Nov 4, 2014

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ: ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 1

Dr Ashok K R
ಕಳೆದ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎಯ ನೇತೃತ್ವ ವಹಿಸಿದ್ದ ನರೇಂದ್ರ ಮೋದಿಯವರು ಪದೇ ಪದೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದುದು ಪರರಾಷ್ಟ್ರಗಳಲ್ಲಿರುವ – ಹೆಚ್ಚಿನದಾಗಿ ಸ್ವಿಸ್ ಬ್ಯಾಂಕುಗಳಲ್ಲಿರುವ ‘ಕಪ್ಪು ಹಣ’ವನ್ನು ಭಾರತಕ್ಕೆ ನೂರೇ ದಿನಗಳಲ್ಲಿ ವಾಪಸ್ಸು ತರುವ ಬಗ್ಗೆ. ನೂರು ದಿನಗಳಲ್ಲಿ ಅಷ್ಟೂ ಹಣವನ್ನು ವಾಪಸ್ಸು ತಂದು ಭಾರತದ ಏಳ್ಗೆಗೆ ಕಾಣ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದರು. ಉಳಿದನೇಕ ಕಾರಣಗಳಿಂದ ಮತ್ತು ತಮ್ಮ ವೈಯಕ್ತಿಕ ಪ್ರಭಾವದಿಂದ ಬಿಜೆಪಿ ಏಕಪಕ್ಷವಾಗಿ ಸರಕಾರ ನಡೆಸುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ನಿರೀಕ್ಷೆಯಂತೆ ನೂರು ದಿನಗಳೊಳಗೆ ಕಪ್ಪು ಹಣವೆಲ್ಲ ವಾಪಸ್ಸು ಬಂತೇ?
ಕಪ್ಪು ಹಣದ ಬಗೆಗಿನ ತನಿಖೆಯ ಸಲುವಾಗಿ ವಿಶೇಷ ಪಡೆಯೊಂದನ್ನು ರಚಿಸಿದ್ದು ಬಿಟ್ಟರೆ (ಈ ರಚನೆಯ ಹಿಂದೆ ಕೂಡ ಕೋರ್ಟಿನ ನಿರ್ದೇಶನವಿದೆ. ಕಪ್ಪು ಹಣದ ತನಿಖೆಯ ಸಂಬಂಧ ವಿಶೇಷ ಪಡೆಯನ್ನು ಇಂತಹ ದಿನಾಂಕದೊಳಗೆ ರಚಿಸಲೇಬೇಕು ಎಂದು ಕೋರ್ಟು ಆದೇಶಿಸಿತ್ತು. ಯು.ಪಿ.ಎ ಹೇಗಿದ್ದರೂ ತನ್ನ ಆಡಳಿತ ಕೊನೆಗೊಳ್ಳುತ್ತದೆ ಎಂದು ಅದರ ಸಹವಾಸದಿಂದ ದೂರವಿತ್ತು. ಕೋರ್ಟು ಕೊಟ್ಟ ಕೊನೆಯ ದಿನಾಂಕ ಮುಗಿಯುವ ಮೊದಲೇ ವಿಶೇಷ ಪಡೆ ರಚಿಸಲೇಬೇಕಾದ ಒತ್ತಡವಿತ್ತು ಹೊಸ ಸರಕಾರಕ್ಕೆ) ಕಪ್ಪು ಹಣ ತರುವುದಕ್ಕೆ ಹೆಚ್ಚಿನ ಉತ್ಸಾಹವನ್ನೇನೂ ತೋರಿಸಲಿಲ್ಲ ಹೊಸ ಸರಕಾರ. ತಮ್ಮ ಮಾತಿನ ಮೋಡಿಯ ಮಧ್ಯೆ ನರೇಂದ್ರ ಮೋದಿಯವರಿಗೂ ಕಪ್ಪು ಹಣದ ವಿಚಾರ ಮರೆತುಹೋಗಿದ್ದಿರಬಹುದು. ತನ್ನ ಆಡಳಿತಾವಧಿಯುದ್ದಕ್ಕೂ ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ಸು ತರುವ ವಿಷಯದಲ್ಲಿ ಅಗತ್ಯವಿದ್ದ ಬದ್ಧತೆ ತೋರದ ಕಾಂಗ್ರೆಸ್ಸಿಗರು ಮೋದಿ ಮತ್ತು ಬಿಜೆಪಿ ಚುನಾವಣೆಯಲ್ಲಿ ಪ್ರಣಾಳಿಕೆ ವಿಷಯವಾಗಿಸಿಕೊಂಡಿದ್ದ ಕಪ್ಪು ಹಣದ ಕುರಿತಂತೆ ಸರಕಾರವನ್ನು ಟೀಕಿಸಲು ಹಿಂಜರಿಯಲಿಲ್ಲ! ಪಕ್ಷದ ವರ್ಚಸ್ಸು ಉಳಿಸುವ ಸಲುವಾಗಿ ಪಕ್ಷದ ಒಳಗಡೆಯೇ ಕಪ್ಪು ಹಣದ ಕುರಿತಂತೆ ಸರಕಾರದ ಬಳಿ ಇರುವ ಹೆಸರುಗಳನ್ನು ಬಹಿರಂಗಪಡಿಸುವ ಒತ್ತಡ ಹೆಚ್ಚತೊಡಗಿತು. ಅರುಣ್ ಜೇಟ್ಲಿಯವರು ‘ನಾಳೆ ಗ್ಯಾರಂಟಿ ಬಿಡ್ತೀವಿ’ ‘ಇನ್ನೇನ್ ಬಿಟ್ಬಿಟ್ಟೋ ತಡೀರಿ’ ಎಂದು ಸಿನಿಮಾ ಟ್ರೈಲರ್ ತೋರಿಸುವ ರೀತಿಯಲ್ಲಿ ಹೇಳತೊಡಗಿದರು. ಆಂತರಿಕ ಒತ್ತಡ, ಜನರ ಒತ್ತಡ, ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆಯಲು ಪ್ರಯತ್ನಿಸುತ್ತಿದ್ದೀವಿ ಎನ್ನುವ ಕಾರಣದಿಂದ ಸರಕಾರ ಹೆಸರು ಬಹಿರಂಗಗೊಳಿಸುವ ನಿರ್ಧಾರ ತೆಗೆದುಕೊಂಡಿತು ಎಂದುಕೊಂಡಿರಾದರೆ ಖಂಡಿತ ತಪ್ಪು. ಶಾಸಕಾಂಗದ ನಿಷ್ಕ್ರಿಯತೆಗೆ ಮತ್ತೆ ನ್ಯಾಯಾಂಗವೇ ತಪರಾಕಿ ನೀಡಬೇಕಾಯಿತು. ಹಿಂದಿನ ಯು.ಪಿ.ಎ ಸರಕಾರ ಹೆಸರು ಬಹಿರಂಗಗೊಳಿಸಲು ಸಾಧ‍್ಯವಿಲ್ಲ ಎಂದು ಹೇಳಿ ವಿರೋಧವನ್ನೆದುರಿಸಿತ್ತು. ಬಹಳಷ್ಟು ವಿಚಾರ – ವಿಷಯಗಳಲ್ಲಿ ಯು.ಪಿ.ಎ ಸರಕಾರದ ಮುಂದುವರೆದ ಭಾಗದಂತೆಯೇ ಕಾಣುತ್ತಿರುವ ಎನ್.ಡಿ.