Dec 9, 2019

ಒಂದು ಬೊಗಸೆ ಪ್ರೀತಿ - 43

ಡಾ. ಅಶೋಕ್.‌ ಕೆ. ಆರ್.‌
“ಎಷ್ಟೊಂದ್‌ ಬದಲಾಗಿಬಿಟ್ಯೆ” ಎಂದವನ ದನಿಯಲ್ಲಿ ನಿಜಕ್ಕೂ ನೋವಿತ್ತು. ಬದಲಾಗಿಯೇ ಇಲ್ಲ ಎಂದು ಸುಳ್ಳಾಡುವಂತೆಯೂ ಇರಲಿಲ್ಲ. ನನ್ನಲ್ಲಿನ ಬದಲಾವಣೆ ನನ್ನ ಆತ್ಮ ಸಂಗಾತಿಗಲ್ಲದೇ ಇನ್ಯಾರಿಗೆ ತಿಳಿಯಲು ಸಾಧ್ಯ? ಬಯಸಿ ಬಯಸಿ ಬದಲಾಗಿದ್ದೇನಲ್ಲ. ಗೆಟ್‌ ಟುಗೆದರ್‌ನಲ್ಲಿ ಅವನಾಡಿದ ಮಾತುಗಳೇ ಅವನೊಡನೆ ಹರಟುವಾಗ ಮಾತನಾಡುವಾಗ ನೆನಪಿಗೆ ಬರುತ್ತಿತ್ತು. ನಮ್ಮಪ್ಪ ಅಮ್ಮನ ಪ್ರಕಾರ ನಾ ಕೆಟ್ಟ ಹುಡುಗಿ, ಪರಶುವಿನ ಪ್ರಕಾರ ನಾ ಮೋಸ ಮಾಡಿದ ಹುಡುಗಿ, ರಾಜೀವೆಂಗೊ ನನ್ನ ಒಪ್ಪಿ ಮೆಚ್ಚಿ ಮದುವೆಯಾಗಿದ್ದಾರೆ. ನನಗೆ ಹಿಂಗೆ ಸಾಗರನ ಜೊತೆಗೆ ಸಂಬಂಧವಿದೆ ಎಂದು ತಿಳಿದರೆ ಅವರಿಗೂ ನಾ ದೂರದವಳಾಗುತ್ತೇನೆ. ಸಾಗರನ ಹತ್ತಿರವಾಗುವುದಕ್ಕೆ ನಾ ರಾಜೀವನಿಂದ ದೂರಾದರೂ ನಡಿದೀತು…. ನಾಳೆ ಹುಟ್ಟುವ ಮಗುವಿನ ಕಣ್ಣಲ್ಲಾದರೂ ನಾ ರವಷ್ಟು ಒಳ್ಳೆಯವಳಂತೆ ತೋರಬೇಕಲ್ಲವೇ? ನೀ ಸರಿ ಇಲ್ಲ ಅಂತ ಆ ಮಗುವಿನ ಬಾಯಲ್ಲಿ ಕೇಳುವಂತ ದಿನ ಬರಬಾರದಲ್ಲವೇ? ನಿಧಾನಕ್ಕೆ ನಿಧನಿಧಾನಕ್ಕೆ ಸಾಗರನಿಂದ ದೂರಾಗುತ್ತಿದ್ದೆ. ಬಿಡುವಿದ್ದರೂ ಅವನ ಬಹಳಷ್ಟು ಮೆಸೇಜುಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಕೇಳಿದರೆ ಬ್ಯುಸಿ ಕಣೋ ಎಂದುಬಿಡುತ್ತಿದ್ದೆ. ಕೆಲಸ ಮುಗಿಸಿ ಲೈಬ್ರರಿಯಲ್ಲಿ ಒಂದಷ್ಟು ಓದಿ ಮನೆಗೆ ಬಂದರೆ ಅಗಾಧ ಸುಸ್ತು. ಹಸಿವು. ಅಡುಗೆ ಮಾಡಿ ತಿಂದು ಪಾತ್ರೆ ತೊಳೆದು ಮಲಗಿದರೆ ಸಾಕು ಎನ್ನುವಷ್ಟು ಸುಸ್ತು. ಸುಸ್ತು ಕಣೋ ಎಂದ್ಹೇಳಿದಾಗ ಮುನಿಸೆಲ್ಲವನ್ನೂ ಬಿಟ್ಟು ಹೌದೇನೋ ರೆಸ್ಟ್‌ ಮಾಡು ಎಂದನ್ನುತ್ತಿದ್ದ. 

