Jan 4, 2015

ಆರ್ಡಿನೆನ್ಸುಗಳಿಗಿದು ಅಚ್ಛೇ ದಿನ್!

Dr Ashok K R
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರವಿಡಿದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹತ್ತು ವರ್ಷದ, ಅದರಲ್ಲೂ ಎರಡನೇ ಯುಪಿಎ ಸರಕಾರದ ದುರಾಡಳಿತವನ್ನು ಹೀಗಳೆಯುತ್ತ. ಜೊತೆಜೊತೆಗೆ ಕಾಂಗ್ರೆಸ್ ಸರಕಾರ ಸಾಧಿಸಲಾಗದ ಅನೇಕ ಸಂಗತಿಗಳನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಾಡುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿ ‘ಅಚ್ಛೇ ದಿನ್’ ಅಭಿಯಾನವನ್ನು ಪ್ರಾರಂಭಿಸಿದ್ದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಬಹುತೇಕ ಸರಕಾರಗಳಂತೆ ಕೆಲವಷ್ಟು ಒಳ್ಳೆಯ ಕೆಲಸ, ಬಹಳಷ್ಟು ಅನಗತ್ಯ ಕೆಲಸಗಳು ಸರಕಾರದ ವತಿಯಿಂದ ನಡೆಯುತ್ತಿವೆ. ಜೊತೆಜೊತೆಗೆ ಅಪಾಯಕಾರಿ ರೀತಿಯ ಕೆಟ್ಟ ಕಾರ್ಯಗಳು ನರೇಂದ್ರ ಮೋದಿಯವರ ಸರಕಾರದಿಂದ ನಿಧನಿಧಾನಕ್ಕೆ ಜಾರಿಯಾಗುತ್ತಿವೆ. ಮತ್ತೀ ಅಪಾಯಗಳು ಪ್ರಸ್ತುತಕ್ಕೆ ಅನಿವಾರ್ಯವೆಂಬ ಭಾವನೆ ಜನಮಾನಸದಲ್ಲಿ ಮೂಡಿಸುವಲ್ಲಿ ಸರಕಾರದ ವಿವಿಧ ಮಂತ್ರಿಗಳ ಮಾತಿನ ಕಸರತ್ತು ಸಹಕರಿಸುತ್ತಿದೆ. ಆರ್ಡಿನೆನ್ಸುಗಳ ಬೆನ್ನು ಹತ್ತಿರುವ ಕೇಂದ್ರ ಸರಕಾರದ ಹೆಜ್ಜೆಗಳು ಕೊನೆಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಿಗೆ ಧಕ್ಕೆಯುಂಟುಮಾಡುತ್ತಿವೆ.

ಆರ್ಡಿನೆನ್ಸು ಅಥವಾ ಸುಗ್ರೀವಾಜ್ಞೆಗಳಿಗೆ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಸ್ಥಾನವಿಲ್ಲ. ಕಾರಣಾಂತರಗಳಿಂದ ಸಂಸತ್ ಅಧಿವೇಶನ ನಡೆಯದೇ ಇರುವಾಗ, ಅಥವಾ ಯುದ್ಧದಿಂದಲೋ ನೈಸರ್ಗಿಕ ವಿಕೋಪದಿಂದಲೋ ದೇಶದಲ್ಲಿ ತುರ್ತು ಪರಿಸ್ಥಿತಿಯಿದ್ದಾಗ ಜನರಿಗೆ ಅನುಕೂಲವಾಗುವ ಕಾನೂನುಗಳನ್ನು ಸುಗ್ರೀವಾಜ್ಞೆಯ ಮುಖಾಂತರ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವದಲ್ಲಿ ಸಂಸತ್ ಸದನಕ್ಕಿರುವ ಬೆಲೆಯನ್ನು ಈ ಆರ್ಡಿನೆನ್ಸುಗಳಿರುವ ಕಾಲಮಿತಿ ತೋರ್ಪಡಿಸುತ್ತದೆ. ಸುಗ್ರೀವಾಜ್ಞೆಗಳ ಆಯಸ್ಸು ಆರು ತಿಂಗಳು ಮಾತ್ರ. ಆರು ತಿಂಗಳೊಳಗೆ ಸಂಸತ್ ಅಧಿವೇಶನ ನಡೆದಲ್ಲಿ ಆ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಚರ್ಚೆಗೊಳಪಡಬೇಕು, ಪರ ವಿರೋಧದ ಅಭಿಪ್ರಾಯಗಳು ಚರ್ಚೆಯಾಗಬೇಕು. ಸಂಸತ್ ಅಧಿವೇಶನ ನಡೆಯದಿದ್ದರೆ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸಬೇಕು. ಒಂದಾದ ಮೇಲೊಂದರಂತೆ ಆರ್ಡಿನೆನ್ಸುಗಳನ್ನು ಕೇಂದ್ರ ಸರಕಾರ ಹೊರಡಿಸುತ್ತಿರುವುದಾದರೂ ಏತಕ್ಕೆ? ಈ ಬಾರಿ ಸಂಸತ್ ಅಧಿವೇಶವನ ನಡೆಯಿತಾದರೂ ಮತಾಂತರ, ಮರುಮತಾಂತರದ ಗಲಭೆ, ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡದ ನರೇಂದ್ರ ಮೋದಿ, ಪ್ರತಿಪಕ್ಷಗಳ ಅತಿಯಾದ ಹಟದ ವರ್ತನೆಗಳೆಲ್ಲವೂ ಸಂಸತ್ ಅಧಿವೇಶನ ಅರ್ಥಪೂರ್ಣವಾಗಿ ನಡೆಯದಿರಲು ಕಾರಣವಾದವು. ಆದರೂ ಸಂಸತ್ ಅಧಿವೇಶನ ಅಧಿಕೃತವಾಗಿ ನಡೆದಿದೆ. ಸಂಸತ್ ಅಧಿವೇಶನ ನಡೆದ ಕೆಲವು ದಿನಗಳಲ್ಲೇ ಸುಗ್ರೀವಾಜ್ಞೆ ಹೊರಡಿಸಿದೆ ಕೇಂದ್ರ ಸರಕಾರ! ಸಂಸತ್ತಿನಲ್ಲಿ ಮಸೂದೆಯ ರೂಪ ಚರ್ಚೆಗೊಳಪಟ್ಟು ಜಾರಿಯಾಗಬೇಕಾದ ಸಂಗತಿಗಳು ಸುಗ್ರೀವಾಜ್ಞೆಯ ಮೂಲಕ ಜಾರಿಯಾಗುತ್ತಿವೆ. ಪ್ರಜೆಗಳ ಕಾರಣದಿಂದ ಬಹುಮತ ಪಡೆದ ಸರಕಾರ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನವಲ್ಲವೇ ಇದು? ಲೋಕಸಭೆಯಲ್ಲಿ ಮಸೂದೆಯೊಂದನ್ನು ಜಾರಿಗೊಳಿಸಲು ಬಹುಮತಕ್ಕೆ ತ್ರಾಸು ಪಡಬೇಕಿಲ್ಲವಾದರೂ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣದಿಂದ ಕೇಂದ್ರ ಸರಕಾರ ಆರ್ಡಿನೆನ್ಸುಗಳನ್ನು ಜಾರಿಗೊಳಿಸುತ್ತಿದೆಯಾ?
ಹೊಕ್ಕೊಳ್ಳಿ ಜನಸಾಮಾನ್ಯರಿಗೆ ತತ್ ಕ್ಷಣಕ್ಕೆ ಅನುಕೂಲ ಮಾಡುವ ಉದ್ದೇಶದಿಂದ ಈ ಆರ್ಡಿನೆನ್ಸುಗಳನ್ನು ಜಾರಿಗೊಳಿಸಲಾಗುತ್ತಿದೆಯಾ ಎಂದು ಗಮನಿಸಿದರೆ ನಿರಾಸೆ ಮೂಡುತ್ತದೆ. ಉದ್ಯಮಪತಿಗಳು ಮತ್ತಷ್ಟು ಮಗದಷ್ಟು ಹಣ ಶೇಖರಿಸಲು ನೆರವಾಗುವ ಆರ್ಡಿನೆನ್ಸುಗಳು ಜಾರಿಯಾಗುತ್ತಿದೆ. ವಿಮಾ ವಿಭಾಗದಲ್ಲಿ ವಿದೇಶಿ ಹೂಡಿಕೆಯನ್ನು ಈಗಿದ್ದ 26%ನಿಂದ 49%ಗೆ ಏರಿಸಲಾಗಿದೆ. ಚಿಲ್ಲರೆ ಮಾರಾಟದಲ್ಲಿ ವಿದೇಶಿ ಹೂಡಿಕೆಯನ್ನು ಬಹುವಾಗಿ ವಿರೋಧಿಸಿದ್ದ ಬಿಜೆಪಿ ಈಗ ವಿದೇಶಿ ಹೂಡಿಕೆಗೆ ಹಾತೊರೆಯುತ್ತಿದೆ. ಮತ್ತೊಂದು ಸುಗ್ರೀವಾಜ್ಞೆ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಪಟ್ಟದ್ದು, ಮತ್ತೆ ಕಂಪನಿಗಳಿಗೆ ಪೂರಕವಾದ ಆಜ್ಞೆ. ಇವೆಲ್ಲಕ್ಕಿಂತಲೂ ಅನಾಹುತಕಾರಿ ಆರ್ಡಿನೆನ್ಸು ಭೂಸ್ವಾಧೀನಕ್ಕೆ ಸಂಬಂಧಪಟ್ಟಿದ್ದು. ಆಡಳಿತದ ಎಲ್ಲಾ ನಕಾರಾತ್ಮಕ ಅಂಶಗಳ ಜೊತೆಜೊತೆಗೆ ಯು.ಪಿ.ಎ ಸರಕಾರ ಭೂಸ್ವಾಧೀನ ಕಾಯ್ದೆಯನ್ನು ಮಾರ್ಪಡಿಸಿದ್ದು ಉತ್ತಮವಾಗಿತ್ತು. ಸಾಮಾನ್ಯವಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅತಿಹೆಚ್ಚು ಭೂಮಿ ಕಳೆದುಕೊಳ್ಳುವವರು ರೈತರು. ನಗರಕ್ಕೆ ವಲಸೆ ಹೋದವರಿಗೆ ಹಳ್ಳಿಯಲ್ಲಿನ ಭೂಮಿಯನ್ನು ಮಾರಿ ಕೈತೊಳೆದುಕೊಳ್ಳುವುದು ಸುಲಭವಾದರೂ ಹಳ್ಳಿಯಲ್ಲೇ ವಾಸಿಸುವವರಿಗೆ ಅಷ್ಟು ಸುಲಭದ ಕೆಲಸವಲ್ಲ. ಬಲವಂತದ ಭೂಸ್ವಾಧೀನ ತಡೆಯುವ ಸಲುವಾಗಿ ಭೂಸ್ವಾಧೀನ ಗೊತ್ತು ಮಾಡಿದ ಜಾಗದಲ್ಲಿರುವ 80% ಭೂಒಡೆಯರು ಒಪ್ಪಿಗೆ ನೀಡಿದರಷ್ಟೇ ಮುಂದಡಿ ಇಡಬೇಕು ಎಂದು ತಿದ್ದುಪಡಿ ತರಲಾಗಿತ್ತು.
ಈ ಕಾಯ್ದೆಯಿಂದ ಕಂಪನಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಈಗಿನ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಡಿಫೆನ್ಸ್, ರಾಷ್ಟ್ರೀಯ ಭದ್ರತೆ, ಹಳ್ಳಿಗಳ ಮೂಲಭೂತ ಸೌಕರ್ಯ, ವಿದ್ಯುಚ್ಛಕ್ತಿ, ಬಡವರಿಗಾಗಿ ಮನೆಗಳು ಮತ್ತು ಬಹುಮುಖ್ಯವಾಗಿ ಕೈಗಾರಿಕಾ ಕಾರಿಡಾರುಗಳನ್ನು ನಿರ್ಮಿಸುವಾಗ 80% ಭೂಒಡೆಯರ ಒಪ್ಪಿಗೆ ಕಡ್ಡಾಯವಲ್ಲ ಎಂದು ಬದಲಿಸಿಬಿಟ್ಟಿದೆ. ಸಾಮಾನ್ಯವಾಗಿ ಭೂಸ್ವಾಧೀನವೆಂದರೆ ಅದು ಭೂಒಡೆಯರು ಮತ್ತು ಸರಕಾರ ಅಥವಾ ಖಾಸಗಿ ಕಂಪನಿಗಳ ನಡುವಿನ ಹಣದ ವಿನಿಮಯ. ಆ ಭೂಮಿಯ ಜೊತೆ ಅದರ ಒಡೆತನ ಹೊಂದಿದವರಿಗಿಂತ ಅದರೊಡನೆ ಒಡನಾಟವಿಟ್ಟುಕೊಂಡವರಿಗೆ ಹೆಚ್ಚಿನ ಭಾಂದವ್ಯವಿರುತ್ತದೆ. ಅವರ ಜೀವನಕ್ಕೆ ಆ ಭೂಮಿಯೊಂದಿಗಿನ ಪ್ರತ್ಯಕ್ಷ ಅಥವಾ ಪರೋಕ್ಷ ಸಂಬಂಧ ಕಾರಣವಾಗಿರುತ್ತದೆ. ಹಿಂದಿನ ಕಾಯ್ದೆಯಲ್ಲಿ ಭೂಮಿಯೊಡನೆ ಆಧಾರಗೊಂಡಿರುವವರ ಮೇಲೆ ಭೂಸ್ವಾಧೀನದಿಂದಾಗುವ ಪರಿಣಾಮಗಳನ್ನು ಅಭ್ಯಸಿಸಿ ಅವರಿಗೂ ಪರಿಹಾರ ನೀಡಬೇಕೆಂಬ ಅತ್ಯುತ್ತಮ ಕಲಮಿತ್ತು. ಬ್ಯುಸಿನೆಸ್ಸಿನ ಮನಸ್ಥಿತಿಯವರಿಗೆ ಭೂಮಿಯೊಂದಿಗೂ ಜನರಿಗೆ ಸಂಬಂಧವಿರಬಹುದೆಂಬ ಕಲ್ಪನೆಯೇ ಇರುವುದಿಲ್ಲವಲ್ಲ. ಮುಲಾಜಿಲ್ಲದೆ ಈ ಕಲಮ್ಮನ್ನು ತೆಗೆಯಲಾಗಿದೆ. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕೆಂಬ ವಿಚಾರವನ್ನೂ ಹಿನ್ನೆಲೆಗೆ ತಳ್ಳಲಾಗಿದೆ.

ಒಟ್ಟಿನಲ್ಲಿ ಉದ್ಯಮಪತಿಗಳ ಕೃಪಾಕಟಾಕ್ಷದಿಂದಷ್ಟೇ ನಾವು ಗೆದ್ದಿರುವುದು ಎಂಬುದನ್ನು ಒತ್ತಿ ತೋರುತ್ತಿರುವಂತಿದೆ ಸರಕಾರದ ಈ ಆರ್ಡಿನೆನ್ಸುಗಳು. ಅಚ್ಚರಿಯ ಸಂಗತಿಯೆಂದರೆ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿಯೇ ನರೇಂದ್ರ ಮೋದಿ ಸರಕಾರ ಆರ್ಡಿನೆನ್ಸುಗಳ ವಿಚಾರದಲ್ಲಿ ಆರನೇ ಸ್ಥಾನದಲ್ಲಿದೆ! ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಹದಿನಾರು ಸರಕಾರಗಳಲ್ಲಿ ಇವರಿಗಾಗಲೇ ಆರನೇ ಸ್ಥಾನ! ಇವರ ಮೇಲಿರುವವರು ಅಲ್ಪಾವಧಿಯ ಸರಕಾರ ನಡೆಸಿದ ದೇವೇಗೌಡ, ಗುಜ್ರಾಲ್, ವಾಜಪೇಯಿ, ಅಧಿಕಾರ ತೆವಲಿಗೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಮತ್ತು ಪೂರ್ಣಾವಧಿ ಸರಕಾರ ನಡೆಸಿದ ನರಸಿಂಹರಾವ್. ಇನ್ನುಳಿದ ನಾಲ್ಕೂ ಚಿಲ್ಲರೆ ವರುಷಗಳಲ್ಲಿ ಆರ್ಡಿನೆನ್ಸುಗಳ ವಿಚಾರದಲ್ಲಿ ಬಿಜೆಪಿ ಸರಕಾರ ಮೊದಲ ಸ್ಥಾನಕ್ಕೇರಿ ಕುಖ್ಯಾತಿ ಪಡೆಯುವ ಎಲ್ಲಾ ಲಕ್ಷಣಗಳೂ ಇವೆ.

1 comment:

  1. Nice article.

    Anyways, my speculation is soon this process will change. BJP currently is in a minority position in rajya sabha. But as and when it starts to form majority governments in states, its tally in rajya sabha will increase and evantually it will have a majority in both the houses. Then BJP can have its way.

    It has to get completely worse before it can get any better.

    ReplyDelete