Sep 2, 2016

ಮೇಕಿಂಗ್ ಹಿಸ್ಟರಿ: ವೆಲ್ಲೂರಿನ ಬಂಡಾಯ (1806)

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
02/09/2016
ಮುಂದಿನ ಭಾಗದಲ್ಲಿ 1800-1801ರ ಸಮಯದಲ್ಲಿ ಊಳಿಗಮಾನ್ಯ ದೊರೆಗಳು, ಈ ಮುಂಚೆ ಮೈಸೂರು ಸೈನ್ಯದಲ್ಲಿದ್ದ, ಪಾಳೇಗಾರರೊಡನೆ ಸೇರಿ ಬ್ರಿಟೀಷರೊಡನೆ ದಕ್ಷಿಣ ಕನ್ನಡದಲ್ಲಿ ಹೋರಾಡಿದ್ದ ಸುಬ್ಬಾ ರಾವ್ ಮತ್ತು ಮಹತಾಬ್ ಖಾನನ ನೇತೃತ್ವದಲ್ಲಿ ನಡೆಸಿದ ಸಶಸ್ತ್ರ ಪ್ರತಿರೋಧದ ಬಗ್ಗೆ ಚರ್ಚಿಸೋಣ. 

ಕಾರ್ಲ್ ಮಾರ್ಕ್ಸ್ ನ್ಯೂ ಯಾರ್ಕ್ ಡೈಲಿ ಟ್ರಿಬ್ಯೂನಿಗೆ 1857ರ ಭಾರತದ ಬಂಡಾಯದ ಬಗ್ಗೆ ಬರೆದ ಲೇಖನ, ಕೆಲವು ಪ್ರಶ್ನೆಗಳ ತೀಕ್ಷ್ಣ ವಿಶ್ಲೇಷಣೆ ನಡೆಸಿರುವುದು ವೆಲ್ಲೂರಿನ ಬಂಡಾಯವನ್ನು ಅರ್ಥೈಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇಪ್ಪತ್ತು ಕೋಟಿ ಜನರನ್ನು ಎರಡು ಲಕ್ಷ ಜನರ ಸೈನ್ಯವೊಂದು ಆಳುತ್ತಿರುವ ದೇಶ ಭಾರತ ಎಂದು ಮಾರ್ಕ್ಸ್ ಬರೆಯುತ್ತಾರೆ. ಮತ್ತಿದರಲ್ಲಿ, ಬ್ರಿಟೀಷರ ಸಂಖೈ ಕೇವಲ ನಲವತ್ತು ಸಾವಿರ. (12) 

ಬಂಗಾಳದ ಸೈನ್ಯದ ರಚನೆಯಲ್ಲಿ ಮತ್ತು ಮದ್ರಾಸ್ – ಬಾಂಬೆಯ ಸೈನ್ಯದ ರಚನೆಯಲ್ಲಿ ವ್ಯತ್ಯಾಸಗಳಿದ್ದವು. 

ಬಂಗಾಳದ ಸೈನ್ಯದಲ್ಲಿದ್ದ 80,000 ಜನರಲ್ಲಿ, 30,000ದಷ್ಟು ಬ್ರಿಟೀಷರಿದ್ದರು, 28,000 ರಜಪೂತರು, 23,000 ಬ್ರಾಹ್ಮಣರು, 13,000 ಮುಸ್ಲಿಮರು ಮತ್ತು ಕೇವಲ 5,000ದಷ್ಟು “ಕೆಳಜಾತಿಯವರು”. (13) 

ಮಾರ್ಕ್ಸ್ ಬರೆಯುತ್ತಾರೆ “ಬಾಂಬೆ ಮತ್ತು ಮದ್ರಾಸಿನ ಸೈನ್ಯದಲ್ಲಿದ್ದ ಹೆಚ್ಚಿನವರು ಕೆಳ ಜಾತಿಯ ಜನರು”. (14) ಮದ್ರಾಸ್ ಸೈನ್ಯದಲ್ಲಿದ್ದ ಯುರೋಪಿಯನ್ ಪ್ರಾಬಲ್ಯ ಬಂಗಾಳದ ಸೈನ್ಯಕ್ಕೆ ಹೋಲಿಸಿದರೆ ಬಹಳವೇ ಕಡಿಮೆಯಿತ್ತು. 

ಟಿಪ್ಪುವಿನ ಮಕ್ಕಳನ್ನು ಬ್ರಿಟೀಷರು ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿಟ್ಟಿದ್ದರು. ಅಲ್ಲಿ ಕಾವಲಿಗಿದ್ದ ಮದ್ರಾಸ್ ಸೈನ್ಯದಲ್ಲಿದ್ದ ಹೆಚ್ಚಿನವರು ಶೋಷಿತ ಜಾತಿಗೆ ಸೇರಿದ್ದವರು. ಆದ್ದರಿಂದಾಗಿ, ವಸ್ತುನಿಷ್ಠವಾಗಿ ನೋಡಿದರೆ, ಕೆಲವೇ ಕೆಲವು ಸಂಖೈಯಲ್ಲಿದ್ದ ಯುರೋಪಿಯನ್ ಅಧಿಕಾರಿಗಳು ಮತ್ತು ಸೈನಿಕರನ್ನು ಇಲ್ಲವಾಗಿಸಲು ಹೆಚ್ಚು ಸಮಯವೂ ಬೇಕಿರಲಿಲ್ಲ, ಯೋಜನೆಯೂ ಮಾಡಬೇಕಿರಲಿಲ್ಲ. 

“ಮೊದಲ ನೋಟದಲ್ಲಿ, ಭಾರತದ ಜನರ ನಿಷ್ಠೆ ಸ್ಥಳೀಯ ಸೈನ್ಯದ ನಿಷ್ಠೆಯ ಮೇಲವಲಂಬಿತವಾಗಿದೆ ಎಂದು ತೋರುತ್ತದೆ, ಭಾರತದ ಜನರಲ್ಲಿದ್ದ ಪ್ರತಿಭಟನೆಯ ಮನೋಭಾವವನ್ನು ಕೇಂದ್ರೀಕೃತಗೊಳಿಸಿದ್ದು ಬ್ರಿಟೀಷ್ ಆಳ್ವಿಕೆ” ಎಂದು ಮಾರ್ಕ್ಸ್ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುತ್ತಾರೆ. (15) 

ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸೈನಿಕರಿಗಿದ್ದ ಶೋಷಣಾತ್ಮಕ ಪರಿಸ್ಥಿತಿ ಸೈನಿಕರಲ್ಲಿ ಆಗಾಗ ಉಂಟಾಗುವ ಅಸಮಾಧಾನಕ್ಕೆ ಕಾರಣವಾಗಿತ್ತು ಮತ್ತಿದು ದಂಡನಾತ್ಮಕ ಕೋರ್ಟ್ ಮಾರ್ಷಲ್ಲುಗಳಲ್ಲಿ ಅಂತ್ಯವಾಗುತ್ತಿತ್ತು. 1857ರ ಸ್ವಾತಂತ್ರ್ಯದ ಯುದ್ಧವನ್ನಾರಂಭಿಸಿದ್ದು ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳು, ಅವರಲ್ಲಿದ್ದ ವಸಾಹತು ವಿರೋಧಿ ಕ್ರಾಂತಿಕಾರತೆಯನ್ನು 1857ರ ಸ್ವಾತಂತ್ರ್ಯ ಹೋರಾಟ ಹೊರಗೆಳೆದಿತ್ತು. ಟಿಪ್ಪುವಿನ ಮಗ ಫತಾ ಹೈದರನ ನೇತೃತ್ವದಲ್ಲಿ ವೆಲ್ಲೂರಿನ ಸಿಪಾಯಿಗಳ ರೋಷವನ್ನು ಕ್ರೋಡೀಕರಿಸಲಾಯಿತು, ಫತಾ ಹೈದರನ ನೇತೃತ್ವವನ್ನು ಅವರು ತತ್ ಕ್ಷಣ ಒಪ್ಪಿಕೊಂಡರು; ಪರಿಣಾಮವಾಗಿ ನಗರದ ಜನರ ಬೆಂಬಲದೊಂದಿಗೆ ಬಂಡಾಯ ಪ್ರಾರಂಭವಾಯಿತು. 

ಈ ದಂಗೆಯ ಬಗ್ಗೆ ನಂತರದಲ್ಲಿ ನಡೆದ ತನಿಖಾ ಸಮಿತಿ ಕೊಟ್ಟ ವರದಿಯನ್ನಾಧರಿಸಿ ಚೋಪ್ರಾ, ರವಿಚಂದ್ರನ್ ಮತ್ತು ಸುಬ್ರಮಣಿಯನ್ ಬರೆಯುತ್ತಾರೆ: “ಭಾರತೀಯ ಸೈನಿಕರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಕಡಿಮೆಯಿರುತ್ತಿತ್ತು; ಸುಬೇದಾರನ ಸ್ಥಾನದಿಂದ ಮೇಲೇರಲು ಅವರಿಗೆ ಸಾಧ್ಯವೇ ಇರಲಿಲ್ಲ. ಚಿಕ್ಕ ಪುಟ್ಟ ತಪ್ಪಿಗೂ ಭಾರತೀಯ ಅಧಿಕಾರಿಗಳನ್ನು ಅವಮಾನಿಸಿ ಹಿಂಬಡ್ತಿ ನೀಡಲಾಗುತ್ತಿತ್ತು. ಅವರಿಗೆ ಸಿಗುತ್ತಿದ್ದ ಪಗಾರವೂ ತುಂಬಾ ಕಮ್ಮಿ; ನಿಜಾಮ್ ಮತ್ತು ಮರಾಠ ಮುಖ್ಯಸ್ಥರ ಕೆಳಗಿದ್ದ ಸಾಮಾನ್ಯ ಸಿಪಾಯಿಗಳಿಗೂ ಕಂಪನಿಯ ಕೆಳಗಿದ್ದ ಸುಬೇದಾರರು ಮತ್ತು ಜಮಾದಾರರಿಗಿಂತ ಹೆಚ್ಚಿನ ಸಂಬಳ ಸಿಗುತ್ತಿತ್ತು ಎಂದವರು ಆರೋಪಿಸುತ್ತಾರೆ. ಆದಾಗ್ಯೂ, ಈ ಅಸಮಾಧಾನಗಳೆಲ್ಲವೂ ಮೇಲ್ ಬಂದಿದ್ದು ಸಿಪಾಯಿಗಳಿಗೆ ಹೊಸ ತಲೆ ವಸ್ತ್ರವನ್ನು ಕಂಪನಿ ಪರಿಚಯಿಸಲು ಪ್ರಯತ್ನಿಸಿದಾಗ”. (16) 

1857ರ ದಂಗೆಯ ರೋಷಕ್ಕೆ ಕಿಡಿ ಹಚ್ಚಲು ಬೀಫ್ ಮತ್ತು ಪೋರ್ಕ್ ಕಾರಣವಾದ ರೀತಿಯಲ್ಲೇ, ನಾಮಕಾವಾಸ್ಥೆ ವಿಷಯವಾದ ತಲೆ ವಸ್ತ್ರದ ಕಾರಣದಿಂದ ಇಲ್ಲಿನ ಅಸಮಾಧಾನ ಸ್ಪೋಟಗೊಂಡಿತು. ಬ್ರಿಟೀಷ್ ತನಿಖಾ ಸಮಿತಿಯ ದಾಟಿಯಲ್ಲೇ ಬರೆಯುತ್ತಾ ಈ ಭಾರತೀಯ ಲೇಖಕರು ಬರೆಯುತ್ತಾರೆ: “ಸಿಪಾಯಿಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು, ಯುರೋಪಿನ ಟೋಪಿಯಂತೆ ಕಾಣುವ ಹೊಸ ತಲೆ ವಸ್ತ್ರವನ್ನು ಪರಿಚಯಿಸಲಾಯಿತು. ಕಿವಿ ಓಲೆ ಮತ್ತು ಹಣೆಯ ಮೇಲೆ ಜಾತಿ ಸೂಚಕ ಚಿಹ್ನೆಗಳನ್ನು ನಿಷೇಧಿಸಲಾಯಿತು…. ಆದರೆ ಸಿಪಾಯಿಗಳು ಹೊಸ ತಲೆ ವಸ್ತ್ರವನ್ನು ಒಪ್ಪಲು ನಿರಾಕರಿಸಿದರು ಮತ್ತು ಬಂಧನದ ಭೀತಿಯ ಹೊರತಾಗಿಯೂ ಈ ಆದೇಶದ ವಿರುದ್ಧ ಬಹಿರಂಗವಾಗಿ ಪ್ರತಿಭಟಿಸಿದರು. ತತ್ಪರಿಣಾಮವಾಗಿ ಕೆಲವರನ್ನು ಬಂಧಿಸಲಾಯಿತು. 1806ರ ಮೇ 7ರಂದು ಬೆಳಗಿನ ಪೆರೇಡಿನ ಸಮಯದಲ್ಲಿ ಹೊಸ ತಲೆ ವಸ್ತ್ರವನ್ನು ಧರಿಸುವಂತೆ ಸಿಪಾಯಿಗಳಿಗೆ ಆದೇಶಿಸಿದಾಗ, ಆದೇಶವನ್ನು ಧಿಕ್ಕರಿಸಿದ ಸಿಪಾಯಿಗಳು ತಲೆಯ ಮೇಲೊಂದು ಕೈಚೌಕವನ್ನು ಹಾಕಿಕೊಂಡು ಇಂಗ್ಲೀಷ್ ಅಧಿಕಾರಿಗಳನ್ನು ‘ನಾಯಿ’ಗಳೆಂದು ಹೀಗಳೆದರು…. 

