Dec 16, 2019

ಒಂದು ಬೊಗಸೆ ಪ್ರೀತಿ - 44

ಡಾ. ಅಶೋಕ್.‌ ಕೆ. ಆರ್.‌
ಮಗು ನಿರೀಕ್ಷೆಗಿಂತ ಹೆಚ್ಚು ಬೆಳೆದಿತ್ತು. ಜೊತೆಗೆ ನನ್ನ ಪೆಲ್ವಿಸ್ಸು ಮಾಮೂಲಿಗಿಂತ ಚಿಕ್ಕದಿದ್ದ ಕಾರಣ ನಾರ್ಮಲ್‌ ಡೆಲಿವರಿ ಕಷ್ಟವೆಂದು ತಿಳಿದು ವಾರವಾಗಿತ್ತು. ಇವತ್ತು ರಾತ್ರಿ ಆಸ್ಪತ್ರೆಗೆ ಸೇರುವಂತೆ ಸೂಚಿಸಿದ್ದರು, ನಾಳೆ ಬೆಳಿಗ್ಗೆ ಸಿಸೇರಿಯನ್‌ ಮಾಡುವವರಿದ್ದರು. ದಿನಾ ನೂರಾರು ಸಿಸೇರಿಯನ್‌ ನಡೀತವೆ, ಅಮ್ಮ ಮಕ್ಕಳು ಆರೋಗ್ಯವಾಗೂ ಇರ್ತಾರೆ, ಆದರೂ ದಿಗಿಲು. ಆಪರೇಷನ್‌ ಥಿಯೇಟರ್‌ನಲ್ಲೇ ಹೆಚ್ಚು ಕಡಿಮೆಯಾಗಿ ಸತ್ತು ಹೋದರೆ, ನಾ ಬದುಕಿ ಮಗು ಸತ್ತು ಹೋದರೆ, ಮಗು ಬದುಕಿ ನಾ ಸತ್ತು ಹೋದರೆ…… ಅಪರೂಪದಲ್ಲಪರೂಪದ ಖಾಯಿಲೆ ಕಸಾಲೆಗಳನ್ನು ದಿನನಿತ್ಯದ ಆಸ್ಪತ್ರೆಯ ಒಡನಾಟದಲ್ಲಿ ನೋಡುವುದಕ್ಕೋ ಏನೋ ವಿಧ ವಿಧದ ಯೋಚನೆಗಳು ಮೂಡುತ್ತವೆ. ಎಲ್ಲಾ ಡಾಕ್ಟ್ರುಗಳಿಗೂ ಹಿಂಗೇನಾ? ಎಂಟರ ಸುಮಾರಿಗೆ ಆಸ್ಪತ್ರೆಗೆ ಹೋಗಿ ಸೇರಿಕೊಂಡೆ. ಅಪ್ಪ ಅಮ್ಮ ಜೊತೆಯಲ್ಲಿ ಬಂದಿದ್ದರು. ರಾಜೀವ ಒಂಭತ್ತರ ಸುಮಾರಿಗೆ ಬಂದು ಒಂದರ್ಧ ಘಂಟೆ ಇದ್ದು ಹೊರಟು ಹೋದರು. ಬಾಯಿಮಾತಿಗೂ ನಾನೇ ಇರ್ಲಾ ಇವತ್ತು ರಾತ್ರಿ ಅಂತ ಕೇಳಲಿಲ್ಲ. ಒಂಭತ್ತೂವರೆಯಷ್ಟೊತ್ತಿಗೆ ಅಮ್ಮನಿಗೆ ಗಡದ್ದು ನಿದ್ರೆ. ಅಪ್ಪ ಮನೆಗೆ ಹೋದರು. ದಿಗಿಲಿಗೋ, ಉತ್ಸಾಹಕ್ಕೋ ನನಗೆ ನಿದಿರೆಯೇ ಸುಳಿಯುತ್ತಿಲ್ಲ. ಸಾಗರನ ನೆನಪಾಗಿ ಮೊಬೈಲ್‌ ಕೈಗೆತ್ತಿಕೊಂಡೆ. ಮೆಸೇಜು ವಿನಿಮಯವಾಗಿ ಬಹಳ ದಿನವಾಗಿತ್ತು. ಏನೆಂದು ಮೆಸೇಜಿಸಲಿ? ಮತ್ತಿದು ನನ್ನದೇ ಪುರಾಣ ಹೇಳುವುದಕ್ಕೆ ಮೆಸೇಜ್‌ ಮಾಡ್ತಿರೋದು. ಅವನೇನಾದರೂ ಹೇಳಿದರೆ ಕೇಳುವ ತಾಳ್ಮೆಯಿಲ್ಲದ ನಾನು ನನಗೇನಾದರೂ ಹೇಳಬೇಕೆನ್ನಿಸಿದಾಗ ಅವನಲ್ಲಿ ಕೇಳುವ ತಾಳ್ಮೆಯಿದೆಯೋ ಇಲ್ಲವೋ ಎನ್ನುವುದನ್ನೂ ಯೋಚಿಸದೆ ಮೆಸೇಜು ಮಾಡಿಬಿಡುತ್ತೇನಲ್ಲ. ಅವನೇಳಿದಂತೆ ನಾ ಅವನನ್ನು ಬಳಸಿಕೊಳ್ಳುತ್ತಿದ್ದೀನಾ? ಖಂಡಿತ ಇಲ್ಲ. ಅವನೇಳಿದ್ರಲ್ಲಿದ್ದ ಸತ್ಯವೆಂದರೆ ಮಗುವಿನ ಕಣ್ಣಲ್ಲಿ ಚಿಕ್ಕವಳಾಗಿ ಕಾಣಬಾರದೆಂದು ನಾ ಸಾಗರನಿಂದ ದೂರಾಗುತ್ತಿದ್ದೀನಿ ಅಷ್ಟೇ. ಅದನ್ನು ಬಿಟ್ಟರೆ ಸಾಗರನನ್ನು ದೂರ ತಳ್ಳಲು ಇನ್ಯಾವುದೇ ಸಕಾರಣವಿಲ್ಲ. 

ಇರಲಿ, ಕಿತ್ತಾಟಗಳೆಲ್ಲ ಇರಲಿ. ಈ ಸಮಯದಲ್ಲಿ ಸಾಗರನಿಗೆ ಮೆಸೇಜು ಮಾಡದೇ ಇರುವುದು ನನ್ನಿಂದ ಸಾಧ್ಯವಿಲ್ಲ ಎಂದುಕೊಳ್ಳುತ್ತ ʼಆಸ್ಪತ್ರೆ ಸೇರಿದ್ದೀನಿ ಕಣೋ. ನಾಳೆ ಬೆಳಿಗ್ಗೆ ಆರೂ ಆರೂವರೆಗೆ ಸಿಸೇರಿಯನ್ನಿದೆʼ ಮೆಸೇಜು ಕಳಿಸಿದೆ. ಹತ್ತದಿನೈದು ನಿಮಿಷವಾದರೂ ಅವನಿಂದ ಪ್ರತಿಕ್ರಿಯೆ ಬರಲಿಲ್ಲ. ಮುನಿಸಿನ್ನು ಆರಿಲ್ಲ ಹುಡುಗನಿಗೆ. ಇರಲಿ. ನನ್ನದೂ ತಪ್ಪಿದೆ. ಇನ್ನೇನು ನನಗೂ ನಿದ್ರೆ ಹತ್ತಬೇಕೆನ್ನುವಷ್ಟರಲ್ಲಿ ಅವನಿಂದ ಮೆಸೇಜು ಬಂತು. 

“ಸಾರಿ ಕಣೇ. ಮೊಬೈಲ್‌ ಚಾರ್ಜಿಗಿಟ್ಟಿದ್ದೆ. ಈಗ ನೋಡಿದೆ ಮೆಸೇಜ್ನ. ಏನ್‌ ಫುಲ್‌ ಟೆನ್ಶನ್‌ನಲ್ಲಿದ್ದೀಯ" 

ʼಹುʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ಆಗ್ದೇ ಇರ್ತದಾ! ಮೊದಲ ಸರ್ಜರಿ, ಮೊದಲ ಮಗು. ಟೆನ್ಶನ್‌ ಆಗೇ ಆಗ್ತದೆ. ಎಲ್ಲಾ ಒಳ್ಳೇದಾಗ್ತದೆ. ಜಾಸ್ತಿ ತಲೆಕೆಡಿಸಿಕೊಳ್ಳದೆ ಚೆಂದ ನಿದ್ರೆ ಮಾಡು. ಮಗು ಹುಟ್ಟಿದ ಮೇಲೆ ನಿದ್ರೆ ಗಿದ್ರೆ ಎಲ್ಲಾ ಸೈಡಿಗೋಗ್ಬಿಡುತ್ತೆ” 

ʼಏನೋ ನಾಕ್‌ ಮಕ್ಳು ಹೆತ್ತೋರ್‌ ಹಂಗ್‌ ಹೇಳ್ತೀಯಪ್ಪʼ 

“ಒಳ್ಳೆ ಕತೆ ನಿಂದು. ನಾವೇ ಹೆರಬೇಕು ಅಂತಿದೆಯಾ. ನೋಡಿದ್ದೀನಲ್ಲ ನಮ್ಮ ಮನೆಗಳಲ್ಲಿ. ಮಕ್ಳು ರಾತ್ರಿ ಮಲಗಿಬಿಟ್ಟರೆ ಓಕೆ. ತೊಂದರೆ ಅನ್ನಿಸೋಲ್ಲ. ರಾತ್ರಿಯೆಲ್ಲ ಎದ್ದು ಬೆಳಿಗ್ಗೆ ಪೂರ್ತಿ ಮಲಗೋ ಮಕ್ಕಳು ಸಾಕು ಸಾಕು ಮಾಡಿಸಿಬಿಡ್ತಾರೆ” 

ʼಹು. ಅದೇನೇನಾಗ್ತದೋ ನೋಡುವ ಬಿಡು. ಯಾಕೋ ಪೂರ್ತಿ ಟೆನ್ಶನ್‌ ಕಣೋ. ನಾ ಆಪರೇಷನ್‌ ಅಲ್ಲಿ ಗೊಟಕ್‌ ಅಂದುಬಿಟ್ರೆ ಅನ್ನೋ ಯೋಚನೆ ಬರ್ತದೆʼ 

“ತಲೆ ಕೆಡಿಸ್ಕೋಬೇಡ ಬಿಡೇ. ಹಂಗೇನಾದ್ರೂ ಆದ್ರೆ ಮಗೂನ ನಾ ನೋಡ್ಕೋತೀನಿ” 

ʼಥೂ ಗೂಬೆʼ 

“ಹ ಹ….ಅಷ್ಟೆಲ್ಲ ಬೇಗ ಸಾಯಲ್ಲ ಬಿಡೆ ನೀನು” 

ʼಗೊತ್ತು….. ಪಾಪಿ ಚಿರಾಯು ಅಂತ ಗಾದೇನೇ ಇಲ್ವʼ 

“ಈಗ ಇಂತ ಮಾತೆಲ್ಲ ಬೇಕಾ? ಚೆಂದ ನಿದ್ರೆ ಮಾಡು. ಎಲ್ಲ ಸರಿಹೋಗ್ತದೆ” 

ʼಹು ಕಣೋʼ 

“ಲೇ ಇನ್ನೊಂದ್ ಮಾತು. ಎಲ್ರಿಗೂ ಕಳ್ಸೋಹಂಗ್‌ ನಂಗೂ we are blessed with baby girl ಅಂತೆಲ್ಲ ಮೆಸೇಜ್‌ ಕಳಿಸಿ ಅವಮಾನ ಮಾಡಬೇಡ ಮತ್ತೆ” 

ʼಇಲ್ವೋ ಹಂಗ್‌ ಕಳಿಸ್ತೀನಾ! ನಿಂಗೆ ಅಂತಾನೇ ಒಂದು ವಿಶೇಷ ಮೆಸೇಜ್‌ ರೆಡಿ ಮಾಡಿಟ್ಟುಕೊಂಡಿದ್ದೀನಿʼ ಅಲಲಾ ಅದೆಷ್ಟು ಸಲೀಸಾಗಿ ಸುಳ್ಳು ಹೇಳಿಬಿಡ್ತೀನಿ ನಾನು. 

“ಮ್”‌ 

ʼಅಲ್ವೋ ಅದೇನು ಅಷ್ಟು ಖಡಾಖಂಡಿತವಾಗಿ ಬೇಬಿ ಗರ್ಲ್‌ ಅಂತ ಹೇಳಿಬಿಟ್ಯಲ್ಲʼ 

“ಹೆಣ್‌ ಮಗೂನೇ ಆಗೋದು ನೋಡ್ಕೋ" 

ʼಮ್.‌ ಯಾವ್ದೋ ಒಂದು ಮಗು ಅಷ್ಟೇʼ 

“ಹು ಅಷ್ಟೇ. ಸರಿ ಕಣೆ. ಮಲಗಿ ರೆಷ್ಟ್‌ ಮಾಡು. ಇನ್ನೇನು ಕೆಲವು ದಿನ ಮೆಸೇಜು ಮಾಡೋಕಾಗಲ್ಲ ನಿಂಗೆ ಅಂತ ಗೊತ್ತು. ಟೇಕ್‌ ಕೇರ್.‌ ಲವ್‌ ಯು. ಮಿಸ್ಡ್‌ ಯು" 

ʼಹು ಕಣೋ. ಲವ್‌ ಯು ಟೂ. ಬಾಯ್‌ʼ ಎಂದು ಮೆಸೇಜು ಕಳಿಸಿ ಅದರ ಡೆಲಿವರಿ ರಿಪೋರ್ಟು ಬಂದ ಮೇಲೆ ಚಾಟ್‌ ಅನ್ನು ಡಿಲೀಟ್‌ ಮಾಡಿದೆ. 

ಸಾಗರನ ಜೊತೆಗಿನ ಮಾತುಕತೆ ಮನದ ದುಗುಡವನ್ನು ಒಂದಷ್ಟು ಕಡಿಮೆಗೊಳಿಸಿತು. ಮೊಬೈಲ್‌ ಬದಿಗಿಟ್ಟ ಐದು ನಿಮಿಷಕ್ಕೆ ನಿದ್ರೆ ಆವರಿಸಿತು. 

ಬೆಳಿಗ್ಗೆ ನರ್ಸ್‌ ಬಂದು ಏಳಿಸುವವರೆಗೂ ಎಚ್ಚರವಿಲ್ಲ. ಎದ್ದು ಮುಖ ತೊಳೆದುಕೊಂಡು ಬಂದ ಮೇಲೆ ಒಂದಷ್ಟು ಇಂಜೆಕ್ಷನ್ನು ನೀಡಿ ಓಟಿ ಬಟ್ಟೆಯನ್ನು ಹಾಕಿಕೊಳ್ಳಲು ಕೊಟ್ಟರು. ಬಟ್ಟೆ ಧರಿಸಿದ ಮೇಲೆ ವೀಲ್‌ ಚೇರಿನಲ್ಲಿ ಕುಳಿಸಿದರು. ಈ ಆರೋಗ್ಯವಾಗಿರೋರನ್ನೂ, ಓಡಾಡ್ಕಂಡಿರೋರನ್ನೂ ಅದ್ಯಾಕಿಂಗೆ ವೀಲ್‌ ಚೇರಲ್‌ ಕುಳಿಸಿ ಕರೆದುಕೊಂಡು ಹೋಗ್ತಾರೋ ಏನೋಪ. ಯಾವ್ದೋ ದೊಡ್‌ ರೋಗ ಬಂದಿರೋ ಫೀಲಿಂಗು ಬಂದ್ಬಿಡುತ್ತೆ ವೀಲ್‌ ಚೇರಲ್‌ ಕುಳಿತುಕೊಂಡು ತಳ್ಳಿಸಿಕೊಂಡು ಸಾಗುವಾಗ. ಆಪರೇಷನ್‌ ಥಿಯೇಟರ್‌ ಬಳಿ ಹೋಗುವಷ್ಟರಲ್ಲಿ ಅಪ್ಪ ಬಂದಿದ್ದರು, ತಮ್ಮನ ಜೊತೆಗೆ. ರಾಜೀವನ ದರ್ಶನವಾಗಲಿಲ್ಲ. ಉಹ್ಞೂ…. ಅದರ ಬಗ್ಗೆಯೆಲ್ಲ ತಲೆ ಕೆಡಿಸಿಕೊಳ್ಳುವ ಸಮಯವಿದಲ್ಲ ಎಂದು ಪದೇ ಪದೇ ನೆನಪು ಮಾಡಿಕೊಳ್ಳುತ್ತಾ ಒಳಗೋದೆ. ಅಪ್ಪ ಅಮ್ಮನ ಮುಖದಲ್ಲಿ ಕೊಂಚ ದುಗುಡವಿತ್ತು. ತಲೆ ಕೆಡಿಸಿಕೊಳ್ಳಬೇಡಿ ಎಂದವರಿಗೆ ಧೈರ್ಯ ಹೇಳುತ್ತ ಅವರ ದುಗುಡವನ್ನು ನನ್ನ ಮೇಲೆ ಹೇರಿಕೊಳ್ಳುತ್ತ ಒಳಗೋದೆ. ನನ್ನ ನೋಡಿಕೊಳ್ಳುತ್ತದ್ದ ಡಾಕ್ಟರ್‌ ರುಕ್ಮಿಣಿ ಮೇಡಂ ಅದಾಗಲೇ ಬಂದಿದ್ದರು. "ಏನ್‌ ಧರಣಿ. ಟೆನ್ಶನ್‌ ಆದಂಗ್‌ ಕಾಣ್ತದೆ” ಎಂದರು. ಅದೇನು ಎಲ್ಲ ಪೇಶೆಂಟುಗಳಿಗೂ ಆಪರೇಷನ್ನಿಗೆ ಮುಂಚೆ ಸಹಜವಾಗಿ ಹೇಳುವ ಮಾತೋ ಅಥವಾ ನನ್ನ ಮುಖದಲ್ಲಿ ಅಷ್ಟೊಂದು ಗಾಬರಿ ಕಾಣುತ್ತಿತ್ತೋ ತಿಳಿಯದು. ಹಂಗೇನಿಲ್ಲ ಎಂದು ತಲೆಯಾಡಿಸಿದೆ. ರುಕ್ಮಿಣಿ ಮೇಡಂ ಅದಾಗಲೇ ಒಂದು ಆಪರೇಷನ್‌ ಮುಗಿಸಿ ಕಾಫಿ ಹೀರುತ್ತಿದ್ದರು. ಆಪರೇಷನ್‌ ಟೇಬಲ್ಲಿನ ಮೇಲೆ ನನಗೆ ಮಲಗಲು ಹೇಳಿ ಅರವಳಿಕೆ ತಜ್ಞರು ಬಿಪಿ ಪಲ್ಸು ನೋಡಿದರು. ಬೆಳಿಗ್ಗೆಯಾಗಲೇ ನರ್ಸ್‌ ಒಂದು ರೌಂಡು ಬಿಪಿ ನೋಡಾಗಿತ್ತು. ಆಗ ನೋಡಿದ್ದಕ್ಕಿಂತ ಈಗ ಬಿಪಿ ಹತ್ತತ್ತು ಪಾಯಿಂಟ್‌ ಜಾಸ್ತಿಯಾಗಿತ್ತು. ತೀರ ಆಪರೇಷನ್‌ ಮಾಡದಷ್ಟು ಹೆಚ್ಚಾಗಿರಲಿಲ್ಲವಷ್ಟೇ. ಬೆನ್ನಹುರಿಗೆ ಅರವಳಿಕೆ ನೀಡಲು ನನ್ನನ್ನು ಎಡಮಗ್ಗುಲಿಗೆ ಮಲಗಿಸಿ ದೇಹವನ್ನು ಬಿಲ್ಲಿನಂತೆ ಮುಂದಕ್ಕೆ ಬಾಗಿಸಿದರು. ಗರ್ಭದೊಳಗಿದ್ದ ಮಗುವಿಗೆ ಇರುಸುಮುರುಸಾಯಿತೋ ಏನೋ ಜೋರಾಗೊಮ್ಮೆ ಒದೆಯಿತು. ಗರ್ಭದೊಳಗಿನ ಒದೆತಗಳಿಗಿವತ್ತು ಕೊನೆ ದಿನವಲ್ಲವೇ ಎಂದಾ ಸುಖವನ್ನು ಅನುಭವಿಸುತ್ತಿರುವಾಗ ಬೆನ್ನಹುರಿಯ ಬಳಿ ಸೂಜಿ ಚುಚ್ಚಿದ ಅನುಭವವಾಯಿತು. ಅರವಳಿಕೆ ಔಷಧಿ ನಿಧಾನಕ್ಕೆ ಬೆನ್ನಿನಿಂದ ಹೊಟ್ಟೆಯ ಕೆಳಭಾಗಕ್ಕೆ, ಕಾಲುಗಳಿಗೆ ಹಬ್ಬಿ ಹಂತಹಂತವಾಗಿ ಹೊಟ್ಟೆಯ ಕೆಳಗಿನ ಭಾಗಗಳ ಸಂವೇದನೆಯನ್ನು ಕಸಿದುಕೊಂಡಿತು. ನೇರ ಮಲಗಿಸಿ ಇನ್ನೊಂದು ಡ್ರಿಪ್‌ ಬಾಟಲನ್ನು ಏರಿಸಿದ ಮೇಲೆ ರುಕ್ಮಿಣಿ ಮೇಡಂ ಒಳಬಂದರು. ಸ್ವ್ಯಾಬ್‌ ಕೊಡಿ, ಸ್ಕಾಲ್ಪೆಲ್‌ ಕೊಡಿ, ಸಕ್ಷನ್‌ ಪ್ಲೀಸ್ ಅನ್ನುವ ಶಬ್ದಗಳು ಕೇಳುತ್ತಿದ್ದಾಗ ಆಪರೇಷನ್‌ ನಡೆಯುತ್ತಿರುವುದು ಗಮನಕ್ಕೆ ಬರುತ್ತಿತ್ತಷ್ಟೇ. ಆಪರೇಷನ್‌ ಶುರುವಾಗಿ ಹತ್ತು ನಿಮಿಷವೂ ಕಳೆದಿರಲಿಲ್ಲವೇನೋ ಮಗುವಿನ ಅಳು ಕೇಳಿಸಿತು. ನರ್ಸ್‌ ಕಿವಿ ಬಳಿ ಬಂದು ಹೆಣ್ಣು ಮಗು ಎಂದು ಖುಷಿಯಲ್ಲಿ ಹೇಳಿದರು. ಮಗು ಮಕ್ಕಳ ತಜ್ಞರ ಕೈಗೆ ಹೋಗಿರಬೇಕೀಗ. ಅವರೊಂದಷ್ಟು ಸಕ್ಷನ್‌ ಮಾಡಿ ತೂಕ ನೋಡಿ, ಹಾರ್ಟು ಲಂಗ್ಸು ಸರಿಯಾಗಿ ಕೆಲಸ ಮಾಡ್ತಿದೆಯಾ ಅಂತ ನೋಡಿ ಕೇಸ್‌ ಶೀಟಲ್‌ ಒಂದಷ್ಟು ನೋಟ್ಸ್‌ ಬರೆದಿಟ್ಟು ಹೊರಟುಬಿಡುತ್ತಾರೆ. ನಾನು ದಿನಂಪ್ರತಿ ಮಾಡುತ್ತಿದ್ದಿದ್ದೂ ಅದನ್ನೇ ಅಲ್ಲವೇ! ಇವತ್ಯಾವ ಪಿಡೀಯಾಟ್ರೀಷಿಯನ್‌ ಬಂದಿರುವರೋ ತಿಳಿಯಲಿಲ್ಲ. ಹೇಗಿದ್ದರೂ ಸಂಜೆ ವಾರ್ಡಿಗೆ ಬಂದೊಮ್ಮೆ ನೋಡ್ತಾರಲ್ಲ ಆಗ ಮಾತನಾಡಿಸಿದರಾಯಿತು. ಮಗಳನ್ನು ನರ್ಸ್‌ ಒಬ್ಬರು ಎತ್ತಿಕೊಂಡು ಬಂದು ನನಗೆ ತೋರಿಸಿದರು. ಥೇಟು ರಾಜೀವನದೇ ಪಡಿಯಚ್ಚು! ಚೂರು ಹೊಟ್ಟೆ ಉರೀತು, ನನ್‌ ತರ ಹುಟ್ಟಲಿಲ್ಲವಲ್ಲ ಮಗಳು ಎಂಬ ಕಾರಣಕ್ಕೆ. ನೋಡುವಾ, ಬೆಳೀತಾ ಬೆಳೀತಾ ನನ್ನ ರೂಪ ಪಡೆದರೂ ಪಡೆಯಬಹುದು ಎಂದು ಸಮಾಧಾನ ಮಾಡಿಕೊಂಡೆ. ಮಗಳನ್ನು ಹೊರಗಿದ್ದ ಅಪ್ಪ ಅಮ್ಮನಿಗೆ ತೋರಿಸಿ ಬರುತ್ತೀವೆಂದು ಹೇಳಿದರು ನರ್ಸಮ್ಮ, ಹು ಎಂದು ತಲೆಯಾಡಿಸಿದೆ. ಇನ್ನೊಂದತ್ತು ನಿಮಿಷದಲ್ಲಿ ನನ್ನ ಹರಿದು ಹೋದ ಗರ್ಭ ಅದರ ಮೇಲಿನ ಚರ್ಮವನ್ನೆಲ್ಲ ಹೊಲಿದು ಮುಗಿಸಿ ಆಪರೇಷನ್‌ ಥಿಯೇಟರ್‌ ಹೊರಗಿದ್ದ ಪೋಸ್ಟ್‌ ಆಪ್‌ ರೂಮಿಗೆ ಕರೆದುಕೊಂಡು ಹೋದರು. ಅಮ್ಮ ಮಗುವನ್ನೆತ್ತಿಕೊಂಡು ಅಲ್ಲೇ ಕುಳಿತಿದ್ದರು. ನನ್ನ ಬಳಿ ಬಂದು ಹೇಗಿದ್ದೀಯೇ ಅಂತ ಒಂದ್‌ ಮಾತ್‌ ಕೇಳೋದ್‌ ಬೇಡ್ವ! ನನ್ನ ಯೋಚನೆಯೇ ಇಲ್ಲದವರಂತೆ “ಮಗ್ಳು ತುಂಬಾ ಲಕ್ಷಣವಾಗಿದ್ದಾಳೆ ಕಣೇ” ಎಂದರು. ʼಯಾಕೆ ಅವರಪ್ಪನ ತರ ಇದ್ದಾಳೆ ಅಂತ್ಲೋʼ ಎಂದು ನಗಾಡಿದೆ. ಬಂದ್ರಾ ರಾಜೀವು ಅನ್ನುವ ಮಾತು ಬಾಯಿ ತುದಿಗೆ ಬಂದಿತ್ತು, ಬಂದಿಲ್ಲದೇ ಹೋದರೆ ಮತ್ತಷ್ಟು ಬೇಸರವಾಗ್ತದೆ ಎಂದುಕೊಂಡು ನುಂಗಿಕೊಂಡೆ. “ರಾಜೀವು ಸ್ವೀಟ್‌ ತಗಂಡ್‌ ಬಂದಿದ್ರು. ನಮ್‌ ದಡ್ತನ ನೋಡು. ನಿಮ್ಮಪ್ಪನೂ ಸ್ವೀಟ್‌ ತಂದಿರಲಿಲ್ಲ. ನನಗೂ ಹೊಳೆಯಲಿಲ್ಲ. ಅಂದ್ರೂ ನಿನ್‌ ಗಂಡಂಗ್‌ ಭಲೇ ಭಯ ಕಣವ್ವ. ಮಗಾನ್‌ ಎತ್ಕೊಳ್ಳೋಕೂ ಭಯ ಪಡೋರ್ನ ಇವತ್ತೇ ಕಂಡಿದ್ದು ನಾನು” 

ʼಅದು ಭಯ ಅಲ್ಲ ಬಿಡಿʼ ಮನಸಲ್ಲೇ ಹೇಳ್ಕಂಡು ʼಚಿಕ್‌ ಮಗು ಎತ್ಕೊಳ್ಳೋಕೆ ಭಯ ಇರ್ತದಲ್ಲ. ನಂಗೂ ಭಯಾನೇ ಅಲ್ವ. ಎಲ್ಲಿ ತೋರ್ಸು ಮಗೂನʼ ಎಂದೆ. ಪ್ರಪಂಚದ ಬೆಳಕಿಗೆ ಕಣ್ಣು ಬಿಡಲು ಇಷ್ಟವಿಲ್ಲದವಳಂತೆ ಮಲಗುವ ನಾಟಕವಾಡಿದ್ದಳು ರಾಧ…… 

* * *

ಒಂದು ವಾರದಲ್ಲಿ ಎರಡು ಕೆಜಿ ಇಳಿದುಹೋಗಿದ್ದೆ! ಮಗು ಸಾಕುವುದು ಇಷ್ಟೆಲ್ಲ ಕಷ್ಟದ ಸಂಗತಿ ಎಂದು ತಿಳಿದೇ ಇರಲಿಲ್ಲ. ಬೆಳಿಗ್ಗೆಯಿಂದ ರಾತ್ರಿವರೆಗೆ ನಿದ್ರೆ ನಿದ್ರೆ ನಿದ್ರೆ…….ಮಧ್ಯೆ ಮಧ್ಯೆ ಒಂದೊಂದು ರೌಂಡು ಎದ್ದು ಅಳು ಅಳು ಅಳು ಹಾಲು ಕುಡಿದು ಮತ್ತೆ ನಿದ್ರೆ. ರಾತ್ರಿ ಪೂರ್ತಿ ಎಚ್ಚರವಾಗಿದ್ದುಬಿಡೋಳು. ರಾತ್ರಿಯ ನನ್ನ ನಿದ್ರೆ ನಾಸ್ತಿ. ಹೋಗ್ಲಿ ಬೆಳಿಗ್ಗೆ ರಾಧನ ಜೊತೆಯೇ ಮಲಗುವ ಎಂದರೆ ನಿದ್ರೆ ಬರಲೊಲ್ಲದು. ಮನೆಯಲ್ಲಿ ಚೂರು ಸದ್ದಾಗುವಂತಿಲ್ಲ ಎಚ್ಚರವಾಗಿ ರಂಪ ಮಾಡೋಳು. ಮನೆಯಲ್ಲಿದ್ದವರು ಮಾತನಾಡುವುದನ್ನೇ ಮರೆತುಬಿಟ್ಟಿದ್ದೆವು. ಮಾತನಾಡಿದರೂ ಪಿಸುಮಾತಿನಲ್ಲಿ, ಪಿಸುಮಾತಿಗಿಂತಲೂ ಹೆಚ್ಚಾಗಿ ಸಂಜ್ಞೆಯ ಭಾಷೆಯನ್ನಳವಡಿಸಿಕೊಂಡುಬಿಟ್ಟಿದ್ದೆವು! ಟಿವಿಗೂ ವಿರಾಮ ಸಿಕ್ಕಿತ್ತು. ಅಪ್ಪ ಆವಾಗಿವಾಗ ನ್ಯೂಸ್‌ ನೋಡಲೆಂದು ಟಿವಿ ಹಾಕಿದರೂ ಸೌಂಡ್‌ ಕೊಡುವಂತಿಲ್ಲ. ಮನೆಯ ಕಾಲಿಂಗ್‌ ಬೆಲ್ಲಿನ ಕನೆಕ್ಷನ್‌ ತೆಗೆದಾಕಲಾಗಿತ್ತು. ಒಟ್ಟಾರೆ ಇಡೀ ಮನೆ ಮೌನಕ್ಕೆ ಶರಣಾಗಿತ್ತು! ಪಕ್ಕದಲ್ಲಿರುತ್ತಿದ್ದ ನಾ ಸೀನಿದರೂ, ಕೆಮ್ಮಿದರೂ ಕೊನೆಗೆ ಚೂರು ಅತ್ತಲಿತ್ತಗೆ ಹೊರಳಿಕೊಂಡರೂ ಎಚ್ಚರವಾಗಿಬಿಡುತ್ತಿದ್ದಳು…. ರಾಜೀವ ದಿನಕ್ಕೊಂದು ಬಾರಿ, ಸಾಮಾನ್ಯವಾಗಿ ರಾತ್ರಿಯ ಸಮಯ ಬಂದು ಒಂದಷ್ಟೊತ್ತು ಪಕ್ಕದಲ್ಲಿ ಕುಳಿತು ಮೊಬೈಲಿನಲ್ಲಿ ಮುಳುಗಿ ಆವಾಗಿವಾಗೊಮ್ಮೆ ಮಗಳನ್ನು ನೋಡಿ ಊಟ ಮಾಡಿಕೊಂಡು ಹೊರಡುತ್ತಿದ್ದರು. ಅಪ್ಪ ಆಗಿದ್ದಕ್ಕೆ ಭಯಂಕರ ಖುಷಿಯೇನು ಅವರಲ್ಲಿರಲಿಲ್ಲ. ಅವರ ಮನೆಯವರಿಗೇನೋ ಮಗುವಾಗಿದ್ದು ಖುಷಿ ತಂದಿತ್ತು…..ಹೆಣ್ಣು ಮಗು ಎನ್ನುವ ಕಾರಣಕ್ಕೆ ಚೂರು ಬೇಸರಗೊಂಡಿದ್ದೂ ಹೌದು. ಆಸ್ಪತ್ರೆಗೊಂದು ಸಲ ಮನೆಗೊಂದು ಸಲ ಬಂದು ನೋಡಿಕೊಂಡು ಹೋಗಿದ್ದರು. ನಮ್ಮಮ್ಮನಿಗೆ ನಮ್ಮತ್ತೆ ʼಮಗೂನ ಮಲಗಿಸುವಾಗ ತಲೆಗೊಂದು ಚೆಂದದ ದಿಂಬಿಡಿ ತಲೆ ಶೇಪು ತಿದ್ದಿ ತೀಡಿದಂಗೆ ಸರಿಯಾಗ್ತದೆ, ಸ್ನಾನದ ನೀರು ನೀವು ಹುಯ್ಕೊಳ್ಳೋದಕ್ಕಿಂತ ಒಂದೆರಡ್‌ ಡಿಗ್ರಿ ಹೆಚ್ಚೇ ಬಿಸಿಯಿರಲಿ, ಈ ಡಾಕ್ಟ್ರುಗಳು ಆರ್‌ ತಿಂಗ್ಳು ಏನೂ ಬೇರೆ ಕೊಡ್ಬಾರ್ದು ಅಂತ ಬಡ್ಕೋತಾರೆ ಅವರ ಮಾತು ಕೇಳಬೇಡಿ……ಕೊನೇಪಕ್ಷ ವಾರಕ್ಕೊಂದು ದಿನವಾದರೂ ಅರ್ಧ ಸ್ಪೂನಿನಷ್ಟು ಜೇನುತುಪ್ಪ ನೆಕ್ಕಿಸಿ, ಬಾಣಂತಿ ರೂಮಿನಲ್ಯಾಕೆ ಇಷ್ಟೊಂದು ಬೆಳಕು? ಬೆಳಕು ಒಳಬರದಂತೆ ಕಿಟಕಿಗೆಲ್ಲ ಡಾರ್ಕ್‌ ಕಲರಿನ ಕರ್ಟನ್‌ ಹಾಕ್ಸಿ, ಬಾಣಂತಿ ಹೆಚ್ಚು ಹೊರಗೆ ಕೂರೋದು ಬೇಡ………ʼ ಅತ್ತೆ ಹೊರಟ ಮೇಲೆ ʼನಿಮ್ಮತ್ತೆ ಯಾಕ್‌ ಹಿಂಗೆ? ನಾವೇನ್‌ ಮಕ್ಳುನ್ನ ಬೆಳೆಸೇ ಇಲ್ವ? ಎಷ್ಟ್‌ ತಲೆ ತಿಂತಾರಪ್ಪʼ ಎಂದು ಹೇಳಿದ ಅಮ್ಮನ ಮಾತಿಗೆ ಮುಗುಳ್ನಗುವದಕ್ಕೂ ನನ್ನಲ್ಲಿ ಕಸುವಿರಲಿಲ್ಲ. 

ಮಧ್ಯಾಹ್ನಕ್ಕೆ ಅಮ್ಮ ನಾಟಿ ಕೋಳಿ ಸಾರು……ಮಾಮೂಲಿ ಕೋಳಿ ಸಾರು ಮಾಡುತ್ತಲೇ ಇರಲಿಲ್ಲ…….ಮಾಡಿದ್ದರು. ಲಿವರ್‌ ಪೀಸೊಂದನ್ನು ತಿಂದು ಎರಡು ತುತ್ತು ಅನ್ನ ತಿನ್ನುವಷ್ಟರಲ್ಲಿ ರಾಧ ಎದ್ದು ಬಿಟ್ಟಳು. ಹಾಲು ಕುಡಿದು ಮಲಗಿ ಐದು ನಿಮಿಷವೂ ಆಗಿರಲಿಲ್ಲ. ನನ್ನ ಬಿಟ್ಟು ಅಮ್ಮ ಒಬ್ಬಳೇ ಕೋಳಿ ಬಾರಿಸ್ತಿದ್ದಾಳೆ ಅಂತ ಹೊಟ್ಟೆ ಉರ್ಕಂಡು ಎದ್ದಳೋ ಎನ್ನುವಂತೆ ಒಂದೇ ಸಮನೆ ಅಳು. ಈಗಷ್ಟೇ ಹಾಲು ಕುಡಿದಿದ್ದಳಲ್ಲ? ಹೊಟ್ಟೆ ತುಂಬಲಿಲ್ಲವೋ ಏನೋ ಎಂದುಕೊಳ್ಳುತ್ತಾ ಊಟದ ತಟ್ಟೆಯನ್ನು ಅಲ್ಲೇ ಮಂಚದ ಪಕ್ಕದಲ್ಲಿದ್ದ ಮೇಜಿನ ಮೇಲಿಟ್ಟು ಹೋಗಿ ಕೈತೊಳೆದುಕೊಂಡು ಬಂದು ನೈಟಿಯ ಮೇಲಿನ ಗುಂಡಿಗಳನ್ನು ಬಿಚ್ಚಿ ಮೊಲೆಯೂಡಿದೆ. ಈಗಷ್ಟೇ ಒಂದು ಸುತ್ತು ಹಾಲು ಖಾಲಿಯಾಗಿತ್ತಲ್ಲ….ಹಾಲಿಲ್ಲದ ಮೊಲೆಯನ್ನು ಚೀಪಿಕೊಂಡು ಸುಮ್ಮನಾದಳು. ಮೊಲೆ ಚೀಪಬೇಕಿತ್ತೇನೋ ಅಷ್ಟೇ. ತೊಡೆಯ ಮೇಲವಳು ಮಲಗಿರುವಾಗ ಇನ್ನೆಲ್ಲಿ ಊಟ. ಮೊಬೈಲು ನೋಡಿ ಎರಡು ದಿನವಾಗಿತ್ತು. ಕೈಗೆತ್ತಿಕೊಂಡೆ. ವೈಬ್ರೇಟ್‌ ಮೋಡಲ್ಲೂ ಮೊಬೈಲ್ನನ್ನಿಡುವ ಆಗಿರಲಿಲ್ಲ. ಮೆಸೇಜ್‌ ಬಂತಾ ಕಾಲ್‌ ಬಂತಾ ಒಂದೂ ತಿಳಿಯುತ್ತಿರಲಿಲ್ಲ. ಒಂದಷ್ಟು ಮಿಸ್ಡ್‌ ಕಾಲ್‌ ಇದ್ದವು. ಬಹಳಷ್ಟು ರಾಜೀವನದೇ…. ಇನ್ನೊಂದಷ್ಟು ಅನ್‌ ನೋನ್‌ ನಂಬರ್ರು. ಮೆಸೇಜುಗಳು ದಂಡಿಯಾಗಿದ್ದವು. ಕಂಗ್ರಾಟ್ಸ್‌, ಕಂಗ್ರಾಟ್ಸ್‌ ಹೋಪ್‌ ಬೋತ್‌ ಆರ್‌ ಫೈನ್ ಅನ್ನೋ ಮೆಸೇಜುಗಳೇ ಎಲ್ಲ. ದಂಡಿಯಾದ ಮೆಸೇಜುಗಳ ಮಧ್ಯೆ ಸಾಗರನ ಮೆಸೇಜಿತ್ತು. ಬರೋಬ್ಬರಿ ವಾರದ ನಂತರ ಮೆಸೇಜು ಮಾಡಿದ್ದ……ವಾರದವರೆಗೆ ಮೆಸೇಜು ಮಾಡದೆ ಫೋನು ಮಾಡದೆ ಮಗಳನ್ನು ನೋಡಲು ಬರದೆ ಇರುವುದಕ್ಕೆ ನಾನೇ ಕಾರಣ……. ಆಸ್ಪತ್ರೆಗೇ ಬಂದು ನೋಡ್ಕಂಡು ಹೋಗ್ತೀನಿ ಕಣೇ ಅಂದಿದ್ದವನು ನನ್ನದೊಂದು ಮೆಸೇಜಿಗೆ ಮುನಿಸಿಕೊಂಡು ಬರದೇ ಹೋಗಿದ್ದ. ಅವನ ಮುನಿಸು ನ್ಯಾಯಬದ್ಧವಾಗಿಯೇ ಇತ್ತಲ್ಲ. ಮಗಳು ಹುಟ್ಟಿದ ವಿಷಯವನ್ನು ಸ್ನೇಹಿತರಿಗೆ ಮೆಸೇಜು ಮಾಡಿದ್ದು ಮಗಳು ಹುಟ್ಟಿದ ಮಾರನೇ ಬೆಳಿಗ್ಗೆ. ಆಪರೇಷನ್‌ ಆದ ಮೇಲೆ ವಾರ್ಡಿಗೆ ಹಾಕಿದ್ದರಲ್ಲ, ಗಂಟೆ ಕಳೆಯುತ್ತಿದ್ದಂತೆ ಅಸಾಧ್ಯ ನೋವು ಶುರುವಾಯಿತು. ಅರವಳಿಕೆ ಔಷಧ ಮುಗಿಯುತ್ತಿದ್ದಂತೆ ನೋವು ಶುರುವಾಗುತ್ತದೆ ಎನ್ನುವುದು ಗೊತ್ತಿದ್ದ ಸಂಗತಿಯೇ, ಆದರೆ ತೀರ ಈ ಪರಿ ನೋವು ಎಂಬ ಕಲ್ಪನೆಯಿರಲಿಲ್ಲ. ನಾರ್ಮಲ್‌ ಡೆಲಿವರಿಯಲ್ಲಿ ಡೆಲಿವರಿ ಸಮಯದಲ್ಲಷ್ಟೇ ನೋವು, ಡೆಲಿವರಿ ಆಗಿಹೋದ ನಂತರ ಅರ್ಧ ಘಂಟೆಯಲ್ಲಿ ನೋವು ಸುಸ್ತು ಎಲ್ಲಾ ಮಾಯವಾಗಿಬಿಡ್ತದಂತೆ. ಸಿಸೇರಿಯನ್‌ ನಲ್ಲಿ ಹೆರಿಗೆಯ ಸಮಯದಲ್ಲಿ ನೋವಿರೋದಿಲ್ಲ…. ಹೆರಿಗೆ ಮುಗಿದ ನಂತರ ಅಸಾಧ್ಯ ನೋವು. ರಾತ್ರಿ ಒಂದಷ್ಟು ನೋವು ಕಡಿಮೆ ಮಾಡುವ ಇಂಜೆಕ್ಷನ್‌ ಕೊಟ್ಟಿದ್ದಕ್ಕೆ ವಾಸಿಯೆನ್ನಿಸುವಂತಿತ್ತು. ಮೊಬೈಲ್‌ ತೆಗೆದುಕೊಂಡು ಮೊದಲ ಮೆಸೇಜ್‌ ಸಾಗರನಿಗೇ ಟೈಪಿಸಿದೆ ʼಹೆಣ್ಣು ಮಗಳ ತಂದೆಯಾದೆ ಕಣೋ ನೀನುʼ ಎಂದು ಟೈಪಿಸಿದೆ… ಟೈಪು ಮಾಡಿದ್ದನ್ನು ಡಿಲೀಟ್‌ ಮಾಡಿದೆ, ಮತ್ತೆ ಅದನ್ನೇ ಟೈಪ್‌ ಮಾಡಿದೆ ಮತ್ತೆ ಡೀಲೀಟ್‌ ಮಾಡಿದೆ.... ಟೈಪು ಡೀಲೀಟಿನಾಟ ಸುಮಾರೊತ್ತು ಮುಂದುವರೆಯಿತು….. ಕೊನೆಗೊಮ್ಮೆ ಡಿಲೀಟು ಮಾಡಿ 

ʼWe are blessed with a baby girl, Dharani Rajiv’ ಎಂದು ಟೈಪಿಸಿ ಮತ್ತೊಮ್ಮೆ ಏನನ್ನೂ ಯೋಚಿಸದೆ ಕಳುಹಿಸಿಬಿಟ್ಟೆ. ಅವನನ್ನು ದೂರಾಗಿಸುವ ಮತ್ತೊಂದು ಹೆಜ್ಜೆಯಾಗಿತ್ತಿದು. ಅದೇ ಮೆಸೇಜನ್ನು ಕಾಪಿ ಮಾಡಿಕೊಂಡು ಮತ್ತಷ್ಟು ಪರಿಚಿತರಿಗೆ ಪೇಸ್ಟ್‌ ಮಾಡಿ ಕಳುಹಿಸಿದೆ. ಎಲ್ಲರಿಗೂ ಕಳುಹಿಸಿ ಮುಗಿಸುವಷ್ಟರಲ್ಲಿ "ಕಂಗ್ರಾಟ್ಸ್‌” ಅಂತೊಂದು ಮೆಸೇಜು ಸಾಗರನಿಂದ ಬಂತು. ಇವತ್ತಿನ ನನ್ನ ಮೆಸೇಜಿಗೆ ಒಂದಲ್ಲ ಒಂದು ದಿನ ಇವನಿಗೆ ವಿವರಣೆ ಕೊಡಲೇಬೇಕಾಗ್ತದೆ ಎಂದುಕೊಂಡೆ. ಮಗಳ ದೃಷ್ಟಿಯಲ್ಲಿ ಕೀಳೆನ್ನಿಸುವ ಯಾವುದೇ ಕೆಲಸವನ್ನೂ ಮಾಡಲು ನನಗಿನ್ನಿಷ್ಟವಿಲ್ಲ. ಅಂದರೆ ನನ್ನ ಸಾಗರನ ಸಂಬಂಧ ಕೀಳೇ ಹೌದೆಂದು ನಾನೂ ಒಪ್ಪಿಕೊಂಡಂತಾಯಿತಾ? 

“ಹೇಗಿದ್ದೀಯೇ? ಮಗಳು ಹೇಗಿದ್ದಾಳೆ?” ಸಾಗರನ ಮೆಸೇಜು ಬಂದು ದಿನದ ಮೇಲಾಗಿತ್ತು. 

ʼಹು. ಕಣೋ. ಮಗಳು ಚೆನ್ನಾಗಿದ್ದಾಳೆ. ನಾನೇ ಚೆನ್ನಾಗಿಲ್ಲ ನೋಡುʼ 

ನನ್ನ ಮೆಸೇಜಿಗೇ ಕಾಯುತ್ತಿದ್ದನೇನೋ. “ಯಾಕಪ್ಪ ನಿನಗೇನಾಯಿತು?” 

ʼರಾತ್ರಿ ಪೂರ್ತಿ ಎದ್ದಿರ್ತಾಳೆ. ಬೆಳಿಗ್ಗೆಯೆಲ್ಲ ನಿದ್ರೆ. ಅವಳಿಗೇನೋ ಅದು ನಾರ್ಮಲ್ಲಿರಬೋದು…. ನನಗಲ್ಲವಲ್ಲ.. ಬೆಳಿಗ್ಗೆ ನಿದ್ರೆ ಬರಲ್ಲ ರಾತ್ರಿ ಇವಳು ನಿದ್ರೆ ಮಾಡಕ್‌ ಬರಲ್ಲ. ಹಂಗಾಗಿ ಸುಸ್ತೋ ಸುಸ್ತು. ಎರಡ್‌ ಕೆಜಿ ಕಮ್ಮಿಯಾಗಿಬಿಟ್ಟಿದ್ದೀನಿ ಗೊತ್ತ…ʼ 

“ಓ! ಹೋಗ್ಲಿ ಬಿಡು. ನಿನ್ನಲ್ಲಿರೋ ಕೊಬ್‌ ಸ್ವಲ್ಪ ಕರಗಿದ್ರೆ ತೊಂದ್ರೆ ಏನಿಲ್ಲ. ಮಗುವಿನ ಫೋಟೋ ಕಳಿಸೇ….” 

ʼಅಯ್ಯೋ ಇಲ್ವೋ. ತಿಂಗಳಾಗುವವರೆಗೂ ಯಾವ್ದೇ ಫೋಟೋ ತೆಗಿಯಂಗಿಲ್ಲ ಅಂತ ಅಮ್ಮನ ಕಟ್ಟಪ್ಪಣೆ ಆಗೋಗಿದೆ. ಫೋಟೋ ಕಳ್ಸು ಅಂತ ಕೇಳೋದು ನೋಡು! ಬಂದ್‌ ನೋಡ್ಕಂಡ್‌ ಹೋಗ್ಬೇಕಪ್ಪʼ 

“ಮ್.‌ ನಾನೇನೊ ಮಾರನೇ ದಿನವೇ ಬರಬೇಕೂಂತಿದ್ದೆ. ರಜ ಕೂಡ ಹಾಕಿಬಿಟ್ಟಿದ್ದೆ. ನಿನ್ನ ಮೆಸೇಜು ಬರದಂತೆ ಮಾಡಿತು….. ಹೋಗ್ಲಿ ಬಿಡು…. ಮುಂದಿನ ವಾರ ಯಾವತ್ತಿಗಾದರೂ ಬಂದು ಹೋಗ್ತೀನಿ….. ಬರಬಹುದಲ್ಲ ನಿಮ್ಮ ಮನೆಗೆ” 

ಅವನ ವ್ಯಂಗ್ಯ ಚುಚ್ಚಿತು. ʼಅದ್ರಲ್ಲೇನಿದೆ ಬಾʼ 

“ಹಂಗಲ್ಲ….ಕೆಲವೊಂದು ಸಲ ನಾ ನಿಮ್ಮ ಮನೆಗೆ ಬರೋದು ನಿಂಗಾಗಲ್ಲವಲ್ಲ…. ಅದಿಕ್ಕೆ ಕೇಳ್ದೆ ಬರಬೋದೋ ಇಲ್ವೋ ಅಂತ” ಮತ್ತಷ್ಟು ವ್ಯಂಗ್ಯದಿಂದ ಕೇಳಿದ. 

ʼಅದ್ರಲ್ಲೇನಿದೆ ಬಾರೋ. ಸರಿ ಕಣೋ ಇವ್ಳು ಎದ್ಲು. ಆಮೇಲ್‌ ಮೆಸೇಜ್‌ ಮಾಡ್ತೀನಿʼ ಎಂದೆ. ರಾಧ ಹಾಲಿಲ್ಲದ ಮೊಲೆ ಚೀಪುತ್ತ ನಿದ್ರೆಗೆ ಶರಣಾಗಿದ್ದಳು. ಅವಳು ಎಚ್ಚರವಾಗದಂತೆ ಮೆಲ್ಲಗೆ ಮೊಲೆಯಿಂದ ಬಿಡಿಸಿದೆ. ನಿದ್ರೆಯಲ್ಲೂ ಒಂದು ಸುತ್ತು ನನ್ನ ಮೇಲೆ ಕೋಪ ತೋರಿಸಿದಳು ಮೊಲೆಯಿಂದ ಬಿಡಿಸಿದ್ದಕ್ಕೆ. ಜಾಗರೂಕವಾಗಿ ಚೂರೂ ಸದ್ದಾಗದಂತೆ ಪಕ್ಕಕ್ಕೆ ಮಲಗಿಸಿದೆ. ಮೇಜಿನ ಮೇಲಿದ್ದ ಅನ್ನ ಸಾರು ತಣ್ಣಗಾಗಿತ್ತು. ತಿನ್ನುವ ಮನಸ್ಸಾಗಲಿಲ್ಲ. ಫೇಸ್‌ ಬುಕ್ಕು ತೆರೆದು ʼWe are blessed with a baby girlʼ ಎಂದು ಸ್ಟೇಟಸ್‌ ಅಪ್ಡೇಟ್‌ ಮಾಡಿ ಕ್ಷಣ ಕಳೆದಿರಲಿಲ್ಲ. "ಮಗು ಎದ್ದಾಗ ಮೆಸೇಜ್‌ ಮಾಡೋಕ್‌ ಆಗಲ್ಲ ಅಂತ ಗೊತ್ತು, ಫೇಸ್ಬುಕ್‌ ಸ್ಟೇಟಸ್‌ ಅಪ್ಡೇಟ್‌ ಮಾಡಬಹುದು ಅಂತ ಗೊತ್ತಿರಲಿಲ್ಲ. ಟೇಕ್‌ ಕೇರ್. ಬಾಯ್”‌ ಎಂದು ಸಾಗರನ ಮೆಸೇಜು ಬಂತು. ಇವನಿಗೇನ್‌ ಅರ್ಥವಾಗಲ್ವ? ನನ್ನ ಸುಸ್ತು ನನಗೆ, ಮೈಂಡಲ್‌ ಏನೇನೋ ಯೋಚನೆ ಕಾತರ ಗಾಬರಿ ಚಿಂತೆ, ಕೆಲವೊಮ್ಮೆ ಎಲ್ಲಿ ಹಿಸ್ಟೀರಿಯಾಗೆ ಒಳಗಾಗಿಬಿಡ್ತೇನೋ ಅಂತೆಲ್ಲ ಭಯವಾಗ್ತಿರ್ತದೆ. ಇವ ನೋಡಿದರೆ ಬರೀ ವ್ಯಂಗ್ಯದ ಮೇಲೆ ವ್ಯಂಗ್ಯ ಮಾಡ್ತಾನೆ….ನನಗೇನು ಮೂರೊತ್ತೂ ಇವನಿಗೆ ಮೆಸೇಜು ಮಾಡಿಕೊಂಡಿರುವುದೇ ಕೆಲಸವಾ? ನನ್ನ ಸ್ಪೇಸ್‌ ನನಗಿಲ್ಲವಾ? ನನ್ನ ಎಫ್.ಬಿ ನಾ ಉಪಯೋಗಿಸೋಕೆ ಇವನ ಕಣ್ಗಾವಲಿನಲ್ಲಿರಬೇಕಾ? ಸದ್ಯ, ಸಾಗರ ಹತ್ತಿರವಾದ ಶುರುವಿನಲ್ಲೊಮ್ಮೆ ರಾಜೀವನಿಗೆ ಡೈವೋರ್ಸ್‌ ಕೊಟ್ಟು ಸಾಗರನನ್ನು ಮದುವೆಯಾದರೆ ಹೇಗೆ ಎಂಬ ಯೋಚನೆ ಬಂದಿತ್ತು... ಆ ಯೋಚನೆಯನ್ನು ಅಲ್ಲೇ ಮೊಟಕಿಹಾಕಿ ಒಳ್ಳೆ ಕೆಲಸ ಮಾಡಿದೆ….ಸಾಗರನ ಜೊತೆಗೆ ಏಗುವುದು ಸುಲಭವಲ್ಲ…. ಕಟ್ಟುಪಾಡು ಜಾಸ್ತಿ …. ರಾಜೀವನೇ ವಾಸಿ ಹೆಚ್ಚು ಯಾವುದರಲ್ಲೂ ತಲೆಹಾಕೋದಿಲ್ಲ….. ತಲೆಹಾಕೋದಿಲ್ಲ ಅನ್ನೋದು ಕೂಡ ಬೇಸರ ಮೂಡಿಸ್ತದಲ್ಲ ನನಗೆ….. ಬೆಳಿಗ್ಗೆ ಹತ್ತಕ್ಕೆ ಅವರ ಆಫೀಸು, ಇಲ್ಲೇ ಬಂದು ಮಗಳನ್ನು ನೋಡಿಕೊಂಡು ಇಲ್ಲೇ ತಿಂಡಿ ತಿಂದುಕೊಂಡು ಹೋಗಬಹುದಲ್ಲ. ಮಗಳ ನೆಪದಲ್ಲಲ್ಲದಿದ್ದರೂ ತಿಂಡಿಯ ನೆಪದಲ್ಲಾದರೂ ಬಂದು ಹೋಗಬಹುದಲ್ಲ. ಮನೆಯೇನು ದೂರದಲ್ಲಿದೆಯಾ? ನಡೆದು ಬಂದರೆ ಐದು ನಿಮಿಷ, ಬೈಕಿನಲ್ಲಿ ನಿಮಿಷವೂ ಬೇಡ. ಉಹ್ಞೂ, ಅವರು ಬರುವುದಿಲ್ಲ. ರಾತ್ರಿ ಎಂಟರ ಮೇಲೆ ಬಂದು ಹೋಗುತ್ತಾರಷ್ಟೇ. ಒಂದೊಂದು ದಿನ ಮಗುವನ್ನೆತ್ತಿಕೊಂಡು ತೊಡೆ ಮೇಲೆ ಮಲಗಿಸಿಕೊಳ್ಳುತ್ತಾರೆ, ಇನ್ನುಳಿಕೆ ದಿನ ಅದೂ ಇಲ್ಲ. ನೋಡ್ತಾರೆ. ಹೋಗ್ತಾರೆ ಅಷ್ಟೇ. ಏನ್‌ ಗಂಡು ಜನ್ಮವೋ ಅಂತ ಬಯ್ದುಕೊಳ್ಳುವಾಗ ರಾಧ ಎದ್ದಳು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು...

No comments:

Post a Comment