May 27, 2018

ಪಕ್ಷಿ ಪ್ರಪಂಚ: ಮೈನಾ

Maina
ಮೈನಾ/ ಗೊರವಂಕ.
ಕೆನಾನ್ 550ಡಿ, ಕೆನಾನ್ 75 - 300 ಎಂ ಎಂ ಲೆನ್ಸ್
ಎಫ್/5.6, 1/125, ಐ ಎಸ್ ಓ 100
ಡಾ. ಅಶೋಕ್. ಕೆ. ಆರ್ 
ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿಯು ನಗರ ಪ್ರದೇಶಕ್ಕೆ ಸಂಪೂರ್ಣವಾಗಿ ಒಗ್ಗಿಹೋಗಿದೆ. ಆ ಕಾರಣದಿಂದಲೇ ಇವುಗಳ ಸಂತತಿ ಹೆಚ್ಚುತ್ತಲಿದೆ.

ಆಂಗ್ಲ ಹೆಸರು: - Common myna (ಕಾಮನ್ ಮೈನಾ)

 ವೈಜ್ಞಾನಿಕ ಹೆಸರು: - Acridotheris tristis (ಆಕ್ರಿಡೋಥೆರಿಸ್ ಟ್ರಿಸ್ಟಿಸ್)

ಮೈನಾ ಪಕ್ಷಿಯ ದೇಹ ಕಂದು ಬಣ್ಣದ್ದಾಗಿದೆ. ತಲೆಯ ಭಾಗ ಮತ್ತು ರೆಕ್ಕೆಗಳ ಕೊನೆಯ ಭಾಗ ಕಪ್ಪು ಅಥವಾ ಕಪ್ಪು ಮಿಶ್ರಿತ ಕಂದ ಬಣ್ಣವನ್ನೊಂದಿವೆ. ಹಳದಿ ಬಣ್ಣದ ಕಾಲು - ಕೊಕ್ಕುಗಳಿವೆ. ಮೈನಾ ಹಕ್ಕಿ ಹಾರುವಾಗ ರೆಕ್ಕೆಯ ಒಳ ಮತ್ತು ಹೊರಭಾಗದಲ್ಲಿ ಕೆಲವು ಬಿಳಿ ಪಟ್ಟಿಗಳನ್ನೂ ಕಾಣಬಹುದು. ಕಣ್ಣಿನ ಸುತ್ತ - ಕೆಳ ಮತ್ತು ಹಿಂಭಾಗದಲ್ಲಿ - ಹಳದಿ ಪಟ್ಟೆಯು ಎದ್ದು ಕಾಣಿಸುತ್ತದೆ. ಮೈನಾ ಪಕ್ಷಿಯ ಕಣ್ಣಿಗೊಂದು ಕೋಪದ ಭಾವವನ್ನು ಈ ಹಳದಿ ಪಟ್ಟಿ ಕರುಣಿಸುತ್ತದೆ.

Click here to read in English

ಗೂಡು ಇಂತದ್ದೇ ಇರಬೇಕೆನ್ನುವ ಹಟ ಮೈನಾ ಪಕ್ಷಿಗಿಲ್ಲ. ಕಡ್ಡಿ ಸಂಗ್ರಹಿಸಿ ಗೂಡು ಕಟ್ಟುವ ಅಭ್ಯಾಸವೇ ಬಹಳಷ್ಟು ಮೈನಾ ಪಕ್ಷಿಗಳಿಗೆ ಮರೆತುಹೋಗಿರಬೇಕು. ಹಳೆಯ ತೆಂಗಿನ ಮರಗಳಲ್ಲಿರುವ ಪೊಟರೆ, ಹೆಂಚು ಮತ್ತು ಗೋಡೆಯ ಕೆಳಗಿರುವ ಜಾಗ, ಚಿಮಣಿಯಲ್ಲಿನ ಸಂದುಗೊಂದಿ, ಕೊನೆಗೆ ಹೆದ್ದಾರಿಗಳಲ್ಲಿನ ಸೇತುವೆಗಳಲ್ಲಿ ನೀರು ಬಸಿದು ಹೋಗುವ ಸಲುವಾಗಿ ಅಲ್ಲಲ್ಲಿ ಹಾಕಿರುವ ಪೈಪುಗಳಲ್ಲೂ ಗೂಡು ಕಟ್ಟಿಕೊಂಡು ಸುಖ ಸಂಸಾರ ನಡೆಸುತ್ತವೆ.

ಜೀವನಕ್ಕೊಬ್ಬ ಸಂಗಾತಿ ಎಂಬ ತತ್ವವನ್ನು ನಂಬಿದಂತಿರುವ ಮೈನಾ ಪಕ್ಷಿಗಳು ಜೋಡಿಯಾಗೇ ಇರುತ್ತವೆ. ಏಕಾಂಗಿ ಮೈನಾ ಪಕ್ಷಿ ಕಾಣಸಿಗುವುದು ಇಲ್ಲವೇ ಇಲ್ಲ ಎನ್ನಬಹುದಾದಷ್ಟು ಅಪರೂಪ.

ಕಾಳು, ಹುಳ ಹುಪ್ಪಟೆ, ಮನುಷ್ಯ ಬಿಸಾಕಿದ ಆಹಾರ ಪದಾರ್ಥವನ್ನಿವು ತಿನ್ನುತ್ತವೆ. ಗೂಡಿನಲ್ಲಿ ಮರಿ ಇರುವ ಸಮಯದಲ್ಲಿ ಒಂದೇ ಬಾರಿಗೆ ಹತ್ತಕ್ಕೂ ಹೆಚ್ಚು ಹುಳುಗಳನ್ನು ಬಾಯಲ್ಲಿ ಕಚ್ಚಿ ಹಿಡಿದು ಕೊಂಡೊಯ್ಯುವ ಸಾಮರ್ಥ್ಯವೂ ಇವಕ್ಕುಂಟು.

ನಿಮ್ಮ ಮನೆಯ ಸುತ್ತಮುತ್ತ ಇನ್ಯಾವ ಪಕ್ಷಿ ಕಾಣದಿದ್ದರೂ ಇವುಗಳಂತೂ ಕಾಣಿಸಲೇಬೇಕು. ಎಲ್ಲ ರೀತಿಯ ಪರಿಸರಕ್ಕೂ ಅಷ್ಟರಮಟ್ಟಿಗೆ ಇವುಗಳು ಒಗ್ಗಿಹೋಗಿವೆ. ಮೈನಾಗಳೂ ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿ ಇಲ್ಲವಾದರೆ ಆ ಪರಿಸರ ವಾಸಯೋಗ್ಯವಾ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ!!

ಚಿತ್ರನೆನಪು: -
ಬೈಲುಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್ ನ ಆವರಣದಲ್ಲಿ ಇಳಿಸಂಜೆಯ ಹೊತ್ತಿನಲ್ಲಿ ತೆಗೆದ ಪಟವಿದು. ಆಗಷ್ಟೇ ಸೂರ್ಯ ಹೊಂಬಣ್ಣಕ್ಕೆ ತಿರುಗುತ್ತಿದ್ದ. ಸೂರ್ಯನ ಕಿರಣಗಳು ಮೈನಾ ಹಕ್ಕಿಯ ಹಳದಿ ಕೊಕ್ಕನ್ನು ಸ್ಪರ್ಷಿಸಿ ಕೊಕ್ಕು ಸ್ವರ್ಣದ ಹಾಗೆ ಹೊಳೆಯುವಂತೆ ಮಾಡಿತ್ತು. ನಂತರದ ದಿನಗಳಲ್ಲಿ ಇನ್ನೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆದಿರುವೆನಾದರೂ ನೆರಳು ಬೆಳಕಿನ ಆಟದ ಕಾರಣಕ್ಕೆ ಈ ಚಿತ್ರ ನನಗೆ ಅಚ್ಚುಮೆಚ್ಚು!

No comments:

Post a Comment