Aug 27, 2014

ಆದರ್ಶವೇ ಬೆನ್ನು ಹತ್ತಿ .... ಕೊನೆಯ ಕಂತು.



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 37 ಓದಲು ಇಲ್ಲಿ ಕ್ಲಿಕ್ಕಿಸಿ
ಉಳಿದ ಸದಸ್ಯರು ಪೋಲೀಸರು ಅಲ್ಲಿ ಕುಳಿತು ತಮ್ಮ ಪೊಸಿಷನ್ ತೆಗೆದುಕೊಳ್ಳುವಷ್ಟರಲ್ಲಿ ಹೊರಟು ಹೋಗಿದ್ದರು. ಕೈಯಲ್ಲಿಡಿದಿದ್ದ ಟಾರ್ಚಿನ ಬೆಳಕೇ ನಮಗೆ ಶತ್ರುವಾಗಿತ್ತು. ಅವರಿಗೆ ತೀರ ಸಮೀಪಕ್ಕೆ ಬರುವವರೆಗೂ ಸುಮ್ಮನಿದ್ದರು. ಅವರ ಹತ್ತಿರಕ್ಕೆ ಬರುತ್ತಿದ್ದಂತೆ ಪೋಲೀಸರಿಗೆ ಪ್ರೇಮ್ ನ ಹೆಗಲಿನಲ್ಲಿದ್ದ ಎ.ಕೆ.47 ಬಂದೂಕು ಕಾಣಿಸಿತು. “ಫೈರ್” ಪೋಲೀಸನೊಬ್ಬ ಕೂಗಿ ಮುಗಿಸುವಷ್ಟರಲ್ಲಿ ಪೋಲೀಸರು ಹಾರಿಸಿದ ಗುಂಡು ಪ್ರೇಮ್ ನ ಹಣೆ ಹೊಕ್ಕಿತು. ಒಂದು ಸಣ್ಣ ಕಿರುಚಾಟವನ್ನು ಮಾಡಿ ನೆಲಕ್ಕುರುಳಿದರು ಕಾ.ಪ್ರೇಮ್.
ಅವರು ನೆಲಕ್ಕೆ ಬೀಳುವಷ್ಟರಲ್ಲಿ ಮತ್ತಷ್ಟು ಗುಂಡುಗಳು ಅವರ ದೇಹವನ್ನು ಇರಿದುಕೊಂಡು ಹೋದವು. ಪ್ರಥಮ ಬಾರಿಗೆ ಗುಂಡಿನ ಸುರಿಮಳೆಯನ್ನು ಅಷ್ಟು ಹತ್ತಿರದಿಂದ ನೋಡಿದ ನನಗೆ ಗಾಬರಿಯಾಯಿತು. ಕೈಯಲ್ಲಿದ್ದ ಪಾತ್ರೆಯನ್ನು ನೆಲಕ್ಕೆ ಬಿಸಾಡಿ ಮತ್ತೆ ಊರಿನ ಕಡೆ ಓಡಲು ಹಿಂದೆ ತಿರುಗಿದೆ. ಕಣ್ಣಂಚಿನಲ್ಲಿ ನೀರಿತ್ತು. ಎರಡು ಹೆಜ್ಜೆ ಹಾಕುವಷ್ಟರಲ್ಲಿ ನನ್ನ ಬೆನ್ನ ಹುರಿಗೊಂದು ಬುಲೆಟ್ ನುಗ್ಗಿತು. ‘ಅಮ್ಮಾ’ ಎಂದು ಕೂಗಿಕೊಳ್ಳುತ್ತಾ ಪೋಲೀಸರ ಕಡೆ ತಿರುಗಿದೆ. ಕಣ್ಣಾಗಲೇ ಮಂಜಾಗುತ್ತಿದ್ದವು; ದೂರದಲ್ಲೆಲ್ಲೋ ಕೀರ್ತನಾ ಕಿರುಚಿದಂತೆನ್ನಿಸಿತು. ಅದು ನನ್ನ ಮನದ ಭ್ರಮೆಯಾ? ಮತ್ತೊಂದು ಗುಂಡು ನನ್ನೆದೆಯ ಗೂಡನ್ನು ಸೀಳಿಹಾಕಿತು. ನನ್ನ ಪ್ರಾಣವೂ ಹೊರಟುಹೋಗಿತ್ತು. ನಾವಿಬ್ಬರೂ ಸತ್ತ ಮೇಲೆ ಇಳಿಜಾರಿನಲ್ಲಿ ಮುಂದೆ ಹೋಗುತ್ತಿದ್ದ ನಮ್ಮ ಸ್ಕ್ವಾಡಿನವರು ತಿರುಗಿನಿಂತು ಪೋಲೀಸರ ಮೇಲೆ ಗುಂಡು ಹಾರಿಸುತ್ತ ಹೆಜ್ಜೆಗಳನ್ನು ಹಿಂದಕ್ಕೆ ಹಾಕುತ್ತ ಕಾಡಿನೊಳಗೆ ಕಣ್ಮರೆಯಾಗಿಬಿಟ್ಟರು. ಒಬ್ಬ ಇನ್ಸ್ ಪೆಕ್ಟರನ ಕಾಲಿಗೆ ಅವರಾರಿಸಿದ ಗುಂಡೊಂದು ಬಿತ್ತು.
