Sep 1, 2015

ದುಡ್ಡಿನರಮನೆಯಲ್ಲಿ ಕಳೆದುಹೋಗಿರುವ ಮಾಧ್ಯಮ ಸಂವೇದನೆ ಮೂಡಿಸುವುದೆಂತು?

Dr Ashok K R
ಮೊನ್ನೆ ಭಾನುವಾರ ಬೆಳಿಗ್ಗೆ ಹತರಾದ ಡಾ.ಎಂ.ಎಂ.ಕಲಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಲು ಬೆಂಗಳೂರಿನ ಟೌನ್ ಹಾಲ್ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಬೋಳುವಾರು ಮೊಹಮದ್ ರವರ ಪರಿಚಯವಾಯಿತು. ಹೊಸಬನೊಡನೆ ಸರಾಗವಾಗಿ ಮಾತನಾಡುತ್ತಿದ್ದರು. ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಅವರ ಧ್ವಜವನ್ನು ಹೊರತೆಗೆದಾಗ ‘ಯಾವ ಸಂಘದ ಕಾರ್ಯಕ್ರಮವೂ ಅಲ್ಲ. ಇಲ್ಲಿ ಫ್ಲ್ಯಾಗ್ ಇಟ್ಕೊಂಡು ಪ್ರಚಾರ ಮಾಡ್ಕೊಳ್ಳೋದ್ಯಾಕೆ’ ಎಂದು ರೇಗಿದರು. ಉಳಿದವರೂ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಧ್ವಜಗಳನ್ನು ಮಡಿಚಿಟ್ಟರು. ‘ಏನ್ ಕರ್ಮಾರೀ ಇವರ್ದು, ಅರವತ್ತು ವರ್ಷ ವಯಸ್ಸಾದ್ರೆ ಏನೋ ಮುತ್ಸದ್ಧಿ ಅಂತ ತೋರಿಸ್ಕೊ‍ಳ್ಳೋ ಚಟಕ್ಕೆ ಗಡ್ಡ ಬಿಟ್ಕೊಳ್ಲಿ. ಇಪ್ಪತ್ತು ವರ್ಷಕ್ಕೆ ಗಡ್ಡ ಬಿಟ್ಕೊಂಡು ಅಸಹ್ಯವಾಗಿ ಕಾಣ್ತಾರಪ್ಪ’ ಎಂದು ಗೊಣಗಿದರು. ನನ್ನ ಕುರುಚಲು ಗಡ್ಡ ಕೆರೆದುಕೊಂಡೆ. ಜಿ.ರಾಮಕೃಷ್ಣರವರನ್ನು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಬೇಕೆಂದು ಮುಂದಕ್ಕೆ ಕರೆದರು. ಆ ವಯಸ್ಸಿನಲ್ಲೂ ಸಾಹಿತಿ – ಸಂಶೋಧಕನ ಹತ್ಯೆಗೆ ಪ್ರತಿಭಟನೆ ಸೂಚಿಸಲು ಬಂದಿದ್ದ ಜಿ.ಆರ್ ಟೌನ್ ಹಾಲಿನ ಮೆಟ್ಟಲಿಳಿದು ಮೈಕ್ ಕೈಗೆತ್ತಿಕೊಳ್ಳುವಷ್ಟರಲ್ಲಿ ಗಿರೀಶ್ ಕಾರ್ನಾಡ್ ಆಗಮಿಸಿದರು. ಟಿವಿ ವಾಹಿನಿಯವರೆಲ್ಲರೂ ಮೈಕು ಕ್ಯಾಮೆರಾಗಳೊಂದಿಗೆ ಗಿರೀಶ್ ಕಾರ್ನಾಡರತ್ತ ಧಾವಿಸಿದರು. ಜಿ.ಆರ್ ಮಾತನಾಡಲಿ ಮೊದಲು ಎಂದು ಕೆಲವರು ಕೂಗಿದರೂ ವಾಹಿನಿಯವರದು ಜಾಣ ಕಿವುಡು. ಮೈಕ್ ಹಿಡಿದುಕೊಂಡ ಜಿ.ಆರ್ ಮೌನದಿಂದ ನಿಂತಿದ್ದರು. ಬಿಡಿ, ಸಾಮಾನ್ಯರಿಗೆ ಗಿರೀಶ್ ಕಾರ್ನಾಡರನ್ನಷ್ಟೇ ಗುರುತಿಸುವುದು ಸಾಧ್ಯ, ಕಾರಣ ಅವರೊಬ್ಬ ನಟರಾದ್ದರಿಂದ ಅಲ್ಲಿಲ್ಲಿ ನೋಡಿರುತ್ತೇವೆ. ಮಾಧ್ಯಮದವರಿಗಾದರೂ ಯಾರ ಮಾತಿಗೆ ನಾವು ಅಡ್ಡಿಪಡಿಸುತ್ತಿದ್ದೇವೆ, ಯಾರು ನಮ್ಮಿಂದ ಕಾಯುವಂತಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಡವೇ? ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸುವವರ ಸಂಖೈ ಹೆಚ್ಚು, ಅವರ ಮಾತಿಗೆ ಕೊನೇಪಕ್ಷ ಟಿವಿಯಲ್ಲಿ ಟಿ.ಆರ್.ಪಿ ಹೆಚ್ಚು ಎನ್ನುವುದನ್ನು ಒಪ್ಪೋಣ. ಗಿರೀಶ್ ಕಾರ್ನಾಡರದ್ದೇ ಬೈಟ್ ತೆಗೆದುಕೊಳ್ಳಲಿ; ಆದರೆ ಆ ಬೈಟಿಗಾಗಿ ಒಂದರೆಕ್ಷಣ ಕಾಯುವಷ್ಟೂ ಪುರುಸೊತ್ತಿಲ್ಲದಂತಾಯಿತೇ ನಮ್ಮ ಮಾಧ್ಯಮ ಮಿತ್ರರಿಗೆ? ಇಷ್ಟೊಂದು ಸಂವೇದನಾರಹಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯವಾದರೂ ಏನು? ‘ಆ ಟಿವಿಯವರು ಬೈಟ್ ತೆಗೆದುಕೊಂಡಿದ್ದಾರೆ. ನೀನ್ಯಾಕೆ ತೆಗೆದುಕೊಂಡಿಲ್ಲ’ ಎಂದವರ ಮಾಲೀಕರು ಬೈಯ್ಯುತ್ತಾರಾ?

