Oct 17, 2016

ಹಿಂದುತ್ವದ ಅಜೆಂಡಾದಿಂದ ಹೊರಬರಲಾಗದ ಈಶ್ವರಪ್ಪನವರ ‘ಹಿಂದ’ದ ಗೊಂದಲಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜಕೀಯ ನಾಯಕನೊಬ್ಬನಿಗೆ ಸ್ಪಷ್ಟವಾದ ಸಿದ್ದಾಂತವೊಂದು ಇಲ್ಲದೇ ಹೋದಾಗ ಆತನಲ್ಲಿ ಉಂಟಾಗಬಹುದಾದ ಗೊಂದಲಗಳು ಸಮಕಾಲೀನ ರಾಜಕೀಯದಲ್ಲಿ ಅಪಹಾಸ್ಯದ ಮಟ್ಟಕ್ಕಿಳಿದಿಡಬಹುದು. ಇದೀಗ ಸದ್ಯದ ಮಟ್ಟಿಗೆ ’ಹಿಂದ’ದ ನಾಯಕನೆಂದು ಸ್ವಘೋಷಿಸಿಕೊಂಡಿರುವ ಈಶ್ವರಪ್ಪನವರು ಸಹ ಇಂತಹ ನಗೆಪಾಟಲಿಗೆ ಈಡಾಗುತ್ತಿರುವುದರ ಕಾರಣ ಅವರೇ ಸೃಷ್ಠಿಸಿಕೊಂಡ ದ್ವಂದ್ವಗಳ ಪರಿಣಾಮವೇ ಆಗಿದೆ. ಕಳೆದ ವಿದಾನಸಭೆಗೆ ಮುಂಚೆ ಬಾಜಪವನ್ನು ತೊರೆದ ಮಾಜಿಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ತಮ್ಮದೇ ಆದ ಕೆಜೆಪಿಯನ್ನು ಕಟ್ಟಿದಾಗ ಈಶ್ವರಪ್ಪನವರೂ ಸೇರಿದಂತೆ ರಾಜ್ಯಮಟ್ಟದ ಯಾವ ನಾಯಕರೂ ಅವರನ್ನು ಹಿಂಬಾಲಿಸಲಿಲ್ಲ, ಒಬ್ಬ ಶೋಭಾ ಕರಂದ್ಲಾಜೆಯನ್ನು ಹೊರತು ಪಡಿಸಿ. ಆದರೆ ನಡೆದ ಚುನಾವಣೆಗಳಲ್ಲಿ ಕೇವಲ ಶೇಕಡಾ ಹತ್ತರಷ್ಟು ಮತಗಳನ್ನು ಪಡೆಯಲು ಯಾಶಸ್ವಿಯಾದ ಕೆಜೆಪಿ ಹೆಚ್ಚೇನನ್ನೂ ಗೆಲ್ಲಲು ಸಾದ್ಯವಾಗದೇ ಹೋದರು ಅದರ ನಾಯಕನ ಉದ್ದೇಶದಂತೆ ಬಾಜಪವನ್ನು ಸೋಲಿಸಲು ಶಕ್ತವಾಯಿತು. ನಂತರದ್ದು ಈಗ ಇತಿಹಾಸ: ಬಾಜಪದ ಅನಿವಾರ್ಯತೆ ಯಡಿಯೂರಪ್ಪನವರಿಗು, ಯಡಿಯೂರಪ್ಪನವರ ಅಗತ್ಯತೆ ಬಾಜಪಕ್ಕೂ ಅರ್ಥವಾಗಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಏಕೈಕ ಗುರಿಯಿಂದ ಯಡಿಯೂರಪ್ಪನವರನ್ನು ಬಾಜಪ ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಯಾರು ಮೊದಲು ಆಹ್ವಾನವಿತ್ತರೆಂಬುದೀಗ ಅಪ್ರಸ್ತುತ. ಒಟ್ಟಿನಲ್ಲಿ ೨೦೧೪ರ ಲೋಕಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪನವರು ಬಾಜಪದಿಂದ ಸಂಸದರಾದರು. ಆದರೆ ೨೮ ಸ್ತಾನಗಳ ಪೈಕಿ ಬಾಜಪ ಗೆಲ್ಲಲು ಶಕ್ಯವಾಗಿದ್ದು ೧೭ ಸ್ಥಾನಗಳನ್ನು.

