Aug 25, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1.

(ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ 'ನವ ಕರ್ನಾಟಕ ಪ್ರಕಾಶನ' ಪ್ರಕಟಿಸಿದ ಕಿರು ಪುಸ್ತಕ "ಗೋಹತ್ಯೆ - ಒಂದು ಪರಾಮರ್ಶೆ". 2010ರಲ್ಲಿ ಮೊದಲು ಪ್ರಕಟವಾಗಿದ್ದ ನಾಗೇಶ್ ಹೆಗಡೆಯವರ ಈ ಪುಸ್ತಕ ಅವತ್ತಿಗಿಂತಲೂ ಇವತ್ತಿಗೇ ಹೆಚ್ಚು ಪ್ರಸ್ತುತ. ದನದ ಹೆಸರಿನಲ್ಲಿ ಜನರನ್ನು ಸಾಯಿಸುವ ಪ್ರವೃತ್ತಿ ಅಲ್ಲೆಲ್ಲೋ ದೂರದ ಊರಿನ ಘಟನೆಯಾಗಿ ಉಳಿದಿಲ್ಲ. ನಮ್ಮ ಕರಾವಳಿಯಲ್ಲೇ ಒಂದು ಬಲಿ ಪಡೆದುಕೊಂಡಿದೆ ಈ ಗೋ - ರಾಜಕೀಯ. ಈ ಸಂದರ್ಭದಲ್ಲಿ ನಾಗೇಶ್ ಹೆಗಡೆಯವರು ವೈಜ್ಞಾನಿಕ - ಆರ್ಥಿಕ - ಸಾಮಾಜಿಕ ದೃಷ್ಟಿಕೋನದಿಂದ ಬರೆದಿರುವ "ಗೋಹತ್ಯೆ - ಒಂದು ಪರಾಮರ್ಶೆ"ಯನ್ನು ಹಿಂಗ್ಯಾಕೆಯಲ್ಲಿ ಮೂರು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಶ್ನೋತ್ತರ ರೂಪದಲ್ಲಿರುವ ಈ ಕಿರುಪುಸ್ತಕವನ್ನು ಮರುಪ್ರಕಟಿಸಲು ಅನುಮತಿ ನೀಡಿದ ನಾಗೇಶ್ ಹೆಗಡೆಯವರಿಗೆ ಧನ್ಯವಾದಗಳು - ಹಿಂಗ್ಯಾಕೆ.)
ನಾಗೇಶ್ ಹೆಗಡೆ
25/08/2016
ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂತಹ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?
ಮೊದಲನೆಯದಾಗಿ, ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು – ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ತಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು – ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೋ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೋ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗ ಕಿತ್ತುಕೊಳ್ಳುತ್ತಿದೆ. 

ಹಾಗೇನಿಲ್ಲವಲ್ಲ? ಹಸು ಅಥವಾ ಎತ್ತನ್ನು ಈಗಲೂ ಮಾರಬಹುದು. ಆದರೆ ಕಟುಕರಿಗೆ ಮಾರಬಾರದು......
ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.

ಸೆಗಣಿ – ಗಂಜಳ ಗೊಬ್ಬರವನ್ನು ಮಾರಿದರೆ ಹಣ ಬರುತ್ತದಲ್ಲ
ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಜಾಲಿಮರ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಹಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತುಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ – ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವುವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ರೋಗಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳ ಆಗುತ್ತದೆ. ಇವೆಲ್ಲವನ್ನೂ ಅನುಭವಿಸಿದ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. ‘ಜೆಸಿಬಿ ತರಿಸಿ’ ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತ ಬರುತ್ತದೆ.

ಸತ್ತ ದನವನ್ನು ಮಾರಬಹುದಲ್ಲ? ಅದಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಇದ್ದೇ ಇರುತ್ತದೆ.
ಮಾರುವುದು ಸುಲಭವೇ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ, ದನ ತಾನಾಗಿ ಸತ್ತಿದ್ದರೂ, ಪ್ರಮಾಣಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೋಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.

ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು, ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.


ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು, ಮುದಿ ದನಗಳನ್ನು ಸರಕಾರವೇ ಸಾಕಿಕೊಳ್ಳುತ್ತದಂತಲ್ಲ?
ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು – ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ ‘ಗೋಶಾಲೆ’ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?


ಮೇಲ್ವಿಚಾರಣೆಗೆ ಮಠಾಧೀಶರು, ಧರ್ಮಾಧಿಕಾರಿಗಳು, ಹಿಂದೂ ಸ್ವಯಂಸೇವಕರು ಇರುತ್ತಾರಲ್ಲ? ಗೊಡ್ಡು ಗೋವುಗಳನ್ನು ಜೋಪಾನವಾಗಿ ರಕ್ಷಿಸುತ್ತೇವೆಂದು ಮಠಗಳು ಹೇಳುತ್ತಿವೆಯಲ್ಲ?
ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.

ಗೋರಕ್ಷಣೆ ಎಂಬುದು ಹಿಂದಿನ ಕಾಲದ ಮೌಲ್ಯವೇ ಆಗಿತ್ತಲ್ಲವೇ? ಅಂಥ ಸಭ್ಯ ಪ್ರಾಣಿಗಳನ್ನು ಹಿಂಸಿಸುವುದಾಗಲೀ ಕೊಲ್ಲುವುದಾಗಲೀ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಲ್ಲವೆ?
ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ – ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಕುದುರೆಯ ಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಿಬಿಡುತ್ತಿದ್ದರಂತೆ. ಹಾಸು ಹಾಸು ಚರ್ಮಗಳು ತೇಲಾಡುವ ‘ಚರ್ಮಣ್ವತೀ’ ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದ ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದ್ದರೆ ಇನ್ನೂ ಕಷ್ಟ. ಅದರಿಂದುಂಟಾಗುವ ರೋಗರುಜಿನಗಳ ಭಯ ಇರಬಹುದು ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದುಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಡಾ. ಜಿ. ರಾಮಕೃಷ್ಣ ಹೇಳುವ ಹಾಗೆ, “ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು” ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳ ಬಂದರೆ ಮೇಲ್ಜಾತಿಯ “ದೀಕ್ಷೆ ಕೊಡಿಸುತ್ತೇನೆ” ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; “ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ” ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.

ಅದೇನೇ ಇರಲಿ, ಮಠಾಧೀಶರೆನ್ನಿಸಿಕೊಂಡವರು ಹಿಂದೂ ಧರ್ಮದ ಮೂಲತತ್ವಗಳನ್ನು ಕಾಪಾಡಿಕೊಂಡು ಬರಬೇಕಲ್ಲವೇ? ಅವರದ್ದು ತಪ್ಪೆಂದು ಹೇಗೆ ಹೇಳುತ್ತೀರಿ?
ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ – ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು.

ಮುಂದುವರೆಯುವುದು....

No comments:

Post a Comment