Sep 28, 2017

ತುತ್ತು...

ಈ ಕವಿತೆಯನ್ನು ಈ ಮುಂಚೆ ರಘು ಮಾಗಡಿಯವರು ಹಿಂಗ್ಯಾಕೆಯ ಮಿಂಚೆಗೆ ಕಳುಹಿಸಿದ್ದರು. ಅವರು ಈ ಮುಂಚೆಯೂ ಕೆಲವು ಕವಿತೆಗಳನ್ನು ಕಳುಹಿಸಿದ್ದರು, ಅದನ್ನು ಹಿಂಗ್ಯಾಕೆಯಲ್ಲಿ ಪ್ರಕಟಿಸಲಾಗಿತ್ತೂ ಕೂಡ. ಇತ್ತೀಚೆಗೆ ಗೀತಾ ಹೆಗ್ಡೆಯವರು ಫೇಸ್ಬುಕ್ಕಿನಲ್ಲಿ ಈ 'ತುತ್ತು' ಕವಿತೆಯು ತಮ್ಮದೆಂದು ಹಾಗೂ ರಘು ಮಾಗಡಿಯವರು ತಮ್ಮ ಕವಿತೆಯನ್ನು ಕದ್ದು ಬಳಸಿಕೊಂಡಿದ್ದರೆಂದು ಆರೋಪಿಸಿದ್ದರು. ಗೀತಾರವರ ಆರೋಪದ ಬಗ್ಗೆ ರಘು ಮಾಗಡಿಯವರಲ್ಲಿ ವಿಚಾರಿಸಲಾಗಿ 'ನಾನು ಅವರಲ್ಲಿ ಕ್ಷಮೆ ಕೇಳಿದ್ದೇನೆ, ಆದರೂ ಅವರು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ' ಎಂದು ಹೇಳಿದರೇ ಹೊರತು ಕವಿತೆ ಅವರದ್ದಾ ಅಥವಾ ತಾವೇ ರಚಿಸಿದ್ದಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲೇ ಇಲ್ಲ. ಕದ್ದ ಕವಿತೆಯೊಂದನ್ನು ಪ್ರಕಟಿಸಿದ್ದಕ್ಕೆ ಹಿಂಗ್ಯಾಕೆ ವಿಷಾದಿಸುತ್ತದೆ. ಈ ಕವಿತೆಯ ಲೇಖಕಿಯ ಕ್ಷಮೆ ಕೇಳುತ್ತದೆ. ಹಿಂಗ್ಯಾಕೆಯಲ್ಲಿ ಪ್ರಕಟವಾಗಿರುವ ರಘು ಮಾಗಡಿಯವರ ಇನ್ನಿತರೆ ಕವಿತೆಗಳನ್ನು ತೆಗೆದುಹಾಕಲಾಗುತ್ತದೆ. ಇದೊಂದು ಕವಿತೆಯನ್ನು ಗೀತಾ ಹೆಗ್ಡೆಯವರ ಕ್ಷಮೆ ಕೇಳುವ ಸಲುವಾಗಿ ಉಳಿಸಿಕೊಳ್ಳಲಾಗಿದೆ. ಅಂತರ್ಜಾಲದ ಯುಗದಲ್ಲಿ ಕದಿಯುವಿಕೆ ಸುಲಭದ ಕೆಲಸ. ಆದರೆ ಮನಸ್ಸಾಕ್ಷಿ ಇರುವ ಬರಹಗಾರರ್ಯಾರು ಆ ಕೆಲಸವನ್ನು ಮಾಡಬಾರದು. ಕದ್ದ ಲೇಖಕರದು ಎಷ್ಟು ತಪ್ಪೋ ಕದ್ದ ಕವಿತೆಯನ್ನು ಪ್ರಕಟಿಸಿದ್ದು ಅಷ್ಟೇ ದೊಡ್ಡ ತಪ್ಪು. ಇನ್ನೊಮ್ಮೆ ಇಂಥಹ ತಪ್ಪುಗಳಾಗದಂತೆ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಲಾಗುವುದು - ಹಿಂಗ್ಯಾಕೆ. 
ಗೀತಾ ಹೆಗ್ಡೆ.
ಬೀದಿ ಬದಿ ಆಯ್ದ ಹೊಲಿದ ದೊಡ್ಡ ಚೀಲ
ತನಗಿಂತ ದೊಡ್ಡದೆಂಬ ಪರಿವೆ
ಎಂದೂ ಕಂಡಿಲ್ಲ ಅವರಿಗಿಲ್ಲದರ ಚಿಂತೆ.

