Jun 4, 2020

ಬೇಸಿಕಲಿ ವಿ ಆರ್‌ ಬ್ಲಡಿ ಹಿಪೋಕ್ರೈಟ್ಸ್‌…ಡಾ. ಅಶೋಕ್.‌ ಕೆ. ಆರ್ 
ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕರಡಿಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತು… ತುಮಕೂರು ಸಮೀಪದ ಊರಿನಲ್ಲಿ ಮೂರು ವರ್ಷದ ಮಗುವನ್ನು ಚಿರತೆ ಹೊತ್ತೊಯ್ದಿತು…. ಕುಣಿಗಲ್‌ ಸುತ್ತಮುತ್ತ ಹಸು, ಸಾಕಿದ ನಾಯಿಯನ್ನೊತ್ತಯ್ಯಲು ಬರುವ ಚಿರತೆಗಳ ಸಂಖೈ ಹೆಚ್ಚುತ್ತಿದೆ…. ಮೊನ್ನೆ ಕೇರಳದಲ್ಲಿ ಆನೆಯೊಂದು ಸತ್ತಿದೆ…. 

ಕೆಂಗೇರಿ ಹತ್ತಿರ ಕೊಮ್ಮಘಟ್ಟ ಅನ್ನೋ ಊರಿದೆ. ಆ ಊರಿಂದ ಹಿಡಿದು ಒಂದ್ಕಡೆ ಮೈಸೂರು ರಸ್ತೆಯವರೆಗೆ ಇನ್ನೊಂದ್ಕಡೆ ತಾವರೆಕೆರೆಯ ಗಡಿಯವರೆಗೆ ಬೃಹತ್ತಾದ (ಏಷಿಯಾಗೆ ದೊಡ್ಡದು ಅಂತಾರೆ, ಸರಿ ತಿಳಿದಿಲ್ಲ) ಕೆಂಪೇಗೌಡ ಲೇಔಟ್‌ ಆಗಿ ಪರಿವರ್ತನೆ ಆಗಿದೆ. ಗೆಳೆಯ ಅಭಿ ಆ ಕಡೆಯಲ್ಲೊಂದಷ್ಟು ದಿನ ತೋಟವೊಂದನ್ನು ಬಾಡಿಗೆ ಹಿಡಿದಿದ್ದ. ತೆಂಗು, ಮಾವು, ಹಲಸು, ಸಪೋಟಾ ಮರಗಳಿದ್ದ ತೋಟಗಳಲ್ಲೀಗ ಜೆಸಿಬಿಗಳದೇ ಕಲರವ. ತೋಟಗಳ ನಡುವೆ ಅಲ್ಲಲ್ಲಿ ಅನೇಕಾನೇಕ ಕುರುಚಲು ಕಾಡುಗಳೂ ಇದ್ದವು. ʻಇಲ್‌ ಸೈಟ್‌ ಮಾಡಿ, ಜನಕ್‌ ಅವಶ್ಯಕತೆ ಇದೆʼ ಅಂತ ಯಾರಾದ್ರೂ ಅರ್ಜಿ ಹಾಕಿದ್ರಾ? ಖಂಡಿತ ಇಲ್ಲ. ಬಿಡಿಎ ಸೈಟ್‌ ಮಾಡ್ತು, ಆ ಸೈಟುಗಳನ್ನ ಜನ ಕೊಂಡ್ಕೊಂಡೂ ಆಗಿದೆ. ಇನ್ನೇನೀಗ ವಿಶಾಲ ವೆಲ್‌ ಪ್ಲ್ಯಾನ್ಡ್‌ ರಸ್ತೆಗಳೂ, ದೊಡ್ಡ ಮನೆಗಳು, ಶಾಪಿಂಗ್‌ ಕಾಂಪ್ಲೆಕ್ಸುಗಳು ಬರೋ ಸಮಯ. ಅಷ್ಟೊಂದ್‌ ಒಳ್ಳೆ ಫಲವತ್ತಾದ ಭೂಮೀನ ಯಾಕ್ರೀ ಹಾಳುಗೆಡವ್ತೀರ ಅಂತ ಯಾರೂ ಮಾತಾಡಲಿಲ್ಲ. ಆ ಹಳ್ಳಿಗಳಲ್ಲಿನ ಜನ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಕಾರಣ ಎಕರೆಗೆ ತೊಂಭತ್ತು ಲಕ್ಷದವರೆಗೂ ಹಣ ನೀಡುತ್ತಿದ್ದರು. ಹೆಚ್ಚು ಎಕರೆ ಇರುವ ವ್ಯಕ್ತಿ ಒಂದಷ್ಟು ಗುಂಟೆ ಭೂಮಿಯನ್ನು ತನ್ನಲ್ಲೇ ಇಟ್ಟುಕೊಳ್ಳಬಹುದಿತ್ತು. ಅರ್ಧ ಮುಕ್ಕಾಲು ಎಕರೆ ಇದ್ದವರೂ ಕೂಡ ಲಕ್ಷಾಧೀಶರಾದರು. ಎಕರೆಗಿಂತ ಹೆಚ್ಚಿದ್ದವರೆಲ್ಲ ಕೋಟ್ಯಾಧೀಶರಾದರು. ಒಳ್ಳೇ ಅಮೌಂಟು ಸಿಗುವಾಗ ಮಾರುವುದು ಬುದ್ಧಿವಂತಿಕೆಯ ಲಕ್ಷಣ ಎನ್ನುವುದೇ ನಮ್ಮ ಆರ್ಥಿಕತೆಯ ಬುನಾದಿಯಲ್ಲವೇ? 

ಕುಣಿಗಲ್‌ ಮಾಗಡಿ ತುಮಕೂರಿನ ಕಡೆಯ ಎಷ್ಟೋ ಬೆಟ್ಟಗುಡ್ಡಗಳಲ್ಲಿ ಜಲ್ಲಿ ಕಲ್ಲು ಕ್ವಾರಿಗಳಿವೆ. ರಸ್ತೆಗಾಗಿ ಬೇಕಾದ ಜಲ್ಲಿ ಉತ್ಪಾದಿಸಲು ಸ್ಥಳೀಯವಾಗಿ ಶುರುವಾದ ಘಟಕಗಳು ರಸ್ತೆ ಮುಗಿದು ಎಷ್ಟೋ ವರ್ಷ ಕಳೆದ ನಂತರವೂ ಪರವಾನಗಿ ಪಡೆದುಕೊಂಡೋ ಲಂಚ ಕೊಟ್ಟುಕೊಂಡೋ ಕಲ್ಲು ಒಡೆಯುತ್ತಿವೆ. ರಾತ್ರೋ ರಾತ್ರಿ ಸಿಡಿವ ಡೈನಮೈಟು ಶಬ್ದಕ್ಕೆ ಎಲ್ಲರೂ ಬೆಚ್ಚಲೇಬೇಕು. ಇವರ್ಯಾಕೆ ಜಲ್ಲಿ ಹೊಡೀತಿದ್ದಾರೆ? ಇಲ್ಲಿ ಕಟ್ಟಿಸೋ ಹೊಸ ಹೊಸ ಸೈಟು ಅಪಾರ್ಟುಮೆಂಟುಗಳಿಗೆ ಜಲ್ಲಿ ಬೇಕೇ ಬೇಕಲ್ಲ. ಇಷ್ಟೊಂದ್ಯಾಕೆ ಅಪಾರ್ಟ್‌ಮೆಂಟು ಸೈಟು? ಒಂದಾದ ಮೇಲೆ ಒಂದನ್ನು ನಾವು ಕೊಂಡುಕೊಳ್ಳುತ್ತಾ ನಾವು ಸ್ಥಿತಿವಂತರಾಗಬೇಕಲ್ಲ? ಆಗಲೇ ತಾನೇ ಸಮಾಜದಲ್ಲಿ ನಮಗೂ ಒಂದು ʻಸ್ಥಾನಮಾನʼ ಅಂತ ಸಿಗೋದು…. ಇದಕ್ಕೆಲ್ಲ ಪ್ರತಿಕ್ರಿಯಿಸೋದಿರಲಿ ಯಾವತ್ತಾದರೂ ಗಮನಸಿದ್ದೀವಾ? ಇಲ್ಲವಲ್ಲ… ಬೆಂಗಳೂರಿನ ಹತ್ತಿರದ, ಇತರೆ ನಗರಗಳಕ್ಕೊಂದಿಕೊಂಡ ಕಾಡುಗಳ ನಾಶದಿಂದ ಅಲ್ಲಿದ್ದ ಪ್ರಾಣಿ ಸಂಕುಲ ಇನ್ನೊಂದಷ್ಟು ಒಳಗೋಗಿ ಮತ್ಯಾವುದೋ ಕಾಡು ಸೇರಿ ಅಲ್ಲೀಗಾಗಲೇ ಇರುವ ಪ್ರಾಣಿಗಳೊಂದಿಗೆ ಜಾಗಕ್ಕಾಗಿ ಗುದ್ದಾಡಿ ಕೊನೆಗೆ ಸಾಕಿದ ಪ್ರಾಣಿಗಳ ಮೇಲೆ ಅಂತಿಮವಾಗಿ ಮನುಷ್ಯರ ಮೇಲೆ ದಾಳಿ ನಡೆಸುತ್ತದೆ. ನಾಳೆ ದಿನ ಚನ್ನಪಟ್ಟಣದ ಕಡೆ ಕರಡಿ ಮತ್ತೊಮ್ಮೆ ಕಾಣಿಸಿಕೊಂಡರೆ ಜನರೇ ಬಡಿದು ಸಾಯಿಸುತ್ತಾರೆ. ಬೋನಿಟ್ಟು ಚಿರತೆ ಹಿಡಿದು ಅದನ್ನು ಮತ್ತೊಂದು ಕಡೆಗೆ ಸಾಗಿಸಿ ಅದೇ ಚಿರತೆ ಹೊಸ ಜಾಗದಲ್ಲಿ ದಾಳಿ ಪ್ರಾರಂಭಿಸಿದರೆ ಅದನ್ನೂ ಜನರೇ ಹೊಡೆದು ಸಾಯಿಸುತ್ತಾರೆ. ಮತ್ತದು ಅಲ್ಲಿನ ಜನರ ಬದುಕುವಿಕೆಗೆ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸವೂ ಹೌದು. 