ಕೆಲವೊಮ್ಮೆ ದಿನಗಟ್ಟಲೆ ನನ್ನಿಂದ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಮುನಿಯುತ್ತಿದ್ದ. “ನಿನಗೆ ಬೇಕಿದ್ದಾಗ ಬ್ಯುಸಿ ಇರ್ತಿರಲಿಲ್ಲ. ನಿನಗೆ ನನ್ನ ಅವಶ್ಯಕತೆ ಇದ್ದಾಗ ಸುಸ್ತಿರುತ್ತಿರಲಿಲ್ಲ. ಈಗ ನನ್ನ ಅವಶ್ಯಕತೆ ಅಷ್ಟಾಗಿ ಇಲ್ಲವೇನೋ ಅಲ್ಲವಾ. ಅದಿಕ್ಕೆ ಬ್ಯುಸಿ, ದಿನದ ಇಪ್ಪತ್ತನಾಲ್ಕು ಘಂಟೆಯೂ ಸುಸ್ತು. ಈ ಬ್ಯುಸಿ ಸುಸ್ತಿನ ನಡುವೆ ಫೇಸ್‌ ಬುಕ್ಕಲ್ಲಿ ದಿನಕ್ಕತ್ತು ಪೋಸ್ಟು ಹಾಕಲು ಮಾತ್ರ ಭಯಂಕರ ಪುರುಸೊತ್ತಿರುತ್ತೆ” ಎಂದು ಹಂಗಿಸುತ್ತಿದ್ದ. ಮಗುವಿಗೋಸ್ಕರ ಸೆಕ್ಸಿಗೋಸ್ಕರ ನನ್ನನ್ನು ಬಳಸಿಕೊಂಡಳಿವಳು ಎಂಬ ಭಾವನೆ ಅವನಲ್ಲಿ ನೆಲೆಸಲಾರಂಭಿಸಿತ್ತು. ಮೊದಲಾಗಿದ್ದರೆ ಹಂಗಲ್ವೋ ಹಿಂಗೆ ಎಂದು ಸಮಾಧಾನ ಪಡಿಸುತ್ತಿದ್ದೆ, ಈಗ್ಯಾಕೋ ಸಮಾಧಾನಿಸಿ ಏನಾಗಬೇಕು ಎಂದು ಸುಮ್ಮನಾಗುತ್ತಿದ್ದೆ. ಇದ್ಯಾಕ್‌ ಹಿಂಗ್‌ ಮಾಡ್ದೆ, ಇದ್ಯಾಕ್‌ ಹಂಗ್‌ ಮಾಡ್ದೆ, ನನ್ನನ್ಯಾಕೆ ಇಷ್ಟೊಂದು ಅವಾಯ್ಡ್‌ ಮಾಡ್ತಿದ್ದೀಯ ಅಂತ ಪ್ರಶ್ನೆಗಳ ಸುರಿಮಳೆ ಬರಲಾರಂಭಿಸುತ್ತಿದ್ದಂತೆ ಮೌನದ ಮೊರೆ ಹೋಗಿಬಿಡುತ್ತಿದ್ದೆ. ಅದವನಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿತ್ತು, “ನನ್ನನ್ನು ಬಳಸಿ ಬಿಸಾಡಿದ್ದಕ್ಕೆ ಥ್ಯಾಂಕ್ಸ್‌” ಅಂತೊಂದು ಮೆಸೇಜು ಕಳಿಸಿ ಸುಮ್ಮನಾಗುತ್ತಿದ್ದ. ಒಂದು ದಿನದ ಮಟ್ಟಿಗೆ. ಮತ್ತೆ ಮೆಸೇಜು ಮಾಡುತ್ತಿದ್ದ. ಅಥವಾ ಕೆಲವೊಮ್ಮೆ ನನಗೇ ತುಂಬಾ ಸುಸ್ತಾದಾಗ, ಮನಸ್ಸಲ್ಲಿ ಮಗುವಿನ ಕುರಿತು, ಡೆಲಿವರಿಯ ಕುರಿತು ವಿನಾಕಾರಣ ದಿಗಿಲುಗೊಂಡಾಗ ಅವನಿಗೆ ಮೆಸೇಜಾಕುತ್ತಿದ್ದೆ. ನನ್ನ ಮೇಲಿನ ಅಷ್ಟೂ ಬೇಸರ ಕೋಪ ನುಂಗಿಕೊಂಡವನಂತೆ ಸಮಾಧಾನಿಸುತ್ತಿದ್ದ. ಎರಡು ಮೂರು ತಿಂಗಳಿಂದ ಇದೇ ಪುನರಾವರ್ತನೆ. ಕೆಲವೊಮ್ಮೆ ನನ್ನ ವರ್ತನೆಗೆ ನನಗೇ ಬೇಸರವಾಗುತ್ತಿತ್ತು, ನಿಜಕ್ಕೂ ಇವನನ್ನು ಬಳಸಿಕೊಂಡುಬಿಟ್ಟೆನಾ ಅಂತ ಅನುಮಾನ ಮೂಡುತ್ತಿತ್ತು. ಅದರ ಬಗ್ಗೆ ಹೆಚ್ಚು ಯೋಚಿಸದಂತೆ ಮಾಡಿದ್ದು ಗರ್ಭದೊಳಗೆ ಕೈಕಾಲು ಮೂಡಿಸಿಕೊಂಡು ಆಟವಾಡುತ್ತಿದ್ದ ಮಗು. ಮನೆಯಲ್ಲಿರಲಿ, ಕೆಲಸದಲ್ಲಿರಲಿ ನನ್ನ ಯೋಚನೆಯ ಬಹುಭಾಗವನ್ನು ಆವರಿಸಿಕೊಂಡಿದ್ದು ನನ್ನ ಮಗು. ಒಂದು ರಾತ್ರಿ ಮಲಗಿದ್ದ ಹೊತ್ತಿನಲ್ಲಿ ಹೊಟ್ಟೆಯ ಮೇಲೊಂದು ಬಲವಾದ ಏಟು ಬಿದ್ದಂತಾಯಿತು. ಇದೇನ್‌ ರಾಜೀವ್‌ ಯಾವತ್ತೂ ಹಿಂಗ್‌ ಒದೆಯದವರು ಇವತ್ತಿಂಗೆ ಅನ್ಕೊಂಡು ಅವರತ್ತ ತಿರುಗಿ ನೋಡಿದರೆ ಅವರು ನನ್ನ ಕಡೆಗೆ ಬೆನ್ನು ಮಾಡಿಕೊಂಡು ಮಲಗಿದ್ದಾರೆ, ಗೊರಕೆಯ ಸದ್ದು ಜೋರು ಕೇಳ್ತಿದೆ. ಏನೋ ಕನಸು ಬಿದ್ದಿರಬೇಕು ಎಂದುಕೊಂಡು ಮತ್ತೆ ನಿದ್ರೆಗೆ ಜಾರುವಷ್ಟರಲ್ಲಿ ಮತ್ತೊಂದು ಒದೆತ! ಓ ಇದು ಮಗೂದು ಅಂತ ಗೊತ್ತಾಗಿದ್ದೇ ಖುಷಿ ತಡೆಯಲಾಗಲಿಲ್ಲ. ರಾಜೀವನಿಗೆ ಬಲವಂತದಿಂದ ಎಬ್ಬಿಸಿ ವಿಷಯ ತಿಳಿಸಿದರೆ “ಬೆಳೆಯೋ ಮಗು ಒದೀದೆ ಇನ್ನೇನು? ಅದನ್‌ ಹೇಳೋಕ್‌ ನಿದ್ರೆಯಿಂದ ಎಬ್ಬಿಸಬೇಕಿತ್ತಾ” ಎಂದು ಬಯ್ದು ತಿರುಗಿ ಮಲಗಿದರು. ಸಾಗರನಿಗೆ ಮೆಸೇಜಿಸೋಣವೆಂದು ಫೋನ್‌ ಕೈಗೆತ್ತಿಕೊಂಡು ಟೈಪು ಮಾಡಿ ಸೆಂಡ್‌ ಬಟನ್‌ ಒತ್ತದೆ ಡಿಲೀಟ್‌ ಮಾಡಿ ಮಲಗಿದೆ. ಇವೆಲ್ಲ ಹಿಂಗಿಂಗೇ ನಡೀತದೆ ಅಂತ ಮೆಡಿಕಲ್‌ ಅಲ್ಲಿ ಓದಿದ್ರೂ ಮನದಲ್ಲಿ ಪುಳಕ ಮೂಡದೇ ಇರಲಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಡಿ.ಎನ್.ಬಿ ತ್ರಾಸದಾಯಕವೆನಿಸುತ್ತಿರಲಿಲ್ಲ, ಪ್ರೆಗ್ನೆಂಟ್‌ ಅಂತ ಅಲ್ಲಿರೋರಿಗೆಲ್ಲ ಗೊತ್ತೇ ಇತ್ತಲ್ಲ. ತುಂಬಾ ಓಡಾಟದ ಕೆಲಸಗಳನ್ನೇಳುತ್ತಿರಲಿಲ್ಲ. ಜೊತೆಗಿದ್ದ ವಿದ್ಯಾರ್ಥಿಗಳೂ ಪಾಪ ನನ್ನ ಕೆಲಸವನ್ನು ಅವರೇ ಮಾಡುತ್ತಾ ಸುಧಾರಿಸಿಕೊಳ್ಳಲು ಪುರುಸೊತ್ತು ಮಾಡಿಕೊಡುತ್ತಿದ್ದರು. ಸೆಮಿನಾರು ಜರ್ನಲ್‌ ಕ್ಲಬ್ಬು ಕೂಡ ನನಗೆ ಬರುವುದು ಕಡಿಮೆ ಮಾಡಿದ್ದರು. ಬಿಪಿ ಶುಗರ್ರು ಸರಿಯಿತ್ತು, ಮಗುವಿನ ಬೆಳವಣಿಗೆಯಲ್ಲಿ ವ್ಯತ್ಯಯವಿರಲಿಲ್ಲ. ಇದ್ದ ಸಮಸ್ಯೆಯೆಂದರೆ ಮನೆಯಲ್ಲಿ ಅಡುಗೆ ಮಾಡಿ ಪಾತ್ರೆ ತೊಳೆದು ಕಸ ಗುಡಿಸಿ ಒರೆಸುವುದು. ಇದ್ದ ಮನೆ ಚಿಕ್ಕದು, ಇಷ್ಟು ಚಿಕ್ಕ ಮನೆಗೆ ಕೆಲಸಕ್ಕಿಟ್ಟುಕೊಳ್ಳಬೇಕಾ ಎನ್ನಿಸುತ್ತಿತ್ತು, ಜೊತೆಗೆ ನಾವಿದ್ದ ಏರಿಯಾದಲ್ಲಿ ಮನೆಗೆ ಕೆಲಸಕ್ಕೆ ಬರುವವರು ಸಿಗುವುದೂ ಕಡಿಮೆ. ಇಲ್ಲಿಗೇ ಬಂದುಬಿಡಿ, ಡೆಲಿವರಿ ಮುಗಿಸಿ ಬಾಣಂತನ ಮುಗಿಸಿದ ಮೇಲೆ ಹೋಗುವಿರಂತೆ ಎಂದು ಅಪ್ಪನದು ಒಂದೇ ವರಾತ. ಅಮ್ಮ ಅಪ್ಪನಷ್ಟು ಬಲವಂತ ಮಾಡುತ್ತಿರಲಿಲ್ಲವಾದರೂ ಇಲ್ಲೇ ಬಂದಿರಲಿ ಎಂದವರಿಗೂ ಇತ್ತು. ರಾಜೀವ ಒಪ್ಪುತ್ತಿರಲಿಲ್ಲ. ಮನೆ ಅಳಿಯನಂತೆ ಅಲ್ಲಿರೋದಾ? ನನಗಂತೂ ಸುತಾರಾಂ ಇಷ್ಟವಿಲ್ಲಪ್ಪ ಎಂದುಬಿಡುತ್ತಿದ್ದರು. ಹೋಕ್ಕೊಳ್ಳಲಿ ಅಲ್ಲಿಗೆ ಹೋಗದಿದ್ದರೆ ಅಷ್ಟೇ ಹೋಯ್ತು, ಇಲ್ಲಾದ್ರೂ ಸ್ವಲ್ಪ ಅಡುಗೆ ಮಾಡೋಕೆ ಮನೆ ಕ್ಲೀನ್‌ ಮಾಡೋಕೆ ಸಹಾಯ ಮಾಡಿ ಎಂದರೆ ಬ್ಬೆ ಬ್ಬೆ ಬ್ಬೆ ಎಂದ್ಹೇಳಿ ಮಾತು ತೇಲಿಸಿಬಿಡುತ್ತಿದ್ದರು. ಡೆಲಿವರಿ ದಿನಕ್ಕಿನ್ನೂ ಮೂರು ತಿಂಗಳಿದೆ. ನಿಧಾನಕ್ಕೆ ಬೆಳೆಯುತ್ತಿದ್ದ ಮಗು ಇದ್ದಕ್ಕಿದ್ದಂತೆ ಪಟಪಟ ಅಂತ ಬೆಳೆಯಲು ಶುರುಮಾಡಿಬಿಟ್ಟಿತೋ ಎನ್ನುವಂತೆ ಹೊಟ್ಟೆ ಊದಿಕೊಳ್ಳತೊಡಗಿತು. ಇದೇನ್‌ ನಿಜಕ್ಕೂ ಮಗುವಿನ ಬೆಳವಣಿಗೆಯಿಂದಾಗ್ತಿದೆಯೋ ಅಥವಾ ಯಾವುದಾದರೂ ಖಾಯಿಲೆಯೋ ಅಂತ ಅನುಮಾನ ಪಡುವಷ್ಟು ವೇಗವಾಗಿ ಹೊಟ್ಟೆ ಉಬ್ಬರಿಸಿತು. ದೊಡ್ಡ ಹೊಟ್ಟೆಯಿಟ್ಟುಕೊಂಡು ಕೆಲಸ ಮಾಡುವುದು ಅಸಾಧ್ಯವೇ ಆಗಿ ಹೋಯಿತು. ಒಂದು ದಿನ ಮನೆ ಕಸ ಗುಡಿಸಿ ಎತ್ತಿ ಹಾಕಲು ಕೆಳಗೆ ಬಗ್ಗಿದವಳಿಗೆ ಮೇಲೇಳುವುದೇ ಕಷ್ಟದ ಕೆಲಸದಂತಾಗಿ ಅಳುವೇ ಬಂದುಬಿಟ್ಟಿತು. ರಾಜೀವನಿಗೂ ನನ್ನ ಪರಿಸ್ಥಿತಿ ನೋಡಿ ಬೇಸರವಾಯಿತು. “ನಿಮ್ಮಪ್ಪನ ಮನೆಗೇ ಹೋಗಿ ಇದ್ದು ಬಿಡೋದು ಬೇಡ ಧರಣಿ. ಅಲ್ಲೇ ಹತ್ತಿರದಲ್ಲಿ ಮನೆ ನೋಡ್ತೀನಿ. ನಿನಗೂ ಅನುಕೂಲವಾದಂಗಾಗ್ತದೆ, ನನಗೂ ಮುಜುಗರವಿರಲ್ಲ” ಎಂದು ಹೇಳಿದರು. ಹೇಳಿದವರು ಅವತ್ತು ಸಂಜೆಯೇ ಮನೆಯೊಂದನ್ನು ನೋಡಿ, ನಮ್ಮಪ್ಪನಿಗೂ ತೋರಿಸಿ ಟೋಕನ್‌ ಅಡ್ವಾನ್ಸ್‌ ಕೊಟ್ಟು ಬಂದರು. ಅಪ್ಪ ದುಮುದುಮು ಅನ್ನುತ್ತಿದ್ದರಂತೆ, ನಮ್ಮ ಮನೆಯೇ ಇರುವಾಗ ಬಾಡಿಗೆ ಮನೆ ಯಾಕೆ ಎಂದು. 

