Mar 19, 2014

ಆಪರೇಷನ್ ಕನಕಾಸುರ! ಪತ್ರಿಕೋದ್ಯಮವನ್ನೇ ಕುಟುಕಿದ ಕಾರ್ಯಾಚರಣೆ!ಡಾ. ಅಶೋಕ್. ಕೆ. ಆರ್
ಪ್ರಕರಣವೊಂದರ ಬೆನ್ನು ಹತ್ತಿ ತನಿಖೆ ಮಾಡುವುದು ಪತ್ರಿಕೋದ್ಯಮದ ಭಾಗ. ಪತ್ರಿಕೋದ್ಯಮದ ರೀತಿ ರಿವಾಜುಗಳು ಬದಲಾದಂತೆ ತನಿಖಾ ಪತ್ರಿಕೋದ್ಯಮದ ರೂಪು ರೇಷೆಗಳೂ ಬದಲಾಗುತ್ತಿವೆ. ಅವಶ್ಯ ದಾಖಲೆಗಳನ್ನು ಸಂಗ್ರಹಿಸುತ್ತ ಸಂಗ್ರಹಗೊಂಡ ದಾಖಲೆ ವ್ಯಕ್ತಿಯೊಬ್ಬರ ವಿರುದ್ಧ, ಸಂಸ್ಥೆಯೊಂದರ ವಿರುದ್ಧ ಪತ್ರಿಕಾ ಲೇಖನ ಬರೆಯುವುದಕ್ಕೆ ಸಾಕಷ್ಟಾಯಿತು ಎಂಬ ಭಾವ ಮೂಡಿದ ನಂತರ ಲೇಖನಿಗೆ ಕೆಲಸ ಕೊಡಲಾಗುತ್ತಿತ್ತು. ಪತ್ರಿಕಾ ವರದಿಗಳು ಸಮಾಜವನ್ನಲುಗಿಸಿ ಕ್ರಿಯಾಶೀಲವಾಗಿಸುತ್ತಿತ್ತು. ಪತ್ರಿಕಾ ವರದಿಗಳ ಕರಾರುವಕ್ಕುತನ ಎಷ್ಟಿರುತ್ತಿತ್ತೆಂದರೆ ಅದರ ಸತ್ಯಾ ಸತ್ಯತೆಗಳ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ಅನುಮಾನ ಮೂಡುತ್ತಿರಲಿಲ್ಲ. ಇದು ವಿರೋಧಿಗಳ ಒಳಸಂಚು ಎಂಬ ಭಾವನೆ ಮೂಡುತ್ತಿದ್ದುದಂತೂ ಅಪರೂಪದಲ್ಲಿ ಅಪರೂಪ. ಬೋಪೋರ್ಸ್ ತರಹದ ಹಗರಣಗಳು ಹೊರಪ್ರಪಂಚಕ್ಕೆ ತಿಳಿದಿದ್ದು ಇಂತಹ ನಿರ್ಭಯ ತನಿಖಾ ಪತ್ರಿಕೋದ್ಯಮದಿಂದ. ವರದಿಯನ್ನು ಬೆಂಬಲಿಸುವಂತಹ ದಾಖಲೆಗಳನ್ನು ಸಂಗ್ರಹಿಸಿದ ನಂತರವಷ್ಟೇ ಪ್ರಕಟಣೆಗೆ ಪರಿಗಣಿಸಲಾಗುತ್ತಿತ್ತು. ಪತ್ರಿಕೆಗಳ ಸಂಖ್ಯೆ ಹೆಚ್ಚಿದ ನಂತರ ಅದರಲ್ಲೂ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಬರುವ ಟ್ಯಾಬ್ಲಾಯ್ಡ್ ಪತ್ರಿಕೆಗಳ ಸಂಖೈ ಅಧಿಕಗೊಂಡ ಬಳಿಕ ತನಿಖಾ ಪತ್ರಿಕೋದ್ಯಮದಲ್ಲೂ ಆತುರತೆ ಕಾಣಲಾರಂಭಿಸಿತು. ತತ್ಪರಿಣಾಮವಾಗಿ ಪತ್ರಿಕೆ ಮತ್ತು ಪತ್ರಕರ್ತರ ಮೇಲಿನ ಮಾನನಷ್ಟ ಮೊಕದ್ದಮೆಗಳೂ ಹೆಚ್ಚಾಗಲಾರಂಭಿಸಿತು. ಕೆಲವೊಮ್ಮೆ ಕಣ್ಣಿಗೆ ಕಾಣುವ ಸತ್ಯಕ್ಕೆ ದಾಖಲೆಯ ಅಲಭ್ಯತೆಯುಂಟಾಗುವುದರಿಂದ ಸಂಪೂರ್ಣ ದಾಖಲೆಗಳಿಲ್ಲದ ತನಿಖಾ ಪತ್ರಿಕೋದ್ಯಮವನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಲಾಯಿತು. ಇತ್ತೀಚಿನ ದಿನಮಾನದಲ್ಲಿ ಉತ್ತಮ ತನಿಖಾ ಪತ್ರಿಕೋದ್ಯಮಕ್ಕೆ ಪ್ರಜಾವಾಣಿಯಲ್ಲಿ ಪ್ರಕಟವಾದ ಕೆ.ಪಿ.ಎಸ್.ಸಿ ಕರ್ಮಕಾಂಡವನ್ನು ಉದಹರಿಸಬಹುದು.

ತನಿಖಾ ಪತ್ರಿಕೋದ್ಯಮ ದಿಕ್ಕು ಬದಲಿಸಿದ್ದು ದೃಶ್ಯಮಾಧ್ಯಮದ ಆಗಮನದೊಂದಿಗೆ. ದಾಖಲೆಗಳು, ಜೆರಾಕ್ಸ್ ಪ್ರತಿಗಳು ವರದಿಗೆ ಪೂರಕವಾಗುತ್ತಿತ್ತಾದರೂ ಅದು ಪತ್ರಿಕೆಗಳ ಲೇಖನಗಳಿಗೆ ಸರಿಯೆನ್ನಿಸುತ್ತಿತ್ತೇ ಹೊರತು ವಾಹಿನಿಗಳ ದೃಶ್ಯಗಳಿಗಲ್ಲ. ಜನರ ಅಭಿಪ್ರಾಯಗಳನ್ನು ಬಿತ್ತರಿಸಲಾಯಿತು. ಕೆಲವೊಂದು ಸಂದರ್ಭದಲ್ಲಿ ಆಡಳಿತಶಾಹಿಯ - ರಾಜಕಾರಣಿಗಳ - ಕಾಣದ ಕೈಗಳ ಭಯಕ್ಕೆ ನಲುಗಿ ಮಾಧ್ಯಮದ ಮುಂದೆ ಮಾತನಾಡಲು ಜನರು ಹಿಂಜರಿಯುತ್ತಿದ್ದರು. ಆಗ ಶುರುವಾದದ್ದು ಸ್ಟಿಂಗ್ ಆಪರೇಷನ್ – ಕುಟುಕು ಕಾರ್ಯಾಚರಣೆ. ನಕಲಿ ರೂಪದಲ್ಲಿ ಹೋಗಿ ವಿಷಯ ಸಂಗ್ರಹಣೆ ಮಾಡುವ ಕೆಲಸ ಮುದ್ರಣ ಮಾಧ್ಯಮಗಳಲ್ಲೇ ನಡೆಯುತ್ತಿತ್ತಾದರೂ ನೂತನ ತಂತ್ರಜ್ಞಾನ ಬಳಸಿ ನಡೆಸಿದ ಅಷ್ಟೂ ಕುಟುಕು ಕಾರ್ಯಾಚರಣೆಯನ್ನು ವಿಡಿಯೋ ಮಾಡುವ ಪರಿಪಾಟ ಪ್ರಾರಂಭವಾಗಿದ್ದು ದೃಶ್ಯಮಾಧ್ಯಮದ ಅವಶ್ಯಕತೆಗಾಗಿ. ಕುತೂಹಲದ ಸಂಗತಿಯೆಂದರೆ ಭಾರತದಲ್ಲಿ ಮೊದಲು ಈ ರೀತಿಯ ವಿಡಿಯೋ ಕುಟುಕು ಕಾರ್ಯಾಚರಣೆಯನ್ನು ಹೆಚ್ಚು ಪ್ರಚುರಪಡಿಸಿದ್ದು ‘ತೆಹೆಲ್ಕಾ’ ಎಂಬ ಅಂತರ್ಜಾಲ ಪತ್ರಿಕೆ (ನಂತರದ ದಿನಗಳಲ್ಲಿ ತೆಹೆಲ್ಕಾ ಅಂತರ್ಜಾಲ ಪತ್ರಿಕೆಯ ಜೊತೆಜೊತೆಗೆ ಮುದ್ರಣ ಪತ್ರಿಕೆಯನ್ನೂ ಹೊರತರಲಾರಂಭಿಸಿತು). ಯಾವಾಗ ರಾಜಕಾರಣಿಗಳ, ಅಧಿಕಾರಿಗಳ ಲಂಚ ಸ್ವೀಕಾರದ ದೃಶ್ಯಗಳು ಸಾಮಾನ್ಯ ಜನರನ್ನು ಸೆಳೆಯುತ್ತವೆ ಎಂಬುದು ದಿಟವಾಯಿತೋ ಬಹುತೇಕ ಎಲ್ಲಾ ದೃಶ್ಯವಾಹಿನಿಗಳು ಕುಟುಕು ಕಾರ್ಯಾಚರಣೆಗೆ ಇನ್ನಿಲ್ಲದ ಮಹತ್ವ ಕೊಡಲಾರಂಭಿಸಿದರು.

ಕನ್ನಡದ ದೃಶ್ಯ ಮಾಧ್ಯಮಗಳೂ ಇದಕ್ಕೆ ಹೊರತಲ್ಲ. ಆರಂಭದ ದಿನಗಳಲ್ಲಿ ಕನ್ನಡದಲ್ಲಿ ಇಪ್ಪತ್ತನಾಲ್ಕು ಘಂಟೆಯ ಸುದ್ದಿವಾಹಿನಿಯನ್ನು ಪ್ರಾರಂಭಿಸಿದ್ದು ಉದಯ. ಉದಯ ನ್ಯೂಸ್ ವಾಹಿನಿಯಲ್ಲಿ ಕುಟುಕು ಕಾರ್ಯಾಚರಣೆಗೆ ಅಷ್ಟು ಮಹತ್ವವೇನಿರಲಿಲ್ಲ. ಸಂಗ್ರಹಿಸಿದ ಸುದ್ದಿಗಳಿಗೆ ಹೆಚ್ಚಿನ ಮಸಾಲೆಯನ್ನೇನೂ ಲೇಪಿಸದೆ ಜನರಿಗೆ ತಲುಪಿಸುತ್ತಿದ್ದರು. ಉದಯ ವಾಹಿನಿ ಈಗಲೂ ಅದೇ ಕೆಲಸ ಮಾಡುತ್ತಿದೆ. ನಂತರದಲ್ಲಿ ಬಂದಿದ್ದು ಟಿ.ವಿ.9. ಹಳೆಯ ಆಂಧ್ರಪ್ರದೇಶದ ಟಿ.ವಿ.9 ವಾಹಿನಿ ತೆಲುಗಿನಲ್ಲಿ ಸಿಕ್ಕ ಯಶಸ್ಸಿನಿಂದಾಗಿ ಕರ್ನಾಟಕ ಸೇರಿದಂತೆ ಇನ್ನಿತರ ಅನೇಕ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ತೆರೆಯಲಾರಂಭಿಸಿತು. ಟಿ.ವಿ.9 ಕನ್ನಡ ಆರಂಭದ ದಿನಗಳಲ್ಲಿ ಒಂದರ ಹಿಂದೊಂದರಂತೆ ಕುಟುಕು ಕಾರ್ಯಾಚರಣೆಗಳನ್ನು ನಡೆಸಲಾರಂಭಿಸಿತು. ಜನಸಾಮಾನ್ಯರು ನೀಡಬೇಕಾಗಿ ಬರುವ ಲಂಚದ ಸಂಗತಿಗಳು ಟಿ.ವಿ9 ಕುಟುಕು ಕಾರ್ಯಾಚರಣೆಯ ಮೂಲಕ ತೆರೆಯ ಮೇಲೆ ಬರಲಾರಂಭಿಸಿ ಜನರನ್ನು ಆಕರ್ಷಿಸಿತು. ಲಂಚ ಪಡೆಯುವವರಿಗೆ ಟಿ.ವಿ.9 ಕರೆಸುತ್ತೇನೆ ಎಂದು ಬೆದರಿಸುವವರೆಗೂ ಟಿ.ವಿ.9 ಪ್ರಭಾವ ಬೀರಿತ್ತೆಂದರೆ ಸುಳ್ಳಲ್ಲ. ನಂತರದಲ್ಲಿ ಕನ್ನಡದಲ್ಲಿ ಬಂದ ಅನೇಕ ಸುದ್ದಿ ವಾಹಿನಿಗಳು ವಾಹಿನಿ ಪ್ರಾರಂಭಿಸಿದ ಹೊಸತರಲ್ಲಿ ಕುಟುಕು ಕಾರ್ಯಾಚರಣೆಗೆ ಮಹತ್ವ ನೀಡಲಾರಂಭಿಸಿದವು. ನಮ್ಮಿಂದ ಹಣ ಪಡೆದುಕೊಂಡ ವ್ಯಕ್ತಿಯನ್ನು ಕುಟುಕು ಕಾರ್ಯಾಚರಣೆಯ ಮೂಲಕ ಇಡೀ ರಾಜ್ಯದ ಜನತೆಯ ಮುಂದೆ ಬೆತ್ತಲುಗೊಳಿಸುವ ಟಿ.