Nov 6, 2014

ನಂದಿತಾ ಎಂಬ ಪುಟ್ಟಿಗೆ ಸಮಾಜ ಮಾಡಿದ ಅನ್ಯಾಯ….

nanditha case
ನಂದಿತಾ

ಒಂದು ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತದೆ (ಅದು ಅತ್ಯಾಚಾರದಿಂದಾದ ಹತ್ಯೆ ಎಂದು ಆರೋಪವಿರುವುದರಿಂದ ಅತ್ಯಾಚಾರ ಮತ್ತು ತದನಂತರ ನಡೆದ ಕೊಲೆ ಎಂದೇ ಒಪ್ಪಿಕೊಳ್ಳೋಣ), ಸಹಜವಾಗಿ ಅತ್ಯಾಚಾರ ನಡೆಸಿದವರನ್ನು ಮತ್ತು ಹತ್ಯೆ ಮಾಡಿದವರನ್ನು ಬಂಧಿಸಬೇಕಿರುವುದು ಸರ್ಕಾರ ಮತ್ತು ಪೋಲೀಸರ ಕರ್ತವ್ಯ. ಕೆಲವೊಮ್ಮೆ ಬಂಧನ ಶೀಘ್ರವಾಗಿ ಆಗಬಹುದು. ಕೆಲವೊಮ್ಮೆ ನಿಧಾನವಾಗಬಹುದು. ನಿಧಾನವಾದಾಗ ಸರ್ಕಾರದ ವಿರುದ್ಧ ಪ್ರತಿಭಟಿಸಿ ಮಂತ್ರಿಗಳ ಮತ್ತು ಅಧಿಕಾರಿಗಳ ಮೇಲೆ ಒತ್ತಡ ತರಬೇಕಿರುವುದು ಪ್ರತಿಪಕ್ಷ ಮತ್ತು ಜನರ ಕರ್ತವ್ಯ. ಮೇಲ್ನೋಟಕ್ಕೆ ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ನಡೆದಿರುವುದೂ ಅದೇ ರೀತಿಯಾಗಿ ಕಾಣುತ್ತದೆ. ಆದರೆ?
ಆರೋಪಿಯ ಅಪರಾಧ ಮುಖ್ಯವಾಗಿ ಪ್ರತಿಭಟನೆ ನಡೆಯಬೇಕೇ ಹೊರತು ಆರೋಪಿಯ ಧರ್ಮದ ಆಧಾರದ ಮೇಲೆ ಪ್ರತಿಭಟನೆಗಳು ರೂಪುಗೊಳ್ಳಬಾರದು. ತೀರ್ಥಹಳ್ಳಿಯ ನಂದಿತಾ ಮೇಲಿನ ಅತ್ಯಾಚಾರ ಮತ್ತು ಹತ್ಯೆ ನಡೆಸಿದ್ದು ಕಾಮುಕರು ಮುಸ್ಲಿಮರು ಎಂಬ ಕಾರಣಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದರೆ ಅದಕ್ಕೆ ಬಿಜೆಪಿಯವರು ವಿವಿಧ ಪ್ರಕರಣಗಳಿಗೆ ನೀಡುವ ಪ್ರತಿಕ್ರಿಯೆಗಳು ಕಾರಣ. ತುಂಬಾ ಹಿಂದೆಯೇನೂ ಅಲ್ಲ, ಇತ್ತೀಚೆಗಷ್ಟೇ ಗೋಕರ್ಣದ ರಾಘವೇಶ್ವರ ಸ್ವಾಮಿಗಳ ವಿರುದ್ಧ ಅವರದೇ ಮಠದರಾಮಕಥಾದ ಗಾಯಕಿ ಪ್ರೇಮಲತಾ ಅತ್ಯಚಾರ ಮತ್ತು ಲೈಂಗಿಕ ದೌರ್ಜನ್ಯದ ದೂರು ಕೊಟ್ಟಾಗ ಬಿಜೆಪಿಯವರನೇಕರು ಸ್ವಾಮಿಗಳ ಬೆಂಬಲಕ್ಕೆ ನಿಂತರು. ಸರಕಾರ ತನ್ನ ನಿಧಾನಗತಿಯ ವರ್ತನೆಯ ನಂತರ ತನಿಖೆಯನ್ನು (ಕೋರ್ಟಿನ ಒತ್ತಾಯಕ್ಕೆ) ಚುರುಕುಗೊಳಿಸಿದಾಗ ಇದೇ ಬಿಜೆಪಿಗೆ ಸೇರಿದ ಪ್ರಮೀಳಾ ನೇಸರ್ಗಿ ‘ಇದು ಸ್ವಾಮಿಗಳ ವಿರುದ್ಧ ನಡೆಸಿದ ಪಿತೂರಿ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆರೋಪಿಯ ಬೆಂಬಲಕ್ಕೆ ಬಿಜೆಪಿ ನಿಂತಿತ್ತು. ಇನ್ನೂ ಒಂದಷ್ಟು ಹಿಂದಕ್ಕೆ ನಡೆದು ನೋಡಿದರೆ ಧರ್ಮಸ್ಥಳದ ಸೌಜನ್ಯ ಪ್ರಕರಣ ನೆನಪಾಗುತ್ತದೆ. ಮುಸ್ಲಿಂ ಹುಡುಗರು ಮಾಡಿರಬಹುದಾದ ಕೃತ್ಯವದು ಎಂಬ ಅನುಮಾನದಿಂದ ಕೆಲವು ದಿನ ಪ್ರತಿಭಟನೆ ನಡೆಸುವ ಹಿಂದೂ ಸಂಘಟನೆಗಳು ಮುಸ್ಲಿಮರ ಕೈವಾಡವಿಲ್ಲ ಎಂದರಿವಾದ ತಕ್ಷಣ ಸುಮ್ಮನಾಗಿಬಿಟ್ಟರು. ಹಿಂದೂ ಸಂಘಟನೆಯ ಮಹೇಶ್ ಶೆಟ್ಟಿ ತಿಮಾರೊಡ್ಡಿಯನ್ನೊರತುಪಡಿಸಿ. ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಶಾಲೆಯಲ್ಲಿ ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ನಡೆಸಲಾಗಿದೆ. ಬಿಜೆಪಿಯ ಪ್ರತಿಭಟನೆಯನ್ನು ನೋಡಿದ್ದೀರಾ? ಕಳೆದ ಬಾರಿ ವಿಬ್ ಗಯಾರ್ ಶಾಲೆಯಲ್ಲಿ ನಡೆದ ದೌರ್ಜನ್ಯವನ್ನು ಬಿಜೆಪಿ ಪ್ರತಿಭಟಿಸಿತ್ತು. ಕಾರಣ, ಅಲ್ಲಿ ಮೊದಲು ಆರೋಪ ಕೇಳಿಬಂದಿದ್ದು ಮುಸ್ಲಿಮನ ವಿರುದ್ಧ!
manipal report nanditha case
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಣಿಪಾಲ್ ವರದಿ
ಸರಕಾರವಷ್ಟೇ ಅಲ್ಲ ಪ್ರತಿಪಕ್ಷವೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಯಾವಾಗ ಪ್ರತಿಪಕ್ಷದ ಪ್ರತಿಭಟನೆಗಳು ಆರೋಪಿಯ ಧರ್ಮದ ಆಧಾರದ ಮೇಲೆ ನಿರ್ಧಾರವಾಗುತ್ತದೋ ಅದು ಈಗಾಗಲೇ ಒಡೆದುಹೋಗಿರುವ ಸಮಾಜದ ಮನಸ್ಸುಗಳನ್ನು ಮತ್ತಷ್ಟು ದೂರಾಗಿಸುತ್ತದೆ. ಜನರನ್ನು ಕೇವಲ ಮತಗಳ ಲೆಕ್ಕದಲ್ಲಿ ನೋಡುವ ರಾಜಕೀಯ ಪಕ್ಷಗಳ ಕುತಂತ್ರವಿದು ಎಂಬುದರ ಅರಿವಿರದಿದ್ದಾಗ ಜನರೂ ಕೂಡ ಇಂತಹ ರಾಜಕೀಯ ಪಕ್ಷಗಳು (ಈ ಪ್ರಕರಣದಲ್ಲಿ ಬಿಜೆಪಿ, ಅನೇಕ ಪ್ರಕರಣಗಳಲ್ಲಿ ಕಾಂಗ್ರೆಸ್) ಹೇಳುವ ‘ಸತ್ಯಕ್ಕೆ’ ಶರಣಾಗಿ ನಿಜದ ಹುಡುಕಾಟವನ್ನೇ ಅಸಂಬದ್ಧವೆಂದು ತಿಳಿಯುವ ಸಾಧ್ಯತೆಯಿರುತ್ತದೆ. ಮೇಲ್ನೋಟಕ್ಕೆ ‘ಆರೋಪಿಗಳ ಶೀಘ್ರ ಬಂಧನಕ್ಕೆ’ ‘ಆರೋಪಿಗಳನ್ನು ರಕ್ಷಿಸುತ್ತಿರುವ ಕಿಮ್ಮನೆಯರ ರಾಜೀನಾಮೆಗೆ’ ಬಿಜೆಪಿ ಮತ್ತದರ ಸಂಘ ಸಂಸ್ಥೆಗಳು ಒತ್ತಾಯಪಡಿಸುತ್ತಿರುವುದು ಸರಿಯೆಂದೇ ತೋರುತ್ತಿದೆಯಾದರೂ ಆರೋಪಿಗಳು ಮುಸ್ಲಿಮರಾದ ಕಾರಣದಿಂದ ಅವರು ಪ್ರತಿಭಟಿಸುತ್ತಿದ್ದಾರೆ, ಮುಸ್ಲಿಮನೊಬ್ಬ ಮಾಡಿದ ಕೃತ್ಯಕ್ಕೆ ಇಡೀ ಮುಸ್ಲಿಮ್ ಸಮುದಾಯದ ಮನೆ – ಅಂಗಡಿಯ ಮೇಲೆ ಕಲ್ಲು ತೂರುವಂತಹ ಕೆಲಸ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಡೆಯುವ ಮೊದಲೇ ‘ಹುಡುಗಿಯ ಮೇಲೆ ಅತ್ಯಾಚಾರ ನಡೆದಿಲ್ಲ’ ಎಂದು ಹೇಳುತ್ತಿರುವ ವೈದ್ಯಕೀಯ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಹಂಚಿಕೊಳ್ಳಲಾಗುತ್ತಿದೆ. ಅತ್ಯಾಚಾರ ನಡೆದಿಲ್ಲ ನೋಡ್ರೀ ಎಂಬಂತಹ ಸಮಾಧಾನದ ಮಾತನ್ನಾಡುವವರ ಮೂಲ ಉದ್ದೇಶ ‘ಮುಸ್ಲಿಮರ ಮೇಲೆ ಬಿಜೆಪಿಯವರು ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ’ ಎಂಬ ಸಂದೇಶ ಹರಡಿ ಮತ್ತೊಂದು ರೀತಿಯಲ್ಲಿ ಮನಸ್ಸುಗಳನ್ನು ಒಡೆಯುವುದು. ಒಂದು ಅತ್ಯಾಚಾರದ ಆರೋಪ ಮತ್ತು ಹತ್ಯೆಯ ಪ್ರಕರಣವನ್ನು ದಿಕ್ಕುಗೆಡಿಸಲು ಏನೆಲ್ಲಾ ಮಾಡಿ ಗಬ್ಬೆಬ್ಬಿಸಬೇಕೋ ಅಷ್ಟನ್ನೂ ಸಾಂಗವಾಗಿ ಮಾಡಲಾಗಿದೆ. ಇಷ್ಟೆಲ್ಲಾ ಆದ ನಂತರವೂ ಈ ಪ್ರಕರಣದಲ್ಲಿ ನಂದಿತಾ ಎಂಬ ಪುಟ್ಟಿಗೆ ನ್ಯಾಯ ಸಿಗುತ್ತದೆಂದು ನಂಬಬಹುದೇ? ನಂದಿತಾ ಪ್ರಕರಣದಲ್ಲಿ ನ್ಯಾಯ ಸಿಗುವುದಕ್ಕಾಗಿ ಬಿಜೆಪಿ ಹೋರಾಟದ ಉದ್ದೇಶ ಹಿಂದೂಗಳನ್ನು ಕೆರಳಿಸಿ ನೋಡ್ರೀ ನಿಮ್ಮ ರಕ್ಷಣೆ ನಮ್ಮಿಂದಷ್ಟೇ ಸಾಧ್ಯ ಎಂಬ ಭಾವನೆ ಮೂಡಿಸುವುದು. ಆರೋಪಿ ಹಿಂದೂ ಆಗಿದ್ದರೆ ತೆಪ್ಪಗಿರುತ್ತಿತ್ತು! ಇದೆಲ್ಲದರ ಮಧ್ಯೆ ತೀರ್ಥಹಳ್ಳಿ ಎಂಬ ವಿಧಾನಸಭಾ ಕ್ಷೇತ್ರದಲ್ಲಿ 1994ರಿಂದ 2008ರವರೆಗೆ ಸತತವಾಗಿ ಮೂರು ಚುನಾವಣೆಗಳಲ್ಲಿ ಗೆದ್ದಿದ್ದ ಬಿಜೆಪಿ ನಂತರದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಕಿಮ್ಮನೆ ರತ್ನಾಕರರ ವಿರುದ್ಧ ಸೋತಿದೆ. ಈ ಪ್ರಕರಣದ ಮೂಲಕ ಮುಂದಿನ ಚುನಾವಣೆಗೆ ಬಿಜೆಪಿ ತಯ್ಯಾರಿ ನಡೆಸಿದೆ ಎಂದರೆ ‘ಹಿಂಗ್ಯಾಕೆ’ಯನ್ನು ಸಿಕ್ಯುಲರ್ ಎಂದು ಕರೆಯುತ್ತೀರೇನೋ?!

No comments:

Post a Comment