* * *
“ನಾನು ಮೈಸೂರಿನವನು ಎಂದು ನನಗೆ ತಿಳಿಸಲೇ ಇಲ್ವಲ್ಲ ಕಾ.ಪ್ರೇಮ್ ಅಲ್ಲಲ್ಲ ಕಾ.ಸಾಕೇತ್ ರಾಜನ್” ಎಂದು ಕೇಳಿದೆ.
“ಅದರ ಅವಶ್ಯಕತೆ ಇಲ್ಲ ಅನ್ನಿಸಿತು” ಎಂದ್ಹೇಳಿದರು. ಇಬ್ಬರೂ ಚಿನ್ನಪ್ಪಣ್ಣನ ಅಂಗಡಿಯ ಬಳಿ ಕುಳಿತಿದ್ದೆವು. ಇಬ್ಬರೂ ದೇಹದಿಂದ ಹೊರಬಂದಿದ್ದೆವಾದ್ದರಿಂದ.... ಹೊರಗೆ ಬಂದಿದ್ದಲ್ಲ.....ಹೊರಗೆ ಕಳುಹಿಸಿದ ನಂತರ ನಮ್ಮನ್ಯಾರೂ ಗುರುತಿಸುತ್ತಿರಲಿಲ್ಲ. ಮಾಡಲೇನೂ ಕೆಲಸವಿರಲಿಲ್ಲವಾದ್ದರಿಂದ ಇಬ್ಬರೂ ಹರಟೆ ಹೊಡೆಯುತ್ತಾ ದಿನ ಕಳೆಯುತ್ತಿದ್ದೆವು. ನಮ್ಮ ಸ್ಕ್ವಾಡಿನ ಹಿಂದೆಯೂ ಕೆಲವು ದಿನ ಹೋಗಿದ್ದೆವು. ಎಲ್ಲರ ಮುಖದಲ್ಲೂ ಪ್ರೇತಕಳೆ. ಕೀರ್ತನಾಳನ್ನು ಸಮಾಧಾನಪಡಿಸುವುದಂತೂ ಎಲ್ಲರಿಗೂ ಕಷ್ಟದ ಕೆಲಸವಾಗಿತ್ತು. ‘ನಾನು ಸಿಕ್ಕಿದ್ದರಿಂದಲೇ ಆತ ಇಷ್ಟು ಬೇಗ ಇಲ್ಲಿಗೆ ಬಂದಿದ್ದು. ನನ್ನ ಕಾರಣದಿಂದಾನೇ ಲೋಕಿ ಸತ್ತು ಹೋದ’ ಎಂದು ಕೊರಗುತ್ತಿದ್ದಳು. ಅದೇ ದಿನ ಭದ್ರಾ ಸ್ಕ್ವಾಡ್ ಬಂದು ಇವರನ್ನು ಸೇರಿತು. ಸತ್ತವರನ್ನು ನೆನಪಿಸಿಕೊಂಡು ಬಹಳ ದಿನ ಇರುವುದಕ್ಕಾಗುವುದಿಲ್ಲವಲ್ಲ. ಎರಡು ದಿನದ ನಂತರ ಕಾ.