ವಿ ವಾಹಿನಿಗಳ ಧೈರ್ಯವನ್ನು ಜನರು ಮೆಚ್ಚಿಕೊಂಡರು. ಸಮಾಜವನ್ನು ಆರೋಗ್ಯವಾಗಿಡುವಲ್ಲಿ ಮಹತ್ತರ ಪಾತ್ರ ವಹಿಸುವ ಕುಟುಕು ಕಾರ್ಯಾಚರಣೆ ಸ್ವೀಡನ್ನಿನ್ನಲ್ಲಿ ನಿಷೇಧಕ್ಕೊಳಗಾಗಿದೆ! ಅಮೆರಿಕಾದಲ್ಲಿ ಕುಟುಕು ಕಾರ್ಯಾಚರಣೆಗೆ ಅನೇಕ ಕಾನೂನಾತ್ಮಕ ಅಡೆತಡೆಗಳಿವೆ! ಭಾರತದಲ್ಲೂ ಕುಟುಕು ಕಾರ್ಯಾಚರಣೆಯ ಬಗ್ಗೆ ಅಲ್ಲಲ್ಲಿ ಅಪಸ್ವರಗಳು ಕೇಳಲಾರಂಭಿಸಿವೆ! ಕರ್ನಾಟಕದಲ್ಲೀಗ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಕುಟುಕು ಕಾರ್ಯಾಚರಣೆ ನಡೆಸಲು ಹೋಗಿ ಪತ್ರಕರ್ತರಿಬ್ಬರು ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಕರ್ನಾಟಕದಲ್ಲೂ ಕುಟುಕು ಕಾರ್ಯಾಚರಣೆಯ ಸತ್ಯಾಸತ್ಯತೆಗಳ ಬಗ್ಗೆ ಚರ್ಚೆಗಳು ಶುರುವಾಗಿವೆ! ಕಾರಣ?

ಲಂಡನ್ನಿನ ಎನರ್ಗೋ ಕಂಪನಿಯ ಹೆಸರಿನಲ್ಲಿ ಇಬ್ಬರು ಇಂಧನ ಸಚಿವ ಡಿ.ಕೆ.ಶಿವಕುಮಾರರನ್ನು ಭೇಟಿಯಾಗುತ್ತಾರೆ. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದಿಸಲು ಅನುಮತಿ ಕೋರಲು ಸಚಿವರನ್ನು ಸಂಪರ್ಕಿಸುತ್ತಾರೆ. ಅಸ್ತಿತ್ವದಲ್ಲಿಲ್ಲದ ಕಂಪನಿಯ ಹೆಸರಿನಲ್ಲಿ ಇಂಧನ ಸಚಿವರನ್ನು ಭೇಟಿಯಾಗಿದ್ದು ಟಿ.ವಿ.9 ಕನ್ನಡ ಮತ್ತದರ ಸಹ ಸಂಸ್ಥೆಯಾದ ನ್ಯೂಸ್ 9 ವಾಹಿನಿಯ ಪತ್ರಕರ್ತರಾದ ಶ್ರೇಯಸ್ ಮತ್ತು ಶ್ವೇತಾ. ಇಂಧನ ಉತ್ಪಾದಿಸಲು ಅನುಮತಿ ಪಡೆಯುವುದಕ್ಕಾಗಿ ಹಣ ನೀಡಲೂ ಸಹಿತ ಸಿದ್ಧರಾಗುತ್ತಾರೆ. ಪತ್ರಕರ್ತ ವಲಯದ ಸುದ್ದಿಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅವರೀರ್ವರಿಗೂ ಇಂತಹ ಜಾಗಕ್ಕೆ ಬಂದು ಹಣ ನೀಡುವಂತೆ ತಿಳಿಸುತ್ತಾರೆ. ಆರು ಲಕ್ಷದಷ್ಟು ಹಣವನ್ನು ಒಯ್ದ ಪತ್ರಕರ್ತರು ಲಂಚ ಕೊಡುವ ಸಮಯದಲ್ಲಿ ಡಿ.ಕೆ.ಶಿಯವರ ಸೂಚನೆಯ ಮೇರೆಗೆ ಬಂದಿದ್ದ ಮಫ್ತಿ ಪೋಲೀಸರು ಇಬ್ಬರನ್ನೂ ಬಂಧಿಸಿಬಿಡುತ್ತಾರೆ. ಅವರು ಎನರ್ಗೋ ಕಂಪನಿಯವರಲ್ಲ ಪತ್ರಕರ್ತರು ಎಂಬ ಸಂಗತಿ ಗೊತ್ತಾಗುತ್ತಿದ್ದಂತೆ ಸಚಿವರ ‘ಬೆಂಬಲಿಗರು’ ಇಬ್ಬರಿಗೂ ಮನಸೋ ಇಚ್ಛೆ ಥಳಿಸಿದರು ಎಂಬುದು ಆರೋಪ. ಮಹಿಳಾ ಪತ್ರಕರ್ತೆಯ ಮೇಲೆ ದೌರ್ಜನ್ಯವೆಸಗಿದರು ಎಂಬುದು ಮತ್ತೊಂದು ಆರೋಪ. ಲಂಚ ಕೊಡುವ ಆರೋಪದಲ್ಲಿ ಬಂಧಿತರಾದ ಪತ್ರಕರ್ತರಿಬ್ಬರೂ ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳುವುದು ಅವರಿಬ್ಬರು ತಮ್ಮನ್ನು ಭೇಟಿಯಾಗಿದ್ದು ನಿಜ, ಇಂಧನ ಉತ್ಪಾದಿಸಲು ಅನುಮತಿ ಕೋರಿದ್ದೂ ನಿಜ. ಸುಖಾಸುಮ್ಮನೆ ಅನುಮತಿ ನೀಡಲಾಗುವುದಿಲ್ಲ,ಟೆಂಡರ್ ಪ್ರಕ್ರಿಯೆ ನಡೆಯಬೇಕು ಎಂದು ತಿಳಿಸಿದೆ. ತದನಂತರ ವಿಚಾರಿಸಲಾಗಿ ಅಂಥಹದೊಂದು ಕಂಪನಿಯೇ ಇಲ್ಲ ಎಂದು ತಿಳಿಯಿತು. ಹಾಗಾಗಿ ಅವರ ಷಡ್ಯಂತ್ರ ಅರಿಯುವ ಸಲುವಾಗಿ ಮತ್ತೆ ಕರೆಸಿದ್ದೆ. ಲಂಚದ ಆಮಿಷ ಒಡ್ಡಿದರು. ಮಫ್ತಿಯಲ್ಲಿದ್ದ ಪೋಲೀಸರು ಬಂಧಿಸಿದರು. ಪೋಲೀಸರು ಬಂಧಿಸಿದ ನಂತರ ನಾನಾಗಲೀ ನನ್ನ ಬೆಂಬಲಿಗರಾಗಲೀ ಹಲ್ಲೆ ನಡೆಸುವುದು ಹೇಗೆ ಸಾಧ್ಯ? ನಾನು ಮಂತ್ರಿಯಾಗುವಾಗಲೂ ಅದನ್ನು ತಡೆಯಲು ವಾಹಿನಿಯವರು ಪ್ರಯತ್ನಿಸಿದರು. ಈಗ ಲೋಕಸಭಾ ಚುನಾವಣೆ ಸಮೀಪದಲ್ಲಿರುವ ಕಾರಣ ನನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧಿಗಳು ನಡೆಸಿರುವ ಷಡ್ಯಂತ್ರವಿದು ಎನ್ನುತ್ತಾರೆ ಡಿ.ಕೆ.ಶಿ. ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ಸಂಸದ ಡಿ.ಕೆ.ಸುರೇಶ್ ಮೇಲೆ ಅನೇಕ ಆರೋಪಗಳಿವೆ. ಡಿ.ಕೆ.ಶಿವಕುಮಾರರು ಪ್ರಬಲವಾದಷ್ಟೂ ಹಿಂದೆ ರೆಡ್ಡಿ ಸಹೋದರರ ಪುಂಡಾಟದಲ್ಲಿ ಬಳ್ಳಾರಿ ‘ರಿಪಬ್ಲಿಕ್’ ಆದಂತೆ ಕನಕಪುರ ಯಾರ ಅಂಕೆಗೂ ಸಿಗದ ‘ರಿಪಬ್ಲಿಕ್’ ಆಗಿಬಿಡುವುದೆಂಬ ಭೀತಿಯಿದೆ. ಡಿ.ಕೆ.ಶಿವಕುಮಾರರನ್ನು ಸಿದ್ಧರಾಮಯ್ಯ ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲೂ ಕೂಡ ಸಮಾಜ ಪರಿವರ್ತನಾ ಸಮುದಾಯದ ಹಿರೇಮಠರು ಡಿ.ಕೆ.ಶಿಯ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿ ದಾಖಲೆಗಳನ್ನೂ ಕೂಡ ಬಿಡುಗಡೆ ಮಾಡಿದ್ದರು. ವೈಯಕ್ತಿಕವಾಗಿ ಇಷ್ಟವಿಲ್ಲದಿದ್ದರೂ ಸಿದ್ಧರಾಮಯ್ಯ ಕೆಲವು ಆಂತರಿಕ ಒತ್ತಡಗಳಿಗೆ ಮಣಿದು ಸಂಪುಟಕ್ಕೆ ಸೇರಿಸಿಕೊಂಡು ‘ಪ್ರಬಲ ಖಾತೆ’ ಎನ್ನಿಸಿಕೊಂಡ ಇಂಧನ ಖಾತೆಯನ್ನು ನೀಡಿದ್ದರು.

ಇನ್ನು ಈ ರೀತಿಯ ಕುಟುಕು ಕಾರ್ಯಾಚರಣೆಗಳ ಬಗ್ಗೆ ಅನೇಕ ರೀತಿಯ ಅಭಿಪ್ರಾಯಗಳಿವೆ. ಪತ್ರಕರ್ತ ಅನಿರುದ್ಧ ಬಹಾಲ್ ಪ್ರಕರಣದಲ್ಲಿ ದೆಹಲಿಯ ಹೈಕೋರ್ಟ್ ಕುಟುಕು ಕಾರ್ಯಾಚರಣೆಯನ್ನು ಸಮರ್ಥಿಸಿ ತೀರ್ಪು ನೀಡಿ “ಭೃಷ್ಟಾಚಾರವನ್ನು ದೇಶದಿಂದ ಹೊಡೆದೋಡಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ.ಭೃಷ್ಟಾಚಾರದ ಬಗೆಗಿನ ಮಾಹಿತಿ ಸಿಕ್ಕಿದಾಗ ಅದನ್ನು ಜನತೆಯ ಅರಿವಿಗೆ ದಕ್ಕುವಂತೆ ಮಾಡಬೇಕು. ಎಲ್ಲಾ ಹಂತದ ಭೃಷ್ಟಾಚಾರವನ್ನು ಬಯಲಿಗೆಳೆಯಬೇಕು, ಅದರಲ್ಲೂ ಉನ್ನತ ಹಂತದ ಭ್ರಷ್ಟಾಚಾರವನ್ನಂತೂ ಬಯಲಿಗೆಳೆಯುವ ಕೆಲಸವಾಗಲೇಬೇಕು” ಎಂದು ಹೇಳಿ ಕುಟುಕು ಕಾರ್ಯಾಚರಣೆಯನ್ನು ಸಮರ್ಥಿಸಿತ್ತು. ಈ ಸಮರ್ಥನೆಯಿದ್ದಾಗ್ಯೂ ಕಾನೂನಾತ್ಮಕವಾಗಿ ಕುಟುಕು ಕಾರ್ಯಾಚರಣೆ ನಡೆಸುವ ಪತ್ರಕರ್ತರಿಗೆ ಸಂಪೂರ್ಣ ರಕ್ಷಣೆಯಿಲ್ಲ. ಕುಟುಕು ಕಾರ್ಯಾಚರಣೆಯ ವರದಿಯಾದ ನಂತರ ಮಾನನಷ್ಟ ಮೊಕದ್ದಮೆ ದಾಖಲಾದರೆ ಪತ್ರಕರ್ತರು ನ್ಯಾಯಾಲಯಕ್ಕೆ ಅಲೆಯುವುದು ತಪ್ಪುವುದಿಲ್ಲ. ಆದರೆ ತೀರ ಆರೋಪಿ ಸ್ಥಾನದಲ್ಲಿ ಪತ್ರಕರ್ತರನ್ನು ನಿಲ್ಲಿಸುವುದು ಸರಿಯಾ? ಅದೇ ಅನಿರುದ್ಧ ಬಹಾಲ್ ಮತ್ತು ರಾಜ್ಯದ ನಡುವಿನ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪತ್ರಕರ್ತರನ್ನು ಬಂಧಿಸುವುದು ಸಾಧುವಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಇವೆಲ್ಲ ಇತಿಹಾಸವಿದ್ದರೂ ಪತ್ರಕರ್ತರ ಬಂಧನವಾಗಿದ್ದಾದರೂ ಯಾಕೆ?

