಿ ಇತಿಹಾಸವನ್ನು ತನಗೆ ಅನುಕೂಲಕರವಾಗುವ ರೀತಿಯಲ್ಲಿ ಬಳಸಿಕೊಂಡು ಜನತೆಯಲ್ಲಿ ಮತೋನ್ಮಾದವನ್ನು ಸೃಷ್ಠಿಸುತ್ತ ಹೋಯಿತು. ಅದಕ್ಕಾಗಿ ಅದು ಕಾಶ್ಮೀರದ ಸಮಸ್ಯೆಯಿಂದ ಹಿಡಿದು ಬಾಬಾಬುಡನ್ಗಿರಿ, ಬಾಬ್ರಿಮಸೀದಿ ಮುಂತಾದವನ್ನು ತನ್ನ ಕಾರ್ಯತಂತ್ರಕ್ಕೆ ಬಳಸಿಕೊಂಡಿತು. 

ಇದಕ್ಕೆ ಪೂರಕವಾಗಿ ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಜಾಗತೀಕರಣ ಮದ್ಯಮವರ್ಗದ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿ, ಇಂಡಿಯಾದ ಸಮಾಜವನ್ನು ಒಂದು ಮಾರುಕಟ್ಟೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಯಿತು. ತೊಂಭತ್ತರ ದಶಕದ ನಂತರ ಹುಟ್ಟಿದ ಯುವಜನತೆಗೆ  ಇತಿಹಾಸವಾಗಲಿ, ಸ್ವಾತಂತ್ರ ಹೋರಾಟದ ಅರಿವಾಗಲಿ, ಸಮಾಜವಾದಿ ಚಿಂತನೆಗಳ ಸಂಪರ್ಕವಾಗಲಿ ಇಲ್ಲದೆ ಬೆಳೆಯುತ್ತ ಹೋಯಿತು. ಈ ವಯೋಮಾನದ ಯುವಕರಿಗೆ ಸಹಜವಾಗಿ ಹಿಂದೂ ಮೂಲಭೂತವಾದಿಗಳ ಮತಾಂಧ ಮಾತುಗಳು ಆಕರ್ಷಕವಾಗಿ ಕಂಡಿದ್ದರೆ ಅಚ್ಚರಿಯೇನಿಲ್ಲ. ಯುವಜನತೆಯ ಈ ದೌರ್ಬಲ್ಯವನ್ನು ಬಳಸಿಕೊಂಡ ಬಾಜಪ ಇತಿಹಾಸವನ್ನು ತಿರುಚುತ್ತ, ಅನ್ಯಧರ್ಮಗಳ ಮೇಲೆ ಇಲ್ಲಸಲ್ಲದ ಗೂಬೆಗಳನ್ನು ಕೂರಿಸುತ್ತ ಯುವಜನತೆಯಲ್ಲಿ ಮತಾಂಧತೆಯ ವಿಷವನ್ನು ಹರಡುತ್ತ ಹೋಯಿತು. ಇವತ್ತು ನೀವು ಯಾವುದೇ ಸಾಮಾಜಿಕ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿಂದೂ ಮತೀಯವಾದದ ಕುರಿತಾಗಿ ಮುವತ್ತು ವರ್ಷದೊಳಗಿನ ಯುವಕರೇ ಹೆಚ್ಚಾಗಿ ಬರೆಯುತ್ತಿರುವುದು ಮತ್ತು ತಾವು ಓದಿಕೊಂಡ ಸಂಘ ಪರಿವಾರ ಮರುಸೃಷ್ಠಿಸಿದ ಇತಿಹಾಸವನ್ನೆ ಸತ್ಯವೆಂದು ನಂಬಿರುವ ಬಲಪಂಥೀಯರ ಒಂದು ಕಾರ್ಯಪಡೆಯನ್ನೇ ಕಾಣಬಹುದು. ಹೀಗೆ ಬಾಜಪ ಮತ್ತು ಅದರ ಸಂಘಪರಿವಾರದ ಸದಸ್ಯ ಸಂಸ್ಥೆಗಳು ಯುವಜನತೆಯನ್ನು ಗುರಿಯಾಗಿಸಿಟ್ಟುಕೊಂಡು ದೇಶಭಕ್ತಿ ಮತ್ತು ಧರ್ಮ ಎರಡೂ ಒಂದೇ ಎನ್ನುವ ಹೊಸ ಸಿದ್ದಾಂತವನ್ನು ಹರಡುತ್ತ ಹೋದವು. ಹೀಗಾಗಿ ದೇಶದ ಒಟ್ಟು ಮತದಾರರ ಪೈಕಿ ಶೇಕಡಾ ಐವತ್ತಕ್ಕೂ ಹೆಚ್ಚಿರುವ ಯುವಪೀಳಿಗೆ ಸಹಜವಾಗಿ ಬಾಜಪದತ್ತ ವಾಲಿತು.

