Sep 28, 2017

ನಾನೀಗ ಮಾತನಾಡಲೇಬೇಕಿದೆ: ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ
ಬಿಜೆಪಿ ಸದಸ್ಯ, ಮಾಜಿ ಹಣಕಾಸು ಸಚಿವ. 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್ 
ನಮ್ಮ ಹಣಕಾಸು ಸಚಿವರು ದೇಶದ ಆರ್ಥಿಕತೆಯನ್ನು ಗಬ್ಬೆಬ್ಬಿಸಿಬಿಟ್ಟಿರುವುದರ ಬಗ್ಗೆ ನಾನು ಈಗಲೂ ಮಾತನಾಡದೇ ಹೋದರೆ ದೇಶದೆಡೆಗಿನ ನನ್ನ ಕರ್ತವ್ಯಕ್ಕೆ ದ್ರೋಹ ಬಗೆದಂತೆ. ನಾನೀಗ ಹೇಳಲೊರಟಿರುವ ವಿಷಯವು ಬಿಜೆಪಿಯ ಬಹಳಷ್ಟು ಜನರ ಅಭಿಪ್ರಾಯವು ಹೌದು, ಆದರವರು ಭೀತಿಯ ಕಾರಣದಿಂದಾಗಿ ಮಾತನಾಡುತ್ತಿಲ್ಲ ಅಷ್ಟೇ.