ಕುಟುಕು ಕಾರ್ಯಾಚರಣೆಯಲ್ಲಿ ಎರಡು ರೀತಿ. ಒಬ್ಬ ವ್ಯಕ್ತಿ ಒಂದು ಕೆಲಸವಾಗುವುದಕ್ಕೆ ತಾನಾಗಿಯೇ ಹಣದ ಬೇಡಿಕೆಯನ್ನಿಟ್ಟು ಆ ಸುದ್ದಿ ವಾಹಿನಿಗಳಿಗೆ ತಿಳಿದು ಹಣ ನೀಡುವ ಸಮಯದಲ್ಲಿ ಹಿಡ್ಡನ್ ಕ್ಯಾಮೆರಾಗಳೊಡನೆ ಕಾರ್ಯಾಚರಣೆಗಿಳಿಯುವುದು. ಅಧಿಕಾರಿ – ರಾಜಕಾರಣಿ ಬಾಯಿ ಬಿಟ್ಟು ಲಂಚ ಬೇಡಿದ ಇಂತಹ ಸಂದರ್ಭದಲ್ಲಿ ಕುಟುಕು ಕಾರ್ಯಾಚರಣೆ ಹೆಚ್ಚು ಪರಿಣಾಮಕಾರಿ. ನ್ಯಾಯಾಲಯದಲ್ಲೂ ಸಾಕ್ಷಿಯಾಗಿ ನಿಲ್ಲುತ್ತದೆ. ಲಂಚದ ಹಣವನ್ನು ನೇರವಾಗಿ ಕೇಳಿರದ ವ್ಯಕ್ತಿಯನ್ನು ಆತ ಲಂಚ ತೆಗೆದುಕೊಳ್ಳಬಹುದೆಂಬ ಗುಮಾನಿಯಿಂದ ಹಣದ ಆಮಿಷ ಒಡ್ಡಿ ಕುಟುಕುವುದು ಮತ್ತೊಂದು ರೀತಿ. ಲಂಚದ ಹಣ ಕೇಳದ ವ್ಯಕ್ತಿಯನ್ನು ಈ ರೀತಿ ಹಣದ ಆಮಿಷವೊಡ್ಡಿ ಅಕಸ್ಮಾತ್ ಆತ ಹಣವನ್ನು ಸ್ವೀಕರಿಸಿಬಿಟ್ಟರೆ ಭ್ರಷ್ಟ ಎಂದು ವಾಹಿನಿಗಳಲ್ಲಿ ಭಿತ್ತರಿಸುವುದು ಎಷ್ಟರಮಟ್ಟಿಗೆ ನೈತಿಕ ಚೌಕಟ್ಟಿಗೆ ಒಳಪಟ್ಟಿದೆ ಎಂಬುದು ಚರ್ಚಾರ್ಹ. ಡಿ.ಕೆ.ಶಿವಕುಮಾರರ ವಿಷಯದಲ್ಲಿ ನಡೆದಿದ್ದು ಎರಡನೆಯ ರೀತಿಯ ಕುಟುಕು ಕಾರ್ಯಾಚರಣೆ. ಅವರು ಹಣ ಕೇಳಿರಲಿಲ್ಲ. ಅವರಿಗೆ ಹಣದ ಆಮಿಷವೊಡ್ಡುವುದು, ಅವರು ಅದನ್ನು ಸ್ವೀಕರಿಸಿಬಿಟ್ಟರೆ ವಾಹಿನಿಗಳಲ್ಲಿ ಬಿತ್ತರಿಸುವುದು ಪತ್ರಕರ್ತರಿಬ್ಬರ ಮತ್ತು ಆ ವಾಹಿನಿಗಳ ಮಾಲೀಕರ ಆಶಯವಾಗಿತ್ತು. ವಾಹಿನಿಯ ಈ ಷಡ್ಯಂತ್ರ ಡಿ.ಕೆ.ಶಿವಕುಮಾರರಿಗೆ ತಿಳಿದುಹೋಗಿ ಲಂಚ ನೀಡುವ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯೆಡೆ ಬಂಧಿಸಲಾಗಿಬಿಡುತ್ತದೆ. ವಾಹಿನಿಯ ಮುಖ್ಯಸ್ಥರ ಮಾತಿನಿಂದ ಕುಟುಕು ಕಾರ್ಯಾಚರಣೆ ನಡೆಸಿ ಸಂಕಟಕ್ಕೊಳಗಾಗಿದ್ದು ಶ್ರೇಯಸ್ ಮತ್ತು ಶ್ವೇತ.

