Nov 21, 2014

ವಾಡಿ ಜಂಕ್ಷನ್ .... ಭಾಗ 7

wadi junction
Dr Ashok K R
ಎಂಟು ಘಂಟೆಯ ಸುಮಾರಿಗೆ ಕ್ರಾಂತಿ ರೂಮಿಗೆ ಬಂದ. ಬನ್ನಿಮಂಟಪದಲ್ಲಿ ಟೆಂಪೋ ಹಿಡಿದು ಕಳಸ್ತವಾಡಿಯಲ್ಲಿ ಇಳಿದುಕೊಂಡು ಚಕ್ರೇಶ್ವರಿ ಬಾರಿನಲ್ಲಿ ಎರಡು ಬಿಯರ್ ಬಾಟಲ್ ಖರೀದಿಸಿ ಪಕ್ಕದ ರಾಜಹಂಸ ಡಾಬಾಕ್ಕೆ ಕಾಲಿಟ್ಟಾಗ ಸಮಯ ಒಂಭತ್ತಾಗಿತ್ತು. ಕ್ರಾಂತಿ ಯೋಚನಾಲಹರಿಯಲ್ಲಿ ತೇಲುತ್ತಾ ಮೌನವಾಗುಳಿದಿದ್ದ. ಉಳಿದ ಮೂವರೂ ಕ್ರಾಂತಿಯನ್ನು ಯಾವ ರೀತಿಯಿಂದ ಮಾತಿಗೆ ಹಚ್ಚಬೇಕು ಎಂಬುದನ್ನು ಚಿಂತಿಸುತ್ತಾ ಕುಳಿತಿದ್ದರು. ‘ನಿಮ್ಮಿಬ್ಬರಲ್ಲೊಬ್ಬರು ಮೊದಲು ಮಾತನಾಡಬೇಕು ನಂತರವಷ್ಟೇ ನಾನು ಆ ವಿಷಯವನ್ನು ಚರ್ಚಿಸೋದು’ ಎಂದು ತುಷಿನ್ ಮೊದಲೇ ಹೇಳಿಬಿಟ್ಟಿದ್ದ. 
Also Read: ವಾಡಿ ಜಂಕ್ಷನ್ ಭಾಗ 6
ರಾಘವನ ಅರ್ಧ ಬಾಟಲ್ ಖಾಲಿಯಾಯಿತು. ಅಭಯ ಒಂದೆರಡು ಗುಟುಕಷ್ಟೇ ಕುಡಿದಿದ್ದ. ಅಭಯನೇ ಮೊದಲು ಮಾತನಾಡಿದ. “ಅಲ್ವೋ ಕ್ರಾಂತಿ. ನಮ್ಮ ಕ್ಲಾಸೋರೆಲ್ಲಾ ನಮ್ಮನ್ನ ಬೆಸ್ಟ್ ಫ್ರೆಂಡ್ಸೂ ಎಲ್ರೂ ಭಯಂಕರ ಕ್ಲೋಸೂ ಅಂತಾರೆ. ನಾವೆಲ್ಲಾ ನಿಜಕ್ಕೂ ಅಷ್ಟೊಂದು ಕ್ಲೋಸಾ?”

“ಏನೋಪ್ಪಾ ನನಗೂ ಸರಿಯಾಗಿ ಗೊತ್ತಿಲ್ಲ”

“ಏನೋ ಅಭಿ ನೀನು ಈ ರೀತಿ ಹೇಳ್ತಿ. ನಮ್ಮಗಳ ಮಧ್ಯೆ ನಾವು ಯಾವ ಗುಟ್ಟು ಇಡ್ಕೊಂಡಿದಿವೋ? ಮೈಸೂರಲ್ಲಿ ನಾವೆಲ್ಲ ಸೇರೋದಿಕ್ಕೆ ಮುಂಚೆ ನಮ್ಮ ಜೀವನದಲ್ಲಿ ನಡೆದಿರೋ ಎಲ್ಲಾ ವಿಷಯಗಳನ್ನೂ ಹೇಳ್ಕೊಂಡಿಲ್ವಾ? ಅಲ್ವೇನೋ ಕ್ರಾಂತಿ?” ‘ಸುತ್ತಿಬಳಸಿ ಇಬ್ಬರೂ ನನ್ನನ್ನೇ ಕೇಳ್ತಾ ಇದ್ದಾರೆ. ಅದರಲ್ಲೂ ತುಷಿನ್ ಸುಮ್ಮನೆ ಕುಳಿತಿದ್ದಾನೆ.’ ಇದನ್ನೆಲ್ಲಾ ಗ್ರಹಿಸಿದಂತೆ “ಏನು ಕೇಳ್ಬೇಕು ಅಂತಿದ್ದೀರೋ ನೇರವಾಗಿ ಕೇಳ್ರಪ್ಪಾ” ಎಂದ ಕ್ರಾಂತಿ.