ಈ ಸಂದರ್ಭದಲ್ಲಿಯೇ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿಯವರನ್ನು ಹಿಂದೂ ಧರ್ಮ ರಕ್ಷಕನೆಂದೂ, ಅಭಿವೃದ್ದಿಯ ಹರಿಕಾರನೆಂದು ಬಿಂಬಿಸಿದ ಬಾಜಪ, ನಾಯಕನೊಬ್ಬನ ನಿರೀಕ್ಷೆಯಲಿದ್ದ ಜನತೆಗೆ ಬಲಪಂಥೀಯ ನಾಯಕನೊಬ್ಬನ್ನು ನೀಡಿತು. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಮೋದಿಯವರು ಒಬ್ಬ ಬಲಿಷ್ಠ,ಬಲಪಂಥೀಯ ನಾಯಕ ಬಳಸುವ ಬಾಷೆಯನ್ನು, ಬಾಷಣ ಮಾಡುವ ಶೈಲಿಯನ್ನು, ಅದಕ್ಕೆ ತಕ್ಕಂತಹ ದೈಹಿಕ ವರ್ತನೆಗಳನ್ನು ಆವಾಹಿಸಿಕೊಂಡು ದೇಶಭಕ್ತಿಯ ಬಗ್ಗೆ, ಹಿಂದಿನವರ ಭ್ರಷ್ಟಾಚಾರದ ಬಗ್ಗೆ, ಮುಂದೆ ತಾವು ತರಲಿರುವ ಅಮೂಲಾಗ್ರ ಬದಲಾವಣೆಗಳ ಬಗ್ಗೆ ವೀರಾವೇಶದಿಂದ ಮಾತಾಡಿ ರಾಷ್ಟ್ರ ಸುತ್ತಲು ಪ್ರಾರಂಬಿಸಿದರು. ಹೀಗೆ ಜನರ ಕನಸುಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಬಾಜಪ ಜನತೆಗೆ ಒಬ್ಬ ಬಲಪಂಥೀಯ ನಾಯಕನನ್ನು ನೀಡಿತು. ತನ್ನನ್ನು ಬೆಂಬಲಿಸುವ ಉದ್ಯಮಿಗಳನ್ನು, ಮಾಧ್ಯಮಗಳನ್ನೂ ಬಳಸಿಕೊಂಡ ಬಾಜಪ ಮೋದಿ ಪರವಾದ ಅಲೆಯೊಂದನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಯಿತು. ಮೋದಿ ಅಲೆ ಎನ್ನುವುದು ಸಮೂಹ ಸನ್ನಿಯ ರೂಪ ಪಡೆದು 2014 ರ ಹೊತ್ತಿಗೆ ಅಧಿಕಾರ ಪಡೆಯುವಲ್ಲಿಗೆ ಬಂದು ನಿಂತಿತು.

ಹೀಗೆ ಬಾಜಪ ವಿರೋಧಪಕ್ಷಗಳ ಪ್ರತಿರೋಧವಿರದೆ ಅಧಿಕಾರ ಪಡೆಯುವಲ್ಲಿ ಪೂರಕವಾದ ಅಂಶಗಳು ಈ ಕೆಳಕಂಡಂತಿವೆ: 

ಬಾಜಪದ ಮತಾಂಧರಾಜಕಾರಣ, ಸಮರ್ಥನಾಯಕನನನ್ನು ಸೃಷ್ಠಿಸಿ ಹೋರಾಡಲಾಗದ ಕಾಂಗ್ರೆಸ್ಸಿನ ದೌರ್ಬಲ್ಲ, ಒಂದಾಗಿ ರಾಜಕರಣ ಮಾಡದ ವಿರೋಧಪಕ್ಷಗಳ ಒಳಜಗಳಗಳು, ಬಂಡವಾಳಶಾಹಿ ಉದ್ಯಮಪತಿಗಳ ಹಣಕಾಸಿನ ಬೆಂಬಲ, ತಮ್ಮನ್ನು ತಾವೇ ಮಾರಿಕೊಂಡ ಬಹುತೇಕ ರಾಷ್ಟ್ರೀಯ ಮಾಧ್ಯಮಗಳೆಲ್ಲ ಸೇರಿ ಬಾಜಪದ ಪರವಾಗಿ ಕೆಲಸ ಮಾಡಿ ಅದನ್ನು ಕೇಂದ್ರದ ಗದ್ದುಗೆಯಲ್ಲಿ ಕೂರಿಸಲು ಯಶಸ್ವಿಯಾದವು. ಇಷ್ಟಾದರು ಇನ್ನೂ ಇಂಡಿಯಾದ ಹಲವು ಭಾಗಗಳು ಬಾಜಪದ ತೆಕ್ಕೆಗೆ ಬಂದಿಲ್ಲ. ಉತ್ತರದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಅಧಿಕಾರ ನಡೆಸುತ್ತಿರುವ ಬಾಜಪ ಬರಲಿರುವ ರಾಜ್ಯವಿದಾನಸಭಾ ಚುನಾವಣೆಗಳಲ್ಲಿ ಗೆಲುವು ಸಾದಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. 

ಬಾಜಪದ ಕೋಮುರಾಜಕಾರಣದ ವಿರುದ್ದ ಸೃಷ್ಠಿಯಾಗಬೇಕಿರುವ ಮಹಾಮೈತ್ರಿಕೂಟ

ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. 

ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸಬಲ್ಲವು. ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಕಾಂಗ್ರೇಸ್ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ. 2015ರಲ್ಲಿ ನಡೆದ ಬಿಹಾರ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ನಿತೀಶ್ ಲಾಲೂ ಸೇರಿ ರಚಿಸಿಕೊಂಡ ಮಹಾಘಟಬಂದನ್ ಇದಕ್ಕೊಂದು ತಾಜಾ ಉದಾಹರಣೆ.ಆದರೆ ಇದನ್ನು ಅರ್ಥ ಮಾಡಿಕೊಳ್ಳಬೇಕಾದ ಉಳಿದ ಪ್ರಾದೇಶಿಕ ಪಕ್ಷಗಳ ನಾಯಕರುಗಳಿನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳಲ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ. ಅಂದರೆ ಎಂಬತ್ತನೇ ದಶಕದ ಅಂತ್ಯದಲ್ಲಿ ರಚನೆಯಾದ ಕಾಂಗ್ರೇಸ್ ವಿರೋಧಿ ಮೈತ್ರಿಕೂಟದ ರೀತಿಯೇ ಇವತ್ತು ಬಾಜಪೇತರ ಪಕ್ಷಗಳ ಮೈತ್ರಿಕೂಟವೊಂದು ರಚನೆಯಾಗಬೇಕಿದೆ. ಆ ದಿನಗಳಲ್ಲಿ ಅಂತಹದೊಂದು ಕೂಟ ರಚನೆಗೆ ಬಾರಿ ಉತ್ಸಾಹದಿಂದ ಮತ್ತು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದು ನಮ್ಮ ಎಡಪಕ್ಷಗಳೇ.ಇವತ್ತಿನ ಸನ್ನಿವೇಶದಲ್ಲಿಯೂ ಮತ್ತೆ ಎಡಪಕ್ಷಗಳೇ ಇಂತಹದೊಂದು ವೇದಿಕೆ ರಚನೆಗೆ ಮುಂದಾಗಿ ಮುನ್ನಡಿ ಬರೆಯಬೇಕಾಗಿದೆ. ಯಾಕೆಂದರೆ ಈಗಿರುವ ಪ್ರಾದೇಶಿಕ ಪಕ್ಷಗಳ ನಾಯಕರುಗಳನ್ನು ಒಂದೇ ವೇದಿಕೆಯಡಿ ಕರೆತಂದು ಮಾತುಕತೆಗೆ ಕೂರಿಸಲು ಬೇರಾವ ಶಕ್ತಿಗಳಿಗೂ ಸಾದ್ಯವಿಲ್ಲ. ನನಗನ್ನಿಸುವಂತೆ ತನ್ನ ಕೋಮುವಾದಿ ವಿರೋಧಿ ಮತ್ತು ಬಂಡವಾಳಶಾಹಿ ವಿರೋಧಿ ತತ್ವಗಳ ಬಗ್ಗೆ ಕಿಂಚಿತ್ತೂ ರಾಜಿಯಾಗದೆ ರಾಜಕಾರಣ ಮಾಡುತ್ತಿರುವ ಎಡಪಕ್ಷಗಳಿಗೆ ಮಾತ್ರ ಅಂತಹದೊಂದು ನೈತಿಕ ಶಕ್ತಿಯಿದೆಯೆಂದು ನಾನು ನಂಬಿದ್ದೇನೆ.

