Jun 1, 2018

ಹೋಗಿಬನ್ನಿ ಸಿದ್ದರಾಮಯ್ಯನವರೆ......

ಕು.ಸ.ಮಧುಸೂದನ ರಂಗೆನಹಳ್ಳಿ
ನಿಮ್ಮ ಮತ್ತು ನಿಮ್ಮ ಪಕ್ಷದ ಈ ಸೋಲು ಅನಿರೀಕ್ಷಿತವಾಗಿದ್ದರೂ, ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿದರ ಮುನ್ಸೂಚನೆ ನನಗೇ ಅರಿವಿಲ್ಲದಂತೆ ಇತ್ತೆಂಬುದು ಇದೀಗ ನಿಜವೆನಿಸುತ್ತಿದೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾದ ಮೊದಲ ದಿನಗಳಲ್ಲಿಯೇ 'ಟಾರ್ಗೆಟ್ ಸಿದ್ದರಾಮಯ್ಯ' ಎಂಬುದೊಂದು ಲೇಖನ ಬರೆದಿದ್ದೆ. ಹೌದು ಈ ನೆಲದ ಮೆಲ್ವರ್ಗಗಳು, ಪಾಳೇಗಾರಿಕೆಯ ಪಳೆಯುಳಿಕೆಗಳು, ಜೊತೆಗೆ ನಿಮ್ಮದೇ ಪಕ್ಷದ ನಿಮ್ಮ ಹಿತ ಶತ್ರುಗಳು ಕಾಂಗ್ರೆಸ್ಸನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಸೋಲಿಸಲು ಪಣತೊಟ್ಟು ನಿಂತಿದ್ದವು. ಆ ಶಕ್ತಿಗಳಿಗೆ ಗೊತ್ತಿತ್ತು ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸೋಲಿಸಬೇಕೆಂದರೆ ಮೊದಲು ಸಿದ್ದರಾಮಯ್ಯನವರನ್ನು ಹಣಿಯಬೇಕೆಂಬುದು. ಇದೇನು ಈ ಚುನಾವಣೆ ಘೋಷಣೆಯಾದ ನಂತರ ಉದ್ಭವವಾದ ಹೊಸ ಬೆಳವಣಿಗೆಯೇನಲ್ಲ.
2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರದ ಮೊದಲ ಕೆಲಸವಾಗಿ, ನೀವು ಅನ್ನಭಾಗ್ಯ ಕಾರ್ಯಕ್ರಮವನ್ನು ಘೋಷಿಸಿದ ತಕ್ಷಣವೇ ಸದರಿ ವರ್ಗಗಳಲ್ಲಿ ಒಂದು ಅಸಹನೆಯ ಕಿಡಿ ಹೊತ್ತಿಕೊಂಡಿತು. ಕಲ್ಯಾಣರಾಜ್ಯದ ಎ.ಬಿ.ಸಿ.ಡಿ ಗೊತ್ತಿರದ ಅಕ್ಷರಸ್ಥ ಮೇಲ್ವರ್ಗಗಳಿಗೆ ಪ್ರಜಾಪ್ರಭುತ್ವ ಸರಕಾರವೊಂದು ನೀಡುವ ಯಾವುದೇ ಕೊಡುಗೆಗಳೂ ತಮ್ಮ ತೆರಿಗೆ ಹಣವನ್ನು ಪೋಲು ಮಾಡುವ ರೀತಿಯೆಂಬ ಅನಿಸಿಕೆ ಸದಾ ಇರುತ್ತದೆ. ಹಾಗಾಗಿಯೇ ಅನ್ನಭಾಗ್ಯ ಘೋಷಣೆಯಾದ ತಕ್ಷಣ ಈ ವರ್ಗ ಮಾಡಿದ ಮೊದಲ ಕೆಲಸವೆಂದರೆ ಅನ್ನಭಾಗ್ಯದ ಫಲಾನುಭವಿಗಳು ಸೋಮಾರಿಗಳಾಗುತ್ತಾರೆ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ಜನ ಸಿಗುವುದಿಲ್ಲವೆಂಬ ಹುರುಳಿಲ್ಲದ ವಾದಗಳನ್ನು ಜನರ ಮನಸಲ್ಲಿ ಬಿತ್ತ ತೊಡಗಿದ್ದು. ಮುಂದುವರೆದು ಉಚಿತವಾಗಿ ಅಕ್ಕಿ ಪಡೆಯುವ ಸಮುದಾಯ ಶಾಶ್ವತವಾಗಿ ಸೋಮಾರಿಗಳಾಗಿ ದೇಶದ ಉತ್ಪಾದನೆ ಕುಸಿಯುತ್ತದೆ ಎಂಬಂತಹ ಹುಸಿ ವಿಚಾರವೊಂದನ್ನು ಹರಡತೊಡಗಿದವು. ಕಳೆದ ಐದು ವರ್ಷಗಳ ಸಾಮಾಜಿಕ ಜಾಲತಾಣಗಳನ್ನು, ಇತರೇ ಸಮೂಹ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಅಪಪ್ರಚಾರಗಳನ್ನು ನೋಡಬಹುದಾಗಿದೆ. ಹಸಿದವನಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು ಮೀನು ಕೊಡುವುದಲ್ಲ ಎಂಬಂತಹ ನಾಣ್ಣುಡಿಗಳನ್ನು ಪ್ರಚುರ ಪಡಿಸತೊಡಗಿದ ಈ ವರ್ಗಗಳು ನಿಮ್ಮ ಆಶಯಗಳನ್ನು ಜನ ಅನುಮಾನದಿಂದ ನೋಡುವಂತೆ ಮಾಡಲು ಯಶಸ್ವಿಯಾಗುತ್ತ ಹೋದವು. ನಂತರದ ದಿನಗಳಲ್ಲಿಯೂ ನೀವು ಆರಂಭಿಸಿದ ಹಲವು ಭಾಗ್ಯಗಳನ್ನು ಟೀಕಿಸುತ್ತ ನೀವು ರಾಜ್ಯದ ಖಜಾನೆಯನ್ನು ಖಾಲಿ ಮಾಡಲೆಂದೇ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂಬಂತಹ ಅಪಪ್ರಚಾರ ಶುರು ಮಾಡಿದವು.

ನೀವು ಗಮನಿಸಿದ್ದೀರೊ ಇಲ್ಲವೊ ನೀವು ತಳಮಟ್ಟದ ಜನರಿಗಾಗಿ ಒಂದೊಂದೇ ಭಾಗ್ಯಗಳನ್ನು ಕೊಡುತ್ತ ಬರುವಾಗ ಜನಪ್ರಿಯ ಸುದ್ದಿ ವಾಹಿನಿಯೊಂದರ ಸಂಪಾದಕ ಆಂಕರೊಬ್ಬಳ ಜೊತೆ ಕೂತು ಅಕ್ಷರಶ: ತಲೆ ಹರಟೆಯ ಮಾತಾಡುತ್ತ 'ಹೀಗೇ ಆದರೆ ಮುಖ್ಯಮಂತ್ರಿಗಳು ಎಣ್ಣೆ ಭಾಗ್ಯವನ್ನು ಘೋಷಿಸುವ ಸಮಯ ದೂರವಿಲ್ಲ' ಎಂದು ಸಾರ್ವಜನಿಕವಾಗಿ ನಿಮ್ಮನ್ನು ಅವಮಾನಿಸುವ ಮಟ್ಟಕ್ಕೂ ಹೋದ. ಮೇಲ್ಜಾತಿಯಲ್ಲಿ ಹುಟ್ಟಿ ದಾನ ಬಂದ ಹಸುವಿನ ಹಾಲು ತುಪ್ಪ ತಿಂದು ಬೆಳೆದ ಅವನಿಗೆ ನೀವು ಶಾಲಾ ಮಕ್ಕಳಿಗೆ ನೀಡಿದ ಕ್ಷೀರಭಾಗ್ಯದ ಹಿಂದಿನ ಉದಾತ್ತ ನಿಲುವು ಹೇಗೆ ಅರ್ಥವಾಗಲು ಸಾದ್ಯ?

ಹೀಗೆ ನೀವು ನೀಡಿದ ಉಚಿತ ಲ್ಯಾಪ್ ಟಾಪ್ ಉಚಿತ ಬಸ್ ಪಾಸ್, ಶಾದಿ ಭಾಗ್ಯ, ಉಚಿತ ಅನಿಲ ಭಾಗ್ಯ ಮುಂತಾದ ಭಾಗ್ಯಗಳಿಗೆಲ್ಲ ಚಿತ್ರವಿಚಿತ್ರವಾದ ಕತೆ ಕಟ್ಟುತ್ತ ನಿಮ್ಮ ಬಗ್ಗೆ ವ್ಯವಸ್ಥಿತವಾದ ಅಪಪ್ರಚಾರವನ್ನು ಮಾಡಲಾಗುತ್ತ ಬಂದ ಮೇಲ್ವರ್ಗ ಈ ಕತೆಗಳು ಸಾಕಾಗಿತ್ತಿಲ್ಲವೆಂದು ಕೊಂಡು ಸಿದ್ದರಾಮಯ್ಯನವರ ಈ ಭಾಗ್ಯಗಳಿಗೆಲ್ಲ ಹಣ ಕೊಡುತ್ತಿರುವುದು ಕೇಂದ್ರದ ಮೋದಿ ಸರಕಾರವೆಂಬ ಹೊಸ ಸುಳ್ಳೊಂದನ್ನು ಸೇರಿಸಿ ಹೇಳತೊಡಗಿದವು.

ಎಪ್ಪತ್ತರ ದಶಕದ ನಂತರ ಕಾಂಗ್ರೇಸ್ಸಿನ (ಅರಸು ಯುಗದ) ಕೆಲವು ಪ್ರಗತಿಪರ ಯೋಜನೆಗಳಿಂದಾಗಿ (ಭೂಸುಧಾರಣೆ, ಮೀಸಲಾತಿ ಇತ್ಯಾದಿ) ಸಮಾಜದಲ್ಲಿ ತಮ್ಮ ಪ್ರತಿಷ್ಟೆಯನ್ನೂ, ತಳಸಮುದಾಯಗಳ ಮೇಲಿದ್ದ ಅದುವರೆಗಿನ ಹಿಡಿತವನ್ನು, ತನ್ಮೂಲಕ ರಾಜಕೀಯ ಹಿಡಿತವನ್ನೂ ಕಳೆದುಕೊಂಡಿದ್ದ ಪ್ರತಿಷ್ಠಿತ ಜಾತಿಗಳ ಕಾಂಗ್ರೆಸ್ ದ್ವೇಷ 2013ರಲ್ಲಿ ನಿಮ್ಮ ವಿರುದ್ದ ತಿರುಗಲು ಕಾರಣ ನೀವು ಅಹಿಂದ ವರ್ಗದ ಪರವೆಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು.

ನೀವು ಕನ್ನಡದ ಅಸ್ಮಿತೆಯ ಪ್ರಶ್ನೆ ಮತ್ತು ನಾಡದ್ವಜದ ಬಗ್ಗೆ ಮಾತಾಡಿದಾಗ ಅದನ್ನು ದೇಶದ್ರೋಹವೆಂದು ಬಣ್ಣಿಸುತ್ತ, ನಿಮ್ಮ ಹಿಂದಿ ಹೇರಿಕೆಯ ವಿರುದದ್ದ ನಿಲುವನ್ನು ರಾಷ್ಟ್ರೀಯತೆಯ ವಿರುದ್ದವೆಂದು ಅರ್ಥೈಸುತ್ತ ಜನರು ನಿಮ್ಮ ಬದ್ದತೆಯನ್ನೇ ಅನುಮಾನಿಸುವಂತಹ ಸನ್ನಿವೇಶವೊಂದನ್ನು ಸೃಷ್ಠಿಸಿದರು. ಇಷ್ಟು ಮಾತ್ರವಲ್ಲದೆ ಗ್ರಾಮೀಣ ಜನರಿಗೆ ಸಹಜವಾಗಿಯೇ ಮೈಗೂಡಿ ಬರುವ ಗುಣಗಳು ನಿಮ್ಮಲ್ಲಿಯೂ ಇದ್ದವು (ಅವು ಹುಟ್ಟಿನಿಂದ ಹಳ್ಳಿಯಲ್ಲಿಯೇ ಬದುಕುತ್ತಿರುವ ನಮ್ಮಂತವರಲ್ಲಿಯೂಇವೆ) ಅವನ್ನು ಈ ಬಿಳಿ ಬಟ್ಟೆಯ ಜನ ನಿಮ್ಮ ಅಹಂಕಾರವೆಂದು, ನಿಮ್ಮ ಉಡಾಫೆಯೆಂದು ಬಣ್ಣಕಟ್ಟಿ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತ ಬಂದರು. ನಿಮ್ಮ ಮಗ ಸತ್ತಾಗ ಆ ಸಾವಿಗೂ ಇಲ್ಲಸಲ್ಲದ ಕಾರಣಗಳನ್ನು ಆರೋಪಿಸಿ ಆ ನಿಮ್ಮ ದು:ಖವನ್ನೂಈ ಶಕ್ತಿಗಳು ಸಂಭ್ರಮಿಸಿದವು.

ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ ಮುಗಿಯುವುದಿಲ್ಲ, ಬಿಡಿ. ಒಟ್ಟಿನಲ್ಲಿ ನಾನು ಮೊದಲೇ ಹೇಳಿದ ಆ ಶಕ್ತಿಗಳಿಗೆ ನಿಮ್ಮನ್ನು ವೈಯುಕ್ತಿಕವಾಗಿ ಸೋಲಿಸುವುದರಿಂದ ಮಾತ್ರ ಕಾಂಗ್ರೇಸ್ಸನ್ನು ಸೋಲಿಸಬಹುದೆಂಬ ಸತ್ಯ ಅರಿವಾಗಿ, ಆ ದಿಸೆಯಲ್ಲಿ ನಿಮ್ಮೆಲ್ಲ ಶತ್ರುಗಳೂ ಒಂದಾಗುತ್ತ ಹೋದರು. ಇದಕ್ಕಾಗಿ ಅವರು ಲಭ್ಯವಿದ್ದ ಎಲ್ಲ ಮಾಧ್ಯಮಗಳನ್ನು, ಅಸ್ತ್ರಗಳನ್ನೂ ಬಳಸಿಕೊಂಡವು.

ನಿಮ್ಮ ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡ ಅಹಿಂದ ವರ್ಗ ಸಹ ಕೊನೆಯಲ್ಲಿ ನಿಮ್ಮ ಜೊತೆ ನಿಲ್ಲದೇ ಹೋದವೆಂಬುದು ಸಹ ವಿಚಿತ್ರ ಮತ್ತು ವಿಷಾದನೀಯ ವಿಚಾರ!

ಹಾಗೆಂದು ನೀವೇನು ತಪ್ಪು ಮಾಡಲಿಲ್ಲವೆಂದು ನಾನು ಹೇಳಲಾರೆ. ನಿಮ್ಮ ಐದು ವರ್ಷಗಳ ಆಡಳಿತದ ದಾರಿಯ ತಪ್ಪುಗಳ ಬಗ್ಗೆಯೂ ನಾನು ಸಾಕಷ್ಟು ಬರೆಯುವುದಿದೆ. ಅದನ್ನು ಪ್ರತ್ಯೇಕವಾಗಿಯೇ ಬರೆಯಬೇಕಾಗುತ್ತದೆ. ಆದರೆ ನಿಮ್ಮ ಸೋಲಿನ ಈ ಕ್ಷಣದಲ್ಲಿ ತಕ್ಷಣಕ್ಕೆ ನಿಮಗೆ ಹೇಳಲು ನನಗೆ ತೋಚಿದ್ದು ಇಷ್ಟೆ!

ನಮಸ್ಕಾರಗಳು! ಹೋಗಿಬನ್ನಿ, ಸಿದ್ದರಾಮಯ್ಯನವರೆ ಒಳ್ಳೆಯದಾಗಲಿ

2 comments:

  1. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ಧರಾಮಯ್ಯನವರು ಅಧಿಕಾರಕ್ಕೇರಿದ ನಂತರ ದರ್ಪ ಹಾಗೂ ಅಹಂಕಾರ ಬೆಳೆಸಿಕೊಂಡರು. ಒಬ್ಬ ಒಳ್ಳೆಯ ಆಡಳಿತಗಾರ ಸರಳತೆಯನ್ನು ಅಧಿಕಾರಕ್ಕೇರಿದ ನಂತರವೂ ಉಳಿಸಿಕೊಳ್ಳುತ್ತಾನೆ. ಸಿದ್ಧರಾಮಯ್ಯನವರು ಅಧಿಕಾರದ ಅಮಲಿನಲ್ಲಿ ಸರಳತೆಯನ್ನು ಮರೆತರು. ಸಿದ್ಧರಾಮಯ್ಯನವರ ಅವಧಿಯಲ್ಲಿ ಆಡಳಿತ ಉತ್ತಮವಾಗಿರಲಿಲ್ಲ. ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸ ಸುಗಮವಾಗಿ ನಡೆಯುವ ವ್ಯವಸ್ಥೆ ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ಧರಾಮಯ್ಯನವರು ಮಾಡಬಹುದಾಗಿತ್ತು. ಅಂತ ಅವಕಾಶ ಇದ್ದರೂ ಅದನ್ನು ಸಿದ್ಧರಾಮಯ್ಯ ಬಳಸಿಕೊಳ್ಳದೆ ಹೋದುದು ದುರಂತ. ಜನಸಾಮಾನ್ಯರು ಸರಕಾರಿ ಅಧಿಕಾರಿಗಳ ನಿರ್ಲಕ್ಷ, ಆಲಸ್ಯ, ದರ್ಪಗಳಿಂದ ಅನುಭವಿಸುವ ತೊಂದರೆಗಳನ್ನು ನಿವಾರಿಸುವ ಯಾವುದೇ ಆಡಳಿತಾತ್ಮಕ ಕ್ರಮಗಳನ್ನು ಸಿದ್ಧರಾಮಯ್ಯನವರು ಕೈಗೊಳ್ಳಲಿಲ್ಲ. ಜನಸಾಮಾನ್ಯರ ತೊಂದರೆಗಳಿಗೆ ಕಿವಿಯಾಗುವ ಉತ್ತಮ ಅಧಿಕಾರಿಗಳನ್ನು ಸಿದ್ಧರಾಮಯ್ಯನವರು ನೇಮಿಸಲಿಲ್ಲ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಒಂದು ಉತ್ತಮ ವ್ಯವಸ್ಥೆಯನ್ನು ಸಿದ್ಧರಾಮಯ್ಯನವರು ಮಾಡಲಿಲ್ಲ. ಇದು ಒಬ್ಬ ಉತ್ತಮ ಮುಖ್ಯಮಂತ್ರಿ ಮಾಡಬೇಕಾದ ಅತಿ ಮುಖ್ಯವಾದ ಕೆಲಸ. ಇದನ್ನೇ ಸಿದ್ಧರಾಮಯ್ಯನವರು ಮಾಡಲಿಲ್ಲ. ಜನಸಾಮಾನ್ಯರೊಂದಿಗೆ ನೇರಸಂಪರ್ಕಕ್ಕೆ ಅಂತರ್ಜಾಲ, ಮಿಂಚಂಚೆಗಳಂಥ ವ್ಯವಸ್ಥೆಗಳನ್ನು ಕೂಡ ಸಿದ್ಧರಾಮಯ್ಯನವರು ಏರ್ಪಡಿಸಿಕೊಳ್ಳಲಿಲ್ಲ. ಇದು ಇಂದು ಉತ್ತಮ ಆಡಳಿತ ನೀಡಬೇಕಾದರೆ ಅತಿ ಮುಖ್ಯವಾಗಿ ಮಾಡಲೇಬೇಕಾದ ಕೆಲಸ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ಅತ್ಯಂತ ನಿರ್ಲಕ್ಷ ವಹಿಸಿದರು. ಈ ಅಸಮಾಧಾನವೇ ಈ ಚುನಾವಣೆಗಳ ಫಲಿತಾಂಶದಲ್ಲಿ ವ್ಯಕ್ತವಾಗಿದೆ.

    ಸಿದ್ಧರಾಮಯ್ಯನವರು ಭಾರತೀಯ ಪಕ್ಷದವರು ಅನುಸರಿಸುವ ಅತಿರಂಜಿತ ಪ್ರಚಾರವನ್ನು ನೆಚ್ಚಿಕೊಂಡರು. ಒಂದೇ ಸವನೆ ಜನರ ತೆರಿಗೆಯ ಹಣವನ್ನೇ ಬಳಸಿ ಅಬ್ಬರದ ಜಾಹೀರಾತು ಪ್ರಚಾರ ಕೈಗೊಂಡರು. ಒಳ್ಳೆಯ ಆಡಳಿತ ನೀಡದೆ ಇಂಥ ಅಬ್ಬರದ ಪ್ರಚಾರದಿಂದ ಗೆಲ್ಲಲು ಸಾಧ್ಯವಿಲ್ಲ. ಹಿಂದೆ ಭಾರತ ಪ್ರಕಾಶಿಸುತ್ತಿದೆ ಎಂದು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮಾಡಿದ ರೀತಿಯಲ್ಲಿಯೇ ಸಿದ್ಧರಾಮಯ್ಯನವರೂ ಪ್ರಚಾರ ಮಾಡಿದರು. ಇಂಥ ಅಬ್ಬರದ ಪ್ರಚಾರ ಪ್ರಯೋಜನ ನೀಡುವುದಿಲ್ಲ. ಸಿದ್ಧರಾಮಯ್ಯನವರು ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಿದರು. ಇಂಥ ಒಂದು ಕ್ರಮ ಸಮಾಜವಾದಿ ಹಿನ್ನೆಲೆಯ ಸಿದ್ಧರಾಮಯ್ಯನವರು ಕೈಗೊಂಡದ್ದು ಒಂದು ದೊಡ್ಡ ವಿಪರ್ಯಾಸ. ಸಮಾಜವಾದಿ ಸಂವೇದನೆಗಳನ್ನೇ ಸಿದ್ಧರಾಮಯ್ಯನವರು ಕಳೆದುಕೊಂಡಿರುವುದನ್ನು ಇದು ಸೂಚಿಸುತ್ತದೆ. ನುಡಿದಂತೆ ನಡೆದಿದ್ದೇವೆ ಎಂದು ಅಬ್ಬರದ ಪ್ರಚಾರ ಮಾಡಿ ಅದಕ್ಕೆ ತದ್ವಿರುದ್ಧವಾಗಿ ನಡೆದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣ. ಸಿದ್ಧರಾಮಯ್ಯನವರ ಅಧಿಕಾರಾವಧಿಯಲ್ಲಿ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದ ದುಸ್ಥಿತಿ ರಾಜ್ಯದಾದ್ಯಂತ ರೂಪುಗೊಂಡಿತ್ತು. ಉತ್ತಮ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಅಸಿಸ್ಟಂಟ್ ಕಮೀಷನರುಗಳು ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಇರಲಿಲ್ಲ. ಉತ್ತಮ ನೀಡಬೇಕಾದರೆ ಜನಸಂವೇದಿಯಾದ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಅಸಿಸ್ಟಂಟ್ ಕಮೀಷನರುಗಳನ್ನು ನೇಮಿಸುವುದು ಅತೀ ಅವಶ್ಯ. ಇಂದು ಅಧಿಕಾರದಲ್ಲಿರುವ ಶೇಕಡಾ ೯೫ರಷ್ಟು ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಅಸಿಸ್ಟಂಟ್ ಕಮೀಷನರುಗಳು ಸ್ಪಂದಿಸುವ ಒಂದು ಅತಿ ಮುಖ್ಯ ಗುಣವನ್ನೇ ಹೊಂದಿಲ್ಲ. ಇವರಲ್ಲಿ ಇರುವುದು ಜನಸಾಮಾನ್ಯರ ಬಗ್ಗೆ ನಿರ್ಲಕ್ಷ, ಅಧಿಕಾರದ ದರ್ಪ ಮಾತ್ರ . ಇಂಥ ತಾವು ದೇವಲೋಕದಿಂದ ಇಳಿದುಬಂದವರು ಎಂಬ ಕಾಲದ ಸರಕಾರಿ ಅಧಿಕಾರಿಗಳ ನಡವಳಿಕೆಯನ್ನು ಎಲ್ಲಿಯವರೆಗೆ ಬದಲಾಯಿಸಲು ನಡೆಸುವವರಿಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಉತ್ತಮ ಆಡಳಿತ ಎಂಬುದು ಮರೀಚಿಕೆಯೇ ಸರಿ.

    ಇಂದು ಕೂಡ ಕಾಂಗ್ರೆಸ್ಸಿಗರು ತಾವು ಸೋಲಲು ಏನು ಕಾರಣ ಎಂಬ ಒಂದು ಸಮಾಲೋಚನೆಯನ್ನು, ಆತ್ಮವಿಮರ್ಶೆಯನ್ನು ಕೈಗೊಂಡಿಲ್ಲ ಅದರ ಬದಲು ಅಧಿಕಾರದ ಕುರ್ಚಿಗೆ ಲಾಬಿ ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಜನವಿರೋಧಿ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಈ ಪಕ್ಷಗಳೂ ಒಂದೇ ರೀತಿ. ಇವರ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ.

    ReplyDelete