Dec 7, 2018

ಶಾಂತಿ- ಪ್ರಶಾಂತಿ

ಪದ್ಮಜಾ ಜೋಯ್ಸ್ ದರಲಗೋಡು
ಹೆಸರೂ ಶಾಂತಿ , ಮನೆಯೂ ಪ್ರಶಾಂತಿ ನಿಲಯ ಪರಿಸರವೂ ಶಾಂತ ಪ್ರಶಾಂತವೇ ಇದ್ದರೂ.... 

ಶಾಂತಿಯ ಮನ ಅಶಾಂತಿಯ ಕಡಲಾಗಿತ್ತು.... ಬದುಕಿಡೀ ಶಾಂತಿಯ ಅರ್ಥವೂ ನಿಲುಕದ ಅಶಾಂತಿಯ ಬೀಡಾಗಿತ್ತು
ಇದ್ದುದರಲ್ಲೇ ನೆಮ್ಮದಿ ನೀಡುತ್ತಿದ್ದು ಸಾಗರನ ಸಾಂಗತ್ಯ ಮಾತ್ರ...

ಇದೀಗ ಅವನಲ್ಲಾದ ಬದಲಾವಣೆಗಳೂ ಅವಳಲ್ಲಿ ಕಡಲ ನಡುವಿನ ಬಿರುಗಾಳಿಗೆ ಸಿಕ್ಕ ಹಾಯಿ ದೋಣಿಯಾಗಿತ್ತು ಅವಳ ಬದುಕು...

"ಜನಮನ" ಎಂದೇ ಹೆಸರಿಟ್ಟ ಹೊರಚಾವಣಿಯಲ್ಲಿ ಆಪ್ತ ಸಲಹಾ ಕೇಂದ್ರದಲ್ಲಿ ನೆರೆದಿದ್ದ ಹತ್ತಾರು ಜನದ ಕ್ಲಿಷೆಕೇಶಗಳನ್ನು ಕೇಳಿ ಒಂದಷ್ಟು ತಿಳಿ ಹೇಳಿ ಸಲಹೆ ನೀಡಿ ಅಯ್ಯೋ ಎನಿಸಿದ ಹಲಕೆಲವು ಜವಾಬ್ದಾರಿಗಳ ಅನಗತ್ಯವಾದರೂ ಹೆಗಲೇರಿಸಿಕೊಂಡು ಎಲ್ಲರನ್ನೂ ಊಟಕ್ಕೆ ಕಳುಹಿಸಿ ಬ಼ಂದು ಮರೆತ ಯಾವುದೋ ಕೆಲಸ ನೆನಪಾದ಼ಂತೆ ಅರ್ಧ ಟೈಪಿಸಿ ಉಳಿದ ನೋಟ್ ಪ್ಯಾಡನ್ನು ತೆರೆದಾಗ ಪಕ್ಕದಲ್ಲಿ ನಗುತ್ತಿದ್ದ ಫೋಟೋ ಅದರಲ್ಲಿನ ಮುಖಭಾವವೂ ತನ್ನ ಅಪಹಾಸ್ಯ ಮಾಡಿದಂತೆನಿಸಿತು.... 
ಮೂರ್ಖಳಾದೆನಾ.....!!?? ಜೀವನದ ಪ್ರತಿ ಮಗ್ಗುಲಲ್ಲೂ ಪ್ರತಿ ಸಂಬ಼ಂಧಗಳ ಸಿಕ್ಕಿನಲ್ಲೂ ಸ್ನೇಹದ ಸೋಗಿನಲ್ಲೂ ಎಡವುವುದೇ ಬದುಕಾಯಿತಾ ?? ಊರಿನೆಲ್ಲ ಹೆಂಗಸರ ಕೊರಗ ಹರಿಸುವ ನನಗೆ ಸ್ವಂತ ಸಮಸ್ಯೆಗೆ ಪರಿಹಾರ ಕೊಡುವವರ್ಯಾರು ?? ಮರೆಯನೆಂದು ಜಿದ್ದಿಗೆ ಬಿದ್ದು ಮುಗುಮ್ಮಾಗಿ ಕುಳಿತ ಮನವ ಸಂತೈಸಲೆಂತು ?? ಬಳಿಯೇ ನಗುತ್ತಿದ್ದ ಫೋಟೋ ಮೊಗಚಿಟ್ಟು ನಿಟ್ಟುಸಿರೆಳೆದಳು....

ಸಪ್ಪಳದೊಂದಿಗೆ ಹಿಂದೆಯೇ ಕೂಗುತ್ತಾ ಬಂದವಳು ಮತ್ತೀ

"ಶಾಂತಕ್ಕಾ ಊಟಕ್ಕೆ ಟೇಬಲ್ಗೆ ಬರ್ತೀರಾ ಇಲ್ಲೇ ತರಲಾ ??"