ಈ ಸರಕಾರದಲ್ಲಿ ಅರುಣ್ ಜೇಟ್ಲಿಯವರನ್ನು ಅತ್ಯುತ್ತಮ ಮಂತ್ರಿ ಎಂದು ಪರಿಗಣಿಸಲಾಗಿದೆ. ೨೦೧೪ರ ಚುನಾವಣೆ ನಡೆಯುವುದಕ್ಕೆ ಮೊದಲೇ ಹೊಸ ಸರ್ಕಾರದಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗುತ್ತಾರೆನ್ನುವುದು ನಿರ್ಧಾರವಾಗಿಬಿಟ್ಟಿತ್ತು. ಅವರು ಅಮೃತಸರದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಅವರ ಮಂತ್ರಿ ಪದವಿಗೆ ಅಡ್ಡಿಯಾಗಲಿಲ್ಲ. ಇದೆ ರೀತಿಯ ಪರಿಸ್ಥಿತಿ ೧೯೯೮ರಲ್ಲೂ ಉಂಟಾಗಿತ್ತು. ಆಗ ಚುನಾವಣೆ ಸೋತಿದ್ದ ಜಸ್ವಂತ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹತ್ತಿರದವರಾಗಿದ್ದರೂ ಕೂಡ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಆದರೆ ಅರುಣ್ ಜೇಟ್ಲಿಯವರ ವಿಷಯದಲ್ಲಿ ಇದಾಗಲಿಲ್ಲ. ಬದಲಿಗೆ ಪ್ರಧಾನ ಮಂತ್ರಿಯವರು ಅರುಣ್ ಜೇಟ್ಲಿಯವರಿಗೆ ಹಣಕಾಸು ಸಚಿವಾಲಯದ ಜೊತೆಗೆ, ಡಿಸ್ ಇನ್ವೆಸ್ಟ್ಮೆಂಟ್, ರಕ್ಷಣೆ ಮತ್ತು ಕಾರ್ಪೊರೇಟ್ ಕಾರುಬಾರಿನ ಸಚಿವಾಲಯವನ್ನೂ ನೀಡಿದರು. ಒಂದೇ ಏಟಿಗೆ ಒಟ್ಟು ನಾಲ್ಕು ಸಚಿವಾಲಯಗಳನ್ನು ಪಡೆದುಕೊಂಡರು. ಈಗಲೂ ಅವರ ಬಳಿ ಮೂರೂ ಖಾತೆಗಳಿವೆ. ನಾನೂ ಕೂಡ ಹಣಕಾಸು ಸಚಿವನಾಗಿದ್ದವನು. ಆ ಸಚಿವಾಲಯದಲ್ಲಿ ಎಷ್ಟು ಶ್ರಮ ಬೀಳಬೇಕೆನ್ನುವುದು ನನಗೆ ಗೊತ್ತಿದೆ. ಹಣಕಾಸು ಸಚಿವಾಲಯ ಸರಿಯಾಗಿ ಕಾರ್ಯನಿರ್ವಹಿಸಲು ಅದರ ಸಚಿವರು ತಮ್ಮೆಲ್ಲ ಗಮನವನ್ನು ಅತ್ತಲೇ ಕೇಂದ್ರೀಕರಿಸಬೇಕಾದ ಅವಶ್ಯಕತೆಯಿದೆ. ಸವಾಲಿನ ಸಮಯದಲ್ಲಿ ಇಲ್ಲಿನದು ೨೪/೭ ಗಿಂತಲೂ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಎಂದರದು ಅತಿಶಯೋಕ್ತಿಯೇನಲ್ಲ. ಸಹಜವಾಗಿ, ಜೇಟ್ಲಿಯಂತಹ ಸೂಪರ್ ಮ್ಯಾನ್ ಕೂಡ ಈ ಕಾರ್ಯದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. 
ಲಿಬರಲೈಸೇಶನ್ ನಂತರದ ದಿನಗಳಲ್ಲಿ ಅದೃಷ್ಟವಂತ ಹಣಕಾಸು ಸಚಿವನೆಂದರೆ ಅದು ಅರುಣ್ ಜೇಟ್ಲಿ! ಕ್ರೂಡ್ ಎಣ್ಣೆಯ ಬೆಳೆಗಳು ಜಾಗತಿಕ ಮಟ್ಟದಲ್ಲಿ ಕುಸಿದು ಹೋಗಿದ್ದು ಅವರ ಕೈಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡಿಬಿಟ್ಟಿತು. ಈ ಅನಿರೀಕ್ಷಿತ ಲಾಭವನ್ನು ಕ್ರಿಯಾತ್ಮಕವಾಗಿ ಬಲಕೊಳ್ಳಬೇಕಿತ್ತು. ಎಂದಿನ ಸಮಸ್ಯೆಗಳಾದ ನಿಂತುಹೋದ ಯೋಜನೆಗಳು ಮತ್ತು ಬ್ಯಾಂಕಿನ ಎನ್. ಪಿ. ಎ ಮೊತ್ತ ಈಗಲೂ ಇದ್ದಿದ್ದು ಹೌದು. ಆದರೆ ಕ್ರೂಡ್ ಎಣ್ಣೆಯಲ್ಲಿ ಸಿಕ್ಕ ಲಾಭವನ್ನು ಸದುಪಯೋಗ ಪಡಿಸಿಕೊಂಡು ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬಹುದಿತ್ತು. ಆದರೆ ಎಣ್ಣೆಯಿಂದ ಸಿಕ್ಕ ಲಾಭವನ್ನು ವ್ಯರ್ಥವಾಗಿಸಲಾಗಿದೆ ಮತ್ತು ಎಂದಿನ ಸಮಸ್ಯೆಗಳು ಮುಂದುವರಿದಿವೆ. ಮುಂದುವರಿದಿರುವುದಷ್ಟೇ ಅಲ್ಲ, ಹಿಂದಿಗಿಂತಲೂ ಹಾಳಾದ ಸ್ಥಿತಿಯಲ್ಲಿವೆ. 

ಹಾಗಿದ್ದರೆ ಇವತ್ತಿನ ಭಾರತೀಯ ಆರ್ಥಿಕತೆಯ ನೈಜ ಚಿತ್ರಣವೇನು? ಎರಡು ದಶಕಗಳಲ್ಲಿ ಕಾಣದಷ್ಟು ಮಟ್ಟಕ್ಕೆ ಖಾಸಗಿ ಬಂಡವಾಳ ಹೂಡಿಕೆ ಕುಸಿದು ಬಿದ್ದಿದೆ, ಉತ್ಪಾದನೆ ಕುಸಿದು ಹೋಗಿದೆ, ಕೃಷಿ ಸಂಕಷ್ಟದಲ್ಲಿದೆ, ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ನಿರ್ಮಾಣ ವಲಯವು ಡೋಲಾಯಮಾನ ಪರಿಸ್ಥಿತಿಯಲ್ಲಿದೆ, ಇತರೆ ಸೇವಾ ವಲಯಗಳೂ ಕುಂಟು ಗತಿಯಲ್ಲಿ ಸಾಗುತ್ತಿವೆ, ರಫ್ತಿನ ಪ್ರಮಾಣ ಕುಸಿದಿದೆ, ಆರ್ಥಿಕತೆಯ ಪ್ರತಿ ವಲಯವೂ ಏದುಸಿರುಬಿಡುತ್ತಿದೆ. ನೋಟು ರದ್ಧತಿಯು ತೀವ್ರವಾದ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ ಎನ್ನುವುದು ಸಾಬೀತಾಗಿದೆ, ಆತುರಾತುರದಿಂದ ಜಿ.ಎಸ್.ಟಿಯನ್ನು ಜಾರಿಗೆ ತಂದಿರುವುದು ವ್ಯಾಪಾರ ವಹಿವಾಟಿನಲ್ಲಿ ಬಿರುಗಾಳಿಯೆಬ್ಬಿಸಿದೆ, ಹಲವು ವ್ಯಾಪಾರಗಳು ಮುಳುಗೇ ಹೋಗಿವೆ, ಲೆಕ್ಕವಿಲ್ಲದಷ್ಟು ಲಕ್ಷಾಂತರ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ, ಶ್ರಮದ ಮಾರುಕಟ್ಟೆಗೆ ಕಾಲಿಡುತ್ತಿರುವವರಿಗೆ ಹೊಸ ಅವಕಾಶಗಳೇ ಇಲ್ಲ. ಆರ್ಥಿಕತೆಯ ವೃದ್ಧಿ ದರವು ಪ್ರತಿ ಕುಸಿತದ ಹಾದಿ ಹಿಡಿದಿದೆ. ಮೂರು ವರುಷದಲ್ಲೇ ಅತ್ಯಂತ ಕಡಿಮೆಯಾದ 5.7ಪರ್ಸೆಂಟಿಗೆ ಬೆಳವಣಿಗೆ ದರ ಕುಸಿದಿದೆ. ಸರಕಾರದ ವಕ್ತಾರರು ನೋಟು ರದ್ಧತಿಯು ಇದಕ್ಕೆ ಜವಾಬುದಾರವಲ್ಲ ಎಂದು ಹೇಳುತ್ತಿದ್ದಾರೆ. ಅವರು ಸರಿಯಾಗಿಯೇ ಹೇಳಿದ್ದಾರೆ. ಈ ಕುಸಿತವು ಇನ್ನೂ ಮುಂಚಿತವಾಗಿಯೇ ಪ್ರಾರಂಭವಾಗಿತ್ತು. ನೋಟು ರದ್ಧತಿಯು ಅದಕ್ಕೆ ಮತ್ತಷ್ಟು ಉರುವಲನ್ನು ನೀಡಿ ಕುಸಿತದ ವೇಗವನ್ನು ಹೆಚ್ಚಿಸಿತು. 

ಈ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ 2015ರಲ್ಲಿ ಜಿ.ಡಿ.ಪಿಯನ್ನು ಲೆಕ್ಕ ಹಾಕುವ ವಿಧಾನವೇ ಬದಲಾಯಿಸಲಾಗಿದೆಯೆನ್ನುವುದನ್ನು ಮರೆಯದೇ ಗಮನಿಸಬೇಕು. ಹಳೆಯ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಬೆಳವಣಿಗೆ ದರ 5.7 ಪ್ರರ್ಸೆಂಟಿನಷ್ಟಿಲ್ಲ, ಬದಲಿಗೆ 3.7 ಅಥವಾ ಅದಕ್ಕಿಂತ ಕಡಿಮೆಯಿದೆ. 

