Sep 30, 2014

ಖ್ಯಾತಿಯ ತುದಿಯಲ್ಲಿ ಸೆರೆವಾಸ

shashikala natarajan
ಜಯಲಲಿತ
ಡಾ. ಅಶೋಕ್ ಕೆ ಆರ್
ಮಧ್ಯ ಮತ್ತು ಉತ್ತರಭಾರತದ ಚಿತ್ರರಂಗವನ್ನೆಲ್ಲ ತನ್ನ ಮಾರುಕಟ್ಟೆ ತಂತ್ರದಿಂದ, ಅದ್ದೂರಿತನದಿಂದ ಅಪೋಶನ ತೆಗೆದುಕೊಂಡಿದ್ದು ಹಿಂದಿ ಚಿತ್ರರಂಗ. ಹಿಂದಿ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಇದ್ದರೂ ದಕ್ಷಿಣ ಚಿತ್ರರಂಗ ತನ್ನ ಪಾರಮ್ಯವನ್ನು ಬಿಟ್ಟುಕೊಟ್ಟಿಲ್ಲ. ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಹೊಸತನದ ಚಿತ್ರಗಳಿಂದ, ಮಣ್ಣಿನ ಸೊಗಡಿನ ಚಿತ್ರಗಳಿಂದ ಹೆಸರು ಮಾಡಿರುವುದು ತಮಿಳು ಚಿತ್ರಂಗ. ಹೀರೋ ಆಧಾರಿತ ವಿಪರೀತ ಬಜೆಟ್ಟಿನ ಮಾಸ್ ಚಿತ್ರಗಳಿಂದ ಹಿಡಿದು ಕಥೆಯಾಧಾರಿತ ಅತ್ಯಂತ ಕಡಿಮೆ ಬಜೆಟ್ಟಿನ ಚಿತ್ರಗಳನ್ನು ಸುಂದರವಾಗಿ ಹೆಣೆಯುವುದರಲ್ಲಿ ತಮಿಳು ಚಿತ್ರರಂಗ ಮೇಲುಗೈ ಸಾಧಿಸಿದೆ. ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಿಸುವಾಗ ತಮಗೆ ಮೆಚ್ಚುಗೆಯಾದ ಸನ್ನಿವೇಶ ಬಂದರೆ ಜನರದಕ್ಕೆ ಚಪ್ಪಾಳೆ ತಟ್ಟುತ್ತಾರಂತೆ! ಚಿತ್ರಮಂದಿರಗಳಲ್ಲಿ ಕುಣಿಯುವುದು, ವಿಷಿಲ್ ಹೊಡಿಯುವುದು ಸಾಮಾನ್ಯವಾದರೂ ಚಪ್ಪಾಳೆ ತಟ್ಟುವುದು ಒಂದಷ್ಟು ವಿಚಿತ್ರದಂತೆಯೇ ಕಾಣುತ್ತದೆ. ಅದು ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಬಾಬಾ’ ಚಿತ್ರ ಬಿಡುಗಡೆಯಾಗಿದ್ದ ಸಂದರ್ಭ. ಸಾಧಾರಣವಾದ ಚಿತ್ರವದು. ಚಿತ್ರ ಬಿಡುಗಡೆಯಾದ ಹೊಸದರಲ್ಲಿ ಟಿ.ವಿ ವಾಹಿನಿಯೊಂದು ಚಿತ್ರ ನೋಡಿ ಹೊರಬಂದವರ ಅಭಿಪ್ರಾಯ ಕೇಳುತ್ತಿತ್ತು. ಹೆಂಗಸೊಬ್ಬರು ಚಿತ್ರದಲ್ಲಿ ರಜನೀಕಾಂತ್ ಕೈಯಲ್ಲಿ ಮೂಟೆ ಹೊರಿಸಿದ್ದನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅದು ಸಿನಿಮಾ ಕಣಮ್ಮ ಎಂದರೂ ಅಳು ಕಡಿಮೆಯಾಗಲಿಲ್ಲ. ತಮಿಳುನಾಡಿನಲ್ಲಿ ಸಿನಿಮಾ ಜನರ ಮೇಲೆ ಮಾಡಿರುವ ಅಭೂತಪೂರ್ವ ಪ್ರಭಾವಕ್ಕೆ ಇದೊಂದು ಉದಾಹರಣೆಯಷ್ಟೇ. ಈ ಕಾರಣದಿಂದಲೋ ಏನೋ ದಶಕಗಳಿಂದ ತಮಿಳುನಾಡಿನಲ್ಲಿ ಸಿನಿಮಾದಿಂದ ರಾಜಕೀಯಕ್ಕೆ ಪ್ರವೇಶಿಸಿದವರ ಪ್ರಾಬಲ್ಯವೇ ಹೆಚ್ಚು. ಎಂ.ಜಿ.ಆರ್, ಕರುಣಾನಿಧಿ, ಜಯಲಲಿತ ಮತ್ತೀಗ ಪ್ರವರ್ಧಮಾನಕ್ಕೆ ಬರುತ್ತಿರುವ ವಿಜಯಕಾಂತ್ – ಎಲ್ಲರೂ ಸಿನಿಮಾದೊಂದಿಗೆ ಒಡನಾಡಿದವರು. ಬರಹಗಾರರಾಗಿದ್ದ ಕರುಣಾನಿಧಿಯನ್ನೊರತುಪಡಿಸಿ ಉಳಿದವರೆಲ್ಲರೂ ತಮ್ಮ ನಟನೆಯಿಂದ ಜನಮನ ಸೆಳೆದವರು. ರಜನೀಕಾಂತರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಕ್ಕೂ ಅವರ ಸೂಪರ್ ಸ್ಟಾರ್ ಗಿರಿಯೇ ಕಾರಣ.

