Dec 14, 2018

ಚತ್ತೀಸ್ ಗಡ ಪಲಿತಾಂಶ: ರಾಜಕೀಯ ಪಕ್ಷಗಳಿಗೊಂದು ಪಾಠ!

ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ನೋಡಿದರೆ ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನ ನಡೆದ ನಂತರದ ಸಮೀಕ್ಷೆಗಳು ಛತ್ತೀಸ ಗಢ್ ರಾಜ್ಯದಲ್ಲಿ ಬಾಜಪ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳ ಬಗ್ಗೆಯೇ ಹೇಳಿದ್ದವು. ಆದರೆ ಎಲ್ಲ ಭವಿಷ್ಯಗಳನ್ನು ಸುಳ್ಳು ಮಾಡುವಂತೆ ಕಾಂಗ್ರೆಸ್ ಇಲ್ಲಿ ಭರ್ಜರಿಯಾಗಿ ಗೆದ್ದು ಬಾಜಪಕ್ಕೆ ಹೀನಾಯ ಸೋಲನ್ನು ಕರುಣಿಸಿದೆ. ಮದ್ಯಪ್ರದೇಶ ಮತ್ತು ರಾಜಾಸ್ಥಾನಕ್ಕೆ ಹೋಲಿಸಿದಲ್ಲಿ ಇಲ್ಲಿ ಬಾಜಪದ ಸೋಲು ಅನಿರೀಕ್ಷಿತ ಮತ್ತು ಅಗಾಧವಾದದ್ದು. ಆದರೆ ಈ ರಾಜ್ಯದ ಪಲಿತಾಂಶಗಳು ಎಲ್ಲ ಪಕ್ಷಗಳಿಗೂ ಒಂದು ಪಾಠವಾಗಿದೆ. 

2013ರ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಾಜಪ 49 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದ್ದರೆ, ಕಾಂಗ್ರೆಸ್ 39ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದಿದ್ದರೆ ಬಾಜಪ ಕೇವಲ 16 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ. ಮತಗಳಿಕೆಯ ಪ್ರಮಾಣದಲ್ಲಿ ಎರಡೂ ಪಕ್ಷಗಳ ನಡುವೆ ಶೇಕಡಾ 12 ರಷ್ಟು ವ್ಯತ್ಯಾವಿದೆ. ಇಷ್ಟು ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸಬಹುದೆಂದು ಸ್ವತ: ಕಾಂಗ್ರೆಸ್ಸಿನವರೆ ನಿರೀಕ್ಷಿಸಿರಲಿಲ್ಲವೆಂಬುದು ನಿಜ. ಯಾಕೆಂದರೆ ಕಳೆದ ಹದಿನೈದು ವರ್ಷಗಳಿದ ಆಡಳಿತ ನಡೆಸುತ್ತಿದ್ದ ಬಾಜಪವನ್ನು, ಬಲಾಡ್ಯ ಮುಖ್ಯಮಂತ್ರಿ ಶ್ರೀ ರಮಣ್ ಸಿಂಗ್ ಅವರನ್ನು ಸೋಲಿಸಲು ಕಾಂಗ್ರೆಸ್ಸಿನಲ್ಲಿ ಸ್ಥಳೀಯವಾಗಿ ಬಲಿಷ್ಠ ನಾಯಕರು ಇರಲಿಲ್ಲ. ಶ್ರೀ ಅಜಿತ್ ಜೋಗಿಯವರು ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷವೊಂದನ್ನು ಕಟ್ಟಿದ ನಂತರವಂತು ಕಾಂಗ್ರೆಸ್ ಕಷ್ಟದಲ್ಲಿತ್ತು. ಕಾಂಗ್ರೆಸ್ಸಿನ ಮತಗಳನ್ನು ಅಜಿತ್ ಜೋಗಿಯವರು ಕಸಿದುಕೊಳ್ಳುವ ಮೂಲಕ ಬಾಜಪಕ್ಕೆ ಚತ್ತೀಸಗಡ್ ಸುಲಭದ ತುತ್ತಾಗುತ್ತದೆಯೆಂದು ಬಹಳ ಜನ ಹೇಳಿದ್ದರು. ಆದರೆ ಜೋಗಿಯವರ ಮ್ಯಾಜಿಕ್ ನಡೆಯಲೇ ಇಲ್ಲ. ಬಾಜಪದ ಸುದೀರ್ಘ ಆಳ್ವಿಕೆಯಿಂದ ಬೇಸರಗೊಂಡಿದ್ದ ಮತದಾರರು ಜಿಗುಪ್ಸೆಗೊಂಡಂತೆ ಕಾಂಗ್ರೆಸ್ಸಿಗೆ ಮೂರನೇ ಎರಡರಷ್ಟು ಬಹುಮತ ದೊರಕಿಸಿಕೊಟ್ಟುಬಿಟ್ಟರು. ಹಾಗಿದ್ದರೆ ಇಂತಹದೊಂದು ದೊಡ್ಡ ಬದಲಾವಣೆಯ ಹಿಂದೆ ಇರಬಹುದಾದ ನೈಜ ಕಾರಣಗಳನ್ನು ಹುಡುಕುತ್ತ ಹೋದರೆ ಬೇರೆ ಕಡೆಯಲ್ಲಿನ ಕಾರಣಗಳ ಜೊತೆ ಇಲ್ಲಿಯದೇ ಆದ ಎರಡು ದೊಡ್ಡ ಸ್ಥಳೀಯ ಕಾರಣಗಳೂ ಇವೆಯೆಂಬುದನ್ನು ನೋಡಬಹುದು. 
ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಬೇರೆ ರಾಜ್ಯಗಳಲ್ಲಿಯೂ ಅನ್ವಯವಾದ ಆ ಸಾಮಾನ್ಯ ಕಾರಣಗಳನ್ನು ಹೊರತು ಪಡಿಸಿ, ಇಲ್ಲಿಯದೇ ಆದ ಸ್ಥಳೀಯ ಕಾರಣಗಳನ್ನು ಮಾತ್ರ ನಾವಿಲ್ಲಿ ನೋಡೋಣ: 

1.ಬದಲಾವಣೆಯ ಗಾಳಿ. 
ಚತ್ತೀಸ್ ಗಡ್ ಜನತೆ ಕಳೆದ ಎರಡು ದಶಕಗಳಿಂದಲೂ ನಡೆದಿದ್ದ ಬಾಜಪದ ಆಡಳಿತ ವೈಖರಿಗೆ ಜಿಗುಪ್ಸೆಗೊಳ್ಳುವಷ್ಟರ ಮಟ್ಟಿಗೆ ಬೇಸರಗೊಂಡು ಒಂದು ದೊಡ್ಡಮಟ್ಟದ ಬದಲಾವಣೆಯನ್ನು ಬಯಸಿದ್ದರು. ಬಾಜಪದ ವಿರುದ್ದದ ನಕಾರಾತ್ಮಕ ಮತಗಳು ಆ ಮಟ್ಟಿಗೆ ಚಲಾವಣೆಗೊಂಡಿದ್ದು ಕಾಂಗ್ರೆಸ್ಸಿಗೆ ವರವಾಗುತ್ತ ಹೋಯಿತು. ಇಂತಹ ಬದಲಾವಣೆಯ ಗಾಳಿಯಲ್ಲಿ ಬಾಜಪಮಾತ್ರವಲ್ಲ, ಬಹುಜನಪಕ್ಷ ಮತ್ತು ಅಜಿತ್ ಜೋಗಿಯವರ ಪಕ್ಷಗಳು ಸಹ ಕೊಚ್ಚಿ ಹೋಗಿದ್ದು ವಿಶೇಷವೆನ್ನಬಹುದು. 