ವೆಲ್ಲೂರಿನಲ್ಲಿ ಈ ಘಟನೆ ಶುರುವಾದ ಕೆಲವೇ ದಿನಗಳಲ್ಲಿ ಉತ್ತರ ಆರ್ಕಾಟಿನ ವಲ್ಲಜಾಬಾದಿನಲ್ಲಿದ್ದ ಸಿಪಾಯಿಗಳು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರು. ಈ ಪ್ರಕರಣ ಸಾರ್ವಜನಿಕರ ನೇತೃತ್ವದಿಂದ ಪ್ರಾರಂಭವಾಗಿತ್ತು; ಯುರೋಪಿಯನ್ ಶೈಲಿಯ ಟೋಪಿಗಳನ್ನು ಹಾಕಿದ್ದ ಸಿಪಾಯಿಗಳನ್ನು ಅವರು ಹೀಯಾಳಿಸಿದ್ದರು. ಪರಿಣಾಮವಾಗಿ ಸಿಪಾಯಿಗಳು ಆ ಟೋಪಿಗಳನ್ನು ತೆಗೆದೆಸೆದರು ಮತ್ತಿನ್ನೂ ಅದನ್ನು ಧರಿಸಿದವರನ್ನು ತೆಗಳಿದರು. 

ಈ ಸಂದರ್ಭವನ್ನು ವೆಲ್ಲೂರಿನಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಕ್ಕಳು ಸಂಪೂರ್ಣವಾಗಿ ಉಪಯೋಗಿಸಿಕೊಂಡರು….ಈ ದಂಗೆಗೊಂದು ರಾಜಕೀಯ ಗುರಿ ನೀಡುವ ಪ್ರಯತ್ನ ಮಾಡಿದರು….ಮತ್ತು ಸಿಪಾಯಿಗಳೊಡನೆ ಗುಪ್ತ ಸಂಪರ್ಕವನ್ನು ಬೆಳೆಸಿಕೊಂಡು, ಅವರ ಅಸಮಾಧಾನವನ್ನು ಇಂಗ್ಲೀಷರ ವಿರುದ್ಧದ ಹಿಂಸಾತ್ಮಕ ಹೋರಾಟಕ್ಕೆ ತಿರುಗಿಸಿದರು, ದಕ್ಷಿಣ ಭಾರತದದಿಂದ ಬ್ರಿಟೀಷರನ್ನು ಓಡಿಸುವ ಸ್ಪಷ್ಟ ಉದ್ದೇಶದೊಂದಿಗೆ…..ಟಿಪ್ಪುವಿನ ನಾಲ್ಕನೇ ಮಗನಾದ ಮೊಯಿನುದ್ದೀನನ ನೇತೃತ್ವದಲ್ಲಿ, ದಕ್ಷಿಣ ಭಾರತದ ವಿವಿಧ ಭಾಗಗಳಿಂದ ದೊರೆಯುವ ಬೆಂಬಲದಿಂದ ಬಂಡಾಯ ನಡೆಯುತ್ತದೆ ಎಂದು ಸಿಪಾಯಿಗಳಿಗೆ ತಿಳಿಸಲಾಯಿತು. ಬಂಡಾಯವನ್ನು ಹಿಂಸಾತ್ಮವಾಗಿ ಪ್ರಾರಂಭಿಸಬೇಕೆಂದು ರಹಸ್ಯವಾಗಿ ನಿರ್ಧರಿಸಲಾಯಿತು ಮತ್ತು ಇದರಾರಂಭಕ್ಕೆ 1806ರ ಜುಲೈ 10ನೇ ತಾರೀಖನ್ನು ನಿಗದಿಗೊಳಿಸಲಾಯಿತು. ರಾತ್ರಿಯಷ್ಟರಲ್ಲಿ ಸಿಪಾಯಿಗಳು ಕಾರ್ಯಾಚರಣೆಗೆ ಇಳಿದಿದ್ದರು; ಮುಖ್ಯ ದ್ವಾರದಲ್ಲಿದ್ದ ಇಂಗ್ಲೀಷ್ ಕಾವಲುಗಾರರನ್ನು ಅವರು ಕೊಂದರು ಮತ್ತು ಸೇನಾ ಉಗ್ರಾಣವನ್ನು ವಶಕ್ಕೆ ಪಡೆದುಕೊಂಡರು. ಇದರ ನಂತರ ಯುರೋಪಿಯನ್ ಪಡೆಯ ಸೈನಿಕರ ಮತ್ತು ಅಧಿಕಾರಿಗಳ ಮಾರಣಹೋಮ ನಡೆಯಿತು, ಹೆಂಗಸರು ಮತ್ತು ಮಕ್ಕಳನ್ನು ಹೊರತುಪಡಿಸಿ…..ಲೂಟಿ ಮತ್ತು ನಿಧಿ ಹುಡುಕುವಿಕೆ ಅವ್ಯಾಹತವಾಗಿ ನಡೆಯಿತು. ರಕ್ಷಣೆಯಿಲ್ಲದ ಇಂಗ್ಲೀಷರ ಸಂಪತ್ತನ್ನು ದೋಚಲಾಯಿತು ಮತ್ತು ಎಲ್ಲೆಡೆ ಗೊಂದಲಗಳಿದ್ದವು”. (17) 

ಒಟ್ಟಾರೆ, 14 ಬ್ರಿಟೀಷ್ ಅಧಿಕಾರಿಗಳು ಮತ್ತು ಸೈನಿಕರನ್ನು ಕೊಲ್ಲಲಾಯಿತು ಮತ್ತು 76 ಮಂದಿ ಗಾಯಗೊಂಡರು. “ಕಗ್ಗೊಲೆ”ಯನ್ನು ಚೆನ್ನಾಗಿ ನಿಯಂತ್ರಿಸಿ ನಿರ್ವಹಿಸಲಾಯಿತು. ಬ್ರಿಟೀಷ್ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ಸೈನಿಕರು ದಂಗೆಯೆದ್ದು ತಮ್ಮ ಯುರೋಪಿಯನ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ವೆಲ್ಲೂರಿನ ಜನತೆ ಈ ದಂಗೆಗೆ ತುಂಬು ಹೃದಯದ ಬೆಂಬಲ ನೀಡಿದರು ಮತ್ತು ಸೈನಿಕರಿಗೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನೂ ಮಾಡಿದರು. ದಂಗೆಯನ್ನು ಇತರೆ ರಕ್ಷಣಾ ಕೋಟೆಗಳೆಡೆಗೂ ಹಬ್ಬಿಸುವ ಯೋಜನೆಗಳನ್ನು ರೂಪಿಸಲಾಗಿತ್ತಾದರೂ, ಬ್ರಿಟೀಷರು ವೆಲ್ಲೂರನ್ನು ಸುತ್ತುವರಿದರು ಮತ್ತು ಯುದ್ಧದಿಂದ ಕೋಟೆಯನ್ನು ಪುನರ್ ವಶಪಡಿಸಿಕೊಂಡರು. ಕೋಟೆಯ ಹೊರಗಡೆ ಅಸಂಖ್ಯಾತ ಜನರನ್ನು ಹತ್ಯೆಗೈದ ನಂತರ ಅವರು ಕೋಟೆಯೊಳಗಿನಿಂದ 800 ದೇಹಗಳನ್ನು ಎಳೆದು ಬಿಸಾಡಿದರು, ವಿದೇಶಿಗರಿಂದ ಓಡಿಸಲ್ಪಟ್ಟ ಮೈಸೂರು ಸುಲ್ತಾನರಿಗೆ ಮತ್ತೆ ಅಧಿಕಾರ ನೀಡಲು ನಡೆದ ಬಂಡಾಯವನ್ನು ಶಮನ ಮಾಡಿಬಿಟ್ಟರು. ವ್ಯಂಗ್ಯದ ವಿಷಯವೆಂದರೆ ತನಿಖಾ ಸಮಿತಿಗೆ ಈ “ಸ್ವೇಚ್ಛಾಚಾರದ ಹತ್ಯಾಕಾಂಡದ” ಬಗ್ಗೆ ಯಾವ ಸುಳಿವೂ ಸಿಗಲಿಲ್ಲ! ಕೊಲೊನೆಲ್ ಗಿಲೆಸ್ಪಿ ತನ್ನ 

ಡ್ರಾಗನ್ ರೆಜಿಮೆಂಟಿನೊಂದಿಗೆ ಹಲವರನ್ನು ಕೊಂದ ಎಂದು ಮಾರ್ಕ್ಸ್ ಹೇಳುತ್ತಾನೆ, ವೆಲ್ಲೂರನ್ನು ವಶಪಡಿಸಿಕೊಳ್ಳುವಾಗ, ಗವರ್ನರ್ ಜೆನರಲ್ ಮಿಂಟೋ, ಬಂಡಾಯವೆದ್ದವರಿಗೆ “ಕುಲೀನ” ಉಪಚಾರ ನೀಡುತ್ತಾನೆ. ಒಬ್ಬ ಪರಿಪೂರ್ಣ ಸಭ್ಯಸ್ಥನಂತೆ, ಆತ ಹಲವಾರು ಜನರನ್ನು ಸಾವಿನ ಮನೆಗೆ ಕಳುಹಿಸಿರಬೇಕು. (18) 

ಹಾಗಿದ್ದರೂ, ಬ್ರಿಟೀಷರು ನಡೆಸಿದ ಹತ್ಯಾಕಾಂಡವನ್ನು ಮೌನದಿಂದ ನೋಡುತ್ತಾ ಕೂರಲಿಲ್ಲ. ಬ್ರಿಟೀಷರು ನಡೆಸಿದ ಮನುಷ್ಯಹರಣವನ್ನು ಸಮರ್ಥಿಸುವ ಅನೇಕಾನೇಕ ವಸಾಹತುಶಾಹಿ ನೆಲೆಯ ಬರಹಗಳಿವೆ. ಇಲ್ಲೊಂದು ಗಿಲೆಸ್ಪಿಯ ಕಾರ್ಯಗಳನ್ನು ವಿವರಿಸುವ ಬರಹವಿದೆ: “ಹತ್ತೊಂಬತ್ತನೆಯ ಹಾಗೂ ಮದ್ರಾಸಿನ ಸೈನ್ಯ ತನ್ನ ಹಾದಿಗೆ ಅಡ್ಡ ಬಂದ ಪ್ರತಿಯೊಬ್ಬರ ಮೇಲೂ ದಾಳಿ ನಡೆಸಿ ಕೊಂದು ಹಾಕಿತು. ಅಸಹಾಯಕ ಯುರೋಪಿಯನ್ನಿನ ರೋಗಿಗಳನ್ನೂ ಹತ್ಯೆ ಮಾಡಿದ್ದು ಬ್ರಿಟೀಷರಿಗೆ ಎಷ್ಟು ಕೋಪ ತರಿಸಿತ್ತೆಂದರೆ ಯಾವುದೇ ವಿಧದ ಕರುಣೆಯನ್ನೂ ಅವರು ತೋರಲಿಲ್ಲ; ಅರಮನೆಯಲ್ಲಿ ಆಸರೆ ಪಡೆದಿದ್ದ ನೂರು ಮಂದಿ ಸಿಪಾಯಿಗಳನ್ನು ಹೊರಗೆಳೆದು ತಂದು, ಗೋಡೆಗೊರಗಿ ನಿಲ್ಲಿಸಿ, ಎಲ್ಲರೂ ಸಾಯುವವರೆಗೂ ಗುಂಡಿನ ಮಳೆಗೆರೆಯಲಾಯಿತು. ಕೋಟೆಯ ದ್ವಾರಗಳನ್ನು ಒಡೆದು ಹಾಕುವ ಯೋಜನೆ ಹಾಕಿದ ಇಂಜಿನಿಯರ್ ಜಾನ್ ಬ್ಲಾಕಿಸ್ಟನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತ, ಈ ರೀತಿಯ ಶಿಕ್ಷೆ ಕೊಡುವುದು ನಾಗರೀಕ ಸಮಾಜದ ಎಲ್ಲಾ ನಂಬುಗೆಗಳಿಗೆ ವಿರುದ್ಧವಾದುದು, ‘ಈ ಭೀಬತ್ಸ ದೃಶ್ಯವನ್ನು ನಾನು, ಹೇಳಬೇಕೆಂದರೆ ತುಂಬಾ ಸಮಚಿತ್ತದಿಂದ ನೋಡುತ್ತಿದೆ. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಕೃತ್ಯ ಮತ್ತು ಎಲ್ಲಾ ಕೋನದಿಂದಲೂ ಇದು ಸರಿಯಾದುದು.’ ಭಾರತದಲ್ಲಿ ನಡೆಯುತ್ತಿದ್ದ ಯುದ್ಧದ ಗುಣಲಕ್ಷಣಗಳಿವು, ಇಲ್ಲಿ ಯುರೋಪಿನ ಯುದ್ಧದಲ್ಲಿನ ‘ನಾಗರೀಕ’ ನಡವಳಿಕೆಗಳನ್ನು ಅಳವಡಿಸಲಾಗುವುದಿಲ್ಲ.” (19) 

