Oct 15, 2016

ವ್ಯಕ್ತಿಗತ ಪ್ರತಿಷ್ಠೆ ಮತ್ತು ವಂಶಪಾರಂಪರ್ಯ ರಾಜಕಾರಣಕ್ಕೆ ಉದಾಹರಣೆಯಾದ ನಮ್ಮ ಪ್ರಾದೇಶಿಕ ಪಕ್ಷಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ.
ಸದ್ಯಕ್ಕೆ ತಮಿಳುನಾಡಿನಲ್ಲಿ ಕಾವೇರಿ ನೀರಿಗಿಂತ ಹೆಚ್ಚು ಹಾಹಾಕಾರ ಉಂಟು ಮಾಡುತ್ತಿರುವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಎ.ಐ.ಎ.ಡಿ.ಎಂ.ಕೆ ಪಕ್ಷದ ಸರ್ವೋಚ್ಚ ನಾಯಕಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮತ್ತು ಆಡಳಿತದಲ್ಲಿ ಆವರಿಸಿರುವ ಶೂನ್ಯತೆಯು ಪ್ರಾದೇಶಿಕ ಪಕ್ಷಗಳ ಇತಿಮಿತಿಯ ಬಗ್ಗೆ ಮತ್ತು ಆಗಬಹುದಾದ ಅಪಾಯಗಳ ಬಗ್ಗೆ ನಮಗೆ ಸ್ಪಷ್ಟವಾದ ನಿದರ್ಶನವಾಗುವಂತಿದೆ. ರಾಜ್ಯವೊಂದಕ್ಕೆ ಇಂಡಿಯಾದ ಒಕ್ಕೂಟ ವ್ಯವಸ್ಥೆಯಿಂದ ಅನ್ಯಾಯವಾದಾಗೆಲ್ಲ ನಾವು ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಕುರಿತು ಮಾತಾಡುವುದು, ತದನಂತರದಲ್ಲಿ ಮೌನವಾಗಿಬಿಡುವುದು ಮಾಮೂಲಿಯಾಗಿದೆ. ಸ್ವತ: ನಾನೇ ಬಹಳಷ್ಟು ಲೇಖನಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯದ ಬಗ್ಗೆ ಮತ್ತು ಅದರಿಂದಾಗಬಹುದಾದ ಅನುಕೂಲಗಳ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಆದರೆ ಪ್ರಾದೇಶಿಕ ಪಕ್ಷಗಳ ಇನ್ನೊಂದು ಮುಖದ ಬಗ್ಗೆಯೂ ಅಂದರೆ ಅವುಗಳ ಋಣಾತ್ಮಕ ಗುಣಗಳ ಬಗ್ಗೆಯೂ ಬರೆಯುವುದು ಅಗತ್ಯವೆಂಬ ಬಾವನೆಯಿಂದ ಇದನ್ನು ಬರೆಯುತ್ತಿರುವೆ.