ಪಾಟೀಲರು ಇವರನ್ನು ಸೇರಿ ಮುಂದಿನ ರೂಪುರೇಷೆಗಳನ್ನು ತಿಳಿಸಿದರು. ಅವರೆಲ್ಲಾ ಆ ಸ್ಥಳದಿಂದ ಹೊರಟ ನಂತರ ನಾವಿಬ್ಬರೂ ಚಿನ್ನಪ್ಪಣ್ಣಯ್ಯನ ಅಂಗಡಿಯ ಬಳಿ ಬಂದಿದ್ದೆವು. ಪತ್ರಿಕೆಗಳಲ್ಲಿ ಸರ್ಕಾರ ನಮ್ಮ ಹೆಣಗಳನ್ನು ನೋಡಿ ಹೆದರಿದ ರೀತಿಯನ್ನು ಓದಿ ಇಬ್ಬರೂ ಬಿದ್ದು ಬಿದ್ದು ನಕ್ಕಿದ್ದೆವು. ಪತ್ರಿಕೆಗಳನ್ನು ನೋಡುತ್ತಿದ್ದಾಗಲೇ ನನಗೆ ತಿಳಿದಿದ್ದು ಪ್ರೇಮನ ನಿಜವಾದ ಹೆಸರು ಸಾಕೇತ್ ರಾಜನ್. ಮೈಸೂರಿನವರು. ತಂದೆ ಮಿಲಿಟರಿಯಲ್ಲಿದ್ದವರು, ಮೈಸೂರಿನಲ್ಲಿ ಒಂದು ಪೆಟ್ರೋಲ್ ಬಂಕ್ ಕೂಡ ಇತ್ತು ಇವರದ್ದು. ಮೇಲ್ ಮಧ್ಯಮ ವರ್ಗದವನು. ಪ್ರತಿಭಾವಂತ ವಿದ್ಯಾರ್ಥಿ. ವಿದ್ಯಾರ್ಥಿಯಾಗಿದ್ದಾಗಿಂದಲೇ ಬಡವರಿಗಾಗಿ ಮಿಡಿಯುತ್ತಿತ್ತು ಅವರ ಮನಸ್ಸು. ಮೈಸೂರಿನಲ್ಲೇ ನಕ್ಸಲರ ಸಂಪರ್ಕ ಉಂಟಾಗಿತ್ತು. ಅವರು ಮನೆಯನ್ನು ತೊರೆದು ಆಂಧ್ರಕ್ಕೆ ಹೋಗಿ ಆಗಲೇ ಹದಿನೈದು ವರುಷವಾಗಿತ್ತು. ‘ನನ್ನ ಮಗನ ಹದಿನೈದು ವರ್ಷದ ಹಿಂದಿನ ಮುಖವೇ ನನ್ನ ಮನಸ್ಸಿನಲ್ಲಿದೆ. ಈಗ ಆತನ ಛಿದ್ರಗೊಂಡ ಮುಖವನ್ನು ನೋಡಿ ನನ್ನ ಮನದಲ್ಲಿರುವ ಅವನ ಚಿತ್ರವನ್ನು ಅಳಿಸಿಹಾಕಲು ನನಗೆ ಇಷ್ಟವಿಲ್ಲ. ಆತನ ದೇಹಕ್ಕೊಂದು ಗೌರವಪೂರ್ಣವಾದ ಸಂಸ್ಕಾರ ಮಾಡಬೇಕೆನ್ನುವ ಯಾರಿಗಾದರೂ ಅವನನ್ನು ಕೊಟ್ಟುಬಿಡಿ’ ಎಂದು ಸರಕಾರಕ್ಕೆ ಪತ್ರ ಬರೆದಿದ್ದರು ಆತನ ತಾಯಿ. ಸಾಕೇತ್ ನ ತಂದೆ ತೀರಿಹೋಗಿ ಬಹಳ ವರ್ಷಗಳಾಗಿದ್ದವು.
