Dec 7, 2018

ಆಪರೇಷನ್ ಕಮಲದ ಅನಿವಾರ್ಯತೆ ಯಾರಿಗಿದೆ?

ಕು.ಸ.ಮಧುಸೂದನ
'ಆಪರೇಷನ್ ಕಮಲ' ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಸರಕಾರ ಆರು ತಿಂಗಳು ಪೂರೈಸುತ್ತಿರುವ ಈ ಸಮಯದಲ್ಲಿ ಬಿಡುಗಡೆಯಾಗಿರುವ ಆಡಿಯೋ ತುಣುಕೊಂದು ಹೀಗೊಂದು ಸಂಶಯವನ್ನು ಹುಟ್ಟು ಹಾಕಿದೆ. ಈ ಆಡಿಯೋ ತುಣುಕಿನ ಸತ್ಯಾಸತ್ಯತೆಯೇನೇ ಇರಲಿ ಈ ಸರಕಾರವನ್ನು ಕೆಡವಿ ಅಧಿಕಾರಕ್ಕೇರಲು ಬಾಜಪ ಪ್ರಯತ್ನಿಸುತ್ತಿರುವುದೇನು ಹೊಸತಲ್ಲ.

ಚುನಾವಣೆಗಳು ಮುಗಿದ ನಂತರ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ವಿಶ್ವಾಸ ಮತ ಸಾಬೀತಿಗೆ ಬೇಕಾದ ಸಂಖ್ಯೆ ಹೊಂದಲು ಆಪರೇಷನ್ ಕಮಲ ನಡೆಸಲು ಪ್ರಯತ್ನಗಳು ನಡೆದಿದ್ದವು. ವಿಶ್ವಾಸ ಮತದ ಮೇಲಿನ ಚರ್ಚೆಯಲ್ಲಿ ಮಾತಾಡುತ್ತ ಸ್ವತ: ಯಡಿಯೂರಪ್ಪನವರೇ ತಾವು ಕಾಂಗ್ರೆಸ್ ಮತ್ತು ಜನತಾದಳದ ಶಾಸಕರುಗಳನ್ನು ಸಂಪರ್ಕಿಸಿದ್ದು ನಿಜವೆಂದು ಹೇಳಿಕೊಂಡಿದ್ದರು. ಅದಾದ ನಂತರ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆಪರೇಷನ್ ಕಮಲ ನಡೆಸುವ ನಂಬಿಕೆಯಿಂದಲೇ ಬಾಜಪದ ಬಹುತೇಕ ನಾಯಕರುಗಳು ಈ ಸರಕಾರ ಇನ್ನು ಒಂದು ವಾರದಲ್ಲಿ ಬೀಳುತ್ತದೆ, ಇನ್ನು ಎರಡು ವಾರದಲ್ಲಿ ಬೀಳುತ್ತದೆಯೆಂದು ಭವಿಷ್ಯ ನುಡಿಯುತ್ತ ನಗೆಪಾಟಲಿಗೀಡಾಗುತ್ತ ಹೋಗಿದ್ದು ನಮ್ಮ ಮುಂದಿದೆ. ಇದೀಗ ಚಳಿಗಾಲದ ಅಧಿವೇಶನ ಈ ತಿಂಗಳು ಹತ್ತನೇ ತಾರೀಖು ಪ್ರಾರಂಭವಾಗಲಿದ್ದು, ಅದಕ್ಕೂ ಮುಂಚೆ ಸಂಪುಟ ವಿಸ್ತರಣೆ ಮಾಡುವ ತರಾತುರಿಯಲ್ಲಿರುವ ಮೈತ್ರಿ ಸರಕಾರಕ್ಕೆ ಈಗ ಮತ್ತೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಯಥಾ ಪ್ರಕಾರ ಬಾಜಪ ಈ ಆಡಿಯೋದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು ತಮ್ಮ ಪಕ್ಷ ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ತಾವಾಗಿಯೇ ಪಕ್ಷ ಸೇರಲು ಬಯಸುವ ಶಾಸಕರುಗಳಿಗೆ ಬೇಡ ಎನ್ನುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಆಡಿಯೋದ ಅಧಿಕೃತತೆಯನ್ನು ಮತ್ತು ಇದರ ಮೂಲದ ಬಗ್ಗೆ ಚರ್ಚಿಸುವುದಕ್ಕಿಂತ ಮುಖ್ಯವಾಗಿ ಈಗ ಈ ಆಪರೇಷನ್ ಕಮಲ ಯಾರಿಗೆ ಹೆಚ್ಚು ಅನಿವಾರ್ಯವಾಗಿದೆ ಎಂಬುದನ್ನು ನಾವು ವಿಶ್ಲೇಷಿಸಿ ನೋಡಬೇಕಾಗಿದೆ. 
ಬಹು ಮುಖ್ಯವಾಗಿ ಮಾಜಿಮುಖ್ಯಮಂತ್ರಿಗಳಾದ ಮತ್ತು ಬಾಜಪದ ರಾಜ್ಯಾಧ್ಯಕ್ಷರಾದ ಶ್ರೀ ಯಡಿಯೂರಪ್ಪನವರಿಗೆ ಮತ್ತವರ ಆಪ್ತರಿಗೆ ತುರ್ತಾಗಿ ಆಪರೇಷನ್ ಕಮಲ ನಡೆಯುವುದು ಬೇಕಾಗಿದೆ. ಅದನ್ನು ಬಿಟ್ಟರೆ ಶ್ರೀ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವರಾದ ಶ್ರೀ ಶ್ರೀರಾಮುಲು ಅವರ ಬಳ್ಳಾರಿ ಬಣಕ್ಕೂ ಆಪರೇಷನ್ ಕಮಲ ನಡೆಸಬೇಕಾದ ಅನಿವಾರ್ಯತೆ ಇರುವಂತೆ ಕಾಣುತ್ತಿದೆ. ಹೀಗೆ ಈ ಎರಡೂ ಗುಂಪುಗಳಿಗೂ ಆಪರೇಷನ್ ಕಮಲವನ್ನು ನಡೆಸುವ ಜರೂರತ್ತಿದೆ.

ಬಾಜಪದ ಎಲ್ಲ ನಾಯಕರುಗಳಿಗೂ ಅಧಿಕಾರ ಬೇಕಿದ್ದರೂ ಅದಕ್ಕಾಗಿ ದೊಡ್ಡ ಮಟ್ಟದ ಪ್ರಯತ್ನ ನಡೆಸಲು ಅವರ್ಯಾರು ಸಿದ್ದವಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ಇದಕ್ಕೆ ಬೇಕಾದ ಅಪಾರ ಮಟ್ಟದ ಬಂಡವಾಳ ಹೂಡಿಕೆ ಮಾಡಲು ಮತ್ತು ಅದಕ್ಕೆ ಬೇಕಾದ ರಿಸ್ಕ್ ತೆಗೆದುಕೊಳ್ಳಲು ಉಳಿದ ನಾಯಕರುಗಳು ಇಚ್ಚಿಸುತ್ತಿಲ್ಲ. ಬಾಜಪದ ಎಲ್ಲ ಹಿರಿಯ ನಾಯಕರುಗಳು ಮನಸ್ಸು ಮಾಡಿದ್ದರೆ ಮೇ ಅಂತ್ಯದಲ್ಲಿ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾಗಲೇ ಕನಿಷ್ಠ ಹತ್ತು ಶಾಸಕರುಗಳನ್ನು ಸೆಳೆಯುವುದು ಕಷ್ಟವೇನಾಗಿರಲಿಲ್ಲ. ಆದರೆ ಅಂತಹ ಆಪರೇಷನ್ ಕಮಲದಿಂದ ಹೆಚ್ಚು ಲಾಭವಾಗುವುದು ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ಎಂಬುದನ್ನರಿತ ಉಳಿದ ನಾಯಕರುಗಳು ಅವತ್ತು ತಟಸ್ಥವಾಗುಳಿದುಬಿಟ್ಟರು. ಶ್ರೀ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸದ ಬಾಜಪದ ಒಳಗಿನ ಶಕ್ತಿಗಳೆಲ್ಲ ಮೌನವಾಗುಳಿದಿದ್ದು ವಾಸ್ತವ. ಹೀಗಾಗಿ ಇವತ್ತಿಗೂ ಆಪರೇಷನ್ ಕಮಲದ ಹೆಚ್ಚು ಅಗತ್ಯ ಇರುವುದು ಯಡಿಯೂರಪ್ಪನವರ ಬಣಕ್ಕೇನೆ. ಯಾಕೆಂದರೆ ಶ್ರೀ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಲು ಇರುವ ಕೊನೆಯ ಅವಕಾಶ ಇದಾಗಿದೆ. ಮತ್ತೊಂದು ಚುನಾವಣೆ ಬಂದು ಬಾಜಪ ಬಹುಮತ ಪಡೆದರೂ ಯಡಿಯೂರಪ್ಪನವರ ವಯಸ್ಸು ಅವರಿಗೆ ಅಡ್ಡಿಯಾಗುವುದು ಸತ್ಯ. ಹಾಗಾಗಿ ಈ ವಿದಾನಸಭೆಯ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗುವ ಅನಿವಾರ್ಯತೆ ಅವರಿಗಿದೆ. ಅದೂ 2019ರ ಮೇ ತಿಂಗಳ ಲೋಕಸಭಾ ಚುನಾವಣೆಯ ಒಳಗೆ ಅವರು ಮುಖ್ಯಮಂತ್ರಿಯಾಗಲೇ ಬೇಕಾಗಿದೆ. ಇಲ್ಲ, ಆ ಚುನಾವಣೆಯ ಪಲಿತಾಂಶಗಳ ಆಧಾರದ ಮೇಲೆ ಬಾಜಪ ಮತ್ತಿತರೇ ಪಕ್ಷಗಳ ಶಕ್ತಿ ರಾಜಕಾರಣದ ಸಮೀಕರಣಗಳು ಬದಲಾಗುವುದು ನಿಶ್ಚಿತ. ಆದ್ದರಿಂದಲೇ ಆಪರೇಷನ್ ಕಮಲ ನಡೆಸುವ ನಿರಂತರ ಪ್ರಯತ್ನವನ್ನು ಶ್ರೀ ಯಡಿಯೂರಪ್ಪನವರು ಮತ್ತವರ ಆಪ್ತರು ನಡೆಸುತ್ತಿದ್ದಾರೆ ಎನ್ನಬಹುದು.

ಇನ್ನು ಎರಡನೆಯದಾಗಿ ನಾನು ಮೊದಲೇ ಹೇಳಿದಂತೆ, ಮಾಜಿ ಸಚಿವರಾದ ಶ್ರೀ ಜನಾರ್ದನ ರೆಡ್ಡಿಯವರು ಮತ್ತು ಅವರ ಆಪ್ತಮಿತ್ರರಾದ ಶ್ರೀ ಶ್ರೀರಾಮುಲು ಅವರಿಗೆ ರಾಜ್ಯ ರಾಜಕೀಯಕ್ಕಿಂತ ಹೆಚ್ಚಾಗಿ ಬಳ್ಳಾರಿ ಜಿಲ್ಲೆಯ ರಾಜಕಾರಣ ಮತ್ತು ಗಣಿ ಉದ್ಯಮದಲ್ಲಿ ತಮ್ಮ ಅಧಿಪತ್ಯ ಸಾಧಿಸಲು ತುರ್ತಾಗಿ ಅಧಿಕಾರ ಬೇಕಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಸೋತ ನಂತರವಂತು ಬಳ್ಳಾರಿಯ ಮೇಲಿದ್ದ ರೆಡ್ಡಿ ಬಣದ ಹಿಡಿತ ಸಂಪೂರ್ಣವಾಗಿ ಸಡಿಲಗೊಂಡಿದ್ದು, ಆ ಹಿಡಿತವನ್ನು ಮತ್ತೆ ಗಳಿಸಲು ಬಾಜಪ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರುವುದು ಅವರಿಗೆ ಮುಖ್ಯವಾಗಿದೆ.

ಅದೂ ಅಲ್ಲದೆ ಆಂಬಿಡೆಂಟ್ ಪ್ರಕರಣದಲ್ಲಿ ರೆಡ್ಡಿಯವರನ್ನು ಸಿಲುಕಿಸಿ ಬಂಧಿಸಿದ ರಾಜ್ಯ ಸರಕಾರದ ಕ್ರಮ ರೆಡ್ಡಿಯವರನ್ನು ಕೆರಳಿಸಿದೆ. ಯಾಕೆಂದರೆ ಈ ಮೈತ್ರಿ ಸರಕಾರ ಇರುವವರೆಗು ಜನಾರ್ದನ ರೆಡ್ಡಿಯವರು ನೆಮ್ಮದಿಯಾಗಿ ಇರುವುದು ಅಸಾಧ್ಯ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರ ಇದ್ದಾಗ್ಯು ರಾಜ್ಯ ಸರಕಾರದ ತನಿಖಾ ಸಂಸ್ಥೆಗಳು ಒಂದಲ್ಲ ಒಂದು ಪ್ರಕರಣವನ್ನು ಕೆದಕುತ್ತ ರೆಡ್ಡಿಯವರು ರಾಜಕೀಯವಾಗಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳುತ್ತ ಹೋಗುತ್ತವೆ ಎನ್ನುವುದು ಸ್ವತ: ರೆಡ್ಡಿಯವರಿಗೆ ಮನವರಿಕೆಯಾಗಿದೆ. ಇದು ಅವರ ಆಪ್ತರಾದ ಶ್ರೀ ಶ್ರೀರಾಮುಲು ಅವರ ರಾಜಕೀಯ ಭವಿಷ್ಯವನ್ನು ಮಂಕುಗೊಳಿಸುವುದು ಖಚಿತ. ಹೇಗಾದರು ಮಾಡಿ ಆದಷ್ಟು ಬೇಗ ರಾಜ್ಯದಲ್ಲಿ ಬಾಜಪಕ್ಕೆ ಅಧಿಕಾರ ದೊರಕಿಸಿಕೊಡುವುದರ ಮೂಲಕ ತಮ್ಮ ರಾಜಕೀಯ ಬದುಕು ಮತ್ತು ಉದ್ಯಮಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ರೆಡ್ಡಿಯವರ ಬಣಕ್ಕಿದೆ.

ಹೀಗಾಗಿ ಬಾಜಪ ಒಂದು ಪಕ್ಷವಾಗಿ, ಅದರ ಎಲ್ಲ ನಾಯಕರುಗಳೂ ಆಪರೇಷನ್ ಕಮಲದ ಬಗ್ಗೆ ಆಸಕ್ತಿ ವಹಿಸಿ ಈ ಸರಕಾರ ಕೆಡವಲು ಬಯಸದೇ ಹೋದರೂ ಶ್ರೀ ಯಡಿಯೂರಪ್ಪನವರು ಮತ್ತವರ ಆಪ್ತರು, ಹಾಗು ಶ್ರೀ ಜನಾರ್ದನ ರೆಡ್ಡಿಯವರು ಮತ್ತವರ ಆಪ್ತವಲಯ ಆಪರೇಷನ್ ಕಮಲ ಮಾಡಲು ಸದಾ ಸಿದ್ದವಾಗಿ ನಿಂತಿರುತ್ತದೆ.ಈ ಆಪರೇಷನ್ ಕಮಲದ ತಂತ್ರಕ್ಕೆ ಆಡಳಿತಾರೂಢ ಮೈತ್ರಿಪಕ್ಷಗಳಾದ ಕಾಂಗ್ರೇಸ್ ಮತ್ತು ಜನತಾದಳಗಳು ಯಾವ ಪ್ರತಿತಂತ್ರವನ್ನು ಮಾಡಬಹುದೆಂಬುದನ್ನು ಕಾದು ನೋಡಬೇಕಿದೆ. 

ಆದರೆ ನಮ್ಮ ರಾಜಕೀಯ ಪಕ್ಷಗಳ ತಂತ್ರ-ಪ್ರತಿತಂತ್ರಗಳ ಯುದ್ದದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗದಿದ್ದರೆ ಸಾಕೆನ್ನುವುದು ರಾಜ್ಯದ ಮತದಾರನ ಬಯಕೆಯಾಗಿದೆ.

No comments:

Post a Comment