ರಣ ಹದ್ದಿನ ತೆರದಿ ಬಿಟ್ಟ ಕಣ್ಣೆರಡು
ಬೀದಿ ಬದಿ ಹುಡುಕುತ್ತ ಸಾಗುವರು
ನಾಳಿನ ಆಗು ಹೋಗುಗಳ ಮರೆತು
ದಿಕ್ಕು ದೆಸೆಯಿಲ್ಲದೆ ನಡೆಯುವವರು.

ಹೊತ್ತು ಮೂಡುವ ಮುಂಚೆ
ಕಣ್ಣುಜ್ಜುತ್ತ ಸಾಗುವುದು ನಡಿಗೆ
ಬದುಕ ಬಂಡಿ ಎಳೆಯುವ
ಭುವಿಯ ನಾವಿಕನಿವರು.

ಮಡಿಕೆಯಾಕಾರದ ಗುಡಿಸಲೊ
ಇಲ್ಲಾ ರಸ್ತೆ ಬದಿ ಬಿಟ್ಟಿರುವ ಸವಕಲು ಹಾದಿಯೊ
ಅಥವಾ ಬಟಾ ಬಯಲಾದರೂ ಸರಿ
ಒಕ್ಕಲೆಬ್ಬಿಸುವವರೆಗೆ ಇವರಿಗಲ್ಲೆ ತೇಪೆ ಮನೆ.

ತುತ್ತಿಗೂ ತತ್ವಾರ ಹಡೆದವ್ವ ಹೇಳ್ಯಾಳು
ನಡಿ ಮಗ ಹೊತಾರೆ ಅಲ್ಲಿ ಇಲ್ಲಿ
ಆಯ್ಕಂಡು ಹೊಟ್ಟೆ ತುಂಬಿಸಿಕೊ
ಹೆತ್ತ ಜೀವ ನೊಂದೀತೇನೊ ಪಾಪ!

ಬೇಡವೆಂದು ಎತ್ತಿ ಬಿಸಾಕಿದ ಕಸ
ಆಯ್ವ ಕೈಗಳಿಗದೆ ಸಿರಿ ಸಂಪತ್ತು

3 comments:

  1. ಇದು ನಾನು ಬರೆದ ಕವನ. Fb ಯಲ್ಲಿ ಹಾಕಿದ ಕವನ ಕಾಪಿ ಪೇಸ್ಟ್ ಮಾಡಿ ಇಲ್ಲಿ ಬೇರೆ ಹಾಕಿದ್ದೀರಾ. ನಾಚಿಕೆ ಆಗಲ್ವಾ ನಿಮಗೆ?

    ReplyDelete
    Replies
    1. ಹಿಂಗ್ಯಾಕೆಯಿಂದಾದ ತಪ್ಪಿಗೆ ಕ್ಷಮೆ ಇರಲಿ ಮೇಡಂ.

      Delete
  2. ಕ್ಷಮೆ ಯಾಚಿಸುವ ತಪ್ಪು ನೀವೇನೂ ಮಾಡಿಲ್ಲ. ಇದು ನಿಮಗೆ ಗೊತ್ತಿಲ್ಲದೆ ಆದ ಪ್ರಮಾದ. ಈ ಕುರಿತು ನನಗೆ ನಿಮ್ಮ ಬಗ್ಗೆ ಅನುಕಂಪವಿದೆ.
    ರಘು ಮಾಗಡಿಯವರ ಹೆಸರು ಡಿಲೀಟ್ ಮಾಡಿರುವುದು ಸಂತೋಷವಾಯಿತು. ಈ ರೀತಿ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆ👌

    ReplyDelete