Jun 11, 2020

ಒಂದು ಬೊಗಸೆ ಪ್ರೀತಿ - 67

ಮೊದಲಿಂದಾನೂ ಚೆನ್ನಾಗಿ ಕೆಲ್ಸ ಮಾಡಿದ್ದಾಳೆ ಅನ್ನೋ ಕಾರಣಕ್ಕೋ, ನಮ್ ಆಸ್ಪತ್ರೆಯಲ್ಲೇ ಇದ್ದೋಳಲ್ವ ಅನ್ನೋ ಕಾರಣಕ್ಕೋ ಅಥವಾ ಪಾಪ ಚಿಕ್ ಮಗು ಇಟ್ಕಂಡು ಇಷ್ಟೊಂದ್ ದುಡ್ದಿದ್ದಾಳೆ, ಓದೋಕ್ ಟೈಮ್ ಕೊಡೋದ್ ಬೇಡ್ವೇ ಅನ್ನೋ ಅನುಕಂಪದಿಂದಲೋ ಒಟ್ನಲ್ಲಿ ಥಿಯರಿ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ಡ್ಯೂಟಿಯಿಂದ ರಿಲೀವ್ ಮಾಡಿದ್ರು. "ಅಯ್ಯೋ ಹೆಣ್ಮಕ್ಳಿಗೆ ಬಿಡಪ್ಪ ಸಲೀಸು' ಅಂತ ಜೂನಿಯರ್ ಹುಡುಗ್ರು ಪಿಜಿಗಳು, ʻಅವಳೇನ್ ಕಿಸ್ಕಂಡ್ ಮಾತಾಡ್ತಾಳಲ್ಲ ಅದ್ಕೆ ' ಅಂತ ಜೂನಿಯರ್ ಹುಡ್ಗೀರ್ ಪೀಜಿಗಳು ನಾನಿಲ್ಲದಾಗ ಮಾತಾಡಿಕೊಂಡಿದ್ದು ಸುಮಾಳ ಮೂಲಕ ಕಿವಿಗೆ ಬಿತ್ತು. ಯಾರ್ ಏನ್ ಮಾತಾಡ್ಕಂಡ್ರೇನು, ನನಗೆ ಓದೋಕೆ ಸಮಯ ಸಿಕ್ತಲ್ಲ ಅಷ್ಟು ಸಾಕಿತ್ತು ನನಗೆ. ಡಿ.ಎನ್.ಬಿಯಲ್ಲಿ ಥಿಯರಿ ಪಾಸೋಗೋದ್ ಸಲೀಸು, ಪ್ರ್ಯಾಕ್ಟಿಕಲ್ಸೇ ತಲೆನೋವು ಅಂತ ಎಲ್ರೂ ಹೇಳ್ತಾರೆ. ನಾನೀಗ ಓದಿರೋ ಮಟ್ಟಕ್ಕೆ ಪ್ರ್ಯಾಕ್ಟಿಕಲ್ಸ್ ಇರಲಿ ಥಿಯರಿ ಪಾಸಾಗೋದು ಕೂಡ ಅನುಮಾನವೇ ಸರಿ. ಇನ್ನೆರಡು ತಿಂಗಳು ಬಿಡದೆ ಓದಿದರೆ ತೊಂದರೆಯಿಲ್ಲ ಅನ್ಕೋತೀನಿ. ಆದರೆ ಓದೋದೆಲ್ಲಿ? ಮನೇಲಿ ಕುಳಿತು ಓದಲು ಕಷ್ಟ ಕಷ್ಟ. ಮನೇಲೇ ಇದ್ದೀಯಲ್ಲ, ಮಗಳನ್ನು ಸ್ವಲ್ಪ ಹೊತ್ತು ನೋಡ್ಕೋ ಅಂತ ಅಮ್ಮ ಹೇಳದೆ ಇರಲಾರರು. ಇನ್ನು ರಾಜೀವನಿಗೆ ತಿಂಡಿ ಊಟ ಕಾಫಿ ಟೀ ಅಂತ ಒಂದಷ್ಟು ಸಮಯ ಹಾಳಾಗೋದು ಖಂಡಿತ. ಇಲ್ಲಿ ಆಸ್ಪತ್ರೆಯಲ್ಲಿರೋ ಲೈಬ್ರರಿಗೇ ಬಂದು ಓದಬೇಕು. ಇನ್ನೆಲ್ಲಿ ಕುಳಿತರೂ ಕೆಲಸ ಕೆಡ್ತದೆ ಅಂದುಕೊಂಡೆ. ರಾಜೀವನಿಗೂ ಅದನ್ನೇ ಹೇಳಿದೆ. "ಅದೇ ಸರಿ. ಇಲ್ಲಾಂದ್ರೆ ಎಲ್ಲಿ ಓದೋಕಾಗುತ್ತೆ ಬಿಡು" ಅಂದರು. ಇತ್ತೀಚಿನ ದಿನಗಳಲ್ಲಿ ನಾನು ಅವರು ಯಾವ ಕಿತ್ತಾಟವೂ ಇಲ್ಲದೆ ಒಪ್ಪಿಕೊಂಡ ಸಂಗತಿಯಿದು! "ಸದ್ಯಕ್ಕೆ ನಿಮ್ಮ ಅಮ್ಮನಿಗೆ ಡ್ಯೂಟಿ ರಿಲೀವ್ ಮಾಡಿದ ಬಗ್ಗೆ ಹೇಳಬೇಡ. ಬಿಡುವಾಗಿದ್ರೂ ಬಂದು ಮಗಳನ್ನ ನೋಡದೆ ಓದ್ತಾ ಕೂತಿದ್ದಾಳೆ ಅಂತಂದ್ರೂ ಅಂದ್ರೆ" ಎಂದು ನಕ್ಕರು. ಪರವಾಗಿಲ್ಲ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ ಅತ್ತೇನ! 