ಕೇರಳದಲ್ಲಿ ಅನಾನಸ್ಸಿನ್ನು ತಿನ್ನಲೋದ ಆನೆಯೊಂದು ಹಣ್ಣಿನೊಳಗಿಟ್ಟಿದ್ದ ಮದ್ದು ಸ್ಪೋಟಗೊಂಡು ದವಡೆಯೆಲ್ಲ ಗಾಯವಾಗಿ ದಿನಗಳ ನರಳಾಟದ ನಂತರ ಸಾವನ್ನಪ್ಪಿದೆ. (ಕೆಲವೊಂದು ವರದಿಗಳ ಪ್ರಕಾರ ಹಣ್ಣನ್ನು ವ್ಯಕ್ತಿಯೊಬ್ಬ ಕೈಯಾರೆ ತಿನ್ನಿಸಿದ ಅಂತಿದೆ. ಕಾಡಾನೆಗೆ ಕೈಯಾರೆ ಹಣ್ಣು ತಿನ್ನಿಸುವ ಧೈರ್ಯವಂತರೂ ಇದ್ದಾರಾ?) ಸೈಟ್‌ ಮೇಲ್‌ ಸೈಟು ಲೇಔಟ್‌ ಮೇಲ್‌ ಲೇಔಟು ಕಟ್ಟಿದಾಗೆಲ್ಲ ಎಚ್ಚರಗೊಳ್ಳದ ನಮ್ಮ ʻಮನುಷ್ಯತ್ವʼ ದಡಬಡಿಸಿ ಎದ್ದು ಕೂತಿದೆ. ಆನೆ ಸಾವಿಗಿಂತ ಹೆಚ್ಚಾಗಿ ಅದು ಗರ್ಭಿಣಿಯಾಗಿತ್ತೆಂಬ ಸಂಗತಿ, ಪೋಸ್ಟ್‌ ಮಾರ್ಟಮ್‌ ಮಾಡಿದಾಗ ಸಿಕ್ಕ ಪುಟ್ಟ ಆನೆ ಮರಿಯ ಚಿತ್ರವೆಲ್ಲವೂ ನಮ್ಮ ʻಮನುಷ್ಯತ್ವʼವನ್ನು ಬಡಿದೆಬ್ಬಿಸಿ ಕೂರಿಸಿದೆ. 