“ಬಡ್ಡೀಮಗ ಮನಸ್ಸಿನಲ್ಲಿರೋದನ್ನ ಚಕ್ಕಂತ ಕಂಡುಕೋಬಿಡ್ತೀಯಲ್ಲಾ ಮೆಚ್ಚಬೇಕಮ್ಮ ನಿನ್ನ. ಏನ್ ನಿನ್ ಕಥೆ. ತುಷಿನ್ ಗಾಬರಿಯಾಗಿಬಿಟ್ಟಿದ್ದಾನಲ್ಲ” ಇಷ್ಟು ಹೇಳೀ ಅಭಯ್ ಬಾಟಲನ್ನು ತುಟಿಗೊತ್ತಿಕೊಂಡ.

“ಗಾಬರೀನಾ ಅನುಮಾನಾನಾ?”

“ನನಗ್ಯಾಕೋ ಅನುಮಾನ? ನಮಗೂ ಹೇಳ್ದೆ ಇರುವಂಥದ್ದು ಏನಿದೆ ಅಂಥ. ದಿನಾ ಸಂಜೆ ಹೊರಗೋಗಿರ್ತೀಯ. ವಾಪಸ್ಸು ಬಂದ ಮೇಲೂ ನಿನ್ನದೇ ಲೋಕದಲ್ಲಿರುತ್ತೀಯ. ಕೇಳಿದ್ರೆ ಸರಿಯಾಗಿ ಉತ್ತರಾನೂ ಹೇಳಲ್ಲ. ಗಾಬರಿಯಾಗುತ್ತೋ ಇಲ್ಲೋ ಹೇಳು” ತುಷಿನ್ ನ ದನಿಯಲ್ಲಿ ಕೋಪ, ಅಕ್ಕರೆಗಳೆರಡೂ ಸಮಪ್ರಮಾಣದಲ್ಲಿದ್ದವು.

ಒಂದರೆಕ್ಷಣದ ಮೌನವನ್ನು ಕ್ರಾಂತಿಯೇ ಮುರಿದ. “ನೋಡ್ರಪ್ಪ ವಾರದದಿಂದ ನನ್ನ ಮನಸ್ಸು ಅಷ್ಟು ಸರಿಯಿಲ್ಲ”

“ಅದು ಗೊತ್ತಾಗಿದ್ದಕ್ಕೇ ಅಲ್ವಾ ಕೇಳ್ತಿರೋದು”

“ಯಾಕ್ಹೀಗೆ ಚಿಕ್ಕಮಕ್ಕಳ ಥರಾ ಹಟ ಮಾಡ್ತಿದ್ದೀರಾ. ಎಲ್ಲಾ ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರ ಜೊತೆ ಹಂಚಿಕೊಳ್ಳೋದಿಕ್ಕೆ ಆಗೋದಿಲ್ಲ ಕಣ್ರೋ”

ರಾಘವ ಸಿಟ್ಟಿಗೆ ಬಿದ್ದ. “ಏಯ್. ನಾವೆಲ್ಲ ಫ್ರೆಂಡ್ಸೂ. ನಮ್ಹತ್ರ ಮುಚ್ಚಿಡೋಂತದ್ದೇನಿದೆ. ನಾನು ಎಲ್ಲಾ ವಿಷಯಾನೂ ಒದರೋದಿಲ್ವಾ ನಿಮ್ಮ ಮುಂದೆ”

“ಅದು ನಿನ್ನ ವ್ಯಕ್ತಿತ್ವ. ನಿನ್ನ ಗುಣ. ನಾನೂ ಅದೇ ರೀತಿ ಇರಬೇಕು ಅಂದ್ರೆ ಹೇಗೆ?”

“ನೋಡ್ದೇನೋ ಅಭಿ. ಕೇಳ್ದಾ ಅವನ ಮಾತ್ನಾ?”

“ಹ್ಞೂ”

“ಮತ್ತೆ ಕೇಳೂ ಸುಮ್ಮನೆ ಕುಳಿತಿದ್ದೀಯಾ?”

“ಸುಮ್ಮನೆ ಕುಳಿತಿಲ್ಲ ರಾಘವ. ಅವನು ಹೇಳಿದ್ದನ್ನೇ ಮೆಲುಕು ಹಾಕ್ತಿದ್ದೆ. ಸತ್ಯ ಅವನ ಮಾತು”

“ಅಂದರೆ ನೀನೂ ಎಷ್ಟೋ ವಿಷಯ ಮುಚ್ಚಿಟ್ಟಿದ್ದೀಯ?”

