Oct 15, 2016

ನಮ್ಮ ಹಳ್ಳಿಗಳು: ಜಾತಿ ಪೋಷಣೆಯ ಮತ್ತು ಶೋಷಣೆಯ ಕೇಂದ್ರಗಳು!



ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪೀಠಿಕೆ:

ಜಾತಿ ಎನ್ನುವುದು ಇಂಡಿಯಾದ ಮಟ್ಟಿಗೆ ಒಂದು ಕ್ರೂರ ವಾಸ್ತವ!ವೇದಕಾಲದ ವರ್ಣಾಶ್ರಮ ವ್ಯವಸ್ಥೆಯೇ ಇದರ ಮೂಲವಾಗಿದೆ. ಈ ವರ್ಣ ವ್ಯವಸ್ಥೆಯಲ್ಲಿ ನಾಲ್ಕು ವರ್ಣಗಳನ್ನು. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ಗುರುತಿಸಲಾಗಿದೆ. ಹೀಗೆ ಅನಾದಿಕಾಲದಿಂದಲೂ ಭಾರತೀಯ ಸಮಾಜವನ್ನು ವರ್ಣಗಳ ಹೆಸರಲ್ಲಿ ಒಡೆದ ಮಹನೀಯರುಗಳಿಗೆ ಐದನೆಯದಾದ ದಲಿತ ಎನ್ನುವ ಸಮುದಾಯ ಸಹ ಮನುಷ್ಯರನ್ನೊಳಗೊಂಡಿದೆ ಎಂದು ಅನಿಸದೇ ಹೋದದ್ದೇ ಈ ನೆಲದ ದುರಂತ.

ಇಲ್ಲಿ ಜಾತಿಯೆನ್ನುವುದು ವ್ಯಕ್ತಿಯ ಹುಟ್ಟಿನ ಮೂಲವನ್ನು, ಅವನ ಕುಲಕಸುಬನ್ನೂ ಅವಲಂಬಿಸಿ ಗುರುತಿಸಲಾಗುತ್ತಿದೆ. ಇವತ್ತಿಗೂ ಇಂಡಿಯಾದ ಹಳ್ಳಿಗಳಲ್ಲಿ ಜಾತಿಯೆನ್ನುವುದು ಪ್ರತಿ ವ್ಯಕ್ತಿಯ ಬದುಕಲ್ಲಿಯೂ ಮಹತ್ತರ ಪಾತ್ರ ವಹಿಸುತ್ತಿದೆ. ಅಷ್ಟಲ್ಲದೆ ವ್ಯಕ್ತಿಯೊಬ್ಬನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಸಹ ಜಾತಿಯ ಆಧಾರದಿಂದಲೇ ಅಳೆಯಲಾಗುತ್ತಿದೆ. ಯಾಕೆಂದರೆ ಒಂದು ಹಳ್ಳಿಯ ಮಟ್ಟಿಗೆ ವ್ಯಕ್ತಿಯೊಬ್ಬನ ಜಾತಿಯೇ ಅವನ ಕಸುಬನ್ನು, ಅವನು ಬದುಕುವ ಬಗೆಯನ್ನು ನಿರ್ದರಿಸುವ ಮಾನದಂಡವಾಗಿ ಪರಿವರ್ತನೆಯಾಗಿದೆ. ಹೀಗಾಗಿ 21ನೇ ಶತಮಾನದ ಆಧುನಿಕ ದಿನಮಾನದಲ್ಲಿಯೂ ನಮ್ಮ ಹಳ್ಳಿಗಳು ಜಾತಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಜಾತಿಯ ಆಧಾರದ ಮೇಲೆ ಜನಸಮುದಾಯವನ್ನು ಶೋಷಿಸುವ ಕೇಂದ್ರಗಳಾಗಿಯೇ ಉಳಿದಿದೆ.

ಜಾತಿಗಳ ವರ್ಗೀಕರಣ
ಈ ಹಿನ್ನೆಲೆಯಲ್ಲಿ ನಾವಿವತ್ತು ಕರ್ನಾಟಕದ ವ್ಯಾಪ್ತಿಯಲ್ಲಿರುವ ಜಾತಿಗಳನ್ನು ವರ್ಗೀಕರಿಸಿ ನೋಡಬೇಕಾಗಿದೆ: ಜಾತಿಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಬಾವಗಳ ಹಿನ್ನೆಲೆಯಲ್ಲಿ ನಮ್ಮಲ್ಲಿರುವ ಜಾತಿಗಳನ್ನು ಮೂರು ಪ್ರಮುಖ ಗುಂಪುಗಳನ್ನಾಗಿ ವಿಂಗಡಿಸಿ ನೋಡಬಹುದು:

1.ಪ್ರತಿಷ್ಠಿತ ಜಾತಿಗಳು( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ)
2.ಮಧ್ಯಮಸ್ತರದ ಹಿಂದುಳಿದ ಜಾತಿಗಳು( ಶೂದ್ರ)
3. ದಲಿತ ಸಮುದಾಯ

ಪ್ರತಿಷ್ಠಿತ ಜಾತಿಗಳು

ತಾವು ವಾಸಿಸುವ ನಿರ್ದಿಷ್ಟ ಸ್ಥಳದಲ್ಲಿ ಹೆಚ್ಚು ಸಂಖ್ಯಾಬಲ ಹೊಂದಿರುವ ಮತ್ತು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯವಾಗಿರುವ ಜಾತಿಗಳನ್ನು ನಾವು ಈ ಗುಂಪಿಗೆ ಸೇರಿಸಬಹುದು. ಈ ಪ್ರತಿಷ್ಠಿತ ಜಾತಿಗಳು ಆರ್ಥಿಕವಾಗಿ ಬಲಾಢ್ಯವಾದವಾಗಿರುತ್ತವೆ. ಹಳ್ಳಿಗಳ ಮಟ್ಟಿಗೆ ಇವು ಭೂಮಿಯ ಒಡೆತನ ಹೊಂದಿರುತ್ತವೆ. ಭೂಮಿಯೆನ್ನುವುದು ಆರ್ಥಿಕವಾಗಿ ಬಲಿಷ್ಠವಾಗಿರುವ ಸಂಕೇತವಾಗಿದ್ದು ಅದು ಹಳ್ಳಿಯ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿರುತ್ತದೆ. ಜೊತೆಗೆ ಸ್ಥಳೀಯವಾಗಿ ರಾಜಕೀಯ ಅಧಿಕಾರವನ್ನು ಹೊಂದಿರುತ್ತವೆ. ಹಳ್ಳಿಯ ಮಟ್ಟಿಗೆ ಈ ಜಾತಿಗಳು ಸ್ಥಳೀಯವಾದ ಎಲ್ಲ ಸಾಂಸ್ಕೃತಿಕ,ಧಾರ್ಮಿಕ ಮತ್ತು ರಾಜಕೀಯ ಆಗುಹೋಗುಗಳನ್ನು ನಿರ್ದೇಶಿಸುವ ಶಕ್ತಿ ಪಡೆದಿರುತ್ತವೆ. ತಮಗಿಂತ ಕೆಳಮಟ್ಟದಲ್ಲಿರುವ ಜಾತಿಗಳು ತಾವು ಹೇಳಿದಂತೆ ಕೇಳಬೇಕೆಂಬ ಹಟಮಾರಿ ಧೋರಣೆ ಹೊಂದಿದ್ದು, ಇದನ್ನು ಮೀರಿದ ತಳಜಾತಿಗಳಿಗೆ ಕಠಿಣ ಶಿಕ್ಷೆಯನ್ನೂ ಕೊಡುವ ಸ್ವಘೋಷಿತ ಅಧಿಕಾರವನ್ನೂ ಹೊಂದಿರುತ್ತವೆ. ಸ್ಥಳೀಯವಾಗಿ ಲಭ್ಯವಿರುಬಹುದಾದ ಪ್ರಾಕೃತಿಕ ಸಂಪನ್ಮೂಲಗಳ ಮೇಲೂ ಇವು ತಮ್ಮ ಹಕ್ಕು ಚಲಾಯಿಸುತ್ತವೆ. ಕರ್ನಾಟಕದ ಮಟ್ಟಿಗೆ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಈ ಗುಂಪಿನಲ್ಲಿ ಸೇರುತ್ತವೆ. ಇವುಗಳ ಜೊತೆಗೆ ಶೈಕ್ಷಣಿಕವಾಗಿ ಮುಂದುವರೆದು ಅಧಿಕಾರದ ಕುರ್ಚಿಗೆ ಸದಾ ಹತ್ತಿರವಿರುವ ಬ್ರಾಹ್ಮಣ ಸಮುದಾಯವನ್ನೂ ನಾವು ಸೇರಿಸಬಹುದಾಗಿದೆ. ಒಟ್ಟಿನಲ್ಲಿ ಈ ಪ್ರತಿಷ್ಠಿತ ಜಾತಿಗಳು, ತಮ್ಮ ಹಳ್ಳಿಯ ಮಟ್ಟಿಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಾಗಿ ಕೆಲಸ ನಿರ್ವಹಿಸುತ್ತಿರುತ್ತವೆ.