ಮುಂದಿನ ವರ್ಷ ಎದುರಾಗಲಿರುವ ಚುನಾವಣೆಗಳಿಗೂ ಮುನ್ನ ಇಂತಹ ಮೈತ್ರಿ ಸಾದ್ಯವಾಗುವುದಾದರೆ?

ಮುಂದಿನ ವರ್ಷಕ್ಕೆ ಅಂದರೆ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅಷ್ಟರ ಒಳಗಾಗಿ ಆಯಾ ರಾಜ್ಯಗಳಿಗೆ ಸೀಮಿತವಾಗಿ ಇಂತಹದೊಂದು ಮಹಾ ಮೈತ್ರಿಕೂಟ ರಚನೆಯಾಗುವುದೇ ಆದರೆ ಅದು ಬಾಜಪದ ಪಾಲಿಗೆ ಕಷ್ಟಕರ ಚುನಾವಣೆಗಳಾಗಬಹುದು.ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನು ಮುನ್ನಡೆಸುತ್ತಿರುವುದಾಗಿದೆ.ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದದ ಹೋರಾಟದಲ್ಲಿ ಈ ಎರಡೂ ಪಕ್ಷಗಳ ಜೊತೆ ರಾಜ್ಯದ ಗಡಿಭಾಗದಲ್ಲಿ ಪ್ರಬಲವಾಗಿರುವ ನಿತೀಶರ ಸಂಯುಕ್ತ ಜನತಾದಳ,ಲಾಲೂ ಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ,ಅಜಿತ್ ಸಂಗ್ ರವರ ಲೋಕದಳ ಪಕ್ಷಗಳು ಸೇರಿಕೊಂಡರೆ ಬಾಜಪದ ಜಯವನ್ನು ತಡೆಯ ಬಹುದಾಗಿದೆ. ಇಲ್ಲಿ ಗಂಬೀರವಾದ ಸಮಸ್ಯೆ ಇರುವುದು ಮಾಯಾವತಿ ಮತ್ತು ಮುಲಾಯಂ ನಡುವಿನ ಜಟಾಪಟಿ. ಇವರಿಬ್ಬರೂ ರಾಷ್ಟ್ರದ ಹಿತದೃಷ್ಠಿಯಿಂದ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಮೈತ್ರಿಗೆ ಮುಂದಾದರೆ ಬಹುಶ: ಬಾಜಪ ಅತ್ಯಂತ ಹೀನಾಯವಾಗಿ ಸೋಲುವುದು ಶತಸಿದ್ದ.

ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭಸಾದ್ಯವೇನಲ್ಲ. ಇದುವರೆಗು ಕಾಂಗ್ರೇಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.

ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೇಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಅದೂ ಅಲ್ಲದೆ ಮುಖ್ಯಮಂತ್ರಿ ರಾಬತ್ ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ಬಹುಜನ ಪಕ್ಷದ ಶಾಸಕರು ಅವರಿಗೆ ಬೆಂಬಲ ನೀಡಿದ್ದರು. ಇದರ ಹೊರತಾಗಿಯು ಅಲ್ಲಿ ಸಾಕಷ್ಟು ಪ್ರಬಾವ ಹೊಂದಿರುವ ಲಾಲೂ ಪ್ರಸಾದ್, ಮುಲಾಯಂ, ಮಾಯಾವತಿಯವರು ಒಂದಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೇಸ್ ಮತ್ತು ಬಾಜಪದ ಸೋಲಿಗೆ ಕಾರಣವಾಗಬಹುದಾಗಿದೆ.ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ.ಮಣಿಪುರದಲ್ಲಿ ಕಾಂಗ್ರೇಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ..

ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ. ಆದರೆ ಇಂತಹ ಕಾರ್ಯತಂತ್ರ ಹೇಗಿರಬೇಕೆಂದರೆ ಬಾಜಪೇತರ ಪಕ್ಷಗಳು ಒಂದಾಗಿ ನಿಲ್ಲುವಂತಿರಬೇಕು

ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೇಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ. 

ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್ ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರಸಚಿವೆಯಾಗಿದ್ದು ಇಡೀರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆಇನ್ನು ಮುಲಾಯಂ ಸಿಂಗ್ ಸಹ ರಾಷ್ಟ್ರವ್ಯಾಪಿ ಗೊತ್ತಿರುವ ನಾಯಕರೇ ಆಗಿದ್ದು ಕರ್ನಾಟಕದಂತ ರಾಜ್ಯದಲ್ಲಿಯೂ ಸ್ವಲ್ಪ ಮಟ್ಟಿಗೆ ಅವರ ಪ್ರಬಾವವಿದೆ

ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರಾದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದ್ದು, ಅವುಹೀಗಿವೆ: ಬಿಜುಜನತಾದಳ (ನವೀನ್ಪಟ್ನಾಯಕ್,), ಜನತಾದಳ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್ (ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ) ಆಮ್ಆದ್ಮಿ (ಅರವಿಂದಕೇಜ್ರೀವಾಲ್), ಎನ್.ಸಿ.ಪಿ. (ಶರದಪವಾರ್), ರಾಷ್ಟ್ರೀಯ ಜನತಾದಳ (ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.ಇಷ್ಟೆಲ್ಲ ಹೇಳಿದ ಮೇಲೂ ಬಗೆಹರಿಯದೆ ಉಳಿಯುವ ಒಂದು ಪ್ರಶ್ನೆಯೆಂದರೆ ಇಂತಹ ಮೈತ್ರಿಕೂಟದ ಪ್ರದಾನಮಂತ್ರಿ ಯಾರಾಗಬೇಕೆಂಬುದಾಗಿ.ಬಹುಶ: ಅದನ್ನು ಚುನಾವಣೆಯ ನಂತರವೇ ನಿರ್ದರಿಸುವುದು ಕ್ಷೇಮವೆನಿಸುತ್ತದೆ.

ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆಕಾಂಗ್ರೇಸ್ ಇರಲಿ, ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೇಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ. ಈ ದಿಕ್ಕಿನಲ್ಲಿ ಯೋಚಿಸಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಬಲ್ಲಂತಹ ರಾಜಕೀಯ ಮುತ್ಸದ್ದಿಯೊಬ್ಬರ ಅಗತ್ಯವಿದೆ. ವ್ಯಕ್ತಿಯಾಗಲ್ಲದೆ ಪಕ್ಷವಾಗಿ ಎಡಪಕ್ಷಗಳು ಇಂತಹದೊಂದು ಮುತ್ಸದ್ದಿತನದ ಕೆಲಸ ಮಾಡಬೇಕಾಗಿದೆ. ರಾಷ್ಟ್ರದ ಕೋಮು ಸಾಮರಸ್ಯವನ್ನು ,ಬಹುಸಂಸ್ಕೃತಿಯ ನಮ್ಮ ಸಮಾಜ ವಿಚ್ಚಿದ್ರವಾಗದಂತೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಪ್ರಯತ್ನವೊಂದು ನಡೆಯದೇ ಹೋದರೆ ಭವಿಷ್ಯದಲ್ಲಿ ಬಲಪಂಥೀಯರ ಕಪಿಮುಷ್ಠಿಯಲ್ಲಿ ಸಿಲುಕುವ ರಾಷ್ಟ್ರವನ್ನು ಕಾಪಾಡಲು ಯಾರಿಂದಲೂ ಸಾದ್ಯವಿಲ್ಲ.

ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ. ಇದನ್ನು ಅರ್ಥ ಮಾಡಿಕೊಂಡೇ ಮುಂದಿನ ಹೆಜ್ಜೆ ಇಡಬೇಕಾಗಿದೆ.

(ಈ ಲೇಖನ ಬರೆಯುವ ಹೊತ್ತಿಗೆ ನನ್ನ ಮನಸಿನಲ್ಲಿದ್ದುದು ಇಂಡಿಯಾದ ಒಬ್ಬ ಸಾಮಾನ್ಯ ಮತದಾರ ಏನನ್ನು ಬಯಸುತ್ತಾನೆಂಬುದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತ್ರ. ಹಾಗಾಗಿ ಲೇಖನದ ಎರಡನೇ ಭಾಗ ಅತಿಯಾದ ನಿರೀಕ್ಷೆಯ ಆದರ್ಶದ ಅಂಶಗಳನ್ನು ಹೊಂದಿರಬಹುದಾಗಿದೆ. ಹಾಗಾಗಿ ಸಾಮಾನ್ಯನೊಬ್ಬ ಚಿಂತಿಸಬಹುದಾದ ರೀತಿಯಲ್ಲಿ ಸರಳವಾಗಿ ಬರೆದಿರುವೆ)

No comments:

Post a Comment