Nov 5, 2014

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ; ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 2

Dr Ashok K R
ಆತನ ಹೆಸರು ಹಾರ್ವೆ ಫಾಲ್ಸಿಯಾನಿ. ಮೂಲತಃ ಫ್ರೆಂಚಿನವ. ಸ್ವಿಝರ್ಲ್ಯಾಂಡಿನ ಜಿನೀವಾದಲ್ಲಿರುವ ಹೆಚ್.ಎಸ್.ಬಿ.ಸಿ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾತ. ಕೆಲಸಕ್ಕೆ ಸೇರಿಕೊಂಡ ನಂತರ ತನ್ನ ಬ್ಯಾಂಕು ಹೇಗೆ ವಿವಿಧ ದೇಶಗಳ ತೆರಿಗೆಗಳ್ಳರ ಹಣವನ್ನು ಜೋಪಾನವಾಗಿರಿಸುತ್ತಿದೆ ಎಂಬುದನ್ನು ಕಂಡುಕೊಂಡ. ಬ್ಯಾಂಕಿನ ಇತರೆ ಸಹೋದ್ಯೋಗಿಗಳಂತೆ ಅವ್ಯವಹಾರವನ್ನು ನೋಡಿದ ನಂತರ ಕಣ್ಣು ಮುಚ್ಚಿ ಕೂರದೆ ತನಗಿರುವ ಕಂಪ್ಯೂಟರ್ ಜ್ಞಾನವನ್ನುಪಯೋಗಿಸಿ ನಿಧಾನಕ್ಕೆ ಬ್ಯಾಂಕಿನ ಸರ್ವರುಗಳಿಂದ ಹೆಚ್.ಎಸ್.ಬಿ.ಸಿ ಬ್ಯಾಂಕಿನ ಖಾತೆದಾರರ ವಿವರಗಳನ್ನು ಒಂದೊಂದಾಗಿ ಸಂಗ್ರಹಿಸಲಾರಂಭಿಸುತ್ತಾನೆ. ಕೊನೆಗೆ ಇಪ್ಪತ್ತನಾಲ್ಕು ಸಾವಿರ ಖಾತೆದಾರರ ವಿವರಗಳೊಂದಿಗೆ (ಒಂದು ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಖಾತೆಗಳು) ಪರಾರಿಯಾಗುತ್ತಾನೆ.
ಇವೆಲ್ಲವೂ ನಡೆದದ್ದು 2008 – 2009ರಲ್ಲಿ. ಲೆಬನಾನಿನ ಮತ್ತೊಂದು ಬ್ಯಾಂಕಿಗೆ ಈ ರೀತಿಯ ವಿವರಗಳು ನನ್ನಲ್ಲಿವೆ, ಇಂತಿಷ್ಟು ದುಡ್ಡು ಕೊಟ್ಟರೆ ವಿವರಗಳನ್ನು ನೀಡುತ್ತೇನೆ ಎಂಬ ಆರೋಪವೂ ಹಾರ್ವೆಯ ಮೇಲಿದೆ. ಬ್ಯಾಂಕಿಗೆ ಹೋಗಿದ್ದು ನಿಜ, ಆದರೆ ಹೋಗುವಂತೆ ಮಾಡಿದ್ದು ನನ್ನನ್ನು ಅಪಹರಿಸಿದ ಇಸ್ರೇಲಿನ ಮೊಸಾದ್ ಸಂಘಟನೆ ಎನ್ನುತ್ತಾನೆ ಹಾರ್ವೆ! ಒಟ್ಟಿನಲ್ಲಿ ಒಂದು ಹಾಲಿವುಡ್ ಚಿತ್ರಗಳಲ್ಲಿ ತೋರಿಸುವುದೆಲ್ಲವೂ ಹಾರ್ವೆಯ ಜೀವನಗಾಥೆಯಲ್ಲಿದೆ! ಬಂಧಿತನಾಗುತ್ತಾನೆ, ಬಿಡುಗಡೆಗೊಳ್ಳುತ್ತಾನೆ. ವಿವಿಧ ದೇಶಗಳ ಸರಕಾರಗಳನ್ನು ಸಂಪರ್ಕಿಸುತ್ತಾನೆ, ಉಪಯೋಗವಾಗುವುದಿಲ್ಲ. ಕೊನೆಗೆ ತವರು ಫ್ರಾನ್ಸ್ ದೇಶದವರೇ ಅವನ ಮಾಹಿತಿಯನ್ನು ದೇಶದ ಕಪ್ಪು ಹಣವನ್ನು ವಾಪಸ್ಸು ತರಲು, ತೆರಿಗೆಗಳ್ಳರನ್ನು ಹಿಡಿಯಲು ಬಳಸಿಕೊಳ್ಳುವುದಾಗಿ ತಿಳಿಸಿದಾಗ ವಿವಿಧ ದೇಶಗಳ ಮಧ್ಯೆ ಅಲೆಮಾರಿಯಂತೆ ತಿರುಗುತ್ತಿದ್ದ ಹಾರ್ವೆಯ ಬದುಕು ಒಂದಷ್ಟು ಸ್ಥಿರವಾಗುತ್ತದೆ. ಸ್ವಿಝರ್ಲ್ಯಾಂಡ್ ಮತ್ತು ಫ್ರಾನ್ಸ್ ದೇಶದ ನಡುವೆ ಕೆಲಕಾಲ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗುತ್ತದೆ. ಫ್ರಾನ್ಸಿಗೆ ಸಿಕ್ಕ ಪಟ್ಟಿಯಲ್ಲಿ ಅವರದೇ ತೆರಿಗೆಗಳ್ಳರ ಕಳ್ಳ ಖಾತೆಯ ವಿವರಗಳ ಜೊತೆಜೊತೆಗೆ ಇನ್ನಿತರ ಅನೇಕ ದೇಶಗಳ ತೆರಿಗೆಗಳ್ಳರ ವಿವರಗಳೂ ಲಭ್ಯವಾಗುತ್ತದೆ. ಆ ಪಟ್ಟಿಯಲ್ಲಿ ಭಾರತದವರ ವಿವರಗಳೂ ಇದ್ದು 2011ರಲ್ಲಿ ಭಾರತ ಸರಕಾರಕ್ಕೆ ಆ ವಿವರವನ್ನು ನೀಡುತ್ತದೆ. ಫ್ರಾನ್ಸ್ ಪೂರ್ಣ ಪಟ್ಟಿಯನ್ನು ನೀಡಿತಾ ಎಂಬುದರ ಬಗ್ಗೆ ಖಚಿತತೆಯಿಲ್ಲ. ಜೊತೆಗೆ ಕೆಲವು ವರದಿಗಳ ಪ್ರಕಾರ ಫ್ರಾನ್ಸ್ ನೀಡಿದ ಪಟ್ಟಿಯಲ್ಲಿ 800 ಹೆಸರಿತ್ತಂತೆ. ಈಗ ಸರಕಾರ ನ್ಯಾಯಾಲಯಕ್ಕೆ ನೀಡಿರುವುದು 627 ಮಾತ್ರ. ಉಳಿದವುಗಳ ಕಥೆಯೇನಂತೆ? ಮತ್ತೆ ಅಂತೆ ಕಂತೆ!