ಒಕ್ಕೂಟವ್ಯವಸ್ಥೆಯಲ್ಲಿ ರಾಜ್ಯವೊಂದು ತನ್ನ ಹಿತರಕ್ಷಣೆಗಾಗಿ ಪ್ರಬಲ ಪ್ರಾದೇಶಿಕ ಪಕ್ಷವೊಂದನ್ನು ಹೊಂದಿ ರಾಷ್ಟ್ರ ಮಟ್ಟದಲ್ಲಿ ತನ್ನ ಕೂಗನ್ನು ಕೇಳುವಂತೆ ಮಾಡುವ ಸಲುವಾಗಿ ಪ್ರಾದೇಶಿಕ ಪಕ್ಷಗಳು ಅಗತ್ಯವೆಂದಾದರೂ, ಅವುಗಳ ಹುಟ್ಟು ರಚನೆ, ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆಯಿಲ್ಲದಿರುವುದು ದುರದೃಷ್ಟಕರ. ಇದನ್ನು ಅರಿಯಲು ನಾವು 1977ರ ಅಂದರೆ ತುರ್ತುಪರಿಸ್ಥಿತಿಯ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮೊದಲಿಗೆ ಈಪ್ರಾದೇಶಿಕ ಪಕ್ಷಗಳು ಹೇಗೆ ಶುರುವಾದವು ಎಂಬುದನ್ನು ವಿಶ್ಲೇಷಿಸಿ ನೋಡೋಣ:

ಇಂಡಿಯಾದ ಬಹುತೇಕ ಪ್ರಾದೇಶಿಕ ಪಕ್ಷಗಳು ಜನ್ಮ ತಾಳಿದ್ದೇ ವ್ಯಕ್ತಿಯೊಬ್ಬನ ಅಥವಾ ಸಮುದಾಯವೊಂದರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ. ರಾಜ್ಯರಾಜಕಾರಣದಲ್ಲಿ ಹೆಸರು ಮಾಡಿ ತದನಂತರ ರಾಷ್ಟ್ರೀಯ ಪಕ್ಷಗಳಿಂದ ನಿರ್ಲಕ್ಷಕ್ಕೆ ಒಳಗಾದ ಬಹುತೇಕ ನಾಯಕರುಗಳು ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿರುವ ಉದಾಹರಣೆಯನ್ನು ನೋಡಬಹುದಾಗಿದ್ದು, ಇನ್ನು ಕೆಲವು ರಾಜ್ಯಗಳಲ್ಲಿನ ಪ್ರಬಲ ಜಾತಿಗಳು ರಾಷ್ಟ್ರೀಯ ಪಕ್ಷಗಳಿಂದ ತಮಗೆ ಮನ್ನಣೆ ದೊರೆಯುತ್ತಿಲ್ಲವೆಂಬ ಅಸಮಾದಾನದಿಂದಲು ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿಕೊಂಡಿವೆ..ಇನ್ನು ರಾಷ್ಟ್ರೀಯ ಪಕ್ಷಗಳಲ್ಲಿನ ಒಳಜಗಳಗಳಿಂದಾಗಿ ಪಕ್ಷವು ಒಡೆದು ಹೋಳಾದಾಗ ಹೋಳಾದ ತುಂಡುಗಳೇ ಸ್ವತ: ರಾಜಕೀಯ ಪಕ್ಷಗಳಾಗಿ ಪರಿವರ್ತನೆಯಾಗಿರುವುದನ್ನೂ ನಾವು ಕಾಣಬಹುದಾಗಿದೆ. ಬಹುಶ: ತಮಿಳು ನಾಡಿನ ದ್ರಾವಿಡ ಚಳುವಳಿಯ ಫಲವಾಗಿ ಹುಟ್ಟಿದ ದ್ರಾವಿಡಕಳಗಂ ಪಕ್ಷ(ಇದೀಗ ಅದು ಸಹ ವ್ಯಕ್ತಿ ಪ್ರತಿಷ್ಠೆ ಮತ್ತು ಜಾತಿರಾಜಕೀಯಕ್ಕೆ ಸಿಲುಕಿ ಹಲವು ಹೋಳುಗಳಾಗಿರುವುದನ್ನು ಕಾಣಬಹುದಾಗಿದೆ) ಮತ್ತು ಕಾಶ್ಮೀರದ ಜನರ ಆಶೋತ್ತರಗಳ ನೆಪದಲ್ಲಿ ರಚನೆಯಾದ ನ್ಯಾಷನಲ್ ಕಾನ್ ಫರೆನ್ಸ್ ಹೊರತು ಪಡಿಸಿದರೆ(ಇದು ಸಹ ಕುಟುಂಬದ ಪಕ್ಷವಾಗಿದೆ) ಉಳಿದೆಲ್ಲ ಪಕ್ಷಗಳೂ ಹೀಗೆ ವ್ಯಕ್ತಿಗತ ಪ್ರತಿಷ್ಠೆಯ ಅಥವಾ ಜಾತಿ ಪ್ರತಿಷ್ಠೆಯ ಸಂಕೇತವಾಗಿಯೇ ಉದಯವಾದಂತವು ಎನ್ನಬಹುದು.

ಎಂಭತ್ತರ ದಶಕದಿಂದೀಚೆಗೆ ಜನ್ಮತಾಳಿದ ಕೆಲವು ಪಕ್ಷಗಳತ್ತ ಒಂದಿಷ್ಟು ಕಣ್ಣು ಹಾಯಿಸೋಣ. 1982ರಲ್ಲಿ ಆಂದ್ರಪ್ರದೇಶದಲ್ಲಿ ಅಲ್ಲಿನ ಜನಪ್ರಿಯ ಸಿನಿಮಾನಟ ಎನ್.ಟಿ.ರಾಮರಾಯರು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿದರು. ಅದಕ್ಕೆ ಅವರು ನೀಡಿದ್ದ ಕಾರಣ ಕಾಂಗ್ರೆಸ್ ಹೈಕಮ್ಯಾಂಡ್ ಆಂದ್ರದ ರಾಜಕಾರಣಿಗಳನ್ನು ಅವಮಾನಿಸಿ, ತೆಲುಗರ ಸ್ವಾಬಿಮಾನಕ್ಕೆ ದಕ್ಕೆ ಉಂಟು ಮಾಡಿದ್ದಾಗಿತ್ತು. ತೆಲುಗರ ಆತ್ಮಗೌರವದ ಪ್ರಶ್ನೆಯನ್ನಿಟ್ಟುಕೊಂಡು ಜನ್ಮತಾಳಿದ ತೆಲುಗು ದೇಶಂಗೆ ಇದ್ದುದು ಎನ್.ಟಿ.ಆರ್. ಅವರ ಹೆಸರಿನ ಬಲ ಮಾತ್ರ. ಅದಕ್ಕೆ ತಕ್ಕಂತೆ ಆ ಪಕ್ಷದಲ್ಲಿ ಅವರನ್ನು ಬಿಟ್ಟರೆ ಬೇರಿನ್ನಾವ ನಾಯಕರು ಇರಲಿಲ್ಲ. ಎರಡನೇ ಸಾಲಿನ ನಾಯಕರುಗಳನ್ನು ಬೆಳೆಸದ ಅವರಿಗೆ ಅವರ ಸ್ವಂತ ಅಳಿಯ ಚಂದ್ರಬಾಬು ನಾಯ್ಡುವೇ ತಿರುಗಿ ಬಿದ್ದು ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಆಗಿಬಿಟ್ಟರು. ನಂತರದಲ್ಲಾದರು ಆ ಪಕ್ಷದಲ್ಲಿ ಎರಡನೇ ಸಾಲಿನ ನಾಯಕರುಗಳು ಬೆಳೆದರೇ ಎಂದು ನೋಡಿದರೆ ಸಿಗುವ ಉತ್ತರ ಇಲ್ಲ. ಹೀಗೆ ತೆಲುಗರ ಆತ್ಮಗೌರವದ ಮಾತಾಡಿ ಪ್ರವರ್ದಮಾನಕ್ಕೆ ಬಂದ ಪಕ್ಷವೊಂದು ಏಕವ್ಯಕ್ತಿಯ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಬಲಿಯಾಗಿದೆ.

ಇದಾದ ನಂತರ ಅಂದರೆ ಎಂಭತ್ತರ ದಶಕದ ಉತ್ತರಾರ್ದದ ನಂತರ ಸಾಲುಸಾಲಾಗಿ ಪ್ರಾದೇಶಿಕ ಪಕ್ಷಗಳು ಹುಟ್ಟುತ್ತಾಹೋದವು. ದುರಂತವೆಂದರೆ ಅವು ಯಾವಕ್ಕೂ ನಿರ್ದಿಷ್ಟ ಸಿದ್ದಾಂತಗಳ ಹಂಗಿರಲಿಲ್ಲ. ವ್ಯಕ್ತಿಗತ ಪ್ರತಿಷ್ಠೆ ಮತ್ತು ಅಹಂಕಾರಗಳೇ ಆ ಪಕ್ಷಗಳು ಉದಯಕ್ಕೆ ಕಾರಣವಾಗಿದ್ದವು. 1977ರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಕಾಂಗ್ರೇಸ್ ವಿರೋಧಿ ಪಕ್ಷಗಳೆಲ್ಲ ಸೇರಿಕೊಂಡು ರಚಿಸಿಕೊಂಡ ಜನತಾ ಪಕ್ಷ 1980ರ ಲೋಕಸಭಾ ಚುನಾವಣೆಯ ಸೋಲಿನ ನಂತರ ತುಂಡುತುಂಡಾಗಿ ಒಡೆದು ಹೋಳಾಗುತ್ತ ಹೋಯಿತು. ಮೊದಲಬಾರಿಗೆ ಜನತಾಪರಿವಾರದಲ್ಲಿ ಒಂದು ಭಾಗವಾಗಿದ್ದ ಅವತ್ತಿನ ಜನಸಂಘ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರತ್ಯೇಕವಾಗಿ ಇವತ್ತಿನ ಬಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿಕೊಂಡಿತು. ನಂತರದಲ್ಲಿ ನಡೆದಿದ್ದು ಇತಿಹಾಸದ ವ್ಯಂಗ್ಯವೇ ಸರಿ. ಜನಸಂಘ ತೊರೆದು ಹೋದನಂತರದಲ್ಲಿ ಜನತಾಪಕ್ಷ ಕಾಲ ಸರಿದಂತೆ ಹಲವು ನಾಯಕರುಗಳ ವೈಯುಕ್ತಿಕ ಪ್ರತಿಷ್ಠೆಗಳಿಗೆ ಮತ್ತು ಅಧಿಕಾರದ ದಾಹಕ್ಕೆ ಬಲಿಯಾಗಿ ಹಲವು ಗುಂಪುಗಳಾಗಿ, ಆ ಗುಂಪುಗಳು ಆಯಾ ನಾಯಕರುಗಳ ಅಹಂಕಾರದ ಬಲೂನುಗಳಾಗಿ ಹತ್ತಾರು ಪಕ್ಷಗಳಾಗಿ ರೂಪಾಂತರಗೊಂಡವು.. ಹೀಗೆ ಸೃಷ್ಠಿಯಾದ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ರಾಜ್ಯಗಳ ಅಭಿವೃದ್ದಿ ಸಾದಿಸಲು ಬೇಕಾದ ಸಿದ್ದಾಂತಗಳಾಗಲಿ, ಜನಪರವಾಗಿರುವಂತಹ ಯಾವುದೇ ನೀತಿಗಳಾಗಲಿ ಇರದೆ ಹೋಗಿದ್ದಂತು ಸತ್ಯ. 