ಎ ಸರಕಾರ ಕೂಡ ಮೊದಲಿಗೆ ಹೆಸರು ಬಹಿರಂಗಗೊಳಿಸಲು ನಿರಾಕರಿಸಿತಾದರೂ ಕೋರ್ಟಿನ ಒತ್ತಡಕ್ಕೆ ಮಣಿದು ಹೆಸರುಗಳನ್ನು ಬಹಿರಂಗಪಡಿಸಿತು. ಅದರಲ್ಲಿದ್ದಿದ್ದು ಮೂವರು ಉದ್ಯಮಿಗಳ ಹೆಸರು ಮಾತ್ರ! ಡಾಬರ್ ಸಮೂಹದ ಪ್ರದೀಪ್ ಬರ್ಮನ್, ರಾಜ್‍ಕೋಟಿನ ಪಂಕಜ್ ಚಿಮನ್‍ಲಾಲ್, ಟಿಂಬ್ಲೋ ಸಂಸ್ಥೆಯ ರಾಧಾ ಟಿಂಬ್ಲೋ ಹೆಸರುಗಳನ್ನು ಸರಕಾರ ಬಹಿರಂಗಪಡಿಸಿತ್ತು. ಹೆಸರು ಬಹಿರಂಗಪಡಿಸುವಂತೆ ಕೋರ್ಟಿನ ಮೊರೆ ಹೊಕ್ಕಿದ್ದ ರಾಮ್ ಜೇಠ್ಮಲಾನಿ ‘ಇದು ಗುಡ್ಡ ಅಗೆದು ಇಲಿ ಹಿಡಿದಂತೆ’ ಎಂದ್ಹೇಳಿದ್ದು ವಾಸ್ತವವಾಗಿತ್ತು. ಮೂವರು ಉದ್ಯಮಿಗಳ ಪೈಕಿ ರಾಧಾ ಟಿಂಬ್ಲೋ ಬಿಜೆಪಿ ಮತ್ತು ಕಾಂಗ್ರೆಸ್ಸು ಪಕ್ಷಗಳೆರಡಕ್ಕೂ ಲಕ್ಷಾಂತರ ದೇಣಿಗೆ ನೀಡಿದ್ದರು! ಉಳಿದವರ ಹೆಸರುಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಲೇಬೇಕು ಎಂದು ಕೋರ್ಟು ಮತ್ತೆ ತಾಕೀತು ಮಾಡಿದಾಗ ವಿಧಿ ಇಲ್ಲದೆ ತನ್ನ ಬಳಿ ಇದ್ದ 627 ಹೆಸರುಗಳನ್ನೂ ಕೋರ್ಟಿಗೆ ಸಲ್ಲಿಸಿತು. ಮೊದಲ ಮೂರು ಹೆಸರುಗಳನ್ನು ಬಹಿರಂಗಪಡಿಸದ್ದಕ್ಕೆ ಆಕ್ಷೇಪ ವ್ಯಕ್ತಪಡಿಸದ ನ್ಯಾಯಾಲಯ ಒಂದೇ ದಿನದಲ್ಲಿ ತನ್ನ ಅಭಿಪ್ರಾಯ ಬದಲಿಸಿ ಪಟ್ಟಿಯಲ್ಲಿದ್ದ ಇತರೆ ಹೆಸರುಗಳನ್ನು ಬಹಿರಂಗಪಡಿಸುವ ನಿರ್ಧಾರವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿಬಿಟ್ಟಿತು. ಹೆಸರುಗಳನ್ನು ತಿಳಿಯಲು ಕಾತರರಾಗಿದ್ದವರೆಲ್ಲ ಒಂದಷ್ಟು ನಿರಾಸೆಯನ್ನನುಭವಿಸಿದರು. ಮುಂದಿನ ಮಾರ್ಚಿಯೊಳಗೆ ತನಿಖೆ ಪೂರ್ಣಗೊಳಿಸಿ ವರದಿಯನ್ನು ನೀಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