ಚಿತ್ರರಂಗದ ಪ್ರಭಾವದಲ್ಲಿ ಮಿಂದೆದ್ದ ತಮಿಳುನಾಡಿನಲ್ಲೀಗ ಚಿತ್ರಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ದೃಶ್ಯಾವಳಿಗಳು ರಸ್ತೆ ರಸ್ತೆಗಳಲ್ಲಿ ಕೊನೆಗೆ ಬೆಂಗಳೂರಿನ ಬೀದಿಗಳಲ್ಲೂ ದರ್ಶನವಿತ್ತವು. ನೆಚ್ಚಿನ ನಾಯಕಿಯ ಬಂಧನಕ್ಕೆ ಬೀದಿ ಬೀದಿಯಲ್ಲಿ ಎದೆ ಬಡಿದುಕೊಂಡು ಅತ್ತರು. ಇಷ್ಟರ ಮಟ್ಟಿಗಿನ ಭಾವಾತಿರೇಕತನ ತಮಿಳರಲ್ಲಿ ಮಾತ್ರ ಕಾಣಿಸುತ್ತದೇನೋ. ಇವೆಲ್ಲ ಪ್ರಸಂಗಗಳಿಗೂ ಕಾರಣ ಮುಖ್ಯಮಂತ್ರಿ ಜಯಲಲಿತಾರ ಬಂಧನ. ಹಾಲಿ ಮುಖ್ಯಮಂತ್ರಿಯೊಬ್ಬರು ದೋಷಿಯೆಂದು ಸಾಬೀತಾಗಿ ನ್ಯಾಯಾಲಯದಿಂದ ಸೀದಾ ಜೈಲಿಗೆ ಕಳುಹಿಸಲ್ಪಟ್ಟ ಅಪರೂಪದ ಪ್ರಕರಣವಿದು. ಕೆಲವೇ ಘಂಟೆಗಳಲ್ಲಿ ಅಧಿಕಾರವನ್ನು ಕಳೆದುಕೊಂಡ ಜಯಲಲಿತ ತಮಗಿದ್ದ ಹೆಸರನ್ನೂ ಕಳೆದುಕೊಂಡರಾ? ಉತ್ತರ ಸುಲಭವಿಲ್ಲ.
ನಮ್ಮದೇ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತ ಬೆಳೆದ ಎತ್ತರ ಅಚ್ಚರಿಯ ಜೊತೆಜೊತೆಗೆ ಸ್ಪೂರ್ತಿ ಮೂಡಿಸುವಂಥದ್ದು. ಎಲ್ಲಿಯ ಮೇಲುಕೋಟೆ ಎಲ್ಲಿಯ ತಮಿಳುನಾಡಿನ ಸಿ.ಎಂ ಪದವಿ?! ಕನ್ನಡ, ತಮಿಳು, ತೆಲುಗು, ಹಿಂದಿಯ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನಮನ ಸೆಳೆದಿದ್ದ ನಟಿಯೊಬ್ಬಳು ಎಂ.ಜಿ.ಆರ್‍ರ ಕೃಪೆಯಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಎಂ.ಜಿ.ಆರ್‍ರ ನಿಧನಾನಂತರ ಪಕ್ಷದೊಳಗೆ ಬಿಟ್ಟ ಬಿರುಕುನ್ನು ಸಮರ್ಥವಾಗಿ ಎದುರಿಸಿ ತನ್ನ ಬಣವೇ ಹೆಚ್ಚು ಪ್ರಭಾವಶಾಲಿಯಾಗುವಂತೆ ಮಾಡಿ ಇಡೀ ಎ.ಐ.ಎ.ಡಿ.ಎಂ.ಕೆ ಪಕ್ಷಕ್ಕೆ ಅವಿರೋಧ ನಾಯಕಿಯಾದ ಜಯಲಲಿತ ತನ್ನ ವಿರೋಧಿಗಳನ್ನು ಮಟ್ಟ ಹಾಕುವಲ್ಲಿ ಯಾವ ದಯಾ ದಾಕ್ಷಿಣ್ಯವನ್ನೂ ತೋರುತ್ತಿರಲಿಲ್ಲ. ರಾಜಕೀಯವಾಗಿ ಮೇಲೆ ಬರಲು ಜಯಲಲಿತಾ ಮಾಡಿದ ನಡೆಗಳೆಲ್ಲವೂ ನೈತಿಕತೆಯ ಒಳಗೇನಿರಲಿಲ್ಲ, ಸರ್ವಾಧಿಕಾರತನದ ಕಮಟು ವಾಸನೆಯ ಹಿಂದೆಯೇ ಒಬ್ಬಳು ‘ಅಮ್ಮ’ ‘ಕ್ರಾಂತಿ ನಾಯಕಿ (ಪುರಚ್ಚಿ ತಲವೈ)’ ಹುಟ್ಟಿದ್ದು ರಾಜಕೀಯ ವಿರೋಧಾಭಾಸಗಳಿಗೆ ಸಾಕ್ಷಿ. 1989ರಲ್ಲಿ ತಮಿಳುನಾಡಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದ ಜಯಲಲಿತಾ ವಿಧಾನಸಭೆಯ ಅಧಿವೇಶನದಲ್ಲಿ ಮೈಕ್ ಎಸೆಯುವ, ಚಪ್ಪಲಿ ಎಸೆಯುವ ‘ಸುಸಂಪ್ರದಾಯಕ್ಕೆ’ ನಾಂದಿ ಹಾಡಿ ವಿಖ್ಯಾತರಾದರು. 1991ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಡನೆ ಸೇರಿ ಅಭೂತಪೂರ್ವ ಗೆಲುವು ಕಂಡು ಮುಖ್ಯಮಂತ್ರಿಯಾದರು.