ನಂತರ ೨೦೧೮ರ ರಾಜ್ಯವಿದಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇ ಬೇಕೆಂಬ ಹಟಕ್ಕೆ ಬಿದ್ದ ಬಾಜಪ ಲಿಂಗಾಯಿತರ ನಾಯಕ ಯಡಿಯೂರಪ್ಪನವರನ್ನು ಪಕ್ಷಾದ್ಯಕ್ಷರನ್ನಾಗಿ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿತು. ಹೀಗೆ ಅದ್ಯಕ್ಷರಾದ ಯಡಿಯೂರಪ್ಪನವರು ಇಡೀ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ರಾಜಕೀಯ ನಾಯಕನೊಬ್ಬ ಮಾಡಬಹುದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತ, ಪಕ್ಷದ ಯಾವುದೇ ಇತರೇ ಹಿರಿಯ ನಾಯಕರುಗಳನ್ನೂ ಕೇಳದೆ ತಮ್ಮದೇ ಪದಾಧಿಕಾರಿಗಳ ತಂಡವೊಂದನ್ನು ರಚಿಸಿಕೊಂಡರು. ಇದರಿಂದ ಅತೃಪ್ತಗೊಂಡ ಇತರೇ ನಾಯಕರು ಸಾರ್ವಜನಿಕವಾಗಿ ಅದ್ಯಕ್ಷರ ವಿರುದ್ದ ಮಾತಾಡದಿದ್ದರೂ, ಈಶ್ವರಪ್ಪನವರು ಮಾತ್ರ ಯಡಿಯೂರಪ್ಪನವರ ವಿರುದ್ದ ಸಿಡಿದು ನಿಂತರು. ಆಂತರಿಕವಾಗಿ ಇದಕ್ಕೆ ಸಂಘಪರಿವಾರ ಮತ್ತು ಯಡಿಯೂರಪ್ಪನವರ ವಿರೋಧಿಗಳು ಬೆಂಬಲ ನೀಡುತ್ತ ಹೋದರು. ಇದರಿಂದ ಉತ್ತೇಜಿತರಾದಂತೆ ಕಂಡು ಬಂದ ಈಶ್ವರಪ್ಪನವರು ಇದೀಗ 'ಹಿಂದ’ವನ್ನು ಸಂಘಟಿಸುವ ನೆಪದಲ್ಲಿ ರಾಯಣ್ಣ ಬ್ರಿಗೇಡನ್ನು ಸ್ಥಾಪಿಸಿ, ಸಂಘಟನೆ ಮಾಡುವ ಪ್ರಯತ್ನದಲ್ಲಿದ್ದಾರೆ. ಬಾಜಪದ ಹೈಕಮ್ಯಾಂಡಿನ ಪ್ರತಿನಿಧಿಗಳು ನೀಡಿದ ಎಚ್ಚರಿಕೆಯನ್ನೂ ಗಮನಿಸದೆ ಈಶ್ವರಪ್ಪನವರು ಮುಂದುವರೆದಿದ್ದಾರೆ. ಈಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ಈಶ್ವರಪ್ಪನವರು ನೀಡಿರುವ ಸಂದರ್ಶನ ಅವರ ಸೈದ್ದಾಂತಿಕ ದಿವಾಳಿತನಕ್ಕೆ, ಗೊಂದಲಗಳಿಗೆ ಸಾಕ್ಷಿಯಾಗಿದೆ.