ಒಂದು ಜನತಾ ಪಕ್ಷ ಎಷ್ಟು ಹೋಳುಗಳಾಗಿ ಹೋಯಿತೆಂದರೆ ಅವೆಲ್ಲವುಗಳ ಬಗ್ಗೆ ಇಲ್ಲಿನ ಪುಟಮಿತಿಯಲ್ಲಿ ಬರೆಯುವುದು ಕಷ್ಟಸಾದ್ಯವೇ ಸರಿ. ಹಾಗಾಗಿ ಜನತಾಪಕ್ಷದಿಂದ ಸಿಡಿದುಹೋಗಿ ಪ್ರಾದೇಶಿಕ ಪಕ್ಷಗಳಾಗಿ ಪರಿವರ್ತನೆಯಾದ ಕೆಲವು ಮುಖ್ಯ ಪಕ್ಷಗಳು ಮತ್ತು ನಾಯಕರುಗಳ ಬಗ್ಗೆ ಮಾತ್ರ ನಾನಿಲ್ಲಿ ಉಲ್ಲೇಖಿಸಲು ಪ್ರಯತ್ನಿಸಿದ್ದೇನೆ:

ಅಂದಿನ ಜನತಾಪಕ್ಷದ ಹಿರಿಯ ನಾಯಕರು ರೈತಮುಖಂಡರೂ ಆದ ಶ್ರೀ ಚರಣ್ ಸಿಂಗ್ ಅವರು ಲೋಕದಳವೆಂಬ ಪಕ್ಷವನ್ನು ಸ್ಥಾಪಿಸಿದರು. ಈಗ ಅದು ರಾಷ್ಟ್ರೀಯ ಲೋಕದಳವೆಂಬ ಹೆಸರಿನಲ್ಲಿ ಅವರ ಪುತ್ರ ಅಜಿತ್ ಸಿಂಗ್ ಹಿಡಿತದಲ್ಲಿದೆ. ತಮ್ಮ ಜಾಟ್ ಸಮುದಾಯದ ಮತಗಳನ್ನು ನಂಬಿ ರಾಜಕಾರಣ ಮಾಡುತ್ತಿರುವ ಅವರು ಅಧಿಕಾರಕ್ಕಾಗಿ ಆಗಾಗ್ಗೆ ಎನ್.ಡಿ.ಎ. ಮತ್ತು ಯು.ಪಿ.ಎ.ಗಳ ನಡುವೆ ಎಡತಾಕುವುದು ಮಾಮೂಲಿಯಾಗಿ ಬಿಟ್ಟಿದೆ. ಇನ್ನು ಜನತಾಪಕ್ಷದ ಅಂದಿನ ಮತ್ತೊಬ್ಬ ರೈತ ನಾಯಕ ಶ್ರೀ ದೇವಿಲಾಲ್ ಅವರು ನ್ಯಾಷನಲ್ ಲೋಕದಳವನ್ನು ಸ್ಥಾಪಿಸಿ ರಾಜಕಾರಣ ಮಾಡಿದ್ದರು. ಅವರ ತರುವಾಯ ಅವರ ಪುತ್ರರಾದ ಶ್ರೀ ಓಂ ಪ್ರಕಾಶ್ ಚೌತಾಲಾ ಮತ್ತು ಮೊಮ್ಮಗ ಅಭಯ್ ಸಿಂಗ್ ಚೌತಾಲಾ ನ್ಯಾಷನಲ್ ಲೋಕದಳವನ್ನು ಮುನ್ನಡೆಸುತ್ತಿದ್ದಾರೆ. ಇನ್ನೊಬ್ಬ ದಲಿತ ನಾಯಕರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರು ಲೋಕಜನಶಕ್ತಿ ಪಕ್ಷವನ್ನು ಸ್ಥಾಪಿಸಿ 2004ರ ಯು.ಪಿ.ಎ.ಸರಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದರು.ನಂತರ ಇದೀಗ ಎನ್.ಡಿ.ಎ.ಸರಕಾರದಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸುತ್ತ ಅಧಿಕಾರ ಎಷ್ಟು ಮುಖ್ಯವೆಂದು ತೋರಿಸುವ ರಾಜಕಾರಣ ಮಾಡುತ್ತಿದ್ದಾರೆ.

ತುರ್ತುಪರಿಸ್ಥಿತಿಯ ಕಾಲದಲ್ಲಿ ಕ್ರಾಂತಿಕಾರಿ ನಾಯಕನೆಂದು ಹೆಸರು ಮಾಡಿದ್ದ ಶ್ರೀಜಾರ್ಜ ಫರ್ನಾಂಡೀಸ್ ಮತ್ತು ನಿತೀಶ್ ಕುಮಾರ್ ಸೇರಿ ಸಮತಾಪಕ್ಷವನ್ನು(1994) ಕಟ್ಟಿದರು. 1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ಅವರು ಜನತಾದಳದಿಂದ ಹೊರಬಂದು ಜನತಾದಳ ಯುನೈಟೆಡ್ ಅನ್ನು ಸ್ಥಾಪಿಸಿಕೊಂಡರು. ನಂತರ 2003ರಲ್ಲಿ ಸಮತಾ ಪಕ್ಷವೂ ಸಹ ಜನತಾದಳ ಯುನೈಟೆಡ್ ನಲ್ಲಿ ವಿಲೀನಗೊಂಡಿತು. ಇದೀಗ ಅದು ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಅಧಿಕಾರ ನಡೆಸುತ್ತಿದೆ. ಪೂರ್ವಭಾರತದ ಜನತಾಪಕ್ಷದ ಹಿರಿಯ ನಾಯಕರಾದ ಶ್ರೀ ಬಿಜುಪಟ್ನಾಯಕ್ ಅವರು 1997ರಲ್ಲಿ ಜನತಾಪರಿವಾರ ತೊರೆದು ತಮ್ಮದೇ ಆದ ಬಿಜು ಜನತಾದಳವನ್ನು ಸ್ಥಾಪಿಸಿದ್ದು ಇದೀಗ ಅವರ ಪುತ್ರ ಶ್ರೀ ನವೀನ್ ಪಟ್ಬಾಯಕ್ ಒರಿಸ್ಸಾಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಇನ್ನು ಉತ್ತರ ಪ್ರದೇಶದ ಶ್ರೀ ಮುಲಾಯಂ ಸಿಂಗ್ ಯಾದವರು 1992ರಲ್ಲಿ ತಮ್ಮದೇ ಆದ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ್ದು, ಇದೀಗ ಅವರ ಮಗ ಶ್ರೀ ಅಖಿಲೇಶ್ ಯಾದವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಬಿಹಾರದ ಪ್ರಬಾವಿ ನಾಯಕರಾದ ಶ್ರೀ ಲಾಲು ಪ್ರಸಾದ್ ಯಾದವರು 1997ರಲ್ಲಿ ರಾಷ್ಟ್ರೀಯ ಜನತಾಪಕ್ಷವನ್ನು ಸ್ಥಾಪಿಸಿ ಬಿಹಾರದ ಮುಖ್ಯಮಂತ್ರಿಯಾಗಿ,ಅಧಿಕಾರ ನಡೆಸಿದ್ದರು. ಕೆಲವು ಅವಧಿಗೆ ಅವರ ಪತ್ನಿ ಶ್ರೀಮತಿ ರಾಬಡಿದೇವಿಯೂ ಮುಖ್ಯಮಂತ್ರಿಯಾಗಿದ್ದರು. ಇದೀಗ ಜನತಾದಳ ಯುನೈಟೆಡ್ ಪಕ್ಷದ ಪಾಲುದಾರ ಪಕ್ಷವಾಗಿ ಅವರ ಗಂಡುಮಕ್ಕಳಿಬ್ಬರು ಸಚಿವರುಗಳಾಗಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದರೆ 1999ರಲ್ಲಿ ಜನತಾದಳ ಇಬ್ಬಾಗವಾದಾಗ ಮಾಜಿ ಪ್ರದಾನಿಗಳಾದ ಶ್ರೀ ದೇವೇಗೌಡರು ಜಾತ್ಯಾತೀತ ಜನತಾದಳವನ್ನು ಸ್ಥಾಪಿಸಿದ್ದರು. 2006ರಲ್ಲಿ ಇದೇ ಪಕ್ಷದಿಂದ ಅವರ ಪತ್ರ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಸಹ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದರು. ಇದಿಷ್ಟೂ ಜನತಾಪರಿವಾರ ಹಲವು ಚೂರುಗಳಾಗಿ , ಪ್ರಾದೇಶಿಕ ಪಕ್ಷಗಳಾಗಿ ಬೆಳೆದು ಬಂದ ರೀತಿ.

ಇನ್ನು ದ್ರಾವಿಡ ಚಳುವಳಿಯ ಪರಿಣಾಮವಾಗಿ ಅಸ್ಥಿತ್ವಕ್ಕೆ ಬಂದ ದ್ರಾವಿಡ ಪಕ್ಷಗಳು ಸಹ ವ್ಯಕ್ತಿಗತ ಅಹಮ್ಮಿನಿಂದಾಗಿ ಕರುಣಾನಿಧಿಯವರ ಡಿ.ಎಂ.ಕೆ., ಎಂ.ಜಿ.ಆರ್. ನೇತೃತ್ವದ ಎ.ಐ.ಎ.ಡಿ.ಎಂ.ಕೆ, ವಿಜಯಕಾಂತ್ ಮುಂದಾಳತ್ವದಲ್ಲಿ ಎಂ.ಡಿ.ಎಂ.ಕೆ. ಹಾಗು ಇನ್ನೂ ಹಲವಾರು ಪಕ್ಷಗಳಾಗಿ ಛಿದ್ರವಾಗಿರುವುದನ್ನು ಕಾಣಬಹುದು. ಕಾಶ್ಮೀರಿ ಜನರ ಆಶೋತ್ತರಗಳಿಗಾಗಿ ಸ್ಥಾಪನೆಯಾದ ಶ್ರೀ ಶೇಕ್ ಅಬ್ದುಲ್ಲಾರವರ ನ್ಯಾಷನಲ್ ಕಾನ್ ಫರೆನ್ಸ್, ಅವರ ನಂತರ ಅವರ ಪತ್ರ ಶ್ರೀ ಫಾರೂಕ್ ಅಬ್ದುಲ್ಲಾ ನಂತರ,ಮೊಮ್ಮಗ ಓಮರ್ ಅಬ್ದುಲ್ಲಾರವರ ನಿಯಂತ್ರಣದಲ್ಲಿದೆ.

ಒಟ್ಟಿನಲ್ಲಿ ಹೇಳುವುದಾದರೆ ಇಂಡಿಯಾದ ಬಹುತೇಕ ಪ್ರಾದೇಶಿಕ ಪಕ್ಷಗಳು ಸೃಷ್ಠಿಯಾಗಿದ್ದೇ ನಾಯಕರುಗಳ ವೈಯುಕ್ತಿಕ ಅಧಿಕಾರ ದಾಹದಿಂದ ಮತ್ತು ಒಣಪ್ರತಿಷ್ಠೆಗಳಿಂದ. ತಮ್ಮ ರಾಜ್ಯದ ಹಿತಾಸಕ್ತಿಯನ್ನಾಗಲಿ, ರಾಷ್ಟ್ರದ ಹಿತರಕ್ಷಣೆಯ ಕಾರ್ಯಕ್ರಮವಾಗಲಿ ಇರದೆ ಸ್ಥಾಪನೆಯಾದ ಎಲ್ಲ ಪ್ರಾದೇಶಿಕ ಪಕ್ಷಗಳೂ ಇವತ್ತು ಆಯಾ ಕುಟುಂಬದ ಆಸ್ತಿಗಳಾಗಿ ಪರಿಣಮಿಸಿವೆ. ಅದಕ್ಕೆ ತಕ್ಕಂತೆ ವಂಶ ಪಾರಂಪರ್ಯ ಆಡಳಿತಕ್ಕೆ ನಿದರ್ಶನಗಳಾಗಿ ಹೋಗಿವೆ. ಇಂಡಿಯಾದ ಪ್ರಜಾಸತ್ತೆಯ ದುರಂತವೆಂದರೆ ಯಾವ ನಾಯಕರುಗಳು ಕಾಂಗ್ರೇಸ್ಸಿನ ವಂಶಪಾರಂಪರ್ಯ ರಾಜಕಾರಣವನ್ನು ಖಂಡತುಂಡವಾಗಿ ವಿರೋಧಿಸುತ್ತ ಬೆಳೆದು ಬಂದರೋ ಮುಂದೆ ಅದೇ ನಾಯಕರುಗಳು ತಮ್ಮ ವಂಶದ ಕುಡಿಗಳಿಗಾಗಿ ರಾಜಕಾರಣ ಮಾಡುತ್ತ ತಾವು ಕಟ್ಟಿ ಬೆಳೆಸಿದ ಪಕ್ಷಗಳನ್ನು ಅವರ ಉಡಿಗಳಿಗೆ ಹಾಕಿದ್ದು ಒಂದು ದುರಂತವಾದರೆ, ಕೇಂದ್ರದ ಸರ್ವಾಧಿಕಾರಿ ನೀತಿ ಮತ್ತು ರಾಜ್ಯಗಳತ್ತಲ ಮಲತಾಯಿ ಧೋರಣೆಗಳಿಂದ ಬೇಸತ್ತು ಹೊಸ ರೀತಿಯ ಜನಪರ ರಾಜಕಾರಣ ಮಾಡುತ್ತೇವೆಂದು ಹೇಳಿಕೊಂಡ ಅದೇ ನಾಯಕರುಗಳಿವತ್ತು ಅಧಿಕಾರದ ಆಸೆಯಿಂದ ಅದೇ ರಾಷ್ಟ್ರೀಯ ಪಕ್ಷಗಳ ಬಾಲಂಗೋಚಿಯಾಗಿರುವುದು ಮತ್ತೊಂದು ದುರಂತ.

ಹೀಗಾಗಿ ನಾವು ಕರ್ನಾಟಕದ ಮಟ್ಟಿಗೆ ಒಂದು ಪ್ರಾದೇಶಿಕ ಪಕ್ಷ ಬೇಕೆಂಬ ಆಶಯವನ್ನು ಇಟ್ಟುಕೊಳ್ಳುವ ಮುಂಚೆ ಇವೆಲ್ಲವನ್ನು ಅರಿತಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ನಾವು ಯಾವುದೇ ವ್ಯಕ್ತಿ ಆಧಾರಿತ ಅಥವಾ ಜಾತಿಯಾಧಾರಿತ ಪಕ್ಷವೊಂದನ್ನು ಕಟ್ಟಿ ಕೈಸುಟ್ಟುಕೊಳ್ಳುವ ಬದಲು ನಮ್ಮಲ್ಲಿರುವ ಹಲವು ಜನಪರ ಚಳುವಳಿಗಳನ್ನೇ ಒಂದು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಬೇಕಾದ ಅನಿವಾರ್ಯತೆಯಿದೆ.

( ಈ ಲೇಖನದಲ್ಲಿ ನಾನು ಅಷ್ಟಾಗಿ ಪರಿಣಾಮ ಉಂಟು ಮಾಡದ ಈಶಾನ್ಯ ರಾಜ್ಯಗಳ ಹಲವಾರು ಪ್ರಾದೇಶಿಕ ಪಕ್ಷಗಳನ್ನು , ಕರ್ನಾಟಕದ ಕೆಸಿಪಿ,ಕೆಜಪಿಯ ಬಗ್ಗೆ ಬರೆಯಲು ಹೋಗಿಲ್ಲ. ಜೊತೆಗೆ ಇವತ್ತಿನ ಬೆಳವಣಿಗೆ ಏನೇ ಇರಲಿ ಮರಾಠಿ ಅಸ್ಮಿತೆಯ ಕಾರಣದಿಂದಾಗಿ ಜನಿಸಿದ ಶಿವಸೇನೆಯ ಬಗ್ಗೆಯು ಉಲ್ಲೇ ಖಿಸಿಲ್ಲ)

No comments:

Post a Comment