ಸ್ವಿಸ್ ಬ್ಯಾಂಕುಗಳೆಂದರೆ ಮೊದಲಿನಿಂದಲೂ ಭಾರತೀಯರಿಗೆ ಕುತೂಹಲ. ಅಲ್ಲಿ ಅಕೌಂಟು ಪ್ರಾರಂಭಿಸಲು ಯಾವ ದಾಖಲೆಯೂ ಬೇಡವಂತೆ, ನಿಮ್ಮ ಹೆಸರೂ ಕೇಳುವುದಿಲ್ಲವಂತೆ, ದುಡ್ಡಿಟ್ಟು ಬೀಗವನ್ನೋ ಪಾಸ್‍ವರ್ಡನ್ನೋ ನಿಮ್ಮ ಕೈಗಿತ್ತು ಕಳುಹಿಸುತ್ತಾರಂತೆ, ಇಡುವ ದುಡ್ಡಿನ ಸೇಫ್ಟಿಗೆ ನಾವೇ ಹಣ ನೀಡಬೇಕಂತೆ – ಈ ರೀತಿಯ ಅಂತೆಕಂತೆಗಳು ನಾನು ಚಿಕ್ಕವನಾಗಿದ್ದಾಗಿನಿಂದಲೂ ಇದ್ದವು; ಬಹುಶಃ ಅದಕ್ಕೆ ಮುಂಚಿನಿಂದಲೂ ಇದ್ದವು. ಅವುಗಳಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು ಎಂಬುದನ್ನು ಅಲ್ಲಿ ದುಡ್ಡಿಟ್ಟವರೇ ಹೇಳಬೇಕು! ವಿವಿಧ ರಾಜಕಾರಣಿಗಳು (ದೇಶವನ್ನು ಹೆಚ್ಚು ಕಾಲ ಆಳಿದ್ದು ಕಾಂಗ್ರೆಸ್ಸಾದ್ದರಿಂದ ಕಾಂಗ್ರೆಸ್ಸಿನ ರಾಜಕಾರಣಿಗಳು) ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ದುಡ್ಡಿನ ಬಗ್ಗೆ ಇರುವ ಕಥೆಗಳು ನೂರಾರು. ಟ್ರಿಲಿಯನ್ ಡಾಲರುಗಳ ಲೆಕ್ಕದಲ್ಲಿ ಭಾರತದ ರಾಜಕಾರಣಿಗಳು – ಉದ್ಯಮಿಗಳು ಸ್ವಿಸ್ ಬ್ಯಾಂಕಿನಲ್ಲಿ ಹಣವನ್ನಿಟ್ಟಿದ್ದಾರೆ ಎಂದು ಮಾಧ್ಯಮದಲ್ಲಿ ಹರಿದಾಡಿದ ಸುದ್ದಿಯಿಂದಾಗಿ ಕೊನೆಗೆ ಸ್ವಿಸ್ ಬ್ಯಾಂಕಿನ ಸಂಘದವರೇ ಅಷ್ಟೊಂದು ದುಡ್ಡನ್ನು ಭಾರತೀಯರು ಇಟ್ಟಿಲ್ಲ ಇಟ್ಟಿರುವುದು ಕೇವಲ ಎರಡು ಬಿಲಿಯನ್ ಡಾಲರುಗಳಷ್ಟೇ ಎಂದು ಸ್ಪಷ್ಟೀಕರಣ ನೀಡಿದರು! ಭಾರತ ಸರಕಾರ ನಡೆಸಿದ ಕೆಲವು ತನಿಖೆಗಳು ಐನೂರು ಬಿಲಿಯನ್ ಡಾಲರುಗಳಷ್ಟು ಹಣವಿದ್ದಿರಬಹುದು ಎಂದು ಕೋರ್ಟಿಗೆ ತಿಳಿಸಿದ್ದವು. ವಿದೇಶಿ ಬ್ಯಾಂಕು ಅದರಲ್ಲೂ ಸ್ವಿಸ್ ಬ್ಯಾಂಕುಗಳ ವಿಚಾರವಾಗಿ ನಮಗ್ಯಾಕೆ ಇಷ್ಟು ಆಸಕ್ತಿ? ವಿದೇಶಿ ಬ್ಯಾಂಕು ಎಂಬ ಆದರವೇ? ಅಷ್ಟೆಲ್ಲಾ ದುಡ್ಡನ್ನು ಹೇಗೆ ಸಾಗಿಸಿದರು? ಅದನ್ನು ಏನು ಮಾಡುತ್ತಾರೆ ಎಂಬ ಸಹಜ ಕುತೂಹಲವೇ? ಅಥವಾ ನಿಜವಾದ ವಾಸ್ತವದ ಅರಿವಿರದ ಕಾರಣ ಗೋಪ್ಯವಾಗಿರುವ ವಿಷಯದ ಬಗ್ಗೆ ಗಾಳಿಸುದ್ದಿ ವದಂತಿಗಳನ್ನಬ್ಬಿಸುತ್ತ ಮಾತಿನ ಚಪಲ ತೀರಿಸಿಕೊಳ್ಳುವ ಹಂಬಲವೇ?

ವಿದೇಶಿ ಬ್ಯಾಂಕುಗಳಲ್ಲಿ ಹಣವಿಟ್ಟಾಕ್ಷಣ ಅದು ಕಪ್ಪಾಗಿ ಬಿಡುವುದಿಲ್ಲ, ಹಣವಿಟ್ಟ ವ್ಯಕ್ತಿ ದೇಶದ್ರೋಹಿಯಾಗುವುದಿಲ್ಲ. ವರುಷಕ್ಕೆ ಇಷ್ಟೆಂಬಂತೆ ವಿದೇಶಿ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸುವುದು ಕಾನೂನಿಗೆ ವಿರುದ್ಧವಾದುದೇನಲ್ಲ. ನಿಗದಿಪಡಿಸಿರುವ ಒಂದು ಲಕ್ಷದ ಇಪ್ಪತ್ತೈದು ಸಾವಿರ ಯು.ಎಸ್ ಡಾಲರುಗಳಿಂತ ಹೆಚ್ಚಿನ ವ್ಯವಹಾರವನ್ನು ಭಾರತೀಯನೊಬ್ಬ ನಡೆಸುವುದು ಅಪರಾಧವಾಗುತ್ತದೆ. ಮತ್ತು ದೇಶದಲ್ಲಿ ತೆರಿಗೆ ಕಟ್ಟುವುದನ್ನು ತಪ್ಪಿಸಿ ಆ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಇಡುವುದು ಕಪ್ಪು ಹಣವಾಗುತ್ತದೆ ಅಪರಾಧವಾಗುತ್ತದೆ. ತನ್ನ ಬ್ಯಾಂಕಿಂಗ್ ನಿಯಮಗಳಿಂದಾಗಿ ಸ್ವಿಜರ್ಲ್ಯಾಂಡಿನ ಬ್ಯಾಂಕುಗಳು ಕಪ್ಪು ಹಣವಿರುವವರ ಸ್ವರ್ಗವಾಗಿದೆ. ದೇಶದಿಂದ ದೇಶಕ್ಕೆ ಅನಧಿಕೃತವಾಗಿ ಕೋಟ್ಯಾಂತರ ರುಪಾಯಿಗಳನ್ನು ಸಾಗಿಸುವುದು ಕಷ್ಟಕರವಾದ್ದರಿಂದ ವಿದೇಶಿ ಬ್ಯಾಂಕುಗಳಲ್ಲಿ ಹಣವಿಡಲಪೇಕ್ಷಿಸುವವರು ಹವಾಲಾ ಮಾರ್ಗವನ್ನುಪಯೋಗಿಸುವ ಸಾಧ್ಯತೆ ಹೆಚ್ಚು. ಹವಾಲಾ ಮಾರ್ಗದ ಮೂಲಕ ಹಣ ರವಾನೆಯಾದಾಗ ಒಂದಷ್ಟು ಕಮಿಷನ್ ಹವಾಲಾ ಏಜೆಂಟರಿಗೆ ತಲುಪುತ್ತದೆ. ಈ ಏಜೆಂಟರಲ್ಲಿ ಭಯೋತ್ಪಾದಕರೂ ಇರಬಹುದು, ಭಾರತದ ವಿರೋಧಿಗಳೂ ಇರಬಹುದು. ಕಪ್ಪು ಹಣ ನೇರವಾಗಿ ದೇಶದ ಆರ್ಥಿಕ ಪರಿಸ್ಥಿತಿಗೆ ಪೆಟ್ಟು ಕೊಡುವುದರೊಂದಿಗೆ ಪರೋಕ್ಷವಾಗಿ ದೇಶದ ರಕ್ಷಣೆಯ ವಿಷಯದಲ್ಲೂ ಕೆಡುಕುಂಟುಮಾಡುವ ಸಾಮರ್ಥ್ಯವಿರುವಂತಹುದು. ಇಂತಹ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ಸು ತರುತ್ತೇನೆ ಎಂದು ನರೇಂದ್ರ ಮೋದಿ ಹೇಳಿದಾಗ ಮೆಚ್ಚದೆ ಇರಲು ಸಾಧ್ಯವೇ? ಬ್ಯಾಂಕು ಮತ್ತು ಗ್ರಾಹಕನ ನಡುವೆ ನಡೆದ ವ್ಯವಹಾರ ತನಿಖೆಯ ವಿಚಾರಕ್ಕೆ ಬಂದಾಗ ಎರಡು ಸಾರ್ವಭೌಮ ದೇಶಗಳ ನಡುವಿನ ಪ್ರಶ್ನೆಯಾಗುವುದೇ ಹಣವನ್ನು ವಾಪಸ್ಸು ತರುವ ಪ್ರಯತ್ನಕ್ಕೆ ಮೊದಲ ಹಿನ್ನಡೆ. ಅನ್ಯ ದೇಶದ ತೆರಿಗೆ ಕಳ್ಳರನ್ನು ಕಂಡುಹಿಡಿಯುವ ಸಲುವಾಗಿ ತನ್ನ ದೇಶದ ಬ್ಯಾಂಕುಗಳಿಗೆ ನಿಯಮ ಸಡಿಲಿಸಿಕೊಳ್ಳಿ ಎನ್ನುವುದಕ್ಕೆ ಆ ಸಾರ್ವಭೌಮ ರಾಷ್ಟ್ರಗಳು ಒಪ್ಪುವುದು ಕಷ್ಟವಲ್ಲವೇ? ವಿವರಗಳಿಲ್ಲದೆ, ಸರಿಯಾದ ದಾಖಲೆಗಳಿಲ್ಲದೇ ನಿಮ್ಮ ದೇಶದ ಬ್ಯಾಂಕುಗಳಲ್ಲಿ ಹಣವಿಟ್ಟಿರುವವರ ಬಗ್ಗೆ ಮಾಹಿತಿ ನೀಡಿ ಎಂದು ಸ್ವಿಸ್ ಸರಕಾರಕ್ಕೆ ಇದೇ ಜೂನ್ ತಿಂಗಳಲ್ಲಿ ಅರುಣ್ ಜೇಟ್ಲಿ ಮನವಿ ಮಾಡಿದ್ದಾರೆ. ಐದೇ ತಿಂಗಳಲ್ಲಿ ಅಲ್ಲಿನ ಸರಕಾರ ಮಾಹಿತಿ ನೀಡಿ ಆ ಪಟ್ಟಿಯನ್ನು ನಮ್ಮ ಸರಕಾರ ನ್ಯಾಯಾಲಯಕ್ಕೆ ಒಪ್ಪಿಸಿದೆ ಎಂಬುದು ಖಂಡಿತ ಸತ್ಯವಲ್ಲ! ಅಲ್ಲಿನ ಸರಕಾರ ಇನ್ನೂ ಯಾವ ಮಾಹಿತಿಯನ್ನೂ ನೀಡಿಲ್ಲ. ಹಾಗಿದ್ದರೆ ಸರಕಾರ ನ್ಯಾಯಾಲಯಕ್ಕೆ ನೀಡಿದ 627 ಜನರ ಪಟ್ಟಿ ಸಿಕ್ಕಿದ್ದಾದರೂ ಹೇಗೆ?
image source - truthofgujrat
ಮುಂದುವರೆಯುವುದು

No comments:

Post a Comment