ಸೋಲಿಸಿದ ತಕ್ಷಣವೇ, ಬ್ರಿಟೀಷರು ಟಿಪ್ಪುವಿನ ಮಕ್ಕಳನ್ನು ಕಲ್ಕತ್ತಾಗೆ ಕಳುಹಿಸಿದರು. ಬ್ರಿಟೀಷ್ ಅಧಿಕಾರದ ಶಕ್ತಿ ಕೇಂದ್ರವಾಗಿತ್ತು ಕಲ್ಕತ್ತ. ಬ್ರಿಟೀಷರ ಅಭಿಪ್ರಾಯದಲ್ಲಿ, ಟಿಪ್ಪುವಿನ ಮಕ್ಕಳು ಮೈಸೂರಿಗೆ ಹತ್ತಿರವಿದ್ದಷ್ಟೂ ಜನಸಮೂಹವನ್ನು ಕಲುಷಿತಗೊಳಿಸಿ ವಸಾಹತುಶಾಹಿಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ತುಂಬುತ್ತಾರೆ. 

ವೆಲ್ಲೂರು ಬಂಡಾಯದ ಗಂಭೀರತೆ ಮತ್ತು ಬ್ರಿಟೀಷ್ ಆಳ್ವಿಕೆಯ ಭವಿಷ್ಯತ್ತಿನ ಮೇಲೆ ಅದು ಉಂಟು ಮಾಡಬಹುದಾದಂತಹ ಪರಿಣಾಮಗಳ ಬಗ್ಗೆ ಮದ್ರಾಸಿನ ಗವರ್ನರ್ ವಿಲಿಯಂ ಬೆಂಟಿಕ್, ಥಾಮಸ್ ಮನ್ರೋಗೆ ಆಗಷ್ಟ್ 1806ರಲ್ಲಿ ಒಂದು ರಹಸ್ಯ ಪತ್ರ ಬರೆಯುತ್ತಾನೆ: “ಟಿಪ್ಪು ಸುಲ್ತಾನನ ಮಕ್ಕಳ ಗುಪ್ತಚರರು ಮತ್ತು ಅನುಯಾಯಿಗಳು ಘಟ್ಟದ ಕೆಳಗೆ ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅನುಮಾನವಿಲ್ಲದೇ ನಂಬಲು ನಮಗೆ ಎಲ್ಲಾ ಕಾರಣಗಳೂ ಇವೆ. ಅದೇ ರೀತಿಯ ಪಿತೂರಿಗಳನ್ನು ಘಟ್ಟದ ಮೇಲೂ ಕೈಗೊಳ್ಳುತ್ತಾರೆ ಎನ್ನಲಾಗಿದೆ. ಗುರ್ರಂಕೊಂಡದ ಪಾಳೇಗಾರರ ಮೇಲೆ ಯುವರಾಜರು ಹೆಚ್ಚಿನ ನಂಬುಗೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅತೀವ ಜಾಗರೂಕತೆ ಮತ್ತು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ನಾನು ನಿಮಗೆ ಶಿಫಾರಸು ಮಾಡುತ್ತಿದ್ದೇನೆ; ಮತ್ತು ಆ ರೀತಿಯ ಬಂಡಾಯದ ಯಾವುದೇ ಮುನ್ಸೂಚನೆ ಅಥವಾ ಚಿಹ್ನೆಗಳು ಕಂಡ ಕೂಡಲೇ, ನಿಮ್ಮ ಅನ್ನಿಸಿಕೆಯ ಪ್ರಕಾರ ಅವಶ್ಯವಿರುವ ಕ್ರಮಗಳನ್ನು ಯಾವುದೇ ಹಿಂಜರಿತವಿಲ್ಲದಂತೆ ತೆಗೆದುಕೊಳ್ಳಲು ಈ ಮೂಲಕ ನಿಮಗೆ ಅಧಿಕಾರ ನೀಡುತ್ತಿದ್ದೇನೆ. ಸ್ಥಳೀಯ ಪಡೆಗಳ ಮೇಲೆ ತುಂಬ ಹೆಚ್ಚಿನ ಅವಲಂಬನೆ ಬೇಡ ಎನ್ನುವುದು ನನ್ನ ಸಲಹೆ. ಈ ಸಂದರ್ಭದಲ್ಲಿ, ಸ್ಥಳೀಯ ಪಡೆಗಳು ಅವಶ್ಯಕತೆ ಬಿದ್ದಾಗ ಎಷ್ಟರ ಮಟ್ಟಿಗೆ ನಮ್ಮ ಪರವಾಗಿ ನಿಲ್ಲುತ್ತವೆ ಎಂದು ಹೇಳುವುದು ಅಸಾಧ್ಯ. ಸೈನಿಕರು ನಮ್ಮ ಬಗ್ಗೆ ಅಸಂತುಷ್ಟಗೊಂಡಿದ್ದಾರೆ, ಅಸಮಾಧಾನಗೊಂಡಿದ್ದಾರೆ ಮತ್ತು ಈ ಭಾವನೆಗಳ ಮೇಲೆ ಮುಸಲ್ಮಾನರ ಸರಕಾರವನ್ನು ಮರು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ, ಟಿಪ್ಪು ಸುಲ್ತಾನನ ಒಬ್ಬ ಮಗನ ನೇತೃತ್ವದಲ್ಲಿ: ಇದನ್ನು ನಮ್ಮರಿವಿಗೆ ಬರದಂತೆ ಮತ್ತು ತುಂಬಾ ಕಡಿಮೆ ಸಮಯದಲ್ಲಿ ಮಾಡುವುದು ಅಸಾಧ್ಯವೇ ಸರಿ. ಆದರೆ, ನನ್ನನ್ನು ನಂಬಿ, ಪಿತೂರಿಗಳು ನಮ್ಮೆಲ್ಲಾ ನಂಬಿಕೆಯನ್ನು ಮೀರಿ ನಡೆದಿದೆ ಮತ್ತು ದೂರದೂರಲ್ಲಿರುವ ಸೈನ್ಯವನ್ನೂ ತಲುಪಿಬಿಟ್ಟಿದೆ; ಮತ್ತು ಒಳಸಂಚುಗಳನ್ನು ಎಲ್ಲೆಡೆಯೂ ಯಶಸ್ವಿಯಾಗಿ ನಡೆಸಿದಂತೆ ಕಾಣುತ್ತದೆ. ವೆಲ್ಲೂರನ್ನು ಆಕ್ರಮಿಸಿದ್ದು ಮತ್ತು ಇತರೆ ಚಿಂತನಾ ಕ್ರಮಗಳನ್ನು ಜಾರಿಗೆ ತಂದು ಎಲ್ಲೆಡೆಯೂ ಕಣ್ಗಾವಲನ್ನು ಹೆಚ್ಚಿಸಿದರೆ, ನನ್ನ ನಂಬಿಕೆಯ ಪ್ರಕಾರ ದೊಡ್ಡ ಮಟ್ಟದ ಸ್ಪೋಟವನ್ನು ತಡೆಗಟ್ಟಬಹುದು”. (20) 

