Dec 12, 2018

ತೆಲಂಗಾಣ! ಟಿ.ಆರ್.ಎಸ್. ಗೆಲುವಿನ ಐದು ಮುಖ್ಯ ಕಾರಣಗಳು

ಕು.ಸ.ಮಧುಸೂದನರಂಗೇನಹಳ್ಳಿ
ಎಲ್ಲ ನಿರೀಕ್ಷೆಗಳನ್ನೂ ಮೀರಿ ಕೆ.ಚಂದ್ರಶೇಖರ್ ರಾವ್ ಅವರ ಟಿ.ಆರ್.ಎಸ್. ತೆಲಂಗಾಣ ವಿದಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಜಯಗಳಿಸಿದೆ.ಚುನಾವಣೆ ನಡೆದ 119ಸ್ಥಾನಗಳ ಪೈಕಿ 88ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧಪಕ್ಷಗಳು ದೂಳಿಪಟವಾಗುವಂತೆ ಮಾಡಿದೆ.ಟಿ.ಆರ್.ಎಸ್.ಗೆಲ್ಲಬಹುದೆಂದು ಭವಿಷ್ಯ ನುಡಿದಿದ್ದವರಿಗೂ ಅಚ್ಚರಿಯಾಗುವಂತೆ ಅದು ಜಯಗಳಿಸಿರುವುದರ ಹಿಂದೆ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿದೆ.

ಹಾಗೆ ನೋಡಿದರೆ ತೆಲಂಗಾಣ ವಿದಾನಸಭಾ ಚುನಾವಣೆಗಳು 2019ರ ಮೇ ತಿಂಗಳ ಲೋಕಸಭಾ ಚುನಾವಣೆಗಳ ಜೊತೆಗೆ ನಡೆಯಬೇಕಿತ್ತು. ಆದರೆ ಲೋಕಸಭಾ ಚುನಾವಣೆಗಳಲ್ಲಿ ಬೀಸಬಹುದಾದ ಪ್ರದಾನಮಂತ್ರಿ ಶ್ರೀನರೇಂದ್ರ ಮೋದಿಯವರ ಅಲೆಯಿಂದ ತಪ್ಪಿಸಿಕೊಳ್ಳಲೆಂಬಂತೆ ಕೆ.ಸಿ.ಆರ್. ಅವಧಿಗೆ ಮುನ್ನವೇ ವಿದಾನಸಭೆ ವಿಸರ್ಜಿಸಿ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಯುವಂತೆ ನೋಡಿಕೊಂಡರು. ಅವರ ಈ ನಿರ್ದಾರವನ್ನು ವಿರೋಧಪಕ್ಷಗಳು ಟೀಕಿಸಿ, ರಾಜಕೀಯ ಪಂಡಿತರು ಅವರ ಈ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆಯೆಂದು ನಕ್ಕಿದ್ದರು. ಆದರೆ ಅಂತಿಮವಾಗಿ ಕೆ.ಸಿ.ರಾವ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ಇಂತಹ ಅಭೂತಪೂರ್ವ ಗೆಲುವು ತಮ್ಮದಾಗಬಹುದೆಂದು ಸ್ವತ: ಅವರೇ ನಿರೀಕ್ಷಿಸಿದ್ದರೆಂದು ಹೇಳುವುದು ತಪ್ಪಾಗುತ್ತದೆ.

ಅವರ ಈ ಗೆಲುವಿಗೆ ಇರಬಹುದಾದ ಕಾರಣಗಳತ್ತ ಒಂದಿಷ್ಟು ಕಣ್ಣು ಹಾಯಿಸೋಣ:

1.ಜನಪರ ಕಾರ್ಯಕ್ರಮಗಳು.

ರಾವ್ ತಮ್ಮ ಅಧಿಕಾರದ ಪ್ರಾರಂಭದಿಂದಲೂ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೇ ಬಂದಿದ್ದರು. ಅವರು ಜಾರಿಗೊಳಿಸಿದ 'ರೈತಬಂದು' ಕಾರ್ಯಕ್ರಮ ತೆಲಂಗಾಣದ ಕೃಷಿವಲಯದಲ್ಲಿ ಜನಪ್ರಿಯವಾಗಿತ್ತು. ಅವರುಪರಿಚಯಿಸಿದ ಸಾಮಾಜಿಕ ಭದ್ರತೆ ಒದಗಿಸುವ ಪಿಂಚಣಿ ವ್ಯವಸ್ಥೆ,ಕುಡಿಯುವ ನೀರಿನ ಯೋಜನೆಗಳು,24*7ವಿದ್ಯುತ್ ಪೂರೈಕೆ, ಬಡವರಿಗಾಗಿ ಜಾರಿಗೊಳಿಸಿದ ವಸತಿ ಸಂಕೀರ್ಣಗಳು ಜನಸಮುದಾಯದಲ್ಲಿ ಬಾರಿ ಜನಪ್ರಿಯತೆ ತಂದುಕೊಟ್ಟವು.ಹೆಣ್ಣುಮಕ್ಕಳ ಮದುವೆಗಾಗಿ ಸರಕಾರ ಒಂದು ಲಕ್ಷ ರೂಪಾಯಿ ನೀಡುವ ಕಲ್ಯಾಣಲಕ್ಷ್ಮಿ/ಶಾದಿ ಮುಬಾರಕ್ ಯೋಜನೆಗಳಂತು ಮಹಿಳಾ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದವು.

ಅದರಲ್ಲೂ ರಾವ್ ಕೃಷಿಗೆ ಬೆಕಾದ ಸಣ್ಣ ನೀರಾವರಿಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು ರಾಜ್ಯದ ಸಣ್ಣ ರೈತರ ನಡುವೆ ಅವರ ಜನಪ್ರಿಯತೆ ಹೆಚ್ಚಾಗಲು ಕಾರಣವಾಯಿತು.

ಇದರ ಜೊತೆಗೆ ವಿದಾನಸಭೆ ವಿಸರ್ಜಿಸುವ ಕೆಲವೆ ದಿನಗಳ ಮೊದಲು ರಾಜ್ಯದ ಜನತೆಗೆ ಮತ್ತಷ್ಟು ಉಚಿತ ಕಾರ್ಯಕ್ರಮಗಳನ್ನು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು ಜನತೆ ಟಿ.ಆರ್.ಎಸ್.ಪರ ನಿಲ್ಲುವಂತೆ ಮಾಡಿತು.

2.ಕಾಂಗ್ರೆಸ್ ಮತ್ತು ತೆಲುಗುದೇಶಂ ಮೈತ್ರಿ.

ಇಷ್ಟೆಲ್ಲದರ ನಡುವೆಯೂ ಇದ್ದಿರಬಹುದಾದ ಆಡಳಿತ ವಿರೋಧಿ ಅಲೆಯನ್ನು ಉಪಯೋಗಿಸಿಕೊಳ್ಳುವ ಸಾಧ್ಯತೆ ಇದ್ದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ತೆಲುಗುದೇಶಂ ಜೊತೆ ಮೈತ್ರಿ ಮಾಡಿಕೊಂಡಿದ್ದು ತೆಲಂಗಾಣ ಜನತೆಯ ಕೋಪಕ್ಕೆ ಕಾರಣವಾಯಿತು. ಮೊದಲಿನಿಂದಲೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ವಿರುದ್ದವಿದ್ದ ತೆಲುಗುದೇಶಂ ಪಕ್ಷದ ಮೇಲಿದ್ದ ತೆಲಂಗಾಣ ಜನತೆಯ ಕೋಪ ಸಹಜವಾಗಿಯೇ ಕಾಂಗ್ರೆಸ್ಸಿಗೆ ನಷ್ಟವನ್ನುಂಟು ಮಾಡಿತು.ಆಂದ್ರಪ್ರದೇಶದ ರಾಜದಾನಿ ವಿಜಯವಾಡ ಮತ್ತು ದೆಹಲಿಯ ಗುಲಾಮರ ಸರ್ಕಾರ ನಮಗೆ ಬೇಕಾಗಿಲ್ಲವೆಂಬ ರಾವ್ ಅವರ ಹೇಳಿಕೆ ತೆಲಂಗಾಣ ಜನತೆ ಟಿ.ಆರ್.ಎಸ್. ಪರವಾಗಿ ದೃವೀಕರಣಗೊಳ್ಳುವಂತೆಮಾಡಿತು.ತೆಲಂಗಾಣ ಜನತೆಯ ದೃಷ್ಠಿಯಲ್ಲಿ ಇವತ್ತಿಗೂ ತೆಲುಗುದೇಶಂ ಖಳನಾಯಕನಾಗಿದ್ದು ಅದರ ಜೊತೆ ಸೇರಿದ ಕಾಂಗ್ರೆಸ್ಸನ್ನು ಸಹ ಅವರು ಅದೇ ದೃಷ್ಠಿಯಲ್ಲಿ ನೋಡಿದ್ದು ಕಾಂಗ್ರೆಸ್ಸಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದ್ದು ರಾವ್ ಅವರಿಗೆ ವರದಾನವಾಯಿತು.

3.ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯೇ ಇಲ್ಲದೆ ಹೋದದ್ದು.

ಕಾಂಗ್ರೆಸ್ ಪಕ್ಷದೊಳಗೆ ಹತ್ತಾರು ಜನ ಮುಖ್ಯಮಂತ್ರಿಗಳ ಕುರ್ಚಿಯ ಆಕಾಂಕ್ಷಿಗಳಿದ್ದು ಅವರಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ ತೆಲಂಗಾಣ ಕಾಂಗ್ರೆಸ್ ಅದ್ಯಕ್ಷರಾಗಿದ್ದ ಉತ್ತಮ ಕುಮಾರ್ ರೆಡ್ಡಿಯವರಿಗೆ ಎಲ್ಲ ನಾಯಕರನ್ನೂ ಒಟ್ಟಿಗೆ ಕರೆದೊಯ್ಯಲು ಸಾದ್ಯವೇ ಆಗಲಿಲ್ಲ. ಹಳೆಯ ಮುಖಗಳನ್ನೇ ನಂಬಿಕೊಂಡಿದ್ದ ಕಾಂಗ್ರೆಸ್ಸಿಗೆ ಯುವ ಜನತೆಯ ಬೆಂಬಲ ದೊರಕದೆ ಹೋಗಿದ್ದು ಸಹ ಟಿ.ಆರ್.ಎಸ್. ಗೆಲುವಿಗೆ ಕಾರಣವಾಯಿತು.

4.ನಕಾರಾತ್ಮಕ ಪ್ರಚಾರ.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಮತ್ತು ಬಾಜಪಗಳೆರಡೂ ತಮ್ಮ ಪ್ರಣಾಳಿಕೆಗಳ ಬಗ್ಗೆ ಹೆಚ್ಚು ಮಾತಾಡದೆ ರಾವ್ ಅವರ ಕುಟುಂಬದ ವಿರುದ್ದ ವೈಯುಕ್ತಿಕ ದಾಳಿ ನಡೆಸಿದ್ದು ಜನರ ಅಸಹನೆಗೆ ಕಾರಣವಾಯಿತು. ವಿರೋಧ ಪಕ್ಷಗಳ ಇಂತಹ ನಕಾರಾತ್ಮಕ ಪ್ರಚಾರ ಟಿ. ಆರ್. ಎಸ್. ಗೆ ವರವಾಗುತ್ತ ಹೋಯಿತು.

5.ತಿಂಗಳುಗಳ ಪೂರ್ವ ಸಿದ್ದತೆ.

ವಿದಾನಸಭೆಯನ್ನು ವಿಸರ್ಜಿಸಿದ ಕೂಡಲೆ ಟಿ. ಆರ್.ಎಸ್. ತನ್ನ ಚುನಾವಣಾ ಸಿದ್ದತೆಯನ್ನು ಆಂಭಿಸಿತ್ತು. ಸೆಪ್ಟೆಂಬರ್ ಮೊದಲ ವಾರದ ಹೊತ್ತಿಗೆ ಅದು ಶೇಕಡಾ ತೊಂಭತ್ತರಷ್ಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಯಾಗಿತ್ತು.ಹಾಗಾಗಿ ಅದರ ಅಭ್ಯರ್ಥಿಗಳು ಮೊದಲೇ ತಮ್ಮ ಪ್ರಚಾರವನ್ನು ಆರಂಭಿಸಿಯಾಗಿತ್ತು. ಕೊನೆಗಳಿಗೆಯವರೆಗು ಸೀಟು ಹಂಚಿಕೆಯ ಕಸರತ್ತಿನಲ್ಲಿ ಮುಳುಗಿದ್ದ ವಿರೋಧ ಪಕ್ಷಗಳು ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

6.ಟಿ.ಆರ್.ಎಸ್.ಪರ ನಿಂತ ಅಲ್ಪಸಂಖ್ಯಾತರು.

ಓವೈಸಿಯಂತವರ ಅಸ್ಥಿತ್ವದ ನಡುವೆಯೂ ಮುಸ್ಲಿಂ ಸಮುದಾಯ ರಾವ್ ಪರ ಮತ ಚಲಾಯಿಸಿದ್ದು ಟಿ. ಆರ್.ಎಸ್. ಭರ್ಜರಿ ಗೆಲುವಿಗೆ ಕಾರಣವಾಯಿತು.

ಒಟ್ಟಿನಲ್ಲಿ ರಾವ್ ತಮ್ಮ ಪಕ್ಷವನ್ನು ಬಾರಿ ಜಯಗಳಿಸುವಂತೆ ನೋಡಿಕೊಂಡಿದ್ದು, ಇದೀಗ ಅವರ ಕಣ್ಣು ದೆಹಲಿಯತ್ತ ನೆಟ್ಟಿರುವಂತೆ ಕಾಣುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಾಜಪ ಹೊರತಾದ ವಿರೋಧಪಕ್ಷಗಳ ಮೂರನೇ ರಂಗವೊಂದರ ಸ್ಥಾಪನೆಯ ಕನಸನ್ನು ಕೆ.ಸಿ.ಆರ್. ಹೊಂದಿದ್ದು ಅದೆಷ್ಟರ ಮಟ್ಟಿಗೆ ಸಾದ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಹದಿನೇಳು ಲೋಕಸಭಾ ಸ್ಥಾನಗಳನ್ನು ಹೊಂದಿರುವ ತೆಲಂಗಾಣದ ಮುಖ್ಯಮಂತ್ರಿ ರಾಷ್ಟ್ರ ರಾಜಕಾರಣದಲ್ಲಿ ವಹಿಸಬಹುದಾದ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣವಿನ್ನು ಸಿಕ್ಕಿಲ್ಲ.

No comments:

Post a Comment