(ಕೆಲವೊಮ್ಮೆ ತಮ್ಮ ಹಳ್ಳಿಗಳಲ್ಲಿ ಹೆಚ್ಚು ಸಂಖ್ಯಾಬಲವನ್ನು ಹೊಂದಿರುವ ಹಿಂದುಳಿದ ವರ್ಗದ ಜಾತಿಗಳು ಅನಾಯಾಸವಾಗಿ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳನ್ನು ಪಡೆದು ಅಪರೋಕ್ಷವಾಗಿ ಪ್ರತಿಷ್ಠಿತ ಜಾತಿಗಳ ರೀತಿಯಲ್ಲಿ ವರ್ತಿಸ ತೊಡಗುವುದೂ ಉಂಟು). ಕಳೆದ ವರ್ಷ ನಡೆದ ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯ ಸೋರಿಕೆಯಾದ ಅಂಕಿಅಂಶಗಳನ್ನೇ ನಂಬುವುದಾದರೆ ಕರ್ನಾಟಕದ ಒಟ್ಟು ಜನಸಂಖ್ಯೆ ಶೇಕಡಾ 21 ರಷ್ಟು ಈ ಪ್ರತಿಷ್ಠಿತ ಜಾತಿಗಳಿವೆ. ಆದರೆ ಈ ಗಣತಿಗು ಮುಂಚೆ ನಮಗೆ ನೀಡಲಾಗುತ್ತಿದ್ದ ಅಂಕಿಅಂಶಗಳ ಪ್ರಕಾರ ಈ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 32ರಷ್ಟಿದ್ದವು ಎಂದು ಬಾವಿಸಲಾಗಿತ್ತು.

ಹಿಂದುಳಿದ ಜಾತಿಗಳು.
ಇನ್ನು ಸಮಾಜದ ಎರಡನೇ ಸ್ತರದಲ್ಲಿ ಹಿಂದುಳಿದ ಜಾತಿಗಳಿರುತ್ತವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಈ ಗುಂಪಿನಲ್ಲಿರುವ ಜಾತಿಗಳು ಕೂಡ ಕೃಷಿಯನ್ನು ಮತ್ತು ಪಶುಸಂಗೋಪನೆಗಳನ್ನು ಹಾಗು ಕೃಷಿಗೆ ಪೂರಕವಾದ ಇನ್ನಿತರೆ ವೃತ್ತಿಗಳನ್ನು ಅನಾದಿಕಾಲದಿಂದಲೂ ಮಾಡುತ್ತ ಬಂದವಾಗಿದ್ದು. ಮೊದಲ ಸ್ತರದ ಪ್ರತಿಷ್ಠಿತ ಜಾತಿಗಳ ನಿರ್ದೇಶನದಂತೆಯೇ ನಡೆದುಕೊಳ್ಳಬೇಕಾಗಿರುತ್ತದೆ. ಇವು ಪ್ರತಿಷ್ಠಿತ ಜಾತಿಗಳ ಕೆಳಗಿನ ಆದರೆ ದಲಿತ ಸಮುದಾಯಕ್ಕಿಂತ ಮೇಲಿನ ಸ್ಥಾನದಲ್ಲಿರುತ್ತವೆ. ಪ್ರತಿಷ್ಠಿತ ಜಾತಿಗಳಿಗೆ ಇವು ಸ್ಪಶ್ರ್ಯವಾಗಿರುತ್ತವೆ. ಕರ್ನಾಟಕದ ಮಟ್ಟಿಗೆ ಬಹುಮುಖ್ಯವಾಗಿ ಕುರುಬರು, ಕಮ್ಮಾರರು, ಕುಂಬಾರರು, ದೇವಾಂಗದವರು,ಗಂಗಾ ಮತಸ್ಥರು, ಉಪ್ಪಾರರು ಮುಂತಾದವರಿದ್ದು ಆರ್ಥಿಕವಾಗಿ ಅಷ್ಟೇನು ಸಬಲರಲ್ಲದ ಆದರೆ ಮೂರನೆ ಸ್ತರದ ಸಮುದಾಯಕ್ಕಿಂತ ಕೊಂಚ ಬಲಿಷ್ಠರಾಗಿರುತ್ತಾರೆ. ನಾನು ಈ ಹಿಂದೆ ಹೇಳಿದಂತೆ ಎಲ್ಲೆಲ್ಲಿ ಇವರ ಜನಸಂಖ್ಯೆ ಅಧಿಕವಾಗಿರುತ್ತದೆಯೊ ಅಲ್ಲಿ ಈ ಜಾತಿಗಳು ಆರ್ಥಿಕವಾಗಿ ಪ್ರಬಲವಾಗಿದ್ದು ರಾಜಕೀಯ ಅಧಿಕಾರವನ್ನೂ ಪಡೆದು ಪ್ರತಿಷ್ಠಿತ ಜಾತಿಗಳ ದರ್ಪವನ್ನು ತೋರಿಸುತ್ತಿರುತ್ತವೆ.ಮೂರನೆಯ ದಲಿತ ವರ್ಗ ಮಾತ್ರ ಮೇಲಿನ ಎರಡೂ ವರ್ಗಗಳ ಕೆಳಗೆ ಬದುಕಬೇಕಾದ ಅನಿವಾರ್ಯತರೆಗೆ ಸಿಲುಕಿರುತ್ತದೆ.