ಬೆಂಟಿಕ್ ಇದೇ ರೀತಿಯ ದಂಗೆಗಳನ್ನು ನಿರೀಕ್ಷಿಸುತ್ತಿದ್ದನಷ್ಟೇ ಅಲ್ಲ, ಜೊತೆಗೆ, ಪತ್ರದಲ್ಲಿ ಬ್ರಿಟೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ನಿಯತ್ತಿನ ಬಗ್ಗೆ ಅವನಲ್ಲಿದ್ದ ಸಂಪೂರ್ಣ ಅಪನಂಬಿಕೆ, ಆತ ಬಹುಶಃ ಮನ್ರೋನಂತಹ ಬ್ರಿಟೀಷ್ ಅಧಿಕಾರಿಗಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದ ಎನ್ನಿಸುತ್ತದೆ. ಆಗ ಲೆಫ್ಟಿನೆಂಟ್ ಕಲೋನಲ್ ಆಗಿದ್ದ ಥಾಮಸ್ ಮನ್ರೋ, ಸಂಪೂರ್ಣವಾಗಿ, ತನ್ನ ಚಿಕ್ಕ ಪುಟ್ಟ ವೈಯಕ್ತಿಕ ಕೆಲಸಕ್ಕೂ ಭಾರತೀಯ ಸೈನಿಕರ ಮೇಲೆಯೇ ಅವಲಂಬಿತನಾಗಿದ್ದ. 