ಮನೆಗೆ ವಾಪಸ್ಸಾದ ನಂತರ ಟಿವಿ ಹಾಕಿದರೆ ವಾಹಿನಿಯೊಂದರಲ್ಲಿ ಶಿವರಾಜ್ ಕುಮಾರ್ ತನ್ನ ಭಾವೀ ಅಳಿಯನಿಗೆ ಗಿಫ್ಟಾಗಿ (ಇದು ವರದಕ್ಷಿಣೆಯೇ ಅಲ್ಲವೇ?!) ಕೊಡುವ ಕಾರಿನ ಬಗೆಗಿನ ಚರ್ಚೆ! ಭಾವೀ ಅಳಿಯನ ಸಂದರ್ಶನ ಬೇರೆ... ಥೂ ಇವರ ಯೋಗ್ಯತೆಗೆ ಎಂದುಕೊಂಡೆ. ಸಹೋದ್ಯೋಗಿಯ ಬಗ್ಗೆ ಇದೇ ವಿಷಯ ಚರ್ಚಿಸುವಾಗ ‘ರೀ. ಅಳಿಯನ ಸಂದರ್ಶನವೇ ವಾಸಿ. ಅಡುಗೆ ಮಾಡೋರತ್ರ, ಡೆಕೊರೇಷನ್ ಮಾಡೋರ್ ಮುಖದ್ ಮುಂದೆ ಮೈಕಿಡ್ದು ಶಿವಣ್ಣನ ಮಗಳ ಮದುವೆ ಕೆಲಸ ಮಾಡ್ತಿದ್ದೀರಲ್ಲ ನಿಮಗೇನನ್ಸುತ್ತೆ? ಗೀತಕ್ಕ ನಿಮಗೇ ಇಂತಿಂತದೇ ಮಾಡ್ಬೇಕು ಅಂದ್ರಾ? ಅಂತೆಲ್ಲ ಕೇಳ್ತಿದ್ರು’ ಅಂದರು. ಮದುವೆ ಹಿಂದಿನ ದಿನದ ಸಮಾರಂಭ, ಮದುವೆ ದಿನದ ಸಂಪೂರ್ಣ ಲೈವ್ ಪ್ರಸಾರ....... ಮಾಧ್ಯಮ ಉದ್ಯಮವೆಂಬುದು ಸತ್ಯ, ಲಾಭದಲ್ಲಿದ್ದರಷ್ಟೇ ಮುಂದುವರೆಯಲು ಸಾಧ್ಯ ಎಂಬುದೂ ಸತ್ಯ.... ಆ ಕಾರಣಕ್ಕೆ ಇಷ್ಟೊಂದು ಕೆಳ ಮಟ್ಟಕ್ಕಿಳಿಯಬೇಕೆ? 

ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ದೊಡ್ಡ ಹೆಸರು. ತಂದೆ ರಾಜ್ ಕುಮಾರ್ ಪ್ರಭಾವಳಿಯಿಂದ ಚಿತ್ರರಂಗಕ್ಕೆ ಅವರ ಮಕ್ಕಳು ಬಂದವರಾದರೂ ತಮ್ಮದೇ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ನೆಲೆನಿಂತವರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರರೆಲ್ಲರೂ ಗೌರವಕ್ಕೆ, ಆದರಕ್ಕೆ ಅರ್ಹರು. ಅವರ ಮಕ್ಕಳು ಯಾವ ರೀತಿಯ ಸಾಧಕರು? ಅವರ ಮದುವೆಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ. ಓಕ್ಕೋಳ್ಳಿ, ಮದುವೆ ಸಮಾರಂಭವನ್ನು ಬಹುತೇಕ ಪತ್ರಿಕೆಗಳು ಚಿಕ್ಕದಾಗಿ ಪ್ರಕಟಿಸಿರುವಂತೆ ಒಂದೈದು ನಿಮಿಷದ ಸುದ್ದಿ ಮಾಡಿದರೆ ಒಪ್ಕೋಬಹುದು. ದಿನವಿಡೀ ಲೈವ್ ಆಗಿ ತೋರಿಸೋ ದರ್ದೇನು ಮಾಧ್ಯಮದವರಿಗೆ? ‘ಸಿದ್ಧರಾಮಯ್ಯ ಬಂದ್ರು, ಸಿದ್ಧರಾಮಯ್ಯ ಸ್ಟೇಜ್ ಹತ್ತುದ್ರು, ಸಿದ್ಧರಾಮಯ್ಯ ಕೈ ಕೊಟ್ರು, ಸಿದ್ಧರಾಮಯ್ಯ ಕೆಳಗಿಳಿದ್ರು’ ಅಂತ ರನ್ನಿಂಗ್ ಕಾಮೆಂಟ್ರಿ ಬೇರೆ! ಹೋಗ್ಲಿ ಮದುವೆಯೇನಾದ್ರೂ ತುಂಬ ವಿಭಿನ್ನವಾಗಿ, ಸಮಾಜಕ್ಕೆ ಮಾದರಿಯಾಗಿ ನಡೆಯಿತಾ? ಇಲ್ಲವಲ್ಲ. ಅದೊಂದು ಐಷಾರಾಮಿ ಮದುವೆ. ಅವರ ದುಡ್ಡು ಅವರ ಐಷಾರಾಮಿತನ ಅವರಿಷ್ಟ. ಖಾಸಗಿ ಐಷಾರಾಮಿತನವನ್ನು ಲೈವ್ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕೊಡುತ್ತಿವೆ ಮಾಧ್ಯಮಗಳು? ಇದೆಲ್ಲಕ್ಕಿಂತಲೂ ಅಸಹ್ಯವೆಂದರೆ ‘ದೊಡ್ಮನೆ ಮದುವೆ ದೊಡ್ಮನೆ ಮದುವೆ’ ಅಂತ ಬಡಕೊಂಡಿದ್ದು. ದೊಡ್ಮನೆ ಚಿಕ್ಮನೆಗಳೆಲ್ಲವೂ ಊಳಿಗಮಾನ್ಯ ಪದ್ಧತಿಯ ಸಂಕೇತವಲ್ಲವೇ? ಯಾವ ದೊಡ್ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ಒಟ್ಟಿಗಿದೆ ಎಂಬುದನ್ನು ಅರಿಯದಷ್ಟು ದಡ್ಡರೇ ಮಾಧ್ಯಮದವರು. ‘ಲೈವ್ ಪ್ರೋಗ್ರಾಮ್ ಮಾಡಬೇಡಿ’ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಆದರೂ ‘ದೊಡ್ಡ’ತನ ತೋರಿಸಬಹುದಿತ್ತು. ಈ ಅಪಸವ್ಯಗಳೆಲ್ಲ ಮದುವೆಗೇ ಮುಗಿದು ಕ್ಯಾಮೆರಾ ಎತ್ತಿಕೊಂಡು ಹನಿಮೂನು ಪ್ರಸ್ಥದ ಮನೆ ಅಂಥ ತೋರಿಸದಿದ್ದರೆ ಕನ್ನಡಿಗರ ಪುಣ್ಯ.

7 comments:

  1. ಶಿವರಾಜಕುಮಾರ್ ಮಗಳ ಮದುವೆಯ ಪ್ರಸಾರದಲ್ಲಿ ಟಿವಿ ವಾಹಿನಿಗಳು ನಡೆದುಕೊಂಡ ರೀತಿ ಜುಗುಪ್ಸೆ ಹುಟ್ಟುವಂತಿತ್ತು ಮತ್ತು ಅದನ್ನು ನೋಡಿದಾಗ ನನ್ನಲ್ಲೂ ನೀವು ಹೇಳಿದ ವಿಚಾರಗಳೇ ಮೂಡಿದ್ದವು. ಅದನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ಅನಾರೋಗ್ಯಕರ ಮಾಧ್ಯಮ ಲೋಕದ ನಡುವೆ ಒಂದಾದರೂ ಆರೋಗ್ಯಕರ ಚಿಂತನೆ ಕಂಡು ಮರುಭೂಮಿಯ ನಡುವೆ ಓಯಸಿಸ್ ಸಿಕ್ಕಂತೆ ಆಯಿತು. ರಾಜ್ಯದ ಬಹುತೇಕ ಭಾಗಗಳು ನಲುವತ್ತು ವರ್ಷಗಳಿಂದ ಕಂಡರಿಯದ ಭೀಕರ ಬರಗಾಲದ ದವಡೆಗೆ ಸಿಕ್ಕಿ ಜನ ನರಳುತ್ತಿರುವಾಗ ಇಂಥ ಅದ್ಧೂರಿ ಮದುವೆಯನ್ನು ಮಾಧ್ಯಮಗಳು ವೈಭವೀಕರಿಸುವುದು ಅಮಾನವೀಯ ಎಂದು ಯಾರಿಗೂ ಅನಿಸದಿರುವುದು ನಾವು ಎಷ್ಟು ಹೃದಯಹೀನರಾಗಿದ್ದೇವೆ ಎಂಬುದನ್ನು ಎತ್ತಿ ತೋರಿಸುತ್ತದೆ.

    ReplyDelete
    Replies
    1. ಹೃದಯಹೀನತೆ ಅಂತರ್ಗತವಾಗಿ ಬಹಳ ವರುಷಗಳೇ ಕಳೆದು ಹೋಗಿದೆ....

      Delete
  2. I think we are being unfair to the media .. a part of the blame has to be shared by the hosts (shivarajkumar in this case and chiranjeevi during his sons wedding) and every person who watched this programme who are equally culpable.

    Media works on the simple equation of supply and demand. If there is demand they just supply. Instead of taking a morally superior position and advice media to show restraint we should stop for eternity watching these so called news channels(they are not news channels, they are nuisance channels).

    I made this decision a few years back and I couldn't have been happier. For news you can watch rajya sabha tv or listen to AIR news... Try it once

    ReplyDelete
    Replies
    1. The problem also lies ,I think in the fact that people don't have any other hobbies these days. Watching news occupies them for the major part of their waking hours. How they don't vomit blood after watching tv9 or suvarna news for so long is beyond me.

      Delete
    2. Well said. They are in deed nuisance channels

      Delete
    3. ಡಿಮಾಂಡ್ ಇರೋದಿಕ್ಕೆ ಸಪ್ಲೈ ಮಾಡ್ತೀವಿ ಅನ್ನೋದು ಮೀಡಿಯಾದವರೇ ಸೃಷ್ಟಿಸಿರೋ ಮತ್ತೊಂದು ಸುಳ್ಳು. ಅವರು ಮೊದ್ಲು ಸಪ್ಲೈ ಮಾಡ್ತಾರೆ ಬೇರೆ ನೋಡೋದಿಕ್ಕೆ ಇಲ್ಲದ ಜನ (ನೀನೇ ಹೇಳಿದಹಾಗೆ ಬೇರೆ ಹವ್ಯಾಸಗಳಿಲ್ಲದ ಜನ) ಅದನ್ನೇ ನೋಡ್ತಾರೆ; ನೋಡಿ ಡಿಮ್ಯಾಂಡ್ ಇರೋದೆ ಇದಕ್ಕೆ ಅಂತಾರೆ! ಇದೇ ಜನಗಳಲ್ಲವೇ ಮಾಲ್ಗುಡಿ ಡೇಸ್, ಗುಡ್ಡದ ಭೂತ ತರಹದ ಧಾರವಾಹಿಗಳನ್ನು ನೋಡುತ್ತಿದ್ದುದು, ಈಗ ಅದೇ ಜನ ಹೆಂಗಸರ ಕುತಂತ್ರಗಳೇ ಮುಖ್ಯವಾಗಿಬಿಟ್ಟಿರೋ ಧಾರವಾಹಿಗಳನ್ನು ನೋಡುತ್ತಿದ್ದಾರೆ! ಆಗಲೂ ಜನರೇನು ಇಂತಹ ಧಾರವಾಹಿಯನ್ನೇ ಮಾಡಿ ಎಂದಿರಲಿಲ್ಲ, ಈಗಲೂ ಕೇಳಿಲ್ಲ. ಜನರೇನು ಶಿವರಾಜ್ ಕುಮಾರ್ ಮಗಳ ಮದುವೆಯನ್ನು ಲೈವ್ ಟೆಲಿಕಾಸ್ಟ್ ಮಾಡಿ ಎಂದು ಮಾಧ್ಯಮಗಳಿಗೆ ಕೇಳಿಕೊಂಡಿದ್ದರೆ? ಹೈಕ್ಳು ಡಿಮ್ಯಾಂಡ್ ಮಾಡ್ತಾರೆ ಅಂಥ ನೀಲಿ ಚಿತ್ರ ಹಾಕಲಾಗುತ್ತದೆಯೇ? ಡಿಮ್ಯಾಂಡ್ ಅಂಡ್ ಸಪ್ಲೈ ಅನ್ನೋದು ಮಾಧ್ಯಮಗಳೇ ಸೃಷ್ಟಿಸಿರುವ ಪೊಳ್ಳು ವಾದವಷ್ಟೇ...... ಅಂದಹಾಗೆ ನಾನು ದೃಶ್ಯಮಾಧ್ಯಮವನ್ನು ನೋಡುವುದನ್ನು ಬಿಟ್ಟು ಅನೇಕ ವರುಷಗಳಾಗಿವೆ!

      Delete
  3. Media wants people to be in the clutches of one of the other. Once they start preaching nobody can beat them. And if it comes to practice, no one needs. Same thing applies to great people who are insensitive to social issues.

    ReplyDelete