ʻಮನುಷ್ಯ ಎಂತ ಕ್ರೂರಿʼ ಅಂತೆಲ್ಲ ಬಡಬಡಿಸಿದವರಲ್ಲನೇಕರಲ್ಲಿ, ಒಂದ್‌ ಸೈಟ್‌ ತಗಂಡಾಯ್ತು ಇನ್ನೊಂದ್ಯಾವಾಗ ಅಂತ ಲೆಕ್ಕ ಹಾಕುವವರೇ ಇರುತ್ತೀವಿ. ಹಂದಿಗೋ ಮುಳ್ಳುಹಂದಿಗೋ ಇಟ್ಟಿರುವ ಮದ್ದನ್ನು ದುರದೃಷ್ಟವಶಾತ್‌ ಆನೆ ತಿಂದಿದೆ. ಹಂಗಾದ್ರೆ ಹಂದಿಗೋ ಮುಳ್ಳುಹಂದಿಗೋ ಮದ್ದು ಇಡೋದು ಕೂಡ ತಪ್ಪಲ್ವಾ? ಕಾನೂನಿನ ಪ್ರಕಾರ ಖಂಡಿತ ತಪ್ಪು. 

ಕಾಡಂಚಿನಲ್ಲಿ ಕೃಷಿ ಮಾಡುವವರ ಕಷ್ಟ ಅನುಭವಿಸಿದವರಿಗೇ ಗೊತ್ತು. ಇನ್ನೇನು ಬೆಳೆ ಕೈಗೆ ಬಂತು ಅನ್ನುವಾಗ ಕಾಡು ಪ್ರಾಣಿಗಳ ದಾಳಿಗಳಾಗ್ತವೆ. ಬೀಜ ಬಿತ್ತಿದಾಗ, ಸಸಿ ನೆಟ್ಟಾಗ ದಾಳಿಗಳಾಗ್ತವೆ. ಕಾಡಂಚಿನ ಕೃಷಿಗೆ ಆನೆಗಿಂತ ದೊಡ್ಡ ವೈರಿ ಕಾಡಂದಿ. ಭಂಡ ಧೈರ್ಯದ ಪ್ರಾಣಿಯದು. ಆನೆ ಕಡೇ ಪಕ್ಷ ಮೆಣಸಿನಕಾಯಿ ಅರಿಶಿಣಕ್ಕಾದರೂ ಬರುವುದಿಲ್ಲ. ಹಂದಿ ಹಂಗಲ್ಲ. ಬೇರ್‌ ಸಮೇತ ಎಲ್ಲವನ್ನೂ ನಾಶಗೊಳಿಸಿಬಿಡುತ್ತದೆ. ಓಡಿಸುವುದೂ ಕಷ್ಟದ ಕೆಲಸ. ಆದ್ರೂ ಕಾಡಂಚಿನಲ್ಲಿ ಕೃಷಿ ಮಾಡೋ ಜನರು ನಮಗಿಂತ ಅಂದರೆ ನಗರವಾಸಿಗಳಿಗಿಂತ ಹೆಚ್ಚಾಗಿ ಪ್ರಾಣಿ ಪಕ್ಷಿಯೊಂದಿಗೆ ಹೊಂದುಕೊಂಡಿದ್ದಾರೆ. ಮದ್ದಿಡೋ ಕೆಲಸವನ್ನು ಎಲ್ಲರೂ ಯಾವಾಗಲೂ ಮಾಡುವುದಿಲ್ಲ. ತೀರ ತೊಂದರೆ ಇದ್ದಾಗ, ಬೇಸತ್ತು ಹೋದಾಗ ಮದ್ದಿಡುವುದೋ ಬೇಟೆಯಾಡುವುದೋ ಎಷ್ಟೋ ಕಡೆ ನಡೆಯುವ ಕೆಲಸವೇ ಹೌದು. ಆಹಾರಕ್ಕಾಗಿಯೂ ಕಾಡಂದಿಗೆ ಮದ್ದಿಡುವುದಿದೆ. 