ನಮ್ಮ ಆಸ್ಪತ್ರೆಯಲ್ಲಿ ಸೇರಿದ್ದ ಸಂಬಂಧಿಕರೊಬ್ಬರ ಬಗ್ಗೆ ವಿಚಾರಿಸಲು ಸಾಗರ ಫೋನ್‌ ಮಾಡಿದ್ದ. ಬಹಳ ದಿನಗಳ ನಂತರ ಅವನ ಜೊತೆಯೊಂದಷ್ಟು ಮಾತನಾಡಿದೆ. ಹಿಂಗಿಂಗೆ ಮನೆ ಬದಲಿಸುತ್ತಿದ್ದೀವಿ, ಅಪ್ಪನ ಮನೆ ಹತ್ತಿರಕ್ಕೆ ಎಂದು ಹೇಳಿದೆ. ಫೋನಿಟ್ಟ ಮೇಲೆ ಮೆಸೇಜು ಮಾಡಿದ “ಲೇ ಧರು. ನೀವಿಗಿರೋ ಮನೇಲಿ ಹತ್ತಲವು ನೆನಪುಗಳಿವೆ. ನೀವು ಮನೆ ಬಿಟ್ಟೋಗೋಕೆ ಮುಂಚೆ ಒಂದ್ಸಲ ಬರ್ಲಾ….” ನನಗೂ ಆ ಪುಟ್ಟ ಮನೆಯಲ್ಲಿ ಸಾಗರನ ಸಾಗರದಷ್ಟು ನೆನಪುಗಳಿದ್ದವು. ಅವನೊಡನೆ ಇನ್ನೊಮ್ಮೆ ಅದೇ ಮನೆಯಲ್ಲಿ ಬೆತ್ತಲಾಗಿ ತಬ್ಬಿ ಮಲಗೋಕೆ ಆಸೆಯಾಯಿತು. ʼಯಾವುದಕ್ಕೂ ಹೇಳ್ತೀನೋ. ಯಾವತ್ ಶಿಫ್ಟ್‌ ಮಾಡ್ತಾರೋ ಏನೋ ಗೊತ್ತಿಲ್ಲ. ಇವತ್‌ ವಿಚಾರಿಸಿ ನಾಳೆ ಹೇಳ್ತೀನಿʼ ಎಂದು ಹೇಳಿದೆ, ಇನ್ನತ್ತು ದಿನದ ಮೇಲೇ ಮನೆ ಬದಲಿಸೋದು ಎಂದು ಕರಾರುವಕ್ಕಾಗಿ ಗೊತ್ತಿತ್ತು ನನಗೆ. ಸಾಗರನಿಗೆ ಹೇಳಲಿಲ್ಲವಷ್ಟೇ. ನನ್ನ ಸುಳ್ಳು ಸಾಗರನಿಗೂ ಗೊತ್ತಾಯಿತಾ? 