ಸರ್ವಾಧಿಕಾರತನದ ಬೃಹದ್ದರ್ಶನ ಐದು ವರುಷದ ಆಡಳಿತಾವಧಿಯಲ್ಲಿ ಕಂಡುಬಂತು. ಅದಕ್ಕಿಂತಲೂ ಹೆಚ್ಚಾಗಿ ಕಂಡುಬಂದಿದ್ದು ಭ್ರಷ್ಟಾಚಾರತನ, ಐಷಾರಾಮಿ ಬದುಕಿನ ದಿಗ್ಧರ್ಶನ! ಇವೆಲ್ಲವಕ್ಕೂ ಜಯಲಲಿತಾ ಎಷ್ಟು ಕಾರಣಕರ್ತರೋ ಅವರ ಪಕ್ಷದವರು ಹೇಳುವಂತೆ ಅವರ ಆತ್ಮೀಯ ಗೆಳತಿ ಶಶಿಕಲಾ ನಟರಾಜನ್ ಇನ್ನೂ ಹೆಚ್ಚಿನ ಕಾರಣಕರ್ತರು. 1991ರಲ್ಲಿ ಎರಡರಿಂದ ಮೂರು ಕೋಟಿಯಷ್ಟಿದ್ದ ಜಯಲಲಿತಾರ ಆಸ್ತಿ 1996ರಷ್ಟೊತ್ತಿ 66 ಕೋಟಿ ಮುಟ್ಟಿತ್ತು! ಆಸ್ತಿಯಲ್ಲಾದ ಈ ಅಪಾರ ಏರಿಕೆಯ ಹಿಂದಿನ ಭ್ರಷ್ಟಾಚಾರದ ಕರಿನೆರಳನ್ನು ಶೋಧಿಸಬೇಕೆಂದು ದೂರು ನೀಡಿದ್ದು ಆಗಿನ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಸುಬ್ರಮಣಿಯನ್ ಸ್ವಾಮಿ (ನಂತರದ ದಿನಗಳಲ್ಲಿ ಜನತಾ ಪಕ್ಷ ಬಿಜೆಪಿಯಲ್ಲಿ ವಿಲೀನವಾಯಿತು). ಎಫ್.ಐ.ಆರ್ ದಾಖಲಾಯಿತು. ಈ ಭ್ರಷ್ಟಾಚರದಿಂದ ಬೇಸತ್ತ ಜನ ಕಳೆದ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಗೆಲ್ಲಿಸಿದ್ದ ಎಐಎಡಿಎಂಕೆಯನ್ನು ಹೆಸರಿಲ್ಲದಂತೆ ಮಾಡಿಬಿಟ್ಟರು. ಕೇವಲ ನಾಲ್ಕು ಸ್ಥಾನಗಳಲ್ಲಿ ಎಐಎಡಿಎಂಕೆ ಜಯಗಳಿಸಿತ್ತು ಮತ್ತು ಸ್ವತಃ ಜಯಲಲಿತಾ ಸೋಲು ಕಂಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೆ ಇದೇ ಅವಧಿಯಲ್ಲಿ ತಮ್ಮ ಸಾಕುಮಗ ಸುಧಾಕರನ್ ಮದುವೆಗೆ ಮಾಡಿದ್ದ ಆರು ಕೋಟಿಯವರೆಗಿನ ವೆಚ್ಚ ಕೂಡ ಕಾರಣವಾಗಿತ್ತು. ಈ ಮದುವೆಯ ಸಂಭ್ರಮ ಗಿನ್ನಿಸ್ ದಾಖಲೆಯ ಪುಟಗಳಲ್ಲಿ ಸ್ಥಾನ ಪಡೆದಿದೆಯೆಂಬ ವಿಷಯ ಅದರ ಒಣಾಡಂಬರಕ್ಕೆ ಸಾಕ್ಷಿ!
ಎಫ್.ಐ.ಆರ್ ದಾಖಲಾಯಿತು. ವಿಚಾರಣೆ ಪ್ರಾರಂಭವಾಯಿತು. ಅಧಿಕಾರ ಕಳೆದುಕೊಂಡಿದ್ದ ಜಯಲಲಿತಾ, ಅಮೋಘ ಗೆಲುವು ಸಾಧಿಸಿದ್ದ ಡಿ.ಎಂ.ಕೆ, ಇನ್ನೂ ಜಯಲಲಿತಾರ ರಾಜಕೀಯ ಜೀವನ ಅಂತ್ಯವಾಯಿತು ಎಂಬ ಭಾವನೆ ಮೂಡಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ ಹೊರಬರುತ್ತಿದ್ದ ಸ್ವಾರಸ್ಯಕರ ಸಂಗತಿಗಳು ಜನರನ್ನು ಬೆಚ್ಚಿ ಬೀಳಿಸಿತು. ಕೂಡಿಟ್ಟ ಹಣವಾಗಲಿ, ಮನೆಯಲ್ಲಿಟ್ಟಿದ್ದ ಮೂವತ್ತು ಕೆಜಿಯಷ್ಟು ಚಿನ್ನವಾಗಲೀ, ಊಟಿಯ ಬಳಿ, ತಿರುವನ್ನೇಲಿಯ ಬಳಿ ಕೊಂಡುಕೊಂಡಿದ್ದ ಸಾವಿರ ಎಕರೆಯಷ್ಟು ಭೂಮಿಯಾಗಲೀ ಜನರನ್ನು ಬೆಚ್ಚಿ ಬೀಳಿಸಲಿಲ್ಲ! ಜಯಲಲಿತಾರ ಮನೆಯಲ್ಲಿ ಹನ್ನೆರಡು ಸಾವಿರದಷ್ಟು ಸೀರೆಗಳಿದ್ದವು, ಸಾವಿರಾರು ಜೊತೆ ಚಪ್ಪಲಿಗಳಿದ್ದವು ಎಂಬ ಸಂಗತಿ ಜನರನ್ನು ದಿಗ್ಭ್ರಮೆಗೊಳಿಸಿದವು! ಆ ದಿಗ್ಭ್ರಮೆಯಲ್ಲಿ ಅಸೂಯೆಯೂ ಸೇರಿತ್ತಾ? ತಿಳಿಯದು! ಅವತ್ತಿನ ದಿನಗಳಲ್ಲಿ ಜಯಲಲಿತಾ ಮೈತುಂಬಾ ಒಡವೆ ಹಾಕಿಕೊಂಡು, ಅದರ ಮೇಲೊಂದು ಬುಲೆಟ್ ಪ್ರೂಫ್ ಜಾಕೆಟ್ಟು ಧರಿಸಿ ಸೀರೆ ಉಡುತ್ತಾರೆ ಅದಕ್ಕೆ ಅವರು ಹಾಗೆ ದಪ್ಪಗೆ ಗುಂಡುಗುಂಡಗೆ ಕಾಣೋದು, ಒಡವೆ ಬುಲೆಟ್ ಪ್ರೂಫ್ ಜಾಕೆಟ್ಟು ತೆಗೆದರೆ ಅವರು ಸಣ್ಣಕ್ಕೇ ಇರೋದಂತೆ ಎಂಬ ಗಾಳಿಸುದ್ದಿ ನಮ್ಮ ಶಾಲೆಯಲ್ಲಿ ಸುಳಿಯುತ್ತಿತ್ತು! ಇನ್ನು ಜಯಲಲಿತಾರ ಮತ್ತು ಎಐಎಡಿಎಂಕೆಯ ರಾಜಕೀಯ ಪಥ ಮುಗಿಯಿತು, ಎಂ.ಜಿ.