ಇಂತ ಮದ್ದು ಹುಲಿಯನ್ನೂ ಬಲಿ ತೆಗೆದುಕೊಂಡಿದೆ, ಮದ್ದಿಟ್ಟ ವ್ಯಕ್ತಿಯ ಮನೆಯ ಹಸುಗಳನ್ನೇ ಬಲಿತೆಗೆದುಕೊಂಡಿದೆ, ಕಾಲಿಟ್ಟ ಮನುಷ್ಯರಿಗೂ ಗಾಯವನ್ನು ಮಾಡಿದೆ. ಈ ಸಲ ಈ ಮದ್ದು ಆನೆಯನ್ನು ಬಲಿ ತೆಗೆದುಕೊಂಡಿದೆ. ದುರದೃಷ್ಟವಶಾತ್‌ ಆ ಆನೆ ಗರ್ಭ ಧರಿಸಿತ್ತು. ನಮ್‌ ʻಮನುಷ್ಯತ್ವʼ ಕಾಡನ್ನು ಹೆಂಗೆ ನಾಶ ಪಡಿಸುತ್ತೆ ಅಂದ್ರೆ ಪೋಸ್ಟ್‌ ಮಾರ್ಟಂ ಮಾಡಿದ ಮೇಲೆ ಆನೆಯ ಶವಕ್ಕೆ ಸೂಕ್ತ ಅಂತ್ಯಸಂಸ್ಕಾರ ನೆರವೇರಿಸಲಾಯಿತಂತೆ! ಕಾಡಂದ್ರೆ ಆನೆ ಹುಲಿಯಂತ ದೈತ್ಯ ಪ್ರಾಣಿಗಳಷ್ಟೇ ನಮ್ಮ ʻಮನುಷ್ಯತ್ವʼದ ಪರಿಧಿಯಲ್ಲಿ ಬರುವುದು. ಸತ್ತ ಪ್ರಾಣಿಯ ದೇಹವನ್ನವಲಂಬಿಸುವ ಹತ್ತಾರು ಪ್ರಾಣಿ ಪಕ್ಷಿಗಳು ಹುಳ ಹುಪ್ಪಟೆಗಳು ನಮ್ಮ ಲೆಕ್ಕದಲ್ಲಿ ಕಾಡಿನ ಭಾಗವೇ ಅಲ್ಲ! ಆನೆಯ ಅಸಹಜ ಸಾವಿನ ಕಾರಣದಿಂದ ಪೋಸ್ಟ್‌ ಮಾರ್ಟಂ ಬೇಕಿತ್ತು ಒಪ್ಪೋಣ. ಪೋಸ್ಟ್‌ ಮಾರ್ಟಂ ನಡೆದ ನಂತರ ಊರಿಂದ ದೂರ, ಕಾಡಿನೊಳಗೆ ಆನೆ ಶವವನ್ನು ಹಂಗೇ ಬಿಟ್ಟು ಬರಬೇಕಿರುವುದು ಕಾಡಿನ ನ್ಯಾಯವಲ್ಲವೇ? ಇಂತ ವಿದ್ಯುಕ್ತ ಸಂಪ್ರದಾಯಬದ್ಧ ಶವಸಂಸ್ಕಾರವನ್ನು ನಮ್ಮ ಅರಣ್ಯ ಇಲಾಖೆಗಳು ಮೇಲಿಂದ ಮೇಲೆ ಮಾಡುತ್ತಲೇ ಇವೆ. ಸಹಜವಾಗಿ ಸತ್ತ ಪ್ರಾಣಿಗಳಿಗೂ ಮಾಡಿವೆ. ಆಮೇಲೆ ʻರಣಹದ್ದು ಉದ್ಯಾನವನʼ ಅಂತೆಲ್ಲ ಸ್ಕೀಮುಗಳು! ರಣಹದ್ದುಗಳ ಉಳಿವಿಗೆ ಸ್ಕೀಮುಗಳಲ್ಲ ಕಣ್ರಪ್ಪ ಇಂತ ಸತ್ತ ಪ್ರಾಣಿಗಳು ಬೇಕಿರೋದು ಅಂತ ಅರಣ್ಯ ಇಲಾಖೆಯಲ್ಯಾರೂ ಯಾಕೆ ಯೋಚಿಸುವುದಿಲ್ಲ? 