“ವಿಚಾರಿಸಿ ಹೇಳ್ತೀನಿ ಎಂದಿದ್ದೆ” ಮಾರನೇ ದಿನ ಸಂಜೆಗೆ ಮೆಸೇಜು ಕಳಿಸಿದ್ದ ಸಾಗರ. ನನಗಾ ವಿಷಯವೇ ನೆನಪಿನಲ್ಲಿರಲಿಲ್ಲ. ʼಓ ಸಾರಿ. ಮರೆತುಬಿಟ್ಟೆ. ವಿಚಾರಿಸಿದೆ. ನಾಳೇನೇ ಶಿಫ್ಟ್‌ ಮಾಡ್ತಿದ್ದೀವಿ. ಓನರ್‌ ಬೇಗಾ ಖಾಲಿ ಮಾಡಿದ್ರೂ ಪರವಾಗಿಲ್ಲ ಅಂದರು. ನಮಗೂ ಇಲ್ಲೀದು ಅಲ್ಲೀದು ಎರಡ್ರೂದು ಬಾಡಿಗೆ ಕಟ್ಟೋದು ತಪ್ತದಲ್ಲʼ ಎಂದು ಆ ಕ್ಷಣಕ್ಕೆ ಹೊಳೆದ ಸುಳ್ಳೇಳಿದೆ. 

“ಓಕೆ!” ಎಂದವನ ಮೆಸೇಜಿನಲ್ಲಿ ಅನುಮಾನದ ನೆರಳಿತ್ತು. ಒಂದಷ್ಟು ಹೊತ್ತು ಕಳೆದ ನಂತರ “ನಮ್ಮಿಬ್ಬರ ಮಧ್ಯೆ ಸ್ನೇಹವಷ್ಟೇ ಇದ್ದರೂ ನನಗೇನೂ ಅಭ್ಯಂತರವಿರಲಿಲ್ಲ ಧರು. ಆತ್ಮಸಂಗಾತ ಅಂದ್ಕೊಂಡು ಸಂಬಂಧಕ್ಕೆ ಮತ್ತೊಂದು ಮಗದೊಂದು ಅರ್ಥ ಕೊಟ್ಕಂಡು ಇನ್ನೀ ಜನುಮದಲ್ಲಿ ನಾವಿಬ್ಬರೂ ದೂರಾಗುವುದಿಲ್ಲ ಅಂತೆಲ್ಲ ಭಾವ ತುಂಬಿಸಿಕೊಂಡು ಈಗ ಕಾರಣವೇ ಇಲ್ಲದೇ ನನ್ನನ್ನು ಅವಾಯ್ಡ್‌ ಮಾಡ್ವಂತ ದಿನ ಬರ್ತದೆ, ಇಷ್ಟು ಬೇಗ ಬರ್ತದೆ ಅಂತ ನಾನೆಣಿಸಿರಲಿಲ್ಲ. ಅಂದಾಗೆ ನಿನ್ನ ಭೇಟಿಯಾಗಿ ಸೆಕ್ಸ್‌ ಮಾಡಬೇಕಿತ್ತು, ನಿನ್ನೊಡನೆ ಬೆತ್ತಲಾಗಿ ತಬ್ಬಿ ಮಲಗೋಕೆ ನಾ ಬರೋನಿದ್ದೆ ಅಂತೆಲ್ಲ ಚೀಪಾಗಿ ನನ್ನ ಬಗ್ಗೆ ಅಂದುಕೊಂಡಿರಲ್ಲ ಅಂತ ನಂಬಿದ್ದೀನಿ. ನನ್ನನ್ನು ನೀ ಎಷ್ಟೇ ದೂರ ತಳ್ಳಿದ್ರೂ ನಾ ನಿನ್ನ ಆತ್ಮಸಂಗಾತಿಯೇ ಹೌದು ಎನ್ನುವುದನ್ನು ನೀ ಮರೆತಂತಿದೆ. ಸಿಗೋಕಾಗಲ್ವೋ ಅಂದಿದ್ರೂ ಬೇಸರವಿರಲಿಲ್ಲ. ಸುಳ್ಳಾಡುವಂತಹ ಅನಿವಾರ್ಯತೆಯೇನೂ ಇರಲಿಲ್ಲ” ಬಂದ ಅವನ ಮೆಸೇಜು ನೋಡಿ ಒಮ್ಮೆ ನಿಟ್ಟುಸಿರುಬಿಟ್ಟು ಡಿಲೀಟು ಮಾಡಿದೆ. ನನ್ನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲವಾಗಿ ಅವನೇ ಮತ್ತೊಂದು ಮೆಸೇಜು ಕಳುಹಿಸಿದ “ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲಿ ನೀ ತುಂಬಾ ವೀಕು. You don’t know how to maintain relationships. ಕೊನೆ ಪಕ್ಷ ರಾಜೀವನ ಜೊತೆಗೆ, ನಾಳೆ ದಿನ ಹುಟ್ಟೋ ಮಗುವಿನ ಜೊತೆಗೆ ಕೊನೆಯವರೆಗೂ ಒಂದೊಳ್ಳೆ ಸಂಬಂಧ ಇಟ್ಟುಕೋ. ಬಾಯ್”‌. ಅವನ ಮನಸ್ಸಲ್ಲಿ ಏನೆಲ್ಲ ಓಡ್ತಿರಬಹುದು. ಕೇಳುವ ತಾಳ್ಮೆಯಾಗಲಿ ಆಸಕ್ತಿಯಾಗಲಿ ನನ್ನಲ್ಲಿರಲಿಲ್ಲ. 
* * *
ಹೊಸ ಮನೆಗೆ ಬಂದ ಮೇಲೆ ಹೊಸ ಹೊಸ ತಾಪತ್ರಯಗಳು. ಅಮ್ಮನ ಮನೆಯಲ್ಲೇ ಊಟ ತಿಂಡಿ ನಡೆಯುತ್ತಿತ್ತು. ಕೆಲವೊಮ್ಮೆ ಅಲ್ಲೇ ತಿಂದು ಬರುತ್ತಿದ್ದೊ, ಇನ್ನೂ ಕೆಲವು ಸಲ – ರಾಜೀವನಿಗೆ ಅಲ್ಲಿಗೆ ಬರಲು ಮನಸ್ಸಿಲ್ಲದ ದಿನಗಳಲ್ಲಿ ನಾ ಅಲ್ಲೇ ಊಟ ಮಾಡಿ ಇವರಿಗೆ ಡಬ್ಬಿಗೆ ಹಾಕಿಕೊಂಡು ಬರುತ್ತಿದ್ದೆ. ತಮ್ಮನ ಮದುವೆಗೇನೋ ಎಲ್ಲರೂ ಒಪ್ಪಿದ್ದರು, ಅಥವಾ ಕೊನೇಪಕ್ಷ ಒಪ್ಪಿದಂತೆ ನಟಿಸಿದ್ದರು. ಮದುವೆ ದಿನಾಂಕ ಗೊತ್ತಾಗಿದ್ದು ನನ್ನ ಡೆಲಿವರಿಯ ದಿನಗಳ ಹಿಂಚುಮುಂಚಿನಲ್ಲೇ. ಆ ದಿನಾಂಕ ಬಿಟ್ಟರೆ ಇನ್ನು ಮೂರು ತಿಂಗಳು ಯಾವುದೇ ಒಳ್ಳೆ ದಿನವಿಲ್ಲ ಎಂದಿದ್ದರಂತೆ. ಮಗಳ ಡೆಲಿವರಿಯ ಗಡಿಬಿಡಿಯಲ್ಲಿ ಮಗನ ಮದುವೆ ಮಾಡುವ ತರಾತುರಿಯಲ್ಲಿ ನಮ್ಮ ಮನೆಯವರಿರಲಿಲ್ಲ. ಮದುವೆ ಗೊತ್ತಾಗಿರೋದೇ ಉಂಟಂತೆ ಇನ್ನೊಂದು ಮೂರು ತಿಂಗಳು ಮುಂದಕ್ಕೋದರೆ ತಾಪತ್ರಯವೇನಿಲ್ಲ ಎಂದುಕೊಂಡು ಸೋನಿಯಾ ಮನೆಯವರೂ ಸುಮ್ಮನಾಗಿದ್ದರು. ಶಾಸ್ತ್ರಕ್ಕೆಂದು ಮನೆಯಲ್ಲೇ ಹೂ ಮುಡಿಸೋ ಶಾಸ್ತ್ರ ಮಾಡಿ ಮುಗಿಸಿದ್ದೆವು. ಡೆಲಿವರಿಗೆ ಇನ್ನೊಂದು ತಿಂಗಳಿದೆ ಎನ್ನುವಾಗಿಂದ ರಾಜೀವನ ವರಾತ ಹೆಚ್ಚಾಗಲಾರಂಭಿಸಿತು. ಮಗು ಬೇಕಿತ್ತಾ ಅನ್ನೋ ಪ್ರಶ್ನೆ ಮುಂಚೆ ಅಪರೂಪಕ್ಕೊಮ್ಮೆ ಬರೋದಷ್ಟೇ, ಈಗದು ದಿನದ ಮಾತಿನಲ್ಲಿ ಹೆಚ್ಚಿನ ಸಲ ಬಂದು ಹೋಗುತ್ತಿತ್ತು. ʼಹೋಗ್ಲಿ ಬಿಡ್ರಿ. ಈಗಿನ್ನು ಸಮಯವೂ ಮೀರಿ ಹೋಗಿದೆ. ಅಬಾರ್ಷನ್‌ ಕೂಡ ಮಾಡ್ಸೋಕಾಗಲ್ಲʼ ಎಂದು ನಾ ಬೇಸತ್ತು ಹೇಳಿದರೂ ಅವರ ಅಸಮಾಧಾನ ತಣಿಯುತ್ತಿರಲಿಲ್ಲ. ಮಗು – ಅದರ ಜವಾಬ್ದಾರಿ – ಬಟ್ಟೆ ಬರೆ - ಮನೆ ಖರ್ಚು – ಮಗುವಿನ ಓದು……. ಬೆಳಿಗ್ಗೆ ಅಂತಿಲ್ಲ, ಸಂಜೆ ಅಂತಿಲ್ಲ, ರಾತ್ರಿ ಅಂತಿಲ್ಲ ರಾಜೀವನದು ಇದೇ ವರಾತ. ದುಡೀತಾ ಇದ್ದೀವಲ್ಲ, ಮಗು ಓದಿಸೋಕಾಗದಷ್ಟೇನೂ ಅಸಹಾಯಕ ಸ್ಥಿತಿಯಲ್ಲಿ ನಾವಿಲ್ಲ ಸುಮ್ನಿರಿ ಎಂದು ಹೇಳಿ ಹೇಳಿ ನನಗೆ ರೋಸತ್ತು ಹೋಗಿತ್ತು. “ಲೈಫ್‌ ಲಾಂಗ್‌ ನಾವು ಮಿಡಿಲ್‌ ಕ್ಲಾಸ್‌ ಆಗೇ ಉಳ್ಕೊಂಡು ಸತ್ತೋಗಬೇಕಾ?” ಎಂಬ ಪ್ರಶ್ನೆಗೆ ಏನು ಉತ್ತರ ಕೊಡುವುದೆಂದು ನನಗೆ ತೋಚುತ್ತಿರಲಿಲ್ಲ. ನಮ್ಮಕ್ಕ ಆ ಕಾರ್‌ ತಗಂಡ್ರು, ಇನ್ನೊಬ್ಬ ಕಸಿನ್ನು ಮತ್ತೊಂದು ಸೈಟು ತಗಂಡ ಅಂತ ಮೂರೊತ್ತು ಗೋಳು ಹೇಳಿಕೊಳ್ಳುತ್ತಿದ್ದರು. ನಮಗೂ ಸಮಯ ಬರುತ್ತೆ ಎಂದರೆ “ಏನು ಸಮಯಾನೋ ಏನೋ. ನಿನ್ನ ಕಟ್ಕಂಡಿದ್ದೇ ಬಂತು ನನ್ನ ಒಳ್ಳೆ ದಿನಗಳೆಲ್ಲ ಮುಗಿದೇ ಹೋದವು. ಮನೆಯಿಂದ ದೂರಾದೆ. ಮನೆಯವರಿಂದ ದೂರಾದೆ. ಅಂಥ ಐಷಾರಾಮಿ ಬಂಗಲೆ ಬಿಟ್ಟು