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್.ಬಿ.ಐ ಕೂಡ ಅಪರೂಪಕ್ಕೆ ತುಂಬಾ ನಿರ್ಬಿಡೆಯಿಂದ ಬೆಳವಣಿಗೆಯ ವೇಗ ತಗ್ಗಿರುವುದು ‘ತಾಂತ್ರಿಕ’ ಕಾರಣಗಳಿಗಾಗಿಯೂ ಅಲ್ಲ, ಮತ್ತಿದು ಕ್ಷಣಿಕವಾದದ್ದೂ ಅಲ್ಲ, ಇದು ಇನ್ನೂ ಬಹಳಷ್ಟು ದಿನಗಳವರೆಗೆ ಇಲ್ಲಿರಲಿದೆ, ಬೇಡಿಕೆಯಲ್ಲಿ ಕಡಿತವಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಹೇಳಿದೆ. ಬಿಜೆಪಿಯ ಅಧ್ಯಕ್ಷರು ಕೆಲವು ದಿನಗಳ ಹಿಂದೆ ಈ ಆರ್ಥಿಕ ಹಿಂಜರಿತಕ್ಕೆ ಕೆಲವು ‘ತಾಂತ್ರಿಕ’ ಕಾರಣಗಳಿವೆ ಮತ್ತವುಗಳನ್ನು ಶೀಘ್ರವಾಗಿ ಸರಿಪಡಿಸಲಾಗುವುದು ಎಂದು ಹೇಳಿದ್ದ ಮಾತುಗಳನ್ನು ಎಸ್.ಬಿ.ಐ ಬಹಿರಂಗವಾಗಿ ತಿರಸ್ಕರಿಸಿದೆ. ಎಸ್.ಬಿ.ಐ ಚೇರ್ಮನ್ ಪ್ರಕಾರ ಈ ಬಿಕ್ಕಟ್ಟಿಗೆ ಒಳಪಡುತ್ತಿರುವ ಹೊಸ ವಲಯವೆಂದರೆ ಟೆಲಿಕಾಂ ವಲಯ. 

ಈ ಕುಸಿತಕ್ಕಿರುವ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ ಮತ್ತಿವು ಇದ್ದಕ್ಕಿದ್ದಂತೆ ಮೂಡಿಬಿಟ್ಟ ಬಿಕ್ಕಟ್ಟುಗಳೂ ಅಲ್ಲ. ನಿಧಾನಕ್ಕೆ ಈ ಕಾರಣಗಳು ಸಾಂದ್ರಗೊಳ್ಳಲು ಅವಕಾಶ ನೀಡಲಾಯಿತು, ಸಾಂದ್ರಗೊಂಡ ಕಾರಣಗಳು ಇವತ್ತಿನ ಬಿಕ್ಕಟ್ಟಿಗೆ ಕಾರಣವಾದವು. ಇವುಗಳನ್ನು ಮುಂಚಿತವಾಗಿಯೇ ಮನಗಂಡು ಅವುಗಳನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಕಷ್ಟದ ಸಂಗತಿಯೇನಾಗಿರಲಿಲ್ಲ. ಆದರದಕ್ಕೆ ಸಮಯವನ್ನು ಮೀಸಲಿಡಬೇಕಿತ್ತು, ತಲೆಯನ್ನು ಸರಿಯಾಗಿ ಓಡಿಸಬೇಕಿತ್ತು, ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ನಿಭಾಯಿಸಲು ಸರಿಯಾದ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಅನೇಕ ಅಧಿಕ ಜವಾಬ್ದಾರಿಗಳನ್ನು ಹೊತ್ತುಕೊಂಡಿರುವ ವ್ಯಕ್ತಿಯಿಂದ ಇದನ್ನೆಲ್ಲ ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ. ಇದರ ಪರಿಣಾಮವೇನಾಯಿತು ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. 