ದಲಿತ ಸಮುದಾಯ
ಮೂರನೆ ಗುಂಪಿನಲ್ಲಿ ಬರುವ ದಲಿತರು ಸಮಾಜದ ಅತ್ಯಂತ ಕೆಳಸ್ತರದಲ್ಲಿದ್ದು ತೀರಾ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಇವರು ಅಸ್ಪೃಶ್ಯರಾಗಿದ್ದು, ಭಾರತೀಯ ಸಮಾಜದ ವರ್ಣ ವ್ಯವಸ್ಥೆಯಲ್ಲಿ ಇವರುಗಳ ಅಸ್ಥಿತ್ವವೇ ಇರಲಿಲ್ಲ. ಸರಕಾರವು ಇವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗವೆಂದು ಅಧಿಕೃತವಾಗಿ ಗುರುತಿಸಿದೆ. ಮೇಲಿನ ಎರಡೂ ವರ್ಗಗಳ ಹಿಡಿತದಲ್ಲಿರುವ ಈ ಜಾತಿಗಳು ಸಮಾಜದ ಉಳಿದ ವರ್ಗಗಳು ಮಾಡಲು ಹಿಂಜರಿಯುವಂತಹ ಕಸುಬುಗಳನ್ನು ಮಾಡಬೇಕಾಗಿದೆ. ತಲೆಯ ಮೇಲೆ ಮಲ ಹೊರುವ, ಚರ್ಮ ಹದಮಾಡುವ,ಹಳ್ಳಿಗಳಲ್ಲಿ ಚರಂಡಿಗಳನ್ನು ಸ್ವಚ್ಚ ಮಾಡುವ, ಸತ್ತ ಪ್ರಾಣಿಗಳನ್ನು ವಿಲೇವಾರಿ ಮಾಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಬಹುತೇಕ ಹಳ್ಳಿಗಳಲ್ಲಿ ಇವತ್ತಿಗೂ ಈ ವರ್ಗ ಊರಾಚೆಗೆ ವಾಸ ಮಾಡುತ್ತಿದೆ. ತನ್ನದೇ ಆದ ಪ್ರತ್ಯೇಕ ಕಾಲೋನಿಗಳನ್ನು ಕಟ್ಟಿಕೊಂಡು ಅದರ ಪರಿಧಿಯೊಳಗೆ ವಾಸ ಮಾಡುವ ಅನಿವಾರ್ಯತೆ ಇದೆ.ಇವತ್ತಿಗೂ ಅವರನ್ನು ಸಮಾಜದ ಮುಖ್ಯಪ್ರವಾಹದಿಂದ ದೂರ ಇಡಲಾಗಿದೆ. ಸರಕಾರದ ಅಂಕಿಅಂಶಗಳೇ ಹೇಳುವಂತೆ ಇವತ್ತಿಗೂ ಶೇಕಡಾ 70ರಷ್ಟು ದಲಿತರು ಬಡತನದ ರೇಖೆಗಿಂತ ಕೆಳಗೆಯೇ ಬದುಕು ಸಾಗಿಸುತ್ತಿದ್ದಾರೆ.

ಇವತ್ತಿಗೂ ಹಳ್ಳಿಗಳ ಮೇಲ್ಜಾತಿಗಳು ಕೆಳಜಾತಿಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತ ಬರುತ್ತಿವೆ. ನಾನು ಮೊದಲೇ ಹೇಳಿದಂತೆ ಹಳ್ಳಿಗಳಲ್ಲಿ ಪ್ರಬಲವಾದ ಜಾತಿಗಳು ದಲಿತರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡುವ ಪರಿಸ್ಥಿತಿಯಿದೆ. ಹಳ್ಳಿಗಳಿವತ್ತು ಜಾತಿಯ ಪೋಷಣೆ ಮಾತ್ರವಲ್ಲದೆ ಶೋಷಣೆಯ ಕೇಂದ್ರಗಳೂ ಆಗಿವೆ. ಜಾತಿಕಾರಣಕ್ಕೆ ಹಿಂದುಳಿದ ಮತ್ತು ದಲಿತರ ಮೇಲಾಗುತ್ತಿರುವ ಹಲ್ಲೆಗಳಿಗೆ ಎರಡು ಆಯಾಮಗಳಿವೆ. ಮೊದಲನೆಯದು ನಮ್ಮ ಹಳ್ಳಿಗಳು ಸಾಂಪ್ರದಾಯಿಕವಾಗಿ ನಂಬಿಕೊಂಡು, ಆಚರಿಸಿಕೊಂಡು ಬಂದ ಅಸ್ಪೃಶ್ಯತೆಯ ಕಾರಣದಿಂದ ಆಗುವುದು. ಇನ್ನು ಎರಡನೆಯದು,ಸ್ವಾತಂತ್ರಾನಂತರದಲ್ಲಿ ಈ ಕೆಳಜಾತಿಗಳು ತಮಗೆ ದೊರೆತ ಅಲ್ಪಶಿಕ್ಷಣದ ಕಾರಣದಿಂದ ಎಚ್ಚೆತ್ತು ತಮ್ಮ ಹಕ್ಕುಗಳಿಗಾಗಿ ನಡೆಸಲು ಪ್ರಾರಂಭಿಸಿದ ಹೋರಾಟಗಳಿಂದ ಮೇಲ್ಜಾತಿಯವರಲ್ಲಿ ಮೂಡಿದ ಅಸಹನೆಯ ಕಾರಣದಿಂದ ನಡೆಯುವ ಹಲ್ಲೆಗಳು.

ಸಾಂಪ್ರದಾಯಿಕ ನಂಬಿಕೆಗಳ ಕಾರಣದ ಹಲ್ಲೆಗಳು:
ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದ ಇಂತಹ ಹಲ್ಲೆಗಳು ಈ ದೇಶದ ಹಿಂದೂ ಧರ್ಮದ ಅವಿಬಾಜ್ಯ ಅಂಗವಾಗಿದ್ದಂತವು. ಇಂತಹ ಹಲ್ಲೆಗಳನ್ನು ಧಿಕ್ಕರಿಸಿ, ಪ್ರತಿರೋಧ ತೋರತೊಡಗಿದ ಹೊಸಪೀಳಿಗೆಯ ದಲಿತರ ಇಂತಹ ನಡೆಗಳು ಹೊಸದೊಂದು ಚಳುವಳಿಗೆ ನಾಂದಿ ಹಾಡಿದವು.

ವಸತಿಯ ಸಮಸ್ಯೆ: ಯಾವುದೇ ದಲಿತ ಕುಟುಂಬ ಮೇಲ್ಜಾತಿಗಳು ವಾಸ ಮಾಡುವ ಕೇರಿಗಳಲ್ಲಿ ಮನೆ ಮಾಡಿ ಬದುಕುವಂತಿಲ್ಲ. ದಲಿತರಿರಲಿ ಇವತ್ತಿಗೂ ನಮ್ಮ ಹಲವು ಹಳ್ಳಿಗಳಲ್ಲಿ ಪ್ರತಿಜಾತಿಗೂ ಒಂದೊಂದು ಕೇರಿಗಳಿದ್ದು ಅವು ಅಲ್ಲಿಯೇ ವಾಸ ಮಾಡಬೇಕಾಗಿದೆ. ಮೇಲ್ಜಾತಿಗಳ ಕೇರಿಯಿರುವಂತೆ ಇದೀಗ ಆಯಾ ಜಾತಿಗಳಿಗೊಂದರಂತೆ ಒಂದೊಂದು ಕೇರಿಗಳು ಸೃಷ್ಠಿಯಾಗಿದ್ದು ಅವು ಅವುಗಳ ಮಿತಿಯಲ್ಲೇ ಬದುಕು ನಡೆಸ ಬೇಕಿದೆ. ಇನ್ನು ದಲಿತರಂತು ಊರಾಚೆಗೆ ತಮ್ಮದೇ ಆದ ಪ್ರತ್ಯೇಕ ಕಾಲೋನಿಗಳಲ್ಲಿಯೇ ವಾಸ ಮಾಡುವ ಸ್ಥಿತಿಯಿದೆ. ಇದೀಗ ಸರಕಾರಗಳು ದಲಿತರಿಗೆ ನೀಡುವ ಆಶ್ರಯ ಮನೆಗಳನ್ನು ಸಹ ಊರಾಚೆಯಲ್ಲಿಯೇ ಕಟ್ಟಿಕೊಳ್ಳಬೇಕಾಗಿದೆ. ಇವತ್ತಿಗೂ ಊರೊಳಗೆ ಸರಕಾರಿ ನಿವೇಶನಗಳಿದ್ದರೂ ಪಂಚಾಯಿತಿಗಳು ಅವನ್ನು ದಲಿತರಿಗೆ ಮಂಜೂರು ಮಾಡುವುದಿಲ್ಲ. ಬದಲಿಗೆ ಅದಕ್ಕೆಂದೇ ನಿಗದಿ ಪಡಿಸಿರುವ ಊರಾಚೆಗಿನ ನಿವೇಶನಗಳನ್ನು ತೋರಿಸಿ ಅಲ್ಲಿ ಸರಕಾರಿ ಮನೆಗಳನ್ನು ಕಟ್ಟಿಕೊಳ್ಳಲು ಆದೇಶಿಸುತ್ತವೆ.