ಇಂಥ ದರಿದ್ರ ಬಾಡಿಗೆ ಮನೆಯಲ್ಲಿ ಇರೋ ಪರಿಸ್ಥಿತಿಗೆ ಈಡಾದೆ. ಇನ್ ನಿನಗೆ ಹುಟ್ಟೋ ಮಗ ಅದೇನ್‌ ದುರದೃಷ್ಟ ಹೊತ್ಕಂಡ್‌ ಬರ್ತದೋ ಏನೋ" ನನಗೆ ಏನಾದರೂ ಹೇಳಿಕೊಂಡು ಹಾಳಾಗಲಿ, ಇನ್ನೂ ಹುಟ್ಟದಿರೋ ಮಗು ಬಗ್ಗೆ ಬೇಡದ ಮಾತುಗಳನ್ನಾಡಿದಾಗ ಕಣ್ಣಂಚಿನಲ್ಲೊಂದಷ್ಟು ನೀರಾಡುತ್ತಿತ್ತೇ ಹೊರತು ನಾಲಿಗೆ ಹೊರಳುತ್ತಿರಲಿಲ್ಲ. ಎದ್ದು ಹೊರಟುಬಿಡುತ್ತಿದ್ದರು. ಇನ್ನೇನು ಡೆಲಿವರಿ ದಿನಕ್ಕೆ ಕಾಯ್ತಿರೋ ಹೆಂಡತಿಯ ಕಣ್ಣಲ್ಲಿ ನೀರಾಡ್ತಿದೆ, ನನ್ನ ಬೇಡದ ಮಾತುಗಳಿಂದ, ರವಷ್ಟು ಸಮಾಧಾನ ಮಾಡುವ, ಈ ಸಮಯದಲ್ಲಿವಳಿಗೆ ಮಾನಸಿಕ ಹಿಂಸೆ ಕೊಡುವುದು ತರವಲ್ಲ ಅನ್ನೋ ಯೋಚನೆಯೇ ಈ ಗಂಡನಿಗೆ ಬರುವುದಿಲ್ಲವಲ್ಲ? ಎಷ್ಟೋ ವರ್ಷದಿಂದ ಕಾಪಿಟ್ಟುಕೊಂಡು ಬಂದ ಪ್ರೀತಿಯನ್ನು ಇನ್ನೆಷ್ಟೋ ವರ್ಷಗಳ ತರುವಾಯ ತೋಡಿಕೊಂಡು ಮದುವೆಯಾದವರು ಇಷ್ಟೊಂದು ಬದಲಾಗಿದ್ದಾದರೂ ಯಾಕೆ? ಸಾಗರ ಹೇಳುವಂತೆ ಇದರಲ್ಲೂ ನನ್ನ ವ್ಯಕ್ತಿತ್ವದ್ದೇ ದೋಷವಿದೆಯಾ? You don’t know how to maintain relationships ಅಂತ ಅದೆಷ್ಟು ಸರಾಗವಾಗಿ ಹೇಳಿಬಿಡ್ತಾನವನು. ಒಮ್ಮೆ ಮಾತ್ರ ಅಲ್ಲ, ಬಹಳಷ್ಟು ಸಲ ಹೇಳಿದ್ದಾನೆ. ಒಪ್ಕೋತೀನಿ, ಅವನನ್ನು ಬೇಕಂತಲೇ ದೂರ ತಳ್ಳಿದ್ಧೀನಿ, ಸತ್ಯ. ರಾಜೀವನ ವಿಷಯದಲ್ಲಿ ನನ್ನ ತಪ್ಪೆಲ್ಲಿದೆ? ಪರಶುವಿನ ವಿಷಯದಲ್ಲಿ ನನ್ನ ತಪ್ಪೆಲ್ಲಿತ್ತು? ಅಥವಾ ನನಗೇ ತಿಳಿಯದಂತೆ ತಪ್ಪು ಮಾಡಿ ನನ್ನಿಂದ ದೂರಾಗುವಂತೆ ಮಾಡಿಬಿಡುತ್ತೀನಾ? “ಅಷ್ಟೆಲ್ಲ ಯೋಚಿಸಬೇಡಮ್ಮ” ಎಂದು ನಗಾಡುತ್ತಾ ಹೊಟ್ಟೆಯೊಳಗೆ ಕುಲುಕುಲು ಓಡಾಡಿತು ಮಗು. ಎಂಟು ತಿಂಗಳಾಗೇ ಹೋಯ್ತಲ್ಲ! ಕಷ್ಟಪಟ್ಟು ಬೆಳೆಸಿಕೊಂಡ ಗರ್ಭ. ಮೊದಲ ಮೂರು ತಿಂಗಳಂತೂ ಇವತ್‌ ಅಬಾರ್ಷನ್‌ ಆಗೋಗುತ್ತ? ಈಗ ಅಬಾರ್ಷನ್‌ ಆಗೋಗುತ್ತ? ಈ ಹಣ್ಣು ತಿಂದರೆ ಪರವಾಗಿಲ್ಲವಾ? ಅನ್ನ ಇಷ್ಟು ತಿನ್ನಬಹುದಾ? ಮಾಂಸ ತಿಂದರೆ ತೊಂದರೆಯಿಲ್ವಾ? ಯಾವ ತರಕಾರಿ ತಿಂದರೆ ಮಗುವಿಗೆ ಅಪಾಯ? ಬರೀ ಇಂತವೇ ಯೋಚನೆಗಳು. ಗರ್ಭದೊಳಗೆ ಮಗು ಪೂರ್ಣವಾಗಿ ಬೆಳೆದು ಹುಟ್ಟಬಲ್ಲದು ಎಂಬ ವಿಶ್ವಾಸವೇ ನನ್ನಲ್ಲಿರಲಿಲ್ಲ. ಮೂರು ತಿಂಗಳು ಕಳೆದ ಮೇಲೆ ಪ್ರತಿ ಸ್ಕ್ಯಾನಿಗೆ ಹೋದಾಗಲೂ ಮಗುವಿನ ಇಂತ ಭಾಗದಲ್ಲಿ ತೊಂದರೆ ಇದೆ – ಮಗು ಉಳಿಯಲಿಕ್ಕಿಲ್ಲ – ಉಳಿದು ಹುಟ್ಟಿದರೂ ಎರಡು ದಿನದ ಮಾತಷ್ಟೇ – ತೆಗೆಸಿಬಿಡಿ – ಮಗುವಿನ ಬೆಳವಣಿಗೆ ಸರಿಯಿಲ್ಲ – ಹೃದಯ ನಿಂತೋಗಿದೆ – ಮಿದುಳು ಬೆಳೆದೇ ಇಲ್ಲ….. ಇಂತವೇ ಮಾತುಗಳನ್ನೇಳಿ ಬಿಡುತ್ತಾರೇನೋ ಸ್ಕ್ಯಾನ್‌ ಮಾಡಿದ ಮೇಲೆ ಎಂಬ ನಿರಂತರ ಭಯ. ಏಳು ತಿಂಗಳು ಕಳೆದ ಮೇಲೆ ಒಂದಷ್ಟು ಉಸಿರಾಟ ಮರಳಿ ಬಂತು. ಆದರೂ ಸ್ಕ್ಯಾನಿಗೆ ಗೊತ್ತಾಗದಂತಹ ಯಾವುದಾದರೂ ತೊಂದರೆ ಇದ್ದುಬಿಟ್ಟರೆ? ಎಂಬ ಭಯ. ಅಮ್ಮನಿಗೆ ಒಮ್ಮೆ ಹೀಗೀಗೆ ಏನೇನೋ ಯೋಚನೆ ಎಂದು ಹೇಳಿಕೊಂಡಿದ್ದೆ, ನಾನವರ ಗರ್ಭದಲ್ಲಿದ್ದಾಗ ಅವರಿಗೂ ಈ ತರದ್ದೇ ಯೋಚನೆಗಳೇನಾದರೂ ಬಂದಿದ್ದಿರಬಹುದು, ಅದಕ್ಕವರ ಬಳಿ ಪರಿಹಾರವಿರಬಹುದೇನೋ ಎಂಬ ಆಸೆಯಿಂದ. “ಅಯ್ಯೋ ನಿನ್ನ. ಡಾಕ್ಟರಾಗಿ ಏನೇ ನಿನ್ನ ಗೋಳು” ಎಂದು ನಗಾಡಿ ಬಿಟ್ಟ ಮೇಲೆ ಮತ್ತೆ ಅವರ ಬಳಿ ಹೇಳಿಕೊಳ್ಳುವುದಕ್ಕೆ ಹೋಗಲಿಲ್ಲ. ಇಬ್ಬರು ಮಕ್ಕಳನ್ನು ಹೆತ್ತು ಹೊತ್ತ ಅಮ್ಮನೇ ಈ ರೀತಿ ಹೇಳಿದ ಮೇಲೆ ಅಪ್ಪನ ಬಳಿ ಹೇಳಿಕೊಳ್ಳುವ ಮನಸ್ಸಾಗಲಿಲ್ಲ. ಇವರ ಬಳಿ ಹೇಳಿಕೊಳ್ಳೋಣ ಎಂದುಕೊಂಡರೆ ʼಆ ದರಿದ್ರದ ಮಗು ನಮಗ್ಯಾಕೆ ಬೇಕಿತ್ತುʼ ಎಂದುಬಿಡುತ್ತಾರೇನೋ ಎನ್ನುವ ಭಯ. ಆದಷ್ಟು ಒಬ್ಬೊಬ್ಬಳೇ ಸಮಾಧಾನಿಸಿಕೊಳ್ಳುತ್ತಿದ್ದೆ. ತೀರ ತಡೆಯಲಾಗುತ್ತಲೇ ಇಲ್ಲವೆಂದಾಗ ಸಾಗರನಿಗೆ ಮೆಸೇಜು ಮಾಡುತ್ತಿದ್ದೆ, ತಪ್ಪಿದರೆ ಫೋನು ಮಾಡುತ್ತಿದ್ದೆ. ನನ್ನ ಮೇಲೆ ಅದೆಷ್ಟೇ ಬೇಸರವಿದ್ದರೂ ಸಮಾಧಾನಿಸುವಾಗ ಮಾತ್ರ ನನ್ನ ಮುದ್ದು ಬಂಗಾರವೇ ಅವನು. ಅವನು ಹೇಳೋ ಹಾಗೆ ನಾ ಅವನನ್ನು ನನ್ನ ಅಗತ್ಯಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದೀನೇನೋ ಎನ್ನುವಂಶ ಅಪರೂಪಕ್ಕೆ ನೆನಪಿಗೆ ಬರುತ್ತಿತ್ತು. ದಿನಕ್ಕೊಂದೋ ಎರಡೋ ಮೆಸೇಜು ವಿನಿಮಯವಂತೂ ಇಬ್ಬರ ಮಧ್ಯೆ ಜಾರಿಯಲ್ಲಿತ್ತು, ಮೊನ್ನೆಯವರೆಗೆ. ಮೊನ್ನೆ ಅವನ್ಯಾಕೋ ಎಂದಿನಂತೆ ಮಾತನಾಡಲಿಲ್ಲ. ತೀರ ಅಷ್ಟೆಲ್ಲ ಅವನು ಯಾವ ವಿಷಯಕ್ಕೂ ಬಲವಂತ ಮಾಡಿದ್ದೂ ನನಗೆ ನೆನಪಿಲ್ಲ. 

ʼಇನ್ನೊಂದು ತಿಂಗಳಿದೆ ಕಣೊ ಸರಿಯಾಗಿ ಇವತ್ತಿಗೆ. ತಿಂಗಳೊಳಗೇ ಆಗುವ ಸಾಧ್ಯತೆ ಹೆಚ್ಚಿದೆ ಅಂತ ಹೇಳಿದ್ದಾರೆʼ ಎಂದು ಮಾತಿನ ಮಧ್ಯೆ ಮೆಸೇಜು ಹಾಕಿದ್ದೆ. 

“ಧರಣಿ. ನನಗೆ ಗೊತ್ತು. ನೀ ನನ್ನ ಎಷ್ಟು ಸಾಧ್ಯವೋ ಅಷ್ಟೂ ಅವಾಯ್ಡ್‌ ಮಾಡ್ತಿದ್ದಿ ಅಂತ. ಆದರೂ ಒಂದ್‌ ವಿಷಯ ಕೇಳಬೇಕು ಅನ್ನಿಸ್ತಿದೆ" 

ʼಮ್.‌ ಕೇಳೋʼ 

“ಒಂದ್‌‌ ಸಲ ನಿನ್ನ ಭೇಟಿಯಾಗಬೇಕು ಅನ್ನಿಸ್ತಿದೆ ಕಣೇ” 

ʼಅಯ್ಯೋ ನಿನ್ನ! ಇಷ್ಟೇನಾ! ಅದರಲ್ಲೇನಿದೆ ಬಾ. ನಾನಂತೂ ಈಗ ಅಮ್ಮನ ಮನೇಲೇ ಕಾಯಂ ಗಿರಾಕಿ. ಇನ್ನೇನು ನಾಳೆಯಿಂದ ಒಂಭತ್ತನೇ ತಿಂಗಳಿಗೆ ಬಿತ್ತಲ್ಲ. ಅಷ್ಟು ದಿನದಿಂದ ನಾ ಏನು ಬದ್ಕಿದ್ದೀನೋ ಸತ್ತಿದ್ದೀನೋ ಅಂತಾನೂ ವಿಚಾರಿಸಿಕೊಳ್ಳದ ರಾಜೀವನ ಮನೆಯವರು ಅವರ ಬಂಗಲೆಗೆ ಕರೆದುಕೊಂಡು ಹೋಗಿ ಸೀಮಂತ ಮಾಡಿ ಕಳಿಸ್ತಾರಂತೆ. ಅಮ್ಮನ ಮನೆಯಿಂದ ಗಂಡನ ತವರಿಗೋಗಿ ಅಲ್ಲೇ ಅಷ್ಟು ದಿವಸದಿಂದ ಇದ್ದವಳಂತೆ ಪೂಜೆ ಮಾಡಿಸಿಕೊಂಡು ಮತ್ತೆ ಅಮ್ಮನ ಮನೆಗೆ ಬರುವ ಕರ್ಮ ನನ್ನದು! ಅದೊಂದ್‌ ದಿನ ಬಿಟ್ಟರೆ ನೀ ಯಾವಾಗ ಬಂದ್ರೂ ಪುರುಸೊತ್ತಾಗೇ ಸಿಗ್ತೀನಿ ನೋಡುʼ 

“ಡ್ಯೂಟಿಗೆ ಹೋಗ್ತಿಲ್ವ ಈಗ?” 

ʼಹೋಗ್ತಿದ್ದೀನೋ. ಕೆಲಸದಲ್ಲೇ ಇದ್ದಿದ್ರೆ ರಜಾ ಹಾಕೋಬೋದಿತ್ತು. ಈಗ ಸ್ಟೂಡೆಂಟ್‌ ಅಲ್ವ, ಹೆಚ್ಚು ರಜೆ ಇರಲ್ಲ. ತಗಂಡ್ರು ಪರೀಕ್ಷೆ ಬರೀಬೇಕಾದರೆ ನನಗೇ ತೊಂದರೆʼ 

“ಹು. ಅದು ನಿಜ. ಧರು……” ಇವನನ್ನು ಎಷ್ಟೇ ದೂರ ಸರಿಸಿಬಿಡುವ ಎಂದುಕೊಂಡರೂ ಧರು ಅಂತ ರಾಗ ಎಳೆದಾಗ ಕರಗದೆ ಇರಲಾದೀತೇ…. 

ʼಹೇಳೋ ಚಿನ್ನುʼ 

“ನನಗೆ ನಿನ್ನ ನಿಮ್ಮಮ್ಮನ ಮನೆಯಲ್ಲಿ ಭೇಟಿಯಾಗೋಕೆ ಇಷ್ಟವಿಲ್ಲ. ನಾನೂ ನೀನೂ ಇಬ್ರೇ ಸಿಗಬೇಕು ಅಂತ ಮನ್ಸು ನನಗೆ” 

ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ. ʼಅದ್‌ ಕಷ್ಟ ಅಲ್ಲೋ. ನಾನಿಲ್ಲೇ ಇರ್ತೀನಲ್ವ. ಹೋಗ್ಲಿ ನಮ್‌ ಆಸ್ಪತ್ರೆಯ ಹತ್ರಾನೇ ಬಾ… ಅಲ್ಲೇ ಹತ್ರದಲ್ಲಿ ಕಾಫಿ ಶಾಪ್‌ ಇದೆ. ಅಲ್ಲೇ ಸಿಗುವʼ 

“ಹೇ ಹೋಗೇ. ಕಾಫಿ ಶಾಪಲ್‌ ನಾವಿಬ್ರೇ ಇರ್ತೀವಾ? ಅಲ್ಲಿಗ್‌ ಬಂದು ಎಲ್ರ ಮುಂದೆ ನಮ್‌ ಮಗೂಗೆ ಮುತ್ತಿಡೋಕಾಗ್ತದಾ?" 

ಅಯ್ಯೋ ಮುದ್ದು ಅಂತ ಮನಸಲ್ಲೇ ಅವನಿಗೆ ಮುದ್ದಿಸಿದೆ. ʼನಮ್‌ ಮನೇಲಿ ಸಿಗೋದ್‌ ಕಷ್ಟ ಕಣೋ. ಅಮ್ಮನ ಮನೆ ಹತ್ರಾನೇ ಇದೆ. ನಾನೊಬ್ಳೇ ಅಲ್ಲಿದ್ರೆ ಯಾಕಿವತ್ತು ಒಬ್ಳೇ ಅಂತ ಪ್ರಶ್ನೆ ಕೇಳ್ತಾರೆʼ 

“ಮ್.‌ ಹೋಗ್ಲಿ ಬಿಡು. ನಿನಗಿಷ್ಟ ಇಲ್ಲ ಸಿಗೋಕೆ ಅಂದ್ಕೋತೀನಿ" 

ʼಇಷ್ಟವಿಲ್ಲ ಅಂತ ಹೇಳಿದ್ನ? ನಮ್ಮಮ್ಮನ ಮನೆಯಲ್ಲೋ ಹೋಟೆಲ್ಲಲ್ಲೋ ಸಿಗೋದಿಕ್ಕೆ ಒಪ್ಪದೇ ಇರೋನು ನೀನು. ನಾನಲ್ಲʼ 

“ನೋಡ್‌ ಧರು.…. ನನಗೆ ನಿನ್ನನ್ನು ನಿನ್ನ ಮನೆಯಲ್ಲಿ ನೀ ಒಬ್ಬಳೇ ಇದ್ದಾಗ ಭೇಟಿಯಾಗಬೇಕಿದೆ. ಸೆಕ್ಸ್‌ ಮಾಡೋಕಲ್ಲ ಕಣವ್ವ. ನಿಂಗಿನ್ನೇನು ಡೆಲಿವರಿ ಆದ ಮೇಲೆ ಮಗುವಿನ ಜವಾಬ್ದಾರಿ ಮತ್ತೊಂದು ಮಗದೊಂದು ಅಂತ ಬ್ಯುಸಿ ಆಗೋಗ್ತಿ. ಆಗ ನಿನಗೆ ಬೇಕು ಅಂದ್ರೂ ಸಿಗೋಕಾಗಲ್ವಲ್ಲ. ಹೆಚ್ಚು ಕಡಿಮೆ ಇನ್ನು ಮೇಲೆ ನಾವಿಬ್ಬರೇ ಭೇಟಿಯಾಗೋದು ಅಸಾಧ್ಯದ ಮಾತು. ಯಾರಿಲ್ಲ ಅಂದ್ರು ನಮ್ಮ ಮಗಳಿದ್ದೇ ಇರ್ತಾಳಲ್ಲ ಜೊತೆಯಲ್ಲಿ” 

ʼಮ್‌ʼ 

“ಗೊತ್ತಾಯ್ತು ಬಿಡೆ. ನಿನ್ನ ಗೋಳು ಕೇಳೋಕ್‌ ನಿಂಗೊಂದ್‌ ಕಿವಿ ಬೇಕಿತ್ತು ಇಷ್ಟು ದಿನ. ನಾ ಸಿಕ್ಕಿದ್ದೆ. ನಿನ್ನ ದೈಹಿಕ ವಾಂಛೆಗಳನ್ನು ಪೂರೈಸಿಕೊಳ್ಳೋದಿಕ್ಕೆ ಒಬ್ಬ ಗಂಡು ಬೇಕಿತ್ತು. ನಾ ಸಿಕ್ಕಿದ್ದೆ, ಗಂಡು ಸೂಳೆ ಥರ ಬಳಸಿಕೊಂಡೆ ನನ್ನನ್ನು. ಇವಾಗಿನ್ನವುಗಳ ಅವಶ್ಯಕತೆ ಇಲ್ಲ. ಜೊತೆಗೆ ಹುಟ್ಟೋ ಮಗು ಕಣ್ಣಲ್ಲಿ ಚಿಕ್ಕವಳಾಗಿಬಿಟ್ಟರೆ ಅನ್ನೋ ಭಯ. ಅದಕ್ಕೆ ಹಿಂಗಾಡ್ತಿ. ತೊಂದರೆ ಇಲ್ಲ. ನಾ ಗಂಡು ಸೂಳೆಯಾಗಿ ಇವಳ ಬಳಿ ಹೋಗಿದ್ದೆ ಅಂತ ನನಗೆ ನಾನೇ ಸಮಾಧಾನ ಮಾಡ್ಕೋತೀನಿ. ಮುಂದ್ಯಾವತ್ತಾದರೂ ಸಿಕ್ಕಾಗ ಒಂದೊಂದು ಸಲಕ್ಕಿಷ್ಟು ಅಂತ ದುಡ್ಡೂ ಕೊಟ್ಬಿಡು. ಅಲ್ಲಿಗೆ ಈ ಆತ್ಮಸಂಗಾತಿ ಸೋಲ್‌ ಮೇಟು ಅಂತ ಆಡಿದ ನಾಟಕಗಳಿಗಾದರೂ ಒಂದು ತೆರೆ ಬಿಳುತ್ತೆ. Thanks for opting me as your prostitute” ಮೆಸೇಜು ಓದಿ ಸಾಗರ ಮತ್ತೊಬ್ಬ ಪುರುಷೋತ್ತಮನಾಗುತ್ತಿದ್ದಾನಾ ಅಂತ ನನಗೆ ದಿಗಿಲಾಯಿತು. ನಮ್ಮಿಬ್ಬರ ನಡುವಿನ ಮೆಸೇಜುಗಳನ್ನೆಲ್ಲ ಸೇವ್‌ ಮಾಡಿಕೊಂಡಿದ್ದು ಮೈಸೂರಿಗೆ ಬಂದು ರಾಜೀವನಿಗೆ ತೋರಿಸಿಬಿಡುತ್ತಾನಾ? ಪುಣ್ಯ, ನಾವೀಗಿರುವ ಮನೆ ಅವನಿಗೆ ಗೊತ್ತಿಲ್ಲ. ಆದರೆ ನಾ ಕೆಲಸ ಮಾಡುವ ಆಸ್ಪತ್ರೆ ಅವನಿಗೆ ತಿಳಿದೇ ಇದೆಯಲ್ಲ…. ಅಲ್ಲಿಗೆ ಬಂದುಬಿಟ್ಟರೆ? ಇಲ್ಲಿಲ್ಲ…. ಸಾಗರ ಆ ತರದವನಲ್ಲ ….. ಆದರೆ ಅವನು ಕಳಿಸಿದ ಮೆಸೇಜು ಹುಟ್ಟಿಸಿದ ದಿಗಿಲಿಗೆ ಬದಲೇನು ಹೇಳುವುದೆಂದು ತಿಳಿಯದೆ ಹೋಯಿತು. 

ʼಥ್ಯಾಂಕ್‌ ಯುʼ ಎಂದಷ್ಟೇ ಟೈಪಿಸಿ ಕಳುಹಿಸಿದೆ. ಮತ್ತೆ ಅವನ ಮೆಸೇಜು ಬರಲಿಲ್ಲ. ಒಂದೆರಡು ದಿನವಲ್ಲ. ನಾರ್ಮಲ್‌ ಡೆಲಿವರಿ ಕಷ್ಟವಿದೆ ಅಂತ ಹೇಳಿದ ಮೇಲೆ ಸಿಸೇರಿಯನ್ನಿಗೆಂದು ಆಸ್ಪತ್ರೆಗೆ ಸೇರುವ ದಿನ ನಾ ಮೆಸೇಜು ಮಾಡುವವರೆಗೂ ಅವನಿಂದ ಯಾವುದೇ ಮೆಸೇಜು ಬರಲಿಲ್ಲ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು...

2 comments:

  1. ಯಾಕೋ ಇದು ದುಃಖಾತ್ಯದೆಡೆಗೆ ಸಾಗುತ್ತಿದೆ ��

    ReplyDelete
  2. Y she would have met him once knwj

    ReplyDelete