“ನೋಡು ರಾಘವ. ನಮ್ಮ ಜೀವನ ತೆರೆದ ಪುಸ್ತಕ ಅಂತ ನಾವು ಎಷ್ಟೇ ಬಡಿದುಕೊಂಡರೂ ಪುಸ್ತಕದ ಹಾಳೆಗಳಾಚೆಗೂ ನಮ್ಮ ಜೀವನದ ವಿಸ್ತಾರವಿರುತ್ತೆ ಅನ್ನೋದು ಸುಳ್ಳಲ್ಲ”

“ಎಲ್ಲಾ ನಸುಗುನಿ ಕಾಯ್ಗಳ್ರೇ. ನಾನು ತುಷಿನ್ ಇಬ್ಬರೇ….”

“ತುಷಿನ್ ಬಗ್ಗೆ ಯಾಕ್ ಮಾತು. ಅವನೂ ಎಲ್ಲಾ ಹಂಚಿಕೊಂಡಿರೋನಲ್ಲ” ಕ್ರಾಂತಿ ಮಧ್ಯೆಯೇ ಬಾಯಿ ಹಾಕಿದ.

“ಅಂದ್ರೆ”

“ಅವನು ಕಥೆ ಕವನ ಬರೀತಾನೆ ಅಂತಾ ಗೊತ್ತಾ ನಿಮಗೆ” ರಾಘವ, ಅಭಯ್ ಇಬ್ಬರೂ ಆಶ್ಚರ್ಯದಿಂದ ಬಾಯಿ ತೆರೆದರೆ, ಇವನಿಗೆ ಹೆಂಗ್ ಗೊತ್ತಾಯ್ತಪ್ಪ ಅಂತ ತುಷಿನ್ ಕೂಡ ಅಚ್ಚರಿಪಟ್ಟ.

ಯಾರಿಗೂ ಊಟ ಸರಿಯಾಗಿ ಸೇರಲಿಲ್ಲ. ಹಿಂದಿರುಗಿ ನಡೆದುಕೊಂಡು ಬರುತ್ತಿದ್ದಾಗ ರಾಘವ “ಯಾಕೋ ಇವತ್ತು ನಾವೆಲ್ಲ ತುಂಬಾ ದೂರ ದೂರ ಆಗ್ಬಿಟ್ವೇನೋ ಅನ್ನಿಸುತ್ತೆ” ಅವನ ಕಣ್ಣಾಲಿಗಳಲ್ಲಿ ನೀರು ತುಂಬಿದ್ದು ಭಾವನೆಗಳ ಜಂಜಾಟಕ್ಕೋ ಭರ್ರೆಂದು ಸಾಗುತ್ತಿದ್ದ ವಾಹನಗಳೆಬ್ಬಿಸುತ್ತಿದ್ದ ಧೂಳಿಗೋ ತಿಳಿಯುವುದು ಕಷ್ಟವಿತ್ತು.

ತುಷಿನ್ ಅವನ ಹೆಗಲ ಮೇಲೆ ಕೈಹಾಕುತ್ತಾ “ಯಾವಾಗ್ಲೂ ನೀನು ‘ನನ್ನದು ಕಲ್ಲುಹೃದಯ’ ‘ಕಲ್ಲುಹೃದಯ’ ಅಂತಿರ್ತೀಯ. ಇವತ್ತು ನಿನ್ನ ಕಣ್ಣಲ್ಲೂ ನೀರು ತುಂಬಿದೆ ಅಂದ್ರೆ ನಿನ್ನ ಜೀವನ ಕೂಡ ತೆರೆದ ಪುಸ್ತಕ ಅಲ್ಲಾ ಅಲ್ವಾ. ನಮ್ಮೊಳಗೇನು ಗುಟ್ಟೇ ಇಲ್ಲ ಅಂತ ಸುಳ್ಳು ಸುಳ್ಳೇ ಹೇಳೋದಕ್ಕಿಂತ ನಮ್ಮ ಆತ್ಮೀಯತೆಯ ನಡುವೆಯೂ ನಮಗೆ ನಮ್ಮದೇ ಆದಂತ ಪುಟ್ಟ ಪ್ರೈವೆಸಿ, ಆ ಪ್ರೈವೆಸಿಯೊಳಗೆ ಒಂದಷ್ಟು ಗುಟ್ಟುಗಳಿವೆ ಅನ್ನೋದನ್ನು ಒಪ್ಪಿಕೊಳ್ಳೋದೆ ಮೇಲಲ್ಲವಾ?” ಎಂದು ಹೇಳಿದ್ದು ನಾಲ್ವರಲ್ಲೂ ಒಂದಷ್ಟು ಸಮಾಧಾನ ಮೂಡಿಸಿತು. 

ಮುಂದುವರೆಯುವುದು...

No comments:

Post a Comment