ಮನೆ ಮೇಲ್‌ ಮನೆ ತಗಂಡು, ಒಂದ್‌ ಸಾಲಲ್ಲ ಅಂತ ನಾಕಾರು ವೆಹಿಕಲ್‌ ಇಟ್ಕಂಡು, ಚೆನ್ನಾಗ್‌ ʻಸೆಟ್ಲ್‌ʼ ಆಗೋದಕ್ಕೇ ಒದ್ದಾಡ್ಕಂಡು, ವಿಶಾಲ ರಸ್ತೆಗಳೇ ಅಭಿವೃದ್ಧಿಯ ಸೂಚಕ, ಅಭಿವೃದ್ಧಿ - ಅಭಿವೃದ್ಧಿ ಅಂತ ಬೊಂಬಡಾ ಬಜಾಯಿಸ್ಕೊಂಡು ಬಹುಶಃ ಯಾವ ಪ್ರಾಣಿಗೋ ಇಟ್ಟ ಮದ್ದನ್ನು ಅಕಸ್ಮಾತ್ತಾಗಿ ಜಗಿದು ಸತ್ತ ಆನೆಯ ಪಟ ಇಟ್ಕಂಡು ʻಅಯ್ಯಯ್ಯೋ ಮಾನವೀಯತೆʼ ʻಅಯ್ಯೋ ಆನೆಯೇ… ಕ್ಷಮಿಸಿಬಿಡವ್ವʼʻಮದ್ದಿಟವರು ಎಂತ ಕ್ರೂರಿಗಳಿರಬೇಕುʼ ಅಂತೆಲ್ಲ ಮಾತಾಡ್ತೀವಲ್ಲ… ಬೇಸಿಕಲಿ ವಿ ಆರ್‌ ಬ್ಲಡಿ ಫಕಿಂಗ್‌ ಹಿಪೋಕ್ರೈಟ್ಸ್‌ ಅಷ್ಟೇ…. 

ಅಂದಂಗೆ ಈ ʻಮನುಷ್ಯತ್ವದಲ್ಲಿʼ ಅರ್ಧದಷ್ಟನ್ನು ನಮ್ಮ ವಲಸಿಗ ಕಾರ್ಮಿಕರ ಕುರಿತಾಗಿ ತೋರುವ ಸೌಜನ್ಯ ನಮಗಿದ್ದಿದ್ದರೆ ನಡೆಯುತ್ತ ನಡೆಯುತ್ತಲೇ ಸಾಯುವ ಕರ್ಮ ಜನರಿಗಿರುತ್ತಿರಲಿಲ್ಲ… ಅದ್‌ ಬೇರೆ ಇದ್‌ ಬೇರೆ, ಆದ್ರೂ ನೆನಪಾಯಿತು.

No comments:

Post a Comment