ವೆಲ್ಲೂರಿನ ಬಂಡಾಯದ ಕಾರಣಗಳನ್ನು ಆಳವಾಗಿ ಗಮನಿಸಿ ಮತ್ತು ಇನ್ನೂ ನಿರ್ದಿಷ್ಟವಾಗಿ ಭಾರತದಲ್ಲಿನ ಬ್ರಿಟೀಷ್ ಸೈನ್ಯದ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ ಥಾಮಸ್ ಮನ್ರೋ, 1822ರಲ್ಲಿನ ಬರಹದಲ್ಲಿ, ಮದ್ರಾಸಿನಲ್ಲಿ ಬ್ರಿಟೀಷ್ ಪತ್ರಿಕೆಗಳಿಗೆ ಅನುಮತಿ ನೀಡುವ ಪ್ರಶ್ನೆ ಎದ್ದಾಗ, ಆ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ, ಕಾರಣ ಈ ರೀತಿಯ ಅನುಮತಿಗಳು ಭಾರತದಲ್ಲಿನ ಸ್ಪೋಟಕ ಪರಿಸ್ಥಿತಿಗೆ ಕಿಡಿ ಹಚ್ಚುವ ಕೆಲಸ ಮಾಡಿ ಬ್ರಿಟೀಷರನ್ನು ಗಂಟುಮೂಟೆ ಕಟ್ಟಿಕೊಂಡು ಹೋಗುವಂತೆ ಮಾಡುತ್ತಿತ್ತು ಮತ್ತು ಮನ್ರೋನ ಅಂದಾಜಿನಂತೆ ಈ ಕಾರ್ಯದಲ್ಲಿ ಸೈನ್ಯದ ಬಹುಮುಖ್ಯ ಪಾತ್ರವಿರುತ್ತಿತ್ತು. ಬಹಳ ವಿಧದಲ್ಲಿ, ವೆಲ್ಲೂರಿನಲ್ಲಿ ನಡೆದ ಘಟನೆ 1857ರ ಬಂಡಾಯದ ಚಿಕ್ಕ ಪ್ರತಿಕೃತಿಯಂತಿತ್ತು ಮತ್ತು ಮನ್ರೋ, ವಸಾಹತು ಗುಂಪಿನ ದೊಡ್ಡ ಅಯೋಗ್ಯ, ಅದರ ವಾಸ್ತವವನ್ನು ಬಹು ಚೆನ್ನಾಗಿ ಗ್ರಹಿಸಿಬಿಟ್ಟಿದ್ದ. ಕೆ.ಎನ್.ವಿ. ಶಾಸ್ತ್ರಿ ಮತ್ತು ಇತರೆ ಬ್ರಿಟೀಷ್ ಎಸೆದ ಬ್ರೆಡ್ಡು ತಿಂದ ‘ಸ್ಥಳೀಯ’ ಇತಿಹಾಸಕಾರರು ಮನ್ರೋನನ್ನು “ಪ್ರಗತಿಪರ” ಎಂದು ಕರೆಯಲಿಚ್ಛಿಸುತ್ತಾರೆ. ಇದು ಪೈಶಾಚಿಕ ಪ್ರಭುತ್ವದ ಕಾರ್ಯಗಳನ್ನು ಮರೆಮಾಚುವ ‘ಸ್ಥಳೀಯ’ ಬಣ್ಣಗಳಷ್ಟೇ. ಮನ್ರೋ ಬ್ರಿಟೀಷ್ ಮಾಧ್ಯಮಕ್ಕೆ ಅನುಮತಿ ಕೊಡುವುದರಿಂದಾಗುವ ಪರಿಣಾಮಗಳ ಬಗ್ಗೆ ನೀಡಿರುವ ಈ ಕೆಳಗಿನ ಹೇಳಿಕೆ ಅಂತಹ ಇತಿಹಾಸಕಾರರಿಗೆ ಸರಿಯಾಗಿ ಕಪಾಳ ಮೋಕ್ಷ ಮಾಡುತ್ತದೆ. ಇಂಗ್ಲೆಂಡಿನ ಮಧ್ಯಮವರ್ಗೀಯ ಪ್ರಜಾಪ್ರಭುತ್ವ ಕ್ರಾಂತಿ ನೀಡಿದ ರಾಜಕೀಯ ಕೊಡುಗೆಗಳನ್ನೊಂದನ್ನು ಮನ್ರೋ ಬಿಟ್ಟುಬಿಟ್ಟಿದ್ದು ಬಣ್ಣದ ಖಂಡದಲ್ಲಿ ಬಿಳಿ ಜನರ ನಾಗರೀಕತೆಯನ್ನು ಮುಂದೊಯ್ಯುವುದಕ್ಕಾಗಿ. ಥಾಮಸ್ ಮನ್ರೋ ಒಬ್ಬ ನಾಜೂಕಾಗಿ ಬೆಳೆದ ಪಟ್ಟುಬಿಡದ ವಸಾಹತುಶಾಹಿಯಾಗಿದ್ದ, ಯಾವುದೇ ಸಂಕೋಚವಿಲ್ಲದೆ. ಅವನು ಬರೆಯುತ್ತಾನೆ: “ನಮ್ಮ ಬಗ್ಗೆ ಸ್ಥಳೀಯರಿಗಿರುವ ಉನ್ನತಾಭಿಪ್ರಾಯಗಳು ಮತ್ತು ನಮ್ಮಧಿಕಾರದ ಬಗ್ಗೆ ಅವರು ಕೊಡುವ ಮಾನ್ಯತೆ ಹಾಗೂ ಗೌರವ, ಇದುವರೆಗೆ ಇದು ನಮ್ಮೊಳಗಷ್ಟೇ ಇತ್ತು, ಈ ದೇಶದೊಳಗೆ ನಾವು ಯಶಸ್ಸು ಕಂಡಿರುವುದಕ್ಕೆ ಪ್ರಮುಖ ಕಾರಣ; ಆದರೆ ಈ ತತ್ವಗಳಾಧಾರ ಅಲುಗಲಾರಂಭಿಸಿದರೆ ಅಥವಾ ಮುಕ್ತ ಮಾಧ್ಯಮದ ಮೂಲಕ ಕೊಚ್ಚಿ ಹೋದರೆ, ನಮ್ಮ ಜ್ಯೂರಿಗಳ ಪ್ರೋತ್ಸಾಹದಿಂದ ವಿಷಯಲಂಪಟತನವಾಗಿಬಿಟ್ಟರೆ, ಬದಲಾವಣೆ ಅತಿ ವೇಗದಲ್ಲಿ ಇಡೀ ಸ್ಥಳೀಯ ಸೈನ್ಯಕ್ಕೆ ತಲುಪಿಬಿಡುತ್ತದೆ. ಸ್ಥಳೀಯ ಸೈನ್ಯ ಪಡೆಗಳಷ್ಟೇ ಯುರೋಪಿಯನ್ನರ ಜೊತೆಗೆ ಯಾವಾಗಲೂ ಬೆರೆತು ಇರುವುದು, ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದ ವಿಷಯಗಳನ್ನು, ಸಿದ್ಧಾಂತಗಳನ್ನು ಮೊದಲು ಅವರೇ ತಿಳಿದುಕೊಂಡುಬಿಡುತ್ತಾರೆ; ಯಾಕೆಂದರೆ ಈ ವಿಷಯ – ಸಿದ್ಧಾಂತಗಳು, ಯುರೋಪಿಯನ್ ಅಧಿಕಾರಿಗಳ ಚರ್ಚೆಯ ವಿಷಯವಾಗಿರುತ್ತದೆ, ಸ್ಥಳೀಯ ಅಧಿಕಾರಿಗಳಿಗೆ ಮತ್ತು ಸೈನಿಕ ಪಡೆಗಳಿಗೆ ಈ ವಿಷಯಗಳು ತಿಳಿಯುವುದಕ್ಕೆ ಹೆಚ್ಚೇನು ಸಮಯ ಬೇಕಾಗುವುದಿಲ್ಲ. ಆ ಜನರು ಬಹುಶಃ ಹಾನಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಾರರು, ಜನರ ಹಕ್ಕುಗಳ ಬಗ್ಗೆಯಾಗಲೀ, ಸರಕಾರ ರಚಿಸುವುದರ ಬಗ್ಗೆಯಾಗಲೀ ಜಾಸ್ತಿ ಯೋಚಿಸಲಾರರು, ಆದರೆ ತಮಗೆ ತತ್ ಕ್ಷಣಕ್ಕೆ ಸಂಬಂಧಪಟ್ಟ ಸಂಗತಿಗಳು ಯಾವುವು ಎನ್ನುವುದನ್ನು ತಾವು ಕೇಳುವುದರ ಮೂಲಕ ಅರಿತುಕೊಂಡುಬಿಡುತ್ತಾರೆ, ಮತ್ತು ಇದಕ್ಕೆ ಅವರಿಗೆ ಚೂರೇ ಚೂರು ಪ್ರೇರೇಪಣೆ ಸಾಕು. ತಮಗೆ ಸಿಗುತ್ತಿರುವ ಕಡಿಮೆ ಸಂಬಳ ಮತ್ತು ಕೆಳ ದರ್ಜೆಯನ್ನು ಯುರೋಪಿಯನ್ ಅಧಿಕಾರಿಗಳಿಗೆ ಹೋಲಿಸಿ ನೋಡುವುದನ್ನವರು ಕಲಿತುಕೊಳ್ಳುತ್ತಾರೆ, - ಯಾವ ಆಧಾರದ ಮೇಲೆ ಈ ವಿಸ್ತಾರದ ವ್ಯತ್ಸಾಸವಿದೆ ಎಂದು ಪರೀಕ್ಷಿಸುತ್ತಾರೆ – ತಮ್ಮದೇ ಶಕ್ತಿಯನ್ನು ಮತ್ತು ಸಂಪನ್ಮೂಲವನ್ನು ಪರೀಕ್ಷಿಸುತ್ತಾರೆ, ವಿದೇಶಿ ನೊಗವನ್ನು ಅಲುಗಾಡಿಸುವುದು ತಮ್ಮ ಕರ್ತವ್ಯವೆಂದು ನಂಬುತ್ತಾರೆ ಮತ್ತು ತಮ್ಮ ದೇಶದ ಗೌರವ ಹಾಗೂ ಘನತೆಯನ್ನು ರಕ್ಷಿಸುವ ಸಲುವಾಗಿ ತಯಾರಾಗುತ್ತಾರೆ. ಮಾಧ್ಯಮ ಮುಕ್ತವಾಗಿಬಿಟ್ಟರೆ, ಅವರು ಅತಿ ಶೀಘ್ರವಾಗಿ ಇವೆಲ್ಲಕ್ಕೂ ಮತ್ತು ಇನ್ನೂ ಹೆಚ್ಚಿನದಕ್ಕೆ ಹಾನಿಯುಂಟು ಮಾಡಬೇಕಾಗುತ್ತದೆ. ಶಸ್ತ್ರಗಾರಗಳಲ್ಲಿ ಮತ್ತು ದಂಡು ಪ್ರದೇಶಗಳಲ್ಲಿ ಅವರು ಜೊತೆ ಸೇರುವುದು ಅವರ ಕೆಲಸವನ್ನು ಸಲೀಸು ಮಾಡಿಬಿಡುತ್ತದೆ; ತಮ್ಮನ್ನು ಮುನ್ನಡೆಸಬಲ್ಲ ಯೋಗ್ಯ ನಾಯಕರಾರು ಎನ್ನುವುದನ್ನು ತಿಳಿಯುವುದು ಅವರಿಗೆ ಅಂತ ಕಷ್ಟದ ಕೆಲಸವೇನಲ್ಲ; ಅವರ ಸಹನೆ, ಅವರ ಶಿಸ್ತಿನ ಅಭ್ಯಾಸ ಮತ್ತು ಯುದ್ಧದಲ್ಲಿ ಅವರ ಅನುಭವಗಳೆಲ್ಲವೂ ಅವರಿಗೆ ಯಶ ತಂದು ಕೊಡುವ ಎಲ್ಲಾ ಸಾಧ್ಯತೆಗಳಿವೆ; ಅಧಿಕಾರ ಮತ್ತು ಸ್ವಾತಂತ್ರ್ಯದೆಡೆಗಿನ ಪ್ರೀತಿ ಅವರನ್ನು ಉತ್ತೇಜಿಸುತ್ತದೆ, ಹಾಗೂ ಹಣದಾಸೆ ಮತ್ತು ಮಹತ್ವಾಕಾಂಕ್ಷೆಗಳು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡುತ್ತದೆ. ಈ ಪ್ರಯತ್ನಗಳು ಅಪಾಯಕಾರಿ ಎಂಬ ಬಗ್ಗೆ ಅನುಮಾನ ಬೇಡ; ಆದರೆ ಶ್ರೀಮಂತ ರಾಜ್ಯದ ಸಂಬಂಧವಾಗಿ ನಡೆಯುತ್ತಿರುವ ಸ್ಪರ್ಧೆಯಾದ್ದರಿಂದ ಆ ಅಪಾಯಗಳು ಅವರನ್ನು ಹಿಮ್ಮೆಟ್ಟಿಸಲಾರದು. ಅವರು ತಮ್ಮ ಮೊದಲ ಯತ್ನಗಳಲ್ಲಿ ವಿಫಲವಾಗಬಹುದು, ಆದರೆ ಅವರ ವಿಫಲತೆಯೂ ಸಹಿತ, ಕೇಂದ್ರ ಸರಕಾರವಾದ ನಮ್ಮ ಅಧಿಕಾರದ ಬುಡವನ್ನೇ ಅಲುಗಾಡಿಸಿಬಿಡುತ್ತದೆ. ಸೈನ್ಯದಲ್ಲಿನ ಅವಿಧೇಯತೆ ತಾತ್ಕಾಲಿಕ ಕಾರಣಕ್ಕಾಗಿ ಆಗಿದ್ದರೆ ಅದನ್ನು ನಿವಾರಿಸಿಬಿಡಬಹುದು, ಆದರೆ ಸೈನಿಕ ಪಡೆಯಲ್ಲಿನ ಗುಣ – ವ್ಯಕ್ತಿತ್ವದಲ್ಲಾಗುವ ಬದಲಾವಣೆಯಿಂದ ಮೂಡುವ ಅವಿಧೇಯತೆ, ವ್ಯವಸ್ಥಿತ ರೀತಿಯಲ್ಲಿ ವಿರೋಧಿಸುವ ಗುಣ ಮೂಡಿಸುತ್ತದೆ, ಅದನ್ನು ಹತ್ತಿಕ್ಕಲಾಗುವುದಿಲ್ಲ, ನಮ್ಮ ವರ್ತಮಾನದ ಏಳ್ಗೆಯನ್ನು ನಾವು ಮತ್ಯಾವತ್ತೂ ಮರಳಿ ಪಡೆಯಲಾಗುವುದಿಲ್ಲ; ಅವರು ನಮ್ಮ ಮೇಲಿಟ್ಟಿರುವ ಎಲ್ಲಾ ನಂಬಿಕೆಗಳೂ ನಾಶವಾಗಿಬಿಡುತ್ತದೆ; ಕೊನೆಗೊಮ್ಮೆ ಯಶಸ್ಸು ಸಿಗುವವರೆಗೂ ಅವರು ಪಟ್ಟು ಸಡಿಲಿಸದೆ ತಮ್ಮ ಕಾರ್ಯಗಳನ್ನು ಮಾಡಬಹುದು; ಮತ್ತು ಒಂದು ರಕ್ತಪಿಪಾಸು ಅಂತರ್ಯುದ್ಧದ ನಂತರ, ಅಥವಾ ಸಾಲು ಸಾಲು ಬಂಡಾಯ ಮತ್ತು ಸಾಮೂಹಿಕ ಹತ್ಯೆಯ ನಂತರ, ನಾವು ದೇಶವನ್ನು ಬಿಡಬೇಕಾದ ಪರಿಸ್ಥಿತಿ ಬರಬಹುದು”. (21) 

