Nov 4, 2014

ವರ್ತಮಾನ ಬಳಗದ ಪ್ರಶಸ್ತಿ ಪ್ರಧಾನ ಸಮಾರಂಭ.

ಟಿ.ಎಸ್.ವಿವೇಕಾನಂದರಿಗೆ ಪ್ರಶಸ್ತಿ ವಿತರಣೆ
ರವಿಕೃಷ್ಣರೆಡ್ಡಿವರಿದ್ದ ಮೇಲೆ ಕಾರ್ಯಕ್ರಮವೊಂದು ಫಾರ್ಮಲ್ ಆಗಿ ನಡೆಯುವ ಸಾಧ್ಯತೆ ಅಪರೂಪ! ಬಹುಶಃ ಇದೇ ಕಾರಣಕ್ಕೋ ಏನೋ ಅವರು ಕರೆದಾಗ ಹೋಗದೇ ಇರಲು ನನಗೆ ಸಾಧ್ಯವಾಗುವುದಿಲ್ಲ! (ವರ್ತಮಾನಕ್ಕೆ ಬರೆಯುವುದನ್ನು ವೈಯಕ್ತಿಕ ಕಾರಣಗಳಿಗೆ ನಿಲ್ಲಿಸಿದ್ದರೂ ನನ್ನನ್ನೂ ಇನ್ನೂ ವರ್ತಮಾನದ ಬಳಗದವನಂತೆಯೇ ನೋಡುತ್ತಾರೆ). ಗಾಂಧಿ ಜಯಂತಿ ಕಥಾ ಸ್ಪರ್ಧೆಯ 2014ರ ವಿಜೇತರಿಗೆ 'ಬಹುಮಾನ ವಿತರಿಸಲು' ನವೆಂಬರ್ ಎರಡರಂದು ಗಾಂಧಿನಗರದ ಬಸಂತ್ ರೆಸಿಡೆನ್ಸಿಯಲ್ಲಿ 'ಕಾರ್ಯಕ್ರಮ' ಆಯೋಜಿಸಿದ್ದರು. ಬಹುಮಾನ ವಿಜೇತರಾದ ಟಿ.ಎಸ್. ವಿವೇಕಾನಂದ, ಟಿ.ಕೆ. ದಯಾನಂದ, ಡಾ.ಎಚ್. ಎಸ್. ಅನುಪಮರವರನ್ನು ವೇದಿಕೆಯ ಮೇಲೆ ಕೂರಿಸಿ, ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಹಿರೇಮಠರಿಗೆ ಶಾಲು ಹೊದಿಸಿ ಸನ್ಮಾನಿಸಿ ರವಿಕೃಷ್ಣರೆಡ್ಡಿಯವರು ಎಸ್. ಆರ್. ಹಿರೇಮಠರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಹಾಡಿ ಹೊಗಳಿ ಹಿರೇಮಠರಿಂದ ಕಥೆಗಾರರಿಗೆಲ್ಲ ಶಾಲು ಹೊದಿಸಿ ಗಂಧದ ಮಾಲೆ ಹಾಕಿಸಿ ಬಹುಮಾನವನ್ನು ವಿತರಿಸಲಾಯಿತು
. . . . .  ಎಂದೇನಾದರೂ ನೀವು ಭಾವಿಸಿದಲ್ಲಿ ಅದು ವರ್ತಮಾನದ ಕಾರ್ಯಕ್ರಮವಾಗಲು ಸಾಧ್ಯವಿಲ್ಲ. ರವಿಕೃಷ್ಣಾರೆಡ್ಡಿಯವರಿಂದಂತೂ ಸಾಧ್ಯವೇ ಇಲ್ಲ!
ಟಿ.ಕೆ.ದಯಾನಂದ
ಒಂದೂವರೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಹಲವರು ವಿವಿಧ ಕಾರ್ಯಕ್ರಮಗಳಿಗೆ ತೆರಳಿದ್ದ ಕಾರಣ ಮೂರು ನಾಲ್ಕರವರೆಗೂ ಬರುತ್ತಲೇ ಇದ್ದರು. ಬಂದವರೆಲ್ಲ ಬಸಂತ್ ರೆಸಿಡೆನ್ಸಿಯಲ್ಲಿ ಅತ್ಯುತ್ತಮವಾಗಿದ್ದ ಜೋಳದ ರೊಟ್ಟಿ ಹೋಳಿಗೆಯ ಊಟ ಹೊಡೆದು ಹಳೆ ಗೆಳೆಯರೊಟ್ಟಿಗೆ ಹೊಸದಾಗಿ ಪರಿಚಯವಾದವರೊಂದಿಗೆ ಹರಟುತ್ತಾ ಕುಳಿತರು. ಎಲ್ಲರ ಊಟವೂ ಮುಗಿದ ಮೇಲೆ ಹೋಟೆಲ್ಲಿನ ಹೊರಗಿದ್ದ ಕಾರಿಡಾರಿನಲ್ಲಿ (ಹಿಂದೊಂದು ಸ್ಕ್ರೀನ್ ಇದ್ದುದರಿಂದ ಅದೇ ಸ್ಟೇಜ್ ತರಹ ಕಂಡ್ರೆ ನಾವು ಜವಾಬುದಾರರಲ್ಲ)
ಡಾ.ಎಚ್.ಎಸ್. ಅನುಪಮ
ಮ್ಯಾನೇಜರಿಗೆ ಕೇಳಿಕೊಂಡು ಒಂದಷ್ಟು ಕುರ್ಚಿ ಹಾಕಿಸಿ ಹಿರೇಮಠರನ್ನು, ಲೇಖಕರನ್ನು, ಬೇಗೂರರನ್ನು ಕೂರಿಸಿ ರವಿಕೃಷ್ಣಾರೆಡ್ಡಿ ಎರಡು ನಿಮಿಷಕ್ಕೂ ಕಡಿಮೆ ಮಾತನಾಡಿ ಕತೆಗಾರರಿಗೆ ಬಹುಮಾನ ವಿತರಿಸಿ ಫೋಟೋ ಕ್ಲಿಕ್ಕಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಫೋಟೋ ಕ್ಲಿಕ್ಕಿಸುವುದನ್ನು ಬಿಟ್ಟು ಮತ್ತೇನೂ ಫಾರ್ಮಲ್ ಸಮಾರಂಭದಂತಿರಲಿಲ್ಲ. ಎಲ್ಲಾ ಸಮಾರಂಭಗಳು ಇದೇ ರೀತಿ ಆಪ್ತತೆಯಿಂದ ಯಾಕಿರುವುದಿಲ್ಲ? ಬೇರೆಡೆ ಸಮಾರಂಭ ಮುಗಿಯುತ್ತಿದ್ದಂತೆ ಅಬ್ಬಾ ಮುಗೀತು ಎಂದು ಹೊರಟರೆ ಇಲ್ಲಿ ಎಲ್ಲರೂ ಮತ್ತಷ್ಟು ಮಾತನಾಡಿ - ಹರಟಿ ಇನ್ನೊಂದು ರೌಂಡು ಕಾಫಿ ಹೀರಿ ವಿರಾಮದಿಂದ ಹೊರಟರು! ಫಾರ್ಮಾಲಿಟಿಗಳ ನಾಟಕೀಯತೆಯ ಅರಿವಾಯಿತೆಂದರೂ ಅಡ್ಡಿಯಿಲ್ಲ.

No comments:

Post a Comment