ಇತ್ತ ನನ್ನ ಮನೆಯಲ್ಲಿ.......ಧೃತಿಗೆಟ್ಟ ನನ್ನ ತಂಗಿಯನ್ನು ಸಮಾಧಾನ ಮಾಡಲೆತ್ನಿಸುತ್ತಿದ್ದರು ತಂದೆ. ವಿಜಿಯ ಕಣ್ಣಿನಲ್ಲಿ ನೀರಿರಲಿಲ್ಲ. ಅವನ ಮುಖದ ಭಾವನೆಯನ್ನು ನೋಡುತ್ತಿದ್ದರೆ ಈತನೂ ನನ್ನ ದಾರಿಯನ್ನೇ ಹಿಡಿಯುತ್ತಾನಾ? ಎಂಬ ಅನಿಸಿಕೆ ಮೂಡಿತು. ಪತ್ರಿಕೆಯಲ್ಲಿ ನಮ್ಮ ಮನೆಯವರ ಫೋಟೋ ಬಂದಿತ್ತು. ಜೊತೆಯಲ್ಲಿ ಪೂರ್ಣಿ ಮತ್ತು ಸಿಂಚನಾ ಕೂಡ ಇದ್ದರು. ಸಯ್ಯದ್ ಕೂಡ ಮನೆಗೆ ಬಂದಿದ್ದ. ಮನೆಯ ಹೊರಗೆ ಗಿಜಿಗುಡುತ್ತಿದ್ದ ಪತ್ರಿಕೆಯವರೊಂದಿಗೆ ಮಾತನಾಡುವ ಆಸಕ್ತಿಯಿರಲಿಲ್ಲ ನನ್ನ ತಂದೆಗೆ. ಪೂರ್ಣಿಗೆ ನಾ ಕೊಟ್ಟ ಮೊದಲ ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಬಂದೆರಗಿದ ಈ ಎರಡನೆಯ ಆಘಾತವನ್ನು ತಡೆದುಕೊಳ್ಳುವ ಚೈತನ್ಯವಿರಲಿಲ್ಲ. ಆಕೆಯ ತಂದೆ ಕೂಡ ಪತ್ರಕರ್ತರಾದ್ದರಿಂದ ನಮ್ಮ ಮನೆಯ ಬಳಿ ಬಂದಿದ್ದರು. ಪೂರ್ಣಿ ನನ್ನಪ್ಪನ ಬಳಿ ಬಂದು ಯಾರಾದ್ರೂ ಬಂದು ಮಾತನಾಡಿ ಎಂದು ವಿನಂತಿಸಿಕೊಂಡರು. ತಂದೆ ನಿರಾಕರಿಸಿದರು. ಹೊರಗಿನವರೊಂದಿಗೆ ಹೆಚ್ಚು ಮಾತನಾಡದ ವಿಜಿ ಪತ್ರಿಕೆಯವರೊಂದಿಗೆ ಮಾತನಾಡಲು ಹೊರಬಂದದ್ದು ನನಗೆ ಅಚ್ಚರಿ ತರಿಸಿತು. ಪತ್ರಕರ್ತರೊಂದಿಗೆ ವಿಜಿ “ನನ್ನ ಅಣ್ಣ ನಕ್ಸಲನಾದದ್ದರ ಬಗ್ಗೆ ನನಗೆ ಎಳ್ಳಷ್ಟೂ ಬೇಸರವಿಲ್ಲ. ಬದಲಾಗಿ ಆತನ ಬಗ್ಗೆ ಹೆಮ್ಮೆಪಡುತ್ತೇನೆ” ಎಂದ.
“ಪ್ರೇಮ್ ಅಲಿಯಾಸ್ ಸಾಕೇತನ ಮನೆಯವರು ಆತನ ದೇಹವನ್ನು ಪಡೆಯಲು ನಿರಾಕರಿಸಿದ್ದಾರೆ. ನೀವು ಏನು ಮಾಡ್ತೀರಾ?” ಪತ್ರಕರ್ತೆಯೊಬ್ಬಳು ಕೇಳಿದಳು.
“ಸರ್ಕಾರ ಅವರಿಬ್ಬರ ದೇಹವನ್ನೂ ನಮಗೇ ಒಪ್ಪಿಸಿದರೆ ನಾವೇ ಇಬ್ಬರ ಅಂತ್ಯಸಂಸ್ಕಾರ ನೆರವೇರಿಸುತ್ತೀವಿ” ಎಂದ್ಹೇಳಿದ. ಅದರ ಮಾರನೆಯ ದಿನವೇ ಸರ್ಕಾರ ನಮ್ಮ ಹೆಣಗಳಿಗೆದರಿ ಆತುರಾತುರವಾಗಿ ಪೋಲೀಸರ ಕಾವಲಿನಲ್ಲಿ ನಮ್ಮಿಬ್ಬರ ಅಂತ್ಯಸಂಸ್ಕಾರ ಮಾಡಿ ಮುಗಿಸಿದರು. ಸರ್ಕಾರ ನಮ್ಮ ದೇಹಗಳಿಗೆದರಿದ ರೀತಿಯೇ ನಾವಿಬ್ಬರೂ ಬಿದ್ದು ಬಿದ್ದೂ ನಗಲು ಕಾರಣ. ನಮ್ಮಿಬ್ಬರ ನಗುವನ್ನು ಸೀಳಿಕೊಂಡು ಬಂದ ಒಂದು ಧ್ವನಿ ನಮ್ಮನ್ನೆಚ್ಚರಿಸಿತು. ವೃದ್ಧ ಜೀವವೊಂದು ಕೆಳಗೆ ಬಿದ್ದಿದ್ದ ಊರುಗೋಲನ್ನು ಎತ್ತಿಕೊಂಡು ಚಿನ್ನಪ್ಪಣ್ಣನ ಅಂಗಡಿಯ ಕಡೆಗೆ ಬರುತ್ತಿತ್ತು. “ನಾನಾಗಲೇ ಹೇಳಿದ್ದೆ ಹಿಂಸೆಯಿಂದ ಏನೂ ಸಾಧಿಸುವುದಿಕ್ಕಾಗುವುದಿಲ್ಲವೆಂದು” ಎಂದು ಹೇಳುತ್ತಾ ಬರುತ್ತಿತ್ತು. ಆ ವೃದ್ಧ ಜೀವ ನಮ್ಮ ಬಾಪೂ ಮಹಾತ್ಮ ಗಾಂಧಿ ಎಂದು ತಿಳಿಯುತ್ತಿದ್ದಂತೆ ಅವರ ಬಳಿ ಹೋಗಿ ನಮಸ್ಕರಿಸಿ ಅವರ ಕೈಹಿಡಿದು ಕರೆದುಕೊಂಡು ಬಂದು ಚಿನ್ನಪ್ಪಣ್ಣನ ಅಂಗಡಿಯ ಬಳಿ ಕುಳಿತೆವು. ಬಾಪೂವಿನ ಬಲಭಾಗದಲ್ಲಿ ನಾನು ಕುಳಿತಿದ್ದೆ. ಎಡಭಾಗದಲ್ಲಿ ಸಾಕೇತ್.
“ನಾನು ಆ ಕಾಲದಲ್ಲೇ ಹೇಳಿರಲಿಲ್ಲವೇನ್ರಪ್ಪ ಹಿಂಸೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲವೆಂದು” ನಡಗುತ್ತಿದ್ದ ದನಿಯಲ್ಲಿ ಹೇಳಿದರು.
“ಅಹಿಂಸಾ ಮಾರ್ಗದಿಂದ ಈ ಕಾಲದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲವೆಂಬುದು ಮನವರಿಕೆಯಾದ ನಂತರವೇ ನಾವು ಈ ದಾರಿ ತುಳಿದಿದ್ದು ತಾತ. ನೀವೇ ನೋಡಿರಬೇಕಲ್ಲ ಸತ್ಯಾಗ್ರಹವನ್ನು ಹೇಗೆ ಈ ಜನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತ” ನಾನು ಹೇಳಿದೆ.
“ಅಧಿಕಾರವನ್ನು ಬಯಸೋ ಜನ, ಪೊಳ್ಳು ಆದರ್ಶವಾದಿಗಳು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಒಪ್ತೀನಿ. ಆದರೆ ನಿಮ್ಮಂಥವರು ಅಹಿಂಸಾ ಮಾರ್ಗದಲ್ಲಿ ಹೆಜ್ಜೆ ಹಾಕಿದ್ದರೆ ನಿಜಕ್ಕೂ ಈ ದೇಶ ಉತ್ತಮ ಭವಿಷ್ಯ ಕಾಣುತ್ತಿತ್ತು” ನಮ್ಮಲ್ಲಿ ಉತ್ತರವಿರಲಿಲ್ಲ.
“ಈಗ ಈ ಹಿಂಸೆಯಿಂದ ಏನಾಯಿತು ಹೇಳಿ? ಮುಂಚೆ ಇಬ್ಬರು ಹೋರಾಟಗಾರರು ಸತ್ತರು. ಈಗ ನಿಮ್ಮಿಬ್ಬರ ಸರದಿ ಬಂತು. ಅವರಿಬ್ಬರ ಮರಣವಾದಾಗ ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಆದರೆ ಈಗ ಸತ್ತಿರೋದು ಈ ಭಾಗದಲ್ಲಿ ನಕ್ಸಲ್ ಸಂಘಟನೆಯನ್ನು ಕಟ್ಟಿ ಬೆಳೆಸಿದ ಸಾಕೇತ್. ಈಗ ನಿಮ್ಮವರು ಪ್ರತೀಕಾರ ತೀರಿಸಿಕೊಳ್ಳಲು ಪೋಲೀಸರನ್ನು ಕೊಂದರೆ ಚಳುವಳಿಯ ದಾರಿಯೇ ದಿಕ್ಕುತಪ್ಪಿದಂತಾಗುವುದಿಲ್ಲವೇ?”
“ಇಲ್ಲ ತಾತ. ನನ್ನಸಿಕೆಯ ಮಟ್ಟಿಗೆ ಪ್ರತೀಕಾರ ತೀರಿಸಿ......” ಸಾಕೇತ್ ನ ಮಾತು ಮುಗಿಯುವ ಮುನ್ನವೇ ಚಿನ್ನಪ್ಪಣ್ಣಯ್ಯನ ರೇಡಿಯೋದಲ್ಲಿ ಒಂದು ಸುದ್ದಿ ಬಂತು ‘ಪಾವಗಡದಲ್ಲಿ ನಕ್ಸಲರ ಅಟ್ಟಹಾಸ. ಏಳು ಮಂದಿ ಪೋಲೀಸರನ್ನೂ ಸೇರಿಸಿ ಎಂಟು ಜನರ ಭೀಕರ ಹತ್ಯೆ. ಮೆಣಸಿನಹಾಡ್ಯದಲ್ಲಿ ನಡೆದ ಸಾಕೇತ್ ಮತ್ತಾತನ ಸಹಚರ ಲೋಕೇಶನ ಹತ್ಯೆಯ ಪ್ರತೀಕಾರವನ್ನು ನಕ್ಸಲರು ಈ ರೀತಿ ತೀರಿಸಿದ್ದಾರೆ’ ಇದನ್ನು ಕೇಳಿದ ನಂತರ ಮಾತನಾಡುವ ತ್ರಾಣವುಳಿಯಲಿಲ್ಲ ಸಾಕೇತ್ ಗೆ. ಮೂವರೂ ಅಲ್ಲಿಂದ ಹೊರಟು ಕಾಡಿನೆಡೆಗೆ ಹೆಜ್ಜೆ ಹಾಕಿದೆವು.
“ಹಿಂಸೆಯಿಂದ ಹಿಂಸೆಯಷ್ಟೇ ಹುಟ್ಟೋದು ಸಾಕೇತ್. ಸುಂದರ ಸಮಾಜ ನಿರ್ಮಾಣವಾಗೋದಿಲ್ಲ. ಹಿಂಸೆಯನ್ನೇ ಕ್ರಾಂತಿ ಎಂದು ತಿಳಿಯುವುದು ಕೇವಲ ನಿಮ್ಮಗಳ ಭ್ರಾಂತಿ” ಎಂದರು ಬಾಪೂ. ನಾವಿಬ್ಬರೂ ಮಾತನಾಡಲಿಲ್ಲ.
ಗಾಳಿ ಜೋರಾಗಿ ಬೀಸುತ್ತಿತ್ತು. ಮಳೆ ಬರುವ ಸೂಚನೆಯಿತ್ತು. ಗಾಳಿಗೆ ರಸ್ತೆಯಿಂದ ಹಾರಿಬಂದ ಪತ್ರಿಕೆಯೊಂದರ ತುಣುಕೊಂದು ನಮ್ಮ ಮುಂದೆ ಬಂದು ಬಿತ್ತು. ನಾನದನ್ನು ಎತ್ತಿಕೊಂಡೆ. ‘ನಕ್ಸಲರೆಂಬ ತಲೆಹಿಡುಕರು’ ಎಂಬ ಹೆಡ್ಡಿಂಗಿತ್ತು. ನಕ್ಸಲರು ಆದಿವಾಸಿ ಹೆಣ್ಣುಮಕ್ಕಳನ್ನು ತಮ್ಮ ತೀಟೆ ತೀರಿಸಿಕೊಳ್ಳುವ ಕಾರಣಕ್ಕೆ ಬಲವಂತವಾಗಿ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದ ಎ.ಸಿ.ರೂಮಿನಲ್ಲಿ ಕುಳಿತ ಅಂಕಣಕಾರನೊಬ್ಬ. ಬಾಪೂ ಮತ್ತು ಸಾಕಿಗೆ ಅದನ್ನು ಓದಿ ಹೇಳಿದೆ. ಇಬ್ಬರಲ್ಲೂ ತಿರಸ್ಕಾರದ ಭಾವನೆ ಮೂಡಿತು.
“ನಮ್ಮ ದಾರಿ ಸರಿಯಾದುದಲ್ಲ ಅಂತ ಹೇಳಲಿ ತಾತ. ಅಭಿಪ್ರಾಯಭೇದಗಳು ಇದ್ದಾಗಲೇ ಒಂದು ಚಳುವಳಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯ. ಅದನ್ನು ಬಿಟ್ಟು ನಮ್ಮನ್ನೆಲ್ಲ ಶತ್ರುವಿನಂತೆ ಯಾಕೆ ನೋಡ್ತಾರೆ? ಉಗ್ರಗಾಮಿಗಳಿಗೆ, ವೀರಪ್ಪನ್ನಿಗೆ ನಮ್ಮನ್ನು ಹೋಲಿಸುತ್ತಾರೆ. ಈಗ ತಲೆಹಿಡುಕರಿಗೆ ಹೋಲಿಸುತ್ತಾರಲ್ಲ ತಾತ. ಇದು ಒಪ್ಪೋ ಮಾತಾ?” ಸಾಕೇತ್ ಕೇಳಿದ. ಬಾಪೂ ಉತ್ತರಿಸಲಾಗದೆ ಕುಸಿದು ಕುಳಿತರು. 
ಮುಗಿಯಿತು.

4 comments:

  1. ಈ ಕಾದಂಬರಿಯ ಅಂತ್ಯವನ್ನು ನಾನು ಹೀಗೆ ಎಂದು ಊಹಿಸಿದ್ದೆ ಆದರೆ ಅಂತ್ಯ ಭಾಗದ ನಿರೂಪಣೆಯಲ್ಲಿ ಬಾಪೂವೀಣೆ ಪ್ರವೇಶ ,ಸಾಕೆತ್ ಕೇಳುವ ಕೊನೆಯ ಪ್ರಶ್ನೆ ಒಂದು ಅದ್ಭುತ ಪರಿಕಲ್ಪನೆಯೇ ಸರಿ ,ಅಭಿನಂದನೆಗಳು ನಿಮ್ಮ ಸಾಹಿತ್ಯ ಕೃಷಿ ಮುಂದುವರಿಯಲಿ

    ReplyDelete
    Replies
    1. ಧನ್ಯವಾದಗಳು ಮೇಡಮ್.
      ಇದು ಹೆಚ್ಚು ಕಡಿಮೆ ದಶಕದ ಹಿಂದೆ ಬರೆದಿದ್ದ ಕಾದಂಬರಿ. ಆಗ 'ಮಾರ್ಗದರ್ಶಿ' ಎಂಬ ಕನ್ನಡ ಪಾಕ್ಷಿಕದಲ್ಲಿ ಪ್ರಕಟವಾಗುತ್ತಿತ್ತು. ಅವರು ಹೊಸಬನಾದ ನನಗೂ ಗೌರವ ಸಂಭಾವನೆ ಕೊಡುತ್ತಿದ್ದರು! ಕಾರಣಾಂತರಗಳಿಂದ ಆ ಪತ್ರಿಕೆಯೇ ಮುಚ್ಚಿ ಹೋಯಿತು!

      Delete
  2. ಒಳ್ಳೆಯ ನಿರೂಪಣೆ ನನಗೆ ಪೂರ್ತಿ ಕಾದಂಬರಿ ಸಿಗುತ್ತಾ ಸಾರ್

    ReplyDelete
    Replies
    1. ಇ - ಪುಸ್ತಕದ ರೂಪದಲ್ಲಿ ಗೂಗಲ್ ಪ್ಲೇ ಮತ್ತು smashwords ನಲ್ಲಿ ಉಚಿತವಾಗಿ ಲಭ್ಯವಿದೆ. ಲಿಂಕನ್ನು ಸಂಜೆಯೊಳಗೆ ಹಂಚಿಕೊಳ್ಳುತ್ತೇನೆ.

      Delete