ಪ್ರಧಾನ ಮಂತ್ರಿಗೆ ಚಿಂತೆಯಾಗಿದೆ. ಹಣಕಾಸು ಸಚಿವರು ಮತ್ತವರ ಅಧಿಕಾರಿಗಳ ಜೊತೆಗೆ ನಡೆಯಬೇಕಿದ್ದ ಪ್ರಧಾನ ಮಂತ್ರಿಗಳ ಸಭೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಂತೆ ತೋರುತ್ತದೆ. ಬೆಳವಣಿಗೆಯನ್ನು ಮತ್ತೆ ಸರಿದಾರಿಗೆ ತರಲು ಹಣಕಾಸು ಸಚಿವರು ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಈ ಪ್ಯಾಕೇಜಿಗಾಗಿ ನಾವೆಲ್ಲ ಉಸಿರು ಬಿಗಿಹಿಡಿದು ಕಾಯುತ್ತಿದ್ದೇವೆ. ಇಲ್ಲಿಯವರೆಗೂ ಏನೂ ಘೋಷಣೆಯಾಗಿಲ್ಲ. ಒಂದೇ ಹೊಸ ವಿಷಯವೆಂದರೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯನ್ನು ಪುನರ್ ರಚಿಸಲಾಗಿದೆ. ಐದು ಮಂದಿ ಪಾಂಡವರಂತೆ ಇವರು ಹೊಸ ಮಹಾಭಾರತ ಯುದ್ಧವನ್ನು ಗೆದ್ದು ಕೊಡುತ್ತಾರೆನ್ನುವುದು ನಿರೀಕ್ಷೆ. 

ಈ ವರ್ಷದ ಮುಂಗಾರು ಅಷ್ಟೇನೂ ಆಹ್ಲಾದಾಯಕವಾಗಿರಲಿಲ್ಲ. ಇದು ಗ್ರಾಮೀಣ ವಿಭಾಗದ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಲಿದೆ. ಕೆಲವು ರಾಜ್ಯ ಸರಕಾರಗಳು ರೈತರಿಗೆ ‘ದೊಡ್ಡ’ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಿದ್ದರೆ, ಕೆಲವೊಂದು ಪ್ರಕರಣಗಳಲ್ಲಂತೂ ಈ ಸಾಲ ಮನ್ನಾದ ಮೊತ್ತವು ಒಂದು ಪೈಸೆಯಿಂದ ಹಲವು ರುಪಾಯಿಗಳವರೆಗಿದೆ. ದೇಶದಲ್ಲಿ ಮುಂಚೂಣಿಯಲ್ಲಿರುವ ನಲವತ್ತು ಕಂಪನಿಗಳು ಈಗಾಗಲೇ ದಿವಾಳಿಯಂಚಿಗೆ ಬಂದು ನಿಂತಿವೆ. ಇನ್ನೂ ಹಲವು ಕಂಪನಿಗಳು ಇದೇ ದಾರಿ ಹಿಡಿಯುವುದು ನಿಶ್ಚಿತವಾಗಿದೆ. ಎಸ್.ಎಂ.ಇ ವಲಯವು (SME - Small and Medium sized enterprises) ಅಸ್ತಿತ್ವಕ್ಕಾಗಿಯೇ ಹೋರಾಡುವಂತಾಗಿದೆ. ಜಿ.ಎಸ್.ಟಿ ಅಡಿಯಲ್ಲಿ ತೆರಿಗೆ ಬೇಡಿಕೆಯು 65,000ಕೋಟಿ ಇದ್ದರೆ, ಸಂಗ್ರಹವಾಗಿರುವುದು 95,000 ಕೋಟಿ. ದೊಡ್ಡ ಮೊತ್ತವನ್ನು ನಮೂದಿಸಿದವರನ್ನು ಹುಡುಕಿ ತನಿಖೆ ನಡಿಸುವಂತೆ ಸರಕಾರವು ಆದಾಯ ತೆರಿಗೆ ಇಲಾಖೆಗೆ ಕೇಳಿಕೊಂಡಿದೆ. ಹಲವು ಕಂಪನಿಗಳಿಗೆ, ಅದರಲ್ಲೂ ಎಸ್.ಎಂ.ಇ ವಲಯದ ಕಂಪನಿಗಳಿಗೆ ಹಣದ ಹರಿಯುವಿಕೆಯ ಸಮಸ್ಯೆ ಈಗಾಗಲೇ ಉಂಟಾಗಿದೆ. ಇದೇ ಈಗಿನ ಹಣಕಾಸು ಸಚಿವಾಲಯದ ಕಾರ್ಯವೈಖರಿಯ ವಿಧಾನ. ವಿರೋಧ ಪಕ್ಷದಲ್ಲಿದ್ದಾಗ ನಾವು ‘ದಾಳಿಗಳನ್ನು’ ವಿರೋಧಿಸಿದ್ದೆವು. ಇವತ್ತು ಅದೇ ದಾಳಿಗಳೇ ದಿನನಿತ್ಯದ ವ್ಯವಹಾರವಾಗಿಬಿಟ್ಟಿದೆ. ನೋಟು ರದ್ಧತಿಯ ನಂತರದ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ಲಕ್ಷಾಂತರ ಪ್ರಕರಣಗಳನ್ನು ತನಿಖೆ ನಡೆಸುವ ಜವಾಬ್ದಾರಿಯನ್ನು ಹೊರಿಸಲಾಗಿದೆ, ಇದು ಮಿಲಿಯಾಂತರ ಜನರ ಭವಿಷ್ಯವನ್ನು ನಿರ್ಧರಿಸಲಿದೆ. ಇ.ಡಿ (Enforcement Directorate) ಮತ್ತು ಸಿ.ಬಿ.ಐನ ತಟ್ಟೆಗಳೂ ತುಂಬಿ ಹೋಗಿದೆ. ಜನರ ಮನಸ್ಸಲ್ಲಿ ಭೀತಿಯನ್ನುಟ್ಟಿಸುವುದೇ ಹೊಸ ಆಟವಾಗಿಬಿಟ್ಟಿದೆ. 