ರಾಜೀವ ಹೇಳಿದಂತೆಯೇ ಅಮ್ಮನಿಗೆ ಹೇಳಲೋಗಲಿಲ್ಲ. ʻಇನ್ನು ಮೇಲೆ ನೈಟ್ ಡ್ಯೂಟಿ ಇರಲ್ಲ. ಸಂಜೆ ಕೆಲಸ ಮುಗಿದ ಮೇಲೆ ಒಂದಷ್ಟು ಸಮಯ ಓದಿಕೊಂಡು ರಾತ್ರಿ ಎಂಟರಷ್ಟೊತ್ತಿಗೆ ಬರ್ತೀನಿ' ಎಂದಿದ್ದಕ್ಕೇ ಅಮ್ಮ ಉರ ಉರ ಅಂದು ಸುಮ್ಮನಾದರು. ಅಮ್ಮ ಏನಂದ್ರೂ ಏನ್ ಬಿಟ್ರು ಸುಮ್ಮನಿರಲೇಬೇಕಾಗಿತ್ತು, ನನ್ನ ಅನಿವಾರ್ಯತೆ. ಲೈಬ್ರರಿಯಲ್ಲಿ ಕುಳಿತು ಓದಿ ಅಭ್ಯಾಸವೇ ಇರಲಿಲ್ಲ ನನಗೆ. ಮುಂಚೆಯಿಂದ ಓದಿದ್ದೆಲ್ಲ ಮನೆಯಲ್ಲೇ. ಈಗ ವಿಧಿಯಿಲ್ಲ, ಹೊಸ ಜಾಗದಲ್ಲಿನ ಓದಿಗೆ ಹೊಂದಿಕೊಳ್ಳಲೇಬೇಕು. ಬೆಳಿಗ್ಗೆ ಐದಕ್ಕೆಲ್ಲ ಎದ್ದು ಒಂದು ಘಂಟೆ ಕಾಲ ಓದಿ, ಕಸ ಗುಡಿಸಿ, ಮನೆ ಒರಸಿ, ಬೆಳಗಿನ ತಿಂಡಿ ಮಾಡಿ ತಿಂದು ನನಗೂ ರಾಜೀವನಿಗೂ ಬಾಕ್ಸಿಗೆ ಹಾಕುವಷ್ಟರಲ್ಲಿ ಎದ್ದಿರುತ್ತಿದ್ದ ಮಗಳಿಗೆ ಸ್ನಾನ ಮಾಡಿಸಿ ಅವಳು ತಿಂದರೊಂದಷ್ಟು ತಿನ್ನಿಸಿ ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಆಸ್ಪತ್ರೆಯ ಲೈಬ್ರರಿಯನ್ನು ಒಂಭತ್ತಕ್ಕೆ ಮುಂಚೆ ಸೇರಿದರೆ ಮತ್ತೆ ಮೇಲೇಳುತ್ತಿದ್ದದ್ದು ಹನ್ನೊಂದೂವರೆಗೆ ಒಂದು ಕಾಫಿ ಕುಡಿಯುವ ನೆಪದಿಂದ. ಅಪರೂಪಕ್ಕೆ ಸುಮಾ ಜೊತೆಯಗುತ್ತಿದ್ದಳು. ಹೆಚ್ಚಿನ ದಿನ ಅವಳು ಮನೆಯಲ್ಲೇ ಓದಿಕೊಳ್ಳುತ್ತಿದ್ದಳು. ಕೆಲವೊಮ್ಮೆ ರಾಮ್ ಪ್ರಸಾದ್ ದಾರಿಯಲ್ಲಿ ಸಿಕ್ಕರೆ ಜೊತೆಗೆ ಬರುತ್ತಿದ್ದರು. ಲೋಕಾಭಿರಾಮ ಒಂದಷ್ಟು ಮಾತಾಡಿ ಕಾಫಿ ಕುಡಿದು ಮತ್ತೆ ಲೈಬ್ರರಿ ಸೇರಿ ಪುಸ್ತಕದೊಳಗೆ ತಲೆ ತೂರಿಸಿದರೆ ಮತ್ತೆ ತಲೆಯೆತ್ತುತ್ತಿದ್ದದ್ದು ಮಧ್ಯಾಹ್ನ ಒಂದೂವರೆಗೆ ಊಟಕ್ಕೆಂದು ಎದ್ದಾಗ. ತಂದಿದ್ದ ಒಂದು ಪುಟ್ಟ ಬಾಕ್ಸಿನ ತಿಂಡಿ ಸಾಲುತ್ತಿರಲಿಲ್ಲ, ಜೊತೆಗೊಂದು ಬೋಂಡಾನೋ ಮಂಗಳೂರು ಗೋಳಿಬಜ್ಜೀನೊ ತೆಗೆದುಕೊಳ್ಳಲೇಬೇಕು. ಹೆಚ್ಚು ಕಮ್ಮಿ ಪ್ರತಿ ಮಧ್ಯಾಹ್ನ ರಾಮ್ ಪ್ರಸಾದ್ ಅದೇ ಸಮಯಕ್ಕೆ ಕ್ಯಾಂಟೀನಿಗೆ ಬರೋರು, ಜೊತೆಯಾಗೋರು. ಲೈಬ್ರರಿಗೆ ಬಂದರೂ ಹೆಚ್ಚಿನ ಸಮಯ ಮನೆಗೆ ಊಟಕ್ಕೆ ಹೋಗಿಬಿಡುತ್ತಿದ್ದ ಸುಮಾ ಅಪರೂಪಕ್ಕೆ ನನ್ನ ಜೊತೆ ಕ್ಯಾಂಟೀನಿಗೆ ಬಂದಾಗೆಲ್ಲ ರಾಮ್ ಪ್ರಸಾದ್ ಇರೋದನ್ನ ನೋಡಿ "ಅದೇನ್ ನೀ ಊಟಕ್ ಬರೋ ಟೈಮಿಗೇ ಬರ್ತಾರಲ್ಲ ಅವರೂನು" ಅಂತ ಕಾಲೆಳೆಯೋಳು. ʻಅಯ್ಯೋ ಗೂಬೆ. ಕೊ ಇನ್ಸಿಡೆನ್ಸ್ ಅಷ್ಟೆ' ಅಂದರೆ "ಬರೀ ಕೋ ಇನ್ಸಿಡೆನ್ಸಾ...." ಅಂತ ರೇಗಿಸದೆ ಸುಮ್ಮನಿರುತ್ತಿರಲಿಲ್ಲ. 