ಪ್ರತಿಯೊಂದನ್ನೂ ಅತಿರೇಕಕ್ಕೆ ಕೊಂಡೊಯ್ದು ವಿಷಯದ ಗಂಭೀರತೆಯನ್ನೇ ಮರೆಯಾಗಿಸಿ ಪ್ರತಿಯೊಂದು ಸಂಗತಿಯನ್ನೂ ಮನರಂಜನೆಯಂತೆ ಪರಿವರ್ತಿಸುವುದು ಇಂದಿನ ಸುದ್ದಿವಾಹಿನಿಗಳ ಮುಖ್ಯ ಗುಣವಾಗಿಹೋಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಪತ್ರಿಕೋದ್ಯಮ. ಪತ್ರಕರ್ತರ ಮೇಲೆ ಸಚಿವರಾಗಲೀ ಅವರ ಬೆಂಬಲಿಗರಾಗಲೀ ಹಲ್ಲೆ ನಡೆಸುವುದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾದುದು. ವಾಹಿನಿಯವರು ನೀಡಿದ ಪ್ರತಿದೂರಿನ ವಿಚಾರವಾಗಿ ಅಲ್ಲಿನ ಪೋಲೀಸರು ಇನ್ನೂ ಸಹಿತ ಎಫ್.ಐ.ಆರ್ ದಾಖಲಿಸದಿರುವುದು ಅಧಿಕಾರಸ್ಥರ ಮೇಲೆ ರಾಜಕೀಯ ಪ್ರಭಾವವನ್ನು ಸೂಚಿಸುತ್ತದೆ. ಶ್ರೇಯಸ್ ಮತ್ತು ಶ್ವೇತ ಮೇಲೆ ನಡೆದ ಹಲ್ಲೆ, ಕುಟುಕು ಕಾರ್ಯಾಚರಣೆ ನಡೆಸಿದವರ ಮೇಲೆ ದಾಖಲಿಸಲಾದ ಕೇಸುಗಳೆಲ್ಲವು ಖಂಡನಾರ್ಹವೆಂಬುದೇನೋ ನಿಜ. ಆದರೆ ಪತ್ರಕರ್ತರ ಮೇಲೆ ನಡೆದ ಹಲ್ಲೆಗೆ ಸಂಬಂಧಪಟ್ಟಂತೆ ಆ ಪತ್ರಕರ್ತರು ಕೆಲಸ ಮಾಡುತ್ತಿದ್ದ ಟಿ.ವಿ.9 ಕನ್ನಡ ಮತ್ತು ನ್ಯೂಸ್ 9 ವಾಹಿನಿಗಳು ಕಳೆದ ಐದು ದಿನಗಳಿಂದ ಮಾಡುತ್ತಿರುವುದು ಅಪಸಹ್ಯವಲ್ಲವೇ? ಯಾಕೆ ಪತ್ರಕರ್ತರ ಮೇಲಿನ ಹಲ್ಲೆಗೆ ಉಳಿದ ವಾಹಿನಿಗಳಾಗಲೀ ಮುದ್ರಣ ಮಾಧ್ಯಮಗಳಾಗಲೀ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ? ಈ ಪ್ರಶ್ನೆಗಳಿಗೆ ಕಾರಣ ಹುಡುಕಲಾರಂಭಿಸಿದರೆ ಇವತ್ತಿನ ಪತ್ರಿಕೋದ್ಯಮ ತಲುಪಿರುವ ದುಸ್ಥಿತಿಯ ಅರಿವಾಗುತ್ತದೆ.

ಭ್ರಷ್ಟಾಚಾರವೆಂಬುದು ರಾಜಕೀಯ ವಲಯದಿಂದ ಹಿಡಿದು ಸಮಾಜದ ಬಹುತೇಕ ಎಲ್ಲಾ ವಲಯಗಳನ್ನೂ ವ್ಯಾಪಿಸಿದೆ. ಇದಕ್ಕೆ ಪತ್ರಿಕೋದ್ಯಮವೂ ಹೊರತಲ್ಲ. ಉಳಿದೆಲ್ಲ ಕ್ಷೇತ್ರಗಳಲ್ಲಿ ಆಗುತ್ತಿರುವಂತೆ ಪತ್ರಿಕೋದ್ಯಮದಲ್ಲೂ ಪ್ರಾಮಾಣಿಕರ ಸಂಖೈ ವರ್ಷಂಪ್ರತಿ ಕಡಿಮೆಯಾಗುತ್ತಲೇ ಸಾಗುತ್ತಿದೆ. ವರುಷಗಳ ಹಿಂದೆ ಕರ್ನಾಟಕದ ಗಣಿ ಹಗರಣಗಳಿಗೆ ಸಂಬಂಧಪಟ್ಟಂತೆ ಅನೇಕ ಪತ್ರಕರ್ತರಿಗೆ ಸಂದಾಯವಾದ ಹಣದ ಬಗ್ಗೆಯೂ ಮಾಹಿತಿಯಿತ್ತು. ನಂತರದ ದಿನಗಳಲ್ಲಿ ಆ ಮಾಹಿತಿ ಹಾಗೆಯೇ ಕಣ್ಮರೆಯಾಗಿಹೋಯಿತಷ್ಟೇ. ಕೆಲವೇ ಕೆಲವು ವರುಷಗಳಲ್ಲಿ ಕೋಟಿ ಕೋಟಿ ಸಂಪಾದಿಸಿಬಿಡುವ ಪತ್ರಕರ್ತರಿದ್ದಾರೆ. ನೈತಿಕತೆಯ ಬಗ್ಗೆ ಧರ್ಮದ ಬಗ್ಗೆ ಪಾಠ ಮಾಡುವ ರೀತಿಯಲ್ಲಿ ಲೇಖನ ಬರೆದು ಘರ್ಜಿಸುವವರು ಲೇಖನ ಮೆಚ್ಚಿ ಹತ್ತಿರವಾದ ಹುಡುಗಿಯರ ಬಾಳಿನ ಜೊತೆ ಆಟವಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಮೊದಲು ಪತ್ರಕರ್ತ ಭ್ರಷ್ಟನಾದನೋ ಪತ್ರಿಕೋದ್ಯಮ ಭ್ರಷ್ಟವಾಯಿತೋ ಹೇಳುವುದು ಕಷ್ಟ. ಪತ್ರಕರ್ತನೋರ್ವ ಭ್ರಷ್ಟನಾಗಿದ್ದ ಪಕ್ಷದಲ್ಲಿ ಆತ ಕಳುಹಿಸಿದ ವರದಿಯ ಸತ್ಯಾಸತ್ಯತೆಯನ್ನು ಅರಿತು ಪ್ರಕಟಿಸುವ, ಭಿತ್ತರಿಸುವ ಜವಾಬುದಾರಿ ಆತನಿಗೆ ಕೆಲಸ ಕೊಟ್ಟ ಸಂಸ್ಥೆಗಿರುತ್ತದೆ. ಹಣ ತೆಗೆದುಕೊಂಡು ತನ್ನ ಅನುಕೂಲಕ್ಕೆ ತಕ್ಕಂತೆ ವರದಿ ಕಳುಹಿಸಿದರೆ ಒಂದು ಬಾರಿ ಎರಡು ಬಾರಿ ಪ್ರಕಟವಾಗಬಹುದು ಆದರೆ ಸತ್ಯ ತಿಳಿದ ನಂತರ ಪತ್ರಕರ್ತನ ಕೆಲಸಕ್ಕೆ ಸಂಚಕಾರ ಬರುವುದು ಖಚಿತ. ಅವನಿಗೆ ಕೆಲಸ ಕೊಟ್ಟ ಸಂಸ್ಥೆಯೇ ಭ್ರಷ್ಟವಾಗಿಬಿಟ್ಟರೆ?

ಸಂಸ್ಥೆಯ ಭ್ರಷ್ಟತನದಿಂದ ಹುಟ್ಟಿದ್ದೇ ‘ಪೇಯ್ಡ್ ನ್ಯೂಸ್’ ಎಂಬ ಪಾಪದ ಕೂಸು. ರಾಜಕೀಯ ವ್ಯಕ್ತಿಗಳ ಬಗ್ಗೆ, ಉದ್ಯಮಿಗಳ ಬಗ್ಗೆ ಪ್ರಚಾರ ಮಾಡಲು ಮಾತ್ರ ಈ ಪೇಯ್ಡ್ ನ್ಯೂಸ್ ಬಳಕೆಯಾಗುತ್ತಿಲ್ಲ. ದಿನವಹೀ ನಾವು ವಾಹಿನಿಗಳಲ್ಲಿ ನೋಡುವ ಬಹುತೇಕ ಕಾರ್ಯಕ್ರಮಗಳಿಗೆ ಮೊದಲೇ ಸಂಬಂಧಪಟ್ಟವರಿಂದ ಬೇಕಷ್ಟು ಹಣ ಸಂದಾಯವಾಗಿರುತ್ತದೆ. ನ್ಯೂಸ್ ಛಾನೆಲ್ಲುಗಳಿಗೆ ಮಾತ್ರ ಮೀಸಲಾಗಿರದೆ ಹಾಡು ಪ್ರಸರಿಸುವ ವಾಹಿನಿಗಳಿಗೂ ಹಬ್ಬಿದೆ. ಹೆಚ್ಚು ಹಣ ಕೊಟ್ಟ ನಿರ್ಮಾಪಕನ ಚಿತ್ರಗಳ ಹಾಡನ್ನು ಹೆಚ್ಚು ಪ್ರಸರಿಸಲಾಗುತ್ತದೆ, ಆ ಚಿತ್ರ ಬಿಡುಗಡೆಯ ದಿನ ಎಲ್ಲ ಪತ್ರಿಕೆಗಳಲ್ಲೂ ಆ ಚಿತ್ರದ ನಿರ್ದೇಶಕನ ನಟನ ಸಂದರ್ಶನ ಏರ್ಪಾಡುಗತ್ತದೆ. ತಮ್ಮ ಟಿ.ಆರ್.ಪಿ ಹೆಚ್ಚಿಸುವ ಘಟನಾವಳಿಗಳನ್ನು ಹೊರತುಪಡಿಸಿ ಉಳಿದ ಅನೇಕ ಕಾರ್ಯಕ್ರಮಗಳು ‘ಪೇಯ್ಡ್ ನ್ಯೂಸ್’ ಆಗುತ್ತಿವೆ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮೋದಿಯ ಭಾಷಣಗಳಿಗೆ ಚಲನವಲನಗಳಿಗೆ ವಿಪರೀತವೆನ್ನಿಸುವ ಪ್ರಾಮುಖ್ಯತೆ ಕೊಡುವ ಮಾಧ್ಯಮದ ಕಾರ್ಯವೈಖರಿಯ ಬಗ್ಗೆ ಸಂದೇಹಪಟ್ಟಿರುವುದು ಈ ಪೇಯ್ಡ್ ನ್ಯೂಸಿನ ವ್ಯಾಪಕತೆಯನ್ನು ತೋರುತ್ತದೆಯಷ್ಟೆ.

ಇನ್ನು ಕುಟುಕು ಕಾರ್ಯಾಚರಣೆಯ ಹಿಂದಿನ ಉದ್ದೇಶಗಳೂ ಸಾಚಾತನದಿಂದ ದೂರವಾಗುತ್ತ ಸಾಗಿದೆ. ಇತ್ತೀಚಿನ ಉದಾಹರಣೆಯೆಂದರೆ ಬಿಜೆಪಿಯ ರಾಮದಾಸ್ ಮತ್ತು ರಾಮದಾಸ್ ವಂಚಿಸಿದ್ದಾರೆ ಎಂದು ಆರೋಪಿಸಿದ ಪ್ರೇಮಕುಮಾರಿ ನಡುವೆ ನಡೆದ ಮಾತುಕತೆಯ ವಿಡಿಯೋ. ಈ ವಿಡಿಯೋವನ್ನು ಬಹಳಷ್ಟು ಹಿಂದೆಯೇ ತೆಗೆಯಲಾಗಿತ್ತು, ಸುದ್ದಿವಾಹಿನಿಯೊಂದರ ಸಹಾಯದಿಂದ. ರಾಮದಾಸರಿಂದ ಸರಿಯಾದ ದಕ್ಷಿಣೆ ಲಭ್ಯವಾದ ಹಿನ್ನೆಲೆಯಲ್ಲಿ ಆ ವಿಡಿಯೋ ಪ್ರಸಾರ ಕಂಡಿರಲಿಲ್ಲ ಎಂಬುದು ಸುದ್ದಿ ಮಿತ್ರರ ನಡುವೆ ತೇಲುವ ಸುದ್ದಿ. ಅನೇಕ ಪತ್ರಕರ್ತರು ಆ ವಿಡಿಯೋ ವಿಚಾರವನ್ನೇ ಹಿಡಿದು ರಾಮದಾಸರಿಂದ ಕೋಟಿ ಕೋಟಿ ಹಣ ಬಾಚಿದರೆಂಬ ಗುಮಾನಿಯೂ ಇದೆ. ಡಿ.ಕೆ.ಶಿವಕುಮಾರರ ವಿಚಾರದಲ್ಲೂ ಟಿ.ವಿ.9 ಕನ್ನಡ ವಾಹಿನಿಯ ಉದ್ದೇಶ ಸತ್ಯಾಂಶವನ್ನು ಹೊರತೆರೆಯುವುದಾಗಿತ್ತು ಎಂದು ನಂಬುವುದಾದರೂ ಹೇಗೆ? ಇದೇ ಟಿ.ವಿ.9 ಸಂಸ್ಥೆ ನಕಲಿ ಪಾಸ್ ಪೋರ್ಟ್ ಜಾಲವನ್ನು ಕುಟುಕು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿತ್ತು. ನಕಲಿ ಪಾಸ್ ಪೋರ್ಟ್ ಜಾಲದಲ್ಲಿದ್ದವರ ಸಂಬಂಧಿಯಾಗಿದ್ದ ಶಿವಪ್ರಸಾದ್ ಟಿ.ವಿ.9 ವಾಹಿನಿಯಲ್ಲೇ ಕೆಲಸಕ್ಕಿದ್ದು ಈ ಕುಟುಕು ಕಾರ್ಯಾಚರಣೆ ಪ್ರಸಾರವಾಗದಂತೆ ಪ್ರಯತ್ನಿಸಿ ಕೊನೆಗೆ ಆ ಪ್ರಕರಣದಲ್ಲಿ ಬಂಧಿತನಾಗಿದ್ದರು. ಪತ್ರಕರ್ತ ವಲಯದ ವ್ಯಕ್ತಿ ನಡೆಸಿದ ಇಂತಹ ಕೆಲಸ ವರದಿಯಾಯಿತಾ? ಇಲ್ಲ.  ತಮಗೆ ಅನುಕೂಲಕರವಾದ ಸುದ್ದಿಯನ್ನಷ್ಟೇ ಪ್ರಕಟಿಸುವ, ಬಿತ್ತರಿಸುವ ಮಾಧ್ಯಮದ ಈ ರೀತಿಯ ವರ್ತನೆಗಳು ಪತ್ರಿಕೋದ್ಯಮದ ಮೇಲಿನ ಜನರ ನಂಬುಗೆಯನ್ನೇ ಕಸಿದುಬಿಟ್ಟಿದೆ. ಟಿ.ವಿ9 ಕನ್ನಡ ವಾಹಿನಿ ಮತ್ತು ನ್ಯೂಸ್ 9 ಆಂಗ್ಲ ವಾಹಿನಿ ಕಳೆದೈದು ದಿನಗಳಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಬಿತ್ತರಿಸುತ್ತಿರುವ ಸುದ್ದಿಗಳು, ನಡೆಸುತ್ತಿರುವ ಚರ್ಚೆಗಳು ಡಿ.ಕೆ.ಶಿವಕುಮಾರ್ ವಿರುದ್ಧ ಜನಾಭಿಪ್ರಾಯ ರೂಪಿಸದೆ ವಾಹಿನಿ ಈ ಕುಟುಕು ಕಾರ್ಯಾಚರಣೆ ನಡೆಸಿದ್ದನ್ನೇ ಅನುಮಾನದಿಂದ ನೋಡುವಂತೆ ಮಾಡಿರುವುದು ಜನರಲ್ಲಿ ಪತ್ರಿಕೋದ್ಯಮದ ಧ್ಯೇಯಗಳ ಬಗೆಗೆ ಉಂಟಾಗಿರುವ ಅಪನಂಬುಗೆಯನ್ನು ಸೂಚಿಸುತ್ತದಷ್ಟೇ.

ಶ್ರೇಯಸ್ ಮತ್ತು ಶ್ವೇತಾ ಮೇಲೆ ನಡೆದ ಹಲ್ಲೆಯನ್ನು ಖಂಡಿಸುತ್ತಲೇ ಹಲ್ಲೆ ನಡೆಸಿದವರು ಶಿಕ್ಷೆಗೊಳಗಾಗಬೇಕೆಂದು ಆಗ್ರಹಿಸುವ ಜೊತೆಜೊತೆಗೆ ಪತ್ರಕರ್ತರು ಮತ್ತು ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿರುವುದು ಕೂಡ ಇಂದಿನ ಜರೂರತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ‘ನಾವಷ್ಟೇ ಸತ್ಯವಂತರು, ನಾವು ಹೇಳುವುದೆಲ್ಲಾ ಸತ್ಯ. ನಮ್ಮನ್ನು ತಡೆಯಲಾಗಲೀ ಪ್ರಶ್ನಿಸಲಾಗಲೀ ಯಾರಿಗೂ ಅಧಿಕಾರವಿಲ್ಲ’ ಎಂಬ ಆತ್ಮರತಿಯ ಅಹಂಭಾವ ಪತ್ರಿಕೋದ್ಯಮದ ಭವಿಷ್ಯತ್ತಿಗೆ ಹಾನಿಕಾರಕ. ಕೆಲವೇ ವರುಷಗಳ ಹಿಂದೆ ಯಾರಾದರೂ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕಬೇಕು, ಪತ್ರಿಕೋದ್ಯಮಕ್ಕೆ ನೀತಿ ಸಂಹಿತೆ ಬೇಕು ಎಂದು ಹೇಳಿಕೆಯನ್ನಿತ್ತರೆ ಪತ್ರಿಕೋದ್ಯಮಕ್ಕೆ ಸಂಬಂಧಪಡದವರು ಕೂಡ ಅದನ್ನು ಖಂಡಿಸುತ್ತಿದ್ದರು. ಕಾರಣ ತನ್ನೆಲ್ಲಾ ನೂನ್ಯತೆಗಳ ನಡುವೆಯೂ ಸ್ವತಂತ್ರ್ಯ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಪೂರಕ ಎಂಬ ನಂಬುಗೆ. ಆದರಿವತ್ತಿಗೂ ಅದೇ ಪರಿಸ್ಥಿತಿ ಇದೆಯೇ? ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕುವುದನ್ನು ವಿರೋಧಿಸುತ್ತಿದ್ದವರೇ ಮಾಧ್ಯಮದ ಅತಿರೇಕದ ವರ್ತನೆಗಳಿಗೆ ರೋಸಿ ಒಂದು ನೀತಿ ಸಂಹಿತೆ, ಕೊನೇ ಪಕ್ಷ ಆಂತರಿಕ ನೀತಿ ಸಂಹಿತೆ ಇರಬೇಕು ಎಂದು ತಮ್ಮ ಅಭಿಪ್ರಾಯವನ್ನೇ ಬದಲಿಸಿಕೊಳ್ಳುತ್ತಿದ್ದಾರೆ. ಇವೆಲ್ಲವುಗಳನ್ನೂ ಎಚ್ಚರಿಕೆ ಘಂಟೆಯಾಗಿ ತೆಗೆದುಕೊಳ್ಳದಿದ್ದರೆ ಮುಂದೊಂದು ದಿನ ಸ್ವತಂತ್ರ್ಯ ಪತ್ರಿಕೋದ್ಯಮವೆಂಬುದು ಇತಿಹಾಸದ ಪುಟಗಳನ್ನು ಸೇರುವುದರಲ್ಲಿ ಆಶ್ಚರ್ಯವಿಲ್ಲ.
 ಪ್ರಜಾಸಮರ ಪಾಕ್ಷಿಕಕ್ಕೆ ಬರೆದ ಲೇಖನ

No comments:

Post a Comment