ಆರ್ ಬೆಳೆಸಿದ ಪಕ್ಷವನ್ನು ಅನ್ಯಾಯವಾಗಿ ಈ ಯಮ್ಮ ಶಶಿಕಲಾಳ ಜೊತೆ ಸೇರಿ ಹಾಳು ಮಾಡಿಬಿಟ್ರಲ್ಲಾ ಎಂಬ ಭಾವನೆ ಮೂಡಿತ್ತು. ರಾಜಕೀಯ ವಿಶ್ಲೇಷಕರೂ ಎಐಎಡಿಎಂಕೆ ಮುಗಿದ ಅಧ್ಯಾಯ, ಇನ್ನೂ ತಮಿಳುನಾಡಿನಲ್ಲಿ ಡಿ.ಎಂ.ಕೆಗೆ ಎದುರಾಳಿಗಳೇ ಇಲ್ಲದ ಪರಿಸ್ಥಿತಿ ಎಂದಿದ್ದರು. ಇಷ್ಟೊಂದು ಭ್ರಷ್ಟಾಚಾರದಲ್ಲಿ ಮುಳುಗಿದ್ದವರನ್ನು ಜನತೆ ಮರುಆಯ್ಕೆ ಮಾಡುವುದು ಸಾಧ್ಯವೇ ಇಲ್ಲ ಎಂದುಕೊಂಡಿದ್ದರು. ಜನರ ಮನವನ್ನರಿಯುವುದು ಅಸಾಧ್ಯವೆಂದು ಅರಿವಾಗಿದ್ದು 2001ರ ಚುನಾವಣೆಯಲ್ಲಿ. ಆಗ ಜಯಲಲಿತಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಅವಕಾಶ ಸಿಕ್ಕಿರಲಿಲ್ಲ. ಅದೇ ಅನುಕಂಪದ ಅಲೆಯಿಂದಲೋ, ಡಿ.ಎಂ.ಕೆ ವಿರುದ್ಧದ ಅಲೆಯಿಂದಲೋ ಎಐಎಡಿಎಂಕೆ ಗೆಲುವು ಸಾಧಿಸಿ ಜಯಲಲಿತಾ ಮುಖ್ಯಮಂತ್ರಿಯಾದರು. ಅವರಿನ್ನು ಚುನಾವಣೆ ಗೆದ್ದಿರಲಿಲ್ಲ. ಸುಪ್ರೀಂಕೋರ್ಟ್ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದ್ಹೇಳಿ ಕೆಲವು ತಿಂಗಳುಗಳ ಮಟ್ಟಿಗೆ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ನಂತರದ ವಿಚಾರಣೆಯಿಂದ – ತೀರ್ಪಿನಿಂದ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾದರು. ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯನ್ನು ಅವರ ಮನೆಯಿಂದಲೇ ಹೊತ್ತಿಸಿ ಬಂಧಿಸಿದರು! ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಖಾಸಗಿ ವಾಹಿನಿಗಳ ಮುಖಾಂತರ ಕರುಣಾನಿಧಿಯ ಆಕ್ರಂದನ ಎಲ್ಲರ ಮನೆ ತಲುಪಿ, ಪಾಪ ಆ ಮುದ್ಕನ್ನೂ ಬುಡಲಿಲ್ಲವಲ್ಲ ಈ ಯಮ್ಮ ಎಂದು ಹಿಡಿಶಾಪ ಹಾಕುತ್ತಿದ್ದುದು ಸುಳ್ಳಲ್ಲ. ಕೇಸುಗಳ ಮೇಲೆ ಕೇಸು ದಾಖಲಾಗಿದ್ದರೂ ಜಯಲಲಿತಾ ಬದಲಾಗಿಲ್ಲ, ಬಹುಶಃ ಬದಲಾಗೋದೂ ಇಲ್ಲ ಎಂಬ ಸತ್ಯವನ್ನು ತಿಳಿಸಿ ಹೇಳಿತು. ಇದೇ ಸಮಯದಲ್ಲಿ 1996ರಲ್ಲಿ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯೂ ನಡೆಯುತ್ತಿತ್ತು. ವಿಚಾರಣೆ ನಡೆಯುತ್ತಿದ್ದದ್ದು ತಮಿಳುನಾಡಿನಲ್ಲಿ, ಅಲ್ಲಿನ ನ್ಯಾಯಾಲಯಗಳಲ್ಲಿ. ತಮ್ಮ ಅಧಿಕಾರವನ್ನುಪಯೋಗಿಸಿಕೊಂಡು ಪ್ರಕರಣವನ್ನು ದುರ್ಬಲಗೊಳಿಸಲು, ಸಾಕ್ಷಿಗಳು ತಮ್ಮ ಹಿಂದಿನ ನುಡಿಗೆ ವ್ಯತಿರಿಕ್ತವಾಗಿ ನುಡಿಯುವಂತೆ ಮಾಡಲು, ಕಡೆಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ತಮ್ಮ ಪರವಾಗೇ ತೀರ್ಪು ಬರುವಂತೆ ಮಾಡುವುದಕ್ಕೆ ಬೇಕಾದ ಕಸರತ್ತು ಶುರುವಾಗಿತ್ತು. ಡಿಎಂಕೆಯ ಅನ್ಬಳಗನ್ ಉನ್ನತ ನ್ಯಾಯಾಲಯದ ಮೊರೆ ಹೋದರು. ತಮಿಳುನಾಡಿನಲ್ಲೇ ವಿಚಾರಣೆ ನಡೆದರೆ ಪ್ರಕರಣದಲ್ಲಿ ನ್ಯಾಯಕ್ಕೆ ಅನ್ಯಾಯವಾಗುತ್ತದೆ ಎಂಬ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಇಡೀ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಿತು! ಅಲ್ಲಿದ್ದ ದಾಖಲೆಗಳನ್ನೆಲ್ಲ ಇಲ್ಲಿಗೆ ಸಾಗಿಸಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದಕ್ಕೆ ಬರೋಬ್ಬರಿ ಆರು ವರುಷಗಳಾಗಿತ್ತು!