ಬಾಜಪದೊಳಗೆ ಇರುವ ಎಸ್.ಸಿ.ಎಸ್.ಟಿ. ಮತ್ತು ಹಿಂದುಳಿದ ವಿಭಾಗಗಳಿಂದಲೇ ಅವರನ್ನು ಸಂಘಟಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಅವರು, ಅನೇಕ ಮಠಾಧೀಶರು, ಬಹಳಷ್ಟು ದಲಿತರು, ಕುರುಬರು, ಮಡಿವಾಳರು, ಉಪ್ಪಾರರು ಸೇರಿದಂತೆ ನೂರಾರು ಜಾತಿಗಳವರು ಬಾಜಪದ ಜೊತೆಗೆ ನೇರವಾಗಿ ಗುರುತಿಸಿಕೊಳ್ಳಲು ಹಿಂಜರಿಯುತ್ತಾರೆ. ಅಂತವರನ್ನು ರಾಯಣ್ಣ ಬ್ರಿಗೇಡ್ ಮೂಲಕ ಬಾಜಪದತ್ತ ಸೆಳೆಯುವ ಉದ್ದೇಶ ತಮ್ಮದು ಎನ್ನುತ್ತಾರೆ. ಆದರೆ ಅವರೇ ಪ್ರಸ್ತಾಪಿಸುವ ಆ ಜಾತಿಗಳ ಮಠಾಧೀಶರು, ಹಿರಿಯರು, ಆ ಶೋಷಿತ ಜಾತಿಗಳು ಯಾಕೆ ನೇರವಾಗಿ ಬಾಜಪದೊಂದಿಗೆ ಗುರುತಿಸಿಕೊಳ್ಳಲು ಹಿಂಜರಿಯುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅಲ್ಲಿಗೆ ಈಶ್ವರಪ್ಪನವರೇ ಒಪ್ಪಿಕೊಳ್ಳುವಂತೆ ತಳ ಜಾತಿಗಳು ಬಾಜಪದ ಜೊತೆ ಗುರುತಿಸಿಕೊಳ್ಳಲು ಹಿಂಜರಿಯುವಷ್ಟು ಮಟ್ಟಿಗೆ ಅದರ ಸಿದ್ದಾಂತಗಳನ್ನು ನಿರಾಕರಿಸುತ್ತಿದ್ದಾರೆ ಎನ್ನುವುದೇ ಸತ್ಯ! ಬೇರೆ ಯಾವ ಬಾಜಪದ ನಾಯಕರೂ ಈ ಮಟ್ಟಿಗಿನ ಸತ್ಯವನ್ನು ಇಷ್ಟು ಬಹಿರಂಗವಾಗಿ ಒಪ್ಪಿಕೊಳ್ಳಲು ಸಾದ್ಯವಿಲ್ಲ. ಜೊತೆಗೆ ಬ್ರಿಗೇಡಿನ ಮೂಲಕ ಹಿಂಜರಿಯುವ ಜನತೆಯನ್ನು ಹೇಗೆ ಬಾಜಪಕ್ಕೆ ಮತ ಹಾಕುವಂತೆ ಮಾಡಲಾಗುತ್ತದೆಯೆಂಬ ಪ್ರಶ್ನೆಗೂ ಅವರಲ್ಲಿ ಉತ್ತರವಿಲ್ಲ.

ಇನ್ನು ತಾವು ಎಂದಿಗೂ ಬಾಜಪಕ್ಕೆ ದ್ರೋಹ ಬಗೆಯುವುದಿಲ್ಲ ಮತ್ತು ರಾಯಣ್ಣ ಬ್ರಿಗೇಡ್ ಬಾಜಪದ ಅಧೀನ ಸಂಘಟನೆಯಲ್ಲ ಎನ್ನುವ ಅವರು ತಮ್ಮ ಬ್ರಿಗೇಡ್ ರಾಜಕೀಯೇತರ ಸಂಘಟನೆಯೆಂತಲೂ ಒತ್ತಿ ಹೇಳುತ್ತಾರೆ. ಜೊತೆಗೆ ನಮೋ ಬ್ರಿಗೇಡಿಗೂ ಬಾಜಪಕ್ಕೂ ಯಾವ ಸಂಬಂದವೂ ಇರಲಿಲ್ಲ, ಆದರೂ ಅವರುಗಳೇ ಸೇರಿ ಮೋದಿಯವರನ್ನು ಪ್ರದಾನಿಯನ್ನಾಗಿ ಮಾಡಿದರು ಎಂದು ಹೇಳುವುದರ ಮೂಲಕ ತಮಗಿರುವ ರಾಜಕೀಯ ಜ್ಞಾನವನ್ನು ಪ್ರದರ್ಶಿಸಿದ್ದಾರೆ. ರಾಜಕೀಯವಾಗಿರದ ಒಂದು ಸಂಘಟನೆಯಿಂದ ಹೇಗೆ ಬಾಜಪಕ್ಕೆ ಉಪಯೋಗವಾಗುತ್ತದೆಯೆಂಬ ಪ್ರಶ್ನೆಗೆ ಅವರು ನಿರುತ್ತರರಾಗುತ್ತಾರೆ. ಅಂತಿಮವಾಗಿ ಅವರಿಗೆ ತಮ್ಮ ರಾಯಣ್ಣ ಬ್ರಿಗೇಡಿನ ಒಟ್ಟು ಸ್ವರೂಪದ ಬಗ್ಗೆಯೇ ಗೊಂದಲವಿರುವಂತೆ ಕಾಣುತ್ತಿದೆ. ಅಷ್ಟಲ್ಲದೆ ರಾಯಣ್ಣ ಬ್ರಿಗೇಡಿನ ಮೂಲಕ ಹೇಗೆ ಹಿಂದ ವರ್ಗದವರಿಗೆ ನ್ಯಾಯ ದೊರಕಿಸಬಹುದೆಂಬುದರ ಬಗ್ಗೆಯೂ ಅವರಲ್ಲಿ ಯಾವ ಯೋಜನೆಗಳೂ ಇರುವಂತೆ ಕಾಣುತ್ತಿಲ್ಲ. ಒಂದು ರಾಜಕೀಯೇತರ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವ ಸಮುದಾಯಗಳು ಚುನಾವಣೆಯ ಕಾಲದಲ್ಲಿ ಹೇಗೆ ಒಂದು ರಾಜಕೀಯ ಪಕ್ಷದತ್ತ ಸಾಮೂಹಿಕವಾಗಿ ಆಕರ್ಷಿತರಾಗುತ್ತಾರೆಂಬುದೂ ಸಹ ಈಶ್ವರಪ್ಪನವರಿಗೆ ಗೊತ್ತಿಲ್ಲ.

ಇನ್ನು ಅಹಿಂದದ ನಾಯಕ ಸಿದ್ದರಾಮಯ್ಯನವರದು ಸಂಕುಚಿತ ಮನೋಬಾವ ಎಂದು ಹೇಳುವ ಈಶ್ವರಪ್ಪನವರು ತಾವು ಮಾತ್ರ ಹಿಂದಕ್ಕೆ ಮಾತ್ರ ಸೀಮಿತವಾಗಿದ್ದು ತಮ್ಮದು ಸಂಕುಚಿತ ಮನೋಬಾವ ಎನಿಸುವುದಿಲ್ಲ. ಇನ್ನು ದಲಿತರ ಆಹಾರಕ್ರಮದ ಬಗ್ಗೆ ಮಾತಾಡುತ್ತ ತಾವು ಗೋಮಾತೆಗೆ ಗೌರವ ನೀಡುವವರು ಮತ್ತು ಗೋಮಾಂಸ ತಿನ್ನದಂತೆ ದಲಿತರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇವೆ ಎನ್ನುವ ಮೂಲಕ ತಮ್ಮ ಹಿಂದುತ್ವದ ಅಜೆಂಡಾವನ್ನು ಹೇಳಿಕೊಳ್ಳುತ್ತಾರೆಯೇ ಹೊರತು ಸಾಮಾಜಿಕವಾಗಿ, ಆರ್ಥಿಕವಾಗಿ ದಲಿತರಿಗಾಗಿ ಹಾಕಿಕೊಳ್ಳಬಹುದಾಗಿದ್ದ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಅವರು ಮಾತಾಡುವುದಿಲ್ಲ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮತಬ್ಯಾಂಕನ್ನಾಗಿ ಮಾಡಿಕೊಂಡಿದೆಯೆಂದು ಆರೋಪಿಸುವ ಅವರು ತಾವ್ಯಾಕೆ ಅಲ್ಪಸಂಖ್ಯಾತರನ್ನು ಹಿಂದದ ಒಳಗೆ ಸೇರಿಸಿಲ್ಲವೆಂಬುದಕ್ಕೆ ಯಾವ ಕಾರಣವನ್ನೂ ನೀಡುವುದಿಲ್ಲ.

ಒಟ್ಟಿನಲ್ಲಿ ಈಶ್ವರಪ್ಪನವರ ಸದ್ಯದ ನಡವಳಿಕೆಗಳನ್ನು, ಹೇಳಿಕೆಗಳನ್ನು ನೋಡುತ್ತಿದ್ದರೆ ಅವರೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ಸಂಘಪರಿವಾರದ ಒಬ್ಬ ನಾಯಕ ಮಾತ್ರ ಎನ್ನಬಹುದು. ಅಷ್ಟರಮಟ್ಟಿಗೆ ಅವರ ಯೋಚನೆಗಳು, ಮಾತುಗಳು ಸಂಕುಚಿತ ದೃಷ್ಠಿಯಿಂದ ಕೂಡಿವೆ. ತಮ್ಮ ತಲೆಯಲ್ಲಿ ಸಂಪೂರ್ಣವಾಗಿ ಹಿಂದುತ್ವವಾದಿ ಅಜೆಂಡಾವನ್ನು ತುಂಬಿಕೊಂಡಿರುವ ಅವರಿಗೆ ಹಿಂದುತ್ವದ ಹೊರತಾಗಿ ರಾಜಕೀಯ ಮಾಡುವ ಯಾವ ಅನಿವಾರ್ಯತೆಯಾಗಲಿ, ಅರಿವಾಗಲಿ ಇರುವಂತೆ ಕಾಣುವುದಿಲ್ಲ. 

ಬಹುಶ: ಬಾಲ್ಯದಿಂದಲೂ ಸಂಘಪರಿವಾರದ ನೆರಳಲ್ಲಿ ಬೆಳೆದು ಬಂದಿರುವ ಈಶ್ವರಪ್ಪನವರಿಗೆ ಸಂಘಪರಿವಾರದಾಚೆಗೂ ನಿಂತು ಅವರೇ ಹೇಳುವ ಹಿಂದ ವರ್ಗದ ಶ್ರೇಯೋಭವೃದ್ದಿಗೆ ಕೆಲಸ ಮಾಡಬಹುದೆನ್ನುವ ಸತ್ಯ ಗೊತ್ತಿದ್ದಂತೆ ಕಾಣುತ್ತಿಲ್ಲ. ಆದರೆ ಅಹಿಂದ ವರ್ಗದಿಂದ ಅವರು ಒಂದಷ್ಟು ಮತಗಳಿಸಬಹುದೇ ಹೊರತು ರಾಜಕೀಯವಾಗಿ ಮಾನಸಿಕವಾಗಿ ಹಿಂದ ವರ್ಗವನ್ನು ಸಂಘಪರಿವಾರದ ಹಿಂಬಾಲಕರನ್ನಾಗಿ ಮಾಡಲು ಸಾದ್ಯವಿಲ್ಲವೆಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಯಾಕೆಂದರೆ ಬಾಜಪದ ಗುಪ್ತಕಾರ್ಯಸೂಚಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಬಲ್ಲ ಅರಿವು ಮತ್ತು ಆತ್ಮವಿಶ್ವಾಸ ಇಂದಿನ ಅಹಿಂದ ಪೀಳಿಗೆ ಇದೆ ಎನ್ನುವುದನ್ನು ಅವರು ಮರೆಯಬಾರದು.

No comments:

Post a Comment