2.ತಳಮಟ್ಟದ ಆಡಳಿತದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ. 
ತಳ ಮಟ್ಟದ ಆಡಳಿತದಲ್ಲಿ ಅಗಾಧವಾದ ಭ್ರಷ್ಟಾಚಾರ ಅಸಮರ್ಥತೆ ತುಂಬಿ ತುಳುಕಿ, ಕಂದಾಯ ಇಲಾಖೆಯಲ್ಲಿ ಬಾರಿ ಅವ್ಯವಹಾರ ಮತ್ತು ಸ್ವಜನ ಪಕ್ಷಪಾತಗಳು ನಡೆದು ಭೂದಾಖಲೆಗಳ ತಿದ್ದು ಪಡಿಯಂತಹ ಅಕ್ರಮಗಳು ಯಥೇಚ್ಚವಾಗಿ ನಡೆದು ರೈತರು ಬೀದಿಗೆ ಬೀಳುವಂತಾಯಿತು. ಸಂಪನ್ಮೂಲಗಳ ಗಣಿಯಾದ ಕಾಡುಗಳನ್ನು ಬಾರಿ ಪ್ರಮಾಣದಲ್ಲಿ ಕಡಿದು ನಡೆಸಿದ ಅರಣ್ಯಗಳ ಮೇಲಿನ ಅತ್ಯಾಚಾರ ಮತದಾರರನ್ನು ಕಂಗೆಡಿಸಿತ್ತು. ಗ್ರಾಮೀಣ ಬಾಗದಲ್ಲಿ ನಡೆಯುತ್ತಿದ್ದ ಪಡಿತರ ವಿತರಣೆಯ ಕೇಂದ್ರಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಲು ಬಾಜಪ ನಡೆಸಿದ ಪ್ರಯತ್ನಗಳಿಂದಾಗಿ ಇಡಿ ಪಡಿತರ ವ್ಯವಸ್ಥೆ ಹಗರಣಗಳ ಕೂಪವಾಗಿ ಹೋಗಿತ್ತು. ಅಧಿಕಾರಶಾಹಿಯ ಮೇಲೆ ಹಿಡಿತ ಕಳೆದುಕೊಂಡಿದ್ದ ಶಾಸಕಾಂಗದಿಂದಾಗಿ ಅಧಿಕಾರಿಗಳು ಭ್ರಷ್ಟರಾಗಿ ಬದಲಾವಣೆಯ ಗಾಳಿ ಬೀಸಲು ಕಾರಣರಾಗಿಬಿಟ್ಟರು. ಸರಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪದಂತೆ ನೋಡಿಕೊಂಡ ನೌಕರಶಾಹಿ ಇಡಿ ರಾಜ್ಯದಲ್ಲಿಭ್ರಷ್ಟತೆ ತಾಂಡವವಾಡುವಂತೆ ಮಾಡಿಟ್ಟಿತು. ಕಡೆಯವರೆಗು ರಮಣ್ ಸಿಂಗ್ ಇದನ್ನು ನಿಯಂತ್ರಿಸಲು ವಿಫಲಗೊಂಡಿದ್ದು ಜನತೆಯ ಕೋಪಕ್ಕೆ ಕಾರಣವಾಯಿತು. 

3.ಕಳಪೆ ಎಂ.ಎಸ್.ಪಿ.ದರ ಮತ್ತು ಬೆಲೆ ಏರಿಕೆ. 
ನ್ಯಾಯಯುತವಾಗಿ ನಿಗದಿಯಾಗದ ಎಂ.ಎಸ್.ಪಿ.ದರಗಳು ರೈತರನ್ನು ಸಾಲದ ಕೂಪಕ್ಕೆ ತಳ್ಳುತ್ತ ಹೋದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಷ್ಟಕ್ಕೆ ನೂಕುತ್ತ ಹೋಯಿತು. ಉತ್ತಮ ರಸ್ತೆಗಳು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಸರಕಾರದ ಯೋಜನೆಗಳು ಸಹ ಅಧಿಕಾರಿಗಳ ಅಸಮರ್ಥತೆಯಿಂದ ಫಲ ಕೊಡಲಿಲ್ಲ. ಹೀಗೆ ಇಡಿ ಚತ್ತೀಸ್ಗಡ ಭ್ರಷ್ಟ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಜನತೆ ನಲುಗುವಂತಾಯಿತು. ಬಾಜಪದ ಆಡಳಿತ ಇದನ್ನು ನಿಯಂತ್ರಿಸುವತ್ತ ಗಮನ ಹರಿಸಲೇ ಇಲ್ಲ. ಈ ನಡುವೆ ಜನತೆಯ ಕೋಪಕ್ಕೆ ಸಿಕ್ಕಿದ ಹಾಲಿ ಶಾಸಕರುಗಳಿಗೆ ಮತ್ತೆ ಟಿಕೇಟು ನೀಡಿದ್ದು ಜನತೆಯ ಆಕ್ರೋಶಕ್ಕೆ ಕಾರಣವಾಯಿತು. 

