Jun 23, 2020

ಒಂದು ಬೊಗಸೆ ಪ್ರೀತಿ - 68

ಬೆಳಿಗ್ಗೆಯಿಂದ ಓದು ಚೆಂದ ಸಾಗ್ತಿತ್ತು. ಮಧ್ಯಾಹ್ನ ರಾಮ್ ಜೊತೆ ಊಟ ಮುಗಿಸಿ ಮತ್ತೆ ಓದಲು ಕುಳಿತವಳಿಗೆ ಹಿಂದಿನ ವಾರವಷ್ಟೇ ಓದಿದ್ದ ಪಾಠ ಮನಸ್ಸಲ್ಲಿ ಮೂಡಿತು. ಕಳೆದ ವಾರವಷ್ಟೇ ಓದಿದ್ದ ಸಂಗತಿಗಳು ಹೆಚ್ಚು ಕಡಿಮೆ ಮರೆತೇ ಹೋದಂತಾಗಿಬಿಟ್ಟಿತ್ತು! ಇಲ್ಲ ಇಲ್ಲ ನೆನಪಿರ್ತದೆ, ಸುಮ್ನೆ ಹಂಗೆ ಮರೆತಂಗಾಗಿದೆ ಅಷ್ಟೇ ಅಂದಕೊಂಡು ಪುಸ್ತಕ ಮುಚ್ಚಿ ಕಣ್ಣು ಮುಚ್ಚಿ ಓದಿದ್ದ ಪಾಠವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಉಹ್ಞೂ... ನೆನಪಾಗಲೊಲ್ಲದು! ನೂರರಷ್ಟು ಬೇಡ, ಐವತ್ತು ಪರ್ಸೆಂಟ್ ಹೋಕ್ಕೊಳ್ಳಿ ಹತ್ತು ಪರ್ಸೆಂಟ್, ಬೇಡ ಐದು ಪರ್ಸೆಂಟ್... ಉಹ್ಞೂ... ಪಾಠದ ಹೆಸರು ಬಿಟ್ಟು ಮತ್ತೇನೂ ನೆನಪಾಗುತ್ತಿಲ್ಲ. ಸಬ್ ಹೆಡ್ಡಿಂಗ್ಸ್ ನೋಡ್ಕಂಡರೆ ಎಲ್ಲಾ ಪಟ್ಟಂತ ನೆನಪಾಗಿಬಿಡ್ತದೆ ಅಂತ ಧೈರ್ಯ ತಂದುಕೊಂಡು ನಿಧಾನಕ್ಕೆ ಭಯದಿಂದಲೇ ಪಾಠದ ಪುಟ ತಿರುವಿ ಬೇರ್ಯಾವುದರ ಮೇಲೂ ಕಣ್ಣಾಡಿಸದೆ ಇದ್ದ ಆರು ಸಬ್ ಹೆಡ್ಡಿಂಗಿನ ಮೇಲೆ ಕಣ್ಣಾಡಿಸಿದೆ. ಉಹ್ಞೂ.... ಸಬ್ ಹೆಡ್ಡಿಂಗುಗಳಿಗೆ ಕೂಡ ತಲೆಯಲ್ಲಿನ ಬಲ್ಬು ಉರಿಸುವ ಶಕ್ತಿ ಇರಲಿಲ್ಲ. ಅಳುವೇ ಬಂದಂತಾಯಿತು. ಇದು ಹೊಸ ಟಾಪಿಕ್, ಪರೀಕ್ಷೆಗಷ್ಟೇ ಮುಖ್ಯವಾದ ಟಾಪಿಕ್ಕೇನೋ ಹೌದು. ಆದರೆ ಕಳೆದ ವಾರವಷ್ಟೇ ಓದಿದ್ದ ಪಾಠದ ಗತಿಯೇ ಈ ರೀತಿಯಾದರೆ ಇನ್ನೊಂದದಿನೈದು ದಿನದಲ್ಲಿರುವ ಪರೀಕ್ಷೆಯಲ್ಲಿ ಏನು ಬರೆಯುವುದು? ಕಳೆದ ತಿಂಗಳು ಓದಿದ ಪಾಠಗಳ ಗತಿಯೇನು? ಕಳೆದ ತಿಂಗಳು ಓದಿದ ಪಾಠಗಳೆಲ್ಲವೂ ಸ್ಮೃತಿ ಪಟಲದಲ್ಲಿ ಮಿಂಚಿತು, ಪಾಠದೊಳಗಿನ ವಿಷಯಗಳೆಲ್ಲ ಮರೆಯಾಗಿತ್ತು. ಅಳು ಬಂದಂತಾಗುವುದೇನು, ಬಂದೇಬಿಟ್ಟಿತು. ಪುಸ್ತಕವನ್ನು ಬದಿಗೆ ಸರಿಸಿ ಮೇಜಿಗೆ ಹಣೆಕೊಟ್ಟು ಮೇಜನ್ನೊಂದಷ್ಟು ತೇವವಾಗಿಸಿದೆ. ʻಪರವಾಗಿಲ್ಲ ಧರಣಿ, ಇದು ಪರೀಕ್ಷೆ ಸಮಯದಲ್ಲಿ ಮಾಮೂಲಿ. ಎಂಬಿಬಿಎಸ್‌ನಲ್ಲೂ ಇಂತದ್ದು ಎಷ್ಟು ಸಲ ಆಗಿಲ್ಲ. ಕೊನೆಗೆ ಪರೀಕ್ಷೆಯ ದಿನ ಎಲ್ಲವೂ ನೆನಪಾಗೇ ಆಗ್ತದೆ ಅನ್ನೋದನ್ನ ಮರೀಬೇಡ. ಇಲ್ಲೂ ಅಷ್ಟೇ ಆಗಿರೋದು. ಮತ್ತೇನೂ ಅಲ್ಲ. ಗಾಬರಿ ಆಗೋದೇನೂ ಇಲ್ಲ. ಗಾಬರಿ ಆದರೆ ಮುಂದಕ್ಕೆ ಓದಲಾಗುವುದಿಲ್ಲ. ಓದದೇ ಹೋದರೆ ಮತ್ತಷ್ಟು ಗಾಬರಿ ಆಗ್ತದೆ. ಮತ್ತೆ ಓದೋದಿಕ್ಕಾಗುವುದಿಲ್ಲ. ಮತ್ತಷ್ಟು ಗಾಬರಿ. ಅಂತ್ಯವಾಗದ ವೃತ್ತದ ಸುಳಿಗೆ ಸಿಲುಕಬೇಡ. ಒಂದಷ್ಟು ಪಾಠಗಳು ಮರೆತರೇನು, ಇನ್ನೊಂದಷ್ಟು ಪಾಠ ಓದಿ ನಾಳೆ ಹಳೇ ಪಾಠಗಳ ಮೇಲೊಮ್ಮೆ ಕಣ್ಣಾಡಿಸಿದರಾಯಿತು. ಹಳೇದೇ ನೆನಪಿಲ್ಲ, ಹೊಸತು ಮತ್ತೆಲ್ಲಿ ನೆನಪಾಗ್ತದೆ? ಇಲ್ಲಿಲ್ಲ ಇಂತ ಆಲೋಚನೆಗಳನ್ನು ದೂರಕ್ಕೆ ತಳ್ಳುವುದೇ ಸರಿ. ಇಲ್ಲಾಂದ್ರೆ ಮುಗೀತು ಕತೆ. ಫೇಲಾಗ್ತೀನಿ. ಫೇಲಾದ್ರೆ ಮನೇಲಿ ರಾಜೀವನ ಕಿರಿಕಿರಿ! ಹಣದ ಸಮಸ್ಯೆ! ಅಯ್ಯಪ್ಪ... ಅದನ್ನೆಲ್ಲಾ ನೆನೆಸಿಕೊಂಡರೇನೇ ಭಯವಾಗ್ತದೆ. ಸಮಸ್ಯೆಗಳಿಗೊಂದಷ್ಟು ಪರಿಹಾರ ಸಿಗಬೇಕೆಂದರೆ ನಾ ಪಾಸಾಗಲೇಬೇಕು. ಅದಕ್ಕೋಸ್ಕರನಾದರೂ ಓದು ಮುಂದುವರಿಸಲೇಬೇಕು. ಇನ್ನದಿನೈದು ದಿನವಿರುವಾಗ ಅರ್ಧ ದಿನವನ್ನು ಕಳೆದುಕೊಳ್ಳುವುದು ಯುಕ್ತಿಯ ಕೆಲಸವಲ್ಲ. ಕಮಾನ್ ಧರಣಿ ಯು ಕ್ಯಾನ್ ಡು ಇಟ್. ಕಮಾನ್' ಅಂತ ನನಗೆ ನಾನೇ ಹುರಿದುಂಬಿಸಿಕೊಂಡು ತಲೆ ಮೇಲೆತ್ತುವಷ್ಟರಲ್ಲಿ ಅಳು ನಿಂತಿತ್ತು. ಬಿಡದಂತೆ ಒಂದು ಪುಟ ಓದಿ ಮುಗಿಸಿದೆ, ಅದಕ್ಕಿಂತ ಮುಂದಕ್ಕೋಗಲಾಗಲಿಲ್ಲ. ಮನದಲ್ಲಿ ವಿವರಿಸಲಾಗದ ಭೀತಿ. ʻಏನ್ ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹೋಗ್ತದೆ ಅಷ್ಟೇ. ಅದಕ್ಯಾಕೆ ಇಷ್ಟೊಂದು ಚಿಂತೆ' ಸುಳ್ಳು ಸುಳ್ಳೇ ವೈರಾಗ್ಯದ ಮೊರೆ ಹೊಕ್ಕು ನೋಡಿದೆ. ಉಪಯೋಗವಾಗಲಿಲ್ಲ. ಒಂದ್ ಕಾಫಿ ಕುಡಿದ್ರೆ ಎಲ್ಲಾ ಸರಿ ಹೋಗಿಬಿಡ್ತದೆ ಅನ್ನೋ ಸಂಗತಿ ಹೊಳೆದು ಲವಲವಿಕೆಯಿಂದ ಎದ್ದು ಟಾಯ್ಲೆಟ್ಟಿಗೆ ಹೋಗಿ ಹೊಟ್ಟೆ ಹಗುರಾಗಿಸಿಕೊಂಡು ಕ್ಯಾಂಟೀನಿನಲ್ಲಿ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಸಿಕೊಂಡು ಕುಡಿದೆ. ಓದುವ ಉತ್ಸಾಹ ಮೂಡಿತು. ಲೈಬ್ರರಿಗೆ ಹಿಂದಿರುಗಿದೆ. ಮತ್ತರ್ಧ ಘಂಟೆ ಹಂಗೂ ಹಿಂಗೂ ಕಷ್ಟ ಪಟ್ಟು ಓದಿದೆ. ಮತ್ತದೇ ಹೇಳತೀರದ ಗೋಳು. 