ಏನೂ ಸೇರದೆನಿಸಿದರೂ ಹಿಂದೇ ಬರೋ ನೂರೆಂಟು ಪ್ರಶ್ನೆಗಳನ್ನು ಎದುರಿಸುವ ಮನಸ್ಸಿಲ್ಲದೇ ಮೊಸರನ್ನ ಕಲೆಸಿ ತರ ಹೇಳಿ ಮತ್ತೆ ಬರವಣಿಗೆ ಮುಂದೊರಿಸಿದಳು... 

"ಒಂದು ಬಾರಿ ಕೇವಲ ಒಂದೇ ಒಂದು ಬಾರಿ 

ನೀ ಸುಮ್ಮನೇ ನಡೆದು ಬಂದು , ಮೌನವಾಗಿ ನನ್ನ ಹಿಂದೆ ನಿಂತು, ನನ್ನ ಬಳಸಿ ಎದೆಗೊರಗಿಸಿಕೊಂಡಿದ್ದರೇ ಸಾಕಾಗಿತ್ತು, ನಿನ್ನ ಅಷ್ಟು ದಿನದ ಆಣೆ ಪ್ರಮಾಣದ ಮಾತುಗಳಿಗೆಲ್ಲಾ ಒಂದು ಅರ್ಥವಿರುತ್ತಿತ್ತು. ' ನೀನೇ ಬದುಕು' ಅಂತ ನಂಬಿದ್ದ ನನ್ನ ನಂಬಿಕೆಯ ಬದುಕಿಗೊಂದು ಸಾರ್ಥಕತೆ ಸಿಗುತ್ತಿತ್ತು. ಸಮಾಜದ ಸಂಪ್ರದಾಯದ ಕಟ್ಟುಗಳ ಮೀರಿ ನಿಂತ ಸಂಸಾರವಲ್ಲದ ಯಾವುದೇ ಹೆಸರಿಡಲಾರದ ಬಂಧ ನಚ್ಚಿಕೊಂಡು ಜೀವನದ ಅರ್ಧಕ್ಕೂ ಮಿಕ್ಕಿ ಹಾದಿ ಸವೆಸಿದ ನಾನು ಈಗ ಅನಿರೀಕ್ಷಿತ ತಿರುವಿನಲ್ಲಿ ದಿಕ್ಕುಗಾಣದೇ ನಿಂತಂತತಾಗಿದೆ ಅಂದರೇ ಅದಕ್ಕೆ ನೀನು ಮತ್ತು ನೀನೇ ಮತ್ತು ನೀ ಮಾತ್ರ ಕಾರಣ....
ಯಾಕೆ ಯಾವ ಕಾರಣಕ್ಕಾಗಿ ಹಠಕ್ಕೆ ಬಿದ್ದೆ ನೀನ಼ಂದು ಮತ್ತು ನಿನ್ನ ಬದುಕಿಗೇ ಬೆನ್ನಾಕಿ ದೂರ ತೀರ ಸೇರಿ ಹಿಂದಿರುಗುವ ದಾರಿ ಮರೆತವಳು ನಾನಾದರೂ ಯಾಕೆ ನಿನ್ನ ಹಠಕ್ಕೆ ಮಣಿದೆ ???

ಜೀವನದ ಹಕೀಕತ್ತನ್ನು ಮರೆತು ವಿಭಿನ್ನ ಗುರಿಯಲ್ಲಿ ಕವಲು ದಾರಿಯಲ್ಲಿ ಮತ್ತೆ಼ಂದೂ ಹಿಂತಿರುಗದಂತೆ ಸಾಗಿ ಬಂದ ಮರೆತಂತಿದ್ದ ಹಳವಂಡಗಳ ಕೆದಕೋ ಕರ್ಮಕ್ಕೆ ನಾನಾದರೂ ಯಾಕೆ ಒಪ್ಪಿಕೊಂಡೆ...???

ಇಂದು ನಿನಗಗತ್ಯವಿಲ್ಲವೆನಿಸಿದ ಮಾತ್ರಕ್ಕೆ ಸಾವರಿಸಿಕೊಳ್ಳಲೂ ಸಮಯ ನೀಡದೇ ಕಡಲತೀರದಲ್ಲಿ ಬಟ್ಟೆಗಂಟಿಕೊಂಡ ಮರಳ ಕೊಡವಿದಂತೆ ಒದರಿ ಹೊರಟು ಹೋದ ನಿನ್ನ ದೂರಲಾ... ಮತ್ತದೇ ಅನಿರೀಕ್ಷಿತ ತಿರುವಿನಲ್ಲಿ ಬ಼ಂದು ನಿಂತ ನನ್ನ ಬದುಕಿನ ಪರಿಗೆ ಮರುಗಲಾ ??? ನನ್ನ ಮನವೂ ಬಯಸುತಿದೆ ನಿನ್ನಷ್ಟೇ ಸಲೀಸಾಗಿ ನನ್ನ ದಾರಿಯಲ್ಲಿ ನಿನ್ನ ಮರೆತು ಸಾಗಿಬಿಡಲು...
ಹೌದು ಗೆಳೆಯಾ ಊಹ್ಞೂಂ.... ಸಖಾ.. ಊಹ್ಞೂಂ.... ಇನಿಯಾ..... ಊಹ್ಞೂ಼ಂ...... ಥೋ ಕೊನೆಗೆ ನಿನ್ನ ಏನೆಂದು ಹೆಸರಿಸಲೀ ಎ಼ಂಬ ದ್ವಂಧ್ವಕ್ಕೆ ನನ್ನ ಈಡು ಮಾಡಿದ ನಿನ್ನ ಈ ನಿರಾಸಕ್ತ ಅನಾದರಕ್ಕೆ ಹೆಸರೇನಿಡಲೀ ??