ರಾಜಾಸ್ಥಾನ ಮತ್ತು ಮದ್ಯಪ್ರದೇಶಗಳಲ್ಲಿನ ಆಡಳಿತ ವಿರೋಧಿ ಅಲೆಯ ನಡುವೆಯೂ ಬಾಜಪ ಕಾಂಗ್ರೆಸ್ಸಿನ ಗೆಲುವಿಗೆ ಕೊನೆಗಳಿಗೆಯವರೆಗು ತಡೆಯೊಡ್ಡಿ ಅಲ್ಪ ಅಂತರದಲ್ಲಿ ಸೋಲು ಕಂಡಿದ್ದರೆ, ಚತ್ತೀಸ್ ಗಡದಲ್ಲಿ ಮಾತ್ರ ಬಾರಿ ಅಂತರದಿಂದ ಸೋಲಬೇಕಾಯಿತು. ಈ ಸೋಲಿನ ಅಂತರವೇ ಜನರಿಗೆ ಬಾಜಪದ ಆಡಳಿತದ ಬಗ್ಗೆ ಹುಟ್ಟಿದ್ದ ಅತೀವ ಬೇಸರವನ್ನು ತೋರಿಸುತ್ತದೆ. 

ಶಾಸಕಾಂಗವು ಕಾರ್ಯಾಂಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಹೋದರೆ ಏನು ಅನಾಹುತವಾಗಬಹುದೆಂಬುದಕ್ಕೆ ಚತ್ತೀಸ್ಗಡ ಒಂದೊಳ್ಳೆಯ ಉದಾಹರಣೆ. ಇದನ್ನು ನಮ್ಮ ರಾಜಕೀಯ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕಿದೆ. ಅಧಿಕಾರಶಾಹಿಯ ಕಪಿ ಮುಷ್ಠಿಯಲ್ಲಿ ಸಿಲುಕುವ ಯಾವುದೇ ರಾಜ್ಯವೂ ಅಭಿವೃದ್ದಿಯಾಗುವುದು ಸಾದ್ಯವಿಲ್ಲ. ಭ್ರಷ್ಟಗೊಂಡ ಶಾಸಕಾಂಗದ ಜೊತೆ ಕಾರ್ಯಾಂಗವೂ ಭ್ರಷ್ಟಗೊಂಡರೆಆ ರಾಜ್ಯದ ಅದ:ಪತನ ಶತಸಿದ್ದ. ಅನುಭವಿ ರಮಣ್ ಸಿಂಗ್ ಇದನ್ನು ಅರ್ಥಮಾಡಿಕೊಳ್ಳದೇ ಹೋಗಿದ್ದು ಅವರ ಪತನಕ್ಕೆ ಕಾರಣವಾಯಿತೆನ್ನಬಹುದು. 

ಆದರೆ ಇದೀಗ ಅಧಿಕಾರ ಹಿಡಿಯಲಿರುವ ಕಾಂಗ್ರೆಸ್ ತನ್ನ ಅಧಿಕಾರದ ಮೊದಲ ದಿನದಿಂದಲೇ ತಾನು ಕೆಲಸ ಮಾಡುವುದನ್ನು ಪ್ರಾರಂಭಿಸಬೇಕು. ಇಲ್ಲದೇ ಹೋದಲ್ಲಿ 2019ರ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಜನತೆ ಮತ್ತೆ ಬಾಜಪದತ್ತ ಮುಖ ಮಾಡಬಹುದು.ಒಟ್ಟಿನಲ್ಲಿ ಈ ಪಲಿತಾಂಶಗಳು ರಾಜಕೀಯ ಪಕ್ಷಗಳಿಗೆ ಒಂದು ಪಾಠವಾಗಬೇಕಿದೆ. 

No comments:

Post a Comment