2011ರಲ್ಲೇ ಭಾರತ ಸರಕಾರಕ್ಕೆ ಜಿನೀವಾದ ಹೆಚ್.ಎಸ್.ಬಿ.ಸಿ ಬ್ಯಾಂಕಿನ ಭಾರತೀಯ ಖಾತೆದಾರರ ಪಟ್ಟಿ ದೊರಕುತ್ತದೆ. ಆಗ ಆಡಳಿತದಲ್ಲಿದ್ದ ಯು.ಪಿ.ಎ ಸರಕಾರ ಉನ್ನತ ಮಟ್ಟದ ಬಿಗಿ ತನಿಖೆಗೂ ಆದೇಶಿಸುವುದಿಲ್ಲ, ಹೆಸರುಗಳನ್ನೂ ಬಹಿರಂಗಗೊಳಿಸುವುದಿಲ್ಲ. ಏನೋ ಇನ್ನೊಂದೆರಡು ವರುಷ ತಳ್ಳಿಬಿಡೋಣ, ಆಮೇಲೆ ಹೇಗಿದ್ದರೂ ನಾವು ಆಡಳಿತಕ್ಕೆ ಬರುವುದಿಲ್ಲವಲ್ಲ ಎಂಬ ಉಡಾಫೆಯೂ ಇತ್ತೇನೋ! ಮೂರು ವರ್ಷದ ನಂತರ ಆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತದೆ. ಮೂವರ ಹೆಸರು ಮಾತ್ರ ಸದ್ಯಕ್ಕೆ ಬಹಿರಂಗವಾಗಿದೆ. ಈಗಿನ ಸರಕಾರದ ವತಿಯಿಂದ ತನಿಖಾ ತಂಡ ಕೂಡ ರಚನೆಯಾಗಿದೆ. ಪಟ್ಟಿಯಲ್ಲಿ ಹೆಸರಿದ್ದವರು ಇಟ್ಟಿದ್ದ ಕಪ್ಪು ಹಣವನ್ನು ಮೂರು ವರುಷಗಳಿಂದ ಅಲ್ಲಿಯೇ ಇಟ್ಟಿರುವಷ್ಟು ಮೂರ್ಖರಾ? ಮೇಲಾಗಿ ಫ್ರಾನ್ಸ್ ನಮಗೆ ಹಸ್ತಾಂತರಿಸಿದ ವರದಿ ಅವರ ಕೈಸೇರಿ ಮೂರು ವರುಷವಾಗಿತ್ತು. ಹಾರ್ವೆ ಆ ಪಟ್ಟಿಯನ್ನು ಸಿದ್ಧಪಡಿಸಿ ಒಂದು ವರುಷದ ಮೇಲಾಗಿತ್ತು. ಎಲ್ಲವೂ ಸೇರಿ ಈಗ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಪಟ್ಟಿ ಹೆಚ್ಚು ಕಡಿಮೆ ಏಳು ವರುಷಕ್ಕಿಂತ ಹಳೆಯದು! ಇಷ್ಟು ಹಳೆಯ ಪಟ್ಟಿಯಿಟ್ಟುಕೊಂಡು ಕಪ್ಪು ಹಣ ತರುವುದು ಸಾಧ್ಯವೇ? ವಿದೇಶದಲ್ಲಿರುವ ಕಪ್ಪು ಹಣದ ಪ್ರಮಾಣದ ಬಗ್ಗೆ ಜನರಲ್ಲಿರುವ ಕಲ್ಪನೆಗಳು ಮತ್ತು ಸಮೂಹ ಸನ್ನಿಯಂತಹ ವಾತಾವರಣವನ್ನು ತಮ್ಮನುಕೂಲಕ್ಕೆ ಉಪಯೋಗಿಸುತ್ತಿದ್ದಾರಾ ನಮ್ಮ ರಾಜಕಾರಣಿಗಳು ಎಂಬ ಅನುಮಾನ ಮೂಡುವುದು ಫ್ರಾನ್ಸ್, ಸ್ಪೇನ್‍ನಂತಹ ರಾಷ್ಟ್ರಗಳು ಈ ವಿಚಾರದಲ್ಲಿ ನಡೆದುಕೊಂಡಿರುವ ರೀತಿಯನ್ನು ಅಭ್ಯಸಿಸಿದಾಗ. ಒಮ್ಮೆ ಪಟ್ಟಿ ಕೈಸೇರಿದ ನಂತರ ಮತ್ತೆ ಸ್ವಿಸ್ ಸರ್ಕಾರದ ಬಳಿ ಕೈಚಾಚಲಿಲ್ಲ. ಆಂತರಿಕ ತನಿಖೆಯನ್ನು ಬಿಗುವಾಗಿ ನಡೆಸಿ 186 ಮಿಲಿಯನ್ ಡಾಲರ್ ವಾಪಸ್ಸು ತರಿಸಿಕೊಂಡಿರುವುದಾಗಿ ಫ್ರಾನ್ಸ್ ಹೇಳಿದರೆ, ಸ್ಪೇನ್ ಸರಕಾರ 260 ಮಿಲಿಯನ್ ಹಣವನ್ನು ಪಡೆದುಕೊಂಡಿರುವುದಾಗಿ ಹೇಳಿದೆ. ಪಟ್ಟಿ ಹಳೆಯದಾದರೂ ಆ ಪಟ್ಟಿಯ ಆಧಾರದಿಂದ ಬಿಗಿ ತನಿಖೆ ನಡೆಸಿದರೆ ಪಟ್ಟಿಯಲ್ಲಿರುವವರ ಜೊತೆಜೊತೆಗೆ ಇತರರೂ ಸಿಗೆಬೀಳುತ್ತಾರೆ. ಆದರೆ ಭಾರತದಲ್ಲಿ ಸದ್ದು ಗದ್ದಲಗಳೇ ಹೆಚ್ಚಿದೆಯೇ ಹೊರತು ತನಿಖೆ ಬಿಗಿಯಾಗಿ ನಡೆಯಬಹುದೆಂದು ನಂಬುವುದು ಕಷ್ಟ. ಯಾವುದಕ್ಕೂ ಮುಂದಿನ ಮಾರ್ಚಿನವರೆಗೆ ಕಾಯಬೇಕು.

ಕಪ್ಪು ಹಣ, ಸ್ವಿಸ್ ಬ್ಯಾಂಕ್, ಲಕ್ಷ ಕೋಟಿ, ಕೋಟಿ ಕೋಟಿ ಎಂಬ ಉದ್ಗಾರಗಳ ನಡುವೆ ಒಂದು ಮೂಲಭೂತ ಅಂಶವನ್ನು ನಾವೆಲ್ಲರೂ ಮರೆತುಬಿಟ್ಟಿದ್ದೇವೆ. ನಮ್ಮ ದೇಶದಲ್ಲೂ ಅಪಾರ ಪ್ರಮಾಣದ ಕಪ್ಪು ಹಣವಿದೆ. ಬ್ಯಾಂಕಿನ ಲಾಕರುಗಳಲ್ಲಿ, ಮನೆಯೊಳಗೆ, ಭೂಮಿ - ಚಿನ್ನದ ಖರೀದಿಯಲ್ಲಿ, ಅಪಾರ ಪ್ರಮಾಣದ ಕಪ್ಪು ಹಣ ದಿನನಿತ್ಯ ಹರಿದಾಡುತ್ತಿದೆ. ಭ್ರಷ್ಟಾಚಾರ ನಡೆಸಿದವರೆಲ್ಲರೂ ಸ್ವಿಸ್ ಬ್ಯಾಂಕಿನಲ್ಲಿ ಹಣವಿಡಲು ಸಾಧ್ಯವಿಲ್ಲವಲ್ಲ? ಎಷ್ಟು ಹಣ ವಿದೇಶಿ ಬ್ಯಾಂಕುಗಳಲ್ಲಿದೆ ಎಂಬುದೂ ಸರಿಯಾಗಿ ತಿಳಿಯದ ಗುಪ್ತ್ ಗುಪ್ತ್ ವ್ಯವಹಾರದ ಬಗ್ಗೆ ರೋಷಾವೇಷದಿಂದ ಮಾತನಾಡುವವರೆಲ್ಲರೂ ದೇಶೀಯ ಕಪ್ಪು ಹಣದ ಬಗ್ಗೆ ವಿಚಿತ್ರ ಮೌನ ತಾಳುವುದೇಕೆ? ‘ವೈಯಕ್ತಿಕವಾಗಿ ಭ್ರಷ್ಟಾಚಾರ ತಪ್ಪಲ್ಲ, ರಾಜಕೀಯ ನೇತಾರ, ದೊಡ್ಡ ದೊಡ್ಡ ಉದ್ದಿಮೆದಾರ ಭ್ರಷ್ಟಾಚಾರ ಮಾಡಿ ಸ್ವಿಸ್ ಬ್ಯಾಂಕಿನಲ್ಲಿ ಹಣವಿಡುವುದು ತಪ್ಪು’ ಎಂಬ ಅಭಿಪ್ರಾಯ ಈ ಮೌನಕ್ಕೆ ಕಾರಣ. ‘ಅವರು ಗೌರ್ನಮೆಂಟಿನಲ್ಲಿದ್ದಾಗ ಚೆನ್ನಾಗಿ ದುಡ್ಕೊಂಡ್ರು, ಒಳ್ಳೇ ಮನೆ ಕಟ್ಸಿದ್ದಾರೆ. ಎರಡು ಮೂರು ಸೈಟು ಮಾಡಿದ್ದಾರೆ’ ಎಂದು ಸುತ್ತಲಿನವರನ್ನು ಹೊಗಳುವವರಿಲ್ಲವೇ? ಖಾಸಗಿಯಾಗಿ ಸೈಟು ಮಾರುವವರು ಕೊಳ್ಳುವವರಲ್ಲಿ (ಅದರಲ್ಲೂ ನಗರಗಳಲ್ಲಿ) ಎಷ್ಟು ಮಂದಿ ಕೊಟ್ಟ ಅಥವಾ ಪಡೆದ ದುಡ್ಡಿನಷ್ಟೇ ಮೌಲ್ಯಕ್ಕೆ ರಿಜಿಷ್ಟ್ರೇಶನ್ ಮಾಡಿಸುತ್ತಾರೆ? ಅಲ್ಲಿ ಹರಿದಾಡುವ ಮೊತ್ತವೂ ಕಪ್ಪು ಹಣವಲ್ಲವೇ? ಉದಾಹರಣೆಗಳನ್ನು ನೋಡಿದರೆ ದೇಶದಲ್ಲಿ ಚಲಾವಣೆಯಲ್ಲಿರುವ ಕಪ್ಪು ಹಣವನ್ನು ಕಂಡುಹಿಡಿದರೆ ಸಾಕು ಭಾರತ ಖಜಾನೆಗೆ ಎಷ್ಟೋ ಸಾವಿರ ಕೋಟಿ ಭರ್ತಿಯಾಗುತ್ತದೆ. ಆದರೇನು ಮಾಡೋದು ವಿದೇಶದ ಕಪ್ಪು ಹಣಕ್ಕಿರುವ ಗ್ಲ್ಯಾಮರ್ ಭಾರತದ ಕಪ್ಪು ಹಣಕ್ಕಿಲ್ಲವಲ್ಲ! ತನಿಖೆ ನಿಧಾನಗತಿಯಲ್ಲಿ ಸಾಗಿ, ಭಾರತದ ಇತರ ತನಿಖೆಗಳಂತೆ ಸಾಗಿದರೆ ಅನುಮಾನವೇ ಬೇಡ ಇನ್ನೊಂದಷ್ಟು ವರುಷ ನಮ್ಮ ರಾಜಕೀಯ ಪಕ್ಷಗಳು ಕಪ್ಪು ಹಣದ ಭೂತವನ್ನು ಮತದಾರನ ಹೆಗಲಿಗೇರಿಸುತ್ತಾ ಗೆಲುವು ಸಾಧಿಸುತ್ತಾರೆ.

No comments:

Post a Comment