ಹೌದೂ ಸ್ವಗತವೆಂಬಂತ ಈ ಪತ್ರವನ್ನಾದರೂ ಯಾಕೆ ಬರೆಯುತಿರುವೆ ?? ತಿಳಿದೂ ಮಾಡಿದ ಅಪಚಾರದ ಪರಿತಾಪವಾ ?? ಇನ್ನಾರಿಗೋ ಸಮಝಾಯಿಷಿಯಾ ?? ಯವುದಾದರೂ ಕ್ಲೈಂಟ್ ಗೆ ಕೊಡಬೇಕಾಗುವ ಸಲಹೆಯ ಪರಿಶೀಲನೆಯಾ ಗೊತ್ತಿಲ್ಲ , ನೀನಿದನ್ನ ಓದಲೆಂಬ ಹಂಬಲವಾಗಲೀ ಕನಿಕರಿಸಿ ಮರಳಲೆಂಬ ನಿರೀಕ್ಷೆಯಾಗಲೀ ನನ್ನಲ್ಲಿಲ್ಲ... ಬರೀ ಎದೆಗುದಿಯ ಹೊರ ಹಾಕುವ ಇಚ್ಛೆಯೂ ಇರಬಹುದು.... 

ಪ್ರಿಯ ಸಾಗರ್ ...... ಇದುವರೆಗೂ ನೀನು ನನ್ನ ಅತ್ಯಂತ ಪ್ರಿಯನಾಗಿದ್ದುದು ನಿಜವೇ ಆದುದರಿಂದ , ಹೀಗೂ ಕರೆಯಲಡ್ಡಿಯಿಲ್ಲ ಅನ್ನಿಸಿದೆ... ನನಗೆ ನನ್ನದೇ ಜವಾಬ್ದಾರಿಯಿದೆ ಕರ್ತವ್ಯಗಳಿವೆ, ನನ್ನಂತೆ ಮರುಳಾಗಿ ಒಂಟಿಯಾದ ಹೆಮ್ಮಕ್ಕಳ ಬದುಕ ತಿದ್ದೋ ಕೆಲಸವಿದೆ, ನಿನ್ನನ್ನಿಲ್ಲೇ ಮರೆತೆನಾದರೇ ಮತ್ತೆ ನಿನಗಾಗಿ ಮರುಗಲಾರೆನಾದರೇ ನನ್ನ ಮೇಲೆ ಬೇಸರಿಸದಿರು , ಕೋಪಿಸದಿರು.... ನನ್ನ ಹಾದಿಗೆ ನನ್ನ ಬಿಟ್ಟುಬಿಡೂ..

ನಿನ್ನವಳಾಗೂ ನಿನ್ನವಳಲ್ಲದ
ನಿನ್ನ ಶಾಂತಿ.

ಕೊನೆಯ ಚುಕ್ಕಿ ಇಟ್ಟ ಶಾಂತಿ , ಪ್ರಶಾಂತಿ ನಿಲಯದಿಂದಾಚೆ ಬಂದು ನಿಂತು ಬೆಳಗುತ್ತಿದ್ದ ಚ಼ಂದ್ರನಲ್ಲಿ ದೃಷ್ಟಿ ನೆಟ್ಟಳು...
ಇಷ್ಟೊತ್ತೂ ಕಾಡಿದ ಅವಳೊಳಗಿನ ವಿಪ್ಲವ ಶಾಂತವಾದುದರ ಕುರುಹು ಅವಳ ಮೊಗದ ಮಂದಹಾಸದಲ್ಲಿತ್ತು.....

2 comments:

  1. ಮನಸು ಹೇಳ ಬಯಸಿದೆ ನೂರೊಂದು ತುಟಿಯಮೇಲೆ ಬರೆದಿದೆ ಮಾತೊಂದು
    ನಿಮ್ಮ ಬರಹ ಓದಿ ಏನೆಂದು ಉತ್ತರಿಸಲಾದೆ.

    ReplyDelete
  2. ಕನ್ನಡವನ್ನು ಆಯ್ಕೆ ಮಾಡಿ

    ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ... :pray:
    ಕನ್ನಡವನ್ನು ಉಳಿಸಿ, ಬೆಳೆಸಿ..
    ..
    https://Www.spn3187.blogspot.in
    (already site viewed 1,33,487+)
    and
    https://T.me/spn3187
    (already joined to this group 487+)
    Share your friends & family also subcrib (join)

    ReplyDelete