Mar 19, 2016

ಭಾರತ್ ಮಾತಾ ಕೀ ಜೈ

bharat-mata-ki-jai
ಡಾ. ಅಶೋಕ್. ಕೆ. ಆರ್
19/03/2016
‘ಈ ಸಲ ಆಗಿದ್ದಾಗೋಗ್ಲಿ. ಇಂಡಿಪೆಂಡೆನ್ಸ್ ಡೇಗೆ ಟೌನ್ ಹಾಲಲ್ಲಿ ನಡೆಯೋ ಮಾರ್ಚ್ ಫಾಸ್ಟಿನಲ್ಲಿ ಇರಲೇಬೇಕು’ ಅಂತ ತೀರ್ಮಾನ ಮಾಡ್ಕೊಂಡು ಸ್ಕೌಟ್ಸಿನ ಮಿನಿ ವಿಭಾಗವಾದ ಕಬ್ಬಿಗೆ ಸೇರಿದ್ದು ಮೂರನೇ ಕ್ಲಾಸಿನಲ್ಲಿ. ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್…….ಲೆಫ್ಟ್…….ಲೆಫ್ಟ್……ಲೆಫ್ಟ್ ರೈಟ್ ಲೆಫ್ಟ್ ರೈಟ್……….. ಅಂತ ಕೂಗ್ತಾ ಕೈಬೀಸ್ತಾ ಕಾಲನ್ನು ನೆಲಕ್ಕೆ ಜೋರಾಗಿ ಕುಟ್ತಾ ಹೋಗ್ತಿದ್ರೆ … ಅದರ ಮಜಾನೇ ಬೇರೆ ಬಿಡಿ. ಈ ಮಜಾ ಒಂದು ದಿನ ಗೆಳೆಯನಿಗೆ ಸಜೆಯಾಗಿಬಿಟ್ಟಿತು. Co ordination ಸರಿಯಾಗಿ ಬರಲಿಲ್ಲವೆಂಬ ಕಾರಣಕ್ಕೆ ಮಾರ್ಚ್ ಫಾಸ್ಟು ಅಭ್ಯಾಸ ನಡೀತಿರಬೇಕಾದರೇನೇ ಛಟೀರಂತ ಅವನ ತೋಳಿನ ಮೇಲೆ ಬಾರಿಸಿದ್ದರು. ‘ಓ ಸರಿಯಾಗಿ ನಡೆಯದಿದ್ದರೆ ಏಟು ಗ್ಯಾರಂಟಿ’ ಅಂತ ಗೊತ್ತಾಗಿದ್ದೇ ತಡ ಮಾರನೇ ದಿನದಿಂದಲೇ ಕಬ್ಬಿಗೂ ಮಾರ್ಚ್ ಫಾಸ್ಟಿಗೂ ಟಾಟಾ ಬೈ ಬೈ! ಆ ವರ್ಷದ ಸ್ವಾತಂತ್ರ್ಯ ದಿನದಂದು ಹುಣಸೂರಿನ ಟೌನ್ ಹಾಲಿನಲ್ಲಿ ಪ್ರೇಕ್ಷಕರಾಗಷ್ಟೇ ಉಳಿದು ಮಾರ್ಚ್ ಫಾಸ್ಟು ನೋಡುವುದು ಹಿಂಸೆಯಂತೆಯೇ ಭಾಸವಾಗಿತ್ತು.

ಹೈಸ್ಕೂಲಿಗೆ ಹೋದ ಮೇಲೆ ಮತ್ತೆ ಮಾರ್ಚ್ ಫಾಸ್ಟಿನೆಡೆಗಿನ ಆಸಕ್ತಿ ಚಿಗುರೊಡೆದು ಸ್ಕೌಟ್ಸು ಸೇರುವಂತೆ ಮಾಡಿತ್ತು. ನಮ್ ಸೆಂಟ್ ಜೋಸೆಫ್ ಶಾಲೆಯ ಪಿಟಿ ಮಾಸ್ಟ್ರು ವಸಂತ್ ಸರ್, ಆ್ಯನಿ ಸಿಸ್ಟರ್ ಸ್ಕೌಟ್ಸು ಗೈಡ್ಸಿನ ಇನ್ ಚಾರ್ಜ್ ಆಗಿದ್ದರು. ಸ್ಕೌಟ್ಸು ಗೈಡ್ಸಂದ್ರೆ ಸ್ವಾತಂತ್ರ್ಯ ದಿನಾಚರಣೆಯ ದಿನ, ಗಣರಾಜ್ಯೋತ್ಸವದ ದಿನ ಶಾಲೆಗೆ ಬೆಳಿಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಬಂದು ಶಾಲೆಯಲ್ಲಿ ಧ್ವಜಾರೋಹಣ ಮುಗಿಸಿದ ನಂತರ ಶಿಸ್ತಾಗಿ ಸಾಲಿನಲ್ಲಿ ನಮ್ ಶಾಲೆಯಿಂದ ನೂರಿನ್ನೂರು ಮೀಟರು ದೂರದಲ್ಲಿದ್ದ ಟೌನ್ ಹಾಲಿಗೆ ಹೋಗಿ ಅಲ್ಲಿ ನಿಂತು, ಕಾರ್ಯಕ್ರಮ ಚೂರು ಲೇಟಾದರೆ ಕುಳಿತು ಧ್ವಜಾರೋಹಣ ಮುಗಿದ ನಂತರ ಮತ್ತೆ ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್ ಅಂತ ಕೂಗ್ತಾ ಒಂದು ಸುತ್ತು ಹೊಡೆದು ಮತ್ತೆ ಮೊದಲ ಸ್ಥಾನಕ್ಕೆ ಬಂದು ಸ್ವಲ್ಪೊತ್ತು ಕುಳಿತು ನಂತರ ಚುರುಮುರಿ, ಐಸ್ಕ್ರೀಂ ತಿಂದ್ಕೊಂಡು ಮನೆಗೆ ಹೋಗೋದು ಅಷ್ಟೇ ಅಂದ್ಕೊಂಡಿದ್ದೆ. ಅದರ ಜೊತೆಗೆ ಸ್ಕೌಟ್ಸು ಗೈಡ್ಸಿನಲ್ಲಿ ಇನ್ನು ಅನೇಕಾನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ವಾರಕ್ಕೊಂದಷ್ಟು ತರಬೇತಿ ಇರೋದು. ಹಗ್ಗವಿಡಿದು ಗಂಟು ಹಾಕೋದು ಕಲಿಸೋರು, ನೆಲದ ಮೇಲೆ ನದಿ ಬರೆದು ಅದಕ್ಕೆ ಸೇತುವೆ ಕಟ್ಟಬೇಕಾದರೆ ನದಿಯ ವಿಸ್ತಾರ ಎಷ್ಟಿದೆ ಅನ್ನೋದನ್ನ ಲೆಕ್ಕ ಹಾಕೋದು ಹೇಗೆ ಅಂತ ಹೇಳಿ ಕೊಡೋರು, ಸ್ಕೌಟ್ಸು ಗೈಡ್ಸಿಗೇ ಹಾಡಿತ್ತು, ಸೆಲ್ಯೂಟಿತ್ತು, ಹೃದಯಕ್ಕೆ ಹತ್ತಿರವೆಂಬ ಕಾರಣದಿಂದ ಎಡಗೈಯಿಂದ ಕೈಕುಲುಕಬೇಕಿತ್ತು……ಹಿಂಗೇ ಸ್ಕೌಟ್ಸು ಗೈಡ್ಸಿನಲ್ಲಿ ಹತ್ತಲವು ನೀತಿ ನಿಯಮ ರೀತಿ ರಿವಾಜುಗಳಿದ್ದವು. ಎಲ್ಲಕ್ಕಿಂತ ಆಸಕ್ತಿದಾಯಕವಾದದ್ದೆಂದರೆ ಸ್ಕೌಟ್ಸು ಗೈಡ್ಸಿನ ಕ್ಯಾಂಪಿನ ನೆಪದಲ್ಲಿ ಟ್ರಿಪ್ಪು ಮಾಡುವ ಅವಕಾಶ ಸಿಕ್ಕಿದ್ದು.

ಮೊದಲ ಕ್ಯಾಂಪು ನಂಜನಗೂಡಿನಲ್ಲಿ ನಡೆದಿತ್ತು. ಅಲ್ಲಿನ ಛತ್ರವೊಂದರಲ್ಲಿ ವಾಸ್ತವ್ಯ. ಅವ್ಯವಸ್ಥೆ ತುಂಬಾ ಚೆನ್ನಾಗಿತ್ತು! ಟಾಯ್ಲೆಟ್ಟಿಗೆ ಹೋದರೆ ನೀರಿರುತ್ತಿರಲಿಲ್ಲ. ನೀರಿಲ್ಲದ ಹೊತ್ತಿನಲ್ಲೇ ಗೆಳೆಯನೊಬ್ಬನಿಗೆ ಅರ್ಜೆಂಟಾಗಿ ಕೊನೆಗೆ ನ್ಯೂಸ್ ಪೇಪರ್ರನ್ನು ಭಕ್ತಿ ಭಾವದಿಂದ ಉಪಯೋಗಿಸಿದ್ದ. ನ್ಯೂಸ್ ಪೇಪರನ್ನು ಈ ರೀತಿಯಾಗಿ ಉಪಯೋಗಿಸಿದವರ ಸಂಖೈ ಬಹಳಷ್ಟಿತ್ತು! ನಮ್ ಶಾಲೇಲಿ ಸ್ಕೌಟ್ಸು ಗೈಡ್ಸು ತರಬೇತಿಯಲ್ಲಿ ಹೇಳಿಕೊಡುತ್ತಿದ್ದುದನ್ನೇ ಇಲ್ಲಿ ಇನ್ನೂ ಆಳವಾಗಿ ಕಲಿಸುತ್ತಿದ್ದರು. ಇಂತಹ ಕಲಿಕೆಗಿಂತ ಹೆಚ್ಚಿನ ಪ್ರಯೋಜನ ವಿವಿಧ ಊರುಗಳಿಂದ ಬಂದವರೊಂದಿಗಿನ ಒಡನಾಟ. ನಮ್ಮದೇ ಶಾಲೆಯ ಸಹಪಾಠಿಗಳೊಂದಿಗೆ ಬೆಳೆವ ಬಾಂಧವ್ಯ. ಸರಿಯಾಗಿ ಉರಿಯದ ಕಾರಣ ಲೋಳೆ ಲೋಳೆಯಾಗಿದ್ದ ಬೆಂಡೆಕಾಯಿ ಪಲ್ಯವನ್ನೂ ಮರೆತಿಲ್ಲ! ಬೆಂಡೇಕಾಯಿ ನನಗೆ ಬಾಳಾ ಇಷ್ಟ ಅಂತ ಒಂದು ಸೌಟು ಹೆಚ್ಚು ಹಾಕಿಸಿಕೊಂಡು ವಾಕರಿಕೆ ಬರಿಸಿಕೊಂಡಿದ್ದೆ, ಒಂದು ಸೌಟು ಹೆಚ್ಚು ವಾಕರಿಕೆ! ಮುಂದಿನ ಕ್ಯಾಂಪು ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ. ಇದು ನಿಜಕ್ಕೂ ಕ್ಯಾಂಪಿನಂತೆಯೇ ಇತ್ತು. ಟೆಂಟಿನಲ್ಲಿ ವಾಸ್ತವ್ಯ. ಟೆಂಟಿಗೆರಡು ಲಾಟೀನು. ರಾತ್ರಿಯೊತ್ತು ಟೆಂಟಿನ ಸಂದಿಗೊಂದಿಗಳಲ್ಲಿ ಚೇಳು! ಕ್ಯಾಂಪಿನಲ್ಲಿ ನಡೆದ ಸಂಗತಿಗಳಿಗಿಂತ ಗೆಳೆಯ ಗೆಳತಿಯರ ನಡುವಿನ ಮುನಿಸು ಸೊಗಸು ಕಿತ್ತಾಟಗಳೇ ಹೆಚ್ಚು ನೆನಪಿನಲ್ಲಿವೆ. ಕ್ಯಾಂಪು ಮುಗಿದ ಮೇಲೆ ಚಿತ್ರದುರ್ಗದ ಕೋಟೆ ನೋಡಲು ಬಸ್ಸಿನಲ್ಲಿ ಹೊರಟೆವು. ಇಂಜಿನ್ನಿನ ಪಕ್ಕದ ಸೀಟಿನಲ್ಲಿ ಕುಳಿತಿದ್ದೆ. ಪಕ್ಕದಲ್ಲಿ ಕುಳಿತಿದ್ದಾತನಿಗೆ ಬಲಗಾಲಿರಲಿಲ್ಲ. ಏನಾಯ್ತು ಅಂತ ಕೇಳಿದ್ದೇ ತಡ ಆತ ದಾವಣಗೆರೆ ಚಿತ್ರದುರ್ಗ ರೋಡಿನ ವ್ಯಥೆಯ ಕಥೆಗಳನ್ನು ಹೇಳಲಾರಂಭಿಸಿದ. ಇದೇ ರೋಡಲ್ಲಿ ಅಪಘಾತವಾಗಿ ಕಾಲು ಕಳೆದುಕೊಂಡಿದ್ದಂತೆ. ಅಪಘಾತಗಳಿಗೆ ವಿಪರೀತ ಫೇಮಸ್ಸಂತೆ ಆ ರಸ್ತೆ. ಒಂದೊಂದು ಜಾಗ ಬಂದಾಗಲೂ ಇಲ್ಲೇ ನೋಡಿ ಸುನಿಲ್ ಸತ್ತಿದ್ದು, ಇಲ್ಲೇ ನೋಡಿ ಶಂಕರ್ ನಾಗ್ ಸತ್ತಿದ್ದು, ಇದೇ ಹೊಂಡಕ್ಕೆ ಬಸ್ಸು ಬಿದ್ದು ಹತ್ತಾರು ಮಂದಿ ಸತ್ತಿದ್ದು, ಇಲ್ಲೇ ನೋಡಿ ನನ್ನ ಕಾಲು ಹೋಗಿದ್ದ ಅಂತ ಅಪಘಾತಗಳ ಬಗ್ಗೆ ರನ್ನಿಂಗ್ ಕಾಮೆಂಟರಿ ಕೊಟ್ಟು ನಡುಕ ಹುಟ್ಟಿಸಿದ್ದ. ನಡುಕ ಹೆಚ್ಚಿಸಲು ಆ ಖಾಸಗಿ ಬಸ್ಸಿನ ಶರವೇಗದ ಡ್ರೈವರ್ರೂ ಕಾರಣ!

ಹೈಸ್ಕೂಲಿನ ಚೆಂದದ ದಿನಗಳನ್ನು ಮುಗಿಸಿ ಪಿಯುಸಿಗೆ ಮಂಡ್ಯಕ್ಕೆ ಬಂದ ನಂತರ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳೆಲ್ಲ ‘ರಜೆಯ’ ದಿನಗಳಾಗಷ್ಟೇ ಮನದಲ್ಲಿ ಉಳಿದವು. ಪಿಯು ಕಾಲೇಜಿನಲ್ಲೂ ಧ್ವಜ ಹಾರಿಸುತ್ತಿದ್ದರು, ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆ ಇರುತ್ತಿತ್ತು. ಯಾಕೋ ಎನ್.ಸಿ.ಸಿಗೆ ಸೇರಲು ಮನಸ್ಸಾಗಲಿಲ್ಲ. ಮೊದಲ ಪಿಯುಸಿಯಲ್ಲಿ ಅಧ್ಯಯನವೆಲ್ಲ ಥಿಯೇಟರುಗಳಲ್ಲಿ, ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದರೆ ಎರಡನೇ ಪಿಯುಸಿ ಪೂರ್ತಿ ಟ್ಯೂಷನ್ನು ಕಾಲೇಜು ಓದು ಓದು! ಇನ್ನು ಮೆಡಿಕಲ್ ಓದಲು ಮೈಸೂರಿಗೆ ಬಂದ ಮೇಲೆ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದೇ ಇಲ್ಲ. ರಜೆ ಬಂದ್ರೆ ಹೆಚ್ಚಿನಂಶ ಮಂಡ್ಯಕ್ಕೆ ಹೊರಟುಬಿಡುತ್ತಿದ್ದೆ. ಮೊದಲೆರಡು ವರ್ಷ ಮುಗಿಯುವಷ್ಟರಲ್ಲಿ ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಕಾರ್ಲ್ ಮಾರ್ಕ್ಸ್, ಚಾರು ಮಜುಂದಾರ್ ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಜೊತೆಗೆಲ್ಲ ಒಡನಾಟ ಶುರುವಾಗಿತ್ತು. ಭಗತ್ ಸಿಂಗ್ ಹೆಸರಿನ ಸಂಘಟನೆಯೊಂದು (ಅದರ ಹೆಸರು ಮರೆತಿದೆ) ಶಾಂತಲಾ ಥಿಯೇಟರ್ ಎದುರಿಗಿನ ಪಾರ್ಕಿನಲ್ಲಿ ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿ ಧ್ವಜಾರೋಹಣ ನಡೆಸಿ ಸ್ವಾತಂತ್ರೋತ್ಸವ ಆಚರಿಸುತ್ತಿದ್ದರು. ಟೆಂಪೋದಲ್ಲಿ ಸಿಟಿಗೆ ಹೋದಾಗ ಒಂಭತ್ತೂವರೆಯಾಗಿತ್ತು. ಶಾಂತಲಾ ಥಿಯೇಟರಿನ ಕಡೆಗೆ ನಡೆದು ಹೊರಟೆ, ಹತ್ತೂವರೆಯಷ್ಟೊತ್ತಿಗೆ ಅಲ್ಲಿಗೆ ತಲುಪಿಬಿಟ್ಟಿದ್ದೆ. ತಯಾರಿಗಳು ನಡೆಯುತ್ತಿದ್ದವು. ಅಲ್ಲೇ ಒಂದು ಕಡೆ ಕುಂತು ಅದೂ ಇದೂ ಯೋಚಿಸುತ್ತ ಕಾಲ ಕಳೆದೆ. ಧ್ವಜಾರೋಹಣ ನಡೆಯಿತು, ಜೊತೆಗೆ ಬೋಲೋ ಭಾರತ್ ಮಾತಾ ಕೀ ಜೈ ಅನ್ನುವ ಘೋಷಣೆಗಳು ಕೂಗಿದವು. ನಾನು ಮೊದಲ ಬಾರಿಗೆ ಜೈ ಅಂತ ಕೋರಸ್ ಕೂಗಿದ್ದು ಅವತ್ತೇ. ಕಾರ್ಯಕ್ರಮ ಮುಗಿದಾಗ ಒಂದಾಗಿತ್ತು. ಕೊಟ್ಟ ಸ್ವೀಟನ್ನು ತಿಂದುಕೊಂಡು ಹೆಚ್ಚು ಕಮ್ಮಿ ಹತ್ತು ಕಿಲೋಮೀಟರು ದೂರವಿರುವ ರೂಮಿನೆಡೆಗೆ ನಡೆಯುತ್ತಾ ಹೊರಟೆ, ಭಗತ್ ಸಿಂಗ್ ಜೊತೆ ಹರಟುತ್ತ! ಐದೂವರೆ ವರ್ಷದ ಮೆಡಿಕಲ್ಲು ಜೀವನದಲ್ಲಿ ಅದೊಂದೇ ಸಲವೇನೋ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದು.

ಮುಂದೆ ಗುಲ್ಬರ್ಗಾಗೆ ಬಂದಾಗ ಹಾಸ್ಟೆಲ್ಲು ವಾಸ. ಒಂದು ದಿನದ ರಜೆಗೆ ಮಂಡ್ಯಕ್ಕೆ ಹೋಗಿ ಬರುವಷ್ಟು ಗುಲ್ಬರ್ಗ ಹತ್ತಿರದಲ್ಲಿಲ್ಲ. ಗುಲ್ಬರ್ಗದ ಸಿನಿಮಾ ಥಿಯೇಟರಿನಲ್ಲಿ ಪಿಕ್ಚರ್ ತೋರಿಸುವ ಮೊದಲು ರಾಷ್ಟ್ರಗೀತೆ ಹಾಕುತ್ತಿದ್ದರು. ಶಾಲಾ ದಿನಗಳ ನಂತರ ರಾಷ್ಟ್ರಗೀತೆಯನ್ನು ಹಾಡಿದ್ದು ಮೈಸೂರಿನಲ್ಲಿ ಒಮ್ಮೆ ಮಾತ್ರ. ಪಿಚ್ಚರ್ ಥಿಯೇಟರಿನಲ್ಲಿ ನಿಂತು ರಾಷ್ಟ್ರಗೀತೆಯನ್ನು ಗುನುಗುವಾಗ ಗೊತ್ತಾಯಿತು, ಎಷ್ಟೋ ಪದಗಳು ಮರೆತು ಹೋಗಿಬಿಟ್ಟಿವೆಯೆಂದು! ಅರೆರೆ ರಾಷ್ಟ್ರಗೀತೆಯನ್ನೇ ತಡವರಿಸುವಷ್ಟು ಮರೆವು ಶುರುವಾಗಿಬಿಟ್ಟಿತಾ ಅಂತ ಅನುಮಾನವಾಯಿತು, ರವಷ್ಟು ನಾಚಿಕೆಯಾಯಿತು. ಅಭ್ಯಾಸ ತಪ್ಪೋದ್ರೆ ಹಾಗೆಯೇ ಅಲ್ಲವೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಗುಲ್ಬರ್ಗದಲ್ಲಿ ಮಿಸ್ಸೇ ಮಾಡದೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ದಿನ ಹಾಸ್ಟೆಲ್ಲಿನ ಧ್ವಜಾರೋಹಣ, ನಂತರ ಕಾಲೇಜಿನ ಧ್ವಜಾರೋಹಣದಲ್ಲಿ ಭಾಗವಹಿಸುತ್ತಿದ್ದೆ. ಹಾಸ್ಟೆಲ್ಲಿನಲ್ಲಿ ಸಾಮಾನ್ಯವಾಗಿ ಕೇಸರಿಬಾತು, ಸಣ್ಣ ಜಲ್ಲಿ ಕಾಂಕ್ರೀಟು. ಕಾಂಕ್ರೀಟಿಗೂ ನಮಗೂ ಆಗಿ ಬರೋದಿಲ್ಲ, ಆಗಾಗಿ ಒಂದು ಸ್ಪೂನು ಹೆಚ್ಚು ಕೇಸರಿಬಾತು ತಿಂದು ಕಾಲೇಜಿಗೆ ಹೋಗಿ ಅಲ್ಲಿನ ಧ್ವಜಾರೋಹಣ ಮುಗಿಯುವಾಗ ಯಾರಾದರೊಬ್ಬರು ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದರೆ ಕೋರಸ್ಸಿನಂತೆ ನಾವು ‘ಜೈ’ ಎಂದು ಬರುತ್ತಿದ್ದೆವು. ಯಾರೂ ಕೂಗದಿದ್ದರೆ ನಮ್ಮ ಕೋರಸ್ಸೂ ಇರುತ್ತಿರಲಿಲ್ಲ.

ಇನ್ನು ಓದೋದೆಲ್ಲ ಮುಗಿಸಿ ಕೆಲಸಕ್ಕೆ ಸೇರಿದ್ದು ಖಾಸಗಿ ಕಾಲೇಜಿಗೆ. ಮತ್ತೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ರಜಾ ದಿನಗಳಂತಷ್ಟೇ ಕಾಣಿಸಲಾರಂಭಿಸಿತು. ಕ್ಯಾಮೆರಾ ತಕ್ಕೊಂಡು ಗಾಡಿ ಹತ್ಕೊಂಡು ಊರೂರು ಅಲೆದಿದ್ದೇ ಹೆಚ್ಚು. ಇಲ್ಲ, ರಜಾ ಬಂತು ಅಂದ್ರೆ ಊರು ಸೇರ್ಕೋಳ್ಳೋದು. ಅಲ್ಲಿಗೆ ತೂಗಿ ಕಳೆದು ಗುಣಿಸಿ ಭಾಗಾಕಾರ ಮಾಡಿದ್ರೂ ಮೂವತ್ತೊಂದು ವರ್ಷದಲ್ಲಿ ಹೆಚ್ಚೆಂದರೆ ಒಂದು ಆರರಿಂದ ಏಳು ಸಲ ‘ಭಾರತ್ ಮಾತಾ ಕೀ ಜೈ’ ಎಂದು ಕೂಗಿರಬಹುದು. ನೀವು ‘ಭಾರತ್ ಮಾತಾ ಕೀ ಜೈ’ ಅಂತ ಎಷ್ಟು ಸಲ ಕೂಗಿದ್ದೀರಾ? ಕೆಲವು ಸಂಘಟನೆಗಳಲ್ಲಿ ಈ ಘೋಷಣೆಯನ್ನು ಕೂಗಿಸುತ್ತಾರಾದ್ದರಿಂದ ಆ ಸಂಘಟನೆಯ ಸದಸ್ಯರು ಹೆಚ್ಚು ಕೂಗಿರಬಹುದಷ್ಟೇ. ಇಂತಹ ಘೋಷಣೆಯ ಬಗ್ಗೆ ಇದ್ದಕ್ಕಿದ್ದಂತೆ ಬಿಸಿ ಬಿಸಿ ಚರ್ಚೆಯಾಗುವುದ್ಯಾಕೆ? ಮುಸ್ಲಿಮರ ಸಂರಕ್ಷನೆಂದು ಬಣ್ಣಿಸಿಕೊಳ್ಳುವ ಒವೈಸಿ ಮುಸ್ಲಿಂ ಸಮಾಜದ ದುಃಖ ದುಮ್ಮಾನಗಳೆಡೆಗೆ ಗಮನ ಹರಿಸುವುದರ ಬದಲಾಗಿ ಈ ಘೋಷಣೆಯನ್ನು ಕೂಗುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ಯಾಕೆ? ಒವೈಸಿಯ ಹೇಳಿಕೆಯ ಸುತ್ತಲೇ ನಡೆದ ಚರ್ಚೆಗಳಲ್ಲೇನಾದರೂ ಅರ್ಥವಿದೆಯಾ? ಮತಗಳ ಧ್ರುವೀಕರಣವೇ ಮತೀಯ ರಾಜಕಾರಣಿಗಳ ಗುರಿ. ಮುಸ್ಲಿಂ ಕೋಮುವಾದಿ ರಾಜಕಾರಣಿ ಒವೈಸಿ ವಿವಾದಾತ್ಮಕ ಹೇಳಿಕೆಗಳಿಂದಲೇ ಕುಪ್ರಸಿದ್ಧ. ಇಂತಹ ವಿಷಯಗಳಿಗೆ ಹೆಚ್ಚು ಮೈಲೇಜು ದೊರೆಯುತ್ತದೆ ಎಂಬ ಕಾರಣಕ್ಕೆ ಈ ರೀತಿಯಾಗಿ ಮಾತನಾಡುತ್ತಾರಾ? ಘೋಷಣೆ ಕೂಗಿ ಅಂತ ಯಾರೂ ಒವೈಸಿಯ ಕುತ್ತಿಗೆ ಪಟ್ಟಿ ಹಿಡಿದಿರಲಿಲ್ಲ. ಬೆಳಗಾಗೆದ್ದು ದಿನಕ್ಕೊಮ್ಮೆ ಘೋಷಣೆ ಕೂಗಿ ಅಂತ ಯಾರೂ ಒವೈಸಿಯನ್ನು ಬಲವಂತಪಡಿಸಿರಲಿಲ್ಲ. ಪ್ರಜ್ಞಾಪೂರ್ವಕವಾಗಿ ಅದನ್ನೊಂದು ಘೋಷಣೆಯಂತೆ ಸಭೆ ನಡೆಸಿದಾಗೆಲ್ಲ ಕೂಗುವ ಸಂಘಟನೆಗಳನ್ನು ಹೊರತುಪಡಿಸಿದರೆ ಜನಸಾಮಾನ್ಯರಿಗಾಗಲೀ, ಚಟುವಟಿಕೆಯ ರಾಜಕಾರಣಿಗಳಿಗೇ ಆಗಲಿ ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವ ಸಂದರ್ಭ ಎಷ್ಟು ಬಂದುಬಿಡಬಹುದು? ಚರ್ಚೆಯಾಗಬೇಕಾದ ವಿಷಯಗಳು ಚರ್ಚೆಯಾಗದಿರಲಿಂದೇ ಎಲ್ಲಾ ಪಕ್ಷದ ರಾಜಕಾರಣಿಗಳು ಸೇರಿ, ಜನರು ತಮ್ಮ ತಮ್ಮಲ್ಲೇ ಬೇಡದ ಸಂಗತಿಗಳ ಬಗ್ಗೆ ಭಾವನಾತ್ಮಕವಾಗಿ ಚರ್ಚಿಸುತ್ತ ಕಾಲಹರಣ ಮಾಡಿಕೊಳ್ಳಲಿ ಎಂದು ಈ ರೀತಿಯ ಷಡ್ಯಂತ್ರ ಮಾಡುತ್ತಾರಾ? ಕಳೆದಾರೇಳು ತಿಂಗಳಿನಿಂದ ದೇಶಭಕ್ತಿ, ದೇಶಪ್ರೇಮ, ದೇಶದ್ರೋಹ ಮಣ್ಣೂ ಮಸಿ ಅಂತ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ ಇಂತಹುದೊಂದು ಅಭಿಪ್ರಾಯ ಮೂಡುತ್ತದೆ. ಸರಕಾರೀ ಅಥವಾ ಖಾಸಗೀ ಭ್ರಷ್ಟತೆ ನಡೆಸದೆ, ನೆರೆಯ ಮನುಷ್ಯನನ್ನು ಮೇಲು ಕೀಳೆಂಬ ದೃಷ್ಟಿಯಿಂದ ನೋಡದೆ ಪ್ರಾಮಾಣಿಕವಾಗಿ ಬದುಕು ಸಾಗಿಸಿದರದೇ ದೇಶಪ್ರೇಮ, ಮಿಕ್ಕ ಚರ್ಚೆಗಳೆಲ್ಲ ಬೂಟಾಟಿಕೆಯಷ್ಟೇ.

4 comments:

  1. ನಮ್ಮ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಹಲವಾರು ಕೆಂಪು ಪಟ್ಟಿಯ ಅನವಶ್ಯಕವಾದ, ಸಕಾರಣವಿಲ್ಲದ ಕಾನೂನುಗಳು ಇದ್ದು ಇವು ಜನಸಾಮಾನ್ಯರ ಜೀವ ಹಿಂಡುತ್ತಿವೆ ಹಾಗೂ ಅನಾವಶ್ಯಕವಾಗಿ ಜನಸಾಮಾನ್ಯರನ್ನು ಸರ್ಕಾರೀ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತವೆ. ಇಂಥ ಅನವಶ್ಯಕವಾದ ಕಾನೂನುಗಳನ್ನು ರದ್ದುಪಡಿಸಿ ಜನರಿಗೆ ನಿಜವಾಗಿ ಪ್ರಯೋಜನ ಒದಗಿಸುವ, ಆಡಳಿತವನ್ನು ಸುಗಮಗೊಳಿಸುವ ಸಕಾರಣವಿರುವ ಕಾನೂನುಗಳನ್ನು ರೂಪಿಸುವ ಅಗತ್ಯ ಇದೆ. ಈ ಕೆಲಸವನ್ನು ನಮ್ಮ ಶಾಸಕರು, ಜನಪ್ರತಿನಿಧಿಗಳು ಮಾಡಬೇಕಾಗಿತ್ತು. ಇದನ್ನು ಮಾಡದೆ ಜನರನ್ನು ಪೀಡಿಸುವ ಕಾನೂನುಗಳನ್ನು ಇನ್ನೂ ಇಟ್ಟುಕೊಂಡಿರುವ, ಜನರನ್ನು ಪೀಡಿಸುವ ಹೊಸ ಹೊಸ ಕಾನೂನುಗಳನ್ನು ಮಾಡುತ್ತಿರುವ ಶಾಸಕರು, ಸಂಸದರು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಶತ್ರುಗಳು. ಆ ಪಕ್ಷ, ಈ ಪಕ್ಷ ಎಂದೇನೂ ಅಲ್ಲ, ಎಲ್ಲ ಪಕ್ಷಗಳ ಜನಪ್ರತಿನಿಧಿಗಳೂ ಜನಪರ ಕಾನೂನುಗಳನ್ನು ತರುವಲ್ಲಿ, ಅನವಶ್ಯಕ ಕೆಂಪು ಪಟ್ಟಿಯ ಕಾನೂನುಗಳನ್ನು ಪುನರ್ವಿಮರ್ಶೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಜನಪರವಾಗಿ ಕೆಲಸ ಮಾಡದೆ ಕೇವಲ ದೇವರು, ಧರ್ಮ, ದೇಶಭಕ್ತಿ ಎಂದು ಜನರನ್ನು ಕೆರಳಿಸುವ, ಘೋಷಣೆಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ದೇಶದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂಟಿದ ಹೆಮ್ಮಾರಿಗಳು. ಇವರಿಂದಾಗಿಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ವಿಫಲವಾಗುತ್ತಿದೆ.

    ReplyDelete
    Replies
    1. ಸರ್ವಾಧಿಕಾರಿ ಧೋರಣೆಗಳನ್ನು ಗಟ್ಟಿಗೊಳಿಸಿಕೊಳ್ಳಲು ಸರಕಾರಗಳಿಗೆ ಈ ಪೀಡಕ ಕಾನೂನುಗಳ ಅವಶ್ಯಕತೆ ಖಂಡಿತ ಇದೆ....

      Delete
  2. Atte ge ondu chinte adre sose ge inneno chinte anthe. Jana mattu dana eradu baragaala bandu neeru ilde saytha iddare. Ivakke madok kelsa ilde kelsakke baarade irodara bagge parliament nalli discussion

    ReplyDelete
  3. Very realistic take on the 'bharath mata ki jai' issue.

    ReplyDelete