ಇದು ಖಂಡಿತವಾಗಿ 1857ರ ಪೂರ್ವ ನಿರೀಕ್ಷಣೆ, 1806ರಲ್ಲಿ ವೆಲ್ಲೂರಿನಲ್ಲಿ ನಡೆದಿದ್ದು ಅದರ ಪ್ರಾರಂಭವಷ್ಟೇ. ಮಾವೋ ಹೇಳುತ್ತಾರೆ: “ಎಲ್ಲಾ ಸಾಮ್ರಾಜ್ಯವಾದಿಗಳೂ ಕಾಗದದ ಮೇಲಿನ ಹುಲಿಗಳು”. “ಯುದ್ಧ” ಅಥವಾ “ಸಾಲು ಸಾಲು ಬಂಡಾಯಗಳು” ವಸಾಹತುಶಾಹಿಯನ್ನು ಗುರಿ ಮಾಡಿಕೊಂಡಾಗ ಬ್ರಿಟೀಷರು ಭಾರತವನ್ನು ಆಳಲು ಸಾಧ್ಯವೇ ಇಲ್ಲ, ಈ ನೆಲದಿಂದ ವಿದೇಶಿಗರು ಕೊನೆಗೆ ಹೊರಗೋಗಲೇ ಬೇಕಾಗುತ್ತದೆ ಎಂದು ಮಾನ್ಯತೆ ಪಡೆದ ವಸಾಹತುಶಾಹಿ ಥಾಮಸ್ ಮನ್ರೋನಂತವರೇ ಒಪ್ಪಿಕೊಳ್ಳುವುದು ಮಾವೋನ ಅಭಿಪ್ರಾಯವನ್ನು ಧೃಡೀಕರಿಸುತ್ತದೆ.

ಮುಂದಿನ ವಾರ:
ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

No comments:

Post a Comment