Also readಆಪರೇಷನ್ ಕನಕಾಸುರ
2006ರ ಚುನಾವಣೆಯಲ್ಲಿ ಮತ್ತೆ ಎಐಎಡಿಎಂಕೆ ಅಧಿಕಾರ ಕಳೆದುಕೊಂಡು ಡಿ.ಎಂ.ಕೆ ಅಧಿಕಾರವಿಡಿಯಿತು. 1991ರ ಚುನಾವಣೆಯಿಂದ ಗಮನಿಸಿದರೆ ತಮಿಳುನಾಡಿನ ಮತದಾರ ಪ್ರತಿ ಚುನಾವಣೆಯಲ್ಲೂ ಅಧಿಕಾರಸ್ಥ ಪಕ್ಷವನ್ನು ಸೋಲಿಸಿದ್ದಾನೆ. ತಮಿಳುನಾಡಿನ ಅಭಿವೃದ್ಧಿಯನ್ನು ಗಮನಿಸಿದರೆ ಈ ರೀತಿಯ ಬದಲಾವಣೆ ಎಷ್ಟು ಧನಾತ್ಮಕವಾದದ್ದು ಎಂಬುದರಿವಾಗುತ್ತದೆ. ಈ ಧನಾತ್ಮಕತೆಯ ಮುಂದುವರಿಕೆಯಂತೆ 2011ರಲ್ಲಿ ಮತ್ತೆ ಎಐಎಡಿಎಂಕೆ ಅಧಿಕಾರಕ್ಕೆ ಬಂತು. ಮತ್ತೊಮ್ಮೆ ಎಐಎಡಿಎಂಕೆಯ ಸರ್ವೋಚ್ಛ ನಾಯಕಿ ಮುಖ್ಯಮಂತ್ರಿಯ ಪದವಿ ಅಲಂಕರಿಸಿದರು. ಇಷ್ಟರಳೊರಗಾಗಲೇ ಯು.ಪಿ.ಎಯ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಕಂಡು ಕೇಳರಿಯದ ಹಗರಣಗಳು, ಸಾವಿರಾರು ಕೋಟಿ – ಲಕ್ಷಾಂತರ ಕೋಟಿ ಎಂದು ಬಹುತೇಕ ಜನರಿಗೆ ಲೆಕ್ಕವೇ ಹಾಕಲಾಗದ ಮೊತ್ತದ ಹಗರಣಗಳು ಭಾರತವನ್ನು ಪ್ರಕಾಶಿಸುತ್ತಿದ್ದವು. ಇವುಗಳ ಮಧ್ಯೆ ಲಾಲೂ ಪ್ರಸಾದ್ ಯಾದವರಂಥವರೂ ತಮ್ಮ ಮೇಲಿದ್ದ ಅನೇಕ ಹಗರಣಗಳಿಂದ ಖುಲಾಸೆಗೊಳ್ಳುತ್ತ – ಬಂಧನಕ್ಕೊಳಗಾಗುತ್ತು ಗ್ಯಾಪಿನಲ್ಲಿ ರೈಲ್ವೇ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು! ಈ ಸಮಯದಲ್ಯಾರಾದರೂ ಜಯಲಲಿತಾರ ಪ್ರಕರಣವನ್ನು ನೆನಪಿಸಿದ್ದರೆ ‘ಅಯ್ಯೋ ಬರೀ ಅರವತ್ತಾರು ಕೋಟಿಗೆಲ್ಲ ಶಿಕ್ಷೆಯಾಗುತ್ತ ಬಿಡೀಪ್ಪ’ ಎಂದು ನಗಾಡುತ್ತಿದ್ದೆವೇನೋ. ಎಲ್ಲವನ್ನೂ ನಗುನಗುತ್ತ ಮರೆತುಬಿಡಲು ಕಾನೂನಾಧಾರಿತ ನ್ಯಾಯಾಲಯವೇನೂ ಜನಸಾಮಾನ್ಯರಂಥಲ್ಲವಲ್ಲ. ಕಾನೂನು ನಿಧಾನವಾಗಿಯಾದರೂ ಧೃಡವಾಗಿಯೇ ತನ್ನ ಹೆಜ್ಜೆಗಳನ್ನಿಡುತ್ತಿತ್ತು. ಬೆಂಗಳೂರಿನಲ್ಲಿ ಸ್ಥಾಪಿತವಾಗಿದ್ದ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದ್ದಕ್ಕಿಂತ ವಿಚಾರಣೆಯನ್ನು ಮುಂದೂಡಿದ್ದೇ ಹೆಚ್ಚು. ಸಾಕ್ಷಿಗಳು ಪ್ರತಿಕೂಲವಾಗಿದ್ದು, ಜಯಲಲಿತಾ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದುದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಗುಮಾನಿ ಮೂಡುತ್ತಿದ್ದುದೆಲ್ಲವೂ ಪ್ರಕರಣವನ್ನು ಮತ್ತಷ್ಟು ಲಂಬವಾಗಿಸಿದವು. ಜಯಲಲಿತಾ ಮೇಲಿದ್ದ ಹತ್ತಲವು ಕೇಸುಗಳಲ್ಲಿ ಎಲ್ಲದರಲ್ಲೂ ಖುಲಾಸೆಯಾಗಿದ್ದರೂ ಅಕ್ರಮ ಆಸ್ತಿಯ ಪ್ರಕರಣ ಮಾತ್ರ ಇನ್ನೂ ಜೀವಂತವಾಗಿತ್ತು.