ʻಮುಂಚೇನೂ ಇದೇ ಸಮಯಕ್ಕೆ ಬರ್ತಿದ್ರೇನೋ ಯಾರಿಗೊತ್ತು. ಈಗ ಪರಿಚಯ ಆಗಿದ್ದಾರಲ್ಲ. ಪರಿಚಯ ಅನ್ನೋದಕ್ಕಿಂತ ಒಳ್ಳೇ ಫ್ರೆಂಡು. ಅವತ್ತಿವರಿಲ್ಲದೇ ಹೋಗಿದ್ರೆ ನನ್ನ ಕೈ ಕಾಲೇ ಆಡ್ತಿರಲಿಲ್ಲ. ಅಷ್ಟೆಲ್ಲ ಸಹಾಯ ಮಾಡಿದವರ ಜೊತೆ ಸ್ನೇಹ ಬೆಳೆಸೋದ್ರಲ್ಲಿ ತಪ್ಪೇನಿದೆ' 

"ಅಯ್ಯೋ ರೇಗ್ಸಿದ್ರೂ ಸೀರಿಯಸ್ಸಾಗ್ ತಗೋತೀಯಪ್ಪ ನೀನು" 

ʻಗೊತ್ತು ಬಿಡೆ' 

"ಅಂದ್ರೂ ಹುಷಾರಾಗಿರು. ಹುಡುಗ ಭಲೇ ಹ್ಯಾಂಡ್ಸಮ್ಮು" 

ʻಅಯ್ಯ... ಒಂದ್ ಹ್ಯಾಂಡ್ಸಮ್ ಪಾರ್ಟೀನ ಕಟ್ಕಂಡೇ ನಿಭಾಯಿಸೋಕಾಗ್ತಿಲ್ಲ, ಇನ್ನೊಂದು ಬೇರೆ ಕೇಡು ತೆಗಿ....' ಇಬ್ಬರೂ ನಕ್ಕು ವಿಷಯ ಬದಲಿಸುತ್ತಿದ್ದೆವು. 

ನನಗೂ ಒಮ್ಮೊಮ್ಮೆ ಅನ್ನಿಸೋದು, ರಾಮ್ ಪ್ರಸಾದ್ ಬೇಕೂ ಬೇಕಂತ ಸಿಗ್ತಿದ್ದಾರ ಹೆಂಗೆ ಅಂತ. ಆದರೆ ಅವರ ಜೊತೆಗಿನ ಮಾತುಕತೆ ಸ್ವಭಾವ ನನ್ನಲ್ಯಾವ ಅನುಮಾನವನ್ನೂ ಮೂಡಿಸುತ್ತಿರಲಿಲ್ಲ. ಹಿ ವಾಸ್ ಎ ಗುಡ್ ಫ್ರೆಂಡ್, ಹೆಚ್ಚೇನಿಲ್ಲ ಅಂತನ್ನಿಸುತ್ತಿತ್ತಷ್ಟೇ. ಜೊತೆಗೆ ಅದರ ಬಗ್ಗೆಯೆಲ್ಲ ಯೋಚಿಸೋಕೂ ಸಮಯವಿಲ್ಲದಷ್ಟು ಓದು ಮಗಳು ಮನೆಯ ಕೆಲಸಗಳಿತ್ತು. 

ಹಿಂಗೇ ದಿನಚರಿ ನಡ್ಕೋತಾ ಹೋಗಿ ಇಪ್ಪತ್ತು ದಿನಗಳಾಗಿತ್ತು. ಅವತ್ಯಾಕೋ ಸಂಜೆಯೂ ಓದಲೆಚ್ಚು ಗಮನವಿದ್ದ ಕಾರಣ, ಬರೋದು ಒಂಭತ್ತಾಗುತ್ತೆ ಅಂತ ಅಮ್ಮನಿಗೆ ಫೋನ್ ಮಾಡಿ ಹೇಳಿದ್ದೆ. ಅಮ್ಮನ ಮನೆ ತಲುಪಿದರೆ ಅಪರೂಪಕ್ಕೆ ರಾಜೀವ್ ಮನೆಗೆ ಬಂದಿದ್ದರು. ಮನೆಯಲ್ಲಿ ಮಗಳೊಂದಿಗೆ ಆಟವಾಡುತ್ತಿದ್ದರು. ʻಏನ್ ಇವತ್ ಸೂರ್ಯ ಯಾವ್ ಕಡೆ ಹುಟ್ದ. ಇಲ್ಲೀವರ್ಗೂ ಬಂದ್ ಬಿಟ್ಟಿದ್ದೀರ' ಎಂದು ರೇಗಿಸಿದೆ. 

"ಮಗಳ ಜೊತೆ ಆಟಾಡೋಕೆ ಇನ್ನೊಂದ್ ಮಗು ಬರ್ತದೆ ಅಂತ ಗೊತ್ತಾಯ್ತು, ಅದಕ್ಕೇ ಬಂದೆ" ಎಂದರು. ಹಾಲಿನಲ್ಲಿ ಕುಳಿತಿದ್ದವರೆಲ್ಲರೂ ನಕ್ಕರು. ಅಮ್ಮ ಅಡುಗೆ ಮನೆಯಲ್ಲಿದ್ದಳು. 

ʻನಾನೆಲ್ ತಿರ್ಗಾ ಪ್ರೆಗ್ನೆಂಟ್ ಆದೆ....' ನಗುತ್ತಾ ಕೇಳಿದೆ. 

"ಏನ್ ಮನೇಲಿ ಇವಳೊಬ್ಳೆ ಮಕ್ಳು ಮಾಡೋ ಹೆಂಗ್ಸು" ಅಪ್ಪನ ಮಾತು! 

'ಅಯ್ಯೋ ಅಪ್ಪ. ನಿಮಗೇನಾಯ್ತು ಈ ವಯಸ್ಸಲ್ ಇನ್ನೊಂದ್ ಮಗೂನಾ' ನಿಜ್ಜ ಗಾಬರಿಯಾಗಿ ಹೋಯಿತು ನನಗೆ. 

ಅಡುಗೆಮನೆಯಿಂದ ಹೊರಬರುತ್ತಿದ್ದ ಅಮ್ಮ ನನ್ನ ಮಾತು ಕೇಳಿ "ಥೂ ಥೂ.... ಅದೇನಂತ ಮಾತಾಡ್ತಿ. ಈ ವಯಸ್ಸಲ್ ನಮುಗ್ ಮಕ್ಳಾ....ಹುಟ್ಟಿದ್ ಇಬ್ರುನ್ ನೋಡ್ಕೋಳೋಷ್ಟರಲ್ಲೇ ನಂಗ್ ಸಾಕಾಗೋಗಿದೆ. ಒಳ್ಳೇ ಟ್ಯೂಬ್ಲೈಟ್ ತರ ಆಡ್ತೀಯಲ್ಲ. ಸೋನಿಯಾ ಪ್ರೆಗ್ನೆಂಟಾಗಿರೋದು" 

ʻಇಷ್ಟು ಬೇಗಾ ಯಾಕ್ರೋ ಮಾಡ್ಕಂಡ್ರಿ' ಹೆಚ್ಚು ಕಮ್ಮಿ ಕಿರುಚಿಯೇ ಬಿಟ್ಟೆ! ಮದುವೆಯಾಗಿ ಇನ್ನೂ ನೆಟ್ಟಗೆ ಮೂರು ತಿಂಗಳಾಗಿದ್ಯೋ ಇಲ್ವೋ, ಇಷ್ಟು ಬೇಗ! 

"ಮಿಸ್ಸಾಗ್ ಆಗೋಯ್ತು" ಶಶಿಯ ಮಾತಿಗೆ ಎಲ್ಲರೂ ನಕ್ಕೆವು. ಸೋನಿಯಾಳ ನಗುವಿನಲ್ಲಿ ಸಿಟ್ಟೂ ಇತ್ತೇನೋ ಅನ್ನಿಸಿದ್ದು ನನಗೊಬ್ಬಳಿಗೇನಾ? ಮಕ್ಳು ಬಗ್ಗೆ ಸಾವಿರ ಸಾವಿರ ದೂರುಗಳಿದ್ದರೂ ಹೊಸ ಪಾಪು ಬರ್ತಿದೆ ಅಂದ್ರೆ ಎಲ್ರಿಗೂ ಖುಷೀನೇ.... ಆ ಖುಷಿ ಪೂರ್ತಿ ಜೀವನ ಇರೋದಿಲ್ಲ ಅಂತ ಹೆಚ್ಚು ಕಮ್ಮಿ ಗೊತ್ತೇ ಇರುತ್ತೆ. ಆದರೂ ಖುಷಿಯಲ್ಲೇನೂ ಕೊರತೆಯಿರುವುದಿಲ್ಲವಲ್ಲ ಹೆಂಗೆ? 

ಸೋನಿಯಾಳನ್ನು ನಮ್ಮಾಸ್ಪತ್ರೆಯಲ್ಲಿನ ಪರಿಚಯದ ಡಾಕ್ಟರ್ ಜಯಂತಿ ಮೇಡಂ ಬಳಿಗೆ ಕರೆದುಕೊಂಡು ಹೋದೆ. ಒಂಭತ್ತು ವಾರದ ಗರ್ಭ, ಎಲ್ಲಾ ಆರಾಮಿತ್ತು. ಒಂದಷ್ಟು ಬ್ಲಡ್ ಟೆಸ್ಟು, ಒಂದ್ ಸ್ಕ್ಯಾನು ಮಾಡಿಸಿದರು. "ಕೆಲಸಕ್ಕೆ ಹೋಗಬಹುದಲ್ವಾ?" ಅನ್ನೋದೊಂದೇ ಸೋನಿಯಾಳ ಪ್ರಶ್ನೆಯಾಗಿತ್ತು. 

"ಅದರಲ್ಲೇನಿದೆ? ಆರಾಮವಾಗಿ ಹೋಗ್ಬೋದು" ಅಂದರು ಡಾಕ್ಟರ್. 

"ನಮ್ಮ ಆಫೀಸು ಸ್ವಲ್ಪ ದೂರವಿದೆ" 

"ಮೆಡಿಕಲಿ ಯಾವ್ ತೊಂದರೇನೂ ಇಲ್ಲ. ನಿಮಗೆ ಕಂಫರ್ಟ್ ಅನ್ನಿಸದೇ ಹೋದರಷ್ಟೇ ರಜಾ ಹಾಕಿ. ಇಲ್ಲಾಂದ್ರೆ ಆರಾಮ್ ಹೋಗ್ ಬನ್ನಿ. ಪೂರ್ತಿ ಮನೇಲೇ ಉಳಿದುಬಿಟ್ಟರೂ ಬೋರ್ ಆಗೋಗ್ತದೆ. ಇನ್ನೂ ಒಂಭತ್ತು ತಿಂಗಳಿದೆಯಲ್ಲ" ಎಂದು ನಕ್ಕರು. 

ಹೊರಗೆ ಬಂದಾಗ ಶಶಿ "ನೀವಿಬ್ರು ಕಾರತ್ರ ಹೋಗಿರಿ, ನಾ ಇವೊಂದಷ್ಟು ಮಾತ್ರೆ ತೆಗೆದುಕೊಂಡು ಬರ್ತೀನಿ" ಅಂತಂದ. ಕಾರಿನೊಳಗೋಗಿ ಕುಳಿತು ನೋಡಿದರೆ ಸೋನಿಯಾಳ ಕಣ್ಣಲ್ಲಿ ನೀರು. 

ʻಇದ್ಯಾಕೋ ಅಳ್ತಿದ್ದಿ' 

"ಏನಿಲ್ಲ ಅಕ್ಕ" 

ʻಅಳುವಂತದ್ದೇನಾಗಿದೆ ಈಗ? ಇಷ್ಟು ಬೇಗ ಮಕ್ಳು ಬೇಕಿರಲಿಲ್ವ ನಿನಗೆ' 

"ಹು. ಅದೇನೋ ಹೌದು. ಇಷ್ಟು ಬೇಗ ಬೇಕಿರಲಿಲ್ಲ" 

ʻಹೋಗ್ಲಿ ಬಿಡು. ಒಂದ್ ರೀತಿ ಬೇಗ ಆಗ್ಬಿಡೋದೇ ಒಳ್ಳೇದು. ನಮ್ಮನ್ನೇ ನೋಡು. ಒಂದಷ್ಟು ವರ್ಷ ಬೇಡ ಅಂತ ಮುಂದೂಡಿದ್ದಕ್ಕೆ ಎಷ್ಟೆಲ್ಲ ಕಷ್ಟ ಅನುಭವಿಸಬೇಕಾಯ್ತು' 

"ಮ್. ಆದರೆ ನಾ ಅತ್ತಿದ್ದು ಅದಕ್ಕಲ್ಲ" 

ʻಮತ್ತೆ' 

"ಅಮ್ಮ" 

ʻಮ್' 

"ನಾನೇ ಬಾಯಿ ಬಿಟ್ಟು ಬನ್ನಿ ಇವತ್ತು ಆಸ್ಪತ್ರೆಗೆ ಹೋಗಿ ಬರ್ಬೇಕು ಅಂತ ಕರೆದಿದ್ದೆ. ಬರಲ್ಲ ಅಂತ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು" ಕಣ್ಣೊರೆಸಿಕೊಂಡಳು. ಬದಲೇಳುವುದಕ್ಕೆ ನನ್ನಲ್ಲಿ ಪದಗಳಿರಲಿಲ್ಲ. 

ಸೋನಿಯಾ ಗರ್ಭ ಧರಿಸಿದ್ದು ನಮ್ಮ ಮನೆಯಲ್ಲಂತೂ ಪೂರ್ತಿ ಖುಷಿಯ ವಿಷಯವಾಗಿತ್ತು, ಸೋನಿಯಾಳ ಮನೆಯಲ್ಲಲ್ಲ. ಅವಳಪ್ಪನಿಗೆ ಬಹಳಷ್ಟು ಖುಷಿಯಾಗಿತ್ತು, ಆದರೆ ಅವಳಮ್ಮನಿಗೆ ಖುಷಿಯಾದಂತೇನೂ ಇರಲಿಲ್ಲ. ಅವರಿಗಿನ್ನು ನಮ್ಮ ಮನೆಯ ನೆಂಟಸ್ತಿಕೆಯನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ಮನೆ ಇಲ್ಲೇ ಪಕ್ಕದಲ್ಲೇ ಇದ್ದರೂ ಒಂದು ದಿನಕ್ಕೂ ಅವರಾಗೇ ಮನೆಗೆ ಬಂದು ಸೋನಿಯಾಳನ್ನು, ಶಶಿಯನ್ನು, ನಮ್ಮ ಮನೆಯವರನ್ನು ಮಾತನಾಡಿಸಿಕೊಂಡು ಹೋದವರಲ್ಲ. ಅಂಕಲ್ ಬರುತ್ತಿದ್ದರಷ್ಟೆ. ಸೋನಿಯಾ ಮನೆಗೆ ಹೋದರೂ ಹೆಚ್ಚು ಮಾತುಕತೆಯಿರುತ್ತಿರಲಿಲ್ಲವಂತೆ ಅಮ್ಮ ಮಗಳಿಗೆ, ಸೋನಿಯಾಳೇ ಒಂದು ದಿನ ಹೇಳಿಕೊಂಡು ಕಣ್ಣೀರಾಗಿದ್ದಳು. ಬಿಡು, ಸರಿ ಹೋಗ್ತಾರೆ ನಿಧಾನಕ್ಕೆ ಎಂದು ಸಮಾಧಾನಿಸಿದ್ದೆ. ಮಗಳು ಹಿಂಗಿಂಗೆ ಪ್ರೆಗ್ನೆಂಟು ಅಂತ ಗೊತ್ತಾದ ಮೇಲೂ ಅವರಲ್ಲೇನು ಬದಲಾವಣೆಗಳಾಗಲಿಲ್ಲ. ಇದು ಸರಿಯಾಗೋ ಕೇಸಲ್ಲ ಅಂತನ್ನಿಸಿತು. ಬದುಕೋ ಅರವತ್ತೆಪ್ಪತ್ತು ವರ್ಷಕ್ಕೆ ಎಷ್ಟೆಲ್ಲ ಮುನಿಸು, ದ್ವೇಷ!

1 comment:

  1. ನಿಮ್ಮ ಕಾದಂಬರಿ ಅದ್ಭುತವಾಗಿ ಮೂಡಿಬರುತಿದೆ sir.... ವಂದನೆಗಳು 🙏

    ReplyDelete