ಕುಡಿಯುವ ನೀರಿನ ಸಮಸ್ಯೆ: ದಲಿತರು ಬಹಳಷ್ಟು ಕುಡಿಯಲು ಶುದ್ದವಾದ ನೀರನ್ನು ಪಡೆಯಲು ಸಾಹಸ ಮಾಡಬೇಕಾದ ಸ್ಥಿತಿಯಿದೆ. ಸವರ್ಣಿಯರ ಕೇರಿಯಲ್ಲಿರುವ ಬಾವಿಗಳಲ್ಲಾಗಲಿ, ಬೋರುವೆಲ್ಲುಗಳಲ್ಲಾಗಲಿ ದಲಿತರು ನೀರು ಮುಟ್ಟುವಂತಿಲ್ಲ ಬದಲಿಗೆ ಅವರ ಕೇರಿಯಲ್ಲಿ ಇರುವ ನೀರಿನ ಮೂಲಗಳಿಂದಲೇ ನೀರು ಪಡೆಯಬೇಕಾಗಿದೆ. ಇನ್ನು ಊರಿನ ಸಾರ್ವಜನಿಕ ಕೆರೆಗಳಿಗೂ ಅವರು ನಿಷಿದ್ದರಾಗಿದ್ದಾರೆ. ಊರಿನ ಸಕಲ ಪ್ರಾಣಿಗಳೂ ಆ ಕೆರೆಯಲ್ಲಿ ಸ್ನಾನ ಮಾಡಿ ಗಲೀಜು ಮಾಡುತ್ತಿದ್ದರೂ ಸರಿಯೇ, ದಲಿತರು ಮಾತ್ರ ಆ ಕೆರೆಯ ನೀರನ್ನು ಮುಟ್ಟುವಂತಿಲ್ಲ. ಹೀಗೆ ನೀರಿನ ವಿಚಾರದಲ್ಲಿಯೂ ದಲಿತರು ಪ್ರಾಣಿಗಳಿಗಿಂತ ಕಡೆಯಾಗಿ ಹೋಗಿರುವ ಪರಿಸ್ಥಿತಿ ನಮ್ಮ ಹಳ್ಳಿಗಳಲ್ಲಿದೆ.

ಸಾರ್ವಜನಿಕ ದೇವಾಲಯಗಳು ಮತ್ತು ಜಾತ್ರೆಗಳು: ಊರಿನ ಎಲ್ಲ ಜನರ ಶ್ರಮದಿಂದ ಕಟ್ಟಲ್ಪಟ್ಟ ದೇವಸ್ಥಾನಗಳಿಗೆ ಇವತ್ತಿಗೂ ದಲಿತರು ಒಳಗೆ ಹೋಗುವಂತಿಲ್ಲ. ಅದೇ ರೀತಿ ಊರಲ್ಲಿ ನಡೆಯುವ ಜಾತ್ರೆಗಳ ಆಚರಣೆಗಳಲ್ಲಿಯೂ ದಲಿತರು ಸಕ್ರಿಯವಾಗಿ ಪಲ್ಗೊಳ್ಳುವಂತಿಲ್ಲ. ಜಾತ್ರೆಯ ದಿನಾಂಕ, ಸ್ಥಳ ಇತ್ಯಾದಿ ವಿವರಗಳನ್ನು ತಿಳಿಸುವ ಸಲುವಾಗಿ ತಮಟೆ ಬಾರಿಸಿ ಸುತ್ತಲಿನ ಹತ್ತೂರುಗಳಿಗೆ ತಮಟೆ ಬಾರಿಸಿ ಹೇಳಲು ಮಾತ್ರ ದಲಿತರು ಬಳಕೆಯಾಗುತ್ತಿದ್ದಾರೆ. ಇಂತಹ ಜಾತ್ರೆಗಳಲ್ಲಿ ನಡೆಯುವ ದಾಸೋಹದ ಪಂಕ್ತಿಗಳಲ್ಲಿಯೂ ದಲಿತರು ಗೌರವಯುತವಾಗಿ ಕೂತು ಉಣ್ಣುವಂತಿಲ್ಲ. ಬದಲಿಗೆ ಮೇಲ್ಜಾತಿಗಳ ಊಟ ಮುಗಿದ ನಂತರ ಅವರುಗಳು ಎಸೆಯುವ ಉಳಿದದ್ದನ್ನು ಮನೆಗೆ ತೆಗೆದುಕೊಂಡು ಹೋಗಿ ದಲಿತರು ತಿನ್ನಬೇಕಾಗಿದೆ. ಕೆಲವು ವರ್ಷಗಳ ಹಿಂದೆ ಮಂಡ್ಯದ ಹಳ್ಳಿಯೊಂದರಲ್ಲಿ ದಲಿತರು ಮೇಲ್ಜಾತಿಯವರ ಕಾರ್ಯಕ್ರಮವೊಂದಕ್ಕೆ ತಮಟೆ ಬಡಿಯಲಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿ ಬಹಿಷ್ಕಾರ ಹಾಕಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಕಡಿಮೆ ಕೂಲಿ ಹೆಚ್ಚು ಕೆಲಸ: ಮೇಲ್ಜಾತಿಯವರ ಮನೆ ಮತ್ತು ಜಮೀನುಗಳಲ್ಲಿ ದುಡಿಯುವ ದಲಿತರು ಆ ಕೆಲಸವನ್ನು ತಪ್ಪಿಸಿಕೊಳ್ಳುವವಂತಿಲ್ಲ. ಮತ್ತು ನ್ಯಾಯಯುತ ಕೂಲಿಯನ್ನೂ ಕೇಳುವಂತಿಲ್ಲ. ಮೇಲ್ಜಾತಿಗಳು ಕೊಡುವ ಕೂಲಿಯನ್ನು ಮರುಮಾತಾಡದೆ ಪಡೆಯಬೇಕಾದ ಸನ್ನಿವೇಶ ಇವತ್ತಿಗೂ ಹಲವು ಹಳ್ಳಿಗಳಲ್ಲಿವೆ. ಇಲ್ಲಿ ಸರಕಾರದ ಕನಿಷ್ಠ ಕೂಲಿಯ ಕಾನೂನುಗಳು ಅನ್ವಯವಾಗುವುದೇ ಇಲ್ಲ. 

ಸಾಲ ಮತ್ತು ಜೀತ: ಇವತ್ತು ಕಾನೂನು ಮತ್ತು ಸರಕಾರಗಳ ಪ್ರಕಾರ ಈ ಜೀತಪದ್ದತಿ ಕಡಿಮೆಯಗಿದೆ ಎಂದು ಹೇಳಿದರು ಸಹ ಪರೋಕ್ಷವಾಗಿ ಇದು ಇವತ್ತಿಗೂ ಚಾಲ್ತಿಯಲ್ಲಿದೆ. ದಲಿತನೊಬ್ಬನ ಮನೆಯ ಹುಟ್ಟು ಮದುವೆ, ಸಾವುಗಳಿಗೆ ಆತ ಮೇಲ್ಜಾತಿಯವರಲ್ಲಿ ಮಾಡಿದ ಸಾಲದ ಬಾಕಿ ತೀರಿಸಲು ಆತನ ಮನೆಯ ಮಕ್ಕಳು ಮೇಲ್ಜಾತಿಗಳ ಮನೆಯಲ್ಲಿ ಜೀತ ಮಾಡಬೇಕಾದ ಸ್ಥಿತಿಯಿದೆ. ಇಂತಹ ಸಾಲಗಳು ವ್ಯಕ್ತಿ ಸತ್ತರೂ ಆತನ ಮುಂದಿನ ಪೀಳಿಗೆಗೆ ಮುಂದುವರೆಯುತ್ತಲೇ ಹೋಗುತ್ತದೆ.

ಸಾವಿನಲ್ಲೂ ಅಸ್ಪೃಶ್ಯತೆ: ಇವತ್ತಿಗೂ ಬಹಳಷ್ಟು ಹಳ್ಳಿಗಳಲ್ಲಿ ದಲಿತರಿಗೆಂದು ಪ್ರತ್ಯೇಕ ಸ್ಮಶಾನಗಳಿಲ್ಲ. ಬದಲಿಗೆ ಪ್ರತಿಹಳ್ಳಿಗೂ ಹಿಂದೂ ಸ್ಮಶಾನವೆಂದು ಒಂದಷ್ಟು ಜಾಗ ಮೀಸಲಾಗಿರುತ್ತದೆ. ಹೆಸರಿಗಷ್ಟೇ ಅದು ಹಿಂದೂ ಸ್ಮಶಾನವಾಗಿದ್ದು, ದಲಿತರ ಹೆಣ ಹೂಳಲು ಅಲ್ಲಿ ಮೇಲ್ಜಾತಿಯವರು ಅವಕಾಶ ನೀಡುವುದಿಲ್ಲ. ಈ ಹೆಣ ಹೂಳುವ ಹಕ್ಕುಗಳಿಗಾಗಿಯೂ ದಲಿತರು ಮೇಲ್ಜಾತಿಗಳ ಜೊತೆ ಸೆಣೆಸಬೇಕಾಗಿದೆ.

ಶಾಲೆಗಳ ಪ್ರವೇಶ: ದಲಿತರಿಗೆ ಈ ಹಿಂದಿನಿಂದಲೂ ಶಿಕ್ಷಣದ ಅವಕಾಶವನ್ನೇ ನಿರಾಕರಿಸುತ್ತ ಬಂದಿರುವ ಮೇಲ್ಜಾತಿಗಳು ಇವತ್ತಿಗೂ ಸರಕಾರಿ ಶಾಲೆಗಳಲ್ಲಿ ದಲಿತ ಮಕ್ಕಳಿಗೆ ನ್ಯಾಯಯುತ ಸಮಾನ ಶಿಕ್ಷಣ ದೊರೆಯಲು ಬಿಡುತ್ತಿಲ್ಲ. ಮೇಲ್ಜಾತಿಗಳ ಶಿಕ್ಷಕರುಗಳು ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸುವುದು ಮತ್ತು ಶಾಲೆಯ ಪ್ರಮುಖ ಚಟುವಟಿಕೆಗಳಲ್ಲಿ, ಕ್ರೀಡೆಗಳಲ್ಲಿ ದಲಿತ ಮಕ್ಕಳಿಗೆ ಅವಕಾಶ ನೀಡದೆ ವಂಚಿಸುವುದು ನಡೆಯುತ್ತಿದೆ. ಇತ್ತೀಚೆಗೆ ಚಿತ್ರದುರ್ಗದ ಹಳ್ಳಿಯೊಂದರಲ್ಲಿ ದಲಿತನೊಬ್ಬ ಎಸ್.ಡಿ.ಎಂ.ಸಿ.ಯ ಅದ್ಯಕ್ಷನಾಗಿದ್ದು, ಆತ ದಲಿತನೆಂಬ ಕಾರಣಕ್ಕೆ ಆಗಸ್ಟ್ 15 ರಂದು ದ್ವಜಾರೋಹಣ ಮಾಡುವ ಆತನ ಹಕ್ಕನ್ನು ನಿರಾಕರಿಸಿ ಮೇಲ್ಜಾತಿಯವರೊಬ್ಬರಿಂದ ದ್ವಜಾರೋಹಣ ಮಾಡಿಸಿದ್ದು, ದಲಿತರಿಗೆ ಈ ದೇಶದಲ್ಲಿ ಸ್ವಾತಂತ್ರ ಸಿಕ್ಕಿದೆಯೇ ಎಂದು ಕೇಳಿಕೊಳ್ಳಬೇಕಾದ ಸ್ಥಿತಿ ಇವತ್ತಿಗೂ ಇದೆ.

ಗ್ರಾಮೀಣ ಉದ್ಯೋಗಗಳಲ್ಲಿಯೂ ತಾರತಮ್ಯ: ಹಳ್ಳಿಗಳಲ್ಲಿ ಪಂಚಾಯಿತಿಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ, ಅಕ್ಷರದಾಸೋಹಗಳಲ್ಲಿ ಹೆಣ್ಣುಮಕ್ಕಳಿಗೆಂದು ಕೆಲವು ಉದ್ಯೋಗಗಳಿವೆಯಾದರು, ಅವುಗಳನ್ನು ದಲಿತರ ಹೆಸರಲ್ಲಿ ಮೇಲ್ಜಾತಿಯವರೇ ಮಾಡುತ್ತಾರೆ. ಅಕಸ್ಮಾತ್ ದಲಿತ ಹೆಣ್ಣುಮಕ್ಕಳು ಈ ಕೆಲಸಕ್ಕೆ ಸೇರಿದರೆ ಅಂತಹ ಅಂಗನವಾಡಿಗಳಿಗೆ ತಮ್ಮ ಮಕ್ಕಳನ್ನು ಕಳಿಸದೆ, ಮಕ್ಕಳ ಸಂಖ್ಯೆ ಕಡಿಮೆಯಾಗಿ ಅಂಗನವಾಡಿಕೇಂದ್ರಗಳು ಮುಚ್ಚಿಹೋಗುವಂತೆ ಮಾಡುತ್ತಾರೆ. ಹಾಗೆ ಮುಚ್ಚಿದ ಊರುಗಳ ಮೇಲ್ಜಾತಿಗಳು ತಮಗಿರುವ ಹಣಬಲದಿಂದ ಪಟ್ಟಣದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಿ ವಿದ್ಯಾಬ್ಯಾಸ ಕೊಡಿಸುತ್ತಾರೆ. ಆದರೆ ಶಿಕ್ಷಣದಿಂದ ವಂಚಿತರಾಗುವುದು ಮಾತ್ರ ದಲಿತಮಕ್ಕಳು. ಇನ್ನು ಶಾಲೆಗಳ ಬಿಸಿಯೂಟ ಕಾರ್ಯಕ್ರಮದಲ್ಲಿ ದಲಿತ ಮಹಿಳೆಯರು ಅಡುಗೆ ಮಾಡುವ ಆಹಾರವನ್ನು ಸೇವಿಸಲು ಮೇಲ್ಜಾತಿಗಳ ಮಕ್ಕಳು ನಿರಾಕರಿಸುತ್ತವೆ ಅಥವಾ ಅವರ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸದೆ ದಲಿತ ಮಹಿಳೆಯನ್ನು ಕೆಲಸದಿಂದ ತೆಗೆಯುವಮತೆ ಮಾಡಲು ಪ್ರಯತ್ನಿಸುತ್ತಾರೆ. ಕಳೆದ ವರ್ಷ ನಮ್ಮ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಸ್ವಂತ ಕ್ಷೇತ್ರದಲ್ಲಿಯೇ ಇಂತಹದೊಂದು ಘಟನೆ ವರದಿಯಾಗಿತೆಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ಯುವಕ ಯುವತಿಯರ ಸ್ನೇಹ: ಕೆಲವೊಮ್ಮೆ ದಲಿತ ಯುವಕ ಮೇಲ್ಜಾತಿಯ ಹುಡುಗಿಯನ್ನು ಮಾತಾಡಿಸಿದ ಕಾರಣಕ್ಕೆ ದಲಿತ ಕುಟುಂಬಗಳ ಮೇಲೆ ಬೀಕರ ಹಲ್ಲೆಗಳು ನಡೆಯುತ್ತವೆ. ಇನ್ನು ದಲಿತ ಮತ್ತು ಮೇಲ್ಜಾತಿಯ ಹುಡುಗ ಹುಡುಗಿಯ ನಡುವೆ ನಡೆಯುವ ಪ್ರೇಮ ಪ್ರಕರಣಗಳು ಸಹ ಎಷ್ಟೋ ಬಾರಿ ದಲಿತರ ಮೇಲಿನ ಹಿಂಸೆಗೆ ಕಾರಣವಾಗುತ್ತವೆ. ಇನ್ನು ದಲಿತ ಯುವಕ ಮೇಲ್ಜಾತಿಯಹುಡುಗಿಯನ್ನು ಮದುವೆಯಾದಾಗಲಂತು ಕೇಳುವುದೇ ಬೇಡ. ಮರ್ಯಾದಾ ಹತ್ಯೆಯಂತಹ ಹತ್ಯೆಗಳು ಈಗೀಗ ಸಾಮಾನ್ಯವಾಗಿ ಹೋಗಿವೆ.

ಸಣ್ಣಪುಟ್ಟ ತಪ್ಪುಗಳಿಗೂ ಕಠಿಣ ಶಿಕ್ಷೆ: ದಲಿತರು ಮಾಡುವ ಸಣ್ಣಪುಟ್ಟ ತಪ್ಪುಗಳ ಬಗ್ಗೆ ನ್ಯಾಯ ಪಂಚಾಯಿತಿ ಮಾಡುವ ಉದ್ದೇಶವನ್ನಿಟ್ಟುಕೊಂಡು ಹಳ್ಳಿಗಳ ಮೇಲ್ಜಾತಿಗಳು ಅರಳಿಕಟ್ಟೆಯ ಮೇಲೆ ಕೂತು ದಲಿತರಿಗೆ ಅಮಾನುಷ ಶಿಕ್ಷೆ ವಿದಿಸುವುದು ಸಾಮಾನ್ಯವಾಗಿದೆ. ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡುವುದು ಗಂಡಸರ ತಲೆಬೋಳಿಸಿ ಕತ್ತೆಗಳ ಮೇಲೆ ಮೆರವಣಿಗೆ ಮಾಡುವಮತಹ ಶಿಕ್ಷೆಗಳನ್ನು ನೀಡಿ ಅದರ ಜೊತೆಗೆ ಅವರು ಕಟ್ಟಲಾರದಷ್ಟು ಮೊತ್ತದ ದಂಡ ಹಾಕಿ ಅವರನ್ನು ತಮ್ಮ ಜೀತದಾಳುಗಳನ್ನಾಗಿ ಮಾಡಿಕೊಂಡು ದುಡಿಸಿಕೊಳ್ಳುವ ಹುನ್ನಾರಗಳು ಕಾಲಾಂತರದಿಂದಲೂ ನಡೆಯುತ್ತಲೇ ಬಂದಿವೆ.

2. ಹೊಸ ಅರಿವು ಮತ್ತು ಎಚ್ಚರವೇ ಕಾರಣವಾದ ಹಲ್ಲೆಗಳು.

ಹಿಂದೆಲ್ಲ ವೈಯುಕ್ತಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದ್ದ ಹಲ್ಲೆಗಳಿಂದು ಹೆಚ್ಚೆಚ್ಚು ಸಂಘಟಿತ ರೂಪ ಪಡೆದುಕೊಳ್ಳುತ್ತಿವೆ. ಹೀಗಾಗಿ ಇವತ್ತು ದಲಿತರ ಮೇಲಿನ ಹಲ್ಲೆಗಳ ಮಾದರಿ ಮತ್ತು ಸ್ವರೂಪ ಸಾಕಷ್ಟು ಬದಲಾಗಿದೆ. ಇವತ್ತು ಪ್ರತಿಹಳ್ಳಿಗಳಲ್ಲೂ ದಲಿತರು ಒಂದಷ್ಟಾದರು ಶಿಕ್ಷಣ ಪಡೆದು ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅರಿತುಕೊಂಡು ಹಳ್ಳಿಗಳಲ್ಲಿ ಆಚಾರವಿಚಾರಗಳ ಬಗ್ಗೆ, ಮತ್ತು ತಮ್ಮ ಸಮುದಾಯವನ್ನು ಮೇಲ್ಜಾತಿಗಳು ನಡೆಸಿಕೊಳ್ಳು ರೀತಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ದಲಿತರಲ್ಲಿ ಮೂಡಿರುವ ಹೊಸ ಎಚ್ಚರವೇ ಅವರ ಮೇಲಿನ ಹಲ್ಲೆಗಳಿಗೆ ಕಾರಣವಾಗಿವೆ. ಹಳ್ಳಿಗಳಲ್ಲಿ ದಲಿತ ಯುವಕರು ಕಟ್ಟಿಕೊಂಡ ದಲಿತ ಸಂಘರ್ಷಸಮಿತಿಯಂತಹ ಸಂಘಟನೆಗಳು ಮತ್ತು ಸರಕಾರದ ಅಲ್ಪಸ್ವಲ್ಪ ನೆರವಿನೊಂದಿಗೆ ತಮ್ಮ ಕೇರಿಗಳಲ್ಲಿ ಕಟ್ಟಿಕೊಳ್ಳುತ್ತಿರುವ ಅಂಭೇಡ್ಕರ್ ಭವನಗಳೆಂಬ ಸಮುದಾಯ ಭವನಗಳು ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗುತ್ತಿವೆ.

ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರ ದೇವಸ್ಥಾನ ಪ್ರವೇಶದ ಹಿನ್ನೆಲೆಯಲ್ಲಿ ನಡೆದ ದಲಿತರ ಮೆಲಿನ ಹಲ್ಲೆಯು ಮೇಲ್ಜಾತಿಗಳ ಸಂಘಟಿತ ಹಿಂಸೆಗೆ ಮತ್ತು ಪ್ರಭುತ್ವದ ಬೆಂಬಲಕ್ಕೆ ಬಲವಾದ ನಿದರ್ಶನವಾಗಿದೆ. ಸಾಂಸ್ಥಿಕ ಸ್ವರೂಪ ಪಡೆಯುತ್ತಿರುವ ದಲಿತರ ಮೇಲಿನ ಹಿಂಸೆಗಳು ಸಂಬಂದಿಸಿದ ಇಡೀ ದಲಿತ ಸಮುದಾಯವೊಂದನ್ನು ಗುರಿಯಾಗಿಸಿಕೊಳ್ಳುವ ರೀತಿಗೆ ಸಿಗರನಹಳ್ಳಿಯ ಘಟನೆ ಸ್ಪಷ್ಟವಾದ ಒಂದು ನಿದರ್ಶನವಾಗಿದೆ. ಸಿಗರನಹಳ್ಳಿಯ ಈ ಹಿಂಸೆಯ ಬಗ್ಗೆ ಒಂದಿಷ್ಟು ನೋಡೋಣ:

ಆರು ತಿಂಗಳ ಹಿಂದೆ ದೇವಸ್ಥಾನ ಪ್ರವೇಶಿಸಿದ ದಲಿತ ಮಹಿಳೆಯರಿಗೆ ಸವರ್ಣೀಯರು ವಿಧಿಸಿದ ದಂಡದ ಬಗೆಗಿನ ಅಸಹನೆಯೊಂದಿಗೆ ಪ್ರಾರಂಭವಾದ ದಲಿತರ ಸಿಟ್ಟು ದೇವಸ್ಥಾನ ಪ್ರವೇಶಿಸಿ, ಈ ಅವಮಾನವನ್ನು ಗೆಲ್ಲಲೇಬೇಕೆಂಬ ಹಟಕ್ಕೆ ದಲಿತರು ಬೀಳುವಂತೆ ಮಾಡಿತು.ನಂತರ ವಾರಗಳ ಹಿಂದೆ ಜಿಲ್ಲಾಡಳಿತ ಮದ್ಯಪ್ರವೇಶಿಸಿ ತನ್ನ ಉಸ್ತುವಾರಿಯಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಲು ಮುಂದಾದಾಗ ಸವಣರ್ಿಯರು ಇದಕ್ಕೆ ಆಸ್ಪದ ನೀಡಲಿಲ್ಲ. ಅಲ್ಲಿಗೆ ಬಂದ ಮಾದ್ಯಮದವರ ಮೇಲೆ, ಪೋಲಿಸರ ಮೇಲೆ ಪ್ರಗತಿಪರರ ಮೇಲೆ ಹಲ್ಲೆ ನಡೆಸಲು ಮುಮದಾದ ಸವಣರ್ಿಯರ ಗುಂಪು ಜಿಲ್ಲಾಡಳಿತವನ್ನು ಹಿಮ್ಮೆಟ್ಟಿಸಲು ಬೇಕಾದ ಎಲ್ಲ ಮಾರ್ಗಗಗಳನ್ನು ಅನುಸರಿಸಿದತು..ಈ ಸಂದರ್ಭದಲ್ಲಿ ಇಡೀ ಜಿಲ್ಲಾಡಳಿತವೇ ಸ್ಥಬ್ದವಾಗಿ ಮೂಕ ಪ್ರೇಕ್ಷಕರಂತೆ ಮಿಲ್ಲಬೇಕಾದ ಸನ್ನಿವೇಶ ಸೃಷ್ಠಿಯಾಗಿತ್ತು. ಹಾಸನ ಜಿಲ್ಲೆಯ ಸವಣರ್ೀಯ ಶಾಸಕರೂ ಮಾಜಿ ಮಂತ್ರಿಗಳೂ ಆದ ಬಲಾಢ್ಯ ನಾಯಕರೊಬ್ಬರು ಹಾಸನದ ಮಟ್ಟಿಗೆ ಪ್ರಭುತ್ವವಾಗಿದ್ದಾರೆ. ಸವರ್ಣಿಯರಿಗೆ ರಾಜಕೀಯವಾಗಿ ಸದರಿ ನಾಯಕರ ಅಭಯ ಹಸ್ತವಿದೆ. ಸದರಿ ಸರಕಾರದಲ್ಲಿ ಮಂತ್ರಿಯಾಗಿದ್ದು ಪ್ರಭುತ್ವದ ಸಂಕೇತವಾಗಿರುವ ನಾಯಕರು ಕೂಡ ಎಲ್ಲಿ ತಮ್ಮ ಸ್ವಂತ ಜನಾಂಗ ತಮ್ಮಿಂದ ದೂರ ಸರಿಯುವುದೊ ಎಂಬ ಭಯದಿಂದ ನಿಷ್ಕ್ರಿಯರಾಗಿ ಉಳಿದು ಹೋದರು. ಇಷ್ಟೆಲ್ಲ ನಡೆದ ನಂತರ ಗ್ರಾಮದಲ್ಲಿ 144 ಸೆಕ್ಷನ್ ಹಾಕಿ ಮುವತ್ತು ಮಂದಿ ಸವರ್ಣಿಯರನ್ನು ಬಂದಿಸಲಾಯಿತು, ಈ ನಡುವೆ ದಲಿತರಗೆದಂಡ ವಿದಿಸಿದ್ದು ಮತ್ತು ದೇವಸ್ಥಾನದೊಳಗೆ ಪ್ರವೇಶವನ್ನು ನಿರಾಕರಿಸಿದ ಅಮಾನವೀಯ ಘಟನೆಗಳು ನೇಪಥ್ಯಕ್ಕೆ ಸರಿದು ಎರಡು ಪ್ರಬಲ ರಾಜಕೀಯ ಶಕ್ತಿಗಳ ಜಟಾಪಟಿಯೇ ಮುಖ್ಯವಾದ ವಿಷಯವಾಗಿ ಪರಿಣಮಿಸಿತು. ಎರಡೂ ಪಕ್ಷಗಳ ಇಬ್ಬರೂ ನಾಯಕರು ಹಾಸನದ ಮಟ್ಟಿಗೆ ಪ್ರಭುತ್ವದ ಪ್ರತಿನಿದಿಗಳಾಗಿದ್ದು ಅವರ ಆಸಕ್ತಿಯಿದ್ದುದು ಸವರ್ಣಿಯರನ್ನು ಕಾನೂನಿನಿಂದ ರಕ್ಷಿಸುವುದಾಗಿತ್ತೇ ಹೊರತು, ದಲಿತರಿಗಾದ ಅವಮಾನಗಳಿಗೆ ಉತ್ತರ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದಾಗಿರಲಿಲ್ಲ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದಲಿತರ ದೇವಸ್ಥಾನ ಪ್ರವೇಶದ ವಿಷಯ ಸಂಘರ್ಷಕ್ಕೆಡೆ ಮಾಡಿಕೊಟ್ಟಿದ್ದರೂ, ಅದನ್ನು ಅಷ್ಟು ಖಡಕ್ಕಾಗಿ ಎದುರಿಸುವ ಮಟ್ಟಕ್ಕೆ ಸವರ್ಣಿಯರು ಸಿದ್ದರಾಗಿ ನಿಂತಿದ್ದು ಮಾತ್ರ ಪ್ರಭುತ್ವದ ಬೆಂಬಲ ತಮಗಿದೆಯೆನ್ನುವ ಕಾರಣಕ್ಕೆ. ಬಂದಿತರಾದ ಮೇಲ್ಜಾತಿಯವರ ಬಿಡುಗಡೆಗೆ ಒತ್ತಾಯಿಸಿದ ಸವರ್ಣಿಯರೂ ,ಮಾಜಿಮಂತ್ರಿಯೂ ಆದವರು ನಾಯಕರುತದನಂತರದಲ್ಲಿ ಜಿಲ್ಲಾಧಿಕಾರಿಕಚೇರಿಯ ಮುಂದೆ ಬಂದಿತರ ಪರವಾಗಿ ಧರಣಿ ನಡೆಸಿ ಸವರ್ಣಿಯರಿಗೆ ಪ್ರಭುತ್ವದ ಬಲವಿರುವುದನ್ನು ಜಗಜ್ಜಾಹೀರು ಮಾಡಿದರು. ಪ್ರಭುತ್ವ ಹೇಗೆ ಸವರ್ಣೀಯರಪರವಾಗಿ ನಿಲ್ಲುತ್ತದಯೆಂಬುದಕ್ಕೆ ಇಲ್ಲಿಯೇ ಇನ್ನೊಂದು ಉದಾಹರಣೆ ನೀಡಬಹುದು: ಹಾಸನ ಜಿಲ್ಲೆಯ ಮೀಸಲು ಕ್ಷೇತ್ರದ ದಲಿತ ಶಾಸಕರೊಬ್ಬರು ಸಹ ಸವರ್ಣಿಯರ ಪರವಾಗಿ ನಡೆದ ಧರಣಿಯಲ್ಲಿ ಬಾಗವಹಿಸಿದ್ದು. ಇನ್ನು ಹಿಂದೂಗಳೆಲ್ಲ ಒಂದು ಎಂದು ಹೇಳುತ್ತ ಮತೀಯವಾದವನ್ನೇ ಉಸಿರಾಡುತ್ತಿರುವ ಬಲಪಂಥೀಯ ಪಕ್ಷವಾದ ಬಾಜಪ ಈ ಘಟನೆ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ವರ್ತಿಸಿತು. ಒಟ್ಟಿನಲ್ಲಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಸಹ ದಲಿತರ ಮೇಲಿನ ಹಲ್ಲೆಗೆ ನೀರಸವಾಗಿ ಪ್ರತಿಕ್ರಿಯಿಸುತ್ತ ಸವರ್ಣಿಯರಿಗೆ ಪ್ರತ್ಯಕ್ಷ ಪರೋಕ್ಷ ಬೆಂಬಲ ನೀಡುತ್ತಾ ಬಂದಿದ್ದು ವಿಪರ್ಯಾಸ. ಇನ್ನು ನಮ್ಮ ಗೃಹಸಚಿವರು ಸ್ವತ: ದಲಿತರಾಗಿದ್ದರೂ ಸಹ ಅವರೂ ಇದೀಗ ಪ್ರಭುತ್ವದ ಒಂದು ಭಾಗವಾಗಿ ಸವರ್ಣಿಯರನ್ನು ಬಲವಾಗಿ ಎದುರಿಸಿ ನಿಂತು ಕ್ರಮ ತೆಗೆದುಕೊಳ್ಳುವ ಛಾತಿಯನ್ನು ತೋರಿಸುತ್ತಿಲ್ಲ.

ಮೂಲಭೂತವಾಗಿ ಇಲ್ಲಿ ನನ್ನ ಪ್ರಶ್ನೆಯಿರುವುದು ಇಂತಹ ಘಟನೆಗಳ ಹಿಂದಿರುವ ಮೇಲ್ಜಾತಿಗಳ ಸಂಘಟಿತ ಹಿಂಸೆಯ ನೈಜ ಕಾರಣಗಳೇನು ಎಂಬುದರ ಬಗ್ಗೆ. ದಲಿತರಲ್ಲಿ ಹೆಚ್ಚುತ್ತಿರುವ ಅಕ್ಷರತೆ, ಉದ್ಯೋಗಾಂಕ್ಷತೆ, ತಮ್ಮ ಹಕ್ಕುಗಳನ್ನು ಎತ್ತರದ ದನಿಯಲ್ಲಿ ಕೇಳಿ ಪಡೆಯುತ್ತಿರುವ ಹೊಸ ಅರಿವಿನ ಪ್ರಜ್ಞೆಗಳಿಂದಾಗಿ ಮೇಲ್ಜಾತಿಯವರಲ್ಲಿ ದಲಿತರ ಬಗ್ಗೆ ಹೆಚ್ಚುತ್ತಿರುವ ಅಸಹನೆ ಮತ್ತು ಅಸೂಯೆಗಳು ಮೂಲಕಾರಣಗಳಾಗಿರಬಹುದಾದರು, ಎಲ್ಲಕ್ಕಿಂತ ಮುಖ್ಯವಾಗಿ ಬದಲಾಗುತ್ತಿರುವ ನಮ್ಮ ರಾಜಕೀಯ ಶೈಲಿ ಎಂದು ನನಗನಿಸುತ್ತದೆ.

ಯಾಕೆಂದರೆ ಕಳೆದ ಒಂದು ಒಂದೂವರೆ ದಶಕದ ನಮ್ಮ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಚುನಾವಣಾ ರಾಜಕಾರಣದ ಉದ್ದೇಶದಿಂದಾಗಿ ಮೇಲ್ಜಾತಿಗಳು ಹೆಚ್ಚೆಚ್ಚು ಸಂಘಟಿರಾಗುತ್ತಾ ಹೋಗುತ್ತಿರುವುದು ಕಾಣುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಮೇಲ್ಜಾತಿಗಳು ದೃವೀಕರಣಗೊಳ್ಳುತ್ತಿವೆ. ಹಲವು ರಾಜಕೀಯ ಅಧಿಕಾರಗಳು ದಲಿತ ಮತ್ತು ಹಿಂದುಳಿದವರ ಪಾಲಾಗುತ್ತಿರುವುದನ್ನು ಸಹಿಸದ ಮೇಲ್ಜಾತಿಗಳು ಒಂದಾಗುತ್ತ ತಮ್ಮ ವಿರುದ್ದ ಸೆಣೆಸಬಲ್ಲ ದಲಿತ ಶಕ್ತಿಗಳನ್ನು ಹಣಿಯಲು ಪ್ರಭುತ್ವದ ನೆರವು ಪಡೆಯುತ್ತಿವೆ. 

ಹಾಗೆಂದು ಹಿಂದೆಲ್ಲ ಜಾತಿ ರಾಜಕಾರಣವಿರಲಿಲ್ಲವೆಂದೇನೂ ಅಲ್ಲ. ಆದರೆ ಇಷ್ಟೊಂದು ಅಗಾಧ ಪ್ರಮಾಣದಲ್ಲಿರಲಿಲ್ಲ. ಹೆಚ್ಚೆಂದರೆ ಕ್ಷೇತ್ರವೊಂದರಲ್ಲಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವ ಇಲ್ಲ ಸೋಲಿಸುವ ಮಟ್ಟಿಗೆ ಸೀಮಿತವಾಗಿತ್ತು. ಆದರಿವತ್ತು ಜಾತಿಯ ಬೇರುಗಳು ಸಮಾಜದ ಉದ್ದಗಲಕ್ಕೂ ವ್ಯಾಪಿಸಿಕೊಂಡಿವೆ.ಸ್ವಲ್ಪಕಾಲ ಮೌನವಾಗಿದ್ದಂತೆ ಕಾಣುತ್ತಿದ್ದ ಮೇಲ್ಜಾತಿಗಳು ಪರಮಾಧಿಕಾರವನ್ನು ಪಡೆದು ಗತಕಾಲದ ತಮ್ಮ ಪಾಳೇಗಾರಿಕೆಯ ತೆವಲುಗಳನ್ನು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಸಂದರ್ಭದಲ್ಲಿ ನಡೆದ ಕೆಲವು ರಾಜಕೀಯ ಬದಲಾವಣೆಗಳು ಆ ಜಾತಿಗಳ ಆಶಯಕ್ಕೆ ನೀರೆರೆದವು.

ಸ್ವಾತಂತ್ರ ದೊರೆತ ಏಳು ದಶಕಗಳ ನಂತರವೂ ನಮ್ಮ ಹಳ್ಳಿಗಳು ಜಾತಿವ್ಯವಸ್ಥೆಯ ಪೋಷಣೆಯ ಕೇಂದ್ರಗಳಾಗಿ ಉಳಿದಿರುವುದು ಹಿಂದೂ ಧರ್ಮದೊಳಗಿನ ಯಾವ ಸುಧಾರಣೆಗಳೂ ಫಲ ಕೊಡಲಾರೆವೆಂಬ ಅನುಮಾನವನ್ನು ಹುಟ್ಟು ಹಾಕುತ್ತಿವೆ. ಇವತ್ತಿಗೂ ನಮ್ಮ ಹಳ್ಳಿಗಳು ಜಾತಿ ವ್ಯವಸ್ಥೆಯನ್ನು ಪೋಷಿಸುವ ಕೇಂದ್ರಗಳಾಗಿಯೇ ಉಳಿದಿದ್ದರೆ ಅದಕ್ಕೆ ಬಹುಮುಖ್ಯ ಕಾರಣ ನಮ್ಮ ಶಕ್ತಿ ರಾಜಕಾರಣವೇ! 

No comments:

Post a Comment