ಪ್ರಕರಣದಲ್ಲಿ ಎ1 ಆಗಿದ್ದ ಜಯಲಲಿತಾರ ಮೇಲಿನ ಆರೋಪ ಸಾಬೀತಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13ರಡಿಯಲ್ಲಿ ನಾಲ್ಕು ವರುಷಗಳ ಕಾಲ ಜೈಲು ಶಿಕ್ಷೆ ಮತ್ತು ಪ್ರಪಥಮ ಬಾರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ನೂರು ಕೋಟಿಯಷ್ಟು ದಂಡ ವಿಧಿಸಲಾಗಿದೆ. ಪ್ರಕರಣದ ಇನ್ನಿತರ ಆರೋಪಿಗಳಾದ ಅವರ ಸಾಕು ಮಗ ಸುಧಾಕರನ್, ಗೆಳತಿ ಶಶಿಕಲಾ ನಟರಾಜನ್ ಮತ್ತು ಶಶಿಕಲಾರ ಸಂಬಂಧಿಯಾದ ಇಳವರಸಿಗೆ ನಾಲ್ಕು ವರುಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಮೂವರಿಗೂ ತಲಾ ಹತ್ತು ಕೋಟಿ ದಂಡ ವಿಧಿಸಲಾಗಿದೆ. ನಾಲ್ಕು ವರುಷಗಳ ಶಿಕ್ಷೆಯಾದ ಕಾರಣ ಎಲ್ಲ ನಾಲ್ವರನ್ನು ವಿಶೇಷ ನ್ಯಾಯಾಲಯ ಸ್ಥಾಪಿತವಾಗಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರದ ಆವರಣದಿಂದ ಅಲ್ಲಿನ ಜೈಲಿಗೆ ಕಳುಹಿಸಲಾಗಿದೆ. ಅಲ್ಲಿಗೆ ಒಂದು ಸುದೀರ್ಘ ಪ್ರಕರಣ ನ್ಯಾಯದ ಪರವಾಗಿ ಬಂದಿದೆ. ಶಿಕ್ಷೆ ಜಾರಿಯಾಗುತ್ತಿದ್ದಂತೆ ಜಯಲಲಿತಾರ ಶಾಸಕತ್ವ ಮತ್ತು ಮುಖ್ಯಮಂತ್ರಿಯ ಸ್ಥಾನ ಕಳಚಿಕೊಂಡಿದೆ. ಉತ್ತರಾಧಿಕಾರಿಯಾಗಿ ಜಯಲಲಿತಾರ ಪರಮಭಕ್ತ ಎಂದೇ ಪರಿಗಣಿಸಲಾಗುವ ಪನ್ನೀರ್ ಸೆಲ್ವಂ ಆಯ್ಕೆಯಾಗಿದ್ದಾರೆ. ಜಯಲಲಿತಾರ ಮುಂದಿರುವ ಆಯ್ಕೆಗಳು ಕಡಿಮೆ. ಉನ್ನತ ನ್ಯಾಯಾಲಯಗಳಿಗೆ ಮೊರೆ ಹೋಗಬಹುದು. ಮೊದಲಿಗೆ ಹೈಕೋರ್ಟ್ ಅಲ್ಲೂ ಪ್ರಕರಣ ಖುಲಾಸೆಯಾಗದಿದ್ದರೆ ಸುಪ್ರೀಂಕೋರ್ಟ್. ಜಾಮೀನು ಸಿಗುವುದು ಕಷ್ಟವಲ್ಲವಾದರೂ ಇಡೀ ಪ್ರಕರಣದಲ್ಲಿ ಜಯಲಲಿತಾ ನಿರಪರಾಧಿ ಎಂಬ ತೀರ್ಪು ಬರುವವರೆಗೂ (ಸಾಕ್ಷಿ ಆಧಾರಗಳು, ಪ್ರಾಸಿಕ್ಯೂಷನ್ ಪ್ರಸ್ತುತಪಡಿಸಿರುವ ದಾಖಲೆಗಳ ಆಧಾರದಲ್ಲಿ ಅದು ಕಷ್ಟವೇ) ಅವರು ಶಾಸಕರಾಗುವಂತಿಲ್ಲ, ಮುಖ್ಯಮಂತ್ರಿಯಾಗುವಂತಿಲ್ಲ, ಶಿಕ್ಷೆಯ ಅವಧಿಯ ನಂತರದ ಆರು ವರುಷ ಅಂದರೆ ಒಟ್ಟು ಹತ್ತು ವರುಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಲ್ಲಿಗೆ ಈಗಿನ ಲೆಕ್ಕದಲ್ಲೇ ಇನ್ನತ್ತು ವರುಷ ಸೇರಿಸಿದರೂ ಜಯಲಲಿತಾ ಮುಂದಿನ ಚುನಾವಣೆಗೆ ನಿಲ್ಲಲು ಸಾಧ್ಯವಾಗುವುದು ಅವರಿಗೆ 76 ವರುಷಗಳಾದಾಗ. ಅಷ್ಟರಮಟ್ಟಿಗೆ ಜಯಲಲಿತಾರ ರಾಜಕೀಯ ಅಧ್ಯಾಯ ಮುಗಿದಂತೆನ್ನಿಸುತ್ತದೆ. ಆದರೆ ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಪಕ್ಷದ ಮೇಲೆ ಸರಕಾರದ ಮೇಲೆ ನಿಯಂತ್ರಣ ಹೊಂದುವಲ್ಲಿ ಜಾಮೀನು ಸಾಕು. ಲೆಕ್ಕಾಚಾರಗಳು ಹಲವಿದ್ದರೂ ಮುಂದಿನ ದಿನಗಳಲ್ಲಿ ಪಕ್ಷದ ನಡೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ಜಯಲಲಿತಾರ ಈ ಪ್ರಕರಣ ಭಾರತದ ಪ್ರಜಾಪ್ರಭುತ್ವದ ನಾಟಕೀಯತೆಯನ್ನು ಜನರ ಭಾವಾತಿರೇಕದ ದರ್ಶನವನ್ನೂ ಒಟ್ಟೊಟ್ಟಿಗೆ ಮಾಡಿಸಿತು. ದಿನನಿತ್ಯದ ಜೀವನದಲ್ಲಿ ‘ಥೂ ಥೂ ಏನ್ ಕರಪ್ಷನ್ ನಮ್ ದೇಶದಲ್ಲಿ’ ಎಂದು ಗೊಣಗುವವರೂ ಕೂಡ ಜಯಲಲಿತಾರ ಬಗ್ಗೆ ಅಯ್ಯೋ ಪಾಪ ಎಂದುದ್ಗಾರ ತೆಗೆದರು. ಬರೀ ಅರವತ್ತಾರು ಕೋಟಿಗೆ ಇಷ್ಟೊಂದು ದೊಡ್ಡ ಶಿಕ್ಷೇನಾ ಎಂದು ಬೇಸರ ಮೂಡಿಸಿದ ಪ್ರಕರಣವಿದು! ಇನ್ನು ತಮಿಳುನಾಡಿನಲ್ಲಿ ಮತ್ತು ಪರಪ್ಪನ ಅಗ್ರಹಾರದ ಸುತ್ತಮುತ್ತ ಜಯಲಲಿತಾರ ಪರವಾಗಿ ಕಣ್ಣೀರು ಸುರಿಸುತ್ತಿರುವ ಜನರನ್ನು ನೋಡಿದರೆ ಪ್ರಜಾಪ್ರಭುತ್ವ, ಕಾನೂನು, ಭ್ರಷ್ಟಾಚಾರ ಎಲ್ಲದರ ಬಗೆಗಿನ ಅಭಿಪ್ರಾಯವೂ ಗೋಜಲಾಗಿಬಿಡುತ್ತದೆ! ಶಾಸಕರು, ಮಂತ್ರಿಗಳು, ಸಂಸದರು ಗಳ ಗಳ ಎಂದು ಅಳುತ್ತ ನ್ಯಾಯಾಲಯದಿಂದ ಹೊರಬರುವುದೇನು, ತಮಿಳುನಾಡಿನ ಜನರು ಬಂದು ಜೈಲಿನ ಹೊರಗೆ ನಮಗೆ ಅಮ್ಮನನ್ನು ನೋಡಲು ಅವಕಾಶ ಕೊಡಿ ಎಂದು ಗೋಗರೆಯುವುದೇನು, ತಮಿಳುನಾಡಿನ ಬೀದಿಬೀದಿಗಳಲ್ಲಿ ಜನರು ಎದೆ ಎದೆ ಬಡಿದುಕೊಂಡು ಅಳುವುದೇನು..... ಬಹುಶಃ ಸಿನಿಮಾದಲ್ಲಿ ನೋಡಿದ್ದರೇ ನಾಟಕೀಯವೆನ್ನಿಸುವಂತಹ ಘಟನೆಗಳೆಲ್ಲಾ ನಿಜವಾಗಿಯೂ ನಡೆದುಹೋಯಿತು. ಇದೇ ಸಂದರ್ಭದಲ್ಲಿ ಅದೇ ತಮಿಳುನಾಡಿನಲ್ಲಿ ಡಿಎಂಕೆಯ ಬೆಂಬಲಿಗರು ಸಂಭ್ರಮಾಚರಣೆಯನ್ನು ನಡೆಸಿದರು, ಇಲ್ಲಿ ಮಂಡ್ಯದಲ್ಲಿ ಕೂಡ ಪಟಾಕಿ ಹಂಚಿ, ಸಿಹಿ ಹಂಚಿ ಸಂಭ್ರಮಿಸಲಾಯಿತು! ಡಿಎಂಕೆಗೆ ಎಐಎಡಿಎಂಕೆ ಕಡು ವೈರಿ. ಎರಡು ಬಲಿಷ್ಟ ಪಕ್ಷಗಳು ಮತ್ತವರನ್ನು ಒಂದು ಬಿಟ್ಟು ಮತ್ತೊಂದು ಚುನಾವಣೆಯಲ್ಲಿ ಆರಿಸುವ ಅಲ್ಲಿನ ಜನತೆಯ ಕಾರಣದಿಂದಲೇ ಈ ಪ್ರಕರಣದಲ್ಲಿ ಜಯಲಲಿತಾರಿಗೆ ಶಿಕ್ಷೆಯಾಗಿದೆ ಎಂದರೆ ಸುಳ್ಳಲ್ಲ. ವೈರಿಯನ್ನು ಮಣಿಸುವ ಸಂಭ್ರಮದಲ್ಲಿ ಜಯಲಲಿತಾರ ವಿರುದ್ಧ ದಾಖಲೆಗಳನ್ನೊದಗಿಸಿದ್ದು, ವಿಚಾರಣೆ ತಮಿಳುನಾಡಿನಿಂದ ವರ್ಗವಾಗುವಂತೆ ಮಾಡುವಲ್ಲಿ ಡಿಎಂಕೆಯ ಪಾತ್ರ ದೊಡ್ಡದು. ಅವರ ಸಂಭ್ರಮಾಚರಣೆಯಲ್ಲಿ ತಪ್ಪೇನಿಲ್ಲ. ಇನ್ನು ಜಯಾರ ಬೆಂಬಲಿಗರ ಮತ್ತು ಅನೇಕ ಜನಸಾಮಾನ್ಯರ ಭಾವಾತಿರೇಕದ ಅಳುವಿನಲ್ಲೂ ಅಸಹಜತೆಯೇನಿಲ್ಲ. ಬಹುಶಃ ಈ ತೀರ್ಪು 2000ದ ಪ್ರಾರಂಭದಲ್ಲೇ ಬಂದಿದ್ದರೆ ಇಷ್ಟು ಅಪಾರ ಜನಬೆಂಬಲ ತಮಿಳುನಾಡಿನ ಒಳಗೆ ಮತ್ತು ಹೊರಗೆ ಮೂಡುತ್ತಿರಲಿಲ್ಲ. ತಮ್ಮ ಪ್ರತಿ ಅಧಿಕಾರಾವಧಿಯಲ್ಲೂ ಒಂದಷ್ಟು ಜನಪರ ಕೆಲಸಗಳನ್ನು ಮಾಡುತ್ತಿದ್ದರಾದರೂ ಭ್ರಷ್ಟಾಚಾರ ಮತ್ತು ಸರ್ವಾಧಿಕಾರತನದಿಂದ ಮೂಡಿದ ದರ್ಪಗಳೆಲ್ಲವೂ ಅವರ ಕೆಲಸಗಳನ್ನು ಮರೆಯುವಂತೆ ಮಾಡುತ್ತಿದ್ದವು. ಈ ಬಾರಿಯ ಅಧಿಕಾರಾವಧಿಯಲ್ಲಿ ಕೆಲಸಗಳು ಮುಂದಾಗಿ ಉಳಿದೆಲ್ಲವೂ ಹಿಂದಾಗಿತ್ತು. ತಮ್ಮ ನೆಚ್ಚಿನ ಗೆಳತಿಯನ್ನೇ ಒಮ್ಮೆ ಪಕ್ಷವಿರೋಧಿ ಚಟುವಟಿಕೆಗಾಗಿ ಉಚ್ಛಾಟಿಸಿಬಿಟ್ಟಿದ್ದರು. ಪಕ್ಷದ ಇತರೆ ಅನೇಕ ನಾಯಕರಿಗೆ ಖುಷಿಯಾಗಿತ್ತು. ಖಾಸಗೀಕರಣದ ಮಂತ್ರ ವಿಪರೀತವೆನ್ನಿಸುಂತೆ ಕೇಳುತ್ತಿರುವ ಎಲ್ಲವನ್ನೂ ಖಾಸಗಿಗೇ ಕೊಟ್ಟು ಕೊನೆಗೆ ಸರಕಾರವೆಂದರೆ ಖಾಸಗಿಯವರು ಕೇಳಿದ ಸೌಲಭ್ಯವನ್ನು, ಭೂಮಿಯನ್ನು ಕೊಡಮಾಡಿಸುವ ಬ್ರೋಕರ್ ಅಷ್ಟೇ ಎಂಬ ಅಭಿಪ್ರಾಯ ಮೂಡುತ್ತಿರುವಾಗ ಖಾಸಗಿಯವರ ಸಹಭಾಗತ್ವದೊಂದಿಗೆ ‘ಅಮ್ಮ ಕ್ಯಾಂಟೀನ್’ ‘ಅಮ್ಮ ವಾಟರ್’ ‘ಅಮ್ಮ ಸಾಲ್ಟ್’ ಪ್ರಾರಂಭಿಸಿ ಅತಿ ಕಡಿಮೆ ಬೆಲೆಗೆ ಜನರನ್ನು ತಲುಪುವ ವ್ಯವಸ್ಥೆ ಮಾಡಲಾಯಿತು. 25ರುಪಾಯಿಯ ಅಮ್ಮ ಥಿಯೇಟರ್ ಪ್ರಾರಂಭಿಸುವ ಯೋಜನೆಯೂ ಇತ್ತಂತೆ! ತಮಿಳುನಾಡಿಗೆ ಪ್ರವಾಸಕ್ಕೆ ಹೋದವರು ತಮಿಳುನಾಡನ್ನು ಹೊಗಳುತ್ತಿದ್ದುದಕ್ಕೆ ಜಯಲಲಿತಾ ಮುಖ್ಯಕಾರಣವೆಂಬುದು ಸುಳ್ಳಲ್ಲ. ಪ್ರಖ್ಯಾತಿಯ ತುತ್ತತುದಿಯಲ್ಲಿದ್ದಾಗಲೇ ಬಂಧನವಾಗಿದ್ದು ಈಗ ಕಾಣುತ್ತಿರುವ ಭಾವಾತೀರೇಕಕ್ಕೆ ಮುಖ್ಯ ಕಾರಣ. ದುರಾಡಳಿತ ನೀಡಿದ್ದರೆ ಈ ಪರಿಯ ಅತಿರೇಕದ ಭಾವನೆಗಳನ್ನು ಕಾಣಲಾಗುತ್ತಿರಲಿಲ್ಲ. ಇನ್ನು ಕರ್ನಾಟಕದ ಕಾವೇರಿ ಕೊಳ್ಳದ ಜನತೆ ಜಯಲಲಿತಾರ ಬಂಧನಕ್ಕೆ ಸಂಭ್ರಮಿಸುವುದರ ಕಾರಣ ಎಲ್ಲರಿಗೂ ತಿಳಿದೇ ಇದೆ. ಕಾವೇರಿ ವಿಷಯದ ಬಗೆಗಿನ ಗಲಾಟೆಗಳು, ಗಲಭೆಗಳು ಹೆಚ್ಚಾಗುತ್ತಿದ್ದುದ್ದೇ ಜಯಲಲಿತಾರ ಆಡಳಿತಾವಧಿಯಲ್ಲಿ. ಬರಗಾಲದಲ್ಲೂ ಕರ್ನಾಟಕದ ಕತ್ತು ಹಿಚುಕಿಯಾದರೂ ನೀರು ಪಡೆಯುವಲ್ಲಿ ಜಯಲಲಿತಾ ಪ್ರಸಿದ್ಧ! ಮತ್ತದರಲ್ಲಿ ಯಶಸ್ವಿಯೂ ಆಗುತ್ತಿದ್ದರು ಬಿಡಿ. ಒಟ್ಟಿನಲ್ಲಿ ಒಂದು ವರ್ಣರಂಜಿತ ರಾಜಕೀಯ ಅಧ್ಯಾಯವೊಂದು ಕಾನೂನಿಗೆ ಶರಣಾಗಿದೆ. 
image source - wikipedia

No comments:

Post a Comment