ʻಎಲ್ಲಿದ್ದೀಯೆ? ಸಿಗ್ತೀಯ?' ಸುಮಾಳಿಗೆ ಮೆಸೇಜು ಹಾಕಿದೆ. 

ಐದು ನಿಮಿಷಗಳ ಕಾಲ ನನ್ನನ್ನು ಚಡಪಡಿಕೆಗೆ ದೂಡಿ "ಇಲ್ವೇ ಹೊರಗೆ ಬಂದಿದ್ದೆ" ಎಂದು ತಣ್ಣೀರೆರಚಿದಳು. 

ʻಓಕೆ' ಎಂದವಳ ಗೋಳು ಮತ್ತಷ್ಟು ಹೆಚ್ಚಾಯಿತು. ಸಮಯ ನೋಡಿದೆ. ನಾಲ್ಕೂವರೆಯಾಗಿತ್ತು. ಹೋಗ್ಲಿ, ಅತ್ಲಾಗ್ ಮನೆಗಾದ್ರೂ ಹೋಗಿಬಿಡುವ ಅಂದುಕೊಂಡರೆ ಇನ್ನೂ ಬರೋಬ್ಬರಿ ಮೂರೂವರೆ ಘಂಟೆಗಳ ಕಾಲ ಓದಬೇಕಿದೆ. ಇಲ್ಲಾಂದ್ರೆ ನಾಳೆ ಮತ್ತಷ್ಟು ಟೆನ್ಶನ್ನು ಗ್ಯಾರಂಟಿ. ರಾಮ್‌ಗಾದರೂ ಮೆಸೇಜಿಸಿದರೆ? ಒಂದ್ ದಿನಕ್ಕೂ ಅವರಿಗೆ ಮೆಸೇಜು ಕಳಿಸಿದ್ದಿಲ್ಲ. ಅವರೂ ಕಳಿಸಿದ್ದಿಲ್ಲ. ಅಪರೂಪಕ್ಕೆ ಅವರೋ ನಾನೋ ಕ್ಯಾಂಟೀನಿನಲ್ಲಿ ಎಂದಿನ ಸಮಯಕ್ಕೆ ಕಾಣದೇ ಹೋದರೆ ಒಂದ್ ಫೋನ್ ಮಾಡುತ್ತಿದ್ದೊ. ಅಂತ ಸಂದರ್ಭ ಕಳೆದೊಂದೂವರೆ ತಿಂಗಳಲ್ಲಿ ಬಂದಿದ್ದು ಎರಡೇ ಸಲವೇನೋ. ಮೆಸೇಜ್ ಮಾಡ್ಲಾ ಬೇಡ್ವಾ? ಅಯ್ಯೋ ನಂಗ್ ಒಂದಷ್ಟು ಮೈಂಡ್ ರಿಲ್ಯಾಕ್ಸ್ ಆಗಲೇಬೇಕೀಗ ಏನಾದ್ರೂ ಅಂದ್ಕೊಳ್ಳಲಿ ಎಂದುಕೊಂಡು ಪರ್ಸಿನಲ್ಲಿದ್ದ ಮೊಬೈಲ್ ಹೊರತೆಗೆದೆ. ಎದುರಿಗಿನ ಗೋಡೆಯಲ್ಲಿದ್ದ ಡೋನ್ಟ್ ಯೂಸ್ ಮೊಬೈಲ್ ಫೋನ್ ಬೋರ್ಡನ್ನು ನೋಡ್ಕಂತ ʻಹಾಯ್. ಫ್ರೀ ಇದ್ರಾ... ' ಅಂತ ಟೈಪಿಸಿ ಮತ್ತದನ್ನು ಡಿಲೀಟ್ ಮಾಡಿ ʻಹಾಯ್... ಬನ್ರಿ ಕ್ಯಾಂಟೀನಿಗೆ. ಒಂದ್ ಕಾಫಿ ಕುಡಿಯುವ' ಅಂತ ಟೈಪಿಸಿ ಕಳಿಸಿದೆ. 

"ಎರಡ್ ನಿಮಿಷದಲ್ಲಿ ಬಂದೆ" ಎಂದುತ್ತರ ಬಂತು. 

ಪುಸ್ತಕ ಮುಚ್ಚಿಟ್ಟು ಕ್ಯಾಂಟೀನಿನ ಕಡೆಗೆ ನಡೆದೆ‌. ನಾ ಹೋಗುವಷ್ಟರಲ್ಲಿ ರಾಮ್ ಬಂದಿದ್ದರು. ಎರಡು ಕಪ್ ಕಾಫಿ, ಎರಡು ಪ್ಲೇಟ್ ಬೋಂಡಾ ಸೂಪ್ ಜೊತೆ ಕುಳಿತು ನನಗಾಗಿ ಕಾಯುತ್ತಿದ್ದರು. 

"ಏನ್‌ ಡಾಕ್ಟ್ರೇ ವಿಶೇಷ ಇವತ್ತು. ಅಪರೂಪಕ್ಕೆ ನಮ್ಮನ್ನ ನೆನಪಿಸಿಕೊಂಡು ಬಿಟ್ಟಿದ್ದೀರಾ?" ನಗುತ್ತಾ ಕೇಳಿದರು. 

ಸುಸ್ತಿನಿಂದ ಕುಳಿತುಕೊಳ್ಳುತ್ತ ʻನಿಜಾ ಹೇಳ್ಲಾ ಸುಳ್ಳೇಳ್ಲಾ...ʼ ಎಂದೆ. 

"ಮ್.‌ ಸುಳ್ಳೇ ಹೇಳಿ ಕೇಳುವ!" 

ʻಓದ್ತಾ ಕೂತಿದ್ದೆ. ಕಾಫಿಗೆ ಹೋಗುವ ಅನ್ನಿಸ್ತು. ನಿಮ್ಮ ನೆನಪಾಯಿತು. ಅದಕ್ಕೆ ಕರೆದೆʼ 

"ಹ ಹ.... ಈಗ ನಿಜ ಹೇಳಿ" 

ʻಮಧ್ಯಾಹ್ನದಿಂದ ಓದಿದ್ದೇನೂ ತಲೆಗೆ ಹೋಗದೆ ತಲೆ ಕೆಟ್ಟು ಗೊಬ್ಬರವಾಗಿತ್ತು. ಗೊಬ್ಬರಾನ ಚೂರ್‌ ಯಾರಿಗಾದ್ರೂ ದಾನ ಕೊಡುವ ಅಂತಂದ್ಕಂಡು ಸುಮಾಳಿಗೆ ಮೆಸೇಜ್‌ ಹಾಕಿದರೆ ಅವಳೂ ಬ್ಯುಸಿ. ಅವಳನ್ನ ಬಿಟ್ರೆ ಫ್ರೆಂಡು ಅಂತ ಇರೋದು ನೀವೊಬ್ಬರೇ ಇಲ್ಲಿ ನನಗೆ. ಅದಕ್ಕೆ ಕರೆದೆ!ʼ 

"ಹ... ಹ.... ಹಂಗೆ! ಅದ್ಯಾಕೆ ಅಷ್ಟೊಂದು ತಲೆ ಕೆಡಿಸಿಕೊಂಡು ಓದೋದು" 

ʻಅಯ್ಯೋ.... ವಯಸ್ಸಾಯ್ತಲ್ಲ....ಓದೋದು ತಲೆಗೇ ಹೋಗಲ್ಲ. ಹೋದ ವಾರ ಓದಿದ್ದೆಲ್ಲ ಮರೆತೇ ಹೋಗಿದೆ. ಅದಕ್ಕೇ ಗಾಬರಿಯಾಗಿದೆ...ʼ 

"ನಿಮ್ಮಂಥ ಬುದ್ವಂತ್ರೇ ಹಿಂಗಂದ್ರೆ" 

ʻಅಯ್ಯೋ ಬುದ್ವಂತಿಕೆ ನೆಗೆದು ಬೀಳ್ತು. ಒಂಚೂರು ನೆನಪಿನ ಶಕ್ತಿ ವಾಪಸ್ಸಾದ್ರೆ ಸಾಕಾಗಿದೆ ಈಗʼ 

"ಮ್.‌ ಆಗ್ತದೆ ಬಿಡಿ. ಅದರಲ್ಲೇನಿದೆ. ಎಲ್ಲೋ ಒಂದೊಂದ್ಸಲ ಹಂಗಾಗುತ್ತೆ" 

ʻಹು. ಹೋಪ್‌ ಸೋ. ಬಿಡಿ ಅದನ್ನ. ಅರ್ಧ ಘಂಟೆ ಬಿಟ್ಟರೆ ಎಲ್ಲ ಸರಿ ಹೋಗ್ತದೆ. ಮತ್ತೆ ಇನ್ನೇನ್‌ ಸಮಾಚಾರʼ 

"ನಮ್ಮದಿನೇನಿರುತ್ತೆ ಡಾಕ್ಟ್ರೇ, ಎಲ್ಲಾ ಮಾಮೂಲಿ. ಬೇಕೋ ಬೇಡ್ವೋ ದಿನಾ ಪೂರ್ತಿ ನಗ್‌ ನಗ್ತಾ ಮಾತಾಡ್ಕಂಡ್‌ ಇರ್ಬೇಕಷ್ಟೇ" 

ʻಹೆಚ್.ಆರ್‌ ಡಿಪಾರ್ಟ್‌ಮೆಂಟ್‌ ಅಂದ್ರೆ ಸುಮ್ನೇನಾ ಮತ್ತೆʼ 

"ಅಯ್ಯೋ ಬಿಡಿ ನಮ್ಮ ಕಷ್ಟ ನಮಗೆ. ಮಗಳೇಗಿದ್ದಾಳೆ" 

ʻಹು. ಮಗಳು ಆರಾಮು. ನಾ ಅಷ್ಟು ಗಮನ ಕೊಡೋಕಾಗ್ತಿಲ್ಲವಲ್ಲ ಈಗ, ಅದಕ್ಕೇ ರವಷ್ಟು ನನ್ನ ಮೇಲೆ ಸಿಟ್ಟು. ಮತ್ತೆ ನಿಮ್ಮ ಫ್ರೆಂಡ್‌ ಸಿಗಲಿಲ್ವʼ 

"ಯಾರು?" 

ʻಓಹೋ... ಗೊತ್ತಿಲ್ವೇನೋ" 

"ಇಲ್ಲ ರೀ. ಗೊತ್ತಾಗಲಿಲ್ಲ" 

ʻರಾಜೀವ್‌ ಬಗ್ಗೆ ಕೇಳಿದ್ದುʼ 

"ಓ.... ನಿಮ್‌ ಹಸ್ಬೆಂಡು ಅನ್ನಿ. ಸುಮಾರ್‌ ದಿನ ಆಯ್ತು ಸಿಕ್ಕಿ. ನಾನೂ ಸ್ವಲ್ಪ ವೀಕೆಂಡ್‌ ಊರಿಗೋಗಿದ್ದೆ. ಹಂಗಾಗಿ ಸಿಗೋಕಾಗಿಲ್ಲ" 

ʻಓ! ವೀಕ್‌ ಡೇ ಎಲ್ಲಾ ಕುಡಿಯೋಲ್ವೇನೋ ನೀವು...ʼ 

"ರೀ. ನನ್ನನ್ನೇನು ದೊಡ್ಡ ಕುಡುಕ ಅಂದುಕೋಬಿಟ್ರಾ ಹೆಂಗೆ! ಅಷ್ಟೆಲ್ಲ ಕುಡೀಬೇಕು ಅಂದ್ರೂ ನನ್ನ ದೇಹ ತಡಿಯಲ್ಲ! ಅಬ್ಬಬ್ಬಾ ಅಂದ್ರೆ ಎರಡು ಪೆಗ್ಗು ಅಷ್ಟೇ. ಅದರ ಮೇಲೊಂದು ಹನಿ ಬಾಯೊಳಗೆ ಬಿದ್ದರೂ ದೇಹ ನೆಲಕ್ಕೆ ಬಿದ್ದಿರ್ತದೆ. ಕುಡಿಯೋದೂ ಅಪರೂಪಾನೇ, ವಾರಕ್ಕೊಂದು ಸಲ ಕುಡಿದ್ರೆ ಹೆಚ್ಚು. ಏನೋ ನಿಮ್‌ ಮನೇಲಿ ಒಂದ್‌ ಸಲ ಕುಡೀತಾ ಕುಳಿತಿದ್ದೆ ಅಂತ ಹಿಂಗೆಲ್ಲ ಕುಡುಕನ್ನ ಮಾಡಬಹುದಾ ನೀವು...." 

ʻನಾ ಅಷ್ಟೆಲ್ಲ ಸೀರಿಯಸ್ಸಾಗಿ ಕೇಳಲಿಲ್ಲಪ್ಪ! ಸುಮ್ನೆ ವಿವರಿಸ್ತಾನೇ ಇದೀರಾ!ʼ ಎಂದು ನಕ್ಕೆ. ಕೆಲಸಕ್ಕೆ ಬಾರದ ಮಾತುಕತೆಗಳೂ ಕೆಲವೊಂದಷ್ಟು ಸಲ ಮನಸ್ಸನ್ನ ಹಗುರಾಗಿಸ್ತವೆ. 

ʻಮತ್ತೆ ಮದುವೆ ಊಟ ಎಲ್ಲಾ ಯಾವಾಗ ಹಾಕಿಸ್ತೀರʼ ಅಂದು ಕೇಳಿದಾಗ ಅವರ ಮುಖದಲ್ಲಿದ್ದ ನಗು ಥಟ್ಟನೆ ಮಾಯವಾಯಿತು. ನೇರ ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ "ಯಾರಾದ್ರೂ ನಿಮ್‌ ತರ ಒಳ್ಳೇ ಹುಡುಗಿ ಸಿಗಲಿ ಅಂತ ಕಾಯ್ತಿದ್ದೀನಿ" ಎಂದು ಗಂಭೀರವಾಗಿ ಹೇಳಿದರು. ರಾಮ್‌ ಮುಖದಲ್ಲಿ ಅಷ್ಟೊಂದು ಗಂಭೀರತೆಯನ್ನು ನಾ ಕಂಡಿದ್ದೇ ಇಲ್ಲ. ಯಾಕಾದ್ರೂ ಮದುವೆ ವಿಷಯ ಕೇಳಿದೆ ಎಂದು ಮನಸ್ಸಲ್ಲಿ ಅಂದುಕೊಂಡಿದ್ದು ನನ್ನ ಮೊಗದಲ್ಲಿ ಪ್ರತಿಫಲಿಸಿರಬೇಕು. ಜೋರಾಗಿ ನಕ್ಕು ಬಿಟ್ಟರು ರಾಮ್‌ "ಹೆಂಗೆ ಡೋಸ್‌ ಕೊಟ್ಟಿದ್ದು" 

ʻಥೂ ನಿಮ್ಮ. ಹಂಗಾದ್ರೆ ನಾ ಒಳ್ಳೇ ಹುಡುಗಿ ಅಲ್ಲ ಅನ್ನಿʼ 

"ಛೇ ಛೇ. ಹಂಗಲ್ಲ ರೀ. ನೀವ್‌ ಪಾಪ ತುಂಬಾ ಒಳ್ಳೆಯವರೇ" 

ʻಅಷ್ಟೆಲ್ಲ ಸಲೀಸಾಗಿ ಒಳ್ಳೆತನದ ಆರೋಪ ಹೊರಿಸಬೇಡಿ ನನ್ನ ಮೇಲೆ. ನನ್ನ ಕೆಟ್ಟ ಇತಿಹಾಸದ ಅರಿವಿಲ್ಲ ನಿಮಗೆʼ 

"ಏನ್ರೀ ಭಯ ಹುಟ್ಟಿಸ್ತೀರ.... ಅದೇನೂಂತ ಹೇಳಿ ಕೇಳೋಣ" 

ʻಆಹಾ..... ಆಸೆ ನೋಡಿ. ಅಷ್ಟೆಲ್ಲ ಕ್ಲೋಸ್‌ ಫ್ರೆಂಡ್‌ ಅಲ್ಲರೀ ನೀವು. ಮುಂದಕ್ಕೆ ಕ್ಲೋಸ್‌ ಫ್ರೆಂಡ್‌ ಆದ್ರೆ ಹೇಳ್ತೀನಿ ಬಿಡಿʼ 

"ಹಂಗೆ" 

ʻಹು. ಅದಂಗೆʼ 

"ಮ್‌" 

ʻಮಾತು ಮರೆಸಬೇಡಿ. ಮದುವೆ ಊಟ ಯಾವಾಗ ಹಾಕಿಸ್ತೀರ ಅನ್ನೋ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲಪ್ಪʼ 

"ನಾನೀಗ್ಲೇ ಯಾಕೆ ಅಂತಿದ್ದೀನಿ. ಮನೆಯವರು ಇನ್ಯಾವಾಗ? ಅಂತ ಹೇಳ್ತಾ ಹೇಳ್ತಾನೇ ನನ್ನ ಫೋಟೋ ಬಯೋಡೇಟಾ ಎಲ್ಲಾ ರೆಡಿ ಮಾಡ್ಕಂಡಿದ್ದಾರೆ. ಮುಂದಿನ ತಿಂಗಳಿಂದ ಹೆಣ್‌ ಹುಡುಕೋ ಕಾರ್ಯಕ್ರಮ ಶುರು ಅಂತೆ! ಮೈಸೂರಿನದ್ದೊಂದಷ್ಟು, ಬೆಂಗಳೂರಿನದ್ದೊಂದಷ್ಟು ಹುಡುಗೀರ ಫೋಟೋ ತೋರಿಸಿದ್ರು. ನಂಗೇನೋ ಎಲ್ರೂ ಚೆನ್ನಾಗೇ ಕಂಡ್ರಪ್ಪ!" 

ʻಆಹಾ.... ಎಲ್ರುನ್ನೂ ಆಗ್ಬಿಡಿ ಮತ್ತೆʼ 

"ಅಷ್ಟೇ.... ನೋಡಿ ನೀವ್ಯಾವುದಕ್ಕೆ ಕರ್ಕಂಡು ಹೋಗ್ತೀರೋ ಅದಕ್ಕೇ ಮೊದಲು ಹೋಗುವ ಅಂದಿದ್ದೀನಿ. ಯಾವ್‌ ಹುಡುಗಿ ಮನೆಯವರು ಮೊದಲು ಬನ್ನಿ ಅಂತಾರೋ ಅವರಲ್ಲಿಗೆ ಹೋಗೋಣ ಅಂದಿದ್ದಾರೆ" 

ʻಗುಡ್‌ ಗುಡ್.‌ ಹಂಗಾದ್ರೆ ಸದ್ಯದಲ್ಲೇ ಶುಭ ಸುದ್ದಿ ಸಿಗಬಹುದು ಅನ್ನಿʼ 

"ಅಯ್ಯೋ. ನೋಡ್ಬೇಕ್ರಿ. ಈಗಿನ ಕಾಲದ ಹೆಣ್ಮಕ್ಳೇನು ಅಷ್ಟು ಸಲೀಸಾಗಿ ಒಪ್ಪಿಬಿಡ್ತಾರ.... ಆಗೋ ಟೈಮಿಗೆ ಆಗುತ್ತೆ" 

ʻಹು. ಅದೂ ಸರೀನೆ. ಆಗ್ತದೆ ಬಿಡಿ ಬೇಗʼ ಎಂದೇಳುವಷ್ಟರಲ್ಲಿ ಬೋಂಡಾ ಸೂಪು, ಕಾಫಿ ಮುಗಿದಿತ್ತು. 

ʻಸರಿ ರೀ. ಕಾಫಿಗೆ ಥ್ಯಾಂಕ್ಸು. ತಲೆಯ ಗೊಬ್ರ ಸ್ವಲ್ಪ ಖಾಲಿ ಮಾಡಲು ಸಹಾಯ ಮಾಡಿದ್ದಕ್ಕೆ ದೊಡ್ಡ ಥ್ಯಾಂಕ್ಸುʼ 

"ಥ್ಯಾಂಕ್ಸ್‌ ಬೇರೆ… ನಿಮ್ಮ. ನಂಗೂ ಯಾರ್‌ ಫ್ರೆಂಡ್ಸ್‌ ಜಾಸ್ತಿ ಇಲ್ಲ ರೀ ಮೈಸೂರಲ್ಲಿ. ಆಸ್ಪತ್ರೆಯಲ್ಲಿ ಜೊತೇಲಿ ಕೆಲಸ ಮಾಡುವವರಲ್ಲಿ ಎಷ್ಟೇ ಆತ್ಮೀಯವಾಗಿದ್ದರೂ ಅದು ಕೆಲಸದ ಲೆಕ್ಕಕ್ಕೇ ಆಯ್ತು. ಹೇಳ್ಕೊಳ್ಳುವಂತ ಫ್ರೆಂಡ್ಸ್‌ ಅಂತ ಮೈಸೂರಲ್ಲಿದ್ರೆ ಅದು ನೀವು, ರಾಜೀವು ಅಷ್ಟೇ" ಎಂದರು. 

ಖುಷಿಯಾಯಿತು. ಸರಿ ಬರ್ತೀನಿ ಎಂದು ಲೈಬ್ರರಿಗೆ ಹೊರಟೆ. ಎಂಟೂವರೆಯವರೆಗೂ ಗಮನವಿಟ್ಟು ಓದಲು ಸಾಧ್ಯವಾಯಿತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment