Dec 31, 2014

ವಾಡಿ ಜಂಕ್ಷನ್ .... ಭಾಗ 8

wadi junction
Dr Ashok K R
ಇದೇನಾಗೋಯ್ತು ನಿನ್ನೆ? ರಾಘವ ಯೋಚನೆಗೆ ಬಿದ್ದಿದ್ದ. ಕಾಲೇಜಿಗೆ ಹೋಗುವ ಮನಸ್ಸಾಗಿರಲಿಲ್ಲ. ‘ನಡೀಲೇ ಕಾಲೇಜಿಗೆ’ ಎಂದ ಅಭಯನ ಮೇಲೂ ರೇಗಿದ್ದ. ‘ಯಾಕೆ ಬರ್ತಿಲ್ಲ ಅನ್ನೋದಾದ್ರೂ ಹೇಳು?’ ಎಂದವನು ಕೇಳಿದ್ದಕ್ಕೆ “ಎಲ್ಲಾ ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಹೇಳೋದಿಕ್ಕೆ ಆಗೋದಿಲ್ಲ ಕಣಪ್ಪ” ರಾಘವ ಗಂಭೀರವದನನಾಗಿ ಹೇಳಿದಾಗ ಮನಸ್ಸಿನೊಳಗೇ ನಕ್ಕು ‘ಇನ್ನೂ ಸ್ವಲ್ಪ ಸಮಯ ಬೇಕು. ಇವನ ಮನಸ್ಸು ಸರಿಯಾಗಲಿಕ್ಕೆ’ ಎಂದುಕೊಂಡು ಅಭಯ ಕಾಲೇಜಿಗೆ ತೆರಳಿದ.

‘ಎಲ್ಲಾ ಹಲ್ಕಟ್ ಗಳೇ’ ಆತ ತೆರಳುತ್ತಿದ್ದಂತೆ ಜೋರಾಗಿಯೇ ಗೊಣಗಿಕೊಂಡ ರಾಘವ. ಕಾಲೇಜಿನ ಮೊದಮೊದಲ ದಿನಗಳನ್ನು ನೆನಪಿಸಿಕೊಂಡ. ನೋಟೀಸ್ ಬೋರ್ಡಿನ ಮುಂದೆ ಟೈಮ್ ಟೇಬಲ್ ನೋಡುತ್ತಾ ಕ್ರಾಂತಿ ನಿಂತಿದ್ದ. ಅವನ ಹಿಂದೆ ನಿಂತು ನೋಡುತ್ತಿದ್ದ ರಾಘವ “ಬಡ್ಡೆತ್ತವು. ಬೆಳಿಗ್ಗೆ ಎಂಟರಿಂದ ಸಂಜೆ ನಾಲ್ಕರವರೆಗೆ ಕಾಲೇಜು. ಮುಕ್ಕಾಲು ಜೀವ್ನ ಕಾಲೇಜಲ್ಲೇ ಹಾಳು ಮಾಡಿಸಿಬಿಡುತ್ತೆ ಈ ವ್ಯವಸ್ಥೆ” ತನಗೆ ತಾನೇ ಹೇಳಿಕೊಂಡ. ಯಾರಪ್ಪ ಇದು ಇಷ್ಟು ಜೋರಾಗಿ ಕಾಲೇಜಿನ ಮೊದಲ ದಿನವೇ ಇಡೀ ವ್ಯವಸ್ಥೆಯ ವಿರುದ್ಧ ಮಾತನಾಡ್ತಿರೋದು ಎಂದು ತಿರುಗಿ ನೋಡಿದ ಕ್ರಾಂತಿ. ಐದೂವರೆ ಅಡಿ ಎತ್ತರದ ಗೋದಿ ಬಣ್ಣದ ಕೋಲು ಮುಖದ ರಾಘವ ಕಣ್ಣಿಗೆ ಬಿದ್ದ. ಆ ಕಣ್ಣುಗಳು ಒಂದು ಕ್ಷಣವೂ ಒಂದೆಡೆ ಸ್ಥಿರವಾಗಿ ನಿಲ್ಲುತ್ತಿರಲಿಲ್ಲ. ಏನೋ ಚಡಪಡಿಕೆ, ಏನೋ ಹುಡುಕಾಟ. ಆ ಹುಡುಕಾಟದ ಮಧ್ಯೆ ತನ್ನತ್ತಲೇ ನೋಡುತ್ತಿದ್ದವನನ್ನು ಗಮನಿಸಿ ಒಮ್ಮೆ ಮುಗುಳ್ನಕ್ಕು ಕೈಚಾಚಿ “ರಾಘವ ಹುಣಸೂರು” ಎಂದ. ಕಣ್ಣಲ್ಲಿದ್ದ ಚಂಚಲತೆ ಕೈಹಿಡಿತದಲ್ಲಿರಲಿಲ್ಲ. “ಕ್ರಾಂತಿ, ಮಂಡ್ಯ”. “ಮಂಡ್ಯ ಅಂದ್ರೆ ಇನ್ನೇನು. ನಮ್ಮೂರೋನೇ ಅಂತಾಯ್ತು”. ರಾಘವನ ಮಾತಿಗೆ ಕ್ರಾಂತಿಯ ನಗು ಉತ್ತರವಾಗಿತ್ತು. ಇಬ್ಬರೂ ಜೊತೆಯಲ್ಲೇ ಎರಡನೇ ಮಹಡಿಯಲ್ಲಿದ್ದ ಕ್ಲಾಸಿಗೆ ಹೋದರು. ಅಷ್ಟರಲ್ಲಿ ಸಿಇಟಿ rankಉ, ಹಾಸ್ಟೆಲ್ಲಿನ ರೂಮು ನಂಬರ್ರು, ರೂಮ್ ಮೇಟುಗಳ ಬಗ್ಗೆ ಮಾತಾಯಿತು. ರಾಘವನ ರೂಮಿಗೆ ಇನ್ನೂ ಯಾರನ್ನೂ ಹಾಕಿರಲಿಲ್ಲ. “ಯಾರಾದ್ರೂ ಕರ್ನಾಟಕದವರನ್ನೇ ಹಾಕಿದ್ರೆ ಸರಿ ಗುರು. ನಾರ್ತಿಗಳನ್ನೋ ಆಂಧ್ರದವರನ್ನೋ ಹಾಕಿದ್ರೆ ಮೈಯೆಲ್ಲಾ ಉರಿದುಹೋಗುತ್ತೆ. ನಿನ್ನ ರೂಮ್ ಮೇಟ್ ಎಲ್ಲಿಯವನು” ಪರಿಚಯವಾದ ಐದು ನಿಮಿಷಕ್ಕೇ ಎಷ್ಟೆಲ್ಲಾ ಮಾತನಾಡ್ತಾನಲ್ಲ ಇವನು ಎಂದು ಅಚ್ಚರಿಪಡುತ್ತಲೇ “ಅವನೂ ಮಂಡ್ಯದವನೇ ತುಷಿನ್ ಅಂತ. ಅಲ್ಲೇ ನಿಂತಿದ್ದಾನೆ ನೋಡು” ಎಂದು ತರಗತಿಯ ಹೊರಗೆ ಗೋಡೆಗೆ ಒಂದು ಕಾಲೂರಿ ಬೆನ್ನು ಆನಿಸಿಕೊಂಡು ನಿಂತಿದ್ದ ತುಷಿನ್ ಕಾಣಿಸಿದ. ಒಂದಷ್ಟು ದೃಷ್ಟಿದೋಷವಿದ್ದವರಿಗೆ ದೂರದಿಂದ ಆತ ಕಾಣುವುದು ಬಹಳವೇ ಕಷ್ಟವಿತ್ತು. ಯಾರೋ ಗೋಡೆಗೆ ಮೊಳೆ ಹೊಡೆದು ಬಟ್ಟೆ ನೇತು ಹಾಕಿದಂತೆ ಅನ್ನಿಸುತ್ತಿತ್ತು. ಅಷ್ಟು ದಪ್ಪವಿದ್ದ ತುಷಿನ್. ಆರಡಿ ಎತ್ತರವಿದ್ದ ಕಾರಣಕ್ಕೆ ಮತ್ತಷ್ಟು ಸಣ್ಣಕ್ಕೆ ಕಾಣಿಸುತ್ತಿದ್ದನೇನೋ. ಕ್ರಾಂತಿಯನ್ನು ನೋಡಿ ಮುಗುಳ್ನಕ್ಕ. ಕ್ರಾಂತಿ ರಾಘವನನ್ನು ತೋರಿಸುತ್ತಾ “ಇವನು ರಾಘವ ಅಂತ. ಹುಣಸೂರಿನವನು. ನಮ್ಮ ಮೇಲುಗಡೆಯ ರೂಮಿನಲ್ಲಿದ್ದಾನಂತೆ”. ಇಬ್ಬರೂ ಕೈಕುಲುಕಿಕೊಂಡರು. ಅಷ್ಟರಲ್ಲಾಗಲೇ ಉಳಿದವರು ತರಗತಿಯೊಳಗೆ ಹೋಗಿ ಕುಳಿತುಕೊಂಡಿದ್ದರು. ಇವರು ಒಳಹೋದಾಗ ಕ್ರಾಂತಿ ಮೊದಲ ಬೆಂಚಿನೆಡೆಗೆ ನಡೆಯುತ್ತಿದ್ದವನು ರಾಘವ ಅಷ್ಟರಲ್ಲಾಗಲೇ ಹಿಂದಿನ ಬೆಂಚಿನಲ್ಲಿ ಕುಳಿತು ಕೈಮಾಡಿದಾಗ ವಿಧಿಯಿಲ್ಲದೇ ಅವನೆಡೆಗೆ ನಡೆದ. ತುಷಿನ್ ಹಿಂಬಾಲಿಸಿದ. ಐದು ನಿಮಿಷವಾದರೂ ಲೆಕ್ಚರರ್ ಬಂದಿರಲಿಲ್ಲ. ಬಹುತೇಕ ಮಂದಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಒಂದಷ್ಟು ಜನ ತೋರಿಕೆಗೋ ಅಥವಾ ನಿಜವಾದ ಆಸಕ್ತಿಯಿಂದಲೋ ಪುಸ್ತಕ ತೆಗೆದು ಕಣ್ಣೋಡಿಸುತ್ತಿದ್ದರು. ಇವೆಲ್ಲಾ ಕೆಲಸಗಳ ನಡುವೆ ಹುಡುಗರ ಕಣ್ಣು ಕದ್ದುಮುಚ್ಚಿ ಹುಡುಗಿಯರೆಡೆಗೆ, ಹುಡುಗಿಯರ ಕಣ್ಣು ಮಧ್ಯೆ ಮಧ್ಯೆ ಹುಡುಗರು ಕುಳಿತಿದ್ದ ಸಾಲುಗಳೆಡೆಗೆ ಹರಿದಾಡುತ್ತಿದ್ದವು. ಆಗ ತರಗತಿಯ ಹೊರಗೆ ಯಾರದೋ ಹೆಜ್ಜೆ ಸಪ್ಪಳದ ಸದ್ದು, ಓಡಿಬರುತ್ತಿರುವ ಸದ್ದು. ಮಾಸ್ತರರದಂತೂ ಅಲ್ಲ. ಸದ್ದು ನಿಧಾನಕ್ಕೆ ಹತ್ತಿರವಾಗಿ ಸದ್ದು ಉತ್ಪಾದಿಸುತ್ತಿದ್ದ ಕಾಲಿನ ಮಾಲೀಕ ತರಗತಿಯೊಳಗೆ ನಾಲ್ಕು ಹೆಜ್ಜೆ ಇಟ್ಟು ಓಟ ನಿಲ್ಲಿಸಿದ. ಇನ್ನೂ ಮಾಸ್ತರ್ ಬಂದಿಲ್ಲದಿರುವುದನ್ನು ನೋಡಿ ಸಮಾಧಾನಗೊಂಡ. ನೂರಕ್ಕೂ ಹೆಚ್ಚು ಜನರ ಕಣ್ಣು ಅವನೆಡೆಗೆ ನೆಟ್ಟಿದ್ದನ್ನು ಕಂಡು ನಾಚಿಕೆಯಾಗಿ ತಲೆತಗ್ಗಿಸಿದ. ಅವನ ಅವತಾರ ಕಂಡು ಎಲ್ಲರ ಮನಸ್ಸಿನಲ್ಲೂ ನಗುವಿನ ಭಾವನೆ ಬಂತಾದರೂ ಕೆಲವರಲ್ಲಿ ಮಾತ್ರ ಆ ಭಾವನೆ ಮೆದುಳಿಗೂ ತಲುಪಿ ನಂತರ ನರಮಂಡಲದ ಮುಖಾಂತರ ಮುಖದ ಸ್ನಾಯುಗಳಿಗೂ ತಲುಪಿ ಉಳಿದವರಿಗೂ ಕೇಳುವಂತೆ ನಕ್ಕರು. ಕೆದರಿದ ಕೂದಲು, ಆಯಾಸ ತುಂಬಿ ತುಳುಕುತ್ತಿದ್ದ ಮುಖ, ಮುದುರಿದ ಶರ್ಟು, ಮಡಿಚಿದ ತೋಳು, ಮೊದಲ ಗುಂಡಿ ತೆರೆದಿದ್ದು ಆಗಷ್ಟೇ ಚಿಗುರುತ್ತಿದ್ದ ಎದೆಯ ಮೇಲಿನ ಕೂದಲು, ಅವುಗಳ ಮೇಲೆ ಎರಡೂ ಮಹಡಿ ಓಡಿ ಹತ್ತಿದ್ದಕ್ಕೆ ಸಾಕ್ಷಿಯೆಂಬಂತೆ ಬೆವರಿನ ಹನಿಗಳು, ಕಾಲಲ್ಲಿ ಧೂಳಿಡಿದಿದ್ದ ಚಪ್ಪಲಿ, ಎಡಗೈಯಲ್ಲೊಂದು ಪುಸ್ತಕ – ಮೊದಲ ದಿನ ಅಭಯ್ ತರಗತಿಯವರ ಮುಂದೆ ಕಂಡಿದ್ದು ಹೀಗೆ. ನಗುವಿನ ಅಲೆ ನಿಧಾನವಾಗಿ ಒಬ್ಬರಿಂದೊಬ್ಬರಿಗೆ ಹಬ್ಬಿ ಅದು ಅಭಯನ ಕಿವಿಗೂ ಬಿತ್ತು. ಯಾಕೆಂದು ಅರ್ಥವಾಗದೆ ತಗ್ಗಿಸಿದ ತಲೆಯನ್ನು ನಿಧಾನವಾಗಿ ಮೇಲೆತ್ತುತ್ತಾ ರಾಘವ ಕುಳಿತಿದ್ದ ಬೆಂಚಿನ ಹಿಂದಿನ ಬೆಂಚಿನಲ್ಲಿ ಕುಳಿತುಕೊಂಡ. ನಗುವಿನ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದ್ದಂತೆ ಮಾಸ್ತರ್ ಒಳಗೆ ಬಂದರು. ಎಲ್ಲರೂ ಎದ್ದು “ಗುಡ್ ಮಾರ್ನಿಂಗ್ ಸರ್” ಎಂದರು.
“ಗುಡ್ ಮಾರ್ನಿಂಗ್” ಎಂದ್ಹೇಳಿ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದರು. ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟರು. ನಂತರ ನಿಮ್ಮ ಹೆಸರು, ಊರು, ಮೆಡಿಕಲ್ ಕಾಲೇಜಿಗೆ ಸೇರಿದ ಕಾರಣವೇನು ಹೇಳಿ ಎನ್ನುತ್ತಾ “ಕೊನೇ ಬೆಂಚಿನಿಂದ ಬರೋಣ. ಕೊನೇ ಬೆಂಚಿನಲ್ಲಿ ಕೂರೋರೆಂದ್ರೆ ನನಗೆ ತುಂಬಾನೇ ಪ್ರೀತಿ” ಎಂದು ಇಂಗ್ಲೀಷಿನ್ಲಲಿ ಹೇಳಿ ನಗುತ್ತಾ ಅಭಯನ ಕಡೆಗೆ ಕೈತೋರುತ್ತಾ ನಿಲ್ಲುವಂತೆ ಸೂಚಿಸಿದರು.
“ಅಭಯ್ ಫ್ರಮ್ ರಾಯಚೂರ್” ಇಷ್ಟರಲ್ಲಾಗಲೇ ಕೆದರಿದ ಕೂದಲನ್ನು ಒಂದಷ್ಟು ಸರಿಪಡಿಸಿಕೊಂಡಿದ್ದ.
“Proper ರಾಯಚೂರ್”
“ಇಲ್ಲ ಸರ್ ಅದರ ಹತ್ತಿರ ಒಂದು ಹಳ್ಳಿ” ಕನ್ನಡದಲ್ಲಿ ಉತ್ತರಿಸಿದ. ಮಾಸ್ತರರೂ ಕನ್ನಡದಲ್ಲೇ ಪ್ರತಿಕ್ರಿಯಿಸುತ್ತಾ “ಹುಟ್ಟಿ ಬೆಳೆದ ಹಳ್ಳಿ ಹೆಸರು ಹೇಳಿದ್ರೆ ಅವಮಾನವೇನಪ್ಪಾ ನಿನಗೆ” ಕೋಪದಿಂದ ಕೇಳಿದರು.
“ನನಗೇನ್ ಅವಮಾನ ಇಲ್ಲ ಸರ್. ಈ ಮೈಸೂರು ಕಡೆಯವ್ರಿಗೆ ಧಿಮಾಕೋ ನಿಜಕ್ಕೂ ಅಜ್ಞಾನಾನೋ ಗೊತ್ತಿಲ್ಲ. ರಾಯಚೂರೆಂದ್ರೆ ಎಲ್ಲಿ ಬರುತ್ತೆ ಅಂತಾರೆ. ಇನ್ನು ನಮ್ಮೂರು ತಾವರಗೆರೆ ಅಂದ್ರೆ ಎಲ್ಲದು ಅಂತಾರೆ. ಕುಷ್ಟಗಿ ತಾಲ್ಲೂಕು ಅಂದ್ರೆ ಅದೆಲ್ಲಿ ಅಂತ ನೋಡ್ತಾರೆ. ಕೊಪ್ಪಳ ಜಿಲ್ಲೆ ಅಂದ್ರೂ ಗೊತ್ತಾಗಲ್ಲ. ಮುಂಚೆ ರಾಯಚೂರಿನಲ್ಲಿತ್ತು ಈಗ ಅದೇ ಬೇರೆ ಜಿಲ್ಲೆ ಎಂದಾಗ ‘ಓ ಹಾಗಾ’ ಅಂತಾರೆ” ಒಂದೇ ಉಸುರಿಗೆ ಇಷ್ಟು ಹೇಳಿ ಮಾಸ್ತರರನ್ನೇ ನೋಡಿದ ಅಭಯ್. ಕನ್ನಡ ಬರುವವರೆಲ್ಲಾ ಪ್ಯಾದೆ ಥರ ಕಾಣಿಸಿದ ಇವನು ಮೊದಲ ದಿನದ ಮೊದಲ ತರಗತಿಯಲ್ಲೇ ಇಷ್ಟು ಧೈರ್ಯದಿಂದ ಮಾತನಾಡುತ್ತಿದ್ದಾನಲ್ಲ ಎಂದು ತಿರುಗಿ ನೋಡಿದರೆ, ಕೇವಲ ಊರು ಕೇಳಿದ್ದಕ್ಕೆ ಇಷ್ಟೊತ್ತು ಏನು ಮಾತನಾಡಿದ ಎಂಬುದು ಅರ್ಥವಾಗದೆ ಕನ್ನಡೇತರರು ಅಕ್ಕಪಕ್ಕ ಯಾರಾದ್ರೂ ಕನ್ನಡ ತಿಳಿದವರು ಕುಳಿತಿದ್ದಾರಾ ಎಂದು ಹುಡುಕಿ ನಂತರ ಕೇಳಿದರಾಯ್ತೆಂದು ಸುಮ್ಮನಾದರು. ಇವನ ಧೈರ್ಯವನ್ನು ಮೆಚ್ಚಿಕೊಂಡರಾದರೂ ಮುಖದಲ್ಲಿ ಕೊಂಚ ಅಸಹನೆಯನ್ನು ತೋರಿಸುತ್ತಾ “Reason for Joining MBBS” ಎಂದು ಕೇಳಿದರು. ಅಭಯನಿಗೆ ಉತ್ತರ ಹೊಳೆಯಲಿಲ್ಲ. ಉತ್ತರವಿರಲೂ ಇಲ್ಲ. ತಲೆಯಾಡಿಸಿದ. “What?” ಎಂದರು.

“As such no reason Sir. I got the seat. So I took” ಎಂದ. “Sit” ಎಂದರು. ದನಿಯಲ್ಲಿನ ಕೋಪದ ತೀವ್ರತೆ ಮತ್ತಷ್ಟು ಹೆಚ್ಚಿತ್ತು. ನಂತರ ಉಳಿದವರ ಪರಿಚಯವೂ ಆಯಿತು. ‘ನನ್ನ ಕನಸು’ ‘ಅಪ್ಪನ ಕನಸು’ ‘ಅಮ್ಮನ ಕನಸು’ ‘ತಾತನ ಕನಸು’ ‘ಕುಟುಂಬದ ಕನಸು’ ‘ಸೇವೆ’ ಅಂತೆಲ್ಲ ಇತರರು ಹೇಳಿದ್ದಾಯಿತು. ‘ಒರಟ ಬಡ್ಡೀಮಗ’ ಎಂಬ ಬಿರುದನ್ನು ಹುಡುಗರಿಂದಲೂ ‘rogue’ ಅನ್ನೋ ಬಾವಲಿ ಹುಡುಗಿಯರಿಂದಲೂ ಮೊದಲ ದಿನವೇ ದಕ್ಕಿಸಿಕೊಂಡ ಅಭಯ್.

No comments:

Post a Comment