ಆರ್ಥಿಕತೆಯನ್ನು ಕಟ್ಟುವುದು ಕಷ್ಟ, ನಾಶಮಾಡುವುದು ಬಹು ಸುಲಭದ ಕೆಲಸ. ತೊಂಭತ್ತರ ದಶಕದ ಕೊನೆಯಲ್ಲಿ ಮತ್ತು ಎರಡು ಸಾವಿರದ ಪ್ರಾರಂಭದಲ್ಲಿ ನಾಲ್ಕು ವರ್ಷಗಳ ಶ್ರಮ ಹಾಕಿ ಆರ್ಥಿಕತೆಗೆ ಪುನಶ್ಚೇತನ ನೀಡಲಾಗಿತ್ತು. ಯಾರ ಬಳಿಯೂ ಆರ್ಥಿಕತೆಯನ್ನು ರಾತ್ರೋರಾತ್ರಿ ಸರಿಪಡಿಸಬಲ್ಲ ಮಾಯಾ ಕೋಲಿಲ್ಲ. ಇವತ್ತು ತೆಗೆದುಕೊಂಡ ನಿರ್ಣಯಗಳು ತಮ್ಮ ಪರಿಣಾಮವನ್ನು ತೋರಿಸಲು ತಮ್ಮದೇ ಸಮಯವನ್ನು ಬೇಡುತ್ತವೆ. ಮುಂದಿನ ಲೋಕಸಭಾ ಚುನಾವಣೆಯಷ್ಟೊತ್ತಿಗೆ ಆರ್ಥಿಕತೆಯು ಪುನಶ್ಚೇತನಗೊಳ್ಳುವುದು ದೂರದ ಮಾತೆಂದೇ ತೋರಲಾರಂಭಿಸಿದೆ. ದೊಡ್ಡ ಹೊಡೆತವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವೆನ್ನುವಂತಾಗಿದೆ. ಸುಳ್ಳು ಮತ್ತು ಬಡಾಯಿಗಳು ಚುನಾವಣಾ ವೇದಿಕೆಗಳಿಗೆ ಸೂಕ್ತ, ಆದರವು ವಾಸ್ತವಕ್ಕೆದುರಾದಾಗ ಆವಿಯಾಗಿಬಿಡುತ್ತದೆ. 

ಪ್ರಧಾನ ಮಂತ್ರಿಗಳು, ನಾನು ಬಡತನವನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಭಾರತದ ಎಲ್ಲಾ ನಾಗರೀಕರೂ ಬಡತನವನ್ನು ಹತ್ತಿರದಿಂದ ನೋಡಲನುವಾಗುವಂತೆ ಅವರ ಹಣಕಾಸು ಸಚಿವರು ಹಗಲಿರುಳೂ ದುಡಿಯುತ